May 14, 2015

ಹದಿನೇಳರಿಂದ 'ಸಂಕಥನ'ದ ಸಂಭ್ರಮ.

ಸಾಹಿತ್ಯ ಪತ್ರಿಕೆಗಳು ನಿಜಕ್ಕೂ ಅವಶ್ಯಕವೇ ಎಂಬ ಪ್ರಶ್ನೆ ನನಗೆ ಹತ್ತಲವು ಬಾರಿ ಕಾಡಿದ್ದಿದೆ. ಮುಖ್ಯ ಕಾರಣ ಯಾವೊಂದು ಸಾಹಿತ್ಯ ಪತ್ರಿಕೆಯ ಸಂಪರ್ಕಕ್ಕೂ ಬರದೇ ಇದ್ದಿದ್ದು. ಸಾಹಿತ್ಯದ ವಿದ್ಯಾರ್ಥಿಯೂ ಅಲ್ಲ, ಸಾಹಿತಿಗಳ ಅಥವಾ ಅವರ ವಿದ್ಯಾರ್ಥಿಗಳ ಪರಿಚಯವೂ ಇಲ್ಲದೆ ಸಾಹಿತ್ಯದ (ಮುಖ್ಯವಾಗಿ ಗದ್ಯದ) ಪರಿಚಯ ಮಾಡಿಕೊಂಡ ನನಗೆ ಒಂದು ಪುಟ್ಟ ಸರ್ಕುಲೇಷನ್ ಇರುವ ಸಾಹಿತ್ಯ ಪತ್ರಿಕೆಗಳು ಪ್ರಕಟವಾಗುತ್ತವೆಂಬ ಅರಿವು ಮೂಡಿದ್ದೇ ತುಂಬ ತಡವಾಗಿ. ಅದೂ ಮಯೂರ, ಪ್ರಜಾವಾಣಿಯ ಸಾಪ್ತಾಹಿಕ, ಹಾಯ್ ಬೆಂಗಳೂರಿನ ಲೇಖನಗಳಲ್ಲಿ ಆವಾಗಿವಾಗ 'ರುಜುವಾತು' 'ಶೂದ್ರ' 'ದೇಶಕಾಲ'ದ ಬಗೆಗೆ ಓದಿದಾಗ. ಅಂತಹ ಪತ್ರಿಕೆಗಳನ್ನು ಕೊಳ್ಳುವುದೆಲ್ಲಿ, ಚಂದಾದಾರವಾಗಬೇಕೆಂದರೆ ಅದು ಹೇಗೆ ಎಂಬುದು ತಿಳಿಯಲೇ ಇಲ್ಲ. ಈಗೇನೋ ಫೇಸ್ ಬುಕ್ಕಿನಲ್ಲಿ ಅಪರಿಚಿತ ಪರಿಚಿತರ ಹತ್ತಿರ ಕೇಳಿಕೊಂಡು ವಿಷಯ ತಿಳಿದುಕೊಳ್ಳಬಹುದು. ಆಗ ಆ ಸೌಕರ್ಯವಿರಲಿಲ್ಲ. ಕಲಬುರ್ಗಿಯ ನವ ಕರ್ನಾಟಕ ಪುಸ್ತಕ ಮಳಿಗೆಯಲ್ಲಿ ಕೊಂಡುಕೊಂಡ 'ಹೊಸತು' ಪತ್ರಿಕೆ ನಾನು ಓದಿದ ಮೊದಲ ಆಫ್ ಬೀಟ್ ಪತ್ರಿಕೆ. ಪಠ್ಯದಂತಿದ್ದ ಪತ್ರಿಕೆಯನ್ನು ಕಲಬುರ್ಗಿಯಲ್ಲಿದ್ದಾಗ ಅನಿಯಮಿತವಾಗಿ ಓದುತ್ತಿದ್ದುದಕ್ಕೆ ಪತ್ರಿಕೆಯ ಎಡಪಂಥೀಯ ಒಲವು ಕಾರಣ. ಕಲಬುರ್ಗಿಯ ನಂಟು ಕಳೆದು ಸುಳ್ಯಕ್ಕೆ ಬಂದ ಮೇಲೆ 'ಹೊಸತು' ಪತ್ರಿಕೆಯ ನಂಟೂ ಕಳೆಯಿತು. ಸಾಹಿತ್ಯಕ್ಕೆ ಸಂಬಂಧಪಟ್ಟವರ ಚೂರು ಪಾರು ಪರಿಚಯ ಪ್ರಾರಂಭವಾದದ್ದು ಸುಳ್ಯಕ್ಕೆ ಬಂದಮೇಲೆ. ಶ್ರೀಪಾದ್ ಭಟ್ ರವರು ಪ್ರೀತಿಯಿಂದ 'ಆದಿಮ' ಪತ್ರಿಕೆಯನ್ನು ಕಳುಹಿಸುತ್ತಿದ್ದರು. ಕೋಟಗಾನಹಳ್ಳಿ ರಾಮಯ್ಯನವರ ಬರಹದ ಶೈಲಿಯ ಪರಿಚಯವಾಯಿತು ಮತ್ತು ನಾಮದೇವ ನಿಮ್ಗಾಡೆ ಎಂಬ ಅದ್ಭುತ ವ್ಯಕ್ತಿಯ ಬಗ್ಗೆ ತಿಳಿದಿದ್ದು 'ಆದಿಮ'ದಿಂದ. ಶ್ರೀಪಾದ್ ಭಟ್ ಸಿಕ್ಕಾಗ 'ಸರ್  ಪತ್ರಿಕೆಯ ದುಡ್ಡು' ಎಂದಿದ್ದೆ. 