Jul 16, 2018

ಕರಾಳ ರಾತ್ರಿಯೆಂಬ ಸರ್ಪ್ರೈಸ್ ಪ್ಯಾಕೇಜು!

ಡಾ. ಅಶೋಕ್.ಕೆ.ಆರ್ 
‘ಆ ಕರಾಳ ರಾತ್ರಿ’ ಎಂಬೆಸರಿನ ಸಿನಿಮಾವೊಂದು ಬಿಡುಗಡೆಯಾಗಿರುವ ವಿಷಯವೇ ತಿಳಿದಿರಲಿಲ್ಲ ಎಂದ ಮೇಲೆ ಅದು ಯಾವ ಥಿಯೇಟರಿನಲ್ಲಿದೆ ಅನ್ನುವುದನ್ನೆಲ್ಲ ಹುಡುಕಾಡಿ ಸಿನಿಮಾ ನೋಡುವುದು ದೂರದ ಮಾತೇ ಸೈ! ಬೆಂಗಳೂರು ಮಿರರ್ ನ ಶ್ಯಾಮ್ ಪ್ರಸಾದ್ ‘ಆ ಕರಾಳ ರಾತ್ರಿ’ ಚಿತ್ರಕ್ಕೆ ಮೂರುವರೆ ಸ್ಟಾರ್ ಕೊಟ್ಟಿದ್ದೇ ಈ ಸಿನಿಮಾ ನೋಡಲು ಕಾರಣ! ಯಾವ ಸಿನಿಮಾವನ್ನೂ ಸುಖಾಸುಮ್ಮನೆ ಶ್ಯಾಮ್ ಪ್ರಸಾದ್ ಹೊಗಳೋರಲ್ಲ ಅನ್ನೋ ನಂಬುಗೆಯಿಂದ ಚಿತ್ರಮಂದಿರದೊಳಗೆ ಕಾಲಿಟ್ಟಾಗಲೇ ಗೊತ್ತಾಗಿದ್ದು ಇದು ದಯಾಳ್ ಪದ್ಮನಾಭನ್ ನಿರ್ಮಾಣ ನಿರ್ದೇಶನದ ಚಿತ್ರವೆಂದು! 

ದಯಾಳ್ ಅವರ ಸಿನಿಮಾಗಳು ಯಾವುವೂ ಹೇಳಿಕೊಳ್ಳುವಷ್ಟು ಮೆಚ್ಚುಗೆಯಾಗಿರಲಿಲ್ಲ ನನಗೆ. ಇದು ಹೇಗಿದೆಯೋ ಅಂದುಕೊಂಡೇ ಕುಳಿತಿದ್ದೆ. ದೂರದ ಊರೊಂದರ ಚಿತ್ರಣ, ಆ ಊರಲ್ಲೊಂದು ಪುಟ್ಟ ಸಂಸಾರ: ಗಂಡ (ರಂಗಾಯಣ ರಘು), ಹೆಂಡತಿ (ವೀಣಾ ಸುಂದರ್), ಮಗಳು (ಮಲ್ಲಿಕಾ - ಅನುಪಮ ಗೌಡ). ಸಾರಾಯಿ ಅಂಗಡಿಯನ್ನೇ ನೆಚ್ಚಿಕೊಂಡ ಗಂಡ, ಹೆರಿಗೆ ಮಾಡಿಸುವುದರಲ್ಲಿ ಪರಿಣಿತಳಾದ ಹೆಂಡತಿ, ಮನೆಯಲ್ಲಿನ ಬಡತನದ ಕಾರಣದಿಂದ ಇನ್ನೂ ಮದುವೆಯಾಗದ ಹಪಾಹಪಿಯ ಮಗಳು. ಪ್ರತಿ ಪಾತ್ರವನ್ನೂ ತುಂಬಾ ಗಮನವಿಟ್ಟು ಕಟ್ಟಿಕೊಡುತ್ತಾರೆ ನಿರ್ದೇಶಕರು. 
ಇಂತಿದ್ದ ಊರಿಗೆ ಅಲೆಮಾರಿ ಚನ್ನಕೇಶವ (ಜಯರಾಮ್ ಕಾರ್ತಿಕ್) ಪ್ರವೇಶಿಸುತ್ತಾನೆ. ಅಲೆದಾಡುತ್ತಾ ಊರಾಚೆಗಿನ ತೋಟದಲ್ಲಿರುವ ರಂಗಾಯಣ ರಘುವಿನ ಮನೆಗೆ ಬರುತ್ತಾನೆ. ನೀರು ಕೇಳುವ ನೆಪದಲ್ಲಿ ಬಂದವ ರಾತ್ರಿ ಕಳೆಯಲು ಅನುಮತಿ ಬೇಡುತ್ತಾನೆ. ಕೋಳಿ ಸಾರು ಮುದ್ದೆಯ ಬೇಡಿಕೆಯನ್ನೂ ಮುಂದಿಡುತ್ತಾನೆ. 

ತಮ್ಮ ಸಾಲ, ಬಡ್ಡಿ ವೀರಣ್ಣನ ಕಾಟವನ್ನೆಲ್ಲ ಅಪರಿಚಿತನ ಬಳಿ ತೋಡಿಕೊಳ್ಳುತ್ತಾರೆ. ತನ್ನಲ್ಲಿ ಬಹಳಷ್ಟು ಒಡವೆ - ಹಣವಿದೆ ಎಂದು ತೋರಿಸುತ್ತಾನೆ ಚನ್ನಕೇಶವ. ಅಪರಿಚಿತ ಮೇಲೆ ಮೋಹಗೊಂಡು ತಿರಸ್ಕೃತಗೊಳ್ಳುವ ಅಪಮಾನಕ್ಕೀಡಾಗುವ ಮಗಳಿಗೆ ಅಪರಿಚಿತನ ಸಾವೇ ತಮ್ಮೆಲ್ಲಾ ಕಷ್ಟಗಳಿಗೆ ಪರಿಹಾರ, ತನ್ನ ಮದುವೆಯ ಹಾದಿ ಸುಗಮಗೊಳ್ಳಲಿರುವ ದಾರಿಯೂ ಇದೇ ಎಂಬ ಭಾವನೆ ಮೂಡಲಾರಂಭಿಸುತ್ತದೆ. ಅವಳ ತಂದೆ ತಾಯಿಯೂ ಈ ಪರಿಹಾರವನ್ನು ಒಪ್ಪುತ್ತಾರಾ? ಅಪರಿಚಿತನನ್ನು ಕೊಂದು ತಮ್ಮ ಕಷ್ಟ ಪರಿಹರಿಸಿಕೊಳ್ಳುತ್ತಾರಾ?

ಮತ್ತಷ್ಟು ಸಿನಿಮಾಗಳ ವಿಮರ್ಶೆ ಓದಲು ಇಲ್ಲಿ ಕ್ಲಿಕ್ಕಿಸಿ 

ಮೋಹನ್ ಹಬ್ಬೂರರ ಕಥೆಯನ್ನು ಸಿನಿಮಾಕ್ಕಾಗಿ ಚೊಕ್ಕಗೊಳಿಸಿ ಅಳವಡಿಸಿಕೊಂಡಿದ್ದಾರೆ ನವೀನ್ ಕೃಷ್ಣ ಮತ್ತು ದಯಾಳ್. ಮೊದಲರ್ಧ ನಿಧಾನವೇ ಪ್ರಧಾನವೆಂಬಂತಿದೆ. ಇದೆಂತ ಸಿನಿಮಾನಪ್ಪ ಅಂತ ಒಂದೆರಡು ಬಾರಿ ಆಕಳಿಸಿದರೂ ಅಚ್ಚರಿಯಿಲ್ಲ! ದ್ವೀತಿಯಾರ್ಧ ಚುರುಕಾಗಿದೆ. ಕೊನೆಯ ಹತ್ತು ನಿಮಿಷವಂತೂ ಸಿನಿಮಾದ ಎಲ್ಲಾ ಚಿಕ್ಕ ಪುಟ್ಟ ನೂನ್ಯತೆಗಳನ್ನೂ ಮರೆಮಾಚಿಸಿಬಿಡುತ್ತದೆ. ಕೆಟ್ಟವರಲ್ಲದ ಜನರನ್ನೂ ಕೂಡ ಪರಿಸ್ಥಿತಿಗಳು ಮೃಗೀಯಗೊಳಿಸಬಲ್ಲವು. ಮೃಗೀಯ ವರ್ತನೆ ಕೂಡ ಮನುಷ್ಯ ಸಹಜ ಗುಣವೇ ಹೌದು ಎನ್ನುವುದನ್ನು ವೀಕ್ಷಕ ಕೂಡ ಒಪ್ಪಿಬಿಡುವಂತಹ ದೃಶ್ಯಗಳಿವೆ. ನಿಸರ್ಗದ ಲೆಕ್ಕಕ್ಕೆ ಪ್ರಾಣಿಯೇ ಆದ ಮನುಷ್ಯನ ಸಹಜ ಮೃಗೀಯ ಗುಣ ಗೆಲ್ಲುತ್ತದಾ ಅಥವಾ ಮನುಷ್ಯ ಜತನದಿಂದ ರೂಪಿಸಿಕೊಂಡಿರುವ ಮಾನವೀಯತೆ ಗೆಲ್ಲುತ್ತದಾ? 

ಚಿತ್ರಕಥೆಯಷ್ಟೇ ಅಚ್ಚುಕಟ್ಟಾಗಿದೆ ಪಿ.ಕೆ.ಹೆಚ್. ದಾಸರ ಛಾಯಾಗ್ರಹಣ. ಡ್ರೋನ್ ಕ್ಯಾಮೆರಾಗಳನ್ನು ಮನಸೋ ಇಚ್ಛೆ ಬಳಸುವವರ ನಡುವೆ ಪಿ.ಕೆ.ಹೆಚ್.ದಾಸ್ ವಿಭಿನ್ನವಾಗಿ ನಿಲ್ಲುತ್ತಾರೆ. ಗಣೇಶ್ ನಾರಾಯಣರ ಸಂಗೀತ ಮಂಕುತಿಮ್ಮನ ಕಗ್ಗವನ್ನು ಸಮರ್ಥವಾಗಿ ಬಳಸಿಕೊಂಡಿದೆ. ಜಯರಾಮ್ ಕಾರ್ತಿಕ್, ಅನುಪಮ ಗೌಡ, ವೀಣಾ ಸುಂದರ್, ರಂಗಾಯಣ ರಘು, ಒಂದೇ ದೃಶ್ಯದಲ್ಲಿ ಬಂದು ಹೋಗುವ ನವೀನ್ ಕೃಷ್ಣ ಸಹಜವಾಗಿ ಪರಿಣಾಮಕಾರಿಯಾಗಿ ಅಭಿನಯಿಸಿದ್ದಾರೆ. ಆದರೆ ಚಿತ್ರವನ್ನು ಸಂಪೂರ್ಣವಾಗಿ ಆವರಿಸಿಕೊಂಡು ನೆನಪಿನಲ್ಲುಳಿದು ಕಾಡುವುದು ಅನುಪಮ ಗೌಡ ಅಭಿನಯ. 

ಕಡಿಮೆ ಖರ್ಚಿನಲ್ಲಿ ಉತ್ತಮ ಚಿತ್ರ ಮಾಡುವುದೇಗೆ ಎನ್ನುವುದಕ್ಕೆ ‘ಆ ಕರಾಳ ರಾತ್ರಿ’ಯೇ ಸಾಕ್ಷಿ. ಸಿನಿಮಾ ಉತ್ತಮಗೊಳ್ಳಲು ಕತೆಯೇ ಜೀವಾಳ ಎನ್ನುವುದನ್ನು ‘ಆ ಕರಾಳ ರಾತ್ರಿ’ ನಿರೂಪಿಸುತ್ತದೆ.

No comments:

Post a Comment