Sep 15, 2013

ಅರಾಜಕತೆ ಹರಡುವ ಅಧರ್ಮದ ವಕ್ತಾರರು



ಧರ್ಮದ ಹೆಸರಿನಲ್ಲಿ ಅಧಾರ್ಮಿಕತೆ ಹರಡುತ್ತ ಅಮಾಯಕರ ನೆತ್ತರು ಚೆಲ್ಲಿದ ಯಾಸಿನ್ ಭಟ್ಕಳ್ ಕಡೆಗೂ ಬಂಧನಕ್ಕೊಳಗಾಗಿದ್ದಾನೆ. ಸಹಚರ ಅಸಾದುಲ್ಲಾನೊಟ್ಟಿಗೆ ಭಾರತ ನೇಪಾಳ ಗಡಿಯಲ್ಲಿರುವ ಬಿಹಾರದ ಮೋತಿಹಾರಿಯಲ್ಲಿ ಭಾರತದ ತನಿಖಾ ದಳಕ್ಕೆ ಸಿಕ್ಕಿಬಿದ್ದಿದ್ದಾನೆ. ಅನೇಕ ಬಾಂಬ್ ಸ್ಪೋಟ ಪ್ರಕರಣಗಳಲ್ಲಿ ಬೇಕಾಗಿದ್ದ, ಇಂಡಿಯನ್ ಮುಜಾಹಿದ್ದೀನ್ ಎಂಬ ಕ್ರೂರ ಸಂಘಟನೆಯ ಸೃಷ್ಟಿ ಮತ್ತು ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸಿದ್ದ ಯಾಸಿನ್ ಭಟ್ಕಳನ ಬಂಧನದಿಂದ ಇಂಡಿಯನ್ ಮುಜಾಹಿದ್ದೀನ್ ಹಿನ್ನೆಡೆ ಅನುಭವಿಸಬಹುದಾದರೂ ಧರ್ಮದ ಹೆಸರಿನಲ್ಲಿ ಅಧರ್ಮದ ಕೊಳಚೆ ಹರಡುವ ಜನರಿರುವವರೆಗೆ ಮತ್ತಾ ಕೊಳಚೆ ತುಂಬಿಕೊಂಡು ಹಿಂಸೆಯ ಹರಡುವಿಕೆಯನ್ನೇ ಪ್ರಮುಖವಾಗಿಸಿಕೊಳ್ಳುವ ಯಾಸಿನ್ ಭಟ್ಕಳ್, ಅಸಾದುಲ್ಲಾ, ಅಬ್ದುಲ್ ಕರೀಮ್ ತುಂಡಾರಂಥಹ ಜನರಿರುವವರೆಗೆ ಇಂಡಿಯನ್ ಮುಜಾಹಿದ್ದೀನ್ ತರಹದ ಸಂಘಟನೆಗಳಿಗೆ ಸಾವೇ ಬರಲಾರದೇನೋ?

