May 30, 2019

ದಕ್ಷಿಣವನ್ನು ಬಾಜಪ ಯಾಕೆ ಗೆಲ್ಲಲಾಗಲಿಲ್ಲ?

ಕು.ಸ.ಮಧುಸೂದನ
ದೇಶದ ಉದ್ದಗಲಕ್ಕೂ ತನ್ನ ಪ್ರಭಾವಳಿಯನ್ನು ವಿಸ್ತರಿಸಿ ಮುನ್ನೂರಕ್ಕೂ ಅಧಿಕಸ್ಥಾನಗಳನ್ನು ಗೆದ್ದ ಬಾಜಪ ದಕ್ಷಿಣ ಭಾರತದಲ್ಲಿ ಮಾತ್ರ ಬಹುತೇಕ ವಿಫಲವಾಗಿದೆ. ಕರ್ನಾಟಕ ಒಂದನ್ನು ಹೊರತು ಪಡಿಸಿದರೆ ಮಿಕ್ಕಂತೆ ಆಂದ್ರಪ್ರದೇಶ, ತಮಿಳುನಾಡು, ಪುದುಚೇರಿ, ಕೇರಳಗಳಲ್ಲಿ ಕನಿಷ್ಠ ಖಾತೆ ತೆರೆಯಲೂ ಅದು ವಿಫಲವಾಗಿದ್ದು ತೆಲಂಗಾಣದಲ್ಲಿ ಮಾತ್ರ ಕಷ್ಟ ಪಟ್ಟು ನಾಲ್ಕು ಸ್ಥಾನಗಳನ್ನು ಗೆದ್ದಿದೆ.

ಯಾವತ್ತಿಗೂ ಬಾಜಪ ಖಾತೆ ತೆರೆಯಲೇ ಅಸಾದ್ಯವೆಂಬ ಬಲವಾದ ಅನಿಸಿಕೆಯಿದ್ದ ಈಶಾನ್ಯಭಾರತದಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾದ ಅದು ದಕ್ಷಿಣದಲ್ಲಿ ನೆಲೆ ಕಂಡುಕೊಳ್ಳಲು ಏದುಸಿರು ಬಿಡುತ್ತಿರುವುದಾದರೂ ಯಾಕೆಂದು ವಿಶ್ಲೇಷಿಸುತ್ತ ಹೋದರೆ ಹಲವು ಐತಿಹಾಸಿಕ ಕಾರಣಗಳು ಕಂಡುಬರುತ್ತವೆ.

ಹಿಂದಿ ಭಾಷಿಕರ ಪಕ್ಷವೆಂಬ ನಂಬಿಕೆ:
ಬಾಜಪ ಅಸ್ತಿತ್ವಕ್ಕೆ ಬರುವ ಮೊದಲು ಇದ್ದ ಜನಸಂಘದ ಕಾಲದಿಂದಲೂ ದಕ್ಷಿಣ ಭಾರತೀಯರಲ್ಲಿ ಒಂದು ಭಾವನೆ ಬಲವಾಗಿ ಬೇರೂರಿ ಬಿಟ್ಟಿದೆ: ಅದೆಂದರೆ ಅದು ಸಂಘಪರಿವಾರವಿರಲಿ, ಜನಸಂಘವಿರಲಿ, ಇವತ್ತಿನ ಬಾಜಪ ಇರಲಿ, ಕೇವಲ ಹಿಂದಿ ಮಾತನಾಡುವ ಜನತೆಯ ಪಕ್ಷವೆಂದು. ಅದಕ್ಕೆ ತಕ್ಕಂತೆ ಬಾಜಪ ಘೋಷಿಸುವ ಬಹುತೇಕ ಯೋಜನೆಗಳು ಮತ್ತು ಕಾರ್ಯಕ್ರಮಗಳ ಹೆಸರುಗಳೆಲ್ಲವೂ ಹಿಂದಿ ಭಾಷೆಯಲ್ಲಿಯೇ ಇರುತ್ತವೆ. ಹೀಗಾಗಿ ಬಾಜಪ ಎನುವುದು ಉತ್ತರದವರ ಪಕ್ಷವೆಂಬ ನಂಬಿಕೆ ದಕ್ಷಿಣದ ಬಹುತೇಕ ಜನರಲ್ಲಿ ಬೇರೂರಿ ಬಿಟ್ಟಿದೆ. ಅದರಲ್ಲೂ ತಮಿಳುನಾಡು ಮತ್ತು ಕೇರಳಗಳಲ್ಲಿ ಇದು ಹೆಚ್ಚಾಗಿದೆ ಅನ್ನಬಹುದು. ಯಾಕೆಂದರೆ ಸ್ವಾತಂತ್ರಪೂರ್ವದಿಂದಲೂ ದಕ್ಷಿಣದ ರಾಜ್ಯಗಳು ಉತ್ತರದ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಲೇ ಬಂದಿವೆ. ಅದರಲ್ಲೂ ತಮಿಳುನಾಡಿನ ದ್ರಾವಿಡ ರಾಜಕಾರಣ ಉಗಮವಾಗಿದ್ದೇ ಉತ್ತರದವರ ಹಿಂದಿ ಹೇರುವ ನೀತಿಯನ್ನು ವಿರೋಧಿಸುವ ಉದ್ದೇಶದಿಂದಲೇ! ಹೀಗಾಗಿ ಇವತ್ತೇನೇ ದ್ರಾವಿಡ ಚಳುವಳಿ ತನ್ನ ಹಿಂದಿನ ಮೊನಚು ಕಳೆದುಕೊಂಡಿದ್ದರೂ ಮೂರು ತಲೆಮಾರಿನ ಹಿಂದಿ ವಿರೋಧಿ ಮನೋಭಾವನೆ ಇನ್ನೂ ಕಡಿಮೆಯಾದಂತೆ ಕಾಣುತ್ತಿಲ್ಲ.

ದಕ್ಷಿಣದಲ್ಲಿ ಫಲ ನೀಡದ ಹಿಂದುತ್ವದ ನೀತಿಉತ್ತರಭಾರತದಲ್ಲಿ ಹಿಂದುತ್ವದ ನೀತಿ ಪರಿಣಾಮಕಾರಿಯಾಗಿ ಬಳಕೆಯಾದಷ್ಟು ದಕ್ಷಿಣದಲ್ಲಿ ತನ್ನ ಪ್ರಭಾವ ಬೀರಿಲ್ಲ. ಮತ್ತದಕ್ಕೆ ಕಾರಣ ಸ್ಪಷ್ಟ. ಉತ್ತರದವರ ದಾರ್ಮಿಕ ನಂಬಿಕೆಗಳಿಗೂ ದಕ್ಷಿಣದವರ ಧಾರ್ಮಿಕ ನಂಬಿಕೆಗಳಿಗೂ ಅಜಗಜಾಂತರ ವ್ಯತ್ಯಾಸವಿರುವುದು. ಅದೇ ರೀತಿ ಸಾಂಸ್ಕೃತಿಕವಾಗಿಯೂ ಉತ್ತರ ಮತ್ತು ದಕ್ಷಿಣದ ನಡುವೆ ಬಾರಿ ಅಂತರವಿರುವುದು. ಮತ್ತೆ ದ್ರಾವಿಡ ಚಳುವಳಿಗೆ ಬರುವುದಾದರೆ ವೈದಿಕ ಆಚರಣೆಗಳನ್ನು ವಿರೋಧಿಸುತ್ತಲೇ ದ್ರಾವಿಡ ಚಳುವಳಿ ತಮಿಳುನಾಡಿನಲ್ಲಿ ಅಸ್ಥಿತ್ವ ಕಂಡುಕೊಳ್ಳುತ್ತ ಬಂದಿತು. ಇದರ ಒಂದಷ್ಟು ಪ್ರಭಾವ ದಕ್ಷಿಣದ ಇತರೇರಾಜ್ಯಗಳಿಗೂ ಆಯಿತು.

ದಕ್ಷಿಣದಲ್ಲಿನ ಸಾಕ್ಷರತೆಯ ಪ್ರಮಾಣಉತ್ತರಕ್ಕೆ ಹೋಲಿಸಿದಲ್ಲಿ ದಕ್ಷಿಣ ಭಾರತದಲ್ಲಿ ಸಾಕ್ಷರತೆಯ ಪ್ರಮಾಣ ಅತ್ಯಂತ ಹೆಚ್ಚಿದೆ.ಇದರಿಂದಾಗಿ ಉತ್ತರದ ಅಶಿಕ್ಷಿತ ಮತ್ತು ಅರೆ ಶಿಕ್ಷಿತ ಜನ ಬಹುಬೇಗ ಭಾವನಾತ್ಮಕ ವಿಚಾರಗಳಿಗೆ ಮರುಳಾಗುತ್ತಾರೆ. ಭಾವನಾತ್ಮಕ ವಿಚಾರಗಳು ಉತ್ತರದಲ್ಲಿ ಬೀರಿದಷ್ಟು ಪ್ರಭಾವವನ್ನು ದಕ್ಷಿಣಭಾರತದಲ್ಲಿ ಬೀರುವುದಿಲ್ಲ. ಇದಕ್ಕೆ ಉದಾಹರಣೆಯೆಂದರೆ ಕೇರಳದ ಶಬರಿಮಲೈ ದೇವಸ್ಥಾನವನ್ನು ಚುನಾವಣೆಯ ವಸ್ತುವನ್ನಾಗಿಸಲು ಪ್ರಯತ್ನಿಸಿದ ಬಾಜಪ ಈ ಬಾರಿ ವಿಫಲವಾಯಿತು.

ಬಲಾಢ್ಯ ಪ್ರಾದೇಶಿಕ ಪಕ್ಷಗಳು, ನಾಯಕರುಗಳು:ಉತ್ತರ ಭಾರತದ ರಾಜ್ಯಗಳಿಗೂ ಮೊದಲೇ ದಕ್ಷಿಣದಲ್ಲಿ ಹಲವು ಬಲಿಷ್ಠ ಪ್ರಾದೇಶಿಕ ನಾಯಕರುಗಳು ರಾಜಕೀಯವಾಗಿ ನೆಲೆಕಂಡು ಕೊಂಡಿದ್ದರು. ಹಾಗಾಗಿ ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಮನೋಭಾವ ಉತ್ತರದವರಿಗಿಂತ ಹೆಚ್ಚು ಇರುವುದು ಕಂಡು ಬರುತ್ತದೆ. ಉದಾಹರಣೆಗೆ ತಮಿಳುನಾಡನ್ನು ನೋಡಬಹುದಾಗಿದೆ.ತಮಿಳುನಾಡಿನ ಮೊದಲ ದ್ರಾವಿಡ ಪಕ್ಷ ಡಿ.ಎಂ.ಕೆ. 1949ರಲ್ಲೇ ಸ್ಥಾಪನೆಯಾಗಿದ್ದರೆ, ಅದಕ್ಕೂ ಮುಂಚೆಯೇ 1917ರಲ್ಲಿಯೆ ಜಸ್ಟೀಸ್ ಪಾರ್ಟಿ ಸ್ಥಾಪನೆಯಾಗಿತ್ತು. ಇವೆಲ್ಲವು ಉತ್ತರದ ಹಿಂದಿ ಭಾಷೆಯನ್ನು ಮತ್ತು ಉತ್ತರದವರ ಆಕ್ರಮಣಾಕಾರಿ ಮನೋಭಾವವನ್ನು ವಿರೋಧಿಸಿ ಹುಟ್ಟಿಕೊಂಡ ಪಕ್ಷಗಳು. ಜೊತೆಗೆ ವೈದಿಕ ಧರ್ಮದ ಆಚರಣೆಗಳನ್ನು ವಿರೋಧಿಸುವ ಚಳುವಳಿಗಳನ್ನು ಈ ಪಕ್ಷಗಳು ನಿರಂತರವಾಗಿ ನಡೆಸುತ್ತಲೇ ಬಂದವು. ಇನ್ನು ಕೇರಳದಲ್ಲಿ ಸ್ವಾತಂತ್ರ ಪೂರ್ವದಿಂದಲೂ ಎಡಪಕ್ಷಗಳು ಸಕ್ರಿಯವಾಗಿದ್ದು ಸಹ ಬಾಜಪದಂತಹ ಬಲಪಂಥೀಯ ಪಕ್ಷವನ್ನು ತಿರಸ್ಕರಿಸಲು ಒಂದು ಕಾರಣವಾಯಿತು. ಎಂಭತ್ತರ ದಶಕದಲ್ಲಿ ಆಂದ್ರಪ್ರದೇಶದಲ್ಲಿ ಎನ್.ಟಿ.ರಾಮರಾವ್ ತೆಲುಗು ಸ್ವಾಬಿಮಾನವನ್ನೇ ಮುಖ್ಯ ವಿಷಯವನ್ನಾಗಿಟ್ಟುಕೊಂಡು ತೆಲುಗುದೇಶಂ ಪಕ್ಷ ಸ್ಥಾಪಿಸಿದ್ದು ಇವತ್ತಿಗೂ ತೆಲುಗರು ತಮ್ಮ ಸ್ವಾಬಿಮಾನಕ್ಕೆ ದಕ್ಕೆ ತರಬಲ್ಲ ಯಾವುದೇ ಪಕ್ಷಗಳನ್ನೂ ಸುಲಭಕ್ಕೆ ಒಪ್ಪಿಕೊಳ್ಳುವುದಿಲ್ಲ. ಪೆರಿಯಾರ್ ಅವರಂತವರ ವಿಚಾರದಾರೆಗಳು ಇವತ್ತಿಗೂ ದಕ್ಷಿಣ ಭಾರತದಲ್ಲಿ ತಮ್ಮ ಪ್ರಭಾವವನ್ನು ಉಳಿಸಿಕೊಂಡಿವೆ.

ಇವತ್ತು ಕರ್ನಾಟಕವನ್ನು ಹೊರತು ಪಡಿಸಿದರೆ ಮಿಕ್ಕೆಲ್ಲ ದಕ್ಷಿಣದ ರಾಜ್ಯಗಳೂ ತಮ್ಮವರೇ ಆದ ಬಲಿಷ್ಠ ನಾಯಕರನ್ನು, ಬಲಿಷ್ಠ ಪ್ರಾದೇಶಿಕ ಪಕ್ಷವನ್ನು ಹೊಂದಿವೆ. ಹೀಗಾಗಿ ಆ ರಾಜ್ಯಗಳಲ್ಲಿ ಬಾಜಪ ಗೆಲ್ಲಲು ಸಾದ್ಯವಾಗಿಲ್ಲ.

ಇನ್ನು ದಕ್ಷಿಣದ ಬಹುಮುಖ್ಯ ರಾಜ್ಯವಾದ ಕರ್ನಾಟಕದಲ್ಲಿ ಬಾಜಪ ಗೆಲ್ಲಲು ಇರಬಹುದಾದ ಕಾರೆಣಗಳನ್ನು ವಿಶ್ಲೇಷಿಸಲು ಪ್ರತ್ಯೇಕವಾಗಿಯೇ ಲೇಖನವೊಂದನ್ನು ಬರೆಯಬೇಕಾಗುತ್ತದೆ. 

ಕು.ಸ.ಮಧುಸೂದನ ರಂಗೇನಹಳ್ಳಿಯವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment