Oct 11, 2013

ನೆರಳು



 ಡಾ ಅಶೋಕ್ ಕೆ ಆರ್

ಉಹ್ಞೂ, ಸರಿಯಾಗಿ ಇಂಥದೇ ದಿನದಿಂದ ಈ ತೊಂದರೆ ಆರಂಭವಾಗಿತ್ತು ಎಂದ್ಹೇಳಲು ಕಷ್ಟವಾಗಿತ್ತು ರಾಜೀವನಿಗೆ. ಮೊದಲು ಅನುಭವಕ್ಕೆ ಬಂದಿದ್ದು ಇತ್ತೀಚೆಗೆ ಮೈಸೂರಿನಿಂದ ಬೆಂಗಳೂರಿಗೆ ಹೋಗುವ ಹಾದಿಯಲ್ಲಿ. ಶ್ರೀರಂಗಪಟ್ಟಣ ದಾಟಿ ಹತ್ತು ನಿಮಿಷವಾಗಿತ್ತಷ್ಟೇ. ಕಾರು ಕೆಟ್ಟು ನಿಂತಿತು. ಈ ಸಲ ಹಿಂದೆಂದೂ ನೋಡದ ಪ್ರಚಂಡ ಬಿಸಿಲು. ಕಾರಿನ ಎಸಿಯೂ ಬಂದಾಗಿತ್ತು. ‘ಅಲ್ಲೇ ಮರದ ನೆರಳಿನಲ್ಲಿ ನಿಂತಿರಿ ಸರ್. ಏನಾಗಿದೆ ನೋಡ್ತೀನಿ’ ಎಂದ ಡ್ರೈವರ್. ಸರಿ ಎಂದುಕೊಂಡು ಮರದ ಬಳಿ ಬಂದ. ಘಂಟೆ ಮೂರಾಗಿತ್ತು. ಸೂರ್ಯ ಪ್ರಖರವಾಗಿದ್ದ. ಮರದ ನೆರಳು ಕಾಣಲಿಲ್ಲ! ತಲೆಯೆತ್ತಿ ನೋಡಿದ. ಸೂರ್ಯ ನಕ್ಕಂತಾಯಿತು. ರಾತ್ರಿ ಕುಡಿದಿದ್ದು ಜಾಸ್ತಿಯಾಯಿತೇನೋ ಎಂದುಕೊಂಡು ನಗು ಬಂತು. ರಾತ್ರಿ ಪಾರ್ಟಿಯಲ್ಲಿ ನಡೆದುದೆಲ್ಲವನ್ನೂ ನೆನಪಿಗೆ ತಂದುಕೊಂಡು ಮತ್ತೊಂದಷ್ಟು ನಕ್ಕ. ಅಳಿಲಿನ ಕಿಚಪಚ ಸದ್ದು ಕೇಳಿ ಕತ್ತು ತಿರುಗಿಸಿ ಹಿಂದೆ ನೋಡಿದ. ಅಳಿಲು ಕಂಡಿತು, ಆದರೆ ತನ್ನ ನೆರಳೇ ಮಾಯವಾಗಿತ್ತು!

ಅಂದಿನಿಂದ ರಾಜೀವ ಹುಡುಕುತ್ತಲೇ ಇದ್ದಾನೆ. ನೆರಳೇ ಕಾಣಸಿಗುತ್ತಿಲ್ಲ. ದೂರದಲ್ಲೆಲ್ಲೋ ಜನ ಮರದ ಕೆಳಗೆ ನಿಂತಿದ್ದರೆ ಆಸೆಗಣ್ಣುಗಳಿಂದ ಹತ್ತಿರ ಹೋಗುತ್ತಾನೆ. ನೆರಳಿನ ಗುರುತಿಲ್ಲ. ಯಾರೊಡನೆ ಹೇಳಿಕೊಳ್ಳುವುದೆಂದೂ ತಿಳಿಯಲಿಲ್ಲ. ತಿಂಗಳ ಹಿಂದೆ ಹೆಂಡತಿಯೊಡನೆ ಜಗಳವಾಡುತ್ತಿದ್ದಾಗೊಮ್ಮೆ ಮಾತಿನ ನಡುವೆ ‘ನನ್ನ ನೆರಳನ್ನೇ ನಾನು ನಂಬೋದಿಲ್ಲ. ಇನ್ನು ನಿನ್ನನ್ನು ನಂಬ್ತೀನಾ?’ ಎಂದಿದ್ದ. ಕೋಪಗೊಂಡು ತವರಿಗೆ ಹೋದವಳು ತಿರುಗಿ ಬಂದಿಲ್ಲ. ಸೈಕಿಯಾಟ್ರಿಸ್ಟ್ ನಾದರೂ ಕಾಣೋಣನೆಂದುಕೊಂಡನಾದರೂ ಭಯವಾಯಿತು. ಕಾಲೇಜಿನ ದಿನಗಳಲ್ಲಿ ಓದಿದ್ದ ಜೋಗಿಯ ಕಥೆ ನೆನಪಾಯಿತು. ಆ ಕಥೆಯಲ್ಲಿ ಪಾತ್ರವಾಗಿದ್ದ ಗಳಗನಾಥರಿಗೆ ಕನ್ನಡಿಯಲ್ಲಿ ಪ್ರತಿಬಿಂಬ ಕಾಣುವುದಿಲ್ಲ. ಅದು ಸಾವಿನ ಮುನ್ಸೂಚನೆಯಾಗಿತ್ತು ಅದರಲ್ಲಿ. ನನಗೂ ಇದು ಸಾವಿನ ಸೂಚನೆಯಾ?..ತಲೆ ಕೊಡವಿದ.

ರಾತ್ರಿ ಸರಿಯಾಗಿ ನಿದ್ರೆಯಾಗಿರಲಿಲ್ಲ. ಡ್ರೈವರ್ ರಜೆಯಿದ್ದ ಕಾರಣ ತಾನೇ ಡ್ರೈವ್ ಮಾಡುತ್ತ ಜೆ.ಎಸ್.ಎಸ್ ಕಾಲೇಜಿನ ಹಿಂದಿನ ರಸ್ತೆಯಲ್ಲಿ ಸಯ್ಯಾಜಿರಾವ್ ರಸ್ತೆಯೆಡೆಗೆ ಹೊರಟಿದ್ದ. ಬಲಭಾಗದಲ್ಲಿದ್ದ ಮಸಣದಲ್ಲಿ ಮರದ ಬುಡದಲ್ಲಿ ಮೈಚಾಚಿ ಮಲಗಿದ್ದ ನೆರಳು ಕಂಡಂತಾಯಿತು. ಖುಷಿ ತಡೆಯಲಾಗದೆ ಕಿಟಕಿಯ ಗಾಜಿಳಿಸಿ ಕತ್ತು ಹೊರಹಾಕಿದ; ಸ್ಟೇರಿಂಗ್ ಕೈತಪ್ಪಿತು.....ಎದುರಿಗೆ ದೊಡ್ಡ ಲಾರಿ....

 ಅವಧಿ ವೆಬ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಕಥೆ

ಚಿತ್ರ ಮೂಲ - kiplimochemirmir

No comments:

Post a Comment