ಭಟ್ಕಳದಲ್ಲಿ ಜನವರಿ 15, 1983ರಲ್ಲಿ ಜರಾರ್ ಸಿದ್ದಿಬಾಪಾ ಮತ್ತು ರೆಹಾನಾಳ ಮಗನಾಗಿ ಹುಟ್ಟಿದವನ ಹೆಸರು ಮೊಹಮದ್ ಅಹ್ಮದ್ ಸಿದ್ದಿಬಾಪ, ಕುಖ್ಯಾತಿಗೊಂಡಿದ್ದು ಯಾಸಿನ್ ಭಟ್ಕಳ್ ಎಂಬ ಹೆಸರಿನಿಂದ. ಹತ್ತನೇ ತರಗತಿಯನ್ನು ಪಾಸು ಮಾಡಲಾಗದ ಯಾಸಿನ್ ತಂದೆಯೊಡನೆ ಬಟ್ಟೆ ವ್ಯಾಪಾರಕ್ಕೆಂದು 2005ರಲ್ಲಿ ದುಬೈಗೆ ತೆರಳುತ್ತಾನೆ. ಕುಟುಂಬದವರ ಪ್ರಕಾರ ಯಾಸಿನ್ ದುಬೈನಲ್ಲೇ ನಾಪತ್ತೆಯಾಗಿಬಿಡುತ್ತಾನೆ! ದುಬೈಗೆ ಹೋಗುವಷ್ಟರಲ್ಲೇ ಧಾರ್ಮಿಕ ಮೂಲಭೂತವಾದದೆಡೆಗೆ ಸೆಳೆಯಲ್ಪಟ್ಟಿದ್ದ ಯಾಸಿನ್ ಮತ್ತೆ ಭಾರತಕ್ಕೆ ಮರಳಿ ಬಂದು ಸಿಮಿ(student Islamic movement of india) ಸಂಘಟನೆ ಸೇರುತ್ತಾನೆ. ಅಷ್ಟರಲ್ಲಾಗಲೇ ತನ್ನ ಫ್ಯಾಸಿಸ್ಟ್ ಮನೋಭಾವದಿಂದ ಸಿಮಿ ನಿಷೇಧದ ಭೀತಿ ಎದುರಿಸುತ್ತಿತ್ತು. ಸಿಮಿಯ ನಿಷೇಧದ ಕಾರಣದಿಂದ ಸಿಮಿಯಲ್ಲಿದ್ದ ಮೂಲಭೂತವಾದಿಗಳು ಇಂಡಿಯನ್ ಮುಜಾಹಿದ್ದೀನ್ ಹುಟ್ಟು ಹಾಕಿದರು ಎಂದು ಹೇಳಲಾಗುತ್ತದೆಯಾದರೂ ಸಿಮಿಯ ‘ಕೇವಲ ಮಾತಿನ ಹೋರಾಟ’ದಿಂದ ಬೇಸತ್ತ ಯಾಸಿನ್ ಭಟ್ಕಳನಂಥವರು ಗನ್ನು ಬಾಂಬು ಹಿಡಿದು ಧರ್ಮದ “ರಕ್ಷಣೆಗೆ”(?) ಹೊರಟರೆಂಬ ಮತ್ತೊಂದು ವಾದವೂ ಇದೆ. ಅಬ್ದುಲ್ ಸುಭಾನ್ ಖುರೇಷಿ, ಸಫ್ದಾರ್ ನಗೋರಿ ಮುಂತಾದವರ ಜೊತೆ ಸೇರಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಹುಟ್ಟು ಹಾಕುವಲ್ಲಿ ಮತ್ತದರ ಮೂಲಕ ಭಯೋತ್ಪಾದನೆ ಹರಡುವಲ್ಲಿ ಯಾಸಿನ್ ಪಾತ್ರವೂ ದೊಡ್ಡದು. ಇಂಥ ಯಾಸಿನ್ ಭಟ್ಕಳನ ಸೋದರರ ಪೈಕಿ ರಿಯಾಜ್ ಮತ್ತು ಇಕ್ಬಾಲ್ ಕೂಡ ಉಗ್ರಗಾಮಿತ್ವದೆಡೆಗೆ ಸೆಳೆದುಹೋಗಿ ಈಗ ಪಾಕಿಸ್ತಾನದ ಕರಾಚಿಯಲ್ಲಿ ಆಶ್ರಯ ಪಡೆದಿದ್ದಾರೆಂಬ ಸಂಶಯವಿದೆ.

ಬಂಧನದ ನಂತರ ಯಾಸಿನ್ ದೃಡಪಡಿಸಿರುವಂತೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಎಲ್ಲ ದುಷ್ಕೃತ್ಯಗಳಿಗೆ ಪಾಕಿಸ್ತಾನದ ಐ.ಎಸ್.ಐ ಎಲ್ಲ ರೀತಿಯ ಬೆಂಬಲ ನೀಡುತ್ತದೆ. ಯಾಸಿನ್ ಭಟ್ಕಳನಂಥವರು ತಮ್ಮ ಅಧಾರ್ಮಿಕ ನೈಪುಣ್ಯದಿಂದ ಭಯೋತ್ಪಾದಕತೆಯ ದಾರಿಗೆ ಸೆಳೆಯುವ ಯುವಕರನ್ನು ಬಾಂಗ್ಲಾ, ನೇಪಾಳದ ಮೂಲಕ ಪಾಕಿಸ್ತಾನಕ್ಕೆ ಕಳುಹಿಸಿ ತರಬೇತುಗೊಳಿಸುತ್ತಿದ್ದರು. ಈ ತರಹದ ತರಬೇತಿ ಶಿಬಿರಗಳು ಕರ್ನಾಟಕದ ಕರಾವಳಿಯಲ್ಲಿ, ಕೇರಳದ ಕಾಡುಗಳಲ್ಲಿ ಕೂಡ ನಡೆಯುತ್ತಿದ್ದವು. ಪೋಲೀಸರ ಪ್ರಕಾರ ಚಿಕ್ಕಮಗಳೂರಿನ ಕಾಡಿನಲ್ಲಿ ಇಂತಹುದೊಂದು ಕ್ಯಾಂಪಿನ ಮೇಲೆ ದಾಳಿ ಮಾಡಿದಾಗ ಯಾಸಿನ್ ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡಿದ್ದ. ಲಕ್ನೋ ಮೂಲದ ಇಮ್ರಾನೆಂದು ಸುಳ್ಳು ಹೇಳಿಕೊಂಡು ದೆಹಲಿಯ ಝಹೀದಾಳನ್ನು ವಿವಾಹವಾಗಿದ್ದ ಯಾಸಿನ್ ಬೆನ್ನು ಬಿದ್ದಿದ್ದ ಪೋಲೀಸರಿಂದ ತಪ್ಪಿಸಿಕೊಳ್ಳಲು ನಾನಾ ಹೆಸರೇಳಿಕೊಂಡು ಅಲೆಯುತ್ತಿದ್ದ. ಶಿವಾನಂದ್, ಇಮ್ರಾನ್ ಎಂದು ಅಲೆಯುತ್ತಿದ್ದ ಹತ್ತನೇ ತರಗತಿ ಅನುತ್ತೀರ್ಣವಾಗಿದ್ದ ಯಾಸಿನ್ ಬಂಧನಕ್ಕೊಳಗಾದಾಗ ಡಾ.ಶಾರುಖ್ ಹೆಸರಿನ ಯುನಾನಿ ವೈದ್ಯನಾಗಿದ್ದ!! ಬಾಂಬುಗಳ ಮೂಲಕ ಅಮಾಯಕರ ಪ್ರಾಣಹರಣ ಮಾಡುತ್ತಿದ್ದ ಯಾಸಿನ್ ಜೀವ ಉಳಿಸುವ ವೈದ್ಯನ ಸೋಗಿನಲ್ಲಿದ್ದಿದ್ದು ವ್ಯಂಗ್ಯವೇ ಸರಿ.

ಇಂಡಿಯನ್ ಮುಜಾಹಿದ್ದೀನ್ ಮೂಲಕ ನಡೆಸಿದ ದುಷ್ಕೃತ್ಯಗಳು ಅನೇಕಾನೇಕ. 2007ರ ನವೆಂಬರಿನಲ್ಲಿ ಉತ್ತರಪ್ರದೇಶದಲ್ಲಿ ಸತತ ಆರು ಬಾಂಬ್ ಸ್ಪೋಟದಿಂದ ಹದಿನೈದು ಜನರ ದುರ್ಮರಣ, ಮೇ 2008ರಲ್ಲಿ ಜೈಪುರದಲ್ಲಿ ಹದಿನೈದು ನಿಮಿಷದೊಳಗೆ ಸಿಡಿಸಿದ ಒಂಭತ್ತು ಬಾಂಬುಗಳಿಂದ ಅರವತ್ತಕ್ಕೂ ಹೆಚ್ಚು ಮಂದಿ ಸತ್ತು ಇನ್ನೂರಕ್ಕೂ ಅಧಿಕ ಮಂದಿ ಗಾಯಾಳುವಾದರು, ಅದೇ ವರುಷದಲ್ಲಿ ಬೆಂಗಳೂರು ಅಹಮದಾಬಾದ್, ದೆಹಲಿಯಲ್ಲಿ ಒಂದಾದ ನಂತರ ಒಂದು ಬಾಂಬ್ ಸ್ಪೋಟ ಮಾಡಿಸಿತ್ತು ಇಂಡಿಯನ್ ಮುಜಾಹಿದ್ದೀನ್.2010ರ ಫೆಬ್ರವರಿಯಲ್ಲಿ ಪುಣೆಯ ಜರ್ಮನಿ ಬೇಕರಿ ಬಾಂಬ್ ಬ್ಲಾಸ್ಟ್ ಪ್ರಕರಣ, ಸೆಪ್ಟಂಬರಿನಲ್ಲಿ ದೆಹಲಿಯ ಜಮಾ ಮಸೀದಿಯ ಬಳಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ್ದು, ಡಿಸೆಂಬರಿನಲ್ಲಿ ಉತ್ತರಪ್ರದೇಶದ ವಾರಣಾಸಿಯಲ್ಲಿ ಬಾಂಬ್ ಸ್ಪೋಟ. 2011ರಲ್ಲಿ ಮುಂಬೈನಲ್ಲಿ ನಡೆಸಿದ ಬಾಂಬ್ ದಾಳಿಯಲ್ಲಿ ಇಪ್ಪತ್ತಾರು ಮಂದಿಯ ದುರ್ಮರಣ. ಈ ವರುಷದ ಫೆಬ್ರವರಿಯಲ್ಲಿ ಹೈದರಾಬಾದಿನ ದಿಲ್ ಕುಷ್ ನಗರದಲ್ಲಿ ಮತ್ತು ತೀರ ಇತ್ತೀಚೆಗೆ ಬಿಹಾರದ ಭೋದಗಯಾದಲ್ಲಿ ನಡೆದ ಬಾಂಬ್ ಸ್ಪೋಟದಲ್ಲೂ ಕೂಡ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಪಾತ್ರವಿದೆ ಎಂದು ಶಂಕಿಸಲಾಗಿದೆ. ಹೀಗೆ ದೇಶದ ನಾನಾ ಭಾಗಗಳಲ್ಲಿ ನಡೆದ ಹತ್ತಾರು ವಿಧ್ವಂಸಕ ಕೃತ್ಯಗಳ ಮುಖಾಂತರ ನೂರಾರು ಜನರ ಸಾವಿಗೆ ಕಾರಣವಾದ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಮಿದುಳಿನಂತೆ ಕಾರ್ಯನಿರ್ವಹಿಸುತ್ತಿದ್ದ ಯಾಸಿನ್ ಭಟ್ಕಳನ ಬಂಧನ ಭಾರತೀಯ ಪಡೆಗಳಿಗೆ ಇತ್ತೀಚಿನ ದಿನಗಳಲ್ಲಿ ಸಿಕ್ಕ ಎರಡನೆ ದೊಡ್ಡ ಗೆಲುವು ಎಂದೇ ಬಣ್ಣಿಸಲಾಗುತ್ತಿದೆ. ಮೊದಲ ಗೆಲುವು ಲಷ್ಕರ್ ಇ ತೊಯಬಾದ ಅಬ್ದುಲ್ ಕರೀಮ್ ತುಂಡಾನ ಬಂಧನ.

ಭಾರತ, ನ್ಯೂಜಿಲ್ಯಾಂಡ್, ಅಮೆರಿಕಾ, ಬ್ರಿಟನ್ ಇನ್ನು ಅನೇಕ ದೇಶಗಳಿಂದ ನಿಷೇಧಕ್ಕೊಳಗಾಗಿರುವ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಯಾಸಿನ್ ಭಟ್ಕಳನ ಬಂಧನಕ್ಕೆ ದೇಶದ ವಿವಿಧ ಭಾಗದ ಪೋಲೀಸರು ಹತ್ತು ಹಲವು ಪ್ರಯತ್ನ ಮಾಡಿದ್ದರು.2009ರಲದಲಿ ಕೊಲ್ಕತ್ತಾದಲ್ಲೊಮ್ಮೆ ಖೋಟಾ ನೋಟಿನ ಹಗರಣವೊಂದರಲ್ಲಿ ಬಂಧಿತನಾಗಿದ್ದ ಯಾಸಿನ್ ದೆಹಲಿ ಪೋಲೀಸರು ಕೊಲ್ಕತ್ತಾಗೆ ಆಗಮಿಸುವುದರೊಳಗಾಗಿ ನಕಲಿ ಹೆಸರು ಹೇಳಿಕೊಂಡು ತಪ್ಪಿಸಿಕೊಂಡಿದ್ದ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ತರಬೇತಿ ಶಿಬಿರವೊಂದರಿಂದಲೂ ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡಿದ್ದ. ತನ್ನ ಪಾಪದ ಕೆಲಸದ ಅರಿವಿದ್ದ ಯಾಸಿನ್ ಇಂಟರ್ನೆಟ್, ಈ-ಮೇಲ್ ಬಳಸುವುದಿರಲಿ ಮೊಬೈಲ್ ಫೋನನ್ನೂ ಬಳಸುತ್ತಿರಲಿಲ್ಲ. ವಿಧ್ವಂಸಕ ಕೃತ್ಯ ನಡೆಸಿದ ಬಳಿಕ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಹೆಸರಿನಲ್ಲಿ ಪತ್ರಿಕಾ ಕಛೇರಿಗಳಿಗೆ ಈ-ಮೇಲ್ ಕಳುಹಿಸುವುದನ್ನೂ ವಿರೋಧಿಸುತ್ತಿದ್ದ ಯಾಸಿನ್. ಈ-ಮೇಲ್, ಇಂಟರ್ನೆಟ್ ಮೂಲಕ ಸಿಕ್ಕಿ ಬೀಳುವ ಸಾಧ್ಯತೆಗಳು ಅಧಿಕವೆಂಬುದು ಒಂದು ಕಾರಣವಾದರೆ, ದುಷ್ಕೃತ್ಯ ಮಾಡಿದ್ಯಾರೆಂದು ತಿಳಿಯದಿದ್ದರೆ ಪೋಲೀಸರು ಅಮಾಯಕ ಮುಸ್ಲಿಮರನ್ನು ಬಂಧಿಸುತ್ತಾರೆ ಅದರಿಂದ ನಮ್ಮ ಸಂಘಟನೆಗೆ ಮುಸ್ಲಿಮರ ಮಧ್ಯೆ ಹೆಚ್ಚೆಚ್ಚು ಬೆಂಬಲ ಸಿಗುತ್ತದೆ ಎಂಬ ಕುತಂತ್ರವೂ ಇತ್ತು. ಸಿಕ್ಕಿ ಬೀಳಬಾರದೆಂದು ಇಷ್ಟೆಲ್ಲಾ ಮುನ್ನೆಚ್ಚರಿಕೆ ವಹಿಸುತ್ತಿದ್ದ ಯಾಸಿನ್ ಭಟ್ಕಳನಿಗೆ ಪೋಲೀಸರು ತನ್ನನ್ನು ಹಿಡಿದೇ ತೀರುತ್ತಾರೆ ಎಂಬ ಅನುಮಾನ ಬಂದಿತ್ತೇನೋ, ಯುನಾನಿ ವೈದ್ಯನ ಹೆಸರಿನಲ್ಲಿ ನೇಪಾಳ ಮತ್ತು ಬಿಹಾರದ ಹಳ್ಳಿಗಳಲ್ಲಿ ತಿರುಗಾಡಿಕೊಂಡಿದ್ದ. ನಗರವಾಸಿಗಳನ್ನು ತನ್ನ ದುಷ್ಕೃತ್ಯಗಳತ್ತ ಸೆಳೆಯಲು ಮೊದಲಿನ ದಿನಗಳಲ್ಲಿ ಸಫಲನಾಗುತ್ತಿದ್ದ ಯಾಸಿನ್ ಭಟ್ಕಳನಿಗೆ ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ಮುಸ್ಲಿಮರನ್ನು ಮೊದಲಿನ ಸಂಖೈಯಲ್ಲಿ ಭಯೋತ್ಪಾದನೆಗೆ ಪ್ರೇರೇಪಿಸಲು ವಿಫಲನಾಗುತ್ತಿದ್ದ ಕಾರಣ ಹಳ್ಳಿಗರ ತಲೆಕೆಡಿಸುವ ಸಲುವಾಗಿ ಬಿಹಾರದ ಕಡೆಗೆ ನಡೆದ. ನೇಪಾಳ ಗಡಿ ತಪ್ಪಿಸಿಕೊಳ್ಳುವ ಪ್ರಸಂಗ ಬಂದರೆ ಸಹಕಾರಿಯೆಂಬ ಕಾರಣದಿಂದ ಗಡಿಯ ಹಳ್ಳಿಗಳಲ್ಲೇ ತಿರುಗಾಡುತ್ತಿದ್ದ.

ದೇಶದ ಅನೇಕ ರಾಜ್ಯದ ಪೋಲೀಸರು ಯಾಸಿನ್ ಭಟ್ಕಳನನ್ನು ವಿಚಾರಣೆಗೆ ಪಡೆಯಲು ಕಾಯುತ್ತಿದ್ದಾರೆ. ಯಾಸಿನ್ ಜೊತೆಯಲ್ಲಿ ಬಂಧನಕ್ಕೊಳಗಾಗಿರುವ ಅಸಾದುಲ್ಲ ಫಾರ್ಮಸಿ ಪದವೀಧರ. ಮೂಲತ ಲಕ್ನೋದ ಅಜಂಗಡದವನು. ಹಡ್ಡಿ ಎಂಬ ಅಡ್ಡ ಹೆಸರಿನ ಅಸಾದುಲ್ಲ ಭಾರತದ ಮೊತ್ತ ಮೊದಲ ಸೂಸೈಡ್ ಬಾಂಬರ್ ಆಗುತ್ತಿದ್ದನಂತೆ! ಯಾಸಿನ್ ಭಟ್ಕಳ್ ಪೋಲೀಸರಿಗೆ ತಿಳಿಸಿರುವ ಮಾಹಿತಿಯಂತೆ ಕೆಲವು ಮಹಿಳೆಯರನ್ನು ಕೂಡ ಸೂಸೈಡ್ ಬಾಂಬರ್ ಆಗಿ ತಯಾರು ಮಾಡಲಾಗಿದೆಯಂತೆ. ಈಗಾಗಲೇ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಮತ್ತೊಬ್ಬ ನಾಯಕನನ್ನು ನೇಮಿಸಲಾಗಿದೆ ಎಂಬ ವರದಿಯಿದೆ, ಯಾಸಿನ್ ಭಟ್ಕಳನ ಬಂಧನ ವಿರೋಧಿಸಿ ಮತ್ತಷ್ಟು ಬಾಂಬ್ ಸ್ಪೋಟ ನಡೆಸುವ ಸಾಧ್ಯತೆಗಳನ್ನು ಅಲ್ಲಗೆಳೆಯಲಾಗದು. ಗುಪ್ತಚರ ಇಲಾಖೆಯ ಸಮರ್ಪಕ ಕಾರ್ಯನಿರ್ವಹಣೆಯಿಂದಷ್ಟೇ ಇಂಥ ಸಂಘಟನೆಯ ಬೆನ್ನೆಲುಬು ಮುರಿಯಲು ಸಾಧ್ಯ. ಇದೇ ಸಮಯದಲ್ಲಿ ಬಾಂಬ್ ಸ್ಪೋಟವಾದ ತಕ್ಷಣ ಉದ್ರಿಕ್ತ ಜನರ, ವಿರೋಧ ಪಕ್ಷಗಳ, ಮಾಧ್ಯಮಗಳ ಕೋಪ ತಣಿಸಲು ಆ ಸ್ಪೋಟಕ್ಕೆ ಯಾವುದೇ ರೀತಿಯಲ್ಲೂ ಸಂಬಂಧವಿರದ ಜನರನ್ನು ಬಂಧಿಸುವ ಕೆಲಸವಾಗಬಾರದು. ಯಾಸಿನ್ ಅಂಥ ಮಾನವತೆಯ ವಿರೋಧಿಗಳು ಇಂಥಹ ಸಂದರ್ಭಕ್ಕೇ ಹೊಂಚು ಹಾಕುತ್ತ ಮತ್ತಷ್ಟು ಮಗದಷ್ಟು ಜನರನ್ನು ತಮ್ಮ ಕೆಟ್ಟ ಕೆಲಸಗಳಿಗೆ ಉಪಯೋಗಿಸಿಕೊಳ್ಳಲು ನಕಲಿ ಬಂಧನವನ್ನು ನೆಪವಾಗಿಸಿಕೊಳ್ಳುತ್ತಾರೆ. ಯಾಸಿನ್ ಭಟ್ಕಳ, ಅಬ್ದುಲ್ ಕರೀಮ್ ತುಂಡಾ, ಅಸಾದುಲ್ಲನಂಥವರಿಗೆ ಯಾವ ಧರ್ಮದಿಂದಲೂ ಏನೂ ಆಗಬೇಕಿಲ್ಲ, ಪಾಕಿಸ್ತಾನದ ಕೈಗೊಂಬೆಗಳಾಗಿ ಕಂಡಲ್ಲೆಲ್ಲ ಬಾಂಬು ಸ್ಪೋಟಿಸುವ ಇಂಥವರಿಂದ ಸಾಮಾನ್ಯ ಮುಸಲ್ಮಾನರೂ ಕೂಡ ಉಳಿದ ಧರ್ಮದ ಜನರ ಅನುಮಾನದ ದೃಷ್ಟಿಗೆ ಒಳಗಾಗುತ್ತಾರಷ್ಟೇ. ವಿಪರ್ಯಾಸವೆಂದರೆ ಉಳಿದ ಧರ್ಮದವರ ಅನುಮಾನದ ದೃಷ್ಟಿಯೇ ಈ ಧಾರ್ಮಿಕ ಮೂಲಭೂತವಾದಿಗಳಿಗೆ ಬಂಡವಾಳ. ಈ ಧಾರ್ಮಿಕ ಮೂಲಭೂತವಾದತನ ಅಳಿದು ಹೋಗುವುದು ಸಾಧ್ಯವೇ ಇಲ್ಲವೇ? ಇತಿಹಾಸದ ಕಾಲಗರ್ಭದಲ್ಲಿ ಧಾರ್ಮಿಕ ಮೂಲಭೂತವಾದಿತನ ಹೊಸತೇನಲ್ಲ. ಧರ್ಮ, ದೇಶ, ಜನಾಂಗದ ಹೆಸರಿನಲ್ಲಿ ನಡೆದ ನರಮೇಧಗಳು ಸಾವಿರಾರು. ಈಗಿನ ಧಾರ್ಮಿಕ ಮೂಲಭೂತವಾದತನದ ಉಗ್ರ ರೂಪ ಮುಸ್ಲಿಮರ ಮುಖಾಂತರ ಹೊರಬೀಳುತ್ತಿದೆ, ಮುಸ್ಲಿಂ ಉಗ್ರರಿಗೆ ಕಾರಣ ಕೇಳಿದರೆ ಅವರ ಬೆಟ್ಟು ಮತ್ತೊಂದು ಧರ್ಮದ ಕಡೆಗೆ, ಆ ಮತ್ತೊಂದು ಧರ್ಮದ ಮೂಲಭೂತವಾದಿಗಳಿಗೆ ಕಾರಣ ಕೇಳಿದರೆ ಅವರ ಬೆಟ್ಟು ಮತ್ತೊಂದು ಧರ್ಮದೆಡೆಗೆ, ಆ ಮತ್ತೊಂದು ಧರ್ಮದವರಿಗೆ ಕಾರಣ ಕೇಳಿದರೆ ಅವರ ಬೆಟ್ಟು……….. ಈ ವಿಷವರ್ತುಲಕ್ಕೆ ಅಂತ್ಯವಾಡಲು ಇಪ್ಪತ್ತೊಂದನೇ ಶತಮಾನದಲ್ಲಾದರೂ ಮಾನವೀಯತೆಯ ಧರ್ಮ ಜನ್ಮತಳೆಯಬೇಕೇನೋ…..

ಡಾ ಅಶೋಕ್ ಕೆ ಆರ್

No comments:

Post a Comment