Nov 2, 2012

ಭಾಷೆ, ಸಂಸ್ಕೃತಿ ಮತ್ತು ಸಮಾಜ: ಒಂದು ಸಮಾಜಶಾಸ್ತ್ರೀಯ ಪ್ರತಿಫಲನ

kannada
ಜಯಪಾಲ್ ಹಿರಿಯಾಲು 
ಕನ್ನಡ ರಾಜ್ಯೋತ್ಸವ. ಭಾರತದಲ್ಲಿ ಭಾಷೆಯ ಮೇಲೆ ಭೌಗೋಳಿಕ ಪ್ರದೇಶಗಳನ್ನು ರಚಿಸಿದ ದಿನ. ಭಾಷೆ ಮನುಷ್ಯನ ಸಾಂಘಿಕ ಜೀವನದಲ್ಲಿ ಹೊಂದಿರುವ ಪ್ರಾಮುಖ್ಯತೆಯನ್ನು ಅರಿಯಲು ಒಂದು ಪುಟ್ಟ ಪ್ರಯತ್ನ ಮಾಡುತ್ತಿರುವೆ.


     ಮನುಷ್ಯರ ಬದುಕು ಮತ್ತು  ಸಮಾಜವು ತನ್ನ ಅಸ್ಮಿತೆಯನ್ನು ಭಾಷೆಯ ಮುಖಾಂತರವೇ  ಪಡೆಯುತ್ತದೆ. ಉಳಿದ ಜೀವಿಗಳಿಗೆ ಹೋಲಿಸಿದರೆ ಮನುಷ್ಯನ ಕ್ರಿಯೆಗಳು ಕೇವಲ insticntsಗಳ ಮೇಲೆ ಆಧಾರಿತವಾಗಿರದ, ಪುನಾರಾವರ್ತಿತ ಸ್ವರೂಪದಾಗದೇ ಅರ್ಥ, ವಿವರಣೆ ಮತ್ತು ಸಂಕೇತಗಳಿಂದ ಕೂಡಿದೆ. ಭಾಷೆಯೆಂದರೆ ಏನು? ಹಲವು ಸ್ತರದ ಉತ್ತರಗಳು ನಮಗೆ ಎದುರಾಗಬಹುದು. ಆದರೆ ಭಾಷೆ Semiologistsಗಳ ಪ್ರಕಾರ ಮೂಲಭೂತವಾಗಿ ಶಬ್ದ (sound). ವಿವಿಧ, ವಿಭಿನ್ನ, ಸಂಕೀರ್ಣವಾದ ಶಬ್ದಗಳನ್ನು ಹೊರಡಿಸುವ ಸಾಮರ್ಥ್ಯವಿರುವ ಮನುಷ್ಯ ಆ ಶಬ್ದಗಳಿಗೆ ಅರ್ಥವನ್ನು(meaning) ಕೊಡುವ ಸಾಮರ್ಥ್ಯ ಹೊಂದ್ದಿದ್ದಾನೆ. ಶಬ್ದಗಳ ವ್ಯತ್ಯಾಸದ ಆಧಾರದ ಮೇಲೆ ಪ್ರಭೇದಿಕರಿಸಿ(differentiate), ವಿಭಿನ್ನ ಅರ್ಥಗಳನ್ನು ಕೊಡುತ್ತಾನೆ.


    ಭೌತಿಕ ಜಗತ್ತಿನಲ್ಲಿರುವ ವಸ್ತುಗಳು ಪ್ರಜ್ನೆಯನ್ನು ಹೊಂದಿರುವುದಿಲ್ಲ. ಆದರೆ ಮನುಷ್ಯ ಅರಿವು ಮತ್ತು ಅರಿವಿನಿಂದ ಅರಳುವ ಅನುಭವಗಳನ್ನು (conscious experience) ಹೊಂದಿದ್ದಾನೆ.ಆದ್ದರಿಂದ ಮನುಷ್ಯನು ಪ್ರಪಂಚದೊಳಗೊಂದು ಪ್ರಪಂಚವನ್ನು ಹೊಂದಿದ್ದಾನೆ (world within the world). ಅಲ್ಲಿಗೆ ಮನುಷ್ಯ ತನ್ನ ಮತ್ತು ಇತರ ಸಾಮಾಜಿಕ ಕ್ರಿಯೆಗಳಿಗೆ ಅರ್ಥವನ್ನು ನೀಡುತ್ತಾನೆ; ಅರ್ಥವು ವ್ಯಕ್ತಿಗತ ನೆಲೆಯ ಮೇಲೆ ವ್ಯಾಖ್ಯಾನಿಸಲ್ಪಟ್ಟಿರುತ್ತದೆ; ಆದ್ದರಿಂದಲೇ ಅರ್ಥಗಳು ಸಂಕೇತಗಳಾಗುತ್ತವೆ(symbols); ನಮ್ಮ ಬಹುಪಾಲು ಕ್ರಿಯೆಗಳು verbal expressionsಗಳಾಗಿರುತ್ತವೆ. ಕ್ರಿಯೆಯಲ್ಲಿ ತೊಡಗು ಎಂದರೆ ಸಂಭಾಷಿಸು ಎಂಬ ಆಯಾಮವನ್ನು ಬಹುತೇಕವಾಗಿ ಒಪ್ಪಿಕೊಳ್ಳಬಹುದು. ಉಳಿದ ಅಂಶಗಳು non-verbal gesturesಗಳಾಗಿರುತ್ತವೆ. ಈ non-verbal gesturesಗಳು ಭಾಷಿಕ ಕ್ರಿಯೆಯ ಭಾಗವಾದಾಗ ಕ್ರಿಯೆ ಮತ್ತಷ್ಟು ಸಾಂಕೇತಿಕ ಮತ್ತು ಸಂಕೀರ್ಣವಾಗುತ್ತದೆ. ಆದ್ದರಿಂದ ಶಬ್ಗಗಳು ಅರ್ಥಪೂರ್ಣವಾಗುವುದು ನಾವು ಕೊಡುವ ಅರ್ಥದ ಆಧಾರದ ಮೇಲೆಯೇ. ಈ ಕಾರಣದಿಂದಲೇ ಪರಸ್ಪರ ಸಂಬಂಧವಿಲ್ಲದ ಎರಡು ಭಾಷೆಗಳಲ್ಲಿ ಒಂದೇ ಶಬ್ದದ ಪದಗಳು ಕೇವಲ ಆಕಸ್ಮಿಕವಾಗಿರುತ್ತವೆ (random), ಶಬ್ದಗಳು ಒಂದೇ ಆದರೂ ಅರ್ಥ ಬೇರೆಯೇ ಆಗಿರುತ್ತದೆ.

     ಹಾಗಾದರೇ ಭಾಷೆಯ ಪದಗಳಿಗೆ ಅರ್ಥ ರೂಪುಗೊಳ್ಳುವ ನೆಲೆಯಾವುದು? ವ್ಯಕ್ತಿಯ ಪ್ರಜ್ನೆ ಮತ್ತು ಆ ಪ್ರಜ್ನೆಗೆ ಮುಖಾಮುಖಿಯಾಗುವ ನಮ್ಮ ವಾಸ್ತವ (reality) ಅರ್ಥಗಳನ್ನು ಸೃಷ್ಟಿಸುತ್ತವೆ. ವಾಸ್ತವವೆಂದರೆ ಇತರೆ ವ್ಯಕ್ತಿಗಳು(ಸಮಾಜ) , ಪ್ರಕೃತಿ, ಇತರೆ ಜೀವ ಸಂಕುಲಗಳು. ವ್ಯಕ್ತಿಗಳು ತಮ್ಮನು ಸುತ್ತುವರಿದಿರುವ ಪರಿಸರವನ್ನು ಗುರುತಿಸಲು ಶಬ್ದಗಳನ್ನು ಮತ್ತು ಅವುಗಳಿಗೆ ಅರ್ಥವನ್ನು ನೀಡುತ್ತಾರೆ. ಅರ್ಥವು ಒಬ್ಬ ವ್ಯಕ್ತಿಯ ಮೇಲೆ ಅವಲಂಬಿಸದೇ ಸಾಮೂಹಿಕ ಅಥವ ಸಮಷ್ಟಿ ನೆಲೆಯಾಧಾರಿತವಾಗಿರುತ್ತದೆ(collective). ಅರ್ಥಗಳು ಆದ್ದರಿಂದ ಹಂಚಿಕೊಳ್ಳಲ್ಪಟ್ಟ ಗುಣವನ್ನು ಹೊಂದಿವೆ (shared meanings). ಆದ್ದರಿಂದಲೆ ಕನ್ನಡದಲ್ಲಿ ಹೆಸರು ಎಂದಾದಲ್ಲಿ, ಹಿಂದಿಯಲ್ಲಿ ನಾಮ್, ತುಳುವಿನಲ್ಲಿ ಪುದರ್  ಎಂದಾಗುತ್ತದೆ. ಹೆಸರು ಮತ್ತು ಪುದರ ನಡುವೆ ನಂಟಿದೆ. ಕನ್ನಡದಲ್ಲಿ ಮೊದಲಾಕ್ಷರ ಇದ್ದರೆ, ತುಳುವಿನಲ್ಲಿ ಅದು ಎಂದಿದೆ.ಕೊನೆಯ ಅಕ್ಷರ "ರ" ಎರಡು ಭಾಷೆಗಳಲ್ಲಿ ಒಂದೇ ಆಗಿದೆ. ಒಂದು ವೇಳೆ ಪಕಾರ ಕನ್ನಡದಲ್ಲಿ ಉಳಿದ್ದಿದ್ದರೆ ಹೆಸರು ಪೆಸರು ಎಂದಾಗುತ್ತಿತ್ತು. ಪೆಸರ್ ಮತ್ತು ಪುದರ್ ನ ಶಬ್ದದ ನಡುವೆ ಸಾಮ್ಯತೆಯನ್ನು ಗಮನಿಸಿ. ತುಳು ಮತ್ತು ಕನ್ನಡ ಒಂದೇ ಭಾಷಾ ಕುಟುಂಬಕ್ಕೆ ಸೇರಿರುವುದರಿಂದ ಈ ಸಾಮ್ಯತೆಯನ್ನು ನೀವು ಗಮನಿಸಬಹುದು. ಆದರೆ ಕನ್ನಡದ ಹೆಸರು ಮತ್ತು ಹಿಂದಿಯ ನಾಮ್ ನಡುವೆ ಆ ಸಂಬಂಧವಿಲ್ಲ. ಅಲ್ಲಿಗೆ ಎರಡು ಶಬ್ದಗಳು ಭಿನ್ನ ಧ್ವನಿಯನ್ನು ಹೊರಡಿಸುತ್ತವೆ. ಆ ಭಿನ್ನ ಧ್ವನಿಗಳಿ ಬೇರೆ ಬೇರೆ ನಿರ್ದಿಷ್ಟ ಭೌಗೋಳಿಕ  ಪ್ರದೇಶಗಳಲ್ಲಿರುವ ಭಾಷಿಕ ಸಮುದಾಯಗಳಿಂದ ಸೃಷ್ಟಿಯಾದ ಶಬ್ದಗಳು. ಶಬ್ದ ಭಿನ್ನ, ಆದರೆ ಅರ್ಥ ಒಂದೇ. ಕಾಫಿ ಎಂಬುದು ಪೇಯವಾದರೇ, ಹಿಂದಿಯಲ್ಲಿ ಕಾಫಿ ಸಾಕಷ್ಟು ಎಂಬ ಅರ್ಥ ಬರುತ್ತದೆ. ಶಬ್ದಗಳು ಒಂದೇ ಆಗಿರುವುದು ಆಕಸ್ಮಿವಷ್ಟೇ. ಅರ್ಥಗಳು ಬೇರೆಯೇ ಆಗಿವೆ.
       ಮನುಷ್ಯ ಸಮಾಜ ಈ ಶಬ್ದಗಳ ಆಧಾರದ ಮೇಲೆಯೇ ತಾನು ವಾಸಿಸುತ್ತಿರುವ ಪರಿಸರವನ್ನು ಗುರುತಿಸುವ (designating) ಕೆಲಸ ಮಾಡುತ್ತದೆ. ಶಬ್ದಗಳ ವ್ಯತ್ಯಾಸವು ಅರ್ಥಗಳನ್ನು ಪಡೆದುಕೊಳ್ಳುತ್ತವೆ. ಈ ಕಾರಣದಿಂದಲೇ ಒಂದು  ಸಮುದಾಯದ ಭಾಷೆ ಬದಲಾದಂತೆ ಸಂಸ್ಕೃತಿಯು ಬದಲಾಗುತ್ತದೆ. ಶಬ್ದ ಮತ್ತು ಅರ್ಥಗಳೇ ವ್ಯಕ್ತಿಗಳ ಕ್ರಿಯೆಗಳಲ್ಲಿ ವಿನಿಮಯವಾಗುತ್ತವೆ. ಒಂದು ಭಾಷೆಯಲ್ಲಿ ಪದವೊಂದು ಸೂಚಿಸುವ ಅರ್ಥವು ಇನ್ನೊಂದು ಭಾಷೆಯಲ್ಲಿ ಇರದೇ ಹೋಗಬಹುದು.ಉದಾಹರಣೆಗೆ, ಕರಾವಳಿ ತೀರದ ಜನರು ತಮ್ಮ ಭೌಗೋಳಿಕ ಸನ್ನಿವೇಶದಲ್ಲಿ ಬಳಸುವ ಪದಾರ್ಥಗಳು ಅಥವಾ ವಸ್ತುಗಳು ಬಯಲುಸೀಮೆಯಲ್ಲಿ ಸಿಗದೇ ಇರಬಹುದು.ಆಗ ಆ ವಸ್ತುಗಳನ್ನು ಸೂಚಿಸುವ ಶಬ್ದಗಳು, ಅರ್ಥಗಳು ಹಾಗು ಕಲ್ಪನಗಳೇ ಇರುವುದಿಲ್ಲ.

              ಭಾಷೆ ಸಂಸ್ಕೃತಿಯ ವಾಹಕವೂ ಹೌದು (Vehicle). ಸಂಸ್ಕೃತಿಯು ಕಲಿಕೆಯಿಂದ(learning) ಅರ್ಜಿಸಲ್ಪಡುವ ಅಖಂಡ ಸಮುಚ್ಛಯವಾಗಿದ್ದು ( complex whole) ಮನುಷ್ಯನಿಂದ ಸೃಷ್ಟಿಸಲ್ಪಟ್ಟ ಸಮಸ್ತವು ಸಂಸ್ಕೃತಿಯಾಗುತ್ತದೆ. ಕಲಿಕೆಯು ಸಾಧ್ಯವಾಗುವುದೇ ಹಂಚಿಕೊಳ್ಳಲ್ಪಟ್ಟ  ಅರ್ಥವನ್ನು ಹೊಂದಿರುವ ಶಬ್ದಗಳ ವಿನಿಮಯದಿಂದ. ಜೊತೆಯಾಗಿ ಜೀವಿಸುವುದು ಮತ್ತು ಅರ್ಥದಿಂದ ಕೂಡಿದ ಶಬ್ದಗಳ ವ್ಯವಸ್ಥೆ ಅಂದರೆ ಭಾಷೆಯ ಬಳಕೆ ನಿರ್ಧಾರಕ ಅಂಶಗಳಾಗುತ್ತವೆ.

           ಭಾಷೆ ಜಾನಪದೀಯವೂ ಹೌದು ಹಾಗೆಯೇ ಬೌದ್ದಿಕವೂ ಹೌದು. ಭಾಷೆ ರೂಪುಗೊಳ್ಳುವುದು ಆರಂಭದಲ್ಲಿ ಮೌಖಿಕವಾಗಿ (oral). ಮೌಖಿಕ ಪರಂಪರೆಯೇ ಯಾವುದೇ ಭಾಷೆಯ ಶ್ರೀಮಂತಿಕೆಯನ್ನು ರೂಪಿಸುತ್ತದೆ. ಆದರೆ ಭಾಷೆ ಮೂಲತ: ಮೌಖಿಕವಾದರು ಅದೊಂದು ಪ್ರಾಥಮಿಕ ಬೌದ್ಧಿಕ ಕ್ರಿಯೆ. ಏಕೆಂದರೆ ಶಬ್ದದ ಆಯ್ಕೆ, ಅದರ ಅರ್ಥದ ನಿರೂಪಣೆಯಲ್ಲಿ ಬೌದ್ದಿಕ ಕಸರತ್ತು ಇದ್ದೇ ಇರುತ್ತದೆ. ಪ್ರಾಥಮಿಕ ಬೌದ್ದಿಕ ಕಸರತ್ತು ಲಿಪಿಯ ಮುಖಾಂತರವೇ ಇರಬೇಕು ಎಂದೇನಿಲ್ಲ. ಕಾಲ ಉರುಳಿದಂತೆ ಭಾಷೆ ಮನುಷ್ಯನ ಪ್ರಜ್ನಾಪೂರ್ವಕವಾದ ಪ್ರತಿಪಲನವಾಗಬಹುದು (conscious reflection). ಆಗ ಭಾಷೆಯ ರಚನೆ ಅಂದರೆ ವ್ಯಾಕರಣವನ್ನು ಸೋಪಜ್ನವನ್ನಾಗಿಸುವ, ಆ ಮುಖಾಂತರ ಎಲ್ಲೇ ಅಥವ ವ್ಯಾಪ್ತಿ ಸೃಷ್ಟಿಯಾಗುತ್ತದೆ.

      ಭಾಷೆಯೆಂಬುದು ಒಂದು ಗುರುತಾಗಿ ಅಥವ ಅನನ್ಯತೆಯಾಗಿ (identity) ಧರ್ಮಕ್ಕಿಂತ ಹೆಚ್ಚು ವಿಶಾಲವಾದುದು. ಧರ್ಮವು ಸಮಾಜವನ್ನು ಲಂಬಾಕೃತವಾಗಿ (vertical) ಐಕ್ಯತೆಗೊಳಿಸಿದ್ದರೆ, ಭಾಷೆಯು ಸಮಾನಾಂತರವಾಗಿ (horizontal) ವ್ಯಕ್ತಿಗಳನ್ನು ಬೆಸೆಯುತ್ತದೆ. ನಿರ್ದಿಷ್ಟ ಭಾಷೆಯೊಂದನ್ನು ಹಲವು ಧರ್ಮ, ಜಾತಿಗಳು ಮಾತನಾಡಬಹುದು.ಭಾಷೆ ಈ ವಿಭಿನ್ನ ಧರ್ಮ ಮತ್ತು ಜಾತಿಗಳ ಜನರನ್ನು ಬೆಸೆಯುತ್ತದೆ.

     ಭಾಷೆಯೆಂಬುದು ಎಡಪಂಥೀಯ ಹಾಗೆಯೇ ಬಲಪಂಥೀಯ ಆಯಾಮವನ್ನು ಹೊಂದಿದೆ. ವಿಶಾಲಾರ್ಥದಲ್ಲಿ ಬಳಕೆಯಾದಾಗ ಅದು ಜನಕೇಂದ್ರಿತ, ಜನಸಾಮಾನ್ಯರ ಅಸ್ತಿತ್ವದ ಭಾಗವಾಗುತ್ತದೆ. ಆದರೆ ಭಾಷೆಯೆಂಬುದು ಕೇವಲ ಭಾಷಿಕ ಸಂಗತಿಯಷ್ಟೇ(linguistic phenomenon) ಅಲ್ಲ. ಭಾಷೆಯು ಅಧಿಕಾರ ಮತ್ತು ಯಜಮಾನ್ಯತೆಯ ಅಭಿವ್ಯಕ್ತಿಯಾಗಿಯೂ ಪರಿಣಮಿಸುತ್ತದೆ( language as an expression and manifestation of power and dominance. ಈ ದೃಷ್ಟಿಯಿಂದ ಭಾಷೆ  ಬಲಪಂಥೀಯ ಮತ್ತು ಊಳಿಗಮಾನ್ಯ ವ್ಯವಸ್ಥೆಯ ಅಭುವ್ಯಕ್ತಿಯಾಗುತ್ತದೆ. ಸಮಾಜಿಕ ರಚನೆಯು ಅಸಮಾನ ನೆಲೆಗಳ ಮೇಲೆ ಆಧಾರಿತವಾಗಿದ್ದಾಗ, ಯಜಮಾನ್ಯತೆಯನ್ನು ಪಡೆಯುವ ಗುಂಪುಗಳಿಗೆ ಭಾಷೆಯು ಭಾರಿ ಅಭಿಮಾನದ, ಹೆಮ್ಮೆಯ ಸಂಕೇತವಾಗುತ್ತದೆ. ಆದರೆ ಅಧೀನವಾಗಿರುವ ಗುಂಪುಗಳಿಗೆ ಅವರಾಡುವ ಭಾಷೆಯೇ ದಮನಕಾರಿಯೆಂದನಿಬಹುದು. ಅಂತಹ ಗುಂಪುಗಳು ತಮ್ಮ ವಿಮೋಚನೆಗೆ ಮಾರ್ಗಗಳನ್ನು ಸೃಷ್ಟಿಸುವ ಭಾಷೆಯನ್ನು ಸ್ವೀಕರಿಸುವುದು ಸಾಮಾನ್ಯ.
 
       ನಿರ್ದಿಷ್ಟ ಭಾಷೆ ಮತ್ತು ಆ ಭಾಷೆಯನ್ನಾಡುವ ಗುಂಪಿನ ಸಂಬಂಧ ಯಾವಾಗಲು ಶಾಶ್ವತವಾಗಿರಬೇಕೆಂದೇನೂ ಇಲ್ಲ. ಕಾಲ ಬದಲಾದಂತೆ ಭಾಷೆಯೊಂದು ಹೊಂದಿರುವ ಯಜಮಾನ್ಯತೆ ಮತ್ತು ಪ್ರಭಾವವು  ಉದುರಿ ಹೋದಾಗ, ಮತ್ತೊಂದು ಭಾಷೆ ಪ್ರಬಲವಾದಾಗ ಜನರು ತಮ್ಮ ನುಡಿಗಳಿನ್ನು ಬಿಟ್ಟು ಬೇರೆ ನುಡಿಗಳನ್ನು ಮಾತನಾಡಬಹುದು. ಒಂದು ಸಮಯದಲ್ಲಿ ಕನ್ನಡ ನಾಡಿನ ಎಲ್ಲೇ ಮಧ್ಯ ಮಹಾರಾಷ್ಟ್ರದವರೆಗೂ ಹಬ್ಬಿತ್ತು ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇಂದು ಕನ್ನಡ  ಗಡಿ ಬೆಳಗಾವಿಯಲ್ಲಿ ಏದುಸಿರು ಬಿಡುತ್ತಿದೆ. ಸೊಲ್ಲಾಪುರ ಕನ್ನಡ ಭಾಷಿಕರಿಂದಲೇ ತುಂಬಿದ್ದರೂ, ಕನ್ನಡ ನಾಡಿನ ಭಾಗವಾಗಲಿಲ್ಲ. ಕಾಸರಗೋಡು, ಊಟಿ, ಆದೋನಿಗಳು ಹೊರಗೇ ಉಳಿದವು. ಈ ಉದಾಹರಣೆ ಮೇಲಿನ ನನ್ನ ಪ್ರಾಕಲ್ಪನೆಯನ್ನು (hypothesis) ಪುಷ್ಟೀಕರಿಸುತ್ತದೆ.


          ಭಾರತದ ಸಮಾಜಿಕ ವ್ಯವಸ್ಥೆಯ ಸನ್ನಿವೇಶದಲ್ಲಿ ಭಾಷೆ ಇಲ್ಲಿಯ ವರ್ಣ-ಜಾತಿಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಸ್ತರವಿನ್ಯಾಸದ ಏಣಿ ಶ್ರೇಣಿಯಲ್ಲಿ ನೀವು ಕೆಳಮುಖವಾಗಿ ಚಲಿಸಿದಂತೆ ಶೂದ್ರ ಮತ್ತು ದಲಿತರ ನೆಲೆಗಳ ಪಾರಂಪರಿಕವಾದ ಸ್ಥಾನವನ್ನು ಹೊಂದ್ದಿದ್ದನ್ನು ನೀವು ಗಮನಿಸಬಹುದು. ಶೂದ್ರ ಮತ್ತು ದಲಿತರ ಬದುಕಿನ ಕನ್ನಡವು, ಅದರಲ್ಲೂ ವಿಶೇಶವಾಗಿ ದಲಿತರ ಕನ್ನಡವು ಸಂಸ್ಕೃತದ ಪ್ರಭಾವದಿಂದ ಸಾಪೇಕ್ಷವಾಗಿ ಮುಕ್ತವಾಗಿದ್ದನ್ನು ಕಾಣಬಹುದು. ದಿನ ನಿತ್ಯ ಬದುಕಿನ ವ್ಯವಾಹರಗಳಲ್ಲಿ ಮತ್ತು ಸಂಬಂಧಗಳಲ್ಲಿ ಮೂಲ ಕನ್ನಡ ಶಬ್ದಗಳೇ ಹೆಚ್ಚು.  ಹೆಸರಗಳು ಕೂಡ ದೇಸಿ. ಉದಾಹರಣೆಗೆ ಗಂಡಸರು ಚನ್ನಪ್ಪ, ಚನ್ನಪ್ಪ ಗೌಡ. ಚನ್ನಯ್ಯ, ಜವರಯ್ಯ, ಜವರೇಗೌಡ, ಮಾಳಿಗೇಗೌಡ, ಮಾಳಿಗಪ್ಪ, ಕಾಳಮ್ಮ, ತಿಮ್ಮಕ್ಕ, ಪುಟ್ಟಕ್ಕ, ಸಣ್ಣೇಗೌಡ, ಸಣ್ಣಶೆಟ್ಟಿ ಎಂದಿರುತ್ತಿದ್ದವು. ದೇವಾಲಯಕ್ಕೆ ಗುಡಿ ಎಂದು ಹೆಚ್ಚು ಬಳಸಲಾಗುತ್ತಿತ್ತು.  ಸಂಸ್ಕೃತದ ’ಪ್ರಸಾದ’ಕ್ಕೆ ಬದಲಾಗಿ  ’ಚರ್ಪು” ಎಂಬ ಪದ, ದೀಪಕ್ಕೆ ಸೊಡರು (ತುಳುವಿನಲ್ಲಿ ತುಡರ್) ಎಂದು ವ್ಯಾಪಕವಾಗಿ ಬಳಕೆಯಾಗುತ್ತಿತ್ತು. ಇಂದು ಕನ್ನಡದ ಮೇಲೆ ಸಂಸ್ಕೃತದ ದಾಳಿ ಎಗ್ಗಿಲ್ಲದೇ ನಡೆಯುತ್ತಿದೆ. ಹಾಗೆ ಸಂಸ್ಕೃತದ ಪದಗಳು ಕನ್ನಡದಲ್ಲಿ ನುಸುಳುವುದು ಕೇವಲ creative ಆದ ಸಂಗತಿಯಾದೇ ಸೂಕ್ಶ್ಮ ಏಣಿ ಶ್ರೇಣಿಯ, ಶ್ರೇಷ್ಟ-ಕನಿಷ್ಟಗಳ ಪ್ರಜ್ನೆಯ ನುಸುಳುವಿಕೆಯಾಗಿದೆ. ಹಾಲಿನ ಅಂಗಡಿ  ಎಂಬುದರ ಬದಲಿಗೆ ಕ್ಷೀರ ಕೇಂದ್ರ ಎಂದು ಬಳಕೆಯಾಗುವುದು ಕನ್ನಡದ ನೆಲೆ, ಸಂಸ್ಕೃತಿಯನ್ನು ಸದ್ದಿಲ್ಲದ್ದೇ ಹೊಸಕಿ ಹಾಕುವುದೇ ಆಗಿದೇ. ಇಂಥ ಉದಾಹರಣೆಗಳು ಸಾಕಷ್ಟಿವೆ. ಜಾಗತಿಕರಣದ ಸಂಸ್ಕೃತಿಯ ಏಕ ಸ್ವರೂಪಿಯ ನೆಲೆಗಳು ದಾಳಿ ಮಾಡುತ್ತಿರುವ ಸಂದರ್ಭದಲ್ಲಿ ನಾವು ಕೇವಲ ಇಂಗ್ಲೀಷಿನ ಬಗ್ಗೆ ಮಾತ್ರ ಜಾಗೃತೆಯನ್ನು ಹೊಂದ್ದಿದ್ದರಷ್ಟೇ ಸಾಲದು, ಸಂಸ್ಕೃತ, ಹಿಂದಿ ಹೇರಿಕೆ ಮತ್ತು ಯಜಮಾನ್ಯತೆಯ ಬಗ್ಗೆ ಎಚ್ಚರದಿಂದಿರಬೇಕಾಗಿದೆ. ಆಗ ಮಾತ್ರ ಅಳಿದುಳಿದ ನಮ್ಮ ಈ ಕನ್ನಡವನ್ನು, ಕನ್ನಡನಾಡನ್ನು ಉಳಿಸಿಕೊಳ್ಳಬಲ್ಲೆವು.
ಚಿತ್ರಕೃಪೆ - indianmirror

3 comments:

 1. ಧನ್ಯವಾದಗಳು ಸರ್...

  ReplyDelete
 2. ಹಾಲಿನಂಗಡಿ ಕ್ಷೀರಕೇಂದ್ರ-ವಾದುದು ಒಂದು ಉದಾಹರಣೆ. ಈ ಬಗೆಯ ಸಾಕಷ್ಟು ಬದುಕಿರುವ ಉದಾಹರಣೆಗಳನ್ನು ನೋಡಬಹುದಾಗಿದೆ.
  ಈ ರೀತಿಯ ಬದಲಾವಣೆಗಳಿಗೆ ಹೆಚ್ಚಿನ ಜನರು ಗೊತ್ತಿದ್ದೋ ಗೊತ್ತಿಲ್ಲದೆಯೋ ಒಳಗಾಗುತ್ತಿದ್ದಾರೆ. ಮತ್ತದನ್ನು ಮುಂದುವರೆಸುತ್ತಿದ್ದಾರೆ ಕೂಡಾ. ಸಾಮಾಜಿಕ ಸಮಾನತೆಯನ್ನು ಗಂಬೀರವಾಗಿ ನೋಡುವ ದಿನಪತ್ರಿಕೆಗಳೂ, ಈ ಬದಲಾವಣೆಯಲ್ಲಿ ಗೊತ್ತಿಲ್ಲದೇ ಒಳಗಾಗಿದ್ದಾರೆ.
  ಕೋತಿಬಂಡೆ - ಮಾರುತಿ ಮಂದಿರ
  ಗಾಳಿ ಆಂಜನೇಯ - ಪವನ್ ಹನುಮಾನ್
  ಕೋಳಿ ಸಾಕಣೆ ಕೇಂದ್ರ - ಕುಕ್ಕುಟ ಪಾಲನಾ ಕೇಂದ್ರ
  ಗಟ್ಟಿ ಕಸ - ಘನ ತ್ಯಾಜ್ಯ
  ಎತ್ತಿಹಿಡಿಯಲಾಯಿತು (Upheld) - ಊರ್ಜಿತ

  ReplyDelete
  Replies
  1. ಪ್ರಿಯಾಂಕ್ ರವರ ಅನಿಸಿಕೆ ಸರಿ. ಕನ್ನಡ ಭಾಷೆಯ ನೆಲೆಯನ್ನು ಸೂಕ್ಶಮವಾಗಿ ಸಂಸ್ಕೃತ ಪದಗಳು ಅಧಿಕವಾಗಿ, ಅನಾವ್ಶ್ಯಕವಾಗಿ ನುಸುಳುವುದರ ಮುಖಾಂತರ ನಿರಾಶ್ರಿತಗೊಳಿಸುತ್ತಿದೆ. ಇದು ಒಂದು ರೀತಿಯಲ್ಲಿ ಸಾಂಸ್ಕೃತಿಕ bombardment.

   Delete