'ಸದ್ಯಕ್ಕೆ ಆದಿಮ ಬರುತ್ತಿಲ್ಲ. ಒಂದಷ್ಟು ಬದಲಾವಣೆಗಳೊಂದಿಗೆ ತರೋ ಐಡಿಯಾ ಇದೆ. ನಂತರ ಕೊಡುವಿರಂತೆ ಬಿಡಿ' ಎಂದಿದ್ದರು. ಹಣಕಾಸಿನ ತೊಂದರೆಯಿಂದ, ಸೈದ್ಧಾಂತಿಕ ತೊಂದರೆಯಿಂದ, ವಿಚಾರಗಳ ಗೊಂದಲದಿಂದ ನಿಯಮಿತ ಪತ್ರಿಕಗಳೇ ಅನಿಯಮಿತವಾಗಿ ಕಣ್ಣು ಮುಚ್ಚುವುದನ್ನು ಕಾಣುವಾಗ ಸೀಮಿತ ಮಾರುಕಟ್ಟೆಯ ಸಾಹಿತ್ಯ ಪತ್ರಿಕಗಳ ಆಯಸ್ಸು ಎಷ್ಟಿರಬಹುದು? ಮೇಲಾಗಿ ಕಡಿಮೆ ಜನರನ್ನು ತಲುಪುವ ಪತ್ರಿಕೆಗಳು ಸಮಾಜದ ಚಲನಶೀಲತೆಗೆ ನೀಡುವ ಕೊಡುಗೆಯೇನು? ಒಂದು ಮಾತನ್ನಂತೂ ಒಪ್ಪಲೇ ಬೇಕು, ಲಕ್ಷ ಸರ್ಕುಲೇಷನ್ನಿನ ಪತ್ರಿಕೆಗಳಿಗಿಂತ ಸೀಮಿತ ಮಾರುಕಟ್ಟೆಯ ಸಾಹಿತ್ಯ ಪತ್ರಿಕೆಗಳು ವಿಚಾರವನ್ನು ರೂಪಿಸುವುದಕ್ಕೆ ನೀಡುವ ಕಾಣ್ಕೆ ದೊಡ್ಡದು. ಈ ಕಾರಣದಿಂದಲೇ ಅಲ್ಲವೇ ಮುಖ್ಯವಾಹಿನಿಯ ಅಂಕಣಗಳಲ್ಲೂ ಆಗಾಗ ಸಾಹಿತ್ಯ ಪತ್ರಿಕೆಗಳ ಪ್ರಸ್ತಾಪವಾಗುವುದು. ಸಾಹಿತ್ಯ ಪತ್ರಿಕೆಗಳ ಬಗೆಗಿನ ನನ್ನ ಇಷ್ಟೆಲ್ಲ ಗೊಂದಲಗಳಿಗೆ 'ಅನೇಕ ಗೆಳೆಯರು' ಪ್ರಾರಂಭಿಸುತ್ತಿರುವ 'ಸಂಕಥನ' ಪತ್ರಿಕೆ ಉತ್ತರವಾಗುತ್ತದಾ? 'ಅನೇಕ ಗೆಳೆಯರ' ತಂಡದಲ್ಲಿನ ರಾಜೇಂದ್ರ ಪ್ರಸಾದ್ ಮತ್ತು ಗಿರೀಶ್ ಹಂದಲಗೆರೆ ಫೇಸ್ ಬುಕ್ಕಿನ ಅಪರಿಚಿತ ಪರಿಚಿತರು!  ಇದೇ ಭಾನುವಾರ (ಮೇ 17ಕ್ಕೆ) ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮದಲ್ಲಿ 'ಸಂಕಥನ'ದ ಬಿಡುಗಡೆಯ ಸಂಭ್ರಮವಿದೆ. 'ಸಂಕಥನ'ಕ್ಕೆ ಒಳ್ಳೆಯದಾಗಲಿ. 'ಸಂಕಥನ'ದ ಮೂಲಕ ಸಮಾಜಕ್ಕೂ ಒಂದಷ್ಟು ಒಳ್ಳೆಯದಾಗಲಿ.

ಅನೇಕ ಗೆಳೆಯರು ~ 2013ನೇ ವರ್ಷದ ನಡುಭಾಗದಲ್ಲಿ ಹುಟ್ಟಿಕೊಂಡ ವಾಣಿಜ್ಯ, ವಿಜ್ಞಾನ, ತಂತ್ರಜ್ಞಾನಗಳಲ್ಲಿ ಕಲಿಯುತ್ತಿರುವ, ದುಡಿಯುತ್ತಿರುವ ಗ್ರಾಮೀಣ ಸೃಜನಶೀಲ ಯುವ ಸಾಹಿತ್ಯಾಸಕ್ತರ ಸಮುದಾಯ . ಕಲೆ - ಸಾಹಿತ್ಯ - ಸಂಗೀತ - ಸಂಸ್ಕೃತಿಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆ , ಸಂಕಥನ , ಕೃತಿ ಪ್ರಕಟಣೆ - ಪ್ರಸರಣ , ವಿಶೇಷವಾಗಿ ಗಾಂಧೀಯ ಚಿಂತನೆ.. ಕಳೆದುಹೋಗುತ್ತಿರುವ ನೆಲಮೂಲ ಸಂಸ್ಕೃತಿಯ ಕುರಿತು ಅರಿವು, ಅಧ್ಯಯನ ಇದರ ಮೂಲ ಭೂಮಿಕೆ.

