Mar 3, 2020

ಒಂದು ಬೊಗಸೆ ಪ್ರೀತಿ - 55

ಡಾ. ಅಶೋಕ್.‌ ಕೆ. ಆರ್.‌
ಚಿಕನ್ನಿನ ಮೂರು ಡ್ರೈ, ಮಟನ್ ಚಾಪ್ಸು, ಮಟನ್ ಬಿರಿಯಾನಿ, ನಾಟಿ ಕೋಳಿ ಸಾರು, ಮಲೆನಾಡು ಶೈಲಿಯ ಪೋರ್ಕು, ಅಣಬೆಯದೆರಡು ಡ್ರೈ, ನಾನ್ ವೆಜ್ ತಿನ್ನದವರಿಗೆ ಘೀ ರೈಸು, ದಾಲು, ಇದರ ಜೊತೆಗೆ ಮಾಮೂಲಿ ಸಾಂಬಾರು, ರಸಮ್ಮು, ಮೊಸರನ್ನ. ಕೊನೆಗೊಂದಷ್ಟು ಐಸ್ ಕ್ರೀಮು, ಐಸ್ ಕ್ರೀಮಿನ ಜೊತೆಗೆ ತಿನ್ನಲು ಬಿಸಿ ಬಿಸಿ ಜಾಮೂನು. ಹೊರಗೋಗುವ ಬಾಗಿಲಿನ ಬಳಿ ಥರಾವರಿ ಬೀಡ. ಮತ್ತೊಂದು ಕಡೆ ದೊಡ್ಡ ಬಾರ್ ಕೌಂಟ್ರು. ಕಿರುಬೆರಳ ಗಾತ್ರದ ಬಾಟಲಿಯಿಂದ ಹಿಡಿದು ಎರಡು ಲೀಟರ್ ಗಾತ್ರದ ಬಾಟಲಿಗಳೂ ಇದ್ದವು. ಅದೇನೇನು ಡ್ರಿಂಕ್ಸೋ ಏನು ಸುಡುಗಾಡೋ. ಊಟದ ಹಾಲಿನಲ್ಲಿ ಮೇಲಿದ್ದ ಜನರಿಗಿಂತ ಹೆಚ್ಚು ಜನರಿದ್ದರು. ಇಷ್ಟೆಲ್ಲ ತಿನ್ನೋಕೆ ಕುಡಿಯೋಕೆ ಇಟ್ರೆ ಪಾಪ ಗಂಡು ಹೆಣ್ಣೇ ಅನಾಥರಾಗ್ಬಿಡ್ತಾರೆ! ಮತ್ತೊಂದು ಮೂಲೆಯಲ್ಲಿ ಸ್ಪೀಕರ್‌ಗಳನ್ನು ಜೋಡಿಸುತ್ತಿದ್ದರು. ಇಷ್ಟೊತ್ತಾದರೂ ಯಾಕೆ ರೆಡಿ ಮಾಡಿಲ್ಲ ಅಂತ ಒಬ್ಬರು ಜೋರು ಮಾಡುತ್ತಿದ್ದರು. ಡ್ಯಾನ್ಸ್ ಕೂಡ ಇರ್ತದೆ. ಅಲ್ಲಿಗೆ ರಾಜೀವ ಹೊರಡುವುದು ತಡವೇ. ‘ಕೊನೇಪಕ್ಷ ರಾತ್ರಿ ಹೋಟೆಲಿಗೆ ಕಾರು ಓಡಿಸಿಕೊಂಡು ಹೋಗುವಷ್ಟಾದರೂ ಜ್ಞಾನ ಉಳಿಸಿಕೊಳ್ಳಿ!’ ಎಂದೆ. ನಗಾಡುತ್ತಾ ಬಾರ್ ಕೌಂಟರ್ ಕಡೆಗೆ ಅವರು ಹೋಗುವುದಕ್ಕೂ ಮಗಳು ಕಿಟಾರೆಂದು ಕಿರುಚಿ ಅಳಲಾರಂಭಿಸುವುದಕ್ಕೂ ಸರಿ ಹೋಯಿತು. ಹೊಟ್ಟೆ ಹಸಿವೋ ಏನೋ. ಒಂಚೂರು ಹಾಲು ಕುಡಿಸಿ, ಬ್ಯಾಗಿನಲ್ಲಿದ್ದ ಹಣ್ಣುಗಳನ್ನು ತಿನ್ನಿಸಿ ಬರುವ ಎಂದು ಮೇಲೆ ಬಂದೆ. ಸುಮಾಳ ಅಕ್ಕನನ್ನು ಹುಡುಕಿ ‘ಯಾವ್ದಾದರೂ ರೂಮು ಕೀ ಕೊಡಿ. ಮಗಳಿಗೆ ಹಾಲು ಕುಡಿಸಬೇಕು’ ಎಂದೆ. "ಸುಮ ನಿಮಗೇ ಅಂತಾನೆ ಒಂದು ರೂಮು ಖಾಲಿ ಇರಿಸಿದ್ಲು. ನೀವೇ ಇಟ್ಕೊಂಡಿರಿ” ಎಂದೇಳಿ ಕೀ ಕೊಟ್ಟರು. ಛೇ! ಛತ್ರದಲ್ಲೇ ರೂಮಿದೆ ಅಂದಿದ್ರೆ ಹೋಟೆಲ್ ಮಾಡ್ತಾನೇ ಇರಲಿಲ್ಲ. ಸುಮ್ನೆ ದುಡ್ದು ದಂಡವಾಯ್ತು. ಹಾಲು ಕುಡಿದ ಮಗಳು ಸಿಪ್ಪೆ ತೆಗೆದು ಚೆನ್ನಾಗಿ ಹಿಸುಕಿದ್ದ ಸೇಬಿನಹಣ್ಣಿನ ಎರಡು ತುಂಡು ತಿಂದು ನೀರು ಕುಡಿದಳು. ಇನ್ನುಳಿದ ಹಣ್ಣನ್ನು ನಾ ತಿಂದುಕೊಂಡೆ. ಹಂಗೇ ಇಟ್ಟರೆ ಕಪ್ಪಾಗಿ ಕೆಡ್ತದೆ. 

ಮಗಳನ್ನು ಎತ್ತಿಕೊಂಡು ಕೆಳಗೆ ಹೋದರೆ ಇವರಾಗಲೇ ಟೈಟು. ಎರಡನೇ ಪೆಗ್ಗೋ ಮೂರನೇ ಪೆಗ್ಗೋ. ರಾಮ್‌ಪ್ರಸಾದ್ ಜೊತೆ ಕುಳಿತು ಜೋರು ದನಿಯಲ್ಲಿ ಮಾತು - ನಗು. ಮಾತೆಲ್ಲ ರಾಜೀವನದೇ…… ರಾಮ್‌ಪ್ರಸಾದ್ ಮಧ್ಯೆ ಮಧ್ಯೆ ಹೂ…..ಹೂ...... ಎನ್ನುತ್ತಿದ್ದರು. ಅದರ ಮಧ್ಯೆ ಒಂದೊಂದು ಗುಟುಕೇರಿಸುತ್ತಾ ಮುಗುಳ್ನಗುತ್ತಿದ್ದರು. ‘ಈ ಯಪ್ಪ ಏನ್ ಪರಿಚಯವಾದ ಮೊದಲ ದಿನವೇ ಇಷ್ಟೊಂದು ತಲೆ ತಿಂತಿದ್ದಾನೆ’ ಎಂದು ಕಷ್ಟಪಟ್ಟು ನಗುತ್ತಿದ್ದಂತಿತ್ತು. ರಾಜೀವನ ಅವತಾರಕ್ಕೆ, ನಮ್ ಆಸ್ಪತ್ರೆಯ ಸಿಬ್ಬಂದಿಯ ಜೊತೆ ಬಿಡುಬೀಸಾಗಿ ಕುಳಿತಿರುವುದನ್ನು ಕಂಡು ನನಗೆ ಸಿಟ್ಟೇ ಬಂತು. ನನ್ನ ಜೊತೆ ಕೂತು ಡೀಸೆಂಟಾಗಿ ಎರಡು ಪೆಗ್ ಹಾಕಿಕೊಂಡು ರೂಮಿಗೆ ವಾಪಸ್ಸಾಗಿದ್ರೆ ಆಗ್ತಿರಲಿಲ್ವ ಇವರಿಗೆ? ದುಮುಗುಡುತ್ತಲೇ ಮುಖದ ಮೇಲೊಂದು ನಗುವನ್ನೊತ್ತಿಕೊಂಡು ಅವರು ಕುಳಿತಿದ್ದ ಟೇಬಲ್ಲಿನ ಕಡೆಗೋದೆ. ರಾಮ್ ಪ್ರಸಾದ್ ಕಡೆಗೆ ನೋಡಿ ಸಾರಿ ಎನ್ನುವಂತಹ ನಗು ಚೆಲ್ಲಿ ರಾಜೀವನೆಡೆಗೆ ಸಿಟ್ಟಿನಲ್ಲಿ ನೋಡಿದೆ. ನನ್ನ ಕಣ್ಣಲ್ಲಿದ್ದ ಸಿಟ್ಟನ್ನರಿಯುವ ಮಿತಿಯಿಂದಾಚೆ ಇದ್ದರು. “ಬಂದ್ಯಾ..... ತಗೋ ….. ಏನಾದ್ರೂ…. ವೈನ್ ಇದೆ….. ಬ್ರೀಝರ್ ಇದೆ…..” 

‘ಥೋ..... ಆ ದರಿದ್ರಾನೆಲ್ಲ ಯಾರ್ ಕುಡೀತಾರೆ’ 

“ಹಂಗೆಲ್ಲ ಬಯ್ಬಾರ್ದು…… ಹೋಗ್ಲಿ…… ಒಳ್ಳೊಳ್ಳೆ ನಾನ್ ವೆಜ್ ಐಟಮ್ಸ್ ಇದಾವೆ. ಹಾಕಂಡ್ ಬರ್ಲಾ” 

“ನೀವ್ ಇಲ್ಲೇ ಇರಿ. ನಾನ್ ತಗಂಡ್ ಬರ್ತೀನಿ” ರಾಮ್ ಪ್ರಸಾದ್ ಮೇಲೆದ್ದರು. ‘ಬೇಡಿ ಬೇಡಿ. ನೀವ್ ಕೂರಿ ಸರ್. ನಾನ್ ತರ್ತೀನಿ’ ಎಂದಿದ್ದಕ್ಕೆ “ಅದರಲ್ಲೇನಿದೆ ಕೂರಿ ಮೇಡಂ. ಹೇಗಿದ್ರೂ ನಮಗೆ ತರೋದಿಕ್ಕೆ ಹೋಗ್ತಿದ್ದೆ. ನಿಮಗೊಂದು ಪ್ಲೇಟು ತಂದರೆ ಕೈ ಸವದೋಗ್ತದಾ….” ಎಂದು ನಗುತ್ತಾ ಹೋದರು. ಅವರು ನಿಜ್ಜ ಊಟ ತರೋದಿಕ್ಕೆ ಹೋದರೋ ಅಥವಾ ರಾಜೀವನ ಕೊರೆತದಿಂದ ಬಚಾವಾಗಲು ಹೋದರೋ? 

“ಜೆಮ್ ಆಫ್ ಎ ಪರ್ಸನ್. ಜೆಂಟಲ್ಮನ್ ಜೆಂಟಲ್ಮನ್” ರಾಜೀವ ತಲೆದೂಗುತ್ತಾ ಹೇಳಿದರು. 

‘ಯಾರ್ರೀ?’ 

“ಇನ್ಯಾರು? ನಮ್ ರಾಮ್ ಪ್ರಸಾದು” 

‘ನಿಮ್ ರಾಮ್ ಪ್ರಸಾದೋ?!’ 

“ಹೂ ಮತ್ತೆ. ವೆರಿ ಗುಡ್ ಪರ್ಸನ್” 

‘ಜೊತೇಲಿ ಕೂತು ಎರಡು ಪೆಗ್ ಹಾಕಿದ್ದಕ್ಕೇ ಎಲ್ಲಾ ಗೊತ್ತಾಗೋಯ್ತ’ 

“ಅಫ್ ಕೋರ್ಸ್ ಯೆಸ್” 

‘ಸರಿ ಸರಿ. ನೀವೂ ಊಟ ಮಾಡ್ಕಳಿ. ಬೇಗ ಹೋಗುವ ಹೋಟೆಲ್ಲಿಗೆ’ 

“ಓ ಮೈ ಗಾಡ್. ಹೌ ಕ್ಯಾನ್ ದಟ್ ಬಿ ಪಾಸಿಬಲ್. ನೈಟ್ ಈಸ್ ಸ್ಟಿಲ್ ಯಂಗ್ ಮೈ ಲೇಡಿ” 

‘ರೀ. ಮಗಳನ್ನ ಮಲಗಿಸೋದು ಬೇಡವಾ!’ 

“ಐ ಟೋಲ್ಡ್ ಯು …. ವಿ ಶುಡ್ ನಾಟ್ ಹ್ಯಾವ್ ಬ್ರಾಟ್ ಹರ್ ಹಿಯರ್….." 

‘ಮ್. ಸರಿ ಸರಿ. ನೀವ್ ಕುಡೀರಿ. ಕುಡೀತಾನೇ ಇರಿ. ನಾ ಊಟ ಮಾಡ್ಕಂಡು…… ಇಲ್ಲೇ ಒಂದ್ ರೂಮ್ ಕೀ ಕೊಟ್ಟಿದ್ದಾರೆ. ಅಲ್ಲೇ ಮಲಗ್ತೀನಿ. ರೂಮು ನಂಬರ್ ಹನ್ನೆರಡು. ನೀವೂ ಕುಡಿದು ಕುಣಿದು ಮುಗಿದಾದ ಮೇಲೆ ಅಲ್ಲಿಗೆ ಬಂದುಬಿಡಿ' 

“ವೆರಿ ಗುಡ್ ಐಡಿಯಾ... ಐ ಲವ್ ಇಟ್” 

ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

‘ಕುಡಿದ್ ಮೇಲೆ ಇಂಗ್ಲೀಷ್‌ಗೇನೂ ಕಮ್ಮಿ ಇಲ್ಲ! ನಿಮ್ಮ ಬುದ್ಧಿ ಗೊತ್ತಿಲ್ವಾ ನಂಗೆ! ಅದಿಕ್ಕೆ ಒಂದೊಂದ್ ಜೊತೆ ಬಟ್ಟೆ ತಂದಿದ್ದೆ’ ಅವರ ಇಂಗ್ಲೀಷ್ ಪ್ರೀತಿಗೆ ನಗು ಮೂಡಿತ್ತು. ಅವರು ಎಷ್ಟು ಇಂಗ್ಲೀಷ್ ಮಾತಾಡ್ತಾರೆ ಅನ್ನೋದರ ಆಧಾರದ ಮೇಲೆ ಅವರೆಷ್ಟು ಕುಡಿದಿದ್ದಾರೆ ಅನ್ನೋದನ್ನ ನಿರ್ಧರಿಸಬಹುದಿತ್ತು! ಏನೋ ಅವರಿಗೂ ಸರಿ ಕೆಲಸ ಸಿಗಲಿಲ್ಲ, ಜೀವನದಲ್ಲಿ ಬೆಳವಣಿಗೆಯೇ ಇಲ್ಲ ಅಂತ ಕೊರಗು. ಮಜಾ ಮಾಡ್ಕೊಳ್ಲಿ. 

“ಐ ನೋ ಯು ಆರ್ ಅಮೇಜಿಂಗ್ಲಿ ಗುಡ್” ಎನ್ನುವಷ್ಟೊತ್ತಿಗೆ ರಾಮ್ ಪ್ರಸಾದ್ ಎರಡು ದೊಡ್ಡ ಪ್ಲೇಟಿನಲ್ಲಿ ಚಿಕನ್ನು ಮಟನ್ನು ಮಶ್ರೂಮುಗಳನ್ನಾಕಿಕೊಂಡು ಬಂದರು. ಒಂದು ಪ್ಲೇಟಿನಲ್ಲಿ ಬಣ್ಣವಿಲ್ಲದ ಪಾನೀಯವಿದ್ದ ಗ್ಲಾಸಿತ್ತು. ವೋಡ್ಕಾ ಇರಬೇಕಲ್ವ? ಗ್ಲಾಸನ್ನು ನನ್ನ ಮುಂದೆ ಇಡುತ್ತಾ “ತಗೊಳ್ಳಿ” ಎಂದರು. 

‘ಅಯ್ಯೋ ನೀವ್ ಕನ್ ಫ್ಯೂಸ್ ಮಾಡ್ಕೋಬಿಟ್ರಿ. ಇವರು ಸುಮ್ನೆ ತಮಾಷೆಗೆ ಕೇಳಿದ್ದು. ನಾನ್ ಕುಡಿಯೋದಿಲ್ಲ’ ಎಂದೆ ಗ್ಲಾಸನ್ನು ಎತ್ತಿ ಅವರಕಡೆಗೆ ಇಡುತ್ತಾ. ನಾ ಎತ್ತಿಟ್ಟ ಗ್ಲಾಸನ್ನು ಮತ್ತೆ ನನ್ನ ಮುಂದೆಯೇ ಇಡುತ್ತಾ “ನೀವು ಕನ್ ಫ್ಯೂಸ್ ಆಗಿದ್ದೀರ. ಇದು ಡ್ರಿಂಕ್ಸ್ ಅಲ್ಲ. ಸೆವೆನ್ ಅಪ್ ಅಷ್ಟೆ” ಎಂದರು. ‘ಓ ಹೌದಾ' ಎಂದು ನಗಾಡುತ್ತಾ ಎರಡೇ ಎರಡು ಹನಿ ಬಾಯೊಳಗಾಕಿಕೊಂಡೆ. ಸೆವೆನ್ ಅಪ್ಪೇ ಹೌದು. 

ಎರಡು ಪೀಸ್ ಚಿಕನ್ ಸುಕ್ಕಾ ತಿನ್ನುವಷ್ಟರಲ್ಲಿ ದೊಡ್ಡ ಗ್ಲಾಸಿನಲ್ಲಿದ್ದ ಸೆವೆನ್ ಅಪ್ ಕುಡಿದು ಮುಗಿಸಿದೆ. ಬೇಗ ಬೇಗನೆ ಕುಡಿದಿದ್ದಕ್ಕೋ ಏನೋ ರೀಸಸ್ಸಿಗೆ ಆತುರವಾಯಿತು. ರಾಜೀವನ ಕೈಗೆ ಮಗಳನ್ನು ಕೊಡಲೋದೆ. “ನಂಗ್ ಬೇಡಪ್ಪ” ಅಂತ ಕೈ ಕೊಡವಿದರು. ‘ಅಯ್ಯೋ ನಿಮ್ಮ. ವಾಶ್ ರೂಮಿಗೆ ಹೋಗಿ ಬರಬೇಕ್ರಿ. ಒಂದ್ನಿಮಿಷ ಇಟ್ಕಂಡಿರಿ’ ಎಂದು ಮೆಲ್ಲಗಿನ ದನಿಯಲ್ಲಿ ಹೇಳಿ ಮಗಳನ್ನು ಕೊಟ್ಟೆ. ಕೇಳಿಸಿದರೂ ಕೇಳಿಸದಂತೆ ಕುಳಿತಿದ್ದರು ರಾಮ್ ಪ್ರಸಾದ್. ಆಸ್ಪತ್ರೆ ಸ್ಟಾಫ್ ಜೊತೆ ಹೋಗೋದ್ ಬಿಟ್ಟು ಈ ರಾಮ್ ಪ್ರಸಾದ್ ಯಾಕೆ ರಾಜೀವನೊಟ್ಟಿಗೆ ಕುಳಿತಿದ್ದಾರೋ ಎಂದುಕೊಳ್ಳುತ್ತಾ ರೂಮಿನ ಕಡೆಗೋಡಿದೆ. ಈ ರೇಷ್ಮೆ ಸೀರೆ ಹಾಕಂಡ್ ಟಾಯ್ಲೆಟ್ಟಿಗೆ ಹೋಗೋ ಕರ್ಮ ಶತ್ರುವಿಗೂ ಬೇಡ. ಒಂದು ನಿಮಿಷದ ಕೆಲಸಕ್ಕೆ ಹತ್ತು ನಿಮಿಷವಾಯಿತು. ರೇಷ್ಮೆ ಸೀರೆಗೆ ನೀರು ತಾಕದಂತೆ ನೋಡಿಕೊಳ್ಳಬೇಕಲ್ಲಾ...... ಮುಗಿಸಿ ಊಟದ ಹಾಲಿಗೆ ಬಂದರೆ ಸೂರು ಕಿತ್ತೋಗುವಷ್ಟು ದೊಡ್ಡ ದನಿಯ ಸಂಗೀತ. ಸ್ಪೀಕರುಗಳಿಟ್ಟಿದ್ದ ಜಾಗದ ಸುತ್ತಮುತ್ತಲೆಲ್ಲ ಜನರು ಕುಣಿದಾಡುತ್ತಿದ್ದರು. ಬಹುತೇಕರ ಕೈಯಲ್ಲಿ ಗ್ಲಾಸು, ಕೆಲವು ಖಾಲಿ ಕೆಲವು ಫುಲ್ಲು.. ಇವರು ಕುಳಿತಿದ್ದ ಟೇಬಲ್ಲಿನ ಕಡೆ ನೋಡಿದೆ. ಯಾರೂ ಇರಲಿಲ್ಲ. ಟೇಬಲ್ಲಿನ ಮೇಲಿದ್ದ ಗ್ಲಾಸುಗಳು ಖಾಲಿಯಾಗಿದ್ದವು. ಇಲ್ಲೇ ಎಲ್ಲೋ ಇರ್ತಾರೆ ಅಂತ ಅತ್ತಿತ್ತ ಕಣ್ಣಾಡಿಸಿದಾಗ ರಾಜೀವ ಕಂಡರು. ನೃತ್ಯ ಮಾಡುತ್ತಿದ್ದ ಗುಂಪಿನಲ್ಲಿದ್ದರು. ಕೈಯಲ್ಲೊಂದು ಮಡಿಕೇರಿಯ ಹೋಮ್ ಮೇಡ್ ವೈನಿನ ಬಾಟಲಿ. ಮಗಳಿರಲಿಲ್ಲ. ಮಗಳೆಲ್ಲಿ ಬಿಟ್ರು, ಯಾರಿಗೆ ಕೊಟ್ರು ಅನ್ನೋ ಪ್ರಶ್ನೆಗಳನ್ನು ತಲೆಯಲ್ಲಿ ತುಂಬಿಕೊಂಡು ಅವರ ಬಳಿಗೆ ಓಡಿದೆ. 

“ಕಮಾನ್ ಡಾರ್ಲಿಂಗ್. ಜಾಯಿನ್ ದಿ ಡ್ಯಾನ್ಸ್ ಪಾರ್ಟಿ” ನನಗೇನೋ ಡ್ಯಾನ್ಸ್ ಮಾಡಲಿಷ್ಟವೇ….. ರಾಧ….. 

‘ನಿಮ್ ಡ್ಯಾನ್ಸ್ ಗಿಷ್ಟು ಬೆಂಕಿ ಹಾಕ..... ಮಗಳೆಲ್ರೀ......' ಸಂಗೀತದಬ್ಬರ, ಕುಡಿತದ ಅಮಲಿನಲ್ಲಿ ರಾಜೀವನಿಗೆ ವಿಷಯ ಮುಟ್ಟಿಸಲು ಮೂರು ಸಲ ಕಿರುಚಿದೆ. 

“ಶೀ ಇಸ್ ವಿತ್ ರಾಮ್” ರಾಜೀವನ ಕೆನ್ನೆಗೆ ಬಾರಿಸಿಬಿಡುವಷ್ಟು ಕೋಪ ಮನದಲ್ಲಿ ಮೂಡಿತಾದರೂ ಇದು ಕೋಪಿಸಿಕೊಳ್ಳುವ ಸಮಯವಲ್ಲ ಎಂದರಿತು 'ಎಂಥಾ ಅಪ್ಪ ಈ ಮನುಷ್ಯ’ ಅಂತ ಮನಸಲ್ಲೇ ಬಯ್ದುಕೊಂಡು ರಾಮ್ಪ್ರಸಾದ್‌ಗಾಗಿ ಅತ್ತಿತ್ತ ಕಣ್ಣಾಡಿಸಿದಾಗ ಎಲ್ಲೂ ಕಾಣಲಿಲ್ಲ. ರಾಮ್ಪ್ರಸಾದ್ ಹತ್ರ ಮಗಳಿದ್ದಾಳೆ ಅನ್ನೋ ಸಮಾಧಾನ, ಮಗಳೆಲ್ಲಿ ಆಗುಂತಕನ ಜೊತೆ ಇದ್ದೀನಿ ಅಂತ ಅತ್ತು ರಂಪ ಮಾಡ್ತಿದ್ದಾಳೋ ಅನ್ನೋ ಆತಂಕ. ಹಾಲಿನಲ್ಲೆಲ್ಲೂ ರಾಮ್‌ಪ್ರಸಾದ್ ಕಾಣಿಸಲಿಲ್ಲ. ಹೆಚ್.ಆರ್ ವಿಭಾಗದಲ್ಲಿ ರಾಮ್‌ಪ್ರಸಾದ್ ಜೊತೆ ಕೆಲಸ ಮಾಡುವ ಮೀರಾ ಎದುರಿಗೆ ಸಿಕ್ಕರು. ‘ಎಲ್ಲಿ ಸರ್ರು’ ಅಂತ್ ಕೇಳಿದೆ. “ಹೊರಗಡೆ ಹೋಗ್ತಿದ್ರು. ಕೈಯಲ್ಲೊಂದು ಮಗು ಇತ್ತು. ಬಹುಶಃ ನಿಮ್ಮ ಮಗಳೇ ಅನ್ಸುತ್ತೆ” ಎಂದರು. ಅವರ ಮಾತಿನಲ್ಲಿ ಕುಹಕವಿತ್ತೆಂದು ವಿನಾಕಾರಣ ನನಗನ್ನಿಸಿತು. ಹೊರಗೋಡಿದೆ. 

ಅಲ್ಲೇ ಇದ್ದ ಕಟ್ಟೆಯ ಮೇಲೆ ಮಗಳನ್ನು ಮಡಿಲಲ್ಲಿರಿಸಿಕೊಂಡು ಕುಳಿತಿದ್ದರು. ರಾಮ್ ಪ್ರಸಾದ್. ಅವರ ಜೇಬಿನಲ್ಲಿದ್ದ ಪೆನ್ನನ್ನು ಹೊರತೆಗೆಯಲೆತ್ನಿಸುತ್ತಾ ಆಟವಾಡುತ್ತಿದ್ದಳು ರಾಧ. ಸಮಾಧಾನವಾಯಿತು. ನನ್ನನ್ನು ಕಂಡು ಮಗಳನ್ನೆತ್ತಿಕೊಂಡು ಎದ್ದು ನಿಂತರು. 

‘ಸಾರಿ. ಸುಮ್ನೆ ತೊಂದರೆಯಾಯ್ತು ನಿಮಗೆ’ ಹೆಚ್ಚಿನ ಪದಗಳು ಬರದಷ್ಟು ನಾಚಿಕೆಯಾಗಿತ್ತು ರಾಜೀವನ ವರ್ತನೆಯಿಂದ. ನನ್ನತ್ತ ಕೈಚಾಚಿದ ಮಗಳನ್ನೆತ್ತಿಕೊಂಡೆ. 

“ಅಯ್ಯೋ ತೊಂದರೆಯೇನು! ನನಗೆ ಮಕ್ಕಳೆಂದ್ರೆ ಬಲೇ ಇಷ್ಟ. ರಿತಿಕಾಳನ್ನ ಎತ್ತಿ ಬೆಳೆಸಿದ್ದೇ ನಾನು. ಒಳಗಡೆ ಜೋರು ಮ್ಯೂಸಿಕ್ ಹಾಕ್ದಾಗ ಅಳ್ತಿದ್ಲಾ….. ಅದಿಕ್ಕೆ ಹೊರಗೆ ಬಂದಿದ್ದೆ ಅಷ್ಟೇ” ರಾಜೀವನೇ ಮಗಳನ್ನಿವರಿಗೆ ಸಾಗ ಹಾಕಿ ಕುಣಿಯಲು ಹೋದರೋ ಇವರೇ ಮಗಳನ್ನು ಕೇಳಿ ಈಸ್ಕೊಂಡ್ರೋ ಗೊತ್ತಾಗಲಿಲ್ಲ. 

ಒಂದು ಥ್ಯಾಂಕ್ಸ್ ಹೇಳಿ ರೂಮಿಗೋಗಿ ಮಗಳಿಗೊಂದಷ್ಟು ತಿನ್ನಿಸಿ ಮಲಗಿಸಿದೆ. ಬೆಳಿಗ್ಗೆಯಿಂದ ಓಡಾಟ, ಸುಸ್ತು. ನನಗೂ ಕಣ್ರೆಪ್ಪೆ ಎಳೆಯುತ್ತಿತ್ತು. ಇವರು ಬರುವವರೆಗೂ ಮಲಗುವುದು ಬೇಡ. ಅರ್ಧಂಬರ್ಧ ನಿದ್ರೆಯಾಗ್ತದೆ ಎಂದುಕೊಂಡೆನಾದರೂ ದೇಹ ಮಾತು ಕೇಳಲಿಲ್ಲ. ಕಣ್ಣು ಮುಚ್ಚಿದವಳಿಗೆ ಎಚ್ಚರವಾದಾಗ ಘಂಟೆ ಆರಾಗಿತ್ತು. ಇವರು ಪಕ್ಕದಲ್ಲಿ ಮಲಗಿದ್ದರು. ಗಬ್ಬು ನಾತ. ಅದ್ಯಾವಾಗ ಬಂದರಿವರು? ನಾ ಎದ್ದು ಬಾಗಿಲು ತೆಗೆದದ್ದ್ಯಾವಾಗ? 

ಮುಹೂರ್ತ ಎಂಟಕ್ಕಿತ್ತು. ಇವರೇನು ಅಷ್ಟೊತ್ತಿಗೆಲ್ಲ ಎದ್ದು ಬರುವ ಲಕ್ಷಣವಿಲ್ಲ. ಏಳರಷ್ಟೊತ್ತಿಗೆ ನಾ ತಯಾರಾಗಿ ಮಗಳನ್ನು ಎಬ್ಬಿಸಿ ರೆಡಿ ಮಾಡಿಕೊಂಡು ಸುಮಳಿದ್ದ ಕೊಠಡಿಗೆ ಹೋದೆ. “ಹೆಂಗೋ ಮುಹೂರ್ತಕ್ಕಾದ್ರೂ ನಾ ರೆಡಿಯಾಗೋಕೆ ಮುಂಚೆ ಬಂದ್ಯಲ್ಲ…… ನಿದ್ರೆ ಚೆನ್ನಾಗಿ ಬಂತಾ....... ಎಲ್ಲಿ ಹಸ್ಬೆಂಡು …… ಊಟ ಚೆನ್ನಾಗಿತ್ತಾ……. ಮಗಳಿಗೆ ಏನು……” 

‘ಅದೆಷ್ಟ್ ಪ್ರಶ್ನೆ ಕೇಳ್ತಿ. ರೆಡಿಯಾಗವ್ವ ಮೊದ್ಲು’ ಅಂತ ಬಯ್ಯುವವರೆಗೂ ಅವಳ ಪ್ರಶ್ನೆಗಳು ಮುಗಿಯಲಿಲ್ಲ. 

ಮುಹೂರ್ತ ಮುಗಿದ ಮೇಲೆ ಬೆಳಿಗ್ಗೆ ಬಂದವರ ಜೊತೆಗೊಂದಷ್ಟು ಫೋಟೋ ತೆಗಿಸಿಕೊಳ್ಳುವ ಪುಟ್ಟ ರಿಸೆಪ್ಶನ್ ಶುರುವಾಯಿತು. ಇನ್ನೇನು ಎಲ್ಲಾ ಮುಗೀತಲ್ಲ ಹೊರಡ್ತೀವಿ ಅಂತೇಳಿ ರೂಮಿಗೆ ಬಂದರೆ ಆಗಷ್ಟೇ ಕಣ್ಣು ತೆರೆದು ಅರೆಮಂಪರು ವ್ಯವಸ್ಥೆಯಲ್ಲಿದ್ದ ರಾಜೀವ. ರಾತ್ರಿ ಅವರು ನಡೆದುಕೊಂಡಿದ್ದೆಲ್ಲ ಹೇಳಿ ಜಗಳವಾಡಬೇಕು….. ಇಲ್ಲಿ ಬೇಡ..... ಊರಿಗೋದ ಮೇಲೆ. ಎದ್ದವರು ಮುಖಕ್ಕೊಂದಷ್ಟು ನೀರು ಚಿಮುಕಿಸಿಕೊಂಡ ಮೇಲೆ ಹೋಟೆಲ್ಲಿಗೆ ಹೋದೆವು. "ಅಸಾಧ್ಯ ತಲೆನೋವು" ಎಂದು ಗೊಣಗುತ್ತಾ ರೂಮಿಗೇ ಎರಡಿಡ್ಲಿ ತರಿಸಿಕೊಂಡು ತಿಂದು “ಒಂದರ್ಧ ಘಂಟೆ ಮಲಗ್ತೀನಿ. ಹೊರಡುವ” ಎಂದರು. ಅವರರ್ಧ ಘಂಟೆ ಎಂದರೆ ಅದು ಕನಿಷ್ಠ ಎರಡು ಘಂಟೆ ಗರಿಷ್ಠ ನಾಲ್ಕು ಘಂಟೆ. ಇವತ್ತಿನ ಮಟ್ಟಿಗೆ ಗರಿಷ್ಠ ದಾಖಲೆ ಮುರಿದರೂ ಅಚ್ಚರಿಯಿಲ್ಲ. 

ಕೊನೆಗವರು ಎದ್ದಿದ್ದು ಮಧ್ಯಾಹ್ನ ಎರಡಕ್ಕೆ. ಮಗಳಿಗೆರಡು ಇಡ್ಲಿ ನನಗೊಂದು ರೈಸ್ ಬಾತ್ ತರಿಸಿಕೊಂಡು ತಿಂದು ಮುಗಿಸಿದ್ದೆ. “ಓ... ಆಗ್ಲೇ ಎರಡಾಗೋಯ್ತ” ಅಂದ್ಕೋತಾ ಸ್ನಾನಕ್ಕೋಗಿ ಬಂದವರು ಮತ್ತೆರಡು ಇಡ್ಲಿ ತರಿಸಿ ತಿಂದು ಮುಗಿಸಿದ ಮೇಲೆ ಮೈಸೂರಿನ ಕಡೆಗೆ ಹೊರಟೆವು. ಒಂದು ಮಾತು ತುಟಿಕ್ ಪಿಟಿಕ್ ಅನ್ನದೆ ಅವರ ಯಾವ ಪ್ರಶ್ನೆಗೂ ಉತ್ತರಕೊಡದೆ ಮೌನಕ್ಕೆ ಶರಣಾಗಿಬಿಟ್ಟಿದ್ದೆ. ಅವರ ವರ್ತನೆ, ಅವರ ವರ್ತನೆ ನನ್ನಲ್ಲಿ ಮೂಡಿಸಿದ ಬೇಸರ ಮಗಳ ಜೊತೆಗಿನ ಮೊದಲ ಸುತ್ತಾಟವನ್ನು ನೀರಸಗೊಳಿಸಿಬಿಟ್ಟಿತು.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment