Jul 18, 2018

ಏಕಕಾಲದ ಚುನಾವಣೆಗಳ ಮಾತು: ಹಿಂದಿರುವ ರಾಜಕೀಯ ಕಾರಣಗಳು

ಕು.ಸ. ಮಧುಸೂದನ ರಂಗೇನಹಳ್ಳಿ
ಕು.ಸ.ಮಧುಸೂದನ ರಂಗೇನಹಳ್ಳಿ
ಲೋಕಸಭೆ ಮತ್ತು ವಿದಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಬೇಕೆಂಬ ಹೇಳಿಕೆ ನೀಡುವ ಮೂಲಕ ಪ್ರದಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ರಾಷ್ಟ್ರ ಮಟ್ಟದ ಚರ್ಚೆಯೊಂದಕ್ಕೆ ಮತ್ತೊಮ್ಮೆ ನಾಂದಿ ಹಾಡಿದ್ದಾರೆ.

ಯಾವುದೋ ಚುನಾವಣೆಯ ಪ್ರಚಾರಸಭೆಯಲ್ಲಿಯೋ ಇಲ್ಲ ಖಾಸಗಿ ಸಮಾರಂಭಗಳಲ್ಲಿ ಪ್ರದಾನಿಯವರು ಈ ಮಾತನ್ನಾಡಿದ್ದರೆ ನಾವು ನಿರ್ಲಕ್ಷಿಸಬಹುದಿತ್ತು. ಆದರೆ ಮೊನ್ನೆ ನೀತಿ ಆಯೋಗದ ಸಭೆಯ ಸಮಾರೋಪ ಸಮಾರಂಭದಲ್ಲಿ ದೇಶದ ಹಲವಾರು ಮುಖ್ಯಮಂತ್ರಿಗಳ ಹಾಗು ಉನ್ನತ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಈ ಮಾತುಗಳನ್ನು ಆಡಿರುವುದರಿಂದ ಅದಕ್ಕೊಂದು ಮಾನ್ಯತೆ ಬಂದಿದೆ ಜೊತೆಗೆ ರಾಜಕೀಯ ಪಕ್ಷಗಳೂ ಸೇರಿದಂತೆ ಚುನಾವಣಾ ತಜ್ಞರುಗಳು, ವಿವಿಧಕ್ಷೇತ್ರಗಳಪರಿಣಿತರು ಈ ವಿಷಯದ ಮೇಲೆ ಚರ್ಚೆ ನಡೆಸಲೇ ಬೇಕಾದ ಅನಿವಾರ್ಯತೆ ಬಂದೊದಗಿದೆ. 2016ರಲ್ಲಿ ಕೇಂದ್ರ ಚುನಾವಣಾ ಆಯೋಗವು ಕಾನೂನು ಸಚಿವಾಲಯಕ್ಕೆ ಇಂತಹದೊಂದು ಶಿಫಾರಸ್ಸನ್ನು ಮಾಡಿತ್ತುಅಲ್ಲದೆ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಸಹ ಇಂತಹದೊಂದು ಅನಿಸಿಕೆಯನ್ನು ಸಾರ್ವಜನಿಕವಾಗಿಯೇ ಹೇಳಿದ್ದರು. ಆದರೆ ಅದರ ಹಿಂದೆ ಇರಬಹುದಾದ ರಾಜಕೀಯ ಕಾರಣಗಳನ್ನು ಮನಗಂಡವರ್ಯಾರೂ ಅದರ ಬಗ್ಗೆ ಅಷ್ಟೊಂದು ಗಂಬೀರವಾಗೇನು ಚರ್ಚೆ ಮಾಡಲು ಹೋಗಿರಲಿಲ್ಲ..

ಆದರೆ ಇದೀಗ ನೀತಿ ಆಯೋಗದ ಸಭೆಯಲ್ಲಿ ಪ್ರದಾನಮಂತ್ರಿಯವರು ಅಧಿಕೃತವಾಗಿಯೇ ಈ ಮಾತನ್ನು ಹೇಳಿರುವುದರಿಂದ ಅದರ ಹಿಂದೆ ಇರಬಹುದಾದ ರಾಜಕೀಯ ಕಾರಣಗಳನ್ನು ತಿಳಿಯುವುದರ ಜೊತೆಗೆ ಆ ಬಗ್ಗೆ ಚರ್ಚೆ ನಡೆಸಬೇಕಾಗಿರುವುದು ಅತ್ಯಗತ್ಯವಾಗಿದೆ. ಯಾಕೆಂದರೆ ಕಾನೂನು ಸಚಿವಾಲಯವೇ ಹೇಳಿದಂತೆ ಇದಕ್ಕೆ ದೇಶದ ಎಲ್ಲ ರಾಜಕೀಯ ಪಕ್ಷಗಳ ಸಮ್ಮತಿ ಬೇಕಾಗುತ್ತದೆ. ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ನಮ್ಮ ರಾಜಕೀಯ ಪಕ್ಷಗಳು ಮಾತಾಡಿರುವುದು ಇದು ಹೊಸದೇನಲ್ಲ. ಆದರೆ ಇದರ ಹಿಂದಿನ ರಾಜಕೀಯ ಉದ್ದೇಶಗಳನ್ನು ಚರ್ಚಿಸುವ ಮೊದಲು ನಮ್ಮ ಚುನಾವಣೆಗಳು ನಡೆಯುತ್ತಿದ್ದ ಮತ್ತು ನಡೆಯುತ್ತಿರುವ ರೀತಿಗಳನ್ನು ಸ್ವಲ್ಪ ಹಿಂದಕ್ಕೆ ಹೋಗಿ ನೋಡೋಣ:
ಕು.ಸ. ಮಧುಸೂದನ ರಂಗೇನಹಳ್ಳಿಯವರ ಮತ್ತಷ್ಟು ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

1968ರವರೆಗೂ ರಾಷ್ಟ್ರದ ಸಂಸತ್ತು ಹಾಗು ವಿದಾನಸಭೆಗಳಿಗೂ ಏಕಕಾಲಕ್ಕೆ ಚುನಾವಣೆಗಳು ನಡೆಯುತ್ತಿದ್ದು, ಇವತ್ತಿನ ಹಾಗೆ ರಾಜಕೀಯ ಪ್ರಕ್ಷುಬ್ದತೆಯ ವಾತಾವರಣವಿರಲಿಲ್ಲ. ಸ್ವಾತಂತ್ರ ಹೋರಾಟದಲ್ಲಿ ಬಾಗಿಯಾಗಿದ್ದ ಕಾಂಗ್ರೆಸ್ ಕೇಂದ್ರವನ್ನು ಒಳಗೊಂಡಂತೆ ಬಹುತೇಕ ರಾಜ್ಯಗಳಲ್ಲಿ ನಿರಾತಂಕವಾಗಿ ದೊಡ್ಡ ಮಟ್ಟದ ವಿರೋಧಪಕ್ಷಗಳ ಕಾಟವಿರದೆ ಆಡಳಿತ ನಡೆಸುತ್ತಿತ್ತು. ಆ ನಂತರದಲ್ಲಿ ನಡೆದ ಹಲವು ರಾಜಕೀಯ ವಿದ್ಯಾಮಾನಗಳು ನಮ್ಮ ಚುನಾವಣಾ ವ್ಯವಸ್ಥೆಯನ್ನೇ ಬದಲಾಯಿಸಿಬಿಟ್ಟವು. 1967 ರ ಹೊತ್ತಿಗೆ ರಾಷ್ಟ್ರ ಮತ್ತು ರಾಜ್ಯಗಳಲ್ಲಿ ಸತತವಾಗಿ ಆಡಳಿತ ನಡೆಸುತ್ತ ಬಂದಿದ್ದ ಕಾಂಗ್ರೆಸ್ಸಿನ ಬಗ್ಗೆ ಜನರಿಗೆ ಏಕತಾನತೆ ಮೂಡಿತ್ತು. ಇದೇ ಸಮಯದಲ್ಲಿ ಸಮಾಜವಾದಿ ಚಿಂತನೆಗಳು ರಾಷ್ಟ್ರದಾದ್ಯಂತ ತೀವ್ರವಾಗಿ ಹಬ್ಬುತ್ತಿದ್ದು ದಿವಂಗತ ಶ್ರೀ ರಾಮಮನೋಹರ್ ಲೋಹಿಯಾರಂತವರು ಸಮಾಜವಾದಿ ಚಳುವಳಿಯ ಮುಂಚೂಣಿಯಲ್ಲಿ ನಿಂತಿದ್ದರು. 'ಕಾಂಗ್ರೆಸ್ ಹೊರತಾದ ಸರಕಾರಗಳು ನಮಗೆ ಬೇಕು' ಎನ್ನುವ ಲೋಹಿಯಾರವರ ಘೋಷಣೆ ಕೆಲ ರಾಜ್ಯಗಳಲ್ಲಿ ತನ್ನ ಪ್ರಭಾವ ಬೀರತೊಡಗಿತ್ತು. ನಿರಂತರವಾಗಿ ಕಾಂಗ್ರೆಸ್ಸಿನ ಆಡಳಿತವನ್ನು ಅನುಭವಿಸುತ್ತ ಬಂದಿದ್ದ ಜನತೆಗೆ ಬದಲಾವಣೆಯ ಅಗತ್ಯವೊಂದು ಕಂಡುಬಂದಿದ್ದರಲ್ಲಿ ಅಚ್ಚರಿಯೇನೂ ಇರಲಿಲ್ಲ. ಹಾಗಾಗಿಯೇ 1967ರ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲಬಾರಿಗೆ ದೇಶದ ಎಂಟು ರಾಜ್ಯಗಳಲ್ಲಿ ಕಾಂಗ್ರೆಸ್ ಮೊಟ್ಟಮೊದಲ ಬಾರಿಗೆ ಅಧಿಕಾರ ಕಳೆದುಕೊಳ್ಳಬೇಕಾಯಿತು. ಪ್ರಜಾ ಸೋಷಿಯಲಿಸ್ಟ್ ಪಾರ್ಟಿ, ಜನಸಂಘ, ಎಡಪಕ್ಷಗಳು ಸೇರಿದಂತೆ ಅನೇಕ ಸಣ್ಣಪುಟ್ಟ ಪಕ್ಷಗಳು ಸೇರಿ ಸಂಯುಕ್ತ ವಿದಾಯಕ ದಳದ ಹೆಸರಲ್ಲಿ ರಾಜ್ಯಗಳ ಅಧಿಕಾರ ಹಿಡಿದವು. ಆದರೆ ಅಪರೂಪಕ್ಕೆ ಅಧಿಕಾರ ಹಿಡಿದ ಈ ಪುಡಿಪಕ್ಷಗಳ ನಾಯಕರುಗಳಗೆ ಅಧಿಕಾರ ನಡೆಸಿಯಾಗಲಿ, ಇಲ್ಲ ರಾಜಕೀಯ ಭಿನ್ನಮತಗಳನ್ನು ಸಂಬಾಳಿಸಿ ಆಡಳಿತ ನಡೆಸುವುದಾಗಲಿ ಗೊತ್ತಿರಲಿಲ್ಲ. ಸಹಜವಾಗಿಯೇ ಈ ಮೈತ್ರಿಕೂಟಗಳು ಒಳಜಗಳಗಳಿಂದ ತತ್ತರಿಸಿದವು. ಮೊದಲೇ ಕಾಂಗ್ರೆಸ್ಸೇತರ ಪಕ್ಷಗಳ ಬಗ್ಗೆ ತೀವ್ರತರ ಅಸಹನೆ ಹೊಂದಿದ್ದ ಕಾಂಗ್ರೆಸ್ ಇದನ್ನು ಬಳಸಿಕೊಂಡು 356ನೇ ವಿಧಿಯನ್ನು ದುರ್ಬಳಕೆ ಮಾಡಿಕೊಂಡು ಆ ರಾಜ್ಯ ಸರಕಾರಗಳನ್ನು ವಜಾ ಮಾಡಿ ವಿದಾನಸಭೆಗಳನ್ನು ವಿಸರ್ಜಿಸಿತು. ಇದರಿಂದಾಗಿ ಮೊದಲ ಬಾರಿಗೆ ಬೇರೆ ಬೇರೆ ರಾಜ್ಯಗಳ ವಿದಾನಸಭೆಗಳ ಚುನಾವಣೆಗಳು ಬೇರೆ ಬೇರೆ ಸಮಯದಲ್ಲಿ ನಡೆಯಬೇಕಾಗಿ ಬಂತು. ಇದು ಅದುವರೆಗು ನಡೆದುಕೊಂಡು ಬಂದಿದ್ದ ನಿಶ್ಚಿತ ಮತ್ತು ನಿರ್ದಾರಿತ ಚುನಾವಣಾ ವೇಳಾ ಪಟ್ಟಿಯನ್ನು ಬದಲಾಯಿಸಿಬಿಟ್ಟಿತು

ಆದರೆ ಈ ರೀತಿಯಾಗಿ 356ನೇ ವಿಧಿಯನ್ನು ದುರ್ಬಳಕೆ ಮಾಡುವ ಕೇಂದ್ರ ಸರಕಾರದ ಈ ಕ್ರಮವನ್ನುವಿರೋಧಿಸುತ್ತಲೇ ಬಂದ ವಿರೋಧಪಕ್ಷಗಳು ಅವತ್ತಿನ ಬಲಿಷ್ಠಕೇಂದ್ರ ಸರಕಾರದ ವಿರುದ್ದ(ಶ್ರೀಮತಿ ಇಂದಿರಾಗಾಂದಿಯವರು ಅಂದಿನ ಪ್ರದಾನಮಂತ್ರಿಗಳಾಗಿದ್ದರು.)ಪ್ರತಿಭಟಿಸಿದರೂ ಉಪಯೋಗವಾಗಲಿಲ್ಲ. ವಿಪರ್ಯಾಸ ಎಂದರೆ ತುರ್ತುಪರಿಸ್ಥಿತಿಯನ್ನು ವಿರೋಧಿಸಿ 1977ರಲ್ಲಿ ಅಧಿಕಾರಕ್ಕೆ ಬಂದ ಜನತಾ ಪಕ್ಷದ ಸರಕಾರವು ಸಹ ಇದೇ ಪರಿಪಾಠವನ್ನು ಮುಂದುವರೆಸಿತು.. ನಂತರ 1980ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ದಿವಂಗತ ಶ್ರೀಮತಿ ಇಂದಿರಾಗಾಂದಿಯವರು ಸಹ ವಿರೋಧಪಕ್ಷಗಳ ರಾಜ್ಯ ಸರಕಾರಗಳನ್ನು ಕಿತ್ತೊಗೆಯುವ ನೀಚ ರಾಜಕಾರಣವನ್ನೇ ಮುಂದುವರೆಸಿದರು. ಈ ಎಲ್ಲ ಬೆಳವಣಿಗೆಗಳಿಂದಾಗಿ ಲೋಕಸಭಾ ಮತ್ತು ವಿದಾನಸಭಾ ಚುನಾವಣೆಗಳ ವೇಳಾಪಟ್ಟಿಗಳು ಬದಲಾಗುತ್ತ ಹೋದವು.

ಇಂತಹ ಬೆಳವಣಿಗೆಗಳು ವಿದಾನಸಭೆಗಳ ಚುನಾವಣೆಗಳನ್ನೂ ಮೀರಿ ಸಂಸತ್ತಿನ ಚುನಾವಣೆಗಳಿಗೂ ವ್ಯಾಪಿಸುತ್ತ ಹೋದವು. ಎಂಭತ್ತರ ದಶಕದಲ್ಲಾದ ಇಂದಿರಾ ಗಾಂದಿ ಮತ್ತು ರಾಜೀವ್ ಗಾಂದಿಯವರ ಹತ್ಯೆಗಳು ಸಂಸತ್ತನ್ನು ಅವಧಿಗೆ ಮುನ್ನ ವಿರ್ಜನೆಯಾಗುವಂತೆ ಮಾಡಿದವು. ನಂತರದಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿಯತೊಡಗಿದ ಮೈತ್ರಿಕೂಟಗಳ ಸರಕಾರಗಳು ತಮ್ಮ ಕಿತ್ತಾಟಗಳಿಂದ ಅವಧಿ ಪೂರೈಸಲಾಗದೆ ವಿಸರ್ಜನೆಯಾಗತೊಡಗಿದವು. ಅಲ್ಲಿಂದ ಇಲ್ಲಿಯವರೆಗೂ ಯಾವ ನಿಶ್ಚಿತ ವೇಳಾಪಟ್ಟಿಯ ಹಂಗಿರದೆ ರಾಜಕೀಯ ಪಕ್ಷಗಳ ಕಿತ್ತಾಟಗಳು ಮತ್ತು ಹುಚ್ಚಾಟಗಳ ರಾಜಕಾರಣಗಳಿಂದ ಯಾವಾಗೆಂದರೆ ಆಗ ಚುನಾವಣೆಗಳು ನಡೆಯುತ್ತಿವೆ. 1969ರ ಪರಿಸ್ಥಿತಿಗೂ ಇವತ್ತಿನ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸಗಳಿವೆ.ಆದರೆ ಎಪ್ಪತ್ತು ಮತ್ತು ಎಂಭತ್ತರ ದಶಕಕ್ಕು ಈಗಿನ ರಾಜಕೀಯ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸಗಳಿವೆ.

ಈ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವುದರಿಂದ ಆಗಬಹುದಾದ ಒಳಿತುಕೆಡುಗಳನ್ನು ಚರ್ಚೆಸಿವುದಕ್ಕಿಂತ ಮೊದಲು ಇದರ ಹಿಂದಿರಬಹುದಾದ ರಾಜಕೀಯ ಉದ್ದೇಶಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವೆನಿಸುತ್ತದೆ. 

ಬಾಜಪದ ನಡೆಯ ಹಿಂದಿನ ರಾಜಕೀಯ ಕಾರಣಗಳು!

ಬಾಜಪ ಒಂದು ರಾಜಕೀಯ ಪಕ್ಷವಾಗಿ ಮತ್ತು ಶ್ರೀ ನರೇಂದ್ರ ಮೋದಿಯವರು ಪ್ರದಾನಮಂತ್ರಿಗಳಾಗಿ ರಾಷ್ಟ್ರದಾದ್ಯಂತ ಏಕಕಾಲಕ್ಕೆ ಚುನಾವಣೆ ನಡೆಯಬೇಕೆಂದು ಬಯಸುತ್ತಿರುವುದರ ಹಿಂದಿನ ಕಾರಣಗಳನ್ನು ಸಹ ನಾವು ಅರ್ಥ ಮಾಡಿಕೊಳ್ಳಬೇಕಿದೆ. ಯಾಕೆಂದರೆ 1999ರಲ್ಲಿ ಶ್ರೀ ವಾಜಪೇಯಿಯವರು ಪ್ರದಾನಮಂತ್ರಿಗಳಾಗಿದ್ದ ಸಮಯದಲ್ಲಿಯೇ ಅಂದಿನ ರಾಷ್ಟ್ರೀಯ ಕಾನೂನು ಆಯೋಗವು ಇಂತಹ ಮಾತನಾಡುತ್ತ 1969ಕ್ಕೂ ಮುಂಚೆಯಿದ್ದ ವ್ಯವಸ್ಥೆಯ ಮಾದರಿಯಲ್ಲಿಯೇ ಚುನಾವಣೆಗಳನ್ನು ನಡೆಸುವುದು ಸೂಕ್ತವೆಂದು ಸರಕಾರಕ್ಕೆ ಸಲಹೆ ನೀಡಿತ್ತು. ವಿಶೇಷವೆಂದರೆ ಹೀಗೆ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವ ವಿಷಯ ಚರ್ಚೆಗೆ ಹಿಂದೆಯೂ ಬಂದಿದ್ದು ಮತ್ತು ಈಗಲೂ ಬರುತ್ತಿರುವುದು ಕೇಂದ್ರದಲ್ಲಿ ಬಾಜಪದ ಸರಕಾರಗಳು ಇದ್ದಾಗಲೇ ಎನ್ನುವುದು ಗಮನಾರ್ಹ! ಇದರ ಹಿಂದಿರುವುದು ಅಪ್ಪಟ ರಾಜಕೀಯವೆನ್ನುವುದು ಇದರಿಂದಲೇ ಅರ್ಥವಾಗುತ್ತದೆ!

ಪ್ರದಾನಮಂತ್ರಿಯವರ ಈ ಆಶಯದ ಹಿಂದೆ ಗುಣಾತ್ಮಕ ಆಡಳಿತ ನೀಡಬೇಕೆಂಬ ಉದ್ದೇಶಕ್ಕಿಂತ ಹೆಚ್ಚಾಗಿ ಲೋಕಸಭೆಯನ್ನೂ ಒಳಗೊಂಡಂತೆ ದೇಶದ ಎಲ್ಲ ರಾಜ್ಯಗಳಲ್ಲಿಯೂ ಬಾಜಪವೇ ಗೆದ್ದು ಅಧಿಕಾರ ಹಿಡಿಯಬೇಕೆಂಬ ದುರುದ್ದೇಶವೇ ಇದೆ. 2014ರಲ್ಲಿ ಸೃಷ್ಠಿ ಮಾಡಿದಂತಹ ಕೃತಕ ಅಲೆಯೊಂದನ್ನು ಸೃಷ್ಠಿ ಮಾಡಿ ಅದರ ಲಾಭ ಪಡೆಯುವುದು ಅವರ ಉದ್ದೇಶವಾಗಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಆಡಳಿತವಿದ್ದಲ್ಲಿ ಅಭಿವೃದ್ದಿಯು ತೀವ್ರಗತಿಯಲ್ಲಿ ಆಗುತ್ತದೆಯೆಂಬ ಭ್ರಮೆಯನ್ನು ಜನರಲ್ಲಿ ಬಿತ್ತುವುದು ಸುಲಭವಾಗುತ್ತದೆ. ಒಂದೇ ಬಾರಿಗೆ ಚುನಾವಣೆ ನಡೆಸುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಡ್ ಶೋಗಳನ್ನಾಗಲಿ, ಪ್ರಚಾರದ ರ್ಯಾಲಿಗಳಾಗಳನ್ನಾಗಲಿ ಮಾಡಲು ರಾಜಕೀಯ ಪಕ್ಷಗಳು ವಿಫಲವಾಗುತ್ತವೆ. ಆಗ ಸಾಮಾಜಿಕ ಜಾಲತಾಣಗಳೇ ಪ್ರಚಾರದ ಬಹುಮುಖ್ಯ ಸಾಧನಗಳಾಗಿ ಬಿಡುತ್ತವೆ. ಈ ಜಾಲತಾಣಗಳನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಬಾಜಪಕ್ಕೆ ಚುನಾವಣಾ ಪ್ರಚಾರ ಸುಲಭವಾಗುತ್ತ ಹೋಗುತ್ತದೆ. ಇದರೊಂದಿಗೆ ತನ್ನ ಹಿಂದುತ್ವದ ಏಕೈಕ ಅಜೆಂಡಾವನ್ನು ಯಾವುದೇ ಪ್ರಾದೇಶಿಕ ಬದಲಾವಣೆಯಿಲ್ಲದೆ ರಾಷ್ಟ್ರದಾದ್ಯಂತ ಪ್ರಚಾರ ಮಾಡಲು ಬಾಜಪಕ್ಕೆ ಅನುಕೂಲವಾಗುತ್ತ ಹೋಗುತ್ತದೆ.

ಬಾಜಪ ವಿರೋದಿ ಮೈತ್ರಿಕೂಟವೊಂದು ಅಸ್ಥಿತ್ವಕ್ಕೆ ಬರುವ ಅವಕಾಶವನ್ನೇ ಇದು ಇಲ್ಲವಾಗಿಸುತ್ತದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಈಗಲೂ ತನ್ನ ಅಸ್ತಿತ್ವ ಉಳಿಸಿಕೊಂಡಿರುವ ಕಾಂಗ್ರೆಸ್ ಬೇರೆ ಬೇರೆ ರಾಜ್ಯಗಳಲ್ಲಿನ ಪ್ರಾದೇಶಿಕ ಪಕ್ಷಗಳ ಜೊತೆ ಸೀಟು ಹೊಂದಾಣಿಕೆ ಮಾಡಿಕೊಳ್ಳುವಷ್ಟರಲ್ಲಿ ಹೈರಾಣಾಗಿ ಹೋಗಿರುತ್ತದೆ.

ನಮ್ಮ ದೇಶದ ಮತದಾರ ಎಲ್ಲ ಕಾಲಕ್ಕೂ ಒಂದೇ ಮಾನದಂಡವನ್ನಿಟ್ಟುಕೊಂಡು ಮತದಾನ ಮಾಡುವುದಿಲ್ಲ. ಅವನು ರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯಗಳನ್ನು ಬೇರೆ ಬೇರೆಯಾಗಿ ನೋಡಿ ಅದರ ಯೋಗ್ಯತಾನುಸಾರ ಮತದಾನ ಮಾಡುತ್ತ ಬರುತ್ತಿದ್ದಾನೆ. ಕರ್ನಾಟಕದಂತಹ ರಾಜ್ಯದಲ್ಲಿ ಮತದಾರ ಒಮ್ಮೆ ಕೇಂದ್ರದಲ್ಲಿ ಬಾಜಪಕ್ಕೆ ಮತಚಲಾಯಿಸಿದ್ದರೂ ರಾಜ್ಯದ ವಿಷಯಕ್ಕೆ ಬಂದಾಗ ಬಾಜಪಕ್ಕೆ ವಿರುದ್ದವಾಗಿಯೂ ಮತಚಲಾಯಿಸಬಲ್ಲ ಮನಸ್ಥಿತಿ ಹೊಂದಿರುತ್ತಾನೆ. ಮತದಾರನಿಗೆ ಕೇಂದ್ರ ಮತ್ತು ರಾಜ್ಯಗಳ ಚುನಾವಣೆಗಳಲ್ಲಿ ಮತಚಲಾಯಿಸುವಾಗ ಅವನದೇ ಆದ ಪ್ರತ್ಯೇಕ ಆಯ್ಕೆಯ ಅವಕಾಶ ಇರುತ್ತದೆ. ಅಂತಹ ಆಯ್ಕೆಯ ಸ್ವಾತಂತ್ರವನ್ನೇ ಕಸಿದುಕೊಳ್ಳುವ ಹುನ್ನಾರವೂ ಇದರ ಹಿಂದಿದೆ.

ಇಂಡಿಯಾದಂತಹ ವಿಶಾಲವಾದ ಸಂಸದೀಯ ಪ್ರಜಾಪ್ರಭುತ್ವ ಇವತ್ತಿಗೂ ಆರೋಗ್ಯಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರೆ ಅದಕ್ಕೆ ಮುಖ್ಯಕಾರಣ ಕಾಂಗ್ರೆಸ್ ಮತ್ತು ಬಾಜಪದಂತಹ ಬಲಿಷ್ಠ ರಾಷ್ಟ್ರೀಯ ಪಕ್ಷಗಳನ್ನು ಎದುರಿಸಿ ನಿಲ್ಲಬಲ್ಲ ಛಾತಿಯುಳ್ಳ ಪ್ರಾದೇಶಿಕ ಪಕ್ಷಗಳು ಇರುವುದಾಗಿದೆ. ಇದರಿಂದಾಗಿ ಬಲಿಷ್ಠವಾದ ಕೇಂದ್ರ ಸರಕಾರವೊಂದು ಸೃಷ್ಠಿಯಾಗಿ ದೆಹಲಿಯಲ್ಲಿ ಅಧಿಕಾರ ಕೇಂದ್ರೀಕೃತವಾಗುವುದು ಇದುವರೆಗು ಸಾದ್ಯವಾಗಿಲ್ಲ. ಆದರೆ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವ ಮೂಲಕ ಪ್ರಾದೇಶಿಕ ಪಕ್ಷಗಳ ಬಲವನ್ನು ಕಡಿಮೆ ಮಾಡಿಬಿಡಬಹುದೆನ್ನುವುಸದು ಬಾಜಪದ ತಂತ್ರವಾಗಿದೆ. ರಾಜಕೀಯವಾಗಿ ವೀರೋಧಪಕ್ಷ ಮುಕ್ತ ಭಾರತವನ್ನಾಗಿಸುವ ಬಾಜಪದ ಅನೇಕ ರಾಜಕೀಯ ತಂತ್ರಗಳ ಒಂದು ಭಾಗವನ್ನಾಗಿಯೇ ಈ ಏಕಕಾಲದ ಚುನಾವಣೆ ನಡೆಸುವ ವಿಷಯವನ್ನು ನಾವು ನೋಡಬೇಕಿದೆ.

ಇನ್ನು ಇಂಡಿಯಾದ ಗಣತಂತ್ರ ವ್ಯವಸ್ಥೆಯಲ್ಲಿ ಪ್ರತಿ ರಾಜ್ಯಗಳೂ ರಾಜಕೀಯ ಸಾರ್ವಭೌಮತ್ವವನ್ನು ಹೊಂದಿದ್ದು, ಆಡಳಿತ ನಡೆಸುತ್ತಿರುವ ಪಕ್ಷದಲ್ಲಿ ಶಾಸಕರು ವಿಶ್ವಾಸಾರ್ಹತೆಯನ್ನು ಕಳೆದುಕೊಂಡ ತಕ್ಷಣ ಅವಿಶ್ವಾಸ ಮಂಡಿಸಿ ಹೊಸ ಸರಕಾರವೊಂದನ್ನು ಆಯ್ಕೆ ಮಾಡಿಕೊಳ್ಳಬಹುದಾದ ಅವಕಾಶ ಮತ್ತು ಹಕ್ಕೊಂದನ್ನು ಹೊಂದಿವೆ. ಒಂದೇ ಸಾರಿಗೆ ಚುನಾವಣೆ ನಡೆಸುವ ಹೊಸ ಶಾಸನ ಜಾರಿಯಾದ ಮೇಲೆ ರಾಜ್ಯಗಳ ಈ ರಾಜಕೀಯ ಪರಮಾಧಿಕಾರ ಇಲ್ಲವಾಗಿಬಿಡುತ್ತದೆ. ಬಾಜಪದ ಉದ್ದೇಶವಿರುವುದೇ ರಾಜ್ಯಗಳ ಅಧಿಕಾರಗಳನ್ನು ಮೊಟಕು ಗೊಳಿಸಿ ಬಲಿಷ್ಠ ಕೆಂದ್ರಸರಕಾರವನ್ನು ರಚಿಸುವುದಾಗಿದೆ

ಬಾಜಪದ ಇಂತಹ ರಾಜಕೀಯ ಉದ್ದೇಶಗಳನ್ನು ಅರ್ಥ ಮಾಡಿಕೊಂಡು ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವ ಬಗ್ಗೆ ಸವಿಸ್ತಾರವಾದ ಚರ್ಚೆಯೊಂದು ನಡೆಯಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರದ ಕಾನೂನು ಸಚಿವಾಲಯ ಸೂಕ್ತವಾದ ಚರ್ಚೆ ನಡೆಸಲು ಮುಂದಾಗಬೇಕಾಗಿದೆ. ಮುಖ್ಯವಾಗಿ ನಮ್ಮ ರಾಜಕೀಯ ಪಕ್ಷಗಳು ಈ ವಿಷಯದ ಬಗ್ಗೆ ತಮ್ಮ ಸ್ಪಷ್ಟ ನಿಲುವನ್ನು ಜನತೆಯ ಮುಂದಿಡಬೇಕಿದೆ. ನಂತರವಷ್ಟೆ ಅಂತಿಮ ನಿರ್ದಾರ ಮಾಡಬೇಕು. ಇಂಡಿಯಾದ ಪ್ರಜಾಪ್ರಭುತ್ವವನ್ನು ಕಾಪಾಡುವ ಉದ್ದೇಶದಿಂದ ನಮ್ಮ ರಾಜಕೀಯ ಪಕ್ಷಗಳು ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಮರೆತು ವಸ್ತುನಿಷ್ಠವಾಗಿ ಚರ್ಚಿಸಿ ಮುನ್ನಡೆಯಬೇಕಿದೆ

(ದಿನಾಂಕ:17-04-2018ರಂದು ನೀತಿ ಆಯೋಗದ ಸಭೆಯಲ್ಲಿ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ಏಕಕಾಲಕ್ಕೆ ಎಲ್ಲ ಚವುನಾವಣೆಗಳನ್ನು ನಡೆಸಲು ಸಿದ್ದತೆ ಮಾಡಿಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದ ಸಂದರ್ಭದಲ್ಲಿ ಬರೆದ ಲೇಖನ)

No comments:

Post a Comment