Nov 18, 2016

ಮೇಕಿಂಗ್ ಹಿಸ್ಟರಿ: ಮೂರನೇ ಅಲೆ: ರೈತರ ಗೆರಿಲ್ಲಾ ಯುದ್ಧ

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ನಗರ ರೈತರ ಗೆರಿಲ್ಲಾ ಯುದ್ಧದ ಕೆಲವು ವಿಶಿಷ್ಟ ಲಕ್ಷಣಗಳನ್ನೀಗ ನೋಡೋಣ; ಆ ಯುದ್ಧದ ಸಾಧನೆಗಳು ಮತ್ತು ಅದು ಸೃಷ್ಟಿಸಿದ ಸಂಕಟಗಳು ಶತ್ರುಗಳನ್ನು ಮುಗ್ಗರಿಸುವಂತೆ ಮಾಡಿದ್ದನ್ನು ನೋಡೋಣ. ನಗರದ ಬಂಡಾಯದ ಮೂರನೇ ಹಂತದಲ್ಲಿ ಸಶಸ್ತ್ರ ಹೋರಾಟವು ಬಹುಮುಖ್ಯ ಜನಪ್ರಿಯ ಹೋರಾಟವಾಗಿದ್ದದ್ದು ಸ್ಪಷ್ಟವಾಗಿದೆ. 

i) ವರ್ಗ ಸಂಯೋಜನೆಯಲ್ಲಾದ ಬದಲಾವಣೆ 
ಹೋರಾಟದ ವಿವಿಧ ಹಂತಗಳಲ್ಲಿ, ಹೋರಾಟದ ಮಾದರಿಯೂ ಬದಲಾಗುತ್ತಿತ್ತು. ಜೊತೆ ಜೊತೆಗೇ, ಚಳುವಳಿಯಲ್ಲಿನ ವರ್ಗ ಸಂಯೋಜನೆ ಮತ್ತು ಪಾತ್ರಗಳಲ್ಲೂ ಬದಲಾವಣೆಯಾಗುತ್ತಿತ್ತು. ಈ ಬದಲಾವಣೆಗಳು ಹೋರಾಟದ ಹಂತಗಳ ಮಾರ್ಪಡುವಿಕೆಯನ್ನು ಗುರುತಿಸುತ್ತಿತ್ತು ಮತ್ತು ಅಳವಡಿಸಿಕೊಂಡ ಮಾದರಿಯನ್ನು ನಿರ್ಧರಿಸುತ್ತಿತ್ತು. ಬಂಡಾಯದ ಬಗೆಗಿನ ಯಾವುದೇ ಸಾಮಾನ್ಯ ವಿಶ್ಲೇಷಣೆಯನ್ನೂ ಈ ಅಂಶದ ಆಧಾರದ ಮೇಲೆ ನಿರ್ಧರಿಸುವುದು ಅವಶ್ಯಕ. 
ಕರಾವಳಿಯಲ್ಲಿನ ‘ಕೂಟ ಕ್ರಾಂತಿ’ಯ ಬಗ್ಗೆ ಶ್ಯಾಮ್ ಭಟ್ ನಡೆಸಿದ ವಿಶ್ಲೇಷಣೆಯಿಂದ ಇದನ್ನು ಪ್ರಾರಂಭಿಸುವುದು ಒಳ್ಳೆಯದು. ಅವರು ಬರೆಯುತ್ತಾರೆ: “ಅವನ ನಾಯಕತ್ವದಲ್ಲಿ, ಅದು ಇಡೀ ಭೌಗೋಳಿಕ ವ್ಯಾಪ್ತಿಯಲ್ಲಿ ವ್ಯಾಪಿಸಿತ್ತು ಮತ್ತು ವ್ಯಾಪಕವಾಗಿತ್ತು. ನಾಯಕರು ಬ್ರಾಹ್ಮಣ ಮತ್ತು ಬಂಟ್ ಸಮುದಾಯಕ್ಕೆ ಸೇರಿದವರಾಗಿದ್ದರು. ಆಸಕ್ತಿಯ ವಿಷಯವೆಂದರೆ ಬಹಳಷ್ಟು ಪ್ರಮುಖ ನಾಯಕರು ಸರಕಾರಿ ಅಧಿಕಾರಿಗಳಾಗಿದ್ದರು ಯಾಕೆಂದರೆ ಅವರು ಭೂಒಡೆಯರಾಗಿದ್ದರು ಮತ್ತು ಈ ಕಾರಣದಿಂದ ಅವರಲ್ಲಿ ಸರಕಾರದ ವಿರುದ್ಧ ದೂರುಗಳಿದ್ದವು. 

ಚಳುವಳಿಯನ್ನು ಬೆಂಬಲಿಸಿ ಅದನ್ನು ಮುನ್ನಡೆಸಿದ ಮುಖ್ಯ ವರ್ಗಗಳೆಂದರೆ ಶ್ರೀಮಂತ ಮತ್ತು ಮಧ್ಯಮ ವರ್ಗದ ರೈತರು ಅಥವಾ ಭೂಮಾಲೀಕರು. ಕಂದಾಯವು ಹೆಚ್ಚಿದ್ದಾಗ ಮತ್ತು ಆರ್ಥಿಕ ಪರಿಸ್ಥಿತಿ ಅನಾನುಕೂಲಕರವಾಗಿದ್ದಾಗ, ಅವರಿಗೆ ಸರಕಾರದ ಬೇಡಿಕೆಗಳನ್ನು ಈಡೇರಿಸಲು ಆಗುತ್ತಿರಲಿಲ್ಲ, ಕಂದಾಯ ಕಟ್ಟುವುದನ್ನು ನಿರಾಕರಿಸುವುದಷ್ಟೇ ಅಲ್ಲದೆ, ಸರಕಾರದ ನೀತಿಗಳ ವಿರುದ್ಧ ಬಹಿರಂಗವಾಗಿ ಮಾತನಾಡಿದರು. ತಮ್ಮ ಭೂಮಿಯನ್ನು ತಾವೇ ಉಳುಮೆ ಮಾಡುತ್ತಿದ್ದ ಬಡ ರೈತರು ಇಷ್ಟು ದೊಡ್ಡ ಮೊತ್ತದ ಕಂದಾಯ ಕಟ್ಟಲು ಸಾಧ್ಯವಾಗದೆ ರೈತ ಬಂಡಾಯಕ್ಕೆ ಜೊತೆಯಾದರು. ಕೆನರಾದಲ್ಲಿ ಆಗ ಕಮಿಷನರ್ರಾಗಿದ್ದ ಜಾನ್ ಸ್ಟೋಕ್ಸ್ ಚಳುವಳಿಯಲ್ಲಿ ಭಾಗವಹಿಸಿದ್ದವರ ವಿಚಾರಣೆ ನಡೆಸಿದ ದಾಖಲೆಗಳನ್ನು ಪರಿಶೀಲಿಸಿದಾಗ ಇದು ಸ್ಪಷ್ಟವಾಗುತ್ತದೆ. ಮೊದಲೇ ಹೇಳಿದಂತೆ, ಈ ರಹಸ್ಯ ಸಭೆಯ ಸದಸ್ಯರು ರೈತ ಪ್ರಮುಖರಾಗಿದ್ದರು ಮತ್ತು ಶ್ರೀಮಂತ ಭೂಮಾಲೀಕರಾಗಿದ್ದರು”. (110) 

ಕೂಟ ರೂಪವು ಪ್ರಮುಖವಾಗಿದ್ದ ಚಳುವಳಿಯ ಮೊದಲ ಹಂತದಲ್ಲಿ, ವರ್ಗ ಸ್ಥಾನಗಳು ಶ್ಯಾಮ್ ಭಟ್ಟರ ಕೆನರಾದ ವರದಿಗಿಂತ ಭಿನ್ನವಾಗಿರಲಿಲ್ಲ. ಕರಾವಳಿಯ ಭೂಮಾಲೀಕರು ಇನ್ನಷ್ಟು ಪ್ರಬಲವಾಗಿದ್ದರು ಮತ್ತು ಭಾಗವಹಿಸಿದ ಸರಕಾರಿ ಅಧಿಕಾರಿಗಳ ಸಂಖೈ ಬಹುಶಃ ಇನ್ನೂ ಹೆಚ್ಚಿತ್ತು ಎನ್ನುವುದನ್ನು ಹೊರತುಪಡಿಸಿದರೆ ಉಳಿದೆಲ್ಲದರಲ್ಲೂ ಸಾಮ್ಯತೆಯಿತ್ತು. 

ಕಿಕ್ಕೇರಿಯಲ್ಲಿ, ನೂರಾರು ರೈತರ ದನಿಯಾಗಿ ರಾಜನ ಬಳಿ ತಮ್ಮ ಪ್ರತಿಭಟನೆಯನ್ನು ತೋರಲು ಬಂದಿದ್ದ ಪ್ರತಿನಿಧಿಗಳಲ್ಲಿ “ಈ ಮುಂಚೆ ಸರಕಾರೀ ಅಧಿಕಾರಿಯಾಗಿದ್ದ ಕುಸಪ್ಪ ಬಂಡಾಯಗಾರರ ಸ್ವಘೋಷಿತ ಮುಖಂಡನಾಗಿದ್ದ ಮತ್ತು ಈ ವ್ಯಕ್ತಿಯನ್ನು ಬಂಧಿಸಲು ಆದೇಶ ಹೊರಡಿಸಲಾಯಿತು” ಎಂದು ನಮಗೆ ತಿಳಿಸಲಾಗಿದೆ. (111) 

1831ರ ಜನವರಿ 5ರಂದು ಬರೆದ ಪತ್ರದಲ್ಲಿ ಕಾಸಾಮೈಯೂರ್ ಕೂಟದ ರಚನೆಯನ್ನು ವಿವರಿಸಿದ್ದನ್ನು ನಾವೀಗಾಗಲೇ ನೋಡಿದ್ದೇವೆ, ಅದರಲ್ಲಾತ “ತಾಲ್ಲೂಕಿನ ಮುಖ್ಯ ಪಟೇಲರು ‘ಕೂಟಂ’ ಎಂಬ ಸಂಘಗಳನ್ನು ರಚಿಸಿಕೊಂಡಿದ್ದರು, ಒಂದೊಂದು ಕೂಟದಲ್ಲೂ ಎರಡರಿಂದ ಮೂರು ಸಾವಿರ ರೈತರಿದ್ದರು” ಎಂದು ತಿಳಿಸುತ್ತಾನೆ”. (112) 

ದಕ್ಷಿಣ ಕನ್ನಡದ ಕೂಟಗಳಂತೆಯೇ, ಕೂಟವನ್ನು ಮುನ್ನಡೆಸುತ್ತಿದ್ದವರಲ್ಲಿ ಭೂಮಾಲೀಕ ವರ್ಗವಿತ್ತು. ಗ್ರಾಮಗಳಲ್ಲಿ, ಶ್ರೀಮಂತ ರೈತರ ಭಾಗವಹಿಸುವಿಕೆ ಹೆಚ್ಚಿತ್ತು ಎಂದು ನಾವು ನಿರೀಕ್ಷಿಸಬಹುದು, ಹೆಚ್ಚಾಗಿದರಲ್ಲಿ ಮೇಲ್ಜಾತಿಗಳವರೇ ಇದ್ದರಾದರೂ ಪೂರ್ತಿ ಅವರೇ ಇರಲಿಲ್ಲ. ಕೂಟದ ಸದಸ್ಯತ್ವದಲ್ಲಿದ್ದ ವಿವಿಧತೆ ಅದರ ಜನಪ್ರಿಯತೆಯನ್ನು ತೋರಿಸಿಕೊಡುತ್ತದೆ, ಮತ್ತು ಅದು ಬಡ ರೈತರ, ಗುತ್ತಿಗೆದಾರರ ನಡುವೆಯೂ ಹರಡಿದ್ದರ ಕಾರಣವನ್ನು ತಿಳಿಸುತ್ತದೆ. ಶಾಮ ರಾವ್ ತಿಳಿಸುವಂತೆ ಈಡಿಗರು ಇದರಲ್ಲಿ ಭಾಗವಹಿಸಿದ್ದರು. ಚಳುವಳಿಯ ಈ ಹಂತದಲ್ಲಿ, ಶ್ರೀಮಂತ ರೈತರು ಮತ್ತು ಭೂಮಾಲೀಕರು ಚಳುವಳಿಯನ್ನು ಮುನ್ನಡೆಸಿದ್ದು ಸ್ಪಷ್ಟವಾಗುತ್ತದೆ, ರಂಗಪ್ಪ ನಾಯಕ ಮತ್ತು ಬುಡಿ ಬಸಪ್ಪ ಈ ವರ್ಗಗಳನ್ನು ಪ್ರತಿನಿಧಿಸುತ್ತಿದ್ದರು – ಬಸಪ್ಪನಿಗೆ ಶ್ರೀಮಂತ ರೈತ – ಚಿಕ್ಕ ಭೂಮಾಲೀಕನ ಹಿನ್ನೆಲೆಯಿತ್ತು, ರಂಗಪ್ಪನಂತೆ ಆತ ಮಾಜಿ ಪಾಳೇಗಾರನಾಗಿರಲಿಲ್ಲ. ಕೂಟ ಹೊರಹೊಮ್ಮಿದ್ದಕ್ಕೆ ಪ್ರದೇಶ ಪ್ರದೇಶಗಳ ನಡುವಿದ್ದ ಬಂಧವೂ ಕಾರಣವಾಗಿತ್ತು; ಮುಂದಾಳತ್ವವು ಬಳ್ಳಾರಿ, ಧಾರವಾಡ ಮತ್ತು ರಾಯಚೂರು ಜಿಲ್ಲೆಗಳಿಗೂ ಹಬ್ಬಿತ್ತು. ಶ್ರೀಮಂತ ರೈತ ವರ್ಗವು ಈ ಜಿಲ್ಲೆಗಳಿಗೆ ವಲಸೆ ಹೋಗಿ, ಕಂದಾಯವನ್ನು ಕಡಿಮೆ ಮಾಡುವಂತೆ ಅಮಲ್ದಾರರ ಮೇಲೆ ಒತ್ತಡ ಹಾಕುವುದು ಒಂದು ರೀತಿಯ ಪ್ರತಿಭಟನೆಯ ದಾರಿಯಾಗಿತ್ತು; ಕಡಿಮೆ ಮಾಡದಿದ್ದರೆ ಇಡೀ ಹಳ್ಳಿಯಿಂದ ಕಂದಾಯ ಸಿಗುತ್ತಿರಲಿಲ್ಲ. ಬಡರೈತರಿಗಿದ್ದ ಮತ್ತೊಂದು ದಾರಿಯೆಂದರೆ ಕಂದಾಯ ಅಧಿಕಾರಿಗಳು ಕಣ್ಣಿಗೆ ಬಿದ್ದ ತಕ್ಷಣ ಕಾಡಿನೊಳಗೆ ಓಡಿ ಹೋಗುವುದು. ಕೆನರಾದ ಕಮಿಷನರ್ ಕ್ಯಾಮರೂನ್ ಫೋರ್ಟ್ ಸೆಂಟ್ ಜಾರ್ಜನಿಗೆ ಬರೆದ ಪತ್ರದಲ್ಲಿ ಇದು ಗೊತ್ತಾಗುತ್ತದೆ. “ಈಗಾಗಲೇ ನಾನು ಸರಕಾರಕ್ಕೆ ನೀಡಿರುವ ಮಾಹಿತಿಯಂತೆ, ವಿಭಿನ್ನ ರೀತಿ ನೀತಿಯ ಅಸಂಖ್ಯಾತ ಜನರು ತಮಗೆ ಬೇಕಾಗಿರುವ ಆಹಾರಕ್ಕಾಗಿ ಮತ್ತು ತಮ್ಮ ಆಕಳುಗಳಿಗೆ ಬೇಕಿರುವ ಮೇವಿಗಾಗಿ ದಕ್ಷಿಣ ಮರಾಠ ದೇಶವನ್ನು ತೊರೆದು ಸೂಪ ಮತ್ತು ಸಿರ್ಸಿ ತಾಲ್ಲೂಕಿನ ಅರಣ್ಯಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಈ ಜನರಲ್ಲಿ ಹೆಚ್ಚಿನವರು ಬಡವರು, ನಿರ್ಗತಿಕರು; ಆಹಾರದ ಭರವಸೆ ಸಿಕ್ಕರೆ ಏನನ್ನಾದರೂ ಮಾಡಿಬಿಡುವಂತವರು”. (113) 

ಕೂಟದ ಹಂತವು ಸಮೂಹ ಕಾರ್ಯಾಚರಣೆಯ ಹಂತವಾಗಿ ಬೆಳೆದಾಗ, ಜನಸಮೂಹಕ್ಕೆ ಸಕ್ರಿಯವಾಗಿ ಭಾಗವಹಿಸಲು ಅವಕಾಶವಿತ್ತು ಮತ್ತವರು ಸಾಧ್ಯವಾದಷ್ಟು ಬೇಗನೆ ಇದರಲ್ಲಿ ತೊಡಗಿಸಿಕೊಂಡರು. ಹಾಗಿದ್ದರೂ, ಭೂಮಾಲೀಕರ ಮುಖಂಡತ್ವ ಮುಂದುವರೆಯಿತು ಮತ್ತು ರೈತ ಮುಖಂಡತ್ವದೊಂದಿಗೆ ಸ್ಪರ್ಧೆಗಿಳಿಯಿತು. ಮೊದಲ ಸೈನಿಕ ಕಾರ್ಯಾಚರಣೆ ಮುಗಿದು ಎರಡನೇ ಹಂತದ ಸೈನಿಕ ಕಾರ್ಯಾಚರಣೆ ಪ್ರಾರಂಭವಾಗುವಷ್ಟರಲ್ಲಿ ಭೂಮಾಲೀಕರ ಬಳಿಯಿದ್ದ ಮುಂದಾಳತ್ವ ಕೈಬದಲಿಸಿತ್ತು. 

ಇದರ ರಾಜಕೀಯ ಕುರುಹುಗಳು ಇನ್ನೂ ತಡವಾಗಿ ಎರಡನೇ ಸೈನಿಕ ಕಾರ್ಯಾಚರಣೆಯ ಅಂತ್ಯದ ಸಮಯದಲ್ಲಿ ಕಂಡುಬಂತು. ಭೂಮಾಲೀಕರು ಶತ್ರುಗಳೊಡನೆ ಸಂಧಾನ ಮಾಡಿಕೊಂಡಿದ್ದರು ಮತ್ತು ಯುದ್ಧವನ್ನು ನಿರ್ವಹಿಸುವ ಜವಾಬ್ದಾರಿಯನ್ನು ರೈತ ಕಾರ್ಮಿಕರಿಗೆ ಬಿಟ್ಟುಬಿಡಲಾಗಿತ್ತು. 

ಯುದ್ಧದ ಸಮಯದಲ್ಲಿ, ಬುಡಿ ಬಸಪ್ಪ ನಾಯಕ ಚಳುವಳಿಯ ಪ್ರದೇಶಗಳ ಹೊರಗಡೆಯೇ ಇದ್ದ. 1830ರ ಕೊನೆಯಲ್ಲಿ, ಬುಡಿಬಸಪ್ಪ ಬಾಂಬೆ ಪ್ರಾಂತ್ಯದಲ್ಲಿದ್ದ ಧಾರವಾಡ ಜಿಲ್ಲೆಯ ರಾಣೆಬೆನ್ನೂರಿಗೆ ಹೋದ. ನಂತರ, ಸರಕಾರ ಅವನನ್ನು ಧಾರವಾಡದಲ್ಲಿ ಭೇಟೆಯಾಡಲಾರಂಭಿಸಿದಾಗ, ಆತ ನಗರ ಪ್ರದೇಶದಿಂದ ಮತ್ತಷ್ಟು ದೂರಕ್ಕೆ, ನಿಜಾಮದ ಆಡಳಿತವಿದ್ದ ರಾಯಚೂರಿಗೆ ಹೋದ. (114) ಬುಡಿ ಬಸಪ್ಪ ಯುದ್ಧರಂಗದಲ್ಲಿ ಕಾಣಿಸಿಕೊಂಡಿದ್ದು ಒಂದೇ ಒಂದು ಸಲ ಎನ್ನಲಾಗುತ್ತದೆ. ಜೊತೆಗೆ, ಆತ ಆ ಕದನದಲ್ಲಿ ಅರ್ಧಕ್ಕೇ ಹೊರಟು ಹೋದ. (115) ಪೀಠವನ್ನಲಂಕರಿಸುವ ಮುನ್ನವೇ ಆತ ಚಕ್ರವರ್ತಿಯಂತಾಡುತ್ತಿದ್ದ. ತನ್ನ ಬಗ್ಗೆ ವಿಪರೀತ ಕಾಳಜಿ ಹೊಂದಿದ್ದ ಆತ, ಯಾವ ಮಣ್ಣಿನಲ್ಲಿ ಸುರಕ್ಷತೆಯಿದೆಯೂ ಅಲ್ಲಿ ಮಾತ್ರ ಕಾಲಿಡುತ್ತಿದ್ದ. ತನ್ನಿರುವಿಕೆಯನ್ನು ಕೋವಿಮದ್ದಿನ ಮೂಲಕ ತೋರಿಸುವುದನ್ನಾತ ಆಯ್ಕೆ ಮಾಡಿಕೊಳ್ಳಲಿಲ್ಲ ಮತ್ತು ತನ್ನ ದೇಹದ ಮೇಲೆ ಕೊಳಚೆ ಹಾರುವುದನ್ನು, ತನ್ನ ಕತ್ತಿಗೆ ರಕ್ತ ಅಂಟಿಕೊಳ್ಳುವುದನ್ನು ಅಥವಾ ಯುದ್ಧದಲ್ಲಿ ಗಾಯಗೊಂಡ ತೋಳುಗಳನ್ನೊಂದುವುನ್ನಾತ ಆಯ್ದು ಕೊಳ್ಳಲಿಲ್ಲ. 

ಚಿಕ್ಕಮಗಳೂರು – ಶಿವಮೊಗ್ಗ ಪ್ರದೇಶದ ಮೇಲೆ ಪ್ರಭಾವ ಹೊಂದಿದ ತರೀಕೆರೆ ಪಾಳೇಗಾರ ಕುಟುಂಬದವರು ಶರಣಾದ ಭೂಮಾಲೀಕ ವರ್ಗದಲ್ಲಿ ಮೊದಲಿಗರು. ಮೈಸೂರಿನ ಹಿರಿಯ ಕಮಿಷನರ್ ಆಗಿದ್ದ (ಕೈಗೊಂಬೆ ಸರಕಾರವನ್ನು 1831ರ ಅಕ್ಟೋಬರಿನಲ್ಲಿ ಮಕಾಡೆ ಮಲಗಿಸಲಾಗಿತ್ತು) ಬ್ರಿಗ್ಸ್ ತರೀಕರೆಗೆ 1832ರ ಮೇ ತಿಂಗಳಲ್ಲಿ ಬಂದಾಗ “ಹಳ್ಳಿಗಳ ನಲವತ್ತು ಮುಖಂಡರು ಭೇಟಿಯಾದರು, ತಮ್ಮನ್ನು ಮತ್ತಷ್ಟು ಸಂಕಷ್ಟಗಳಿಂದ ಉಳಿಸಿಕೊಳ್ಳುವ ತವಕದಲ್ಲಿದ್ದರು ಮತ್ತು ಶಾಂತಿಯ ಸ್ಥಾಪನೆಗಾಗಿ ಅವನೊಡನೆ ಸಹಕರಿಸುವುದಾಗಿ ತಿಳಿಸಿದರು”. (116) 

ಅಲ್ಲಿಂದ ಆತ ಶಿವಮೊಗ್ಗಕ್ಕೆ ಮುಂದುವರೆದ, ಅಲ್ಲಿ ತರೀಕೆರೆ ಕುಟುಂಬದ ಹೆಚ್ಚು ಕಡಿಮೆ ಎಲ್ಲಾ ಪಾಳೇಗಾರರು ಅವನಿಗೆ ಶರಣಾದರು. ಶಾಮ ರಾವರ ಈ ಕೆಳಗಿನ ಬರಹ ಸಂಧಾನದ ಎಲ್ಲಾ ಅಂಶಗಳನ್ನೂ ತಿಳಿಸುತ್ತದೆ, ಊಳಿಗಮಾನ್ಯತೆಯ ಒಣಜಂಭ ಮತ್ತು ಹೇಗೆ ವಸಾಹತುಶಾಹಿ ಯಾವಾಗಲೂ ಅದನ್ನು ಮುದ್ದಿಸಿ ಬೆಳೆಸುತ್ತಿತ್ತು ಎಂದು ತಿಳಿಸುತ್ತದೆ. 

“ಶಿವಮೊಗ್ಗದಲ್ಲಿದ್ದಾಗ, ನಂಜಪ್ಪ ನಾಯಕನೆಂಬ ಪಾಳೇಗಾರ ಕುಟುಂಬದ ಸದಸ್ಯ ಬ್ರಿಗ್ಸಿಗೆ ಒಂದು ಮಾಹಿತಿಯನ್ನು ದೂತನ ಮೂಲಕ ಕಳುಹಿಸುತ್ತಾನೆ; ‘ನಾನು ಶಿವಮೊಗ್ಗದ ಸಮೀಪಕ್ಕೆ ಬಂದಿದ್ದೆ, ಆದರೆ ಅಣ್ಣಪ್ಪ (ಮೈಸೂರು ಪಡೆಯ ದಂಡನಾಯಕ) ನನ್ನ ಕುದುರೆಯನ್ನು ಎಳೆದೊಯ್ದಿದ್ದಾನೆ ಮತ್ತು ನಗರಕ್ಕೆ ಒಬ್ಬ ಸಾಮಾನ್ಯನಂತೆ ನಡೆದು ಬರಲು ನನಗೆ ಅವಮಾನವಾಗುತ್ತದೆ’ ಎಂದಾತ ತಿಳಿಸಿದ್ದ. ತತ್ ಕ್ಷಣವೇ, ಕಮಿಷನರ್ ಅವನಿಗೊಂದು ಕುದುರೆ ಕಳುಹಿಸಿದ ಮತ್ತು ಮರುದಿನ ಪಾಳೇಗಾರ ಆಗಮಿಸುತ್ತಿದ್ದಂತೆಯೇ ಆತನಿಗೆ ಕುದುರೆಯನ್ನು ಅವನಿಗೆ ಉಡುಗೊರೆಯಾಗಿ ನೀಡಿದ ಮತ್ತು ತುಂಬಿದ ಸಭೆಯಲ್ಲಾತನಿಗೆ ಖಿಲ್ಲತ್ ನೀಡಿದ. ಕಮಿಷನರರನ್ನು ಭೇಟಿಯಾಗುತ್ತಿದ್ದಂತೆ ನಂಜಪ್ಪ ನಾಯಕ ಏನೇನು ಶರತ್ತುಗಳಿವೆ ಎಂದು ತಿಳಿಯಬಯಸಿದ ಮತ್ತದಕ್ಕೆ ಪ್ರತಿಕ್ರಿಯೆಯಾಗಿ ಕುಟುಂಬದ ಎಲ್ಲಾ ಸದಸ್ಯರೂ ಶರಣಾಗಲೊಪ್ಪದೆ ಇದ್ದಲ್ಲಿ ಆ ವಿಷಯದ ಬಗ್ಗೆ ಯಾವುದೇ ಮಾತುಕತೆಗಳಿರುವುದಿಲ್ಲ ಎಂದು ತಿಳಿಸಲಾಯಿತು. ನಂಜಪ್ಪ ನಾಯಕನೊಡನೆ ಕುಟುಂಬದ ಇನ್ನಿಬ್ಬರು ಸದಸ್ಯರಾದ ಕೆಂಗಪ್ಪ ನಾಯಕ ಮತ್ತವನ ಮಗ ಹನುಮಪ್ಪ ನಾಯಕನೂ ಬಂದಿದ್ದರು. ಆದರೆ ಕುಟುಂಬದ ಸದಸ್ಯ ಸುರ್ಜಪ್ಪ ನಾಯಕನ ಸುಳಿವಿನ್ನೂ ಇರಲಿಲ್ಲ. ನಂಜಪ್ಪ ನಾಯಕ ದರೋಡೆಕೋರರನ್ನು ಹಿಡಿಯಲು ಕಮಿಷನರ್ರಿಗೆ ಬಹಳಷ್ಟು ಸಹಾಯ ಮಾಡಿ ಅವರ ಕೋಪ ತಣಿಯುವಂತೆ ಮಾಡಿದ ಮತ್ತು ಇನ್ನೊಂದು ತಿಂಗಳಲ್ಲಿ ಸುರ್ಜಪ್ಪ ನಾಯಕನನ್ನು ಕರೆತರುವುದಾಗಿ ಮಾತು ಕೊಟ್ಟ. 

ಜುಲೈ 11ರಂದು ಸುರ್ಜಪ್ಪ ನಾಯಕ ಶಿವಮೊಗ್ಗಕ್ಕೆ ಬಂದ, ತನ್ನ ದೊಡ್ಡ ಪಡೆಯನ್ನು ಪ್ರದರ್ಶಿಸುತ್ತಾ ಮತ್ತು ಮರುದಿನ ಕಮಿಷನರ್ ಮತ್ತು ಸುರ್ಜಪ್ಪ ನಾಯಕನ ಭೇಟಿ ನಿಗದಿಯಾಯಿತು. ರಾತ್ರಿ, ನಂಜಪ್ಪ ನಾಯಕನಿಗೆ ಕಾಲರಾ ಉಂಟಾಗಿ ಆತ ಇದ್ದಕ್ಕಿದ್ದಂತೆ ಮೃತಪಟ್ಟ. ಮರುದಿನ, ಕಮಿಷನರ್ ಸುರ್ಜಪ್ಪ ನಾಯಕನಿಗೆ ಒಂದಷ್ಟು ಹಣ ಕೊಟ್ಟು ಕಳುಹಿಸಿದ, ದಾನ ಧರ್ಮಕ್ಕಾಗಿ. ಸಾವಿನ ಕ್ರಿಯೆಗಳೆಲ್ಲ ಮುಗಿದ ನಂತರ, ಸುರ್ಜಪ್ಪ ನಾಯಕ ಜುಲೈ 19ರ ಮಧ್ಯಾಹ್ನದಂದು ಕಮಿಷನರ್ರನ್ನು ಭೇಟಿಯಾದ. ಬ್ರಿಗ್ಸ್ ಆತನನ್ನು ತಣ್ಣಗಿನ ಔಪಚಾರಿಕತೆಯೊಂದಿಗೆ ಆದರೆ ಪ್ರದರ್ಶಾರ್ಹ ಗೌರವದೊಂದಿಗೆ ಬರಮಾಡಿಕೊಂಡ. ಒಂದಷ್ಟು ಮಾತುಕತೆಗಳ ನಂತರ, ಸರಕಾರದ ವತಿಯಿಂದ ಮೂವತ್ತು ಪಗೋಡಾಗಳಷ್ಟು ನಿವೃತ್ತಿ ವೇತನ ದೊರೆಯುತ್ತದೆ ಮತ್ತಾತ ಮನೆಗೆ ಹಿಂದಿರುಗಬೇಕು, ಎರಡೂ ಕಡೆಯವರು ಹಳೆಯದನ್ನು ಮರೆತುಬಿಡಬೇಕು ಎಂಬೊಪ್ಪಂದಕ್ಕೆ ಬರಲಾಯಿತು. ಜುಲೈ ಇಪ್ಪತ್ತೈದರಂದು ದೇಶದ ಜನರ ದೊಡ್ಡ ಸಂಖೈ ನೆರೆದಿದ್ದ ಆಸ್ಥಾನದಲ್ಲಿ ಒಪ್ಪಂದದ ಶರತ್ತುಗಳನ್ನು ಓದಲಾಯಿತು. ಅವನಿಗೆ ಮತ್ತವನ ಕುಟುಂಬಸ್ಥರಿಗೆ ಬಟ್ಟೆಗಳನ್ನು ಉಡುಗೊರೆಯನ್ನಾಗಿ ನೀಡಲಾಯಿತು ಮತ್ತು ಕಮಿಷನರ್ರಿಂದ ಬೀಳ್ಕೊಂಡು ಸುರ್ಜಪ್ಪ ನಾಯಕ ಹೋಗುವಾಗ ಆತನನ್ನು ಹೊತ್ತೊಯ್ಯಲು ಒಂದು ಸುಂದರ ಕುದುರೆಯನ್ನೂ ಸಿದ್ಧಪಡಿಸಿಡಲಾಗಿತ್ತು. ಅದೇ ದಿನ ಪಾಳೇಗಾರನ ಬೆಂಬಲಿಗರನ್ನು ಕಮಿಷನರ್ ಮುಂದೆ ಕರೆತಂದು ಅವರಿಗೂ ಸಾಕಾಗುವಷ್ಟು ಹಣವನ್ನು ನೀಡಿ ಇನ್ಯಾವುದೇ ತೊಂದರೆಯುಂಟುಮಾಡದೇ ಮನೆಗಳಿಗೆ ಹಿಂದಿರುಗುವಂತೆ ಹೇಳಲಾಯಿತು. ಪಾಳೇಗಾರರನ್ನು ಸೇರಿದಾಗ ಸಾರ್ವಜನಿಕ ಸೇವೆಯಲ್ಲಿಲ್ಲದ, ಕೆಲವು ಪ್ರಮುಖ ನಾಯಕರನ್ನೂ ಪಟ್ಟಿ ಮಾಡಲಾಗಿತ್ತು ಮತ್ತವರು ಮನೆಗೆ ಹಿಂದಿರುಗಲು ಅನುಮತಿ ಸಿಕ್ಕವರ ನಡತೆಯ ಬಗ್ಗೆ ನಾವು ಜವಾಬ್ದಾರರಾಗಿರುತ್ತೇವೆ ಎಂದು ಪ್ರಮಾಣ ಮಾಡಿದರು”. (117) 

ತನ್ನ ಸಾಧನೆಯ ಬಗ್ಗೆ ಸಂತಸಗೊಂಡಿದ್ದ ಬ್ರಿಗ್ಸ್ ಬೆಂಗಳೂರಿಗೆ ಹಿಂದಿರುಗಿದ ನಂತರ ನಡೆದ ಘಟನೆಗಳ ಬಗ್ಗೆ ಬಡಾಯಿ ಕೊಚ್ಚಿಕೊಂಡಿದ್ದು ಹೀಗೆ: “ನನ್ನ ಜೀವವನ್ನು ಉಳಿಸುವುದಾದರೆ ಇಲ್ಲಿಗೆ ಬನ್ನಿ ಎಂದು ತರೀಕೆರೆಯ ಪಾಳೇಗಾರನಿಂದ ಕಮಿಷನ್ನಿಗೆ ಪದೇ ಪದೇ ಪತ್ರಗಳು ಬರುತ್ತಿತ್ತು….ಅವರ ಕುಲಸ್ಥರು ಮತ್ತು ಕುಟುಂಬಸ್ಥರನ್ನು ಹಿಂದಿನ ಸರಕಾರ ತುಂಬಾ ಕೆಟ್ಟದಾಗಿ ನಡೆಸಿಕೊಂಡ ಕಾರಣದಿಂದ ಉಂಟಾದ ಹತಾಶೆ ಮತ್ತು ತನ್ನ ದೇಶದ ಜನರ ಸಂಕಷ್ಟಗಳ ಕುರಿತು ಮೂಡಿದ ಅನುಕಂಪಗಳು ಅವನನ್ನು ಸರಕಾರದ ವಿರೋಧಿ ಬಣದ ಮುಖ್ಯಸ್ಥನಾಗುವಂತೆ ಮಾಡಿದಂತೆ ತೋರುತ್ತದೆ. ಕುಟುಂಬದ ಮುಖ್ಯಸ್ಥ ರಂಗಪ್ಪ ನಾಯಕ ತನ್ನ ಬಾಕಿಯನ್ನು ಚುಕ್ತಾ ಮಾಡಿದ್ದಾನೆ, ಅವನ ಹಿರಿಯ ಮಗ ಅಣ್ಣಪ್ಪನನ್ನು ಹಿಂದಿನ ದಿವಂಗತ ದಿವಾನರು ಬಂಧಿಸಿ ನೇಣಿಗೇರಿಸಿದ್ದರು. ಅವರ ಬೆಂಬಲಿಗರೀಗ ರಂಗಪ್ಪ ನಾಯಕರ ಸೋದರಳಿಯನ ಮುಂದಾಳತ್ವದಲ್ಲಿದ್ದಾರೆ; ಈ ಸೋದರಳಿಯ ರಂಗಪ್ಪ ನಾಯಕರ ಕುಲಸ್ಥ ಮತ್ತು ಅವರ ಹಿಂಬಾಲಕರಲ್ಲಿ ಒಬ್ಬನಷ್ಟೇ. ಬ್ರಿಟೀಷ್ ಸರಕಾರದ ಕರುಣೆಗಾಗಿ ಕಾಯುತ್ತಿರುವವನು”. (118) 

ಮೊದಲ ಸೈನಿಕ ಕಾರ್ಯಾಚರಣೆ ನಡೆದ ತರುವಾಯ ಈ ಪಾಳೇಗಾರರು ಬ್ರಿಟೀಷ್ ಸರಕಾರದೊಂದಿಗೆ ಸಂಧಾನ ಮಾಡಿಕೊಳ್ಳಲು ಪ್ರಯತ್ನಿಸುತ್ತಲೇ ಇದ್ದರು. 

1832ರ ಮಾರ್ಚಿಯಲ್ಲಿ ಬ್ರಿಟೀಷರಿಗೆ ನಂಜಪ್ಪ ನಾಯಕ ಬರೆದ ಪತ್ರದಲ್ಲಿ, ಯುದ್ಧ ಬೇಡುವ ತ್ಯಾಗದ ಕಾರಣದಿಂದಾಗಿ ಯುದ್ಧವನ್ನು ಮುಂದುವರೆಸಲಾಗದ ತನ್ನ ಅಸಹಾಯಕತೆಯನ್ನು ವಿವರಿಸುತ್ತಲೇ ಮತ್ತೊಂದೆಡೆ, ತನ್ನನ್ನು ಮೀರಿ ಬೆಳೆಯುತ್ತಿರುವ ಸಶಸ್ತ್ರ ಹೋರಾಟವನ್ನು ನಿಯಂತ್ರಿಸಲು ತನ್ನಿಂದಾಗದ ಕುರಿತೂ ತಿಳಿಸುತ್ತಾನೆ. 

“ನನ್ನ ಆರೋಗ್ಯ ಚೆನ್ನಾಗಿದೆ ಮತ್ತು ನಾನು ಕಾಡಿನೊಳಗೆ ಬದುಕುತ್ತಿದ್ದೇನೆ. ನನ್ನ ಭವಿಷ್ಯದ ನಡವಳಿಕೆಯ ಬಗ್ಗೆ ನಿಮ್ಮಿಂದ ಬರುವ ಆದೇಶಗಳನ್ನು ನಿರೀಕ್ಷಿಸುತ್ತಿದ್ದೇನೆ. ನೀವು ಮೈಸೂರು ಪ್ರಾಂತ್ಯದ ನಿರ್ವಹಣೆಯನ್ನು ನಿಮ್ಮ ಕೈಗೆ ತೆಗೆದುಕೊಂಡ ನಂತರ, ಆರು ತಿಂಗಳುಗಳಾಗಿದೆ, ನಿಮಗೆ ನನ್ನ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸುತ್ತಾ ಎಂಟರಿಂದ ಹತ್ತು ಅರ್ಜಿಗಳನ್ನು ಸಲ್ಲಿಸಿರುತ್ತೇನೆ. ಇಲ್ಲಿಯವರೆಗೂ ನನಗೆ ಸಿಗುವ ಸೌಲಭ್ಯಗಳ ಬಗ್ಗೆಯಾಗಲೀ ಶರತ್ತುಗಳ ಬಗ್ಗೆಯಾಗಲೀ ನಿಮ್ಮಿಂದ ಯಾವುದೇ ಮಾಹಿತಿ ಬಂದಿಲ್ಲ. ಹಾಗಾಗಿ ನಾನು ಮತ್ತೆ ಬರೆಯುತ್ತಿದ್ದೇನೆ. ಮೈಸೂರಿನ ಅಧಿಕಾರಿಗಳ ಕ್ರಮಗಳಿಂದಾಗಿ ಕಳೆದದಿನೆಂಟು ತಿಂಗಳುಗಳಿಂದ ನಮ್ಮಲ್ಲಿನ ಯಾತನೆ ಹೆಚ್ಚಾಗುತ್ತಿದೆ. ನಾವು ಕಾಡುಗಳಲ್ಲಿ ಉಳಿದುಬಿಟ್ಟಿರುವ ಪರಿಣಾಮವಾಗಿ, ಹಳ್ಳಿಗಳಲ್ಲಿ ವಾಸಿಸುತ್ತಿರುವ ಜನರು ನಮ್ಮ ಹೆಸರನ್ನುಪಯೋಗಿಸಿಕೊಂಡು ಲೂಟಿ ನಡೆಸುತ್ತಿದ್ದಾರೆ. ಈ ಶಿಸ್ತಿಲ್ಲದ ಜನರ ಕೃತ್ಯಗಳು ನನ್ನ ಹೆಸರನ್ನು ಹಾಳುಮಾಡುತ್ತಿದೆ, ಬ್ರಾಹ್ಮಣರು ಎಲ್ಲಾ ತಪ್ಪನ್ನೂ ನನ್ನ ಮೇಲೇ ಹೊರಿಸುತ್ತಿದ್ದಾರೆ. ಆದರೆ ನಾನು ನಿಮ್ಮ ಆದೇಶಗಳಿಗನುಗುಣವಾಗಿ ನನ್ನ ಬಲದಲ್ಲಿ ಇದನ್ನು ತಡೆಯಲು ಏನೆಲ್ಲ ಮಾಡಬೇಕೋ ಅದೆಲ್ಲವನ್ನೂ ಮಾಡಿದ್ದೇನೆ. ಆದರೆ ನನ್ನ ಈ ಯಾವ ಪ್ರಯತ್ನಗಳನ್ನೂ ಗಣನೆಗೇ ತೆಗೆದುಕೊಳ್ಳದೆ ಯಾವೊಂದು ವಿಷಯವನ್ನೂ ನೆಲೆಗೊಳಿಸಲಾಗಿಲ್ಲ. ನನಗೊಂದು ಪತ್ರ ಕಳುಹಿಸಿ ಎಂದು ನಿಮ್ಮಲ್ಲೆ ಬೇಡಿಕೊಳ್ಳುತ್ತಿದ್ದೇನೆ. ಇಲ್ಲಿಯವರೆಗೆ ನಮ್ಮಿಡೀ ಕೋಟೆಯನ್ನು ಕಳೆದುಕೊಂಡಿದ್ದೇವೆ, ನಮ್ಮ ಮನೆಗಳು, ಸಂಪತ್ತು, ಜೀವ, ಗೌರವ ಕಳೆದುಕೊಂಡಿದ್ದೇವೆ ಮತ್ತು ನಮ್ಮ ಕುಟುಂಬದವರು ಬಂಧಿತರಾಗಿದ್ದಾರೆ. ಒಬ್ಬರೋ ಇಬ್ಬರೋ ಅಷ್ಟೇ ಕಾಡಿನಲ್ಲುಳಿದುಕೊಂಡಿದ್ದೇವೆ. ನಮ್ಮ ಬಗೆಗಿನ ಒಂದ್ಯಾವುದಾದರೂ ನಿರ್ಣಯ ಬರುತ್ತದೆಂಬ ನಿರೀಕ್ಷೆಯಲ್ಲಿದ್ದೇವೆ”. (119) 

ಹೀಗೆ ಭೂಮಾಲೀಕರು ಒಬ್ಬಂಟಿಗರಾಗುತ್ತಿದ್ದರು, ರೈತ ಸಮೂಹದ ಪ್ರವಾಹ ತಡೆಯಲಿಕ್ಕಾಗದೇ, ಮೋಸಗಾರರ ಪಾತ್ರ ಧರಿಸಿ ಶರಣಾಗುವುದಷ್ಟೇ ಅಲ್ಲದೆ ಪ್ರತಿಗಾಮಿ ಶಕ್ತಿಗಳಾಗಿ ನಂಬಿಕೆದ್ರೋಹದ ಕಾರ್ಯದಲ್ಲಿ ತೊಡಗಿದ್ದರು. 

ಚಳುವಳಿಯ ಮುಂದಾಳತ್ವವು ಭೂಮಾಲೀಕರ ಕೈಗಳಿಂದ ರೈತರ ಕೈಗೆ ಹೋಗಿದ್ದಕ್ಕೆ ಶತ್ರುಗಳ ಯುದ್ಧವನ್ನು ಎದುರಿಸುವ ಸಾಮರ್ಥ್ಯ ಇಲ್ಲದೇ ಹೋದುದಾಗಲೀ ಅಥವಾ ರೈತ ಸಮೂಹದ ಭಾಗವಹಿಸಿಕೆಯಷ್ಟೇ ಕಾರಣವಾಗಿರಲಿಲ್ಲ. ಚಳುವಳಿಯ ಮುಖ್ಯ ಅಂಶವೆಂದರೆ, ಗೆರಿಲ್ಲಾ ಯುದ್ಧದ ಹೊಸ ಹಂತವನ್ನದು ತಲುಪಿದಾಗ, ವಸಾಹತು ಮತ್ತು ಅದರ ಕೈಗೊಂಬೆ ರಾಜನ ಸೈನ್ಯದ ಮೇಲೆ ದಾಳಿ ನಡೆಸುವುದಷ್ಟೇ ಅಲ್ಲದೆ, ಅದೇ ಸಮಯದಲ್ಲಿ ಹಳ್ಳಿಗಳ ಮಟ್ಟದಲ್ಲಿ ಊಳಿಗಮಾನ್ಯ ಶಕ್ತಿಗಳ ಮೇಲೆಯೂ ಯುದ್ಧ ನಡೆಯುತ್ತಿತ್ತು: ಪ್ರಮುಖವಾಗಿ ಪಟೇಲರು ಹಾಗೂ ಶಾನುಭೋಗರ ಮೇಲೆ. ಹಾಗಾಗಿ ವಸಾಹತುವಿರೋಧಿ ದೃಷ್ಟಿಕೋನದೊಂದಿಗೆ, ಅಧಿಕಾರಿಗಳನ್ನು ಗುರಿಯಾಸಿಕೊಂಡು ಪ್ರಾರಂಭವಾದ ಹೋರಾಟವು, ನಿಧಾನವಾಗಿ ಹಳ್ಳಿಗಳ ಮಟ್ಟದಲ್ಲಿ ವಸಾಹತುವಿನ ಮುಖವಾಡದಂತಿದ್ದ ಊಳಿಗಮಾನ್ಯತೆಯ ವಿರುದ್ಧವು ಚಾಟಿ ಬೀಸಲಾರಂಭಿಸಿತು. ಊಳಿಗಮಾನ್ಯತೆಯ ವಿರುದ್ಧದ ಈ ದಾಳಿಯು ಪಾಳೇಗಾರರ ಬುಡವನ್ನೇ ಅಗೆಯಲಾರಂಭಿಸಿತು. ಅವರು ಪ್ರಾರಂಭಿಸಿದ ಹೋರಾಟವು ಅವರದೇ ವಿರುದ್ಧ ತಿರುಗಿಬಿಟ್ಟಿತ್ತು. ಹಾಗಾಗಿ, ಅವರು ಬ್ರಿಟೀಷ್ ವಸಾಹತುಶಾಹಿಗಳ ಜೊತೆಗೆ ಶೀಘ್ರವಾಗಿ ಸಂಧಾನ ಮಾಡಿಕೊಳ್ಳಲು ಹವಣಿಸುತ್ತಿದ್ದರು, ಬ್ರಿಟೀಷರು ಹೇಗಿದ್ದರೂ ಅವರ ರಕ್ಷಕರು ಮತ್ತು ಪೋಷಕರೇ ಆಗಿದ್ದರಲ್ಲ.
ಮುಂದಿನ ವಾರ: ಊಳಿಗಮಾನ್ಯತೆಗೆ ಹೊಡೆತಗಳು ಬಿದ್ದಾಗ

No comments:

Post a Comment