Oct 15, 2019

‘ಅಸುರನ್’: ಸಹಜತೆಗೆ ಹತ್ತಿರವಿರುವ ಒಳ್ಳೆಯ ಪ್ರಯತ್ನದ ಚಲನಚಿತ್ರ

ನಂದಕುಮಾರ್ ಕೆ ಎನ್. ಕುಂಬ್ರಿಉಬ್ಬು
ಅಸುರನ್ ಇಂದಿನ ದಿನಗಳಲ್ಲಿ ಬಂದಿರುವ ವಿರಳ ಚಿತ್ರಕಥೆ ಹೊಂದಿರುವ ಸಿನಿಮಾ. ವೆಟ್ರಿಮಾರನ್ ಇದರ ನಿರ್ದೇಶಕ. ಒಳ್ಳೆಯ ಛಾಯಾಗ್ರಹಣ, ಒಳ್ಳೆಯ ದೃಶ್ಯಸಂಯೋಜನೆ. ಚಿತ್ರದಲ್ಲಿ ಸಹಜತೆ ಹೆಚ್ಚು ಇದೆ.. ಪರವಾಗಿಲ್ಲ ಎನ್ನಬಹುದಾದ ಸಂಗೀತವಿದೆ.

ತಮಿಳಿನ ಧನುಷ್ ಹಾಗೂ ಮಲೆಯಾಳಂ ನ ಮಂಜು ವಾರಿಯರ್ ಮುಖ್ಯ ತಾರಾಗಣದಲ್ಲಿರುವ ಈ ಸಿನಿಮಾ ಜಾತೀಯತೆಯ ಮನಸುಗಳು ಹಾಗೂ ಕ್ರೌರ್ಯಗಳ ಕೆಲವು ಮುಖಗಳನ್ನು ಅನಾವರಣಗೊಳಿಸುತ್ತದೆ. ಕಥಾನಾಯಕನ ಕುಟುಂಬದ ಸುತ್ತಾ ಈ ಕಥೆಯನ್ನು ಹೆಣೆಯಲಾಗಿದೆ. ತಮಿಳಿನ ಪೂಮಣಿ ಬರೆದ ವೆಕೈ ಎಂಬ ಕಾದಂಬರಿ ಆದಾರಿತ ಚಿತ್ರವಿದು.

ಧನುಷ್ ರ ಅಭಿನಯ ಚೆನ್ನಾಗಿದೆ. ಎಲ್ಲಾ ಪಾತ್ರಧಾರಿಗಳು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ.

ಆರಂಭದ ಅಂದರೆ ಫ್ಲಾಶ್ ಬ್ಯಾಕ್ ಬರುವವರೆಗೂ ಚಿತ್ರದಲ್ಲಿ ಬಿಗಿತನ ಕಾಣುವುದಿಲ್ಲ. ಆ ಸನ್ನಿವೇಶಗಳಿಗೆ ತಕ್ಕಂತಹ ಭಾವಗಳನ್ನು, ಗಾಢತೆಗಳನ್ನು ವೀಕ್ಷಕರಿಗೆ ಮೂಡಿಸುವಲ್ಲಿ ಯಶಸ್ಸು ಕಾಣುವುದಿಲ್ಲ. ನಂತರದ ಚಿತ್ರ ನಿರ್ದೇಶಕರ ಹಿಡಿತ, ಪಾತ್ರಧಾರಿಗಳ ಅಭಿನಯ ಗಾಢತೆಯನ್ನು ಸನ್ನಿವೇಶಗಳನ್ನು ವೀಕ್ಷಕರಿಗೆ ಗಾಢವಾಗಿ ತಟ್ಟುವಂತೆ ಕಥೆಯನ್ನು ನಿರೂಪಿಸುತ್ತಾ ಹೋಗುತ್ತದೆ.

ಚಿತ್ರದ ಕಥೆಯಲ್ಲಿಯೇ ಜಾತೀಯತೆಯ ಕ್ರೌರ್ಯ ಹಾಗೂ ಶೋಷಣೆ ಆ ಊರಿನ ಸುತ್ತಮುತ್ತಲಿನ ಸಾಮಾಜಿಕ ಸಮಸ್ಯೆಯಾಗಿ ಕಾಣುತ್ತಿದ್ದರೂ ಚಿತ್ರದಲ್ಲಿ ಅದು ಕಥಾನಾಯಕನ ಕುಟುಂಬಕ್ಕೂ ಆ ಊರಿನ ಆಸ್ತಿವಂತ ಕುಟುಂಬಕ್ಕೂ ನಡುವಿರುವ ಸಮಸ್ಯೆಯೆಂದು ಒತ್ತಿಹೇಳಲು ಬಹಳ ಪ್ರಯಾಸ ಪಡಲಾಗಿದೆ.

ಪೋಲೀಸ್ ಹಾಗೂ ನ್ಯಾಯಾಲಯಗಳ ಚಿತ್ರಣದಲ್ಲೂ ಹೇಗೆ ಜಾತೀಯತೆ ಸಮಾಜದ ಅಂತರ್ರಚನೆಯಲ್ಲೇ ಸೇರಿಕೊಂಡಿರುವ ವಿಚಾರ ಎನ್ನುವುದನ್ನು ಗೌಣಗೊಳಿಸಿ ತೋರಿಸಲಾಗಿದೆ. ಆ ಕ್ರೌರ್ಯದ ಗಾಢತೆಯನ್ನು ವೀಕ್ಷಕರಿಗೆ ಕಟ್ಟಿಕೊಡುವುದಿಲ್ಲ.

ಹೊಡೆದಾಟದ ದೃಶ್ಯಗಳಿಗೆ ಕೊಟ್ಟಷ್ಟು ಗಮನವನ್ನು, ಕಥೆ ಬಗ್ಗೆ, ಅದರ ಸಾಮಾಜಿಕ ಆಯಾಮಗಳ ಬಗ್ಗೆ, ಸನ್ನಿವೇಶಗಳನ್ನು ಗಾಢವಾಗಿ ಕಟ್ಟಿಕೊಡುವ ಬಗ್ಗೆ ನಿರ್ದೇಶಕರು ನೀಡಿದಂತೆ ಕಾಣಿಸುವುದಿಲ್ಲ.

ಸಾಮಾನ್ಯವಾಗಿ ಎಲ್ಲಾ ಸಾಮಾಜಿಕ ಸಮಸ್ಯೆಗಳನ್ನೊಳಗೊಂಡಿರುವ ಚಿತ್ರಗಳಂತೆ ವ್ಯಕ್ತಿ ಕೇಂದ್ರೀಕರಣವೇ ಎದ್ದು ಕಾಣಿಸುತ್ತದೆ. ಉಳಿದ ಜನ ಸಮೂಹ ಕೇವಲ ಸಕ್ರಿಯವಲ್ಲದ ಬೆಂಬಲ, ಇಲ್ಲವೇ ಮೂಕ ಪ್ರೇಕ್ಷಕರ ಮಟ್ಟಕ್ಕೆ ನಿಲ್ಲಿಸುತ್ತದೆ. ಒಂದು ಸನ್ನಿವೇಶದಲ್ಲಿ ಅದೂ ಕೊನೆಯ ಹೊಡೆದಾಟದ ಸನ್ನಿವೇಶದಲ್ಲಿ ಎಲ್ಲಾ ಮುಗಿದ ಮೇಲೆ ಸಮೂಹ ನಾಯಕನೊಂದಿಗೆ ಬಂದು ಸೇರಿಕೊಳ್ಳುವ ರೀತಿ ತೋರಿಸಲಾಗಿದೆ. ಅದರಲ್ಲೂ ಸಕ್ರಿಯತೆ ಇಲ್ಲ. ಮೇಲ್ಜಾತಿ ಆಸ್ತಿವಂತ ಕುಟುಂಬ ಮಾತ್ರ ಸಮೂಹವನ್ನು ತೊಡಗಿಸಿಕೊಳ್ಳುವುದನ್ನು ಸಹಜವೆಂಬಂತೆ ತೋರಿಸಲಾಗಿದೆ. ಆದರೆ ಆ ವ್ಯವಸ್ಥೆಯ ವಿರುದ್ಧ ನಿಂತು ಹೋರಾಡುವ ನಾಯಕನ ಹೋರಾಟ ಏಕಾಂಗಿಯನ್ನಾಗಿ ತೋರಿಸಲಾಗಿದೆ. ಆತ ತನ್ನ ಕುಟುಂಬದ ಹಲವರನ್ನು ಕಳೆದುಕೊಂಡರೂ ಕೊನೆಯವರೆಗೂ ಏಕಾಂಗಿ ಹೋರಾಟದ ದುರಂತ ವ್ಯಕ್ತಿಯನ್ನಾಗಿ ತೋರಿಸಿ ವೀಕ್ಷಕರ ಸಂತಾಪ ಗಿಟ್ಟಿಸಿಕೊಳ್ಳುವುದಕ್ಕೆ ಸೀಮಿತ ಮಾಡಿಡಲಾಗಿದೆ. ಪಂಚಾಯ್ತಿ ಸನ್ನಿವೇಶಗಳೂ ಕೂಡ ಪೇಲವವಾಗಿ ತೋರಿಸಲಾಗಿದೆ.ವೈಭವೀಕರಣಕ್ಕೆ ಒತ್ತು ಹೆಚ್ಚಿದೆ. 

ಆಸ್ತಿ ಸಂಪತ್ತನ್ನು ಕಸಿದುಕೊಳ್ಳಬಹುದು ಆದರೆ ಕಲಿತ ಶಿಕ್ಷಣವನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ ಹಾಗಾಗಿ ಚೆನ್ನಾಗಿ ಓದು ಎಂದು ಜೈಲುವಾಸವನ್ನು ಹೊತ್ತುಕೊಂಡು ಹೊರಟಿರುವ ನಾಯಕ ತನ್ನ ಬಾಕಿಯುಳಿದ ಒಬ್ಬನೇ ಮಗನಿಗೆ ಹೇಳುವ ದೃಶ್ಯದೊಂದಿಗೆ ಚಿತ್ರ ಕೊನೆಗೊಳ್ಳುತ್ತದೆ. ಇಂದಿನ ಸಂಧರ್ಭದಲ್ಲಿ ದಲಿತ ದಮನಿತ ಸಮೂಹಕ್ಕೆ ಈ ಮಾತುಗಳು ಕ್ಲೀಷೆಯ ಮಾತುಗಳೇ ಆಗಿವೆ. ಯಾಕೆಂದರೆ ಶಿಕ್ಷಿತರಾದ ಮಾತ್ರಕ್ಕೆ ದಲಿತ ದಮನಿತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬಹುದು ಎನ್ನುವುದು ವಾಸ್ತವವಲ್ಲ ತಾನೆ. 

ಒಟ್ಟಿನಲ್ಲಿ ಅಸುರನ್ ಸಿನಿಮಾ ಒಳ್ಳೇ ಪ್ರಯತ್ನವೆನ್ನಬಹುದು. ಇಂದಿನ ಕಾಲಘಟ್ಟದ ಸಂಕೀರ್ಣತೆಯಲ್ಲಿ ಇಂತಹ ಸಿನಿಮಾಗಳಿಂದ ಹೆಚ್ಚಿನ ಕೊಡುಗೆಯೇನೂ ಇಲ್ಲ. ಜಾತೀಯತೆಯಂತಹ ವಿಚಾರ ಇಟ್ಟುಕೊಂಡು ಸಿನಿಮಾ ಮಾಡಿ ಆರ್ಥಿಕವಾಗಿಯೂ ಯಶಸ್ವಿಯಾಗಿದ್ದಾರಲ್ಲ ಎಂಬ ಸಮಾಧಾನ ಪಡಲು ಅಡ್ಡಿಯಿಲ್ಲ. ನಿರ್ದೇಶಕರ ನಿರ್ಮಾಪಕರ ಇಂತಹ ಪ್ರಯತ್ನಗಳನ್ನು ಮೆಚ್ಚಬಹುದು.

ಅದಕ್ಕಿಂತ ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ.

No comments:

Post a Comment