Mar 15, 2020

ಒಂದು ಬೊಗಸೆ ಪ್ರೀತಿ - 56

ಸೋನಿಯಾ ಮನೆಗೆ ಬಂದ ಮೇಲೆ ಹೆಚ್ಚು ದಿನ ಅಮ್ಮನ ಮನೆಯಲ್ಲಿರಲು ನನ್ನ ಮನಸೊಪ್ಪಲಿಲ್ಲ. ಪಾಪ, ಸೋನಿಯಾ ಆಗಲೀ ಶಶಿ ಆಗಲೀ ನನ್ನೆಡೆಗೆ ಅಸಡ್ಡೆಯಿಂದಲೋ ತಾತ್ಸಾರದಿಂದಲೋ ನೋಡಿದವರಲ್ಲ. ಹಾಗೆ ನೋಡಿದರೆ ಸೋನಿಯಾ ಬಂದ ಮೇಲೆ ನನಗೆ ಹೆಚ್ಚು ವಿಶ್ರಾಂತಿ ಸಿಗಲಾರಂಭಿಸಿದ್ದು ಸುಳ್ಳಲ್ಲ. ಮಗಳನ್ನಾಡಿಸುತ್ತಿದ್ದಳು, ಅಡುಗೆಯಲ್ಲಿ ಸಹಾಯ ಮಾಡುತ್ತಿದ್ದಳು, ನನ್ನ ಕೆಲಸವನ್ನವಳು ಹಂಚಿಕೊಂಡಿದ್ದಳು. ಹಂಗಂತ ಪೂರ್ತಿ ಅಲ್ಲೇ ಇರೋದಿಕ್ಕಾಗುವುದಿಲ್ಲವಲ್ಲ. ಮನೆಗೆ ಹಿಂದಿರುಗುವ ಯೋಚನೆಯನ್ನು ಅಪ್ಪ - ಅಮ್ಮನ ಬಳಿ ಇವತ್ತೇಳೋಣ, ಇವತ್ತು ಬೇಡ ನಾಳೆ ಹೇಳೋಣ ಅಂತಂದುಕೊಂಡೇ ಹತ್ತಿರತ್ತಿರ ತಿಂಗಳಾಯಿತೇನೋ. ಮನೆಗೆ ಹೋದ ಮೇಲೆ ಮಗಳನ್ನ ನೋಡಿಕೊಳ್ಳುವುದೇಗೆ? ಯಾರನ್ನಾದ್ರೂ ಗೊತ್ತು ಮಾಡಬೇಕಾ? ಅದು ಖರ್ಚಿನ ಬಾಬ್ತು. ಈಗೆಲ್ಲ ತಿಂಗಳೊಪ್ಪತ್ತಿನ ಕೂಸನ್ನು ನೋಡಿಕೊಳ್ಳಲೂ ಡೇ ಕೇರ್‌ಗಳಿದ್ದಾವೆ. ಇಷ್ಟು ಪುಟ್ಟ ಮಗುವನ್ನಲ್ಲಿ ಬಿಡಲು ನನಗಂತೂ ಇಷ್ಟವಿಲ್ಲ. ಅತ್ತೆ ಮನೇಲಿ ಬಿಡೋಕಾಗಲ್ಲ. ಮಗ ಸೊಸೆಯ ಬಗ್ಗೆಯೇ ಕಾಳಜಿ ವಹಿಸದವರು ಮೊಮ್ಮಗಳ ಬಗ್ಗೆ ಅಕ್ಕರೆ ತೋರುತ್ತಾರಾ? ಇರುವುದೊಂದೇ ಆಯ್ಕೆ. ಡ್ಯೂಟಿಗೆ ಹೋಗುವ ಮುಂಚೆ ಮಗಳನ್ನು ಅಮ್ಮನ ಮನೆಗೆ ಬಿಟ್ಟು ಸಂಜೆ ಬರುವಾಗ ಮತ್ತೆ ಕರೆದುಕೊಂಡು ಹೋಗಬೇಕು. ಅಮ್ಮನಿಗೆ ಹೊರೆಯಾಗ್ತದೆ, ಹೌದು. ಆದರೆ ಬೇರೆ ದಾರಿಯೇನಿದೆ? 

ತಳ್ಳಾಡಿಕೊಂಡು ತಳ್ಳಾಡಿಕೊಂಡು ಕೊನೆಗೂ ಒಂದು ದಿನ ಅಪ್ಪ ಅಮ್ಮ ಇಬ್ಬರೇ ಇದ್ದಾಗ ವಿಷಯ ಪ್ರಸ್ತಾಪಿಸಿದೆ. “ಇನ್ನೆರಡು ತಿಂಗಳಿಗೆ ಒಂದ್ ವರ್ಷ ಆಗ್ತದಲ್ಲ. ಹುಟ್ಟಿದಬ್ಬ ನಾಮಕರಣ ಎಲ್ಲಾ ಒಟ್ಟಿಗೇ ಮುಗಿಸ್ಕಂಡು ಹೋಗುವಂತೆ ಇರು” ಎಂದೇಳಿ ಮನೆಗೋಗುವ ವಿಷಯವನ್ನಲ್ಲಿಗೇ ಸಮಾಪ್ತಿಗೊಳಿಸಿದರು ಅಪ್ಪ. ಈಗ್ಲೇ ಎಲ್ಲಿಗ್ ಹೋಗ್ತಿ? ಇನ್ನೆರಡು ತಿಂಗಳಿಲ್ಲೇ ಇರು ಅಂತರ್ಥೈಸಿಕೊಂಡು ಖುಷಿ ಪಡಬೇಕಾ ಅಥವಾ ಇನ್ನೆರಡು ತಿಂಗಳು ಇಲ್ಲಿರು ಸಾಕು, ಆಮೇಲೆ ಹೊರಡು ಎಂತರ್ಥೈಸಿಕೊಂಡು ಸಂಕಟವನ್ನನುಭವಿಸಬೇಕಾ ತಿಳಿಯಲೊಲ್ಲದು. ಹೆಂಗೋ ಇನ್ನೊಂದೆರಡು ತಿಂಗಳು ಏನು ಮಾಡೋದೆಂಬ ತಲೆ ನೋವು ತಪ್ಪಿತಲ್ಲ ಎಂದು ಸಮಾಧಾನಿಸಿಕೊಂಡೆ. ಶಶಿಗೆ ಅಮ್ಮ ವಿಷಯ ತಿಳಿಸಿದ್ದಿರಬೇಕು. “ಇದ್ಯಾಕಕ್ಕ ಹೊರಡ್ತೀನಿ ಅಂತಿದ್ಯಂತೆ. ಸೋನಿಯಾ ಬಂದ್ಲೂ ಅಂತಾನ” ಅಂತ ನಗೆಸಾರದಿಂದ ಮಾತನಾಡಿದ. ‘ನಿನ್ನ ಪಿಜಿ ಮುಗಿಯೋವರೆಗೂ ಇಲ್ಲೇ ಇರು’ ಅಂತಾನೇನೋ ಅಂತ ಕಾದೆ. ಕಾದಿದ್ದೇ ಲಾಭ, ಅವನೇನನ್ನೂ ಹೇಳಲಿಲ್ಲ. ಅಮ್ಮ ಕೂಡ ಬಾಯ್ಬಿಟ್ಟು ಇರು, ಹೋಗು, ಮಗಳದ್ದೆಂಗೆ ಅಂತ ಕೇಳದೇ ಹೋದದ್ದು ನಿಜಕ್ಕೂ ಗಾಬರಿ ಮೂಡಿಸಿತು. ‘ಸದ್ಯ. ಮೊಮ್ಮಗಳನ್ನ ನೋಡಿಕೊಳ್ಳೋ ಕಷ್ಟ ತಪ್ತು’ ಅಂತ ಅವರಂದುಕೊಂಡುಬಿಟ್ಟರೆ? ಅವರಂಗೆಲ್ಲ ಅಂದುಕೊಳ್ಳುವುದಕ್ಕಿಂತ ಮುಂಚಿತವಾಗಿಯೇ ಹಿಂಗಿಂಗೆ ಬೆಳಿಗ್ಗೆ ಬಿಟ್ಟು ಸಂಜೆ ಕರೆದುಕೊಂಡು ಹೋಗ್ತೀನಿ ಅಂತೇಳಿಬಿಟ್ಟೆ. “ಇನ್ನೇನ್ ಮತ್ತೆ. ಹಂಗೇ ಮಾಡಬೇಕಲ್ಲ” ಎಂದವರ ಬಳಿ ನಿರಾಕರಿಸುವ ಅವಕಾಶವಾದರೂ ಎಲ್ಲಿತ್ತು! 

