May 21, 2019

ಒಂದು ಬೊಗಸೆ ಪ್ರೀತಿ - 17

ಡಾ. ಅಶೋಕ್.‌ ಕೆ. ಆರ್.‌


ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

“ಅದನ್ನು ಅವತ್ತೇ ಹೇಳಿದ್ದೆ. ಅದಕ್ಕೆ ನನ್ನ ಉತ್ತರಾನೂ ಕೊಟ್ಟಿದ್ದೆ ಆಗಲೇ. ಮತ್ತೆ ಮತ್ತೆ ಅದನ್ನೇ ಹೇಳೋದಿಕ್ಕೆ ನನ್ನನ್ನು ಹುಡುಕೋ ಕಷ್ಟ ತೆಗೆದುಕೊಳ್ಳಬೇಡ. ಇನ್ನು ನೀನು ಹೋಗು”

‘ಯಾಕೋ ಹಿಂಗೆ ಹೋಗು ಹೋಗು ಅಂತೀಯ. ಫ್ರೆಂಡ್ಸಾಗಿರೋಣ ಕಣೋ ಮೊದಲಿನ ತರಾನೇ ಅನ್ನೋದ್ರಲ್ಲಿ ತಪ್ಪೇನಿದೆ. ನನಗೆ ನಿನ್ನ ಜೊತೆ ಮಾತಾಡ್ದೆ ಇದ್ರೆ ಬೇಜಾರಾಗುತ್ತೆ ಕಣೋ'

“ಮತ್ತೆ ಅದನ್ನೇ ಹೇಳ್ತೀಯಲ್ಲ! ನಾನು ನಿನ್ನ ಲವರ್ ಆಗಿ ಇರಬಲ್ಲೆ, ಫ್ರೆಂಡಾಗಲ್ಲ”

‘ಇದೇ ನಿನ್ನ ಕೊನೇ ತೀರ್ಮಾನಾನ?’

“ನನ್ನ ಮೊದಲ ತೀರ್ಮಾನವೂ ಅದೇ ಕೊನೇ ತೀರ್ಮಾನವೂ ಅದೇ”

‘ನಿನಗೆ ನನ್ನ ಜೊತೆ ಮಾತಾಡ್ದೆ ಇದ್ರೆ ಬೇಜಾರಾಗಲ್ವ?’

“ಆಗುತ್ತೆ”

‘ಮತ್ತೆ’

“ಬೇಜಾರಾಗುತ್ತೆ ಅಂತ ನಿನ್ನ ಜೊತೆ ಫ್ರೆಂಡ್ ತರ ನಾಟಕ ಮಾಡೋಕೆ ನನಗಿಷ್ಟವಿಲ್ಲ. ಇದ್ರೆ ಪ್ರೇಮಿಗಳ ತರ ಇರೋಣ. ಇಲ್ಲಾಂದ್ರೆ ಬೇಜಾರು ಮಾಡ್ಕೊಂಡೇ ಇರ್ತೀನಿ ಬಿಡು”

‘ನೋಡು ಹೆಂಗೆಲ್ಲ ಮಾತಾಡ್ತಿ. ನೀನು ಬೇಜಾರು ಮಾಡ್ಕೊಂಡು ಸಿಗರೇಟು ಸೇದ್ಕೊಂಡು ಸಪ್ಪಗೆ ಕುಳಿತಿದ್ರೆ ನನಗೆ ಖುಷಿಯೇನೋ’

“ನಾನು ಹೆಂಗಿದ್ರೆ ನಿನಗೆ ಏನಾಗ್ಬೇಕು? ನನ್ನ ಯೋಚನೆ ಬಿಡು”

‘ಅಂದ್ರೆ? ನಾನು ಇಷ್ಟಪಡೋ ಫ್ರೆಂಡ್ ಬಗ್ಗೆ ನಾನು ಇಷ್ಟೂ ಯೋಚನೆ ಮಾಡಬಾರದಾ?’

“ಇಷ್ಟಪಡ್ತೀನಿ ಅಂತೀಯ. ಆದ್ರೆ ಲವ್ ಮಾತ್ರ ಮಾಡೋಕಾಗಲ್ಲ ಅಲ್ವ. ಸಿಗರೇಟು ಸೇದ್ತಾನೆ, ಮನೆ ಕಡೆ ಪ್ರಾಬ್ಲಮ್ಮು, ಅಷ್ಟೇನು ಚೆನ್ನಾಗಿ ಓದಲ್ಲ. ಇವನನ್ನು ಲವ್ ಮಾಡಿ ಏನು ಸಿಗುತ್ತೆ ಅಂತೇನೋ?”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

‘ಏ ಹೋಗೋ ಏನೇನೋ ಮಾತಾಡ್ಬೇಡ’ ಎಂದು ಹೇಳಿದವಳಿಗೆ ಮುಂದೆ ಏನು ಮಾತನಾಡಬೇಕು ಎನ್ನುವುದು ತೋಚದೆ ಅಳುತ್ತಾ ನಡೆದುಬಂದುಬಿಟ್ಟೆ. ಅವತ್ತು ಸಂಜೆ ಟ್ಯೂಷನ್ನಿಗೂ ಹೋಗಲಿಲ್ಲ. ಅಶ್ವಿನಿಗೆ ಯಾಕೋ ಹುಷಾರಿಲ್ಲ ಕಣೇ ಎಂದು ಹೇಳಿ ಮನೆಯಲ್ಲೇ ಉಳಿದುಬಿಟ್ಟೆ. ಚಟಪಟ ಅಂತ ಮಾತಾಡೋ ನಾನು ಮೌನವಾಗಿದ್ದು ಟಿವಿ ನೋಡ್ತಿರೋದನ್ನು ಕಂಡು ಮನೆಯಲ್ಲಿ ಎಲ್ಲರಿಗೂ ಅಚ್ಚರಿ. ತುಂಬಾ ತಲೆನೋವು ಸುಮ್ನಿರಿ ಎಂದೊಂದು ಸುಳ್ಳು ಹೇಳಿ ರೂಮಿಗೆ ಹೋಗಿ ಏಳು ಘಂಟೆಗೆಲ್ಲ ಮಲಗುವ ಪ್ರಯತ್ನ ಮಾಡಿದೆ. ನಿದ್ರೆ ಬರುವುದು ಸಾಧ್ಯವಿರಲಿಲ್ಲ. ಹೌದು ನನಗೆ ಪುರುಷೋತ್ತಮ ಅಂದ್ರೆ ತುಂಬ ಇಷ್ಟ. ಅವನ ಜೊತೆ ಎಷ್ಟೊತ್ತು ಬೇಕಾದ್ರೂ ಯಾವ ವಿಷಯ ಬೇಕಾದ್ರೂ ಮಾತನಾಡುವಷ್ಟು ಸಲಿಗೆಯಿದೆ. ಅವರ ಮನೆಯವರ ವಿಷಯ ನನಗೆ ಗೊತ್ತು ನನ್ನ ಮನೆಯವರ ವಿಷಯ ಅವನಿಗೆ ಗೊತ್ತು. ಇಷ್ಟೆಲ್ಲ ಪರಿಚಯವಿರುವವನನ್ನು ಹತ್ತಿರವಿರುವವನನ್ನು ಪ್ರೀತಿಸಿದರೆ ತಪ್ಪೇನು ಎನ್ನುವ ಪ್ರಶ್ನೆ ನನಗೆ ಅವತ್ತೇ ಮೂಡಿತ್ತು. ಆದರೂ ಆ ವಯಸ್ಸಿನಲ್ಲಿ ನನಗೆ ಪ್ರೀತಿ ಪ್ರೇಮ ಮಾಡಬೇಕು ಎಂದೇನೂ ಅನ್ನಿಸುತ್ತಿರಲಿಲ್ಲ. ಇವತ್ತವನು “ಇಷ್ಟಪಡ್ತೀನಿ ಅಂತೀಯ. ಆದ್ರೆ ಲವ್ ಮಾತ್ರ ಮಾಡೋಕಾಗಲ್ಲ ಅಲ್ವ. ಸಿಗರೇಟು ಸೇದ್ತಾನೆ, ಮನೆ ಕಡೆ ಪ್ರಾಬ್ಲಮ್ಮು, ಅಷ್ಟೇನು ಚೆನ್ನಾಗಿ ಓದಲ್ಲ. ಇವನನ್ನು ಲವ್ ಮಾಡಿ ಏನು ಸಿಗುತ್ತೆ ಅಂತೇನೋ?” ಎಂದು ಹೇಳಿಬಿಟ್ಟಾಗ ಅವನು ಹೇಳಿದ್ದರಲ್ಲಿ ಸತ್ಯವಿದೆ ಎನ್ನಿಸಿಬಿಡ್ತಲ್ಲ. ಅವನು ತುಂಬಾ ಚೆನ್ನಾಗಿ ಓದಿದ್ದರೆ, ಸಿಗರೇಟು ಸೇದದಿದ್ದರೆ, ಮನೆ ಕಡೆ ಪ್ರಾಬ್ಲಮ್ಮೇನು ಇರದಿದ್ದರೆ ಥಟ್ಟಂತ ಅವನ ಪ್ರೇಮವನ್ನು ಒಪ್ಪಿಬಿಡುತ್ತಿದ್ದೆನಾ? ಅವನನ್ನು ನಾನು ಇಷ್ಟಪಡೋದು ಎಷ್ಟು ಸತ್ಯಾನೋ ಅವನನ್ನು ಪ್ರೀತಿಸುವ ಉತ್ಕಟ ಮನೋಭಾವನೆ ಬರುತ್ತಿಲ್ಲ ಅನ್ನುವುದು ಅಷ್ಟೇ ಸತ್ಯ. ಆದರೆ ಅವನ ಜೊತೆ ಹರಟದೆ, ನಕ್ಕು ನಲಿಯದೇ ಇದ್ದರೆ ಏನನ್ನೋ ಕಳೆದುಕೊಂಡ ಭಾವನೆ ಬರುವುದಾದರೂ ಯಾಕೆ? ನಾನು ನಾನಾಗಿ ಇರಲು ಅವನ ಇರುವಿಕೆ ಅನಿವಾರ್ಯ ಎಂಬ ಭಾವವೇ ಪ್ರೀತಿಯಲ್ಲವೇ? ಆ ಪ್ರೀತಿಯನ್ನು ಒಪ್ಪಿಕೊಳ್ಳಲು ನನಗಿರುವ ಅಡ್ಡಿಯಾದರೂ ಏನು? ಅಪ್ಪ ಅಮ್ಮನದೇ ಲವ್ ಮ್ಯಾರೇಜಾಗಿರುವುದರಿಂದ ಅವರ ಕಡೆಯಿಂದ ಯಾವ ವಿರೋಧವೂ ಇರಲಾರದು. ಇನ್ನು ಅಶ್ವಿನಿ ಸ್ವಲ್ಪ ಬಯ್ಯಬಹುದು. ನಡಿಯುತ್ತೆ. ಅವಳ ಜೊತೆಗೆ ಈ ವಿಷಯ ಚರ್ಚಿಸಿದರೆ ಹೇಗೆ ಎಂಬ ಯೋಚನೆ ಬಂತಾದರೂ ಅವಳಿಗ್ಯಾಕೋ ಮುಂಚಿನಿಂದ ಪುರುಷೋತ್ತಮನನ್ನು ಕಂಡರೆ ಅಷ್ಟೊಂದು ಒಳ್ಳೆಯ ಭಾವನೆಯೇನು ಇಲ್ಲ ಎಂದವಳ ಮಾತಿನಿಂದ ಗೊತ್ತಾಗುತ್ತಿತ್ತು. ಆ ಯೋಚನೆಯನ್ನೂ ತಳ್ಳಿಹಾಕಿದೆ. ಅವತ್ತು ಶುಕ್ರವಾರವಾಗಿತ್ತು. ನಾಳೆ ಶನಿವಾರ, ಹುಷಾರಿಲ್ಲದ ನೆಪ ಹೂಡಿ ಟ್ಯೂಷನ್ನಿಗೆ ಕಾಲೇಜಿಗೆ ಹೋಗದಿದ್ದರೆ ಸೋಮವಾರದವರೆಗೂ ಅವನನ್ನು ನೋಡುವುದನ್ನು ಭೇಟಿಯಾಗುವುದನ್ನು ತಪ್ಪಿಸಬಹುದು. ಎರಡು ದಿನ ಯೋಚನೆ ಮಾಡಿ ನಿರ್ಧಾರ ತಿಳಿಸಿದರೆ ಆಯ್ತಲ್ಲ ಎಂದುಕೊಂಡ ಮೇಲೆ ಸ್ವಲ್ಪ ಸಮಾಧಾನವಾಯಿತು. ನಿಜ ಹೇಳ್ತೀನಿ ಸಾಗರ್ ಅವನ ಪ್ರೀತಿಯನ್ನು ಒಪ್ಪಿಕೊಂಡರೇನು ತಪ್ಪು ಎಂಬ ಯೋಚನೆ ಬಂದಾಗ ಆ ಕ್ಷಣದಲ್ಲಿ ನನ್ನಲ್ಲಿ ಮೂಡಿದ ಸಂತಸವಿತ್ತಲ್ಲ ಅದನ್ನು ಮರೆಯಲು ಸಾಧ್ಯವಿಲ್ಲ. ನನ್ನ ಮೈಮೇಲೆ ಕೂದಲು ತುಂಬಾ ಕಡಿಮೆ, ಆ ಪುಟ್ಟ ಪುಟ್ಟ ಕೂದಲುಗಳೇ ನಿಮಿರಿ ನಿಂತವು, ಎದೆಬಡಿತ ವಿಪರೀತವೆನ್ನಿಸುವಷ್ಟು ಹೆಚ್ಚಾಗಿಬಿಟ್ಟಿತು, ಮುಖಕ್ಕೆಲ್ಲ ರಕ್ತ ನುಗ್ಗಿದ ಅನುಭವ. ಇನ್ನೂ ಅವನನ್ನು ಲವ್ ಮಾಡ್ತೀನಿ ಅಂತ ಹೇಳೇ ಇಲ್ಲ ಆಗಲೇ ಹಿಂಗೆ ಎಂದು ಸುಖಾಸುಮ್ಮನೆ ನಾನೇ ನಾಚಿಕೊಂಡೆ. ನಿನಗೂ ಈ ತರಹದ ಅನುಭವ ಮಧು ವಿಷಯದಲ್ಲಿ ಆಗಿರುತ್ತಲ್ವಾ? ಸೋಮವಾರದವರೆಗೂ ಕಾಲೇಜು ಕಡೆಗೆ ತಲೆ ಹಾಕಲಿಲ್ಲ. ಟಿವಿಯಲ್ಲಿ ಒಂದಷ್ಟು ಸಿನಿಮಾ ನೋಡಿದೆ, ಹಾಡು ಕೇಳಿದೆ. ಅಷ್ಟು ದಿನ ಕೇಳುತ್ತಲೇ ಇದ್ದ ಪ್ರೇಮಗೀತೆಗಳಿಗೀಗ ಹೊಸ ಅರ್ಥ ಮೂಡಿದಂತೆ ಭಾಸವಾಗುತ್ತಿತ್ತು. ಸಿನಿಮಾದಲ್ಲಿದ್ದ ಹೀರೋ ಹೀರೋಯಿನ್ನಿನ ಜಾಗದಲ್ಲಿ ನನ್ನನ್ನು ಪುರುಷೋತ್ತಮನನ್ನು ಕಲ್ಪಿಸಿಕೊಂಡು ಚಿತ್ರಿಸಿಕೊಳ್ಳುತ್ತಿದ್ದೆ. ಮನಸೊಳಗೆ ವಿಪರೀತ ನಗುತ್ತಿದ್ದೆ. ಮುಖದಲ್ಲಿ ಮುಗುಳ್ನಗೆ ಪ್ರತಿಫಲಿಸುತ್ತಿತ್ತು. ಎರಡು ದಿನ ಕಳೆಯುವುದು ಕಷ್ಟದ ಕೆಲಸವಾಗಿಬಿಟ್ಟಿತು. ಸೋಮವಾರ ಹೋಗಿ ಸುಮ್ಮನೆ ಲವ್ ಯು ಟೂ ಕಣೋ ಅನ್ನೋದು ವಿಶೇಷವಲ್ಲ. ಏನಾದ್ರೂ ಉಡುಗೊರೆ ಕೊಟ್ಟು ಹೇಳಬೇಕು ಎಂದುಕೊಂಡು ಭಾನುವಾರ ಸಂಜೆ ಮನೆಯಿಂದ ಹೊರಟೆ. ಮನೆಯಿಂದ ಎರಡು ಕಿಲೋಮೀಟರು ದೂರವಿರುವ ಅಂಗಡಿಗೆ ಹೋದೆ. ಪುರುಷೋತ್ತಮನಿಗೆ ಏನು ಗಿಫ್ಟ್ ಕೊಡುವುದು ಎಂದು ಒಂದು ಘಂಟೆ ಅಂಗಡಿಯಲ್ಲಿದ್ದ ಸಾಮಾನುಗಳ ಮೇಲೆಲ್ಲ ಕಣ್ಣಾಡಿಸಿದೆ. ಅದೇ ಫೋಟೋ ಫ್ರೇಮು, ಬೊಂಬೆಗಳು, ಗ್ರೀಟಿಂಗ್ ಕಾರ್ಡು. ಏನಾದ್ರೂ ವಿಶೇಷವಾಗಿರುವುದನ್ನು, ತುಂಬಾ ದಿನವೇನು ಸಾಯುವವರೆಗೂ ನೆನಪಿಟ್ಟುಕೊಳ್ಳುವಂತದ್ದನ್ನು ಕೊಡಬೇಕೆಂದು ಮತ್ತಷ್ಟು ಹುಡುಕಿದೆ. ಹಾರ್ಟ್ ಶೇಪಿನ ಸಿಗರೇಟ್ ಲೈಟರ್ ಕಣ್ಣಿಗೆ ಬಿತ್ತು. ಹೋಗಿ ಹೋಗಿ ಲವರ್ರಿಗೆ ಇನ್ನೊಂದಷ್ಟು ಸಿಗರೇಟು ಸೇದು ಅಂತ ಲೈಟರ್ ಕೊಡೋದಾ ಅನ್ನೋ ಪ್ರಶ್ನೆ ಮೂಡಿದರೂ ಮುದ್ದುಮುದ್ದಾಗಿದ್ದ ಲೈಟರ್ರಿನಿಂದ ಕಣ್ಣು ಸರಿಯಲಿಲ್ಲ. ಅದನ್ನೇ ತೆಗೆದುಕೊಂಡು ಪ್ಯಾಕ್ ಮಾಡಿಸಿ ಒಂದು ಕವರ್ರಿಗೆ ಹಾಕಿ ಕೈನೆಟಿಕ್ ಹೋಂಡಾದ ಡಿಕ್ಕಿಯಲ್ಲಿ ಹಾಕಿ ಅದರ ಮೇಲೆ ಗಾಡಿ ಒರೆಸುವ ಬಟ್ಟೆ ಮುಚ್ಚಿದೆ. ಅವತ್ತು ರಾತ್ರಿ ನಿದ್ರೆ ಬರಲಿಲ್ಲ ಅನ್ನೋದನ್ನೇನು ಹೇಳೋ ಅವಶ್ಯಕತೆಯಿಲ್ಲ ಅಂದುಕೋತೀನಿ’ ಸತತವಾಗಿ ಮಾತನಾಡಿ ಸುಸ್ತಾಯಿತು. ಸಾಗರನ ಕಡೆಯಿಂದ ಏನೂ ಪ್ರತಿಕ್ರಿಯೆಯಿಲ್ಲ. ‘ಮಲಗಿಬಿಟ್ಟೇನೋ?’ ಎಂದು ಕೇಳಿದೆ.

“ಮಲಗಿದ್ದೀನಿ. ನಿದ್ರೆ ಮಾಡಿಲ್ಲ. ಸುಮ್ನೆ ಒಂದು ಸಿಗರೇಟು ಸೇದುತ್ತ ನಿನ್ನ ಮಾತುಗಳನ್ನು ಕೇಳ್ತಾಯಿದ್ದೆ. ನೀನು ಮುಂದುವರಿಸು”

‘ಸೋಮವಾರ ಬಂದೇ ಬಿಡ್ತು. ಟ್ಯೂಷನ್ನಿಗೆ ಹೋಗುವಾಗ, ಟ್ಯೂಷನ್ನಿನ ಬಳಿ ಅವನನ್ನು ನೋಡಿದಾಗ, ಟ್ಯೂಷನ್ನಿನ ಒಳಗಡೆ ಕುಳಿತಾಗಲೆಲ್ಲ ಅವನದೇ ನೆನಪು. ಎದೆಬಡಿತ ಸುತ್ತಮುತ್ತಲಿನವರಿಗೆಲ್ಲ ಕೇಳುವಷ್ಟು ಹೆಚ್ಚಾಗಿತ್ತು. ಟ್ಯೂಷನ್ನಿನ ಸಮಯದಲ್ಲಿ ಅವನನ್ನು ಮಾತನಾಡಿಸುವುದಕ್ಕೆ ಆಗಲಿಲ್ಲ. ಜೊತೆಯಲ್ಲಿ ಅಶ್ವಿನಿ ಬೇರೆ ಇದ್ದಳಲ್ಲ. ಅವಳ ಮುಂದೆ ಅವನನ್ನು ಮಾತನಾಡಿಸಲು ನನಗೆ ಲಜ್ಜೆ. ಸರಿ ಕಾಲೇಜಿನಲ್ಲಿ ಮಧ್ಯಾಹ್ನ ಊಟದ ಸಮಯದಲ್ಲಿ ಮಾತನಾಡಿಸಿದರಾಯಿತು ಎಂದುಕೊಂಡು ಸುಮ್ಮನಾದೆ. ಕಾಲೇಜಿನಲ್ಲವತ್ತು ಏನು ಪಾಠ ಮಾಡಿದರೋ ಏನು ಕತೆಯೋ ನನಗಂತೂ ತಲೆಗೆ ಹೋಗಲಿಲ್ಲ. ಮಧ್ಯಾಹ್ನ ಗಬಗಬ ಊಟ ಮುಗಿಸಿ ಅಶ್ವಿನಿಗೆ ಆ ಕ್ಷಣಕ್ಕೆ ಹೊಳೆದ ಒಂದು ಸುಳ್ಳು ಹೇಳಿ ಬೈಕ್ ಸ್ಟ್ಯಾಂಡಿಗೆ ಬಂದು ಡಿಕ್ಕಿಯಲ್ಲಿಟ್ಟಿದ್ದ ಉಡುಗೊರೆಯನ್ನು ತೆಗೆದುಕೊಂಡು ಸಿಗರೇಟು ಕ್ಯಾಂಟೀನಿನ ಕಡೆಗೆ ನಡೆದೆ. ಅವನು ಅಲ್ಲೇ ಇರುತ್ತಾನೆ ಎಂಬ ನಂಬಿಕೆಯಿತ್ತು. ಇವತ್ತು ನನ್ನನ್ನು ನೋಡಿದವನೂ ಥೇಟ್ ಮೂರು ದಿನದ ಕೆಳಗೆ ಮಾಡಿದಂತೆ ಸಿಗರೇಟು ಬಿಸಾಕಿ ನನ್ನ ಕೈಹಿಡಿದು ದರದರನೆ ಹೊರಗಡೆಗೆ ಎಳೆದು ತಂದು “ತಲೆ ಇಲ್ವಾ ನಿನಗೆ. ಒಂದು ಸರ್ತಿ ಹೇಳಿದ್ರೆ ಅರ್ಥವಾಗಲ್ವ” ಎಂದು ಎರಡು ನಿಮಿಷ ಬಯ್ದ. ಇವತ್ತು ಅವನು ಬಯ್ಯುತ್ತಿದ್ದರೆ ಕೇಳುವುದಕ್ಕೇ ಖುಷಿಯಾಗುತ್ತಿತ್ತು! ಅವನು ಮುಗಿಸಿದ ನಂತರ ಕೈಯಲ್ಲಿದ್ದ ಗಿಫ್ಟನ್ನು ಅವನ ಕೈಯಲ್ಲಿಟ್ಟು ‘ಬಾಯ್’ ಕಣೋ ಎಂದು ತಿರುಗಿ ನಡೆಯಲಾರಂಭಿಸಿದೆ. ಮತ್ತೇನನ್ನೂ ಹೇಳಬೇಕೆಂದು ಅನ್ನಿಸಲಿಲ್ಲ. ಬಹುಶಃ ಮೊದಲ ಬಾರಿಗೆ ನಮ್ಮಿಬ್ಬರ ಭೇಟಿಯಲ್ಲಿ ನಾನು ಕಡಿಮೆ ಮಾತನಾಡಿದ್ದೆ, ಅವನು ಹೆಚ್ಚಿಗೆ ಮಾತನಾಡಿದ್ದ! ಒಂದಿಪ್ಪತ್ತು ಹೆಜ್ಜೆ ನಡೆದಿದ್ದೆನಷ್ಟೇ ಅವನು ಓಡಿಬರುತ್ತಿರುವ ಸದ್ದು ಕೇಳಿತು. ಮನದಲ್ಲೀಗ ಉದ್ವಿಗ್ನತೆಯಿರಲಿಲ್ಲ. ಸಂತಸವಷ್ಟೇ ಇತ್ತು. ಓಡಿ ಬಂದವನು ನನ್ನೆದುರಿಗೆ ನಿಂತು ಮುಖದ ತುಂಬ ನಗು ತುಂಬಿಕೊಂಡು “ಥ್ಯಾಂಕ್ಸ್ ಧರು. ದೇವತೆ ದೇವತೆ ನೋಡ್ಕಂಡಂಗೆ ನೋಡ್ಕೋತೀನಿ ನಿನ್ನ” ಎಂದು ಹೇಳಿದ. ‘ಲವರ್ಸ್ ಮಧ್ಯೆ ಥ್ಯಾಂಕ್ಸ್ ಅಂತೆಲ್ಲ ಹೇಳಬಾರದು ಕಣೋ’ ಎಂದೆ. ಮತ್ತೊಮ್ಮೆ ನಗು ತುಂಬಿಕೊಂಡ’

“ದೇವತೆ ಥರ ನೋಡಿಕೊಂಡನಾ?” ಸಾಗರ್ ಕೇಳಿದ. ಯಾಕೋ ಅವನ ಧ್ವನಿ ನಡುಗುತ್ತಿದೆ ಎನ್ನಿಸಿತು. ಅದು ನನ್ನ ಭಾವನೆಯೂ ಇರಬಹುದು.

‘ಮ್. ನೋಡಿಕೊಂಡ. ದೇವತೆ ಥರಾನೇ ನೋಡಿಕೊಂಡ. ದೇವರನ್ನು ಎಲ್ಲಿಟ್ಟಿರುತ್ತೇವೆ ಹೇಳು? ನಾಲ್ಕು ಗೋಡೆಯ ಮಧ್ಯೆ ಮೌನಿಯಾಗಿ’

“ಸಾರಿ”

‘ನೀನ್ಯಾಕೆ ಸಾರಿ ಕೇಳ್ತೀಯ ಬಿಡು. ಅವನ ಪ್ರೀತಿಯೇ ನನ್ನ ಉಸಿರುಕಟ್ಟಿಸುವ ಕೆಲಸ ಮಾಡಿಬಿಟ್ಟಿತು. ನನಗೀಗ ಮದುವೆಯಾಗಿದೆ ಹಿಂಗೆಲ್ಲ ಹೇಳಿದರೆ ನೀನು ತಪ್ಪು ತಿಳಿದುಕೋತೀಯೋ ಏನೋ ಗೊತ್ತಿಲ್ಲ. ಹೇಳ್ಬೇಕು ಅನ್ನಿಸುತ್ತೆ ಹೇಳ್ತಿದ್ದೀನಿ. ಬಹುಶಃ ಅವನು ಕೊಟ್ಟಷ್ಟು ಪ್ರೀತಿಯನ್ನು ಇನ್ಯಾರೂ ನನಗೆ ಕೊಡಲಾರರು. ನನ್ನ ರಾಜೀವನೂ ನನ್ನನ್ನು ಅಷ್ಟು ಉತ್ಕಟವಾಗಿ ಪ್ರೀತಿಸುವುದು ಸಾಧ್ಯವಿಲ್ಲ’

“ಮ್. ಏನೋಪ್ಪ. ಪ್ರೀತಿ ಪ್ರೇಮದ ಬಗ್ಗೆ ನನಗೆ ಅಷ್ಟೆಲ್ಲ ಅನುಭವವಿಲ್ಲ”

‘ಇಲ್ಲದೇ ಇರೋದೇ ಒಳ್ಳೇದು ಬಿಡು’

“ಅಂದ್ರೆ”

‘ಮಾತಾಡಿ ಮಾತಾಡಿ ಮನಸ್ಸು ಭಾರವಾಗಿಬಿಟ್ಟಿದೆ ಕಣೋ. ಪ್ರೀತಿ ಶುರುವಾಗಿದ್ದು ಹೇಗೆ ಅಂತ ಹೇಳಾಯ್ತಲ್ಲ. ಮಿಕ್ಕಿದ್ದನ್ನು ಇನ್ನೊಂದು ದಿನ ಮಾತನಾಡೋಣ್ವ? ನಾಳೆ ರಾಜೀವ್ ಬರ್ತಾರೆ. ನನಗೂ ಸಂಜೆ ಡ್ಯೂಟಿ. ಮಾತನಾಡೋಕೆ ಆಗಲ್ಲ. ನಾಡಿದ್ದು ರಾತ್ರಿ ಡ್ಯೂಟಿಯಿದೆ. ನಾಡಿದ್ದು ಫೋನ್ ಮಾಡ್ಲ’

“ಸರಿ ಕಣೇ ನಿನ್ನನುಕೂಲ. ನನಗೂ ನಿದ್ರೆ ಬರ್ತಿದೆ. ಗುಡ್ ನೈಟ್”

‘ಗುಡ್ ನೈಟ್ ಕಣೋ’ ಕಾಲ್ ಕಟ್ ಮಾಡುವಷ್ಟರಲ್ಲಿ “ಧರೂssss” ಎಂಬ ಸಾಗರನ ದನಿ ಕೇಳಿತು.

ಅವನ ಬಾಯಲ್ಲಿ ಧರು ಅನ್ನೋ ಮಾತು ಬಂದ್ರೇ ಚೆನ್ನ. ಇನ್ನವನು ಧರೂssss ಅಂತ ರಾಗವಾಗಿ ಕೂಗಿದರೆ ಎಷ್ಟು ಖುಷಿಯಾಗಬೇಕೋ ಅಷ್ಟಾಯಿತು!

‘ಹೇಳೋssss’

“ನಾಳೆ ಬೆಳಿಗ್ಗೆ ಮತ್ತೆ ಹತ್ತತ್ತು ಉದ್ದುದ್ದದ ಮೆಸೇಜುಗಳನ್ನು ಕಳಿಸಿ ನಿನ್ನ ತಲೆ ತಿಂದ್ರೂ ಪರವಾಗಿಲ್ಲ. I missed you ಕಣೇ” ಎಂದು ಹೇಳಿದ.

‘ಮ್. ಅದಕ್ಯಾಕೋ ಬೇಜಾರು ಮಾಡ್ಕೋತೀಯ. ನಾನೂ ನಿನ್ನನ್ನು ಮಿಸ್ ಮಾಡ್ಕೋಬಿಟ್ಟೆ ಗೊತ್ತ. ಚೆನ್ನಾಗಿ ನಿದ್ರೆ ಮಾಡು’ ಎಂದ್ಹೇಳಿ ಅವನ ಉತ್ತರಕ್ಕೆ ಕಾಯದೆ ಫೋನ್ ಕಟ್ ಮಾಡಿದೆ. ಎದೆಬಡಿತ ಜೋರಾಗಿತ್ತು.

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment