Oct 22, 2013

ನೂತನ ರಾಜ್ಯಕ್ಕೆ ನೂರಾರು ವಿಘ್ನಗಳು


         ಡಾ ಅಶೋಕ್ ಕೆ ಆರ್

ಚಿಕ್ಕ ರಾಜ್ಯಗಳು ಆಡಳಿತಕ್ಕೆ ಅಭಿವೃದ್ಧಿಗೆ ಅನುಕೂಲಕರವೆಂಬ ದೂರದೃಷ್ಟಿಯಿಂದ ಜಾರ್ಖಂಡ್, ಉತ್ತರಖಂಡ ಮತ್ತು ಚತ್ತೀಸಗಡ ರಾಜ್ಯಗಳನ್ನು 2000ದಲ್ಲಿ ರಚಿಸಲಾಯಿತು. ಕೆಲವೊಂದು ಸಂಗತಿಗಳಲ್ಲಿ ಈ ಚಿಕ್ಕ ರಾಜ್ಯಗಳು ತಮ್ಮ ಮಾತೃ ರಾಜ್ಯಗಳಿಗಿಂತ ಮುನ್ನಡೆದರೆ ಒಟ್ಟಾರೆಯಾಗಿ ದೊಡ್ಡ ರಾಜ್ಯಗಳನ್ನು ಒಡೆದು ಸಣ್ಣ ರಾಜ್ಯಗಳನ್ನು ರಚಿಸಿದ್ದು ರಾಜಕೀಯ ಪಕ್ಷಗಳಿಗೆ ಅಧಿಕಾರಕ್ಕೇರಲು ಅನುಕೂಲಕರವಾಗಿ ಮತ್ತಷ್ಟು ಅಧಿಕಾರಿ ವರ್ಗದವರಿಗೆ ಹೆಚ್ಚಿನ ಭ್ರಷ್ಟಾಚಾರ ಮಾಡಿಕೊಡಲು ಅನುವು ಮಾಡಿಕೊಟ್ಟಿತೇ ಹೊರತು ಚಿಕ್ಕ ರಾಜ್ಯದಿಂದ ಹೆಚ್ಚಿನ ಅಭಿವೃದ್ಧಿ ಎಂಬ ಭರವಸೆಗೆ ನಿರೀಕ್ಷಿತ ಮಟ್ಟದ ಯಶ ಸಿಕ್ಕಿಲ್ಲ. ಚಿಕ್ಕ ರಾಜ್ಯಗಳಿಂದ ಅಭಿವೃದ್ಧಿಯೆಂಬ ನೆಪವೊಡ್ಡಿ ಹೊಸ ರಾಜ್ಯಗಳ ಉದಯವಾಗಿದ್ದು ಒಂದು ಕಡೆಯಾದರೆ 1956ರಲ್ಲಿ ನಡೆದ ರಾಜ್ಯಗಳ ಪುನರ್ ವಿಂಗಡನೆ ಮತ್ತು ರಚನೆಯ ಸಮಯದಲ್ಲಿ ಬಲವಂತದ ವಿಲೀನಗಳು ನಡೆದುಹೋಗಿ ಪ್ರತ್ಯೇಕ ರಾಜ್ಯಕ್ಕೆ ಆ ಪ್ರಾಂತ್ಯದವರು ದಶಕಗಳಿಂದ ಹೋರಾಟಕ್ಕಿಳಿಯುವಂತೆ ಮಾಡಿದ್ದು ಮತ್ತೊಂದು ಕಡೆ. ಪ್ರತ್ಯೇಕ ರಾಜ್ಯಕ್ಕೆ ಹೋರಾಡಿದವರಿಗೆಲ್ಲ ಸ್ಪೂರ್ತಿಯಾದ ಹೋರಾಟ ತೆಲಂಗಾನ ರಾಜ್ಯಕ್ಕಾಗಿ ನಡೆದ ಹೋರಾಟ. ದಶಕಗಳ ರಕ್ತಸಿಕ್ತ ಹೋರಾಟಕ್ಕೆ ಜಯ ಸಿಕ್ಕಿದೆ. ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಉದಯಿಸುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ನಿಜಾಮರ ಆಳ್ವಿಕೆಯಿಂದ ಹಿಡಿದು ತೆಲಂಗಾಣ ಉದಯಿಸುವವರೆಗೆ ಸಾವಿರಾರು ಜನರ ಬಲಿದಾನವಾಗಿದೆ.

ತೆಲಂಗಾಣ ರಾಜ್ಯ ಹೋರಾಟ ಕೇವಲ ರಾಜಕೀಯ ಪುಢಾರಿಗಳಿಂದ ಪ್ರೇರಿತವಾದುದಲ್ಲ. ಕೆಲವೇ ಕೆಲವು ವರ್ಷಗಳ ಹೋರಾಟವೂ ಅಲ್ಲ. ಭಾರತ ಸ್ವತಂತ್ರಗೊಳ್ಳುವುದಕ್ಕೂ ಮೊದಲು 1946ರಲ್ಲಿ ಆರಂಭವಾದ ರೈತ, ಕಾರ್ಮಿಕರ ಸಶಸ್ತ್ರ ಹೋರಾಟ ಇಂದಿನ ತೆಲಂಗಾಣ ಚಳುವಳಿಯ ಮುನ್ನುಡಿಯೆಂದು ಪರಿಗಣಿಸಬಹುದು.  ನಿಜಾಮರ ಆಡಳಿತದಕ್ಕೊಳಪಟ್ಟಿದ್ದ ಹೈದರಾಬಾದ್ ರಾಜ್ಯ ಭಾರತದ ಸ್ವಾತಂತ್ರ್ಯದ ನಂತರವೂ ಪ್ರತ್ಯೇಕವಾಗಿಯೇ ಉಳಿದಿತ್ತು. ಹೈದರಾಬಾದ್ ರಾಜ್ಯದ ಜನತೆಯ ಭಾರತ ವಿಲೀನದ ಕನಸನ್ನು ಹತ್ತಿಕ್ಕುವುದಕ್ಕಾಗಿ ನಿಜಾಮರ ಆಡಳಿತ ವರ್ಗ ಅನೇಕ ದುರಾಚಾರಗಳನ್ನು ಮಾಡಿದರಾದರೂ ಕೊನೆಗೆ ಸೆಪ್ಟೆಂಬರ್ 17, 1948ರಲ್ಲಿ ಆಪರೇಷನ್ ಪೋಲೋದ ಮೂಲಕ ಹೈದರಾಬಾದ್ ರಾಜ್ಯವನ್ನು ಭಾರತದ ತೆಕ್ಕೆಗೆ ತೆಗೆದುಕೊಳ್ಳುವುದರಲ್ಲಿ ಸೈನ್ಯ ವಹಿಸಿದ ಪಾತ್ರ ಮಹತ್ವದ್ದು. ಹೈದರಾಬಾದ್ ರಾಜ್ಯದಲ್ಲಿ ಈಗಿನ ತೆಲಂಗಾಣ ಪ್ರಾಂತ್ಯದ ಜೊತೆಜೊತೆಗೆ ಕರ್ನಾಟಕದ ಗುಲ್ಬರ್ಗ ವಿಭಾಗದ ನಾಲ್ಕು ಜಿಲ್ಲೆಗಳು ಹಾಗೂ ಮರಾಠಿ ಮಾತನಾಡುವ ಔರಂಗಾಬಾದ್ ಸುತ್ತಮುತ್ತಲ ಜಿಲ್ಲೆಗಳೂ ಸೇರಿದ್ದವು.

1952ರಲ್ಲಿ ಸ್ಥಳೀಯರ ಕೆಲಸಗಳೆಲ್ಲ ಕರಾವಳಿ ಆಂಧ್ರದ ಜನತೆಯ ಪಾಲಾಗುತ್ತಿದುದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆಗಳಿದರು. ಪ್ರತಿಭಟನೆಯ ವೇಳೆಯಲ್ಲಿ ಏಳು ಮಂದಿ ವಿದ್ಯಾರ್ಥಿಗಳು ಪೋಲೀಸರ ಗುಂಡಿಗೆ ಬಲಿಯಾದರು. ಡಿಸೆಂಬರ್ 1953ರಲ್ಲಿ ಭಾಷಾವಾರು ಆಧಾರದಲ್ಲಿ ರಾಜ್ಯಗಳನ್ನು ರಚಿಸಲು ಸಮಿತಿಯನ್ನು ರಚಿಸಲಾಯಿತು. ಹೈದರಾಬಾದ್ ರಾಜ್ಯದಲ್ಲಿದ್ದ ಕನ್ನಡ ಮತ್ತು ಮರಾಠಿ ಭಾಷಿಕ ಪ್ರದೇಶಗಳು ಆ ಪ್ರದೇಶದ ಜನರ ಒತ್ತಾಯದ ಮೇರೆಗೆ ಕ್ರಮವಾಗಿ ಮೈಸೂರು (ಇಂದಿನ ಕರ್ನಾಟಕ) ಮತ್ತು ಮಹಾರಾಷ್ಟ್ರ ರಾಜ್ಯಕ್ಕೆ ಸೇರ್ಪಡೆಯಾದವು. ಭಾಷೆ ತೆಲುಗುವಾಗಿದ್ದರೂ ಸಹ ತೆಲಂಗಾಣ ಪ್ರಾಂತ್ಯ ಮತ್ತು ಆಂಧ್ರ ರಾಜ್ಯವನ್ನು ವಿಲೀನಗೊಳಿಸುವುದಕ್ಕೆ ಸಮಿತಿಗೂ ಒಲವಿರಲಿಲ್ಲ. ಭಾಷೆಯಲ್ಲಿ ಸಾಮ್ಯತೆಯಿದ್ದರೂ ಪ್ರಾದೇಶಿಕ ಸಂಸ್ಕೃತಿ ಆಚಾರ ವಿಚಾರಗಳಲ್ಲಿ ಹೆಚ್ಚೆನಿಸುವಷ್ಟೆ ವ್ಯತ್ಯಾಸಗಳಿರುವ ತೆಲಂಗಾಣ ಮತ್ತು ಆಂಧ್ರದ ಏಕೀಕರಣಕ್ಕೆ ಈ ಸಮಿತಿಗೂ ಹೆಚ್ಚಿನ ಒಲವಿರಲಿಲ್ಲ. ತಮ್ಮ ಪ್ರದೇಶ ಹಿಂದುಳಿದಿದ್ದಾಗ್ಯೂ ಹೆಚ್ಚಿನ ಆದಾಯವಿತ್ತು. ಆ ಆದಾಯ ಆಂಧ್ರದ ಅಭಿವೃದ್ಧಿಗೆ ಹೋಗಿಬಿಡಬಹುದೆಂಬುದು ತೆಲಂಗಾಣದವರ ಅಂಜಿಕೆ. ಅದು ನಿಜವಾಗಿದ್ದು ವಿಪರ್ಯಾಸ. ಕೃಷ್ಣ ಮತ್ತು ಗೋದಾವರಿ ನದಿಗಳ ಹೆಚ್ಚು ಹರಿಯುವಿಕೆ ತೆಲಂಗಾಣದಲ್ಲಿ; ಆದರೆ ಅವುಗಳಿಗೆ ಅಡ್ಡಲಾಗಿ ಕಟ್ಟುವ ಅಣೆಕಟ್ಟುಗಳಿಂದ ಹೆಚ್ಚಿನ ಪ್ರಯೋಜನ ಆಂಧ್ರಕ್ಕೆ. ಬ್ರಿಟೀಷರ ಆಳ್ವಿಕೆಯಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆದ ಆಂಧ್ರದವರು ತಮ ದಕ್ಕಬೇಕಾದ ನೌಕರಿಯನ್ನು ಕಸಿದುಕೊಳ್ಳುತ್ತಾರೆ ಎಂಬ ಭಯ. ಇಷ್ಟೆಲ್ಲ ವಿರೋಧಗಳ ನಡುವೆಯೂ ಆಂಧ್ರ ಕಾಂಗ್ರೆಸ್ ನಾಯಕರ ಲಾಬಿ, ವಿಲೀನಕ್ಕೆ ಕಾಂಗ್ರೆಸ್ ಹೈಕಮ್ಯಾಂಡಿನ ಒಲವು ಮತ್ತು ಹೈಕಮ್ಯಾಂಡಿನ ಆದೇಶವನ್ನು ತಿರಸ್ಕರಿಸಲಾಗದೆ ಜನತೆಯ ಆಶೋತ್ತರಕ್ಕೆ ವಿರುದ್ಧವಾಗಿ ವಿಲೀನಕ್ಕೆ ಒಪ್ಪಿಗೆ ಕೊಟ್ಟ ತೆಲಂಗಾಣದ ನಾಯಕರ ಕಾರ್ಯದಿಂದಾಗಿ ನವೆಂಬರ್ 1 1956ರಂದು ಆಂಧ್ರಪ್ರದೇಶ ರಾಜ್ಯದ ಉದಯವಾಯಿತು. ವಿರೋಧವನ್ನು ಗಮನಿಸಿದ್ದ ಸಮಿತಿ 1961 ರವರೆಗೆ ಏಕೀಕರಣ ಜಾರಿಯಲ್ಲಿರಲಿ ನಂತರ ತೆಲಂಗಾಣದ ಹೆಚ್ಚಿನ ಜನರು ಬೇರೆ ರಾಜ್ಯಕ್ಕೆ ಒತ್ತಾಯಿಸಿದರೆ ರಾಜ್ಯ ಪುನರ್ರಚನೆ ಮಾಡಬೇಕೆಂದು ಸಲಹೆ ನೀಡಿತ್ತು.

 ತೆಲಂಗಾಣ ಪ್ರಾಂತ್ಯದಲ್ಲಿ ಒಟ್ಟು ಬರುವ ಜಿಲ್ಲೆಗಳು ಹತ್ತು – ಆದಿಲಾಬಾದ್, ಹೈದರಾಬಾದ್, ಖಮ್ಮಂ, ಕರೀಂನಗರ, ಮೆಹಬೂಬನಗರ, ಮೇದಕ್, ನಲಗೊಂಡ, ನಿಜಾಮಬಾದ್, ರಂಗಾರೆಡ್ಡಿ ಮತ್ತು ವಾರಂಗಲ್. ಒಟ್ಟು 1,14,840 ಚದುರ ಕಿ.ಮಿ ವಿಸ್ತೀರ್ಣದ 35,286,757 ಜನಸಂಖ್ಯೆ ಇರುವ ಪ್ರದೇಶ. ಸಂಯುಕ್ತಾಂಧ್ರದ 42 ಪ್ರತಿಶತಃ ಜನಸಂಖ್ಯೆಯಿದು. ಒಟ್ಟು ಆದಾಯ ಮೂಲದಲ್ಲಿ ಆಂಧ್ರ ಮತ್ತು ರಾಯಲಸೀಮಾ ಪ್ರದೇಶದಿಂದ 18 ಪ್ರತಿಶತಃ ಬಂದರೆ, ತೆಲಂಗಾಣ ಪ್ರದೇಶದ ಆದಾಯ (ಹೈದರಾಬಾದ್ ಜಿಲ್ಲೆಯನ್ನೂ ಸೇರಿಸಿ) 62%!. ಆದರೆ ಅಭಿವೃದ್ಧಿಯಲ್ಲಿ ಗಾವುದ ದೂರ. ತೆಲಂಗಾಣ ರಾಜ್ಯಕ್ಕೆ ಒತ್ತಾಯಿಸುವವರು ನೀರಾವರಿ ಯೋಜನೆಗಳ ಉದಾಹರಣೆ ನೀಡುತ್ತಾರೆ. ಕೃಷ್ಣ ಮತ್ತು ಗೋದಾವರಿಯ ಹೆಚ್ಚಿನಂಶ ತೆಲಂಗಾಣದಲ್ಲಿಯೇ ಇದ್ದರೂ ಆ ನದಿಗಳಿಗೆ ಸಂಬಂಧಪಟ್ಟ ನೀರಾವರಿ ಯೋಜನೆಗಳ ಮೂಲಕ 75 ಪ್ರತಿಶತಃ ನೀರು ಕರಾವಳಿ ಆಂಧ್ರಕ್ಕೆ ತಲುಪಿ, 7.5 ಪ್ರತಿಶತಃ ನೀರು ರಾಯಲಸೀಮಾ ಪ್ರದೇಶಕ್ಕೆ ತಲುಪಿ ತೆಲಂಗಾಣಕ್ಕೆ ಸಿಗುವುದು ಉಳಿದ 18 ಪ್ರತಿಶತಃ ಮಾತ್ರ. ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತೆಲಂಗಾಣದವರಿಗೆ ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆಂಬ ಆಕ್ರೋಶ. ಸಂಯುಕ್ತಾಂಧ್ರದ ಒಟ್ಟು ಬಜೆಟ್ಟಿನಲ್ಲಿ ಮೂರನೇ ಒಂದು ಭಾಗಕ್ಕಿಂತ ಕಡಿಮೆ ಪ್ರಮಾಣದ ಅನುದಾನ ತೆಲಂಗಾಣಕ್ಕೆ ಸಿಗುತ್ತಿತ್ತು. ವಿಶೇಷ ಸ್ಥಾನಮಾನ ನೀಡಿದ ಮೇಲೂ ಅಭಿವೃದ್ಧಿಯ ವಿಚಾರದಲ್ಲಿ ಸೀಮಾಂಧ್ರದ ಜನತೆಯ ಅನಾದಾರವೇ ಸಿಕ್ಕುತ್ತಿತ್ತು.  ಐದು ದಶಕಗಳಲ್ಲಿ ತೆಲಂಗಾಣ ಪ್ರಾಂತ್ಯದ ರಾಜಕಾರಣಿಗಳು ಕೇವಲ ಹತ್ತು ವರುಷಗಳ ಕಾಲ ಮುಖ್ಯಮಂತ್ರಿ ಗದ್ದುಗೆಯಲ್ಲಿದ್ದರು ಎಂಬುದು ಕೂಡ ರಾಜಕೀಯವಾಗಿಯೂ ಹೇಗೆ ತೆಲಂಗಾಣ ಪ್ರಾಂತ್ಯ ನಿರ್ಲಕ್ಷ್ಯಕ್ಕೊಳಗಾಗಿತ್ತು ಎಂಬುದನ್ನು ತಿಳಿಸುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಸತತ ನಿರ್ಲಕ್ಷ್ಯ, ಕೊಟ್ಟ ನೂರಾರು ಭರವಸೆಗಳು ಈಡೇರಿಕೆಯಾಗದ ಅಸಹನೆ ತೆಲಂಗಾಣ ಪ್ರಾಂತ್ಯದಲ್ಲಿನ ಪ್ರತ್ಯೇಕತೆಯ ಕೂಗಿಗೆ ಸತತವಾಗಿ ಇಂಧನ ಒದಗಿಸಿತೆನ್ನುವುದು ಸತ್ಯ.

ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ತೆಲಂಗಾಣದ ಪರವಾಗಿ ಮತ್ತು ತೆಲಂಗಾಣದ ವಿರೋಧವಾಗಿ ಹೇಳಿಕೆಗಳನ್ನು ಕೊಡುತ್ತ ಹೋರಾಟದ ಒಳಗೆ ಹೊರಗೆ ಓಡಾಡುತ್ತಿದ್ದಾಗ್ಯೂ ಮೊದಲಿನಿಂದಲೂ ತೆಲಂಗಾಣ ಚಳುವಳಿಯ ಆತ್ಮ ವಿದ್ಯಾರ್ಥಿಗಳದು. ಕೆ. ಚಂದ್ರಶೇಖರ್ ರಾವ್ ನೇತ್ರತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷವನ್ನು ಹೊರತುಪಡಿಸಿದರೆ ಉಳಿದೆಲ್ಲ ಪಕ್ಷಗಳೂ ಸಮಯಕ್ಕೆ ತಕ್ಕಂತೆ ತೆಲಂಗಾಣ ರಾಜ್ಯದ ಪರ ವಿರೋಧ ಹೋರಾಟದಲ್ಲಿ ತೊಡಗಿದ್ದವು. 1968ರಲ್ಲಿ ಒಸ್ಮಾನಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸರಕಾರಿ ನೇಮಕಾತಿಯಲ್ಲಿ ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದೆದ್ದರು. ಅಧಿಕೃತ ಸರಕಾರಿ ವರದಿಗಳ ಪ್ರಕಾರ 23 ಮಂದಿ ಪೋಲೀಸ್ ಶೂಟೌಟ್ ನಲ್ಲಿ ಮೃತರಾದರು. 2009ರಲ್ಲಿ ಮತ್ತೆ ಪುಟಿದೆದ್ದ ಚಳುವಳಿಯಲ್ಲಿ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡು ಪ್ರತಿಭಟನೆಯನ್ನು ಮತ್ತೊಂದು ಸ್ತರಕ್ಕೆ ಕೊಂಡೊಯ್ದರು. ಪ್ರತಿಭಟನೆಯ ಕಾವಿಗೆ ಬೆದರಿದ ಕೇಂದ್ರ ಸರಕಾರ ಶ್ರೀ ಕೃಷ್ಣ ಸಮಿತಿಯನ್ನು ರಚಿಸಿ ಡಿಸೆಂಬರ್ 31, 2010ರ ಒಳಗೆ ವರದಿ ಸಲ್ಲಿಸಬೇಕೆಂದು ಆದೇಶಿಸಿತು. ಪ್ರಸ್ತುತ ಸ್ಥಿತಿಯಲ್ಲಿ ಸಂಯುಕ್ತಾಂಧ್ರದ ಪರಿಕಲ್ಪನೆ ಸರಿಯಲ್ಲವೆಂದು ತನ್ನ ವರದಿಯಲ್ಲಿ ತಿಳಿಸಿದ ಸಮಿತಿ ತೆಲಂಗಾಣಕ್ಕೆ ಕಡೇ ಪಕ್ಷ ಪ್ರತ್ಯೇಕ ಕೌನ್ಸಿಲ್ ಒಂದನ್ನಾದರೂ ರಚಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿತು. ತೆಲಂಗಾಣ ರಾಜಕೀಯ ಪಕ್ಷಗಳ ಹತೋಟಿ, ಅಲ್ಲಿನ ಜನರ ಅಭಿಪ್ರಾಯಗಳನ್ನು ಆಂಧ್ರದವರ ಒಡೆತನದಲ್ಲೇ ಹೆಚ್ಚಿರುವ ಮಾಧ್ಯಮಗಳ ಮುಖಾಂತರ ಬದಲಿಸುವ ಬಗ್ಗೆ ಸಲಹೆಗಳನ್ನೂ ಕೊಟ್ಟಿದ್ದ ಶ್ರೀಕೃಷ್ಣ ವರದಿ ಆಂಧ್ರ ಹೈಕೋರ್ಟಿನಿಂದ ಛೀಮಾರಿಗೂ ಒಳಪಟ್ಟಿತು. ‘ಇಂಥ ಸಲಹೆಗಳು ಪ್ರಜಾಪೃಭುತ್ವದ ಅಡಿಪಾಯಕ್ಕೇ ಅಪಾಯವುಂಟುಮಾಡುತ್ತದೆ’ ಎಂದು ನ್ಯಾಯಮೂರ್ತಿ ನರಸಿಂಹ ರೆಡ್ಡಿ ಅಭಿಪ್ರಾಯಪಟ್ಟರು. 2011ರ ಫೆಬ್ರವರಿ 17ರಿಂದ ತೆಲಂಗಾಣ ಪ್ರಾಂತ್ಯದಲ್ಲಿ ಅಸಹಕಾರ ಚಳುವಳಿ ಆರಂಭವಾಯಿತು. ಮೂರು ಲಕ್ಷಕ್ಕೂ ಅಧಿಕ ಸರಕಾರಿ ನೌಕರರು ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆಗಿಳಿದರು. ಚಳುವಳಿ ಮತ್ತಷ್ಟು ಉಗ್ರ ಸ್ವರೂಪ ಪಡೆಯಿತು. ತೆಲಂಗಾಣ ಪ್ರಾಂತ್ಯದ ಸಂಸದರ, ಶಾಸಕರ, ಸಚಿವರ ರಾಜೀನಾಮೆ, ಪ್ರತ್ಯೇಕ ರಾಜ್ಯ ಉದಯವನ್ನು ಭಾವನಾತ್ಮಕವಾಗಿ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕರು, ಸತತ ಒತ್ತಾಯ, ಪ್ರತಿಭಟನೆಗಳೆಲ್ಲ ಕೇಂದ್ರ ಸರಕಾರ ಪ್ರತ್ಯೇಕ ರಾಜ್ಯ ಘೋಷಿಸಲೇಬೇಕಾದ ಪರಿಸ್ಥಿತಿ ತಂದೊಡ್ಡಿತು. ಕಡೆಗೆ ಅಕ್ಟೋಬರ್ ಮೂರು 2013ರಂದು ಕೇಂದ್ರ ಸಚಿವ ಸಂಪುಟ ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣ ಮತ್ತು ಸೀಮಾಂಧ್ರ ರಚನೆಗೆ ಒಪ್ಪಿಗೆ ನೀಡಿತು.

ಸೀಮಾಂಧ್ರದಲ್ಲೂ ಪ್ರತಿಭಟನೆಯ ಕಾವು

ಮಾತೃ ರಾಜ್ಯವೊಂದನ್ನು ಒಡೆಯುವುದು ಸುಲಭದ ಕೆಲಸವಲ್ಲ. ಕರ್ನಾಟಕವನ್ನು ವಿಭಜಿಸಿದರೆ ಎಷ್ಟರಮಟ್ಟಿಗಿನ ವಿರೋಧ ವ್ಯಕ್ತವಾಗಬಹುದೋ ಅದೇ ರೀತಿ ರಾಯಲಸೀಮಾ ಮತ್ತು ಕರಾವಳಿ ಆಂಧ್ರದಲ್ಲೂ ರಾಜ್ಯ ವಿಭಜನೆಗೆ ವಿರೋಧ ವ್ಯಕ್ತವಾಗುತ್ತಿದೆ. 2009ರಲ್ಲಿ ಅಂದಿನ ಗೃಹ ಸಚಿವ ಪಿ.ಚಿದಂಬರಂ ತೆಲಂಗಾಣವನ್ನು ಆಂಧ್ರದಿಂದ ಪ್ರತ್ಯೇಕಿಸುವ ಉದ್ದೇಶವಿದೆ ಎಂದು ಹೇಳಿದಾಗಲೇ ಈಗಿನ ಸೀಮಾಂಧ್ರದಲ್ಲಿ ವಿಭಜನೆ ವಿರೋಧಿಸಿ ಪ್ರತಿಭಟನೆ ಭುಗಿಲೆದ್ದಿತ್ತು. ಆ ಕಾರಣದಿಂದಾಗಿ ಪ್ರತ್ಯೇಕ ರಾಜ್ಯ ರಚನೆ ಮತ್ತಷ್ಟು ವರುಷ ವಿಳಂಬವಾಯಿತು. ಈಗ ಪ್ರತ್ಯೇಕ ರಾಜ್ಯ ರಚನೆ ಅಧಿಕೃತವಾಗಿ ಘೋಷಣೆಯಾಗಿರುವಾಗ ಸೀಮಾಂಧ್ರದ ಜನತೆಯ ಪ್ರತಿಭಟನೆ ಮತ್ತಷ್ಟು ಹೆಚ್ಚಿದೆ. ಸರಕಾರಿ ನೌಕರರು ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಸಾರಿಗೆ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಕುಸಿದು ಬಿದ್ದಿದೆ. ತೆಲಂಗಾಣ ಪ್ರಾಂತ್ಯದವರು ಪ್ರತ್ಯೇಕತೆಯ ಹೋರಾಟ ನಡೆಸಿದಾಗೆಲ್ಲ ಮೌನದಿಂದಿದ್ದ ಸೀಮಾಂಧ್ರದ ಜನತೆ ರಾಜಕೀಯವಾಗಿ ಪ್ರಬಲವಾಗಿರುವ ತಮ್ಮ ಪ್ರಾಂತ್ಯದ ರಾಜಕಾರಣದ ಲಾಬಿ ಗೆದ್ದು ಪ್ರತ್ಯೇಕ ತೆಲಂಗಾಣ ರಚನೆಯೇ ಆಗುವುದಿಲ್ಲ ಎಂಬ ಭರವಸೆಯಲ್ಲಿತ್ತೇನೋ?! ಇಷ್ಟಕ್ಕೂ ಸೀಮಾಂಧ್ರದ ರಾಜಕಾರಣಿಗಳ ವಿರೋಧ ರಾಜ್ಯ ವಿಭಜಿಸುವುದಕ್ಕಾ? ಸೀಮಾಂಧ್ರದ ಬೆಳವಣಿಗೆಯಲ್ಲಿ ತೆಲಂಗಾಣ ವಹಿಸಿದ ಪಾತ್ರ, ಮತ್ತು ತೆಲಂಗಾಣ ಪ್ರಾಂತ್ಯದೊಳಗೆ ಬರುವ ಹೈದರಾಬಾದ್ ಸೀಮಾಂಧ್ರ ಸೀಮೆಯ ಜನರ ಪ್ರತಿಭಟನೆಗೆ ಪ್ರಮುಖ ಕಾರಣವೆಂದರೆ ತಪ್ಪಾಗಲಾರದು. ನೈಸರ್ಗಿಕ ಸಂಪನ್ಮೂಲ ಹೇರಳವಾಗಿರುವ ತೆಲಂಗಾಣ ಇಷ್ಟು ದಿನಗಳವರೆಗೆ ತನ್ನ ಒಡಲು ಬಸಿದು ಕೊಟ್ಟಿದ್ದು ಸೀಮಾಂಧ್ರದ ಅಭಿವೃದ್ಧಿಗೆ. ಆ ನೈಸರ್ಗಿಕ ಸಂಪನ್ಮೂಲ ಮುಂದೆ ನಮಗೆ ದಕ್ಕಲಾರದೆಂಬ ಭಯ ಸೀಮಾಂಧ್ರದವರಿಗೆ. ಜೊತೆಗೆ ಕೃಷ್ಣ ಮತ್ತು ಗೋದಾವರಿಯಂಥ ಪ್ರಮುಖ ಜೀವಸೆಲೆಗಳು ತೆಲಂಗಾಣದಲ್ಲಿ ಹೆಚ್ಚು ಹರಿಯುವುದಾದ್ದರಿಂದ ಆ ನೀರನ್ನುಪಯೋಗಿಸುವುದಕ್ಕೂ ಸಂಚಕಾರ ಬರಬಹುದೆಂಬ ಅಂಜಿಕೆ. ದೇಶದಲ್ಲೀಗಾಗಲೇ ಇರುವ ಅನೇಕ ರಾಜ್ಯಗಳ ನಡುವಿನ ಬಗೆಹರಿಸಲಾಗದ ನದಿ ನೀರು ವ್ಯಾಜ್ಯ ತೆಲಂಗಾಣ ರಾಜ್ಯದ ಉದಯದೊಂದಿಗೆ ಮತ್ತೊಂದು ಮಜಲು ತಲುಪುವುದು ಖಂಡಿತ.