ನೋಡ್ತಾ ನೋಡ್ತಾ ಎರಡು ತಿಂಗಳು ಕಳೆದೇ ಹೋಯ್ತು. ತುಂಬಾ ಜೋರಾಗೇನೂ ಮಾಡೋದು ಬೇಡ, ಮನೆಯವರು, ತೀರ ಹತ್ತಿರದ ಗೆಳೆಯರನ್ನು ಕರೆದರೆ ಸಾಕು. ಯಾವುದಾದರೂ ಚಿಕ್ಕ ಪಾರ್ಟಿ ಹಾಲಲ್ಲಿ ಮಾಡಿದರಾಯಿತು ನಾಮಕರಣವನ್ನ ಅಂತ ನಿರ್ಧರಿಸಿದೆವು. ಲೆಕ್ಕ ಹಾಕಿ ಲೆಕ್ಕ ಹಾಕಿ ಎಲ್ಲರನ್ನೂ ಕರೆಯಬೇಕಿತ್ತು. ಜೊತೇಲಿ ಓದುತ್ತಿದ್ದ ಐದಾರು ಮಂದಿ, ಒಂದಾರು ಸೀನಿಯರ್ ಡಾಕ್ಟರ್ರುಗಳು, ತೀರ ಹಚ್ಚಿಕೊಂಡಿದ್ದ ಇಬ್ಬರು ನರ್ಸು ಮತ್ತೆ ಸಾಗರ, ಇಷ್ಟೇ ನನ್ನ ಕಡೆಯಿಂದ. ರಾಜೀವನ ಪಟ್ಟಿಯಲ್ಲಿ ನಾನೇ ಸೇರಿಸಿಕೊಂಡಿರದ ರಾಮ್‌ಪ್ರಸಾದ್ ಹೆಸರಿದ್ದಿದ್ದನ್ನೂ ನೋಡಿ ನನಗೇ ಅಚ್ಚರಿ. ಇವರ ಕುಡಿತದ ಸಂಗ ಕುಶಾಲನಗರದಿಂದ ಮೈಸೂರಿಗೂ ವಿಸ್ತರಿಸಿರುವ ಮೊದಲ ಸೂಚನೆ ಅಂದು ಸಿಕ್ಕಿತ್ತು. ಅಥವಾ ಬಹುಶಃ ಅವತ್ತಿನ ಸ್ನೇಹದಿಂದಲೇ ಕರೆಯುತ್ತಿರಬಹುದು. ನಮ್ಮ ಮನೆ ಕಡೆಯವರು ಒಂದು ನಲವತ್ತು ಜನ, ರಾಜೀವನ ಮನೆ ಕಡೆಯವರು ಒಂದು ಮೂವತ್ತು ಜನ. ಎಲ್ಲ ಸೇರಿ ಅಬ್ಬಬ್ಬಾ ಅಂದರೆ ನೂರು ಅಂತಿದ್ದ ಪಟ್ಟಿ ನಾಮಕರಣದ ದಿನ ಹತ್ತಿರವಾಗುತ್ತಿದ್ದಂತೆಯೇ ಎಲ್ಲರ ಸಮಶ್ರಮದಿಂದ ನೂರೈವತ್ತರ ಗಡಿ ದಾಟಿತ್ತು. 

ಸಾಗರನಿಗೆ ಫೋನ್‌ ಮಾಡಿದೆ. ಫೋನ್ ತೆಗೆಯಲಿಲ್ಲ. ಹಿಂಗಿಂಗೆ ಫಂಕ್ಷನ್ನು, ಮಿಸ್ ಮಾಡದೆ ಬರಬೇಕು ಅಂತ ಮೆಸೇಜ್ ಹಾಕಿದೆ. “ಓಕೆ" ಅಂತ ರಿಪ್ಲೈ ಮಾಡಿದ. 

‘ಫೋನ್ ಮಾಡದಿಕ್ಕಾಗದಿರುವಷ್ಟು ಬ್ಯುಸೀನಾ?’ ಕಾಲೆಳೆದೆ. 

“ಹೌದು. ಬ್ಯುಸೀನೇ…..” ಇನ್ನೇನಾದರೂ ಮೆಸೇಜಿಸಿದರೆ ಇಲ್ಲಸಲ್ಲದ ಮಾತು ಕೇಳಬೇಕಾಗ್ತದೆ ಅನ್ನೋದು ಖಾತ್ರಿಯಾಗಿ ‘ಓಕೆ ಓಕೆ. ಕ್ಯಾರಿ ಆನ್. ಫಂಕ್ಷನ್ ಭಾನುವಾರ ಇಟ್ಕಂಡಿದ್ದೀವಿ. ಮರೀದೆ ಬಾ ಆಯಿತಾ’ ಎಂಬ ಮೆಸೇಜಿಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಘಂಟೆಯ ನಂತರ "ಸರಿ. ಬರ್ತೀನಿ” ಎಂದು ಮೆಸೇಜಿಸಿದ್ದ. ನಿಜಕ್ಕೂ ಬ್ಯುಸಿ ಇದ್ನೇನೋ ಅನ್ನಿಸಿತು. ಬ್ಯುಸಿ ಅಂತ ನಾನದೆಷ್ಟು ಸಲ ಕಾಗೆ ಹಾರಿಸಿಲ್ಲ ಅನ್ನೋದು ಕೂಡ ನೆನಪಿಗೆ ಬಂತು. 

ನಾಮಕರಣ ಕಮ್ ಹುಟ್ಟುಹಬ್ಬದ ದಿನ ಎಲ್ಲರಿಗೂ ಜೋರು ಸಡಗರ. ರಾಧಳನ್ನು ಬಿಟ್ಟು, ನನ್ನನ್ನು ಬಿಟ್ಟು! ರಾಧಳಿಗೆ ಅಷ್ಟೊಂದು ಜನ ಅಪರಿಚಿತರನ್ನು ಒಂದೇ ದಿನ ಕಂಡ ಆತಂಕ. ಹೋಗ್ಲಿ ಬಂದೋರಾದ್ರೂ ಸುಮ್ಮನೆ ನಕ್ಕು ಮುಂದೋಗ್ತಾರಾ? ಉಹೂ…. ಕೆನ್ನೆ ಗಿಲ್ಲುವವರೊಬ್ರು, ತಲೆ ಕೂದಲು ಕೆದರುವವರೊಬ್ರು, ಮೂಗು ಗಿಂಡುವರೊಬ್ರು, ಬರದವಳನ್ನು ಎತ್ತಿಕೊಳ್ಳಲೆತ್ನಿಸುವರೊಬ್ರು. ಇವರೆಲ್ಲರ ಕೀಟಲೆಗೆ ರಾಧ ಕಿಟಾರೆಂದು ಕಿರುಚಿ ಬೆಚ್ಚುತ್ತಿದ್ದಳು. ಅವಳನ್ನು ಸಮಾಧಾನಿಸುವ ಕೆಲಸ ನನ್ನದು! ವರ್ಷ ಒಂದಾಗಿದ್ದರೂ ಇನ್ನೂ ನಡೆಯಲೊಲ್ಲಳು. ಒಂದೋ ನಾ ಎತ್ತಿಕೊಂಡಿರಬೇಕು, ಇಲ್ಲ ನಮ್ಮಮ್ಮ. ಮನೆಯಲ್ಲಿದ್ದಾಗ ಅಪ್ಪನ ಬಳಿ ಶಶಿ ಸೋನಿಯಾಳ ಬಳಿ ಸಲೀಸಾಗಿ ಹೋಗುತ್ತಿದ್ದವಳು ಇಂದು ಅವರೊಡನೆಯೂ ಮುನಿದಿದ್ದಾಳೆ. ಇನ್ನು ಮನೆಯಲ್ಲೇ ತಿಂಗಳಿಗೊಪ್ಪತ್ತಿಗೊಮ್ಮೆ ಎತ್ತಾಡಿಸುವ ರಾಜೀವನ ಬಳಿಗೆ ಹೋಗುತ್ತಾಳಾ?! ಅಮ್ಮ ಬರುವ ನೆಂಟರಿಷ್ಟರೊಡನೆ ಮಾತನಾಡುವದರಲ್ಲೇ ಬ್ಯುಸಿ. ನಿಜಕ್ಕೂ ಅಷ್ಟೊಂದೆಲ್ಲ ನೆಂಟರಿಷ್ಟರನ್ನು ವಿಚಾರಿಸುವ ಜಾಯಮಾನ ಅಮ್ಮನದ್ದಲ್ಲ. ಒಂಭತ್ತೂವರೆ ಕೆಜಿಯಷ್ಟು ತೂಗುತ್ತಿದ್ದ ರಾಧಳನ್ನು ಎತ್ತಿಕೊಂಡು ರೇಷ್ಮೆ ಸೀರೆ ಮುದುರು ಮುದುರಾಗುವುದನ್ನು ತಪ್ಪಿಸಲೆಂದೇ ನೆಂಟರಿಷ್ಟರ ಉಪಚಾರದಲ್ಲಿ ತೊಡಗಿದ್ದರೋ ಏನೋ. ನಾಮಕರಣದ ಶಾಸ್ತ್ರ ಹತ್ತು ಘಂಟೆಗಿತ್ತು. ಕಿವಿಯಲ್ಲಿ ಹೆಸರನ್ನು ಮೂರು ಸಲ ಸೋದರಮಾವನೇ ಹೇಳಬೇಕೆಂದು ಅಮ್ಮನ ಅಕ್ಕ, ನಮ್ಮ ದೊಡ್ಡಮ್ಮನ ವಾದ. ಇಲ್ಲಿಲ್ಲ, ನಮ್ಮ ಕಡೆ ಹಂಗಿಲ್ಲ. ಮಗುವಿನ ತಂದೆಯೇ ಹೇಳಬೇಕು, ಆಗಲೇ ಮಗುವಿಗೆ ಶ್ರೇಯಸ್ಸು ಅಂತ ನಮ್ಮತ್ತೆಯ ವಾದ. ಹುಟ್ಟಿದಾಗಿನಿಂದಲೇ ನಾವು ಕರೆಯುತ್ತಿರುವ ಹೆಸರನ್ನು ಈಗ ಯಾರು ಕಿವಿಯಲ್ಲೇಳಿದರೇನು ಅನ್ನೋ ರಾಜೀವನ ವಿವೇಕವಾಣಿಯಲ್ಲಿ ವಾದ ವಿವಾದದಲ್ಲಿ ತೊಡಗಿಕೊಂಡಿದ್ದವರಿಗೆ ಆಸಕ್ತಿಯಿರಲಿಲ್ಲ ಎನ್ನುವುದು ಅವರ ಭಾವಭಂಗಿಯಿಂದಲೇ ಅರಿವಿಗೆ ಬರುತ್ತಿತ್ತು. ಮಗುವಿನ ಶ್ರೇಯಸ್ಸಿನ ವಿಚಾರವಾಗಿ ಬರೋಬ್ಬರಿ ಹತ್ತು ಹದಿನೈದು ನಿಮಿಷಗಳ ಕಾಲ, ಕಾಲವೇ ಚಲಿಸುವುದ ಮರೆತು ನಿಂತು ವೀಕ್ಷಿಸುವಂತಹ ಚರ್ಚೆಗಳಾಗಿ ಕೊನೆಗೆ ಅಲ್ಲೆಲ್ಲೋ ಗುಂಪಿನ ಮೂಲೆಯಿಂದ ಕೇಳಿಬಂದ “ಅದಕ್ಯಾಕ್ ಹಿಂಗ್ ಕಿತ್ತಾಡ್ತೀರ. ಹೆಂಗಿದ್ರೂ ಎರಡು ಕಿವಿ ಇದಾವಲ್ಲ. ಇಬ್ಬರ ಕೈಲೂ ಒಂದೊಂದು ಕಿವಿಯಲ್ಲಿ ಹೆಸರು ಕೂಗಿಸಿಬಿಡಿ” ಎಂಬ ಅಜ್ಞಾತವಾಣಿ ಎಲ್ಲರನ್ನೂ ನಿಬ್ಬೆರಗಾಗಿಸಿಬಿಟ್ಟಿತು. ಇಂತಹ ಅತ್ಯದ್ಭುತ ವಿಚಾರವನ್ನು ತಿಳಿಸಿದವರ್ಯಾರು ಅಂತ ಎಲ್ಲರೂ ಅತ್ತಿತ್ತ ಹುಡುಕಾಡಿದರು. ಎಲ್ಲರೂ ಅತ್ತಿತ್ತ ಕತ್ತು ಹೊರಳಾಡಿಸಿ ಹುಡುಕಾಡಿದರೂ ಹೇಳಿದವರ್ಯಾರೆಂದು ತಿಳಿಯಲಿಲ್ಲ. ವಿಚಾರ ಮುಖ್ಯ ವ್ಯಕ್ತಿಯಲ್ಲ ಎಂದು ನಿರ್ಧರಿಸಿಕೊಂಡು ಬಲಗಿವಿಯಲ್ಲಿ ಶಶಿ, ಎಡಗಿವಿಯಲ್ಲಿ ರಾಜೀವ ಏಕಕಾಲಕ್ಕೆ ರಾಧ ರಾಧ ರಾಧ ಎಂದು ಹೇಳಿದ್ದನ್ನು ನೋಡುವುದಕ್ಕೆ ಎಷ್ಟು ಮಜವಾಗಿತ್ತು ಅಂದರೆ ಅಷ್ಟು ಮಜವಾಗಿತ್ತು. ಸದ್ಯ, ಸುಮಾಳನ್ನು ಬಿಟ್ಟರೆ ನಮ್ಮಾಸ್ಪತ್ರೆಯವರಾರು ಇನ್ನೂ ಬಂದಿರಲಿಲ್ಲ ಅನ್ನೋದೊಂದೇ ಸಮಾಧಾನ ನನಗೆ. ನಾಮಕರಣದ ಸಮಯಕ್ಕೇ ಬಾರೋ ಎಂದು ಹಿಂದಿನ ದಿನ ಸಾಗರನಿಗೆ ಹೇಳಿದ್ದೆ. ಬರ್ತೀನಿ ಅಂದಿದ್ದ. ನಾಮಕರಣ ಮುಗಿದಾಗಲೂ ಬಂದಿರಲಿಲ್ಲ. ಇಷ್ಟು ಬೇಗ ಅಲ್ಲಿಗೋಗಿ ಏನು ಮಾಡೋದು, ಮಧ್ಯಾಹ್ನ ಊಟದಷ್ಟೊತ್ತಿಗೆ ಹೋದರೆ ಸಾಕು ಅಂದುಕೊಂಡನೋ ಏನೋ. 

ನಾಮಕರಣದ ಸಮಯದಲ್ಲಿ ಎತ್ತಿಕೊಂಡಾಗ ಸುಮ್ಮನಿರುತ್ತಿದ್ದ ರಾಧ ಕೇಕು ಕಟ್ಟು ಮಾಡಿಸುವಷ್ಟರಲ್ಲಿ ರಣಚಂಡಿಯಾಗಿಬಿಟ್ಟಿದ್ದಳು. ಅಳುತ್ತಲೇ ಇದ್ದವಳ ಕೈಯನ್ನು ನಾನು ರಾಜೀವ ಹೆಚ್ಚು ಕಡಿಮೆ ಬಲವಂತವಾಗಿಯೇ ಹಿಡಿದು ಕೇಕು ಕತ್ತರಿಸಿದೆವು. ಒಂಚೂರು ಅವಳಿಗೆ ತಿನ್ನಿಸಿದೆ. ಸಿಹಿ ಚಪ್ಪರಿಸುವವರೆಗೆ ಸುಮ್ಮನಿದ್ದು ಮತ್ತೆ ಅಳಲಾರಂಭಿಸಿದಳು. ಜನರನ್ನು ಕಂಡ ಗಾಬರಿಗೋ, ಮೈಮೇಲೇರಿದ ಒಡವೆಗಳು ಚುಚ್ಚುತ್ತಿತ್ತೋ, ಬಟ್ಟೆ ಬಿಗಿಯಾಗಿತ್ತೋ, ಸೆಖೆಯೋ…. ಯಾಕೆ ಅಳುತ್ತಿದ್ದಾಳೆ ಅನ್ನುವುದನ್ನು ತಿಳಿಯುವುದೇ ದುಸ್ತರವಾಗಿತ್ತು. “ಹಸಿವಾಗಿರಬೇಕು" ಎಂಬ ಮಾತನ್ನು ಕೇಳಿ ಇದ್ದರೂ ಇರಬಹುದೆಂದುಕೊಂಡು ಸ್ಟೇಜಿನ ಪಕ್ಕದಲ್ಲಿದ್ದ ರೂಮಿಗೆ ಹೋಗಿ ಮನೆಯಿಂದ ಮಾಡಿ ತಂದಿದ್ದ ರಾಗಿ ಸ್ಸರಿಯನ್ನು ಕುಡಿಸಿದೆ. ಕುಡಿದು ಮುಗಿಸಿದ್ದೇ ತಡ, ನಿದ್ರೆ ಹೋದಳು! ನಿದ್ರೆಗಾಗಿ ಅಳುತ್ತಿದ್ದಳೋ ಏನೋ ಅಂದುಕೊಂಡೆ. ಕೇಕೂ ಕಟ್ ಮಾಡಾಯ್ತು, ಇನ್ನೇನು ಊಟಾನೂ ಶುರುವಾಗ್ತದೆ. ಫೋಟೋ ಸೆಶನ್‌ಗೆ ಮಗಳೇ ಮಲಗಿಬಿಟ್ಟಳಲ್ಲ? ಹೋಗ್ಲಿ ಕೊನೆಗೆ ಹೊರಗಿಟ್ಟಿರೋ ತೊಟ್ಟಿಲಲ್ಲಾದ್ರೂ ಮಲಗಿಸುವ ಎಂದೆತ್ತಿಕೊಳ್ಳಲು ಹೋದೆ. ಕಿಟಾರೆಂದು ಕಿರುಚುವ ಮುನ್ನೆಚ್ಚರಿಕೆ ನೀಡಿದಳು. ಮನೆಯಲ್ಲೇ ತೊಟ್ಟಿಲಲ್ಲಿ ಮಲಗಿದವಳಲ್ಲ. ಇನ್ನು ಇಲ್ಲಿ ಮಲಗ್ತಾಳಾ? 

ಥೂ…… ಈ ಮಕ್ಕಳಿಗ್ಯಾಕೆ ಹುಟ್ಟಿದಾಗಿನಿಂದಲೇ ಮಾತು ಬರಬಾರದು….. ಏನುಕ್ ಅಳ್ತಾವೋ…… ಏನುಕ್ ನಗ್ತಾವೋ ಅಂತ ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಸುಸ್ತಾಗಿ ಹೋಗ್ತದೆ…… ಇನ್ನೇನ್ ಎಲ್ಲಾ ಅರ್ಥ ಮಾಡ್ಕಂಡೋ ಅಂತ ಬೀಗುವಷ್ಟರಲ್ಲಿ ಬ್ಬೆ ಬ್ಬೆ ಬ್ಬೆ ಅಂತ ತೊದಲಲಾರಂಭಿಸಿ ‘ನೀನಿಷ್ಟು ದಿನ ಅರ್ಥ ಮಾಡ್ಕಂಡಿದ್ದೆಲ್ಲ ವೇಸ್ಟು….. ಈಗ ಈ ತೊದಲು ಅರ್ಥ ಮಾಡ್ಕೋ ‘ಅಂತ ಸವಾಲಾಕ್ತವೆ… 

“ಆಗ್ಲಿಲ್ವ ತಿನ್ಸಿ…. ಆಗ್ಲಿಲ್ವ ತಿನ್ಸಿ…." ಅಂತ ಅಮ್ಮ ಎರಡ್ ಸಲ, ಅತ್ತೆ ಮೂರ್ ಸಲ ರಾಜೀವ ಒಂದ್ ಸಲ ಬಂದು “ಓ..... ಮಲಗಿಬಿಟ್ಳಾ' ಅನ್ನುವ ಉದ್ಗಾರದೊಂದಿಗೆ ಹೋದರು. ಮೂರನೇ ಸಲಕ್ಕೆ ಬಂದ ಅಮ್ಮ "ಸರಿ. ನೀನೋಗಿ ಬಂದವರನ್ನ ಮಾತನಾಡಿಸು. ನಾನೇ ನೋಡ್ಕೋತೀನಿ. ಎದ್ರೆ ಕರ್ಕಂಡ್ ಬರ್ತೀನಿ” ಎಂದರು. 

ನಾ ರೂಮಿನಿಂದೊರಗೆ ಬರುವುದನ್ನೇ ಕಾಯುತ್ತಿದ್ದಂತೆ ಜನರು ಸ್ಟೇಜಿನ ಕಡೆ ದಡಬಡನೆ ಹೆಜ್ಜೆ ಹಾಕಿದರು. ಮಗು ಹೊರಗೆ ಬಂತಾ ಇಲ್ಲವಾ ಅನ್ನುವುದವರಿಗೆ ಮುಖ್ಯವಾಗಿರಲಿಲ್ಲ. ಕೊನೆಗವರು ವಿಶ್ ಮಾಡಬೇಕಿದ್ದಿದ್ದು ನಮಗೇ ಅಲ್ಲವೇ…. ಮಗುವಿಗೇನು ಯಾರು ಬಂದಿದ್ದರು.... ಯಾರು ಬಂದಿರಲಿಲ್ಲವೆಂದು ತಿಳಿಯುತ್ತದೇನು? ರಾಧಳ ನಾಮಕರಣ ಕಮ್ ಹುಟ್ಟಿದಬ್ಬ ನನ್ನ ರಾಜೀವನ ಎರಡನೇ ರಿಸೆಪ್ಶನ್ನಿನಂತಾಯಿತು. ಅರ್ಧ ಘಂಟೆಯ ನಂತರ ಮಗಳು ಎದ್ದಳು. ಫೋಟೋಗೆ ಜೊತೆಯಾದಳು. ಮತ್ತೆ ಅಳುತ್ತಾ ದೂರಾದಳು. ಮಧ್ಯೆ ಮಧ್ಯೆ ಕಣ್ಣುಗಳು ಸಾಗರನನ್ನುಡುಕಾಡಿತು. ಕಾಣಲಿಲ್ಲ. ಬರಲಿಲ್ಲ ಕೊನೆಗೂ. 

ಕಾರ್ಯಕ್ರಮವೆಲ್ಲ ಮುಗಿದು ಮನೆಗೆ ಹೋದರೆ ಎಡಗೈ ಪೂರಾ ಪದ ಹಾಡುತ್ತಿತ್ತು. ಒಂದೇ ಸಮನೆ ಮಗಳನ್ನೆತ್ತಿಕೊಂಡಿದ್ದರ ಪರಿಣಾಮ. ಬೆಳಿಗ್ಗೆಯಿಂದ ಪಾರ್ಟಿ ಹಾಲಿನಲ್ಲಿ ರಂಪ ರಾಮಾಯಣ ಮಾಡಿದ್ದ ಮಗಳು ಮನೆ ತಲುಪಿ ಭಾರದ ಬಟ್ಟೆಗಳನ್ನ ಬೇಡದ ಒಡವೆಗಳನ್ನೆಲ್ಲ ತೆಗೆದು ಹಾಕುತ್ತಿದ್ದಂತೆಯೇ ಸಂಭ್ರಮದಿಂದ ಆಟವಾಡುವುದನ್ನು ಕಂಡು ಎಲ್ಲರಿಗೂ ನಗುವೋ ನಗು. ಪುಣ್ಯಕ್ಕೆ ಬೇಗ ನಿದ್ರೆ ಹೋದಳು. ಮಲಗುವ ಮುನ್ನ ಸಾಗರನ ನೆನಪಾಗದೆ ಇರಲಿಲ್ಲ. 

‘ಥ್ಯಾಂಕ್ಸ್’ ಎಂದು ಮೆಸೇಜಿಸಿದೆ. 

“?" 

‘ಗೊತ್ತಿಲ್ವೇನೋ! ಇವತ್ತು ಬರದೇ ಇದ್ದಿದ್ದಕ್ಕೆ’ 

“ಮ್. ಕೆಲಸವಿತ್ತು" 

‘ಮಗಳ ನಾಮಕರಣಕ್ಕೂ ಬರಲಾಗದಷ್ಟು ಕೆಲಸ?’ 

“ಹೂ. ನಿನ್ನ ಮಗಳ ನಾಮಕರಣಕ್ಕೆ ಬರದಷ್ಟು ಕೆಲಸವಿತ್ತು" 

‘ಓ! ಹಾಗೆ’ 

“ಹೂ” 

‘ಅಂತ ಕೆಲಸವೇನಿತ್ತು ಅಂತ ತಿಳಿಯಬಹುದಾ?’ 

“ಅಮೆರಿಕಾದಲ್ಲಿರೋ ನನ್ನ ಕಸಿನ್ ಸಿಸ್ಟರ್ ಮನೆಗೆ ಬಂದಿದ್ದಳು. ಅವರ ಜೊತೆಗೆ ಇರೋದು ಮುಖ್ಯವಾ…… ನಿನ್ನ ಮಗಳ ನಾಮಕರಣಕ್ಕೆ ಬರೋದು ಮುಖ್ಯವಾ? ಅಂತ ಯೋಚನೆ ಮೂಡಿ…… ಅಕ್ಕನ ಜೊತೆಗೆ ಇರೋದೇ ಮುಖ್ಯ ಅನ್ನಿಸಿತು ಅಷ್ಟೇ” 

‘ಹೌದಾ... ಓಕೆ….' 

“ಓಕೆ” ಕೈಗೆ ಸಿಗಂಗಿದ್ದಿದ್ರೆ ತೆಗೆದು ಕಪಾಳಕ್ಕೆ ನಾಲ್ಕು ಬಿಗಿಯುವಷ್ಟು ಸಿಟ್ಟು. ಪಾಪ, ಅವನದೇನು ತಪ್ಪು….. ನಾನೇ ಅಲ್ಲವಾ ವಿನಾಕಾರಣವೋ ಸಕಾರಣವೋ ಅವನನ್ನು ದೂರ ಮಾಡಿದ್ದು. ಈಗ ಬರಲಿಲ್ಲ ಬರಲಿಲ್ಲ ಅಂದರೆ? ಯಾವ ಸಂಬಂಧವೂ ಶಾಶ್ವತವಲ್ಲವಲ್ಲ. ‘ಯು ಆರ್‌ ಪೂರ್‌ ಇನ್‌ ಮೆಂಟೇನಿಂಗ್‌ ರಿಲೇಷನ್ಶಿಪ್ʼ ಅಂತಿರ್ತಾನೆ ಸಾಗರ. ನಿಜಾನೇ ಇರಬಹುದು ಎಂದುಕೊಳ್ಳುತ್ತಾ ಮಗಳ ಹಣೆಗೊಂದು ಮುತ್ತನಿತ್ತು ಮೆಸೇಜುಗಳನ್ನು ಡಿಲೀಟು ಮಾಡಿ ಕಣ್ಣು ಮುಚ್ಚಿದೆ. ನಾ ಕಣ್ಣು ಮುಚ್ಚುವುದನ್ನೇ ಕಾಯುತ್ತಿದ್ದಂತೆ ದೇಹ ನಿದ್ರೆಗೆ ಜಾರಿತು.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment