Sep 20, 2013

ಮಾಯೆಯೊಳಗಣ ಮಾಯೆ....




ಡಾ ಅಶೋಕ್ ಕೆ ಆರ್        
 ಹೊಸ ನಿರ್ದೇಶಕರಿಗೆ ಮತ್ತು ಕೆಲವು ಬಾರಿ ಯಶಸ್ವಿ ಚಿತ್ರ ಕೊಟ್ಟ ನಿರ್ದೇಶಕರಿಗೂ ತಾವು ಪ್ರೀತಿಯಿಂದ ಜತನದಿಂದ ಪೋಷಿಸಿ ಬೆಳೆಸಿದ ಕತೆಯನ್ನು ಚಲನಚಿತ್ರವಾಗಿಸಲು ನಿರ್ಮಾಪಕರು ಸಿಗುವುದಿಲ್ಲ. ಸಿದ್ಧ ಸೂತ್ರಗಳ ಚಿತ್ರ ಮಾಡುವಂತೆ, ರಿಮೇಕ್ ಚಿತ್ರ ಮಾಡುವಂತೆ, ಹತ್ತಾರು ಚಿತ್ರಗಳನ್ನು ನೋಡಿ ಕದ್ದು ರೀಲು ಸುತ್ತುವಂತೆ ಒತ್ತಾಯಿಸುವ ನಿರ್ಮಾಪಕರ ಸಂಖೈಯೇ ಅಧಿಕ. ಇನ್ನು ಅಪ್ಪಿ ತಪ್ಪಿ ಹೊಸತನದ ಚಿತ್ರಕ್ಕೆ ನಿರ್ಮಾಪಕರೊಬ್ಬರನ್ನು ಒಪ್ಪಿಸಿದರೂ ಈಗಾಗಲೇ ಚಾಲ್ತಿಯಲ್ಲಿರುವ ನಟರನ್ನೇನಾದರೂ ತಮ್ಮ ಚಿತ್ರದ ನಾಯಕ ನಟನ ಸ್ಥಾನಕ್ಕೆ ಕಲ್ಪಿಸಿಕೊಂಡುಬಿಟ್ಟಿದ್ದರೆ ಆ ನಾಯಕನನ್ನು ಒಪ್ಪಿಸುವಷ್ಟರಲ್ಲಿ ನಿರ್ದೇಶಕನಿಗೆ ಚಿತ್ರ ಮಾಡುವ ಆಸೆಯೇ ಹೊರಟುಹೋಗುತ್ತದೇನೋ!!
ಇದೇ ಕಾರಣಕ್ಕೆ ಹೊಸ ನಿರ್ದೇಶಕರು ತಮ್ಮ ಹೊಸತಾದ ಪ್ರಯತ್ನಗಳಿಗೆ ಹೊಸ ಕಲಾವಿದರ ತಂಡವನ್ನು ಕಟ್ಟಿಕೊಳ್ಳುವುದು ಸಾಮಾನ್ಯ. “ಇಮೇಜಿನ”(?) ಹಂಗಿಲ್ಲದ ನವನಟರು ನಿರ್ದೇಶಕರ ಮಾತು ಕೇಳುತ್ತಾರೆಂಬ ಸಂಗತಿಯೂ ಇದಕ್ಕೆ ಕಾರಣ. ಹಣವಂತರನ್ನು ಹೊಸ ನಿರ್ಮಾಪಕರನ್ನಾಗಿ ಚಿತ್ರರಂಗಕ್ಕೆ ಪರಿಚಯಿಸುವ ಕೆಲಸವೂ ನಡೆಯುತ್ತದೆ. ಹೊಸ ನಿರ್ಮಾಪಕರು ಸಿಗದಿದ್ದರೆ ತಮ್ಮಲ್ಲಿದ್ದ ಹಣ, ಗೆಳೆಯರ ಹಣದಿಂದ ಚಿತ್ರ ನಿರ್ಮಿಸುವ ಕಾಯಕವನ್ನು ಮಾಡಿದವರಿದ್ದಾರೆ. ಇವೆಲ್ಲಕ್ಕೂ ಮೀರಿ ಚಿತ್ರ ನಿರ್ಮಾಣವನ್ನೇ ಹೊಸ ರೀತಿಯಲ್ಲಿ ಮಾಡಿದ್ದು ಪವನ್ ಮತ್ತವರ ತಂಡ. ಗೆಳೆಯರ ಹಣದ ಜೊತೆಗೆ ಅಂತರ್ಜಾಲದ ಮೂಲಕ ನೂರಾರು ಪ್ರೇಕ್ಷಕರಿಗೆ ತಲುಪಿ ಅವರು ನೀಡಿದ ಹಣದಿಂದ ಚಿತ್ರವೊಂದನ್ನು ನಿರ್ಮಿಸಿ ನಿರ್ದೇಶಿಸಿ ಕೊನೆಗೆ ಮುಖ್ಯವಾಹಿನಿ ಚಿತ್ರಮಂದಿರಗಳಲ್ಲೂ ಬಿಡುಗಡೆ ಮಾಡಿ ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಎಷ್ಟೋ ಜನರು ವಿಶ್ವಾಸವಿಟ್ಟು ಹೂಡಿದ ಹಣಕ್ಕೆ ಮೋಸವಾಗದ ರೀತಿ ಚಿತ್ರವನ್ನು ನಿರ್ದೇಶಿಸಿದ್ದಾರೆ.

“ಲೂಸಿಯ” – ಬಹುಶಃ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಚರ್ಚಿತವಾದ ಕನ್ನಡ ಚಿತ್ರ. ಕರ್ನಾಟಕಕ್ಕೆ ಸೀಮಿತವಾಗದೆ ಭಾರತದ ಕೆಲವು ಖ್ಯಾತ ನಿರ್ದೇಶಕರೂ ಕೂಡ ಕನ್ನಡ ಚಿತ್ರವೊಂದರ ಬಗ್ಗೆ ಮಾತನಾಡುವಂತೆ ಮಾಡಿದ್ದು ಲೂಸಿಯ. ಹೆಚ್ಚು ಖುಷಿಯ ವಿಚಾರವೆಂದರೆ ಇದು ‘ಕಲಾತ್ಮಕ’ ಚಿತ್ರವೆಂಬ ಪಟ್ಟಿ ಧರಿಸಿ ಚಿತ್ರೋತ್ಸವದ ಹುಚ್ಚಿರುವವರಿಗೆ ಮಾತ್ರ ತಲುಪದೆ ಮುಖ್ಯವಾಹಿನಿಯ ಥಿಯೇಟರುಗಳಲ್ಲೂ ಬಿಡುಗಡೆಗೊಂಡು ಟೀಕೆ ಹೊಗಳಿಕೆಗಳೆರಡನ್ನೂ ಜನಸಾಮಾನ್ಯರಿಂದ ಪಡೆದುಕೊಳ್ಳುತ್ತಿರುವುದು. ಬಿಡುಗಡೆಗೆ ಮುಂಚೆಯೇ ಕೆಲವು ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದ ಚಿತ್ರ ಈ ಲೂಸಿಯ.

ಚಿತ್ರ ನಿರ್ಮಾಣದಲ್ಲಿನ ಹೊಸತನ, ಜನಕ್ಕೆ ತಲುಪಿಸುವಲ್ಲಿ, ಮಾರುಕಟ್ಟೆ ಸೃಷ್ಟಿಸಿಕೊಳ್ಳುವಲ್ಲಿ ಹೊಸತನ ನೀಡಿದ ಚಿತ್ರದಲ್ಲೂ ಹೊಸತನವಿದೆಯಾ? ಸಾಮಾನ್ಯ ಮಸಾಲೆ ಚಿತ್ರ ಚೌಕಟ್ಟಿನ ಹೊರಗೆ ಬಂದು ಪವನ್ ಮಾಯೆ ಕನಸುಗಳಲ್ಲಿ ತೇಲಿಸುವ ಲೂಸಿಯ ಹೊರತಂದಿದ್ದಾರೆ. ಸಿನಿಮಾದೊಳಗೆ ಎರಡು ಬಣ್ಣಗಳ ಕತೆಯಿದೆ. ಬಣ್ಣಗಳಲ್ಲಿ ನಡೆಯುವ ಸಿನಿಮಾ ಥಿಯೇಟರಿನ ಕತ್ತಲಿನಲ್ಲಿ ಟಾರ್ಚು ಬಿಡುವವನ ಕತೆಯದೊಂದು ಮಗ್ಗುಲಾದರೆ, ಕಪ್ಪು ಬಿಳುಪಿನಲ್ಲಿ ನಡೆಯುವ ಖ್ಯಾತ ಸಿನಿಮಾ ನಾಯಕನೊಬ್ಬನ ಕತೆ ಮತ್ತೊಂದೆಡೆ. ಎರಡೂ ಪಾತ್ರ ನಿರ್ವಹಿಸಿರುವ ಸತೀಶ್ ನೀನಾಸಂ ತಮ್ಮ ಹೆಸರಿನ ಭಾಗವೇ ಆಗಿಹೋಗಿರುವ ನೀನಾಸಂನ ಶಕ್ತಿಯೇನೆಂಬುದನ್ನು ತಮ್ಮ ಅಭಿನಯದ ಮೂಲಕ ತೋರಿಸಿದ್ದಾರೆ. ಲೂಸಿಯ ಎಂಬ ನಿದ್ರೆ ಬರಿಸುವ, ನಿದ್ರೆಯಲ್ಲಿ ನಮಗೆ ಇಷ್ಟವಾದ ಕನಸು ಬೀಳುವಂತೆ ಮಾಡುವ, ಬಿದ್ದ ಕನಸು ಎದ್ದ ಮೇಲೂ ನೆನಪಿನಲ್ಲಿರುವಂತೆ ಮಾಡುವ ಸಾಮರ್ಥ್ಯದ ಮಾತ್ರೆ ನುಂಗುವ ಸತೀಶ್ ನೀನಾಸಂ ತನಗೆ ಬೀಳುವ ಕನಸಲ್ಲಿ ತನ್ನಿಷ್ಟದ ವೇಷ ಧರಿಸಿ ತನ್ನ ನೈಜ ಜೀವನದ ಸುತ್ತಮುತ್ತಲಿನ ಪಾತ್ರಗಳಿಗೆಲ್ಲ ತನಗೆ ಬೇಕೆನಿಸಿದ ವೇಷ ತೊಡಿಸಿ ಕನಸಿನಲ್ಲೊಂದು ಜೀವನವನ್ನಾರಂಭಿಸುತ್ತಾನೆ. ನಿಜದ ಪ್ರೀತಿಗೂ ಕನಸಿನ ಪ್ರೀತಿಯಲ್ಲಿ ಸ್ಥಾನವಿದೆ. ನಿಜದಲ್ಲಿ ದೂರವಾಗುತ್ತಿದ್ದ ಪ್ರೇಮವನ್ನು ಕನಸಿನಲ್ಲಿ ಹತ್ತಿರವಾಗಿಸಿಕೊಳ್ಳುತ್ತ, ಕನಸನ್ನೇ ನಿಜವೆಂದು ಭ್ರಮಿಸುವ, ಆ ಭ್ರಮೆಯನ್ನೇ ಹೆಚ್ಚೆಚ್ಚು ಅನುಭವಿಸುವ ಆಸೆಯಿಂದ ಮತ್ತಷ್ಟು ಮಗದಷ್ಟು ಮಾತ್ರೆಗಳನ್ನು ನುಂಗುವ ನಾಯಕನ ಪಾಡಿದೆ. ಸಿನಿಮಾ ಥಿಯೇಟರಿನಲ್ಲಿ ಟಾರ್ಚು ಬಿಡುವವನಿಗೆ ಖ್ಯಾತ ನಾಯಕ ನಟನಾಗುವಾಸೆ, ಖ್ಯಾತ ನಾಯಕ ನಟನಿಗೆ ಟಾರ್ಚು ಬಿಡುತ್ತ ಯಾರ ಕಣ್ಣಪಟಲಕ್ಕೂ ಸಿಕ್ಕದೆ ಎಲ್ಲರೊಳಗಿದ್ದೂ ಯಾರ ಗುರುತಿಗೂ ಸಿಗದೆ ಅಮಾಯಕನಾಗಿ ಉಳಿದುಹೋಗುವ ಆಸೆ. ಈ ಇಬ್ಬರಲ್ಲಿ ನಿಜವ್ಯಾರು, ಕನಸಿನವರ್ಯಾರು ಎಂಬ ಕುತೂಹಲವನ್ನು ಕೊನೆಯವರೆಗೂ ಕಾಪಿಡುವಲ್ಲಿ ನಿರ್ದೇಶಕ ಪವನ್ ಯಶಸ್ವಿಯಾಗಿದ್ದಾರೆ. ನಿಜ – ಕನಸು ಅದಲು ಬದಲಾಗಿದ್ದರೂ ಚಿತ್ರದ ಓಘಕ್ಕೆ, ಚಿತ್ರದ ಅಧ್ಯಯನಕ್ಕೆ ಯಾವುದೇ ಅಡ್ಡಿಯಾಗುತ್ತಿರಲಿಲ್ಲವೆಂಬ ವಿಷಯ ಚಿತ್ರಕತೆ ಎಷ್ಟು ಬಿಗಿಯಾಗಿದೆ ಎಂದು ತಿಳಿಸುತ್ತದೆ. ನಾಯಕ – ನಾಯಕಿಯ ಅದ್ಭುತವೆಂದೇ ಕರೆಯಬಹುದಾದ ಅಭಿನಯವನ್ನೂ ಮಂಕು ಮಾಡುವಷ್ಟು ಚೆಂದದ ಅಭಿನಯ ನೀಡಿರುವುದು ಥಿಯೇಟರ್ ಮಾಲೀಕ ಮತ್ತು ಖ್ಯಾತ ನಾಯಕ ನಟನ ಜೊತೆಗಿರುವ ಪಾತ್ರ ಮಾಡಿರುವ ಅಚ್ಯುತ್. ಈಗಾಗಲೇ ಅನೇಕ ಚಿತ್ರಗಳಲ್ಲಿ ತಮ್ಮ ನಟನಾ ಸಾಮರ್ಥ್ಯವನ್ನು ನಿರೂಪಿಸಿರುವ ಅಚ್ಯುತ್ ಒಂದೇ ಚಿತ್ರದಲ್ಲಿ ಎರಡು ಬಗೆಯ ಪಾತ್ರ ಮಾಡಿ ಗೆದ್ದಿದ್ದಾರೆ.

ಚಿತ್ರವೆಂಬುದು ನಿರ್ದೇಶಕನ ಮಾಧ್ಯಮವೆಂಬುದನ್ನು ಈ ಚಿತ್ರ ಮತ್ತೆ ನಿರೂಪಿಸುತ್ತದೆ. ಇದರ ಸೂಚನೆಯೋ ಎಂಬಂತೆ ಎಲ್ಲ ಚಿತ್ರಗಳಲ್ಲೂ ಮೊದಲು ನಾಯಕ ನಟನ ಹೆಸರು ಬಂದು ಟೈಟಲ್ ಕಾರ್ಡಿನ ಕೊನೆಯಲ್ಲಿ ಚಿತ್ರ ನಿರ್ದೇಶಕನ ಹೆಸರು ಬಂದರೆ ಲೂಸಿಯಾದಲ್ಲಿ ಅದು ಅದಲು ಬದಲಾಗಿದೆ. ಪವನ್ ಹೆಸರು ಮೊದಲು ಬಂದು ಸತೀಶ್ ನೀನಾಸಂ ಹೆಸರು ಕೊನೆಯಲ್ಲಿ ಬಂದಿದೆ. ಮತ್ತಿದು ಸರಿ ಕೂಡ ಹೌದಲ್ಲವೇ? ಪ್ರತಿ ದೃಶ್ಯವನ್ನೂ ಪವನ್ ಶೃದ್ಧೆಯಿಂದ ಹೆಣೆದಿದ್ದಾರೆ. ಲೂಸಿಯ ಚಿತ್ರದಲ್ಲಿ ಅಭಿನಯ, ಚಿತ್ರಕತೆ, ಛಾಯಾಗ್ರಹಣ, ಸಂಗೀತ, ಹಾಡುಗಳೆಲ್ಲ ಉತ್ತಮವಾಗಿದ್ದರೂ ಚಿತ್ರ ನೋಡಿ ಹೊರಬಂದ ಕೆಲವು ಘಳಿಗೆಗಳ ನಂತರ ಚಿತ್ರ ನಮ್ಮ ಮನದಿಂದ ಮರೆಯಾಗಿಬಿಡುತ್ತದೆ! ಕಾರಣ ಎಲ್ಲದರಲ್ಲೂ ಹೊಸತನ ಸಾಧಿಸಿದ ನಿರ್ದೇಶಕ, ಚಿತ್ರಕತೆಯಲ್ಲಿ ಬಿಗುವನ್ನು ಕಾಯ್ದುಕೊಂಡ ನಿರ್ದೇಶಕ ಕತೆಯ ಆಯ್ಕೆಯಲ್ಲೇ ಎಡವಿಬಿಟ್ಟಿದ್ದಾರೇನೋ ಎಂಬ ಭಾವನೆ ಬರುತ್ತದೆ. ಅತ್ಯುತ್ತಮ ಚಿತ್ರಗಳು ಚಿತ್ರಮಂದಿರದಿಂದ ಹೊರಬಂದ ಅನೇಕ ದಿನಗಳವರೆಗೂ ಕಾಡುತ್ತಲೇ ಇರುತ್ತವೆ. ಆ ಕಾಡುವಿಕೆ ಲೂಸಿಯ ಚಿತ್ರದ ಕತೆಯಲ್ಲಿಲ್ಲ.

ಇದಕ್ಕಿಂತಲೂ ಬಹುದೊಡ್ಡ ಕೊರತೆಯೆಂದರೆ ಲೂಸಿಯದಲ್ಲಿ ನಮ್ಮ ಮಣ್ಣಿನ ಸೊಗಡಿಲ್ಲ. ತಮಿಳಿನ ಮರೀನಾ, ವಾಗೈ ಸೂಡ ವಾ ರೀತಿಯ ಚಿತ್ರಗಳನ್ನು ನೋಡುತ್ತಿದ್ದರೆ ನಮ್ಮದೇ ಪಕ್ಕದ ಬೀದಿಯ ಕತೆಯೆಂಬ ಭಾವ ಮೂಡುತ್ತದೆ. ಆ ರೀತಿಯ ಮಣ್ಣಿನ ಸೊಗಡು ಈ ಚಿತ್ರದಲ್ಲಿಲ್ಲ. ಲೂಸಿಯ ಒಂದ್ಯಾವುದೋ ಪರದೇಶದ ಚಿತ್ರವೊಂದನ್ನು ಕನ್ನಡದಲ್ಲಿ ನೋಡಿದ ಅನುಭವ ಕೊಡುತ್ತದೆಯೇ ಹೊರತು ಕನ್ನಡದ ಚಿತ್ರವನ್ನು ನೋಡುವ ಅನುಭವ ನೀಡುವುದಿಲ್ಲ. ಇದೇ ಕಾರಣವೋ ಏನೋ ಪರದೇಶದ ಚಿತ್ರಗಳನ್ನು ನೋಡುವವರಿಗೆ, ಸಿನಿಮಾವನ್ನು ವ್ಯಾಕರಣಬದ್ಧವಾಗಿ ಇಷ್ಟಪಡುವವರಿಗೆ, ಚಿತ್ರವೊಂದನ್ನು ಪಾಠದ ರೀತಿ ನೋಡಬಯಸುವವರಿಗೆ ತಲುಪಿದಷ್ಟು ಇಚ್ಛೆಯಾದಷ್ಟು ಸರಾಗವಾಗಿ ಉಳಿದ ಪ್ರೇಕ್ಷಕರಿಗೆ ಪ್ರಿಯವಾಗುತ್ತಿಲ್ಲ.(ಇದಕ್ಕೆ ಕೆಲವು ಆಕ್ಷೇಪಣೆಗಳೂ ಇರಬಹುದು). ಹೊಸ ರೀತಿಯ ಪ್ರಯತ್ನವೆಂದು ಲೂಸಿಯ ಚಿತ್ರವನ್ನು ಮೆಚ್ಚಬಹುದು, ಹಾಗೆ ಮೆಚ್ಚುತ್ತಲೇ ಮುಂದಿನ ಸಿನಿಮಾಗಳಲ್ಲಿ ತಾಂತ್ರಿಕತೆಗೆ ಕೊಟ್ಟಷ್ಟೇ ಗಮನವನ್ನು ನಿರ್ದೇಶಕರು ಕತೆಯ ಕಡೆಗೂ ಕೊಡಲಿ ಎಂದಾಶಿಸಬಹುದು.

(ಗೆಳೆಯನೊಬ್ಬ ಲೂಸಿಯ ಸಿನಿಮಾವನ್ನು ನೋಡಿ ಅದರ ಬಹುತೇಕ ದೃಶ್ಯಗಳು ಸಿನಿಮಾ ಪ್ಯಾರಡೈಸೋ ಚಿತ್ರವನ್ನು ನೆನಪಿಸುತ್ತದೆ ಎಂದು ಹೇಳುತ್ತಿದ್ದ. ನಾನಾ ಸಿನಿಮಾವನ್ನು ನೋಡಿಲ್ಲದ ಕಾರಣ ನೋಡಿದವರ್ಯಾರಾದರೂ ಇದ್ದರೆ ಎರಡಕ್ಕೂ ಹೋಲಿಕೆಗಳಿವೆಯೇ ಎಂದು ತಿಳಿಸಬೇಕಾಗಿ ವಿನಂತಿ – ಹಿಂಗ್ಯಾಕೆ)

No comments:

Post a Comment