Nov 5, 2012

ಆದರ್ಶವೇ ಬೆನ್ನು ಹತ್ತಿ....ಭಾಗ 11



ಡಾ ಅಶೋಕ್ ಕೆ ಆರ್

ಆದರ್ಶವೇ ಬೆನ್ನು ಹತ್ತಿ....ಭಾಗ 10


“ನೀವು ಕೊಟ್ಟಿದ್ದು ಸುಳ್ಳು ಕಂಪ್ಲೇಂಟಾ?! ಏನ್ರೀ ಫಾತಿಮಾ ನೀವು ಹೇಳ್ತಿರೋದು?!”
“ಹೌದು ಸರ್. ಪಾಪ ನಮ್ಮ ಕಾಂತರಾಜ್ ಸರ್ ಯಾವತ್ತೂ ನನ್ನ ಜೊತೆ ಕೆಟ್ಟದಾಗಿ ವರ್ತಿಸಿಲ್ಲ”
“ಮತ್ತೆ ಸುಳ್ಳು ಕಂಪ್ಲೇಂಟ್ ಕೊಟ್ಟಿದ್ಯಾಕೆ?”
“ಇದರಲ್ಲಿ ನನ್ನ ತಪ್ಪೇನೂ ಇಲ್ಲ ಸರ್. ರಾಜೇಶ್ ಸರ್ ಮತ್ತು ಅಲಿಯ ಒತ್ತಡದಿಂದ ಇಂಥ ಮಣ್ಣು ತಿನ್ನೋ ಕೆಲಸ ಮಾಡಿಬಿಟ್ಟೆ”

“ಒಂದ್ನಿಮಿಷ ಫಾತಿಮಾ. ಶಿವಕುಮಾರ್ ಒಂದು ಹಾಳೆ ತೆಗೆದುಕೊಂಡು ಬಂದು ಈಕೆ ಹೋಳೋದನ್ನೆಲ್ಲ ಬರೆದುಕೊಳ್ಳಿ” ಶಿವಕುಮಾರ್ ಬಂದು ಫಾತಿಮಾಳ ಪಕ್ಕದ ಕುರ್ಚಿಯಲ್ಲಿ ಕುಳಿತನು.

“ಈಗ ಹೇಳಿ ಫಾತಿಮಾ ಏನೇನು ನಡೆಯಿತು ಅಂತ. ಮತ್ತೆ ಸುಳ್ಳು ಹೇಳೋ ಪ್ರಯತ್ನ ಮಾಡಬೇಡಿ”

“ಇಲ್ಲ ಸರ್ ಇನ್ನು ಸುಳ್ಳು ಹೇಳಲ್ಲ” ಮೇಜಿನ ಮೇಲೆ ವಿರಮಿಸಿದ್ದ ಪಿಸ್ತೂಲನ್ನೇ ನೋಡಿಕೊಂಡು ಫಾತಿಮಾ ಮುಂದುವರೆಸಿದಳು “ನಮ್ಮ ಕಾಲೇಜಿನ ಹಿಸ್ಟರಿ ವಿಭಾಗದ ಮುಖ್ಯಸ್ಥರಾದ ರಾಮಚಂದ್ರ ಸರ್ ಅವರು ಇನ್ನು ನಾಲ್ಕು ತಿಂಗಳಿಗೆ ನಿವೃತ್ತರಾಗುತ್ತಾರೆ. ಸೀನಿಯಾರಿಟಿ ಪ್ರಕಾರ ಆ ಜಾಗಕ್ಕೆ ಕಾಂತರಾಜ್ ಸರ್ ಬರಬೇಕು. ಕಾಂತರಾಜ್ ರವರಿಗಿಂತ ಒಂದು ತಿಂಗಳು ಜೂನಿಯರ್ ಆಗಿರೋ ರಾಜೇಶ್ ಸರ್ ಗೆ ಕೂಡ ಮುಖ್ಯಸ್ಥರಾಗಬೇಕು ಅಂತ ಮನಸ್ಸಿಗೆ ಬಂದುಬಿಟ್ಟಿತ್ತು. ಅಲಿ ರಾಜೇಶ್ ಸರ್ ಗೆ ತುಂಬಾ ಹತ್ತಿರದವನಿದ್ದ. ನಾನು ಅಲಿ ಜೊತೆಗಿದ್ದಾಗ ರಾಜೇಶ್ ಸರ್ ಸಿಕ್ಕಿದರೆ ‘ಆ ಕಾಂತರಾಜನನ್ನು ಹೇಗಾದರೂ ಮಾಡಿ ನಮ್ಮ ಕಾಲೇಜಿಂದ ಹೊರಗೆ ಹಾಕಿಸಿದರೆ ನಾನೇ HOD ಆಗಬಹುದು’ ಅಂತೆಲ್ಲ ಹೇಳ್ತಿದ್ದರು. ನನ್ನ ಇರುವಿಕೆ ಲೆಕ್ಕಿಸದೆ ಕೆಟ್ಟ ಕೆಟ್ಟ ಪದಗಳಿಂದ ಅವರನ್ನು ನಿಂದಿಸುತ್ತಿದ್ದರು. ‘ಏನಾದರೂ ಒಂದು ಪ್ಲಾನ್ ಮಾಡು ಅಲಿ. ಅವನೊಬ್ಬ ನಮ್ಮ ದಾರಿಯಿಂದ ಹೊರಟುಹೋದರೆ ಇಡೀ ಹಿಸ್ಟರಿ ಡಿಪಾರ್ಟಮೆಂಟಿಗೆ ನಾವಿಬ್ಬರೇ ರಾಜರ ತರಹ ಇರಬಹುದು’ ಎನ್ನುತ್ತಿದ್ದರು. ಕೊನೆಗೆ ಅಲಿ ಪ್ಲಾನ್ ಮಾಡಿದನೋ ಅಥವಾ ರಾಜೇಶ್ ಸರ್ ಪ್ಲಾನ್ ಮಾಡಿದರೋ ನನಗೆ ತಿಳಿಯದು ಒಂದು ದಿನ ಅಲಿ ನನ್ನ ಬಳಿ ಬಂದು ‘ನೋಡು ರಾಜೇಶ್ ಸರ್ ನಾನು ಸೇರಿ ಒಂದು ತೀರ್ಮಾನ ತೆಗೆದುಕೊಂಡಿದ್ದೀವಿ. ನಿನ್ನ ಸಹಕಾರವಿಲ್ಲದೆ ಸಾಗೋ ಕೆಲಸವಲ್ಲ. ನಿನಗೆ ಹೇಗಿದ್ದರೂ ಕಾಂತರಾಜ್ ಸರ್ ತುಂಬಾನೇ ಪರಿಚಯ’ ಎಂದ್ಹೇಳಿ ಈ ರೀತಿ ಮಾಡಿಸಿದರು” ಮತ್ತೆ ಅಳಲು ಶುರುಮಾಡಿದಳು. ಈ ಅಳು, ಸುಳ್ಳು ಯಾವುದೂ ವಿಕ್ರಮನಿಗೆ ಹೊಸದಲ್ಲ. ಅಳು ನಿಲ್ಲುವವರೆಗೆ ಸುಮ್ಮನಿದ್ದ.

“ಅಲಿ ಒಂದು ಬಾರಿ ಹೇಳಿದ್ದಕ್ಕೇ ನೀನು ಒಪ್ಪಿಬಿಟ್ಟೆಯಾ?”

“ಹೇಗೆ ಒಪ್ಪಲಿಕ್ಕಾಗುತ್ತೆ ಸರ್. ನನ್ನ ಹೆಸರು ಕೆಡುವುದರ ಜೊತೆಗೆ ಪಾಪ ನಮ್ಮ ಕಾಂತರಾಜ್ ಸರ್ ಹೆಸರು ಕೂಡ ಹಾಳಾಗುತ್ತೆ ಅಂತ ಗೊತ್ತಿರಲಿಲ್ಲವಾ ನನಗೆ? ಹೇಗಿದ್ದರೂ ನಾನೇ ನಿನ್ನನ್ನು ಮದುವೆಯಾಗೋದು. ನಿನಗ್ಯಾಕೆ ಚಿಂತೆ. ನೀನು ಈ ಕೆಲಸ ಮಾಡದಿದ್ದರೆ ನಿನ್ನೊಡನೆ ಮದುವೆಯಾಗುವುದರ ಬಗ್ಗೆಯೇ ಯೋಚಿಸಬೇಕಾಗುತ್ತೆ. ಹಾಗೆ ಹೀಗೆ ಅಂತ ಹೇಳಿ ಕೊನೆಗೆ ಅತ್ತೂ ಕರೆದು ನನ್ನನ್ನು ಒಪ್ಪಿಸಿದರು”

“ಸರಿ ಸರಿ. ಎಲ್ಲ ಬರೆದಾಯ್ತ ಶಿವಕುಮಾರ್”

“ಆಯ್ತು ಸರ್. ನೀವೊಮ್ಮೆ ಓದಿ ನೋಡಿ” ವಿಕ್ರಮ್ ಶಿವಕುಮಾರನಿಂದ ಹಾಳೆ ತೆಗೆದುಕೊಂಡು ಓದಿ, ಫಾತಿಮಾಳ ಕೈಗೆ ಕೊಟ್ಟು “ಓದಿ ಸಹಿ ಹಾಕಿ” ಎಂದ.

“ಓದೋದೆಲ್ಲ ಏನೂ ಇಲ್ಲ ಸರ್. ನಿಮ್ಮ ಮೇಲೆ ನಂಬಿಕೆಯಿದೆ” ಎಂದ್ಹೇಳಿ ಸಹಿ ಮಾಡಿ ಹಾಳೆಯನ್ನು ಶಿವಕುಮಾರ್ ಗೆ ಹಿಂದಿರುಗಿಸಿದಳು. ವಿಕ್ರಮ್ ಕಡೆಗೆ ದೀನನೇತ್ರಳಾಗಿ ನೋಡುತ್ತ “ಸರ್ ನನಗೆ ಗೊತ್ತಿರೋ ಸಂಗತಿಗಳನ್ನೆಲ್ಲ ಹೇಳಿದ್ದೀನಿ. ಯಾವುದೇ ವಿಷಯ ಮುಚ್ಚಿಟ್ಟಿಲ್ಲ. ಸುಳ್ಳೂ ಹೇಳಿಲ್ಲ. ನನ್ನ ಮೇಲೆ ಈ ಪಿಸ್ತೂಲಿನಿಂದ ಗುಂಡು ಹಾರಿಸಲ್ಲ ಅಲ್ವ ಸರ್”

“ಛೇ ಛೇ. ಸತ್ಯ ಹೇಳೋರ ಮೇಲೆ ದೌರ್ಜನ್ಯ ಮಾಡೋದಿಕ್ಕಾಗುತ್ತಾ. ನೀವಿನ್ನು ಹೊರಡಿ” ಎಂದ್ಹೇಳಿದನು.

ಫಾತಿಮಾ ಹೊರ ಹೋದ ಮೇಲೆ ಶಿವಕುಮಾರ್ “ಸರ್. ನನಗೊಂದು ಅನುಮಾನ. ನನಗೆ ತಿಳಿದಿರೋ ಮಟ್ಟಿಗೆ ನೀವು ಮೊದಲು ಸಂಡೂರಿನಲ್ಲಿ ಕೆಲಸ ಮಾಡ್ತಿದ್ರಿ. ಅಲ್ಲಿಂದ ಜೇವರ್ಗಿಗೆ ವರ್ಗವಾಗಿತ್ತು. ಅದಾದ ಮೇಲೆ ಸೀದಾ ಮೈಸೂರಿಗೇ ಬಂದ್ರಿ. ನೀವು ಬೆಳಗಾವಿಗೆ ಹೋಗಿದ್ದಾದರೂ ಯಾವಾಗ ಸರ್?!”

“ಹ್ಹ ಹ್ಹ. ನಾನು ಬೆಳಗಾವಿ ಅನ್ನೋ ಊರನ್ನು ಮ್ಯಾಪಿನಲ್ಲಿ ಮಾತ್ರ ನೋಡಿರೋದು. ಇನ್ನು ಕೆಲಸ ಮಾಡೋದ್ಹೇಗೆ ಸಾಧ್ಯ?”

“ಮತ್ತೆ ಅವಳಿಗೆ ಬೆಳಗಾವಿಯಲ್ಲಿ ಒಬ್ಬನನ್ನು ಶೂಟ್ ಮಾಡಿ ಅಮಾನತ್ತುಗೊಂಡಿದ್ದಾಗಿ ಹೇಳಿದ್ರಿ”

“ನೋಡಿದ್ರಲ್ಲ ಅವಳನ್ನು. ಎಷ್ಟು ಮುದ್ದುಮುದ್ದಾಗಿದ್ದಾಳೆ. ಆಕೆಯ ಮೇಲೆ ಜೋರು ಮಾಡೋದಿಕ್ಕೆ ಮನಸ್ಸಾಗಲಿಲ್ಲ. ಸುಮ್ಮನೆ ಒಂದು ಸುಳ್ಳು ಹೇಳಿದೆ. ಹೆದರಿ ಬಾಯಿ ಬಿಡ್ತಾಳೆ ಅಂದುಕೊಂಡಿದ್ದೆ. ಅದೇ ರೀತಿ ಆಯಿತು!”

“ಫೋನಲ್ಲಿ ಮಾತನಾಡಿದ್ದು ಯಾರ ಜೊತೆ ಸರ್?”

“ಓ ಅದಾ! ನಮ್ಮ ಎಸ್ಪಿ ಸಾಹೇಬರು ಮಾಡಿದ್ದರು. ನಾಳೆ ಮಧ್ಯಾಹ್ನ ಬಂದು ನೋಡಿ ಅಂದರು.ಸರಿ ಸರ್ ಬರ್ತೀನಿ ಅಂತ ಹೇಳಿದ ತಕ್ಷಣ ಅವರು ಫೋನ್ ಕಟ್ ಮಾಡಿದರು. ಆಗ ಇದ್ದಕ್ಕಿದ್ದಂತೆ ಈ ಐಡಿಯಾ ಹೊಳೆಯಿತು. ಆ ಕಡೆಯಿಂದ ಯಾರೂ ಮಾತನಾಡದಿದ್ದರೂ ನಾನೊಬ್ಬನೇ ಮಾತಾಡಿ ಫೋನ್ ಇಟ್ಟೆ. ನಂತರ ಫಾತಿಮಾಗೆ ಏನೇನು ಹೇಳ್ದೆ ಅನ್ನೋದನ್ನು ನೀವೇ ನೋಡಿದಿರಲ್ಲ”

“ಸರಿಯೋಯ್ತು!! ಮತ್ತೆ ಆ ರಘು?”

“ಯಾವ ರಘೂನೂ ಇಲ್ಲ. ಒಂದಷ್ಟು ಆಕೆಗೆ ನಂಬಿಕೆ ಬರಲಿ ಅಂತ ಆ ರೀತಿ ನಾಟಕ ಮಾಡಿದೆ!”

“ಹ್ಹ ಹ್ಹ ಹ್ಹ”

“ಹೋಗಿ ಆ ಅಲಿಯನ್ನು ಕರೆದುಕೊಂಡು ಬನ್ನಿ”

ಶಿವಕುಮಾರ್ ಹೊರಗೆ ಹೋಗಿ ನೋಡಿದ. ಅಲಿ ಇರಲಿಲ್ಲ. ಆವರಣದಲ್ಲಿದ್ದ ಹೊಂಗೆ ಮರದ ಬುಡದ ಕೆಳಗೆ ಕುಳಿತು ಫಾತಿಮಾ ಅಳುತ್ತಿದ್ದಳು.
* * * * *

ರಾತ್ರಿ ಲೋಕಿ ಠಾಣೆಗೆ ಫೋನ್ ಮಾಡಿದ್ದ. ವಿಕ್ರಮ್ ಇನ್ನು ಅಲ್ಲೇ ಇದ್ದರು. ಎಲ್ಲಾ ಘಟನೆಗಳು ಪೂರ್ಣಿಮಾಳ ಊಹೆಯಂತೆಯೇ ನಡೆದಿತ್ತು. ‘ಸದ್ಯ ಕಾಂತರಾಜ್ ಸರ್ ತಪ್ಪು ಮಾಡಿಲ್ಲವಲ್ಲ’ ಎಂದು ಸಮಾಧಾನವಾಯಿತು. ‘ಪೂರ್ಣಿಮಾಳ ನಂಬರ್ ತೆಗೆದುಕೊಂಡಿದ್ದರೆ ಅವಳಿಗೂ ಈ ವಿಷಯ ತಿಳಿಸಬಹುದಿತ್ತಲ್ವ’ ಯೋಚನೆಯೊಂದಿಗೆ ನಗು ಬಂತು ‘ನಂಬರ್ ಬೇಕಾಗಿದ್ದು ಈ ವಿಷಯ ತಿಳಿಸುವುದಕ್ಕಾ ಅಥವಾ ಅವಳೊಂದಿಗೆ ಹರಟುವುದಕ್ಕಾ?’ ‘ಪೂರ್ಣಿಮಾ. . .ಅಲ್ಲಲ್ಲ ಅವಳಿಗೆ ಅಭ್ಯಂತರವಿರದಿದ್ದರೆ ಇನ್ನು ಅವಳನ್ನು ಪೂರ್ಣಿ ಎಂದೇ ಕರೆಯಬೇಕು. ಎಷ್ಟು ಚೆಂದ ಮಾತನಾಡುತ್ತಾಳಲ್ಲ. ಛೇ! ಇಷ್ಟು ತಿಂಗಳು ಅವಳೊಡನೆ ಮಾತನಾಡದೆ ವ್ಯರ್ಥ ಮಾಡಿಬಿಟ್ಟೆ. ಇಂಥದೊಂದು ಸಂದರ್ಭದಲ್ಲಿ ಪರಿಚಯವಾಗಿದ್ದು ಒಂದು ರೀತಿ ಒಳ್ಳೆಯದೇ ಆಯಿತು. ಅವಳು ಹೇಳಿದ ಒಂದು ಮಾತು ಇನ್ನೂ ಕಿವಿಯಲ್ಲಿ ಗಿಂಯ್ ಗುಡುತ್ತಿದೆ. ಏನಂದ್ಲು ಅವಳು ‘ನಿನ್ನ ಜೊತೆ ಮಾತನಾಡೋದಿಕ್ಕೆ ನನಗೂ ತುಂಬಾ ಖುಷಿ ಆಗುತ್ತೆ’! ಯಾಕೆ ಹಾಗೆ ಹೇಳಿದಳು. ನನ್ನನೇನಾದ್ರೂ ಇಷ್ಟ ಅಡುತ್ತಿದ್ದಾಳಾ?! ಥೂ ಥೂ! ಈ ಹಾಳು ಮನಸ್ಸಿಗೆ ಬುದ್ಧಿಯೇ ಇಲ್ಲ! ಏನೋ ಒಂದು ದಿನ ಅದೂ ಅವಶ್ಯಕತೆ ಇದ್ದ ಕಾರಣಕ್ಕೆ ಮಾತನಾಡಿಸಿದಳು. ಅದಕ್ಕೆ ನಾನಾ ಬಣ್ಣ ಕೊಟ್ಟು ಏನೇನೋ ಯೋಚನೆ. ನಾಳೆ ಅಂತೂ ಕಾಂತರಾಜ್ ಸರ್ ಬಗ್ಗೆ ಒಂದಷ್ಟು ಮಾತನಾಡಬಹುದು. ನಂತರ? ಮಾತನಾಡೋದಿಕ್ಕೆ ವಿಷಯವೇ ಇಲ್ಲ! ಅವಳು ಮಾತನಾಡಿಸದಿದ್ದರೆ ನಾನೇ ಸ್ವತಃ ಏನೋ ಒಂದು ವಿಷಯ ಶುರು ಮಾಡಿಕೊಂಡು ಹರಟಿದರಾಯಿತು. ಆದರೆ? ಕ್ಲಾಸಿನಲ್ಲಿ ಬೆಳೆದಿರುವ ನನ್ನ ಇಮೇಜು?! ಹಾಳಾಗಿ ಹೋಗ್ಲಿ. ಪೂರ್ಣಿಗಿಂತ ದೊಡ್ಡದೇನಲ್ಲ ನನ್ನ ಇಮೇಜು. ಅರೆ ಅವಳ ಬಗ್ಗೆ ಇಷ್ಟೊಂದು ಯಾಕೆ ಯೋಚಿಸುತ್ತಿದ್ದೀನಿ? ಪ್ರೀತಿ ಪ್ರೇಮ ಏನಾದರೂ. .? ಹೇ ಹೇ ಇರಲಾರದು. ಬಹಳ ಸಮಯದ ನಂತರ ಒಂದು ಹುಡುಗಿಯೊಟ್ಟಿಗೆ ಇಷ್ಟು ಮಾತನಾಡಿಬಿಟ್ಟೆನಲ್ಲ ಅದಕ್ಕೆ ‘ಹುಚ್ಚು ಕುದುರೆ’ ಲಂಗುಲಗಾಮಿಲ್ಲದೆ ಓಡುತ್ತಿದೆ’

“ಲೋಕೇಶಣ್ಣಾ ಊಟಕ್ಕೆ ಬಾರೋ. ಅಪ್ಪಾನೂ ಬಂದ್ರು” ಸ್ನೇಹ ಕೂಗಿದಾಗಲೇ ಲೋಕಿ ತನ್ನ ಕಲ್ಪನಾಲೋಕದಿಂದ ಹೊರಬಂದದ್ದು. ‘ಛೇ! ಮೊನ್ನೆ ಅಪ್ಪನಿಗೆ ಎಷ್ಟು ಬೇಜಾರು ಮಾಡಿಬಿಟ್ಟೆನಲ್ಲ. ಮೊದಲು ಅವರ ಬಳಿ ಕ್ಷಮೆ ಕೇಳ್ಬೀಕು’ ಎಂದು ನಿರ್ಧರಿಸಿ ಅಡಿಗೆ ಮನೆಗೆ ಬಂದ. ಎಲ್ಲರೂ ಆಗಲೇ ಊಟಕ್ಕೆ ಕುಳಿತಿದ್ದರು. ಲೋಕಿ ಒಂದು ತಟ್ಟೆ ತೆಗೆದುಕೊಂಡು ಅನ್ನ ಸಾರು ಬಡಿಸಿಕೊಂಡು ಅವರೊಡನೆ ಕುಳಿತ. ಅಪ್ಪ ಮೌನವಾಗಿ ಊಟಮಾಡುತ್ತಿದ್ದರು. ನಾಲ್ಕು ತುತ್ತು ತಿಂದ ಮೇಲೆ ಲೋಕಿ ತಂದೆಯೆಡೆಗೆ ನೋಡಿ “ಅಣ್ಣಾ ಇನ್ನು ಬೇಸರವಾ?”

“ಬೇಸರ? ಯಾಕೆ?”

“ನಾನು ಸಿಗರೇಟು ಸೇದ್ತಾ ಇರೋ ವಿಷಯದಿಂದ ನಿಮಗೆಷ್ಟು ಬೇಸರವಾಗಿದೆ ಅಂತ ನನಗೆ ಗೊತ್ತು. ಸಿಗರೇಟು ಬಿಡೋದಿಕ್ಕೆ ಖಂಡಿತ ಪ್ರಯತ್ನ ಮಾಡ್ತೀನಿ”

“ನೋಡು ಲೋಕಿ. ಆರೋಗ್ಯ ನಿಂದು, ಸಿಗರೇಟು ತೆಗೆದುಕೊಳ್ತಿರೋ ದುಡ್ಡೂ ಬಹುಶಃ ನಿಂದೇ. ಆರೋಗ್ಯ ದುಡ್ಡು ಎಲ್ಲ ಹಾಳು ಮಾಡ್ಕೋತೀನಿ ಅಂತ ನೀನೆ ನಿರ್ಧರಿಸುವಾಗ ನಾನೇನು ಹೇಳಲಿ. ಸಿಗರೇಟಿನ ದುಷ್ಪರಿಣಾಮಗಳು ಅಂತ ನಿನಗೆ ಲೆಕ್ಚರ್ ಕೊಡೋ ಅವಶ್ಯಕತೆ ಅಂತೂ ಖಂಡಿತ ಇಲ್ಲ. ನಿನಗೆ ಬಿಡೋ ಮನಸ್ಸಿದ್ದರೆ ಬಿಡು. ಈ ವಿಷಯವಾಗಿ ಮತ್ತೆ ಮತ್ತೆ ಮಾತನಾಡೋದಿಕ್ಕೆ ನನಗೆ ಇಷ್ಟವಿಲ್ಲ” “ಅಂದ ಹಾಗೆ ಕೇಳೋದೆ ಮರೆತೆ. ನಿಮ್ಮ ಕಾಂತರಾಜ್ ಸರ್ ಕಥೆ ಏನಾಯ್ತು?”

ಲೋಕಿ ನಿನ್ನೆಯಿಂದ ಕಾಲೇಜಿನಲ್ಲಿ ನಡೆದ ಘಟನೆಗಳನ್ನೆಲ್ಲ ಅರುಹಿದ. ಇವತ್ತಿನ ಸಂಗತಿಗಳನ್ನು ಅದರಲ್ಲೂ ಪೂರ್ಣಿಯ ಬಗ್ಗೆ ಮಾತನಾಡುವಾಗ ಅವನಿಗರಿವಿಲ್ಲದೆಯೇ ಧ್ವನಿಗೆ ಹೊಸ ಚೈತನ್ಯ ಬರುತ್ತಿತ್ತು. ಕಣ್ಣಲ್ಲಿ ಹೊಳಪು. ಮೊದಮೊದಲು ಯಾರೂ ಗಮನಿಸಲಿಲ್ಲ. ಈತನಲ್ಲಾಗುತ್ತಿದ್ದ ಬದಲಾವಣೆಯನ್ನು ಗುರುತಿಸಿದ್ದು ಸ್ನೇಹ. ಲೋಕಿಯ ಕಡೆ ನೋಡಿ ಮುಗುಳ್ನಕ್ಕಳು, ತುಂಟತನವಿತ್ತು. ಲೋಕಿ ಎಲ್ಲ ಹೇಳಿ ಮುಗಿಸುವಷ್ಟರಲ್ಲಿ ವಿಜಿ ಮತ್ತು ಅಣ್ಣನ ಊಟ ಮುಗಿದಿತ್ತು. ಪ್ರತಿಕ್ರಯಿಸದೆ ಹೊರ ಹೋದರು. ‘ಇದೇನು? ಎಲ್ಲ ಕೇಳಿಬಿಟ್ಟು ಸುಮ್ಮನೆ ಹೊರಟೇ ಹೋದರಲ್ಲ? ಸಿಗರೇಟಿನ ವಿಷಯ ಬಿಟ್ಟು ಬೇರೆ ಮಾತನಾಡುವುದಕ್ಕೋಸ್ಕರ ಸುಮ್ಮನೆ ಈ ವಿಷಯ ಎತ್ತಿರಬೇಕು’ ಎಂದುಕೊಂಡ.

“ಪೂರ್ಣಿಮಾ ಚೆನ್ನಾಗಿದ್ದಾಳೇನೋ?” ತಂದೆ ತಮ್ಮ ಇಬ್ಬರೂ ಹೋದ ನಂತರ ಲೋಕಿಗೆ ಮೊಸರು ಬಡಿಸುತ್ತಾ ಕೇಳಿದಳು ಸ್ನೇಹ. ಪೂರ್ಣಿಯ ಬಗ್ಗೆಯೇ ಯೋಚಿಸುತ್ತಿದ್ದವನು “ನನ್ನ ಕಣ್ಣಿಗಂತೂ ಸಖತ್ತಾಗಿ ಕಾಣಿಸಿದ್ಲಪ್ಪ” ‘ಅರೆ ಇದೇನ್ ಹೇಳ್ಬಿಟ್ಟೆ’ ಎಂದೆನಿಸಿ “ಪರ್ವಾಗಿಲ್ಲ. ಸುಮಾರಾಗಿರಬೇಕು. ಸರಿಯಾಗಿ ಗಮನಿಸಲಿಲ್ಲ” ಎಂದು ತಲೆ ತಗ್ಗಿಸಿ ಅನ್ನ ಕಲೆಸಿದ.

“ಹಾ ಹಾ! ಏನು ಲವ್ವಾ?”

“ಏ ಹೋಗೇ. ಮಾತನಾಡಿದ್ದೇ ಇವತ್ತು. ನಾಳೆ ಮಾತಡ್ತೀನಾ? ಗೊತ್ತಿಲ್ಲ. ಲವ್ ಅಂತೆ!”

“ಅವಳ ವಿಷಯ ಹೇಳ್ತಾ ಇದ್ದಾಗ ನಿನ್ನಲ್ಲಿ ಎಷ್ಟು ಬದಲಾವಣೆ ಆಗುತ್ತಿತ್ತು ಗೊತ್ತ! ನನಗೇನೋ ನಮ್ಮಣ್ಣ ಪ್ರೀತೀಲಿ ಬಿದ್ದ ಅನ್ಸುತ್ತಪ್ಪ”

“ನನಗೇ ಅನ್ನಿಸಿಲ್ಲ. ನಿನಗೆ ಅನ್ನಿಸಿಬಿಡ್ತಾ? ಮೊದಲ ನೋಟಕ್ಕೆ ಮೊದಲ ದಿನ ಮಾತನಾಡಿದ್ದಕ್ಕೆಲ್ಲ ಪ್ರೀತಿ ಹುಟ್ಟುತ್ತೆ ಅನ್ನೋದ್ರಲ್ಲಿ ನನಗಂತೂ ನಂಬಿಕೆ ಇಲ್ಲ. ಇಷ್ಟವಾದಳು, ಅದರಲ್ಲಿ ಅನುಮಾನ ಇಲ್ಲ. ಎಷ್ಟು ದಿನದವರೆಗೆ ಇಷ್ಟ ಪಡ್ತೀನಿ ಅನ್ನೋದು ಮುಖ್ಯ”

“ಅಯ್ಯಪ್ಪ. ನಾನೇನೋ ಕೇಳಿದ್ರೆ ಲೆಕ್ಚರ್ ಕೊಡ್ತೀಯಲ್ಲ! ಊಟ ಮಾಡು ಮೊದಲು” ಎಂದರೆಕ್ಷಣ ಕಳೆದು “ಆದರೂ ಲೋಕಿಯಣ್ಣ ಲವ್ ಅಂತ ಏನಾದ್ರೂ ಆದ್ರೆ ಮೊದಲು ನನಗೆ ಪರಿಚಯ ಮಾಡಿಸಬೇಕು”

“ಹ್ಹ ಹ್ಹ. ಆಯ್ತು ಕಣವ್ವಾ. ಮೊದಲು ನಿನಗೆ ಪರಿಚಯ ಮಾಡಿಸ್ತೀನಿ. ಅದಕ್ಕೂ ಮೊದಲು ನಾನು ಸರಿಯಾಗಿ ಪರಿಚಯ ಮಾಡಿಕೊಳ್ಳೋದಿಕ್ಕೆ ಆಗುತ್ತ ನೋಡ್ತೀನಿ!” ಇಬ್ಬರ ಊಟವೂ ಮುಗಿದಿತ್ತು. ಸ್ನೇಹ ಓದಿಕೊಳ್ಳಲು ಹೋದಳು. ಬೆಳಿಗ್ಯೆಯಿಂದ ತಿರುಗಾಡಿದ ಪರಿಣಾಮ ಲೋಕಿಗೆ ವಿಪರೀತ ಆಯಾಸ. ದೇಹ ಮನಸ್ಸು ಎರಡಕ್ಕೂ. ಹಾಸಿಗೆಯ ಮೇಲೆ ಅಡ್ಡಾದ. ಕ್ಷಣಮಾತ್ರದಲ್ಲಿ ನಿದ್ರೆ ಆವರಿಸಿತು.
* * *
“ಏನೇ ಪೂರ್ಣಿ! ಒಂದು ದಿನ ಒಂದೇ ಒಂದು ದಿನ ಮಾತನಾಡಿದ್ದಕ್ಕೆ ಲೋಕೇಶನನ್ನು ಇಷ್ಟೊಂದು ಹೊಗಳುತ್ತಿದ್ದೀಯ! ಏನ್ ಮೇಡಮ್ ಸಮಾಚಾರ?!” ಅವತ್ತು ನಡೆದಿದ್ದನೆಲ್ಲ ಪೂರ್ಣಿಮಾ ಹೇಳುವಾಗ ಲೋಕಿಯ ವಿಷಯ ಬಂದಾಗ ಆಕೆ ತೋರುತ್ತಿದ್ದ ಉತ್ಸಾಹವನ್ನು ಗಮನಿಸಿ ಸಿಂಚನಾ ಕೇಳಿದಳು. ಸಿಂಚನಾ ಪೂರ್ಣಿಮಾಳ ಸಹಪಾಠಿ. ಪೂರ್ಣಿಯ ಮನೆಯ ಪಕ್ಕದಲ್ಲೇ ಇತ್ತು ಅವಳ ಮನೆ. ಹೈಸ್ಕೂಲಿನಿಂದಲೂ ಇಬ್ಬರದೂ ಒಂದೇ ತರಗತಿ. ಪೂರ್ಣಿಮಾಳ ತಂದೆ ಪತ್ರಿಕೆಯೊಂದರಲ್ಲಿ ಉಪಸಂಪಾದಕರಾಗಿ ಕೆಲಸ ಮಾಡುತ್ತಿದ್ದರು. ಅವರಿಂದ ಪ್ರೇರಿತರಾಗಿ ಪೂರ್ಣಿಮಾ ಕೂಡ ಪತ್ರಿಕೋದ್ಯಮಕ್ಕೆ ಬರುವ ಆಸೆಯಿಂದ ಬಿ ಎ ಪತ್ರಿಕೋದ್ಯಮ ತೆಗೆದುಕೊಂಡಿದ್ದಳು. ಸಿಂಚನಾಳಿಗೆ ಓದುವುದಕ್ಕೆ ಅಷ್ಟೇನೂ ಆಸಕ್ತಿಯಿರಲಿಲ್ಲ. ಯಾವುದೋ ಒಂದು ಡಿಗ್ರಿ ಮಾಡಿದರಾಯಿತು ಎಂದುಕೊಂಡಿದ್ದವಳು ಪೂರ್ಣಿ ಜೊತೆಗೆ ಇರುತ್ತಾಳಲ್ಲ ಅನ್ನೋ ಕಾರಣಕ್ಕೆ ಪತ್ರಿಕೋದ್ಯಮ ಆಯ್ದುಕೊಂಡಿದ್ದಳು. ಇಬ್ಬರೂ ಒಂದೇ ಕ್ಲಾಸಿನಲ್ಲಿದ್ದರೂ ತರಗತಿಯಲ್ಲಿ ನಡೆಯುವ ಬಹುತೇಕ ವಿಷಯಗಳು ಇಬ್ಬರಿಗೂ ತಿಳಿದಿದ್ದರೂ ಸಹ ದಿನ ರಾತ್ರಿ ಊಟವಾದ ನಂತರ ಮಹಡಿಯ ಮೇಲೆ ಬಂದು ಅರ್ಧ ಮುಕ್ಕಾಲು ಘಂಟೆ ಹರಟಿದ ನಂತರವೇ ಮಲಗಲು ತೆರಳುತ್ತಿದ್ದರು. ‘ಬೆಳಗಿನಿಂದ ಸಂಜೆಯವರೆಗೆ ಜೊತೆಯಲ್ಲೇ ಇರುತ್ತೀರ. ಆದ್ರೂ ಪ್ರತಿ ರಾತ್ರಿ ಮಾತನಾಡಲು ಏನಿರುತ್ತೆ?’ ಎಂದು ಇಬ್ಬರ ಮನೆಯಲ್ಲೂ ಗೊಣಗುತ್ತಿದ್ದರು. ಅದು ನೆಪ ಮಾತ್ರಕ್ಕೆ. ಇಬ್ಬರೊಲ್ಲಬ್ಬರು ಊಟವನ್ನು ನಿಧಾನಕ್ಕೆ ಮಾಡುತ್ತಿದ್ದರೆ ಅಥವಾ ಮರೆವಿನಿಂದ ಟಿವಿ ನೋಡುತ್ತ ಕುಳಿತುಬಿಟ್ಟರೆ ‘ಅವಳು ಕಾಯ್ತಾ ಇರ್ತಾಳೆ. ಬೇಗ ಹೋಗು’ ಎಂದು ಮನೆಯವರೇ ಹೊರಡಿಸುತ್ತಿದ್ದರು.

ಅಂದು ರಾತ್ರಿ ಕೂಡ ಊಟವಾದ ನಂತರ ಮಹಡಿಯ ಮೇಲೆ ಸೇರಿದ್ದರು. ಅಂದು ಕ್ಲಾಸಿಗೆ ಹೋಗದ ಕಾರಣ ಪೂರ್ಣಿ ಮೊದಲು ಕ್ಲಾಸಿನ ವಿಷಯ ಕೇಳಿ ನಂತರ ತಾನು ಹೋದ ಕಾರಣವನ್ನು ಸವಿಸ್ತಾರವಾಗಿ ವಿವರಿಸಿದಳು. ಪೂರ್ಣಿಯ ಮನಸ್ಸಿನ ಸ್ಥಿತಿಯನ್ನು ಗಮನಿಸಿದವಳು ‘ಏನ್ ಮೇಡಮ್ ಸಮಾಚಾರ?’ ಎಂದು ಗೇಲಿ ಮಾಡಿದಳು. ‘ಏನ್ ಸಮಾಚಾರ?’ ಪೂರ್ಣಿ ಯೋಚನೆಗೆ ಬಿದ್ದಳು. ‘ಮಾತನಾಡಿದ್ದೇ ಇವತ್ತು. ಏನು ಸಮಾಚಾರ ಇರಲಿಕ್ಕೆ ಸಾಧ್ಯ? ಕೊನೆಯಲ್ಲಿ ನನಗೂ ನಿನ್ನ ಜೊತೆ ಮಾತನಾಡಲು ಖುಷಿಯಾಗುತ್ತೆ ಎಂದು ಯಾಕೆ ಹೇಳಿದೆ. ಅವನ ಮೇಲೇನಾದರೂ ನನಗೆ ಮನಸ್ಸು....ಇರಲಾರದು. ಒಂದೇ ದಿನಕ್ಕೆ? ಸಾಧ್ಯವೇ ಇಲ್ಲ. ನನ್ನ ಮಾತು ಕೇಳಿ ಲೋಕಿ ಏನಾದರೂ ಬೇರೆ ಅರ್ಥ ಕಲ್ಪಿಸಿಕೊಂಡು ನಾಳೆಯಿಂದ ನನ್ನೊಡನೆ ಮಾತನಾಡದಿದ್ದರೆ? ಅದರಲ್ಲೇನು ವಿಶೇಷ? ಇಷ್ಟು ದಿನವೂ ಮಾತನಾಡಿಲ್ಲ ಇನ್ನು ಮೇಲೂ ಮಾತನಾಡಲ್ಲ ಅಷ್ಟೇ. ಅಷ್ಟೇನಾ?! ಅವನ ಜೊತೆ ಮಾತನಾಡಬೇಕು, ಹೆಚ್ಚೆಚ್ಚು ಸಮಯ ಕಳೆಯಬೇಕು ಎಂದು ನನಗೆ ಅನ್ನಿಸುತ್ತಿರುವುದು ಸುಳ್ಳಾ? ಲೋಕಿಗೆ ಆಸಕ್ತಿ ಇದೆಯಾ? ಇಷ್ಟವಾಗಿದ್ದೀನಾ? ಇಲ್ಲದಿದ್ದರೆ ಕ್ಯಾಂಟೀನಿನಲ್ಲಿ ನನ್ನನ್ಯಾಕೆ ಹಾಗೆ ತುಂಬು ಆಸೆಯಿಂದ ನೋಡಬೇಕಿತ್ತು. ನಾನೊಂದು ಪೆದ್ದು. ಎದೆಯ ಮೇಲಿನ ವೇಲನ್ನು ಸರಿಪಡಿಸಿಕೊಂಡು, ಬ್ರಾ ಪಟ್ಟಿ ಮುಟ್ಟಿ ನೋಡಿಕೊಂಡು...ಅವನ ಕಣ್ಣೋಟ ಮಾತ್ರ ನನ್ನ ಮುಖದ ಮೇಲೇ ಇತ್ತು’ ತನ್ನ ವರ್ತನೆಗೆ ಮುಗುಳ್ನಗುತ್ತಿದವಳಿಗೆ ಎಚ್ಚರವಾಗಿದ್ದು ಸಿಂಚನಾ ಜೋರಾಗಿ ಬೆನ್ನಿನ ಮೇಲೊಮ್ಮೆ ಗುದ್ದಿದಾಗ.

“ಏನೇ ಚೀತಾ? ಆಗಲೇ ಡುಯೆಟ್ಟಾ?!”

“ಛೀ ಹೋಗೇ. ಡುಯೆಟ್ಟೂ ಅಲ್ಲ ಏನೂ ಇಲ್ಲ. ಸುಮ್ಮನೆ ಏನೇನೋ ಹೇಳಿ ನನ್ನ ತಲೆ ಕೆಡಿಸಬೇಡ”

“ಹೋ ಹೋ ಅಲ್ಲಿಗೆ ತಲೆಕೆಡಿಸಿಕೊಳ್ಳೋದಿಕ್ಕೇ ಏನೋ ಇದೆ ಅಂತ ಆಯ್ತು” ಜೋರಾಗೊಮ್ಮೆ ನಕ್ಕು “ಲೋಕೇಶ್ ಅಷ್ಟೊಂದು ಮಾತಾಡ್ತಾನೆ ಅಂದ್ರೆ ನನಗೆ ನಂಬೋದಿಕ್ಕೇ ಆಗ್ತಿಲ್ಲ. ಕ್ಲಾಸಲ್ಲಿ ಅವನು ಯಾವ ಹುಡುಗಿಯೊಟ್ಟಿಗೂ ಮಾತನಾಡಿದ್ದು ನಾನಂತೂ ನೋಡಿಲ್ಲ. ನಿನ್ನ ಜೊತೆ ಇಷ್ಟೊಂದು ಹರಟಿದ್ದಾನೆ ಅಂದ್ರೆ.....”

“ನನಗೂ ಅದೇ ಆಶ್ಚರ್ಯ! ಎಷ್ಟು ಚೆನ್ನಾಗಿ ಮಾತಾಡ್ತಾನೆ ಗೊತ್ತಾ?! ಜೊತೆಗೆ ನಮ್ಮ ಮಾತನ್ನೂ ಶೃದ್ಧೆಯಿಂದ ಕೇಳ್ತಾನೆ. ಅದಿಕ್ಕೆ ಏನೋ ಇನ್ನೂ ಹೆಚ್ಚೆಚ್ಚು ಮಾತನಾಡಬೇಕಿತ್ತು ಅನ್ನಿಸುತ್ತಿದೆ”

“ಓಹೋ ಹಂಗೆ!” ಎಂದು ಪೂರ್ಣಿಯ ಮುಖವನ್ನೇ ಎರಡು ಕ್ಷಣ ನೋಡಿ ಅವಳ ಹತ್ತಿರ ಬಂದು “ಏಯ್ ಚೀತಾ, ಒಂದ್ನಿಮಿಷ ಹಾಗೇ ನಿಂತುಕೋ” ಮುಖವನ್ನು ಪೂರ್ಣಿಯ ಮುಖದ ಬಳಿ ತಂದು ಆಕೆಯ ಕಣ್ಣುಗಳನ್ನೇ ದಿಟ್ಟಿಸುತ್ತ “ಇದೇನೇ ಚೀತಾ? ಕಣ್ಣಲ್ಲಿ ಏನೋ ಇದೆ”

“ಏನಿದೆಯೇ? ಕಸಾ ಏನಾದರೂ ಬಿದ್ದಿದೆಯಾ?” ಎಂದ್ಹೇಳಿ ಪೂರ್ಣಿಮಾ ಕಣ್ಣುಗಳನ್ನುಜ್ಜಿಕೊಳ್ಳಲು ಕೈಯನ್ನು ಮೇಲೆ ತಂದಳು. ಅವಳ ಕೈಯನ್ನು ಬಿಗಿಯಾಗಿ ಹಿಡಿದ ಸಿಂಚನಾ “ಕಸ ಅಲ್ಲ ಕಣೇ. ನಿನ್ನ ಕಣ್ಣ ತುಂಬಾ ಆ ಲೋಕೇಶನೇ ಕಾಣ್ತಾ ಇದ್ದಾನೆ” ಅವನಲ್ಲೇ ಕುಳಿತಿದ್ದಾನೇನೋ ಎಂಬಂತೆ ಹೇಳಿದಳು.

“ಕತ್ತೆ ತಂದು” ಸಿಂಚನಾಳ ತಲೆಗೆ ಮೆಲ್ಲಗೆ ಹೊಡೆದು “ನನ್ನನ್ನೇ ಆಡಿಕೊಳ್ಳೋ ಮಟ್ಟಕ್ಕೆ ಬಂದುಬಿಟ್ಯಲ್ಲ. ಇರಲಿ ಇರಲಿ. ನನಗೂ ಒಂದು ಕಾಲ ಬರುತ್ತೆ” ಹುಸಿಕೋಪ ತೋರುತ್ತಾ “ಬರ್ತೀನಿ” ಎಂದ್ಹೇಳಿ ‘ಅವಳು ರೇಗಿಸಿದ್ದಕ್ಕೆ ನನಗೆ ಕೋಪ ಬಂತಾ? ಇಲ್ಲ. ಖುಷಿಯೇ ಆಗ್ತಿದೆ. ಯಾಕೆ?’ ಮನೆಗೆ ಹೊರಟಳು. 

ಮುಂದುವರೆಯುವುದು....
photosource - ashok kr

No comments:

Post a Comment