ಆಧುನಿಕ ಜೀವನದ ಧಾವಂತಗಳಲ್ಲಿ ಹೊಸಪೀಳಿಗೆ ತನ್ನ ಬಹುಪರಂಪರೆಯ ನೆಲೆಗಳನ್ನು, ಅದರ ಮಾರ್ಗಗಳನ್ನು ಹತ್ತಾರು ಸೃಜನಶೀಲ ವಲಯಗಳಲ್ಲಿ ಕಂಡುಕೊಳುವುದಕ್ಕೆ ಪ್ರಯತ್ನಿಸುತ್ತಲೇ ಇದೆ ಮತ್ತು ಏಕಕಾಲದಲ್ಲಿ ಇನ್ನೊಂದು ಕಡೆ ಈ ಎಲ್ಲ ನೆಲೆಗಳ ಬಗ್ಗೆ ವಿಸ್ಮೃತಿಯೊಂದು ಆವರಿಸಿ ಪಾಶ್ಚಿಮಾತ್ಯ ಸ್ವರೂಪದ '' ಒಂದು ರಾಷ್ಟ್ರ ~ ಒಂದು ಸಂಸ್ಕೃತಿ'' ಎಂಬುವ ಅಪಾಯಕಾರಿ ಮಾದರಿಯೊಂದನ್ನು ಬೆನ್ನತ್ತಿದೆ. ಹೀಗಿರುವಾಗ 'ವಿವಿಧತೆಯಲ್ಲಿ ಏಕತೆ'ಯನ್ನು, ಉಪಖಂಡವು ರೂಪಿಸಿಕೊಂಡ ಸಂವಿಧಾನವನ್ನು ನಂಬಿದ ಸೃಜನಶೀಲ ಯುವಮನಸ್ಸುಗಳ ಸಮೂಹ ಇದಾಗಿದೆ.

ಈ ಪತ್ರಿಕೆಯ ಪರಿಕಲ್ಪನೆ ರಾಜೇಂದ್ರ ಪ್ರಸಾದ್ ಅವರದ್ದು 
ರಾಜೇಂದ್ರ ಓದಿದ್ದು ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ M.Com. ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಸಂಗೀತದಲ್ಲಿ ಅಪಾರ ಆಸಕ್ತಿ. ಮಂಡ್ಯ ನಗರದಲ್ಲಿ ವಾಸ. ಕಳೆದ 4-5 ವರ್ಷಗಳಿಂದ ಈ ರೀತಿಯ ಒಂದು ಪತ್ರಿಕೆ ಮಾಡುವ ಯೋಜನೆ ಅವರದಾಗಿತ್ತು. 'ಅನೇಕ ಗೆಳೆಯರು' ಎಂಬ ಒಂದು ಸಮೂಹವನ್ನು ಫೇಸ್ಬುಕ್ ಮುಖಾಂತರ ಸೃಷ್ಟಿಸಿ ಸಾಹಿತ್ಯದ ಪುಟ್ಟ ಪುಟ್ಟ ಕಾರ್ಯಕ್ರಮಗಳನ್ನು ಆಯೋಜಿಸಿದರು. ಅದೇ ಸಮೂಹದ ಬಲದಿಂದ ಈಗ 'ಸಂಕಥನ' ಸಾಹಿತ್ಯ ಪತ್ರಿಕೆ ಹೊರಬರುತ್ತಿದೆ. 

ರಾಜೇಂದ್ರ ಅವರ ಜೊತೆಗೆ 
* ಪ್ರವರ ಕೊಟ್ಟೂರು ( MCA ಓದು , ಕಾಲೇಜಿನಲ್ಲಿ ಉಪನ್ಯಾಸಕ) 
* ಶರತ್ ಚಕ್ರವರ್ತಿ ( ಸುದ್ದಿ ಮಾಧ್ಯಮದಲ್ಲಿ ಕಾರ್ಯಕ್ರಮ ನಿರ್ಮಾಪಕ ) 
* ಹರವು ಸ್ಪೂರ್ತಿ ( ಪತ್ರಿಕೋದ್ಯಮ ಓದು, ಸುದ್ದಿ ಚಾನಲ್ ನಲ್ಲಿ ಕೆಲಸ) 
* ಸಂತೋಷ್ ಕುಮಾರ್ ( ಸಾಫ್ಟ್ ವೇರ್ ಎಂಜನಿಯರ್ )
* ನಿತೇಶ್ ಕುಮಾರ್ ( ಸಾಫ್ಟ್ ವೇರ್ ಎಂಜನಿಯರ್ 
* ಭರತ್ ಎಂ.ವಿ. ( ಸಾಫ್ಟ್ ವೇರ್ ಎಂಜನಿಯರ್ )
* ಗಿರೀಶ್ ಹಂದಲಗೆರೆ 
* ಸತೀಶ್ ಬೆಂಗಳೂರು ( ಆಸ್ಪತ್ರೆಯೊಂದರಲ್ಲಿ ಮ್ಯಾನೇಜರ್ ) 

ಇನ್ನೂ ಬಹಳಷ್ಟೂ ಜನ ಪತ್ರಿಕೆಯಲ್ಲಿ ಸೇರಿಕೊಂಡಿದ್ದಾರೆ 
ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಸಾಹಿತ್ಯ ಪತ್ರಿಕೆಗಳು ಬಂದಿವೆ ಹೋಗಿವೆ ಮತ್ತು ಇಂದಿಗೂ ಬರುತ್ತಲಿವೆ. ಅಡಿಗರ 'ಸಾಕ್ಷಿ' , U. R. ಅನಂತ ಮೂರ್ತಿಯವರ 'ಋಜುವಾತು' , ಚಂಪಾ ಅವರ 'ಸಂಕ್ರಮಣ' , ವಿವೇಕ್ ಶಾನಭಾಗರ 'ದೇಶಕಾಲ' ಇನ್ನೂ ಬಹಳಷ್ಟೂ ಇವೆ. ಆದರೆ ಇವೆಲ್ಲವೂ ಸಾಹಿತ್ಯ ಕ್ಷೇತ್ರದ ಹೆಸರುಳ್ಳ ಸಾಹಿತಿಗಳಿಂದ ಆರಂಭಗೊಂಡ ಪತ್ರಿಕೆಗಳು. ಹಾಗಾಗಿ ಅವುಗಳ ಬೆಳವಣಿಗೆ ಚೆನ್ನಾಗಿಯೇ ಇತ್ತು. ಕಾಲಕ್ರಮೇಣ ಸ್ಥಗಿತವೂ ಉಂಟಾಯಿತು.

ಪ್ರಪಂಚದ ಬೇರೆ ಬೇರೆ ಭಾಷೆಗಳಲ್ಲಿ ಬರುತ್ತಿರುವ ಸಾಹಿತ್ಯ ಪತ್ರಿಕೆಗಳನ್ನು ನೋಡಿದ್ರೆ ಕನ್ನಡ ಭಾಷೆಯಲ್ಲಿ ಇವತ್ತಿನ ಮಟ್ಟಿಗೆ ಅಂತಹ ಒಳ್ಳೆಯ ಸಾಹಿತ್ಯ ಪತ್ರಿಕೆ ಇಲ್ಲ. ತುಂಬಾ ಚೆನ್ನಾಗಿಯೇ ಬರುತ್ತಿರುವ ಸಂಚಯ ಮತ್ತು ಸಂಕ್ರಮಣ ಪತ್ರಿಕೆಗಳು ಕೂಡ ಎಲ್ಲರಿಗೂ ಮುಟ್ಟುತ್ತಿಲ್ಲ... ಹೊಸ ಪೀಳಿಗೆಯನ್ನು ಸೆಳೆದುಕೊಳ್ಳುತ್ತಿಲ್ಲ . 

ಇಂತಹ ಸನ್ನಿವೇಶದಲ್ಲಿ ನಮ್ಮ ಪತ್ರಿಕೆ ಕಿರಿಯ ಬರಹಗಾರರಿಂದ ಶುರುವಾಗುತ್ತಿದೆ. 

ಇಲ್ಲಿ ನೀವು ಇಷ್ಟು ಗಮನಿಸಬಹುದು 

* ನಾವೆಲ್ಲರೂ ಬಹುತೇಕ 30 ವರ್ಷ ಒಳಗಿನವರು. 
* ಸಾಹಿತ್ಯ ವನ್ನು ತರಗತಿಗಳಲ್ಲಿ ಅಭ್ಯಾಸ ಮಾಡಿದವರು ಅಲ್ಲ ಬದಲು ಪ್ರೀತಿಯಿಂದ ಓದಿಕೊಂಡವರು
* ನಮ್ಮ ಪತ್ರಿಕೆಯ ಬಗ್ಗೆ ಯಾವುದೇ ಮಹತ್ತರವಾದುದು ನಾವು ಸಾಧಿಸುತ್ತೇವೆಂದಾಗಲಿ, ಅದ್ಬುತವಾಗಿರುವುದನ್ನು ತರುತ್ತೇವೆಂದಾಗಲೀ ಭ್ರಮೆಗಳಿಲ್ಲ.. ಬದಲಾಗಿ ಇವತ್ತಿನ ತಲ್ಲಣಗಳ ಅಭಿವ್ಯಕ್ತಿಗೆ ಒಂದು ಅವಕಾಶವನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆಂದು ನಂಬಿದ್ದೇವೆ.
* ಔಪಚಾರಿಕತೆ ಮತ್ತು ಅಕಾಡೆಮಿಕ್ ನೆಲೆಗಳನ್ನು ಬಿಟ್ಟು ವಾಸ್ತವದ ಬದುಕಿನ ನೆಲಗಟ್ಟಿನಲ್ಲೇ ಸಾಹಿತ್ಯವನ್ನು ಓದುವ ಮತ್ತು ಎಲ್ಲರೂ ತಲುಪಿಸುವ ಆಶಯ ನಮ್ಮದು. 
* ಪತ್ರಿಕೆ ಬರಿಯ ಕಾವ್ಯ, ಕಥನ, ಟಿಪ್ಪಣಿಗಳಿಗೆ ಸೀಮಿತವಾಗದೇ ಈ ಕಾಲಘಟ್ಟದ ಸಾಹಿತ್ಯದ ಹಲವು ಮೂಲನೆಲೆಗಳಿಂದ ಬರಹಗಳನ್ನು ತರುತ್ತಿದೆ. ಇತಿಹಾಸ, ತತ್ವಜ್ಞಾನ, ವಿಜ್ಞಾನ, ತಂತ್ರಜ್ಞಾನಗಳನ್ನು ಜೊತೆಗಿರಿಸಿಕೊಂಡಿದ್ದೇವೆ. 
* ಅನೇಕ ಹಿರಿಯ ಬರಹಗಾರರೊಂದಿಗೆ ಕಿರಿಯ ಬರಹಗಾರಾರೂ ಜೊತೆಯಾಗಿ ಬರೆಯುತ್ತಿದ್ದಾರೆ. 
* ಸಂಕಥನ - ಸಾಹಿತ್ಯ ಪತ್ರಿಕೆಯು ಯುಗಾದಿಯಿಂದ ಮೊದಲುಗೊಂಡು ಪ್ರತಿ ಮೂರು ತಿಂಗಳಿಗೊಮ್ಮೆ ಹೊರಬರಲಿದೆ.
* ಚಂದಾದಾರರಿಗೆ ನೇರವಾಗಿ ಪತ್ರಿಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಹೊರಗೆ ಎಲ್ಲೂ ಪತ್ರಿಕೆ ಲಭ್ಯವಿಲ್ಲ. 
* ಪತ್ರಿಕೆಯ ವಾರ್ಷಿಕ ಚಂದಾ ರೂ. 250 ಇದೆ ಅದನ್ನು ನೇರವಾಗಿ Online ನಲ್ಲಿ direct pay ಮಾಡಬಹುದುದಾಗಿದೆ. 

4 comments:

  1. ಬರಲೇ ಬೇಕೆಂಬ ಆಸೆ ಇದೆ. ದೈವೀಚ್ಛೆ ಹೇಗಿದೆಯೋ ನೋಡೋಣ! :-(

    ReplyDelete
    Replies
    1. ಬಂದರೆ ನಮ್ಮ ಪರಿಚಯವೂ ಆಗುತ್ತದೆ :-)

      Delete
  2. i want to know more about this mag, please details...

    ReplyDelete
    Replies
    1. http://sankathana.com
      ಈ ವೆಬ್ ಪುಟದಲ್ಲಿ ವಿವರಗಳಿವೆ

      Delete