ಹೈದರಾಬಾದ್! – ಮುತ್ತಿನ ನಗರಿ ಹೈದರಾಬಾದ್ ಪ್ರಾಂತ್ಯದ ಲೆಕ್ಕದಲ್ಲಿ ಸೇರುವುದು ತೆಲಂಗಾಣಕ್ಕೆ. ಬಹುಶಃ ಈ ಮುತ್ತಿನ ನಗರಿ ಯಾರಿಗೆ ಸೇರಬೇಕೆಂಬ ವಿಷಯದಲ್ಲಿ ಗಲಾಟೆಗಳಿರದಿದ್ದಲ್ಲಿ ಆಂಧ್ರ ಪ್ರದೇಶದ ವಿಭಜನೆ ಎಂದೋ ನಡೆದುಹೋಗುತ್ತಿತ್ತೋ ಏನೋ. ತೆಲಂಗಾಣ ವ್ಯಾಪ್ತಿಗೆ ಹೈದರಾಬಾದ್ ಬರುವುದರಿಂದ ನ್ಯಾಯಯುತವಾಗಿ ಅದು ನಮಗೇ ಸೇರಬೇಕು ಎಂಬುದು ತೆಲಂಗಾಣದವರ ವಾದವಾದರೆ ಹೈದರಾಬಾದಿನ ಅಭಿವೃದ್ಧಿಯಲ್ಲಿ ನಮ್ಮ ಪಾತ್ರವೇ ಹೆಚ್ಚು ಅದು ನಮಗೇ ಸೇರಬೇಕು ಎಂಬುದು ಸೀಮಾಂಧ್ರದವರ ವಾದ. ಎರಡು ರಾಜ್ಯಕ್ಕೂ ಕೊಡದೆ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ಯೋಚನೆಯೂ ನಡೆದಿತ್ತಾದರೂ ಎರಡೂ ಕಡೆಯವರ ವಿರೋಧದಿಂದ ಅದು ಸಾಧ್ಯವಾಗಲಿಲ್ಲ. ಸದ್ಯದ ಪರಿಹಾರವೆಂಬಂತೆ ಇನ್ನು ಹತ್ತು ವರುಷಗಳ ಅವಧಿಗೆ ಹೈದರಾಬಾದನ್ನು ತೆಲಂಗಾಣ ಮತ್ತು ಸೀಮಾಂಧ್ರದ ಜಂಟಿ ರಾಜಧಾನಿಯಾಗಿ ಮಾಡಲಾಗಿದೆ. ಹತ್ತು ವರುಷಗಳಲ್ಲಿ ಸೀಮಾಂಧ್ರಕ್ಕೆ ಮತ್ತೊಂದು ರಾಜಧಾನಿಯನ್ನು ನಿರ್ಮಿಸುವ ವಿಚಾರವಿದೆ. ಬಹುಶಃ ಈ ನಿರ್ಧಾರವೇ ಸೀಮಾಂಧ್ರದ ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರೆ ಸುಳ್ಳಲ್ಲ. ಬಿಜೆಪಿ ಪ್ರತ್ಯೇಕತೆಯ ಪರವಾಗಿದೆ, ಇನ್ನು ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ, ಪ್ರತ್ಯೇಕಿಸುವ ನಿರ್ಧಾರ ತೆಗೆದುಕೊಂಡಿದ್ದೇ ಕಾಂಗ್ರೆಸ್; ಆಂಧ್ರದಲ್ಲೂ ಕಾಂಗ್ರೆಸ್ ಆಡಳಿತ. ಸೀಮಾಂಧ್ರದ ಕಾಂಗ್ರೆಸ್ ಶಾಸಕರು, ಸಂಸದರು, ಸಚಿವರು ಪ್ರತ್ಯೇಕತೆಯನ್ನು ವಿರೋಧಿಸಿದ್ದಾರೆ, ರಾಜೀನಾಮೆ ಪತ್ರ ನೀಡಿದ್ದಾರೆ. ಇದು ಕೇವಲ ಮತಗಳಿಗಾಗಿ ನಡೆಸುವ ಗಿಮಿಕ್ ಅಲ್ಲದೇ ಮತ್ತೇನಲ್ಲ. ವೈಎಸ್ ಆರ್ ಕಾಂಗ್ರೆಸ್ಸಿನ ಜಗನ್ ಮತ್ತು ತೆಲುಗು ದೇಸಂ ಪಕ್ಷದ ಚಂದ್ರಬಾಬು ನಾಯ್ಡು ಸತ್ಯಾಗ್ರಹ ಕೂರುತ್ತಿದ್ದಾರಾದರೂ ಅವರ ಉದ್ದೇಶ ಅಖಂಡ ಆಂಧ್ರಕ್ಕೋ ಅಥವಾ ಸೀಮಾಂಧ್ರದ ಮತಗಳಿಗೋ ಎಂಬ ಅನುಮಾನ ಕಾಡದೆ ಇರದು. ಚಿರಂಜೀವಿಯ ಪ್ರಜಾರಾಜ್ಯಂ ಪಕ್ಷ ಮೊದಲು ಸಂಯುಕ್ತಾಂಧ್ರಕ್ಕೆ ಬೆಂಬಲ ವ್ಯಕ್ತಪಡಿಸಿತ್ತಾದರೂ ಕಾಂಗ್ರೆಸ್ಸಿನಲ್ಲಿ ವಿಲೀನಗೊಂಡ ನಂತರ ತನ್ನ ನಿಲುವನ್ನು ಬದಲಿಸಿ ಪ್ರತ್ಯೇಕ ರಾಜ್ಯವೋ ಒಂದೇ ರಾಜ್ಯವೋ ಜನತೆಯ ಅಭಿವೃದ್ಧಿ ಮುಖ್ಯ ಅಷ್ಟೇ ಎಂಬ ನಿಲುವು ತಳೆಯಿತು.

ತೆಲಂಗಾಣ ಪ್ರತ್ಯೇಕ ರಾಜ್ಯವಾಗುವುದಕ್ಕಿದ್ದ ಮತ್ತೊಂದು ಅಡಚಣೆ ನಕ್ಸಲ್! ತೆಲಂಗಾಣಕ್ಕಾಗಿ ಹೋರಾಟ ನಡೆಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಒಸ್ಮಾನಿಯ ವಿಶ್ವವಿದ್ಯಾಲಯ. ಈ ಹೋರಾಟದಲ್ಲಿ ಮಾವೋವಾದದ ಬೆಂಬಲಿಗರು ನೇರವಾಗಿ ಮತ್ತು ಪರೋಕ್ಷವಾಗಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ತೆಲಂಗಾಣ ರಾಜ್ಯೋದಯದ ವಿರೋಧಿಗಳು ಈ ಆರೋಪವನ್ನೇ ನೆಪವಾಗಿಟ್ಟುಕೊಂಡು ಪ್ರತ್ಯೇಕತೆಯ ನಂತರ ಹೇಗೆ ಜಾರ್ಖಂಡ್ ಮತ್ತು ಚತ್ತೀಸಗಡದಲ್ಲಿ ನಕ್ಸಲರ ಪ್ರಭಾವ ಹೆಚ್ಚಾಯಿತೋ ಅದೇ ರೀತಿ ತೆಲಂಗಾಣದಲ್ಲೂ ನಕ್ಸಲರ ಪ್ರಭಾವವಲಯ ವಿಸ್ತರಣೆಯಾಗುವ ಸಂಭವವಿದೆ ಎಂದರು. ಪತ್ರಿಕಾ ಹೇಳಿಕೆಯಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಬೆಂಬಲ ಘೋಷಿಸಿದ ಮಾವೋವಾದಿ ನಕ್ಸಲರು ತೆಲಂಗಾಣ ಹೋರಾಟದಲ್ಲಿ ತಮ್ಮ ಪಾತ್ರವನ್ನು ನಿರಾಕರಿಸಿದರು. ತೆಲಂಗಾಣ ನಕ್ಸಲರ ಮತ್ತೊಂದು ಪ್ರಭಾವಿವಲಯವಾಗುತ್ತದಾ ಎಂಬುದನ್ನು ತೆಲಂಗಾಣ ರಾಜ್ಯದ ಅಭಿವೃದ್ಧಿ ನಿರ್ಧರಿಸುತ್ತದೋ ಏನೋ?
           
 ಸತತ ಹೋರಾಟದಿಂದ ಪ್ರತ್ಯೇಕ ರಾಜ್ಯ ಪಡೆದುಕೊಂಡ ತೆಲಂಗಾಣದ ಚಳುವಳಿ ಮತ್ತಷ್ಟು ಹೊಸ ರಾಜ್ಯಗಳಿಗೆ ಬೇಡಿಕೆ ಹುಟ್ಟುವಂತೆ ಮಾಡಿದೆ. ವಿಧರ್ಭ, ಗೋರ್ಖಾಲ್ಯಾಂಡ್ ಚಳುವಳಿಗಳು ಮತ್ತಷ್ಟು ಹೆಚ್ಚುವ ಸಂಭವವಿದೆ. ಚಿಕ್ಕ ರಾಜ್ಯಗಳು ಎಲ್ಲ ಸಮಸ್ಯೆಗಳಿಗೂ ಪರಿಹಾರವಾಗುತ್ತದಾ? ಆಡಳಿತ ನಡೆಸಲು ಚಿಕ್ಕ ರಾಜ್ಯಗಳು ಅನುಕೂಲಕರ ಎಂಬುದನ್ನು ಅಲ್ಲಗಳೆಯುವುದು ಸಾಧ್ಯವಿಲ್ಲವಾದರೂ ರಾಜಕೀಯ ಇಚ್ಛಾಶಕ್ತಿ, ಜನತೆಯ ಪಡೆದುಕೊಳ್ಳುವ ಶಕ್ತಿ, ಅಧಿಕಾರಿಗಳ ಕೆಲಸ ಮಾಡುವ ಪ್ರವೃತ್ತಿಯಲ್ಲಿ ಬದಲಾವಣೆಗಳಾಗದಿದ್ದರೆ ದೊಡ್ಡ ರಾಜ್ಯವಿರಲಿ ಸಣ್ಣ ರಾಜ್ಯವಿರಲಿ ಹಿಂದುಳುಯುವಿಕೆ ತಪ್ಪುವುದಿಲ್ಲ.

1 comment:

  1. Nice article. it was informative.
    Telangana struggle was at peak during 70s, during that period indra gandhi' was our prime minister. nearly 56 people died in that struggle. indra gandhi pacified that movement by making the leader who was fighting for telangana has CM of AP. like this movements intensity was diluted by her.
    Even Nehru was against United Andhra.
    About 800 tmc of krishna river water is available to andra, out of that seemandhra gets 700 tmc. From 1000 tmc of godhavari water telangana get's mere 125 tmc.
    Telangana people have the feeling that coastal people are intelligent and stilling their rights. so how they have developed hate-redness towards them.
    if government denies telangana by bowing to the pressure of seemandhra agitation. Telanganites will intensify their struggle for separate state.. so there is no end for this agitation.
    I strongly support the formation of 29 th child of india.
    But government should fix certain criteria to form new state like minimum 3 crore population with minimum 160000-200000 sq km surface area. state should be in a position to make their own revenue without depending on central government. not based no caste or language.. or ethnicity.
    outsiders living in telangana interest should be protected.

    ReplyDelete