Nov 17, 2016

ಬ್ಯಾಂಕುಗಳ ಮುಂದೆ ಬಸವಳಿದ ಭಾರತ.

ಡಾ.ಅಶೋಕ್.ಕೆ.ಆರ್
ಇಡೀ ದೇಶ ಅಚ್ಚರಿ ಮತ್ತು ಆಘಾತಕ್ಕೊಳಗಾಗಿ ಒಂದು ವಾರವಾಯಿತು. ಭ್ರಷ್ಟಾಚಾರ ರಹಿತ, ಅಭಿವೃದ್ಧಿಗೆ ಪೂರಕವಾಗಿ ಆಡಳಿತ ನೀಡುವ ಆಶ್ವಾಸನೆಯೊಂದಿಗೆ ಕೇಂದ್ರದಲ್ಲಿ ಅಧಿಕಾರವಿಡಿದ ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರ ಕೊಟ್ಟ ಮೊದಲ ಅಚ್ಚರಿಯಿದು. ಅಚ್ಚರಿಗೆ ಕಾರಣ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಅಚ್ಚರಿ ಆಘಾತವಾಗಿ ಪರಿವರ್ತನೆಯಾಗುವುದಕ್ಕೆ ಹೆಚ್ಚೇನೂ ಸಮಯ ಬೇಕಾಗಲಿಲ್ಲ. ಜನರ ಹೊಗಳಿಕೆಯ ಮಾತುಗಳು ತೆಗಳಿಕೆಯಾಗಿ ಮಾರ್ಪಡುವುದಕ್ಕೂ ಹೆಚ್ಚು ಸಮಯ ಹಿಡಿಯಲಿಲ್ಲ. ಒಳ್ಳೆಯ ಉದ್ದೇಶದಿಂದ ಕೂಡಿದೆ ಎನ್ನಿಸುವ ದೂರಗಾಮಿಯಲ್ಲಿ ಉತ್ತಮ ಪರಿಣಾಮಗಳನ್ನುಂಟು ಮಾಡುತ್ತದೆ ಎನ್ನಲಾದ ಯೋಜನೆಯೊಂದು ಪೂರ್ವ ಸಿದ್ಧತೆಯ ಕೊರತೆಯ ಕಾರಣದಿಂದಾಗಿ ದೇಶದ ಜನರ – ಹೆಚ್ಚಾಗಿ ಬಡ, ಕೆಳ ಮಧ್ಯಮ ಮತ್ತು ಮಧ್ಯಮ ವರ್ಗದ ಜನರ – ದಿನಗಳನ್ನೇ ಏರುಪೇರುಮಾಡಿಬಿಟ್ಟಿದೆ. ದೇಶಕ್ಕೆ ಒಳ್ಳೇದಾಗುತ್ತೇನೋ ಎಂಬ ನಿರೀಕ್ಷೆಯಿಂದ ಜನರೂ ಒಂದು ಮಟ್ಟಿಗೆ ತಾಳ್ಮೆಯಿಂದಲೇ ಕಷ್ಟವನ್ನನುಭವಿಸುತ್ತಿದ್ದಾರೆ. ನಿಜಕ್ಕೂ ಪ್ರಧಾನ ಮಂತ್ರಿ ಮೋದಿಯವರ ಈ ನಿರ್ಧಾರದಿಂದ ಒಳ್ಳೆಯದಾಗುತ್ತದಾ?

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನವೆಂಬರ್ ಎಂಟರಂದು ರಾತ್ರಿ ಎಂಟರ ಸಮಯಕ್ಕೆ ದೂರದರ್ಶನದ ಮೂಲಕ ದೇಶವನ್ನುದ್ದೇಶಿಸಿ ಮಾತನಾಡುತ್ತಾ ಎಂಟರ ರಾತ್ರಿಯಿಂದಲೇ ಜಾರಿಗೆ ಬರುವಂತೆ ಅಗತ್ಯ ಸೇವೆಗಳನ್ನೊರತುಪಡಿಸಿ ಸದ್ಯ ಮಾರುಕಟ್ಟೆಯಲ್ಲಿದ್ದ ಎಲ್ಲಾ ಐನೂರು ಮತ್ತು ಸಾವಿರದ ನೋಟುಗಳು ಅಮಾನ್ಯವಾಗಿಬಿಡುತ್ತದೆ ಎಂದು ಘೋಷಿಸಿದರು. ಇದಕ್ಕೆ ಅವರು ಕೊಟ್ಟ ಕಾರಣ ನಕಲಿ ನೋಟುಗಳ ಹಾವಳಿ ತಡೆಗಟ್ಟುವುದು, ಕಪ್ಪು ಹಣವನ್ನು ಬ್ಯಾಂಕಿಗೆ ಸೇರಿಸುವುದು ಅಥವಾ ಅಮಾನ್ಯಗೊಳಿಸುವುದು, ಈ ಹಣದ ಆಧಾರದಲ್ಲಿಯೇ ನಡೆಯುವ ಭಯೋತ್ಪಾದಕ ಚಟುವಟಿಕೆಗಳಿಗೆ ತನ್ಮೂಲಕ ದೊಡ್ಡ ಹೊಡೆತ ನೀಡುವುದು ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು. ಜೊತೆ ಜೊತೆಗೆ ಈ ಬದಲಾವಣೆಗೆ ಹೊಂದಿಕೊಳ್ಳಲು ಬ್ಯಾಂಕುಗಳು ಒಂದು ದಿನ ಸಾರ್ವಜನಿಕರಿಗೆ ತೆರೆದಿರುವುದಿಲ್ಲ ಎಂದು ಪ್ರಧಾನಿಗಳೇ ಘೋಷಿಸಿದರು ಹಾಗೂ ಎ.ಟಿ.ಎಂಗಳು ಎರಡು ದಿನ ಬಾಗಿಲು ಹಾಕಿಕೊಳ್ಳುತ್ತವೆ ಎಂದು ಹೇಳಲಾಯಿತು. ಇದು ಐತಿಹಾಸಿಕ ನಿರ್ಧಾರ, ಹಿಂದೆ ಯಾರೂ ತೆಗೆದುಕೊಳ್ಳದ ನಿರ್ಧಾರ, ಇನ್ನೇನು ನಾಳೆಯಿಂದ ಭ್ರಷ್ಟ ಮುಕ್ತ ಭಾರತ ನಿರ್ಮಾಣವಾಗಿಯೇ ಬಿಟ್ಟಿತು ಎಂಬಷ್ಟರ ಮಟ್ಟಿಗೆ ಸಮೂಹ ಸನ್ನಿ ಕಾಣಿಸಿಕೊಂಡಿತು. ಇದು ಹಿಂದೆ ಯಾರೂ ತೆಗೆದುಕೊಳ್ಳದ ನಿರ್ಧಾರವಾ?

1978ರಲ್ಲಿ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಕಪ್ಪು ಹಣವನ್ನು ಇಲ್ಲವಾಗಿಸುವ, ತನ್ಮೂಲಕ ಭ್ರಷ್ಟಾಚಾರವನ್ನು ನಿಗ್ರಹಿಸುವ ಸಲುವಾಗಿ ಚಲಾವಣೆಯಲ್ಲಿದ್ದ ಸಾವಿರ, ಐದು ಸಾವಿರ ಮತ್ತು ಹತ್ತು ಸಾವಿರದ ನೋಟುಗಳನ್ನು ಅಮಾನ್ಯಗೊಳಿಸಿದ್ದರು. 1978ರ ಸಮಯದಲ್ಲಿ ಆ ಮೂರು ನೋಟುಗಳನ್ನು ಹೊಂದಿದ್ದವರ ಸಂಖೈಯೇ ಕಡಿಮೆಯಾಗಿದ್ದರಿಂದ ಜನರ ಬದುಕಿನ ಮೇಲೆ ಹೆಚ್ಚಿನ ಪರಿಣಾಮಗಳಾಗಲಿಲ್ಲವಂತೆ. ಆದರೆ ಆ ಕ್ರಮದಿಂದಾಗಿ ಕಳೆದ 38 ವರುಷಗಳಲ್ಲಿ ಎಷ್ಟರ ಮಟ್ಟಿಗೆ ಕಪ್ಪು ಹಣದ ಸಂಗ್ರಹ ಕಡಿಮೆಯಾಯಿತು? ಎಂಬ ಪ್ರಶ್ನೆಗೆ ಉತ್ತರ ಸಿಗುವುದು ಸಾಧ್ಯವಿಲ್ಲವಾದರೂ ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ಕಡಿಮೆಯಾಯಿತು ಎಂಬ ಪ್ರಶ್ನೆಗೆ ಉತ್ತರ ನಮ್ಮ ಕಣ್ಣ ಮುಂದಿನ ವಾಸ್ತವದಲ್ಲೇ ಇದೆ. ಅಲ್ಲಿಗೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಕ್ಕೆ ಚಾಲ್ತಿಯಲ್ಲಿರುವ ನೋಟಿನ ರದ್ದತಿಯಿಂದ ಉಪಯೋಗವಾಗುವುದು ಅನುಮಾನವೆಂದೇ ಹೇಳಬಹುದು. 

ಚಲಾವಣೆಯಲ್ಲಿದ್ದ ಐನೂರು ಮತ್ತು ಸಾವಿರದ ನೋಟುಗಳನ್ನು ರದ್ದು ಮಾಡುವುದರಿಂದ ನೂರಕ್ಕೆ ನೂರರಷ್ಟು ಯಶ ಸಿಗುವುದು ಖೋಟಾ ನೋಟುಗಳ ಹಾವಳಿ ಇಲ್ಲವಾಗಿಬಿಡುತ್ತದೆ, ಹೊಸ ನೋಟಿನ ನಕಲು ಬರುವವರೆಗೆ. ಕಪ್ಪು ಹಣ ಹೊರಬರುತ್ತದಾ? ಎಂದು ನೋಡಿದರೆ ಒಂದಷ್ಟು ಮಟ್ಟಿಗೆ ಹೊರಬರಬಹುದು, ಒಂದಷ್ಟು ಮಟ್ಟಿಗೆ ನಾಶವಾಗಬಹುದು ಎನ್ನುವುದು ಅರಿವಾಗುತ್ತದೆ. ಭ್ರಷ್ಟಾಚಾರ ನಡೆಸಿ ಕಪ್ಪು ಹಣ ಸಂಗ್ರಹಿಸಿದವರು ಸರಕಾರಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸುತ್ತಿರುತ್ತಾರೆ ಎನ್ನುವುದೂ ಸತ್ಯ. ಕಪ್ಪು ಹಣ ಹೊರತರಲು ಸರಕಾರದ ಬಳಿ ಒಂದು ಯೋಜನೆಯಿದ್ದರೆ, ಅದನ್ನು ಕಾಪಿಟ್ಟುಕೊಳ್ಳಲು ಭ್ರಷ್ಟರ ಬಳಿ ಹತ್ತು ಯೋಜನೆಗಳಿರುತ್ತವೆ. ಮಠ – ಮಾನ್ಯ- ದೇವಸ್ಥಾನ – ಚರ್ಚು – ಮಸೀದಿ - ಟ್ರಸ್ಟುಗಳಿಗೆ ದುಡ್ಡು ನೀಡುವುದು, ಪರಿಚಿತರಿಗೆ, ಅಪರಿಚಿತರಿಗೆ ಕಮಿಷನ್ ಆಸೆ ತೋರಿಸಿ (ಬೆಂಗಳೂರಿನಲ್ಲಿ ಹತ್ತರಿಂದ ಮೂವತ್ತೈದು ಪರ್ಸೆಂಟಿನವರೆಗೆ ಕಮಿಷನ್ ನಡೆಯುತ್ತಿದೆ ಎನ್ನಲಾಗುತ್ತಿದೆ) ಬ್ಯಾಂಕಿನಲ್ಲಿ ಹಣ ಬದಲಿಸಿಕೊಳ್ಳುವುದು, ಕೊನೆಗೆ ಈ ಯಾವ ದಾರಿಯೂ ಸುರಕ್ಷಿತವಾಗಿ ಕಾಣಿಸುತ್ತಿಲ್ಲ ಎಂಬ ಭಾವನೆ ಮೂಡಿದವರು ತಮ್ಮ ಜೊತೆ ಕೆಲಸ ಮಾಡುತ್ತಿದ್ದ ನಿಷ್ಠಾವಂತ ಕಾರ್ಯಕರ್ತರಿಗೆ ತಲಾ ಇಷ್ಟಿಷ್ಟು ಲಕ್ಷ ದುಡ್ಡು ಕೊಟ್ಟು ಕೈತೊಳೆದುಕೊಳ್ಳುವ ಕೆಲಸವನ್ನೂ ಮಾಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಕಪ್ಪು ಹಣ ಹೊಂದಿದವರು ಪ್ರಧಾನಿಯವರ ದಿಡೀರ್ ನಿರ್ಧಾರದಿಂದ ವಿಚಲಿತರಾಗಿದ್ದಾರೆ. ಇಷ್ಟೇ ಆಗಿದ್ದರೆ ಇರೋ ಕಪ್ಪು ಹಣಕ್ಕೊಂದು ಗತಿ ಕಾಣಿಸಿದರು ಪ್ರಧಾನಿ ಎಂದು ಹೆಮ್ಮೆ ಪಡಬಹುದಿತ್ತು, ಆದರೆ ಈ ದಿಡೀರ್ ನಿರ್ಧಾರಕ್ಕೆ ಪೂರಕವಾಗಿ ಮಾಡಬೇಕಾದ ತಯಾರಿಯನ್ನು ಕೇಂದ್ರ ಸರಕಾರ ಮತ್ತು ಆರ್.ಬಿ.ಐ ಮಾಡದ ಕಾರಣದಿಂದಾಗಿ ಚೂರೇ ಚೂರು ಬಿಳಿ ಹಣ ಹೊಂದಿದವರು ಕೂಡ ಬೀದಿಗೆ ಬಿದ್ದುಬಿಟ್ಟಿರುವುದು ನರೇಂದ್ರ ಮೋದಿಯವರ ಇಡೀ ಯೋಜನೆಯನ್ನೇ ಅಪಹಾಸ್ಯದಂತಾಗಿಸಿಬಿಟ್ಟಿರುವುದು ಹೌದು.

ಮೊದಲನೆಯದಾಗಿ ಮೋದಿಯವರ ತಮ್ಮ ಭಾಷಣದಲ್ಲಿ ನಾಳೆಯಿಂದ ಕೆಲವು ಸೇವೆಗಳನ್ನು ಹೊರತುಪಡಿಸಿದಂತೆ ಐನೂರು ಮತ್ತು ಸಾವಿರದ ನೋಟುಗಳು ಅಮಾನ್ಯವೆಂದು ಘೋಷಿಸುವಾಗ ಜೊತೆಯಲ್ಲೇ ಡಿಸೆಂಬರ್ ಮೂವತ್ತರ ತನಕವೂ ನೋಟು ಬದಲಿಸಿಕೊಳ್ಳಬಹುದು ಎಂದೂ ಹೇಳಿದ್ದರು. ಅದೇನು ಸಮೂಹ ಸನ್ನಿಯೋ, ನಮ್ಮ ಜನರ ಬುದ್ಧಿಮತ್ತೆಯೇ ಅಷ್ಟೋ ಬಿಳಿ ಹಣವಷ್ಟೇ ಇದ್ದವರೂ ಕೂಡ ಎಟಿಎಂ, ಪೆಟ್ರೋಲ್ ಬಂಕ್ ಗಳಿಗೆ ದಾಂಗುಡಿಯಿಟ್ಟು ಭೀತ ವಾತಾವರಣವನ್ನು ನಿರ್ಮಿಸಿಬಿಟ್ಟರು. ಎಟಿಎಂಗಳ ಮುಂದೆ, ಪೆಟ್ರೋಲ್ ಬಂಕುಗಳ ಮುಂದೆ ಜನವೋ ಜನವೋ. ಇದ್ದ ಎರಡು ಮೂರು ನೋಟುಗಳನ್ನು ಕೊಟ್ಟು ಕೈತೊಳೆದುಕೊಂಡುಬಿಟ್ಟರೆ ಸಾಕು ಎನ್ನುವ ಆತುರ. ಇನ್ನು ಎರಡನೆಯದಾಗಿ ಎಟಿಎಂಗಳಲ್ಲಿ ಡ್ರಾ ಮಾಡಿಕೊಳ್ಳುವ ದುಡ್ಡಿಗೆ ಮಿತಿ ವಹಿಸಿದರು, (ಎರಡು ಸಾವಿರವಿದ್ದ ಮಿತಿ ಈಗ ಎರಡೂವರೆ ಸಾವಿರವಿದೆ) ಬ್ಯಾಂಕಿನಲ್ಲಿ ಬದಲಿಸಿಕೊಳ್ಳುವ ಹಣಕ್ಕೂ ಮಿತಿ ವಿಧಿಸಿದರು (ಮೊದಲು ನಾಲ್ಕು ಸಾವಿರ ಈಗ ನಾಲ್ಕೂವರೆ ಸಾವಿರ). ಮಿತಿ ವಿಧಿಸಿದ ಉದ್ದೇಶ ಒಳ್ಳೆಯದೇ ಇತ್ತು, ಕಪ್ಪು ಹಣ ದಿಡೀರ್ ಎಂದು ಬಿಳಿಯಾಗದಿರಲಿ ಎಂಬ ಉದ್ದೇಶವನ್ನು ಪ್ರಶ್ನಿಸಲಾದೀತೆ? ಆದರೆ ಒಟ್ಟಾರೆ ನೋಟುಗಳದೇ ಕೊರತೆಯಿತ್ತಲ್ಲ, ಅದನ್ನು ಕೇಂದ್ರ ಸರಕಾರ ಮತ್ತು ಆರ್.ಬಿ.ಐ ಮರೆತೇ ಹೋಯಿತಾ? ಪೂರ್ವ ತಯಾರಿ ಎಷ್ಟು ಕೆಟ್ಟ ಮಟ್ಟದಲ್ಲಿತ್ತು ಎನ್ನುವುದಕ್ಕೆ ಸರಕಾರ ಮತ್ತು ಆರ್.ಬಿ.ಐ ದಿನೇ ದಿನೇ ಹೊಸ ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರುವುದೇ ಸಾಕ್ಷಿ. ಒಂದು ಯೋಜನೆಯ ಉದ್ದೇಶ ಎಷ್ಟೇ ಒಳ್ಳೆಯದಿದ್ದರೂ ಅನುಷ್ಠಾನದ ಸಮಯದಲ್ಲಿನ ವಾಸ್ತವಗಳನ್ನು ಊಹಿಸಿಕೊಂಡು ಯೋಜನೆ ರೂಪಿಸಿರದೇ ಹೋದರೆ ಕೊನೆಗೆ ಕಷ್ಟ ಅನುಭವಿಸಬೇಕಿರುವುದು ಸಾಮಾನ್ಯ ಜನರು – ಕ್ರೆಡಿಟ್ ಕಾರ್ಡು, ಡೆಬಿಟ್ ಕಾರ್ಡು, ಇಂಟರ್ನೆಟ್ ಬ್ಯಾಂಕಿಂಗ್ ಉಪಯೋಗಿಸದ, ಉಪಯೋಗಿಸುವುದು ಗೊತ್ತಿದ್ದರೂ ಅದನ್ನು ಉಪಯೋಗಿಸಲಾಗದ ಪ್ರದೇಶಗಳಲ್ಲಿ ವಾಸವಿರುವ ಜನರೇ ಕಷ್ಟ ಅನುಭವಿಸಬೇಕು.

ನಮ್ಮಲ್ಲಿ ಚಲಾವಣೆಯಲ್ಲಿದ್ದ ನೋಟುಗಳಲ್ಲಿನ ಬಹುಪಾಲು ಐನೂರು ಮತ್ತು ಸಾವಿರದ ನೋಟುಗಳೇ ಆಗಿತ್ತು, ಸರಿಸುಮಾರು ಇದು 86 ಪರ್ಸೆಂಟಿನಷ್ಟು ಎನ್ನಲಾಗುತ್ತದೆ. ಇಷ್ಟು ಬೃಹತ್ ಪ್ರಮಾಣದ ನೋಟುಗಳನ್ನು ಅಮಾನ್ಯ ಮಾಡುವ ನಿರ್ಧಾರವನ್ನು ತೆಗೆದುಕೊಂಡ ಸಂದರ್ಭದಲ್ಲಿ ಅಷ್ಟೇ ಪ್ರಮಾಣದ ಇತರೆ ಮುಖಬೆಲೆಯ ನೋಟುಗಳು ಶೀಘ್ರವಾಗಿ ಬ್ಯಾಂಕಿಗೆ ತಲುಪಿಸುವ ಕೆಲಸವಾಗಬೇಕಿತ್ತು. ಆರ್.ಬಿ.ಐ ಇತರೆ ಮುಖಬೆಲೆಯ ನೋಟುಗಳನ್ನು, ಹೊಸ ಐನೂರರ ನೋಟುಗಳನ್ನು, ಎರಡು ಸಾವಿರ ರುಪಾಯಿಯ ನೋಟುಗಳನ್ನು ತಯಾರಾಗಿ ಇಟ್ಟುಕೊಂಡಿದ್ದರೆ ದಿನಾ ಬೆಳಿಗ್ಗೆ ಬ್ಯಾಂಕುಗಳ ಮುಂದೆ, ಎಟಿಎಂನ ಮುಂದೆ ಜನರು ಸಾಲುಗಟ್ಟಿ ನಿಲ್ಲುವ ಅವಶ್ಯಕತೆಯಿರುತ್ತಿರಲಿಲ್ಲ. ಕೊನೆಗೆ ಹೊಸ ಎರಡು ಸಾವಿರ ರುಪಾಯಿ ನೋಟಿನ ಗಾತ್ರ ಹಳೆಯ ಸಾವಿರ ರುಪಾಯಿ ನೋಟಿನಷ್ಟು ಇದ್ದಿದ್ದರೂ ಅರ್ಧಕ್ಕರ್ಧ ಸಮಸ್ಯೆ ನೀಗಿಹೋಗುತ್ತಿತ್ತು. ಎಟಿಎಂಗಳಲ್ಲಿನ ಸಾಫ್ಟ್ ವೇರ್ ನಲ್ಲಿ ಬದಲಾವಣೆ ಮಾಡಿದ್ದರೆ ಕೆಲಸ ಸಲೀಸಾಗುತ್ತಿತ್ತು. ಆದರೆ ಹೊಸ ನೋಟು ಹಳೆಯ ನೋಟಿಗಿಂತ ಚಿಕ್ಕದಾಗಿರುವುದರಿಂದ ಎಟಿಎಂ ಮಿಷೀನುಗಳಲ್ಲೇ ಬದಲಾವಣೆ ಮಾಡಬೇಕಿದೆ. ದೇಶದಲ್ಲಿರುವ ಎರಡು ಲಕ್ಷ ಎಟಿಎಂಗಳಲ್ಲಿ ಈ ಬದಲಾವಣೆ ಮಾಡಲು ಕನಿಷ್ಠ ಮೂರು ವಾರಗಳು ಬೇಕು ಎಂದು ಹಣಕಾಸು ಸಚಿವರಾದ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಸಮಸ್ಯೆಯಾಗುವುದು ಮೂರೇ ದಿನ ಎಂದು ಪ್ರಧಾನಿಯವರ ಮೊದಲ ದಿನದ ಮಾತುಗಳನ್ನು ಕೇಳಿದಾಗ ಅನ್ನಿಸಿತ್ತು, ನಂತರ ಇದು ಮೂರು ವಾರ ಎಂದು ಅರುಣ್ ಜೇಟ್ಲಿಯವರ ಮಾತುಗಳನ್ನು ಕೇಳಿದಾಗ ತಿಳಿಯಿತು. ನಂತರ ಪ್ರಧಾನಿಯವರೇ ಇನ್ನು ಐವತ್ತು ದಿನ ತಾಳ್ಮೆಯಿಂದಿರಿ ಎಂದು ತಿಳಿಸಿದರು! ಪುಣ್ಯಕ್ಕೆ ನಿನ್ನೆಯಿಂದ ಕೆಲವು ಎಟಿಎಂಗಳಲ್ಲಿ ಎರಡು ಸಾವಿರದ ನೋಟುಗಳು ಸಿಗಲಾರಂಭಿಸಿದೆ. ಸಾವಿರದ ನೋಟುಗಳಿಗೇ ಚಿಲ್ಲರೆ ಸಿಗುವುದು ಕಷ್ಟವಿತ್ತು, ಇನ್ನು ಎರಡು ಸಾವಿರದ ನೋಟನ್ನು ಹಿಡಿದುಕೊಂಡು ಮನೆಗೆ ಚಿಲ್ಲರೆ ಸಾಮಾನು ತರುವುದು ಹೇಗೆ? ಐನೂರರ ನೋಟುಗಳನ್ನು ಶೀಘ್ರವಾಗಿ ಹೊರತಂದು ಬಿಟ್ಟಿದ್ದರೂ ಸಾಮಾನ್ಯರು ನಿಟ್ಟುಸಿರು ಬಿಡಬಹುದಿತ್ತು. ಎಟಿಎಂಗಳಲ್ಲಿ ನೂರರ ನೋಟುಗಳನ್ನು ದಿನಕ್ಕೆರಡು, ಮೂರು ಬಾರಿಯಂತೆ ತುಂಬುತ್ತಿದ್ದಾರೆ, ನೂರರ ನೋಟುಗಳನ್ನು ಇರಿಸುವ ಟ್ರೇ ಚಿಕ್ಕದಾಗಿರುತ್ತದೆ, ಅಷ್ಟು ಕಡಿಮೆ ಹಣ ಅರ್ಧ ಘಂಟೆಯಲ್ಲಿ ಖಾಲಿಯಾಗಿಬಿಡುತ್ತಿದೆ. ಇನ್ನು ಬ್ಯಾಂಕಿನ ಮುಂದಿನ ಸಾಲು ಕರಗುವ ಲಕ್ಷಣಗಳಂತೂ ಕಾಣುತ್ತಿಲ್ಲ. ಇಷ್ಟೆಲ್ಲ ತ್ರಾಸವಾಗುತ್ತಿದ್ದರೂ, ಅನೇಕ ಕಡೆ ಸಾಲಿನಲ್ಲಿ ನಿಂತ ಹಿರಿಯರು ಸಾವನ್ನಪ್ಪಿದ್ದರೂ ಒಟ್ಟಾರೆಯಾಗಿ ಜನರಿಗೆ ಈ ಯೋಜನೆ ಒಳ್ಳೆಯ ಉದ್ದೇಶದಂತೆಯೇ ಕಾಣುತ್ತಿದೆ, ಅನುಷ್ಠಾನದಲ್ಲಿ ಸ್ವಲ್ಪ ತಯಾರಿ ಇರಬೇಕಿತ್ತು, ಹೋಗ್ಲಿ ಬಿಡಿ ಇನ್ನೊಂದು ವಾರವಲ್ಲವೇ ಎಂದು ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ ಈ ದೇಶದ ಬಿಳಿ ಹಣ ಹೊಂದಿದ ಸಾಮಾನ್ಯ ಜನ. ಸಮಾಧಾನ ಮಾಡಿಕೊಳ್ಳಲು ಪ್ರಮುಖ ಕಾರಣ, ಈ ಯೋಜನೆಯು ಭ್ರಷ್ಟಾಚಾರವನ್ನೇ ಇಲ್ಲವಾಗಿಸಿಬಿಡುತ್ತದೆ ಎನ್ನುವ ನಂಬಿಕೆ, ಇದು ಅಮಾಯಕ ನಂಬಿಕೆಯಾ? ನಿಜವಾಗುವ ನಂಬಿಕೆಯಾ? ಅಥವಾ ಮೂಢನಂಬಿಕೆಯಾ?

ಅಸ್ತಿತ್ವದಲ್ಲಿದ್ದ ಕಪ್ಪು ಹಣವನ್ನು ಹೊರತರುವ, ನಾಶಪಡಿಸುವ ಉದ್ದೇಶದಿಂದ ನೋಟುಗಳನ್ನು ಅಮಾನ್ಯಗೊಳಿಸುವುದು ಭ್ರಷ್ಟಾಚಾರವನ್ನು ಕಡಿಮೆಗೊಳಿಸುವುದು ಭ್ರಮೆಯ ಮಾತಷ್ಟೇ. ನಮ್ಮಲ್ಲಿ ಭ್ರಷ್ಟಾಚಾರವನ್ನು ಅರ್ಥೈಸಿಕೊಂಡ ರೀತಿಯೇ ತಪ್ಪಾಗಿಬಿಟ್ಟಿದೆ. ಭ್ರಷ್ಟಾಚಾರವೆಂದರೆ ಸರಕಾರೀ ಕಛೇರಿಗಳಲ್ಲಿ ನಡೆಯುವಂತದು, ಸರಕಾರ ಮತ್ತು ಸರಕಾರೀ ನೌಕರರು ನಡೆಸುವುದಷ್ಟೇ ನಮ್ಮ ಕಣ್ಣಲ್ಲಿ ಭ್ರಷ್ಟಾಚಾರವಾಗಿದೆ. ಖಾಸಗಿ ಕಂಪನಿಗಳು ನಡೆಸುವ ಭ್ರಷ್ಟಾಚಾರಕ್ಕೆ ಹೆಚ್ಚಿನಂಶ ನಾವು ಕುರುಡರಾಗೇ ಇರುತ್ತೇವೆ ಅಥವಾ ಕುರುಡರಾಗಿ ಇರುವಂತೆ ಮಾಡಲಾಗಿದೆ. ಇನ್ನು ಸಾರ್ವತ್ರಿಕ ಭ್ರಷ್ಟಾಚಾರದ ಬಗ್ಗೆಯಷ್ಟೇ ಮಾತನಾಡುವ ನಾವು ವೈಯಕ್ತಿಕ ಮಟ್ಟದಲ್ಲಿ ನಾವೆಷ್ಟು ಭ್ರಷ್ಟರು ಎನ್ನುವುದನ್ನು ಉದ್ದೇಶಪೂರ್ವಕವಾಗಿ ಮರೆತೇ ಹೋಗುತ್ತೇವೆ. ಅಲ್ಯಾರೋ ನೂರು ಕೋಟೀನೇ ಹೊಡೆದಿದ್ದಾರಂತೆ, ನನ್ನ ನೂರು ರುಪಾಯಿ ಯಾವ ಲೆಕ್ಕ ಎಂದು ನಮಗೆ ನಾವೇ ಸಮಾಧಾನ ಮಾಡಿಕೊಂಡುಬಿಡುತ್ತೇವೆ. ನೂರು ರುಪಾಯಿಯ ನೋಟುಗಳು ಸೇರಿದರಷ್ಟೇ ನೂರು ಕೋಟಿಯಾಗುವುದು ಎನ್ನುವುದು ನಮ್ಮ ಪ್ರಜ್ಞೆಗೆ ಬರುವುದೇ ಇಲ್ಲ, ಬಂದರೂ ಅದು ಮನಸ್ಸಾಕ್ಷಿಯನ್ನು ತಾಕುವುದಿಲ್ಲ. ವೈಯಕ್ತಿಕ ಮಟ್ಟದ ಭ್ರಷ್ಟಾಚಾರ ತಪ್ಪು ಎಂಬ ಅರಿವು ನಮ್ಮೆಲ್ಲರಲ್ಲೂ ಮೂಡಿದ ದಿನವಷ್ಟೇ ಭ್ರಷ್ಟಾಚಾರ ನಿರ್ಮೂಲನೆಯಾಗುತ್ತದೆ. ಇದಕ್ಕೆ ಪೂರಕವಾಗಿ ಕಠಿಣ ಕಾನೂನುಗಳಿರಬೇಕು. ಎಲ್ಲಿದೆ ಕಾನೂನು? ಕೇಂದ್ರ ಸರಕಾರ ಜನ ಲೋಕಪಾಲ್ ಸಂಸ್ಥೆಯನ್ನು ಸ್ಥಾಪಿಸುವುದಕ್ಕೆ ಯಾವುದೇ ಆಸಕ್ತಿ ತೋರುತ್ತಿಲ್ಲ. ನಮ್ಮ ರಾಜ್ಯ ಸರಕಾರ ಇದ್ದೊಂದು ಲೋಕಾಯುಕ್ತ ಸಂಸ್ಥೆಯನ್ನು ಮುಳುಗಿಸಿಬಿಡುವುದಕ್ಕೆ ಏನೇನು ಮಾಡಬೇಕೋ ಎಲ್ಲವನ್ನೂ ಮಾಡಿಹಾಕಿದೆ. ನೋಟು ಬ್ಯಾನಾಗಿದ್ದರಿಂದ ಭ್ರಷ್ಟಾಚಾರದಿಂದ ಕಪ್ಪು ಹಣವನ್ನು ಮಾಡಿದ್ದವರು ಅಷ್ಟೂ ಹಣವನ್ನು ಕಳೆದುಕೊಂಡೇ ಬಿಟ್ಟರು ಎಂದೇ ಭಾವಿಸೋಣ. ಮುಂದಕ್ಕವರು ಏನು ಮಾಡಬಹುದು? ಅವರ ಮುಂದೆ ಎರಡೇ ಆಯ್ಕೆ – ಭ್ರಷ್ಟ ಹಣವನ್ನು ಸರಕಾರ ವಿಧ ವಿಧದ ಯೋಜನೆಗಳ ಮೂಲಕ ಮುಟ್ಟುಗೋಲು ಹಾಕಿಕೊಂಡುಬಿಡುತ್ತದೆ, ಹಾಗಾಗಿ ಇನ್ನು ಮುಂದೆ ನಾನು ಭ್ರಷ್ಟ ಹಣವನ್ನು ಸ್ವೀಕರಿಸುವುದಿಲ್ಲ ಎಂದು ತೀರ್ಮಾನ ಮಾಡುವುದು ಅಥವಾ ಅಯ್ಯೋ ಇಷ್ಟೊಂದು ದುಡ್ಡು ಹೋಗಿಬಿಡ್ತಲ್ಲ ಅಷ್ಟನ್ನು ಮರಳಿ ಗಳಿಸಲು ನಾನು ಇನ್ನು ಮೇಲೆ ಹೆಚ್ಚೆಚ್ಚು ಹಣವನ್ನು ಗುಳುಂ ಮಾಡಬೇಕು ಎಂದು ನಿರ್ಧರಿಸುವುದು. ಭ್ರಷ್ಟನೊಬ್ಬ ಎರಡನೇ ಹಾದಿಯನ್ನೇ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಲ್ಲವೇ? ಭ್ರಷ್ಟಾಚಾರದ ಮೇಲೆ ಕೇಂದ್ರದ ಈ ನಿರ್ಧಾರ ಯಾವ ರೀತಿಯ ಪರಿಣಾಮಗಳನ್ನು ಬೀರುತ್ತದೆ ಎನ್ನುವುದನ್ನು ತಿಳಿಯುವುದಕ್ಕೆ ಕನಿಷ್ಠ ಒಂದು ವರುಷವಾದರೂ ಬೇಕು. ಐವತ್ತು ದಿನಗಳ ನಂತರ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಪ್ರಧಾನಿಯವರು ತಿಳಿಸಿದ್ದಾರೆ. ಈ ಸಮಯದಲ್ಲಿ ಎಲ್ಲಕ್ಕಿಂತ ಹೆಚ್ಚು ಸಂತಸದಲ್ಲಿರುವವರು ಹಣವನ್ನು ಕೂಡಿಡದೆ ಬೇನಾಮಿ ಆಸ್ತಿ ಮಾಡಿಕೊಂಡಿರುವ ಜನರು ಮತ್ತು ತಮ್ಮ ಹಣವನ್ನು ಸುರಕ್ಷಿತವಾಗಿ ವಿದೇಶಕ್ಕೆ ಕಳುಹಿಸಿಬಿಟ್ಟಿರುವ ಜನರು. ಕಪ್ಪು ಹಣದ ಪ್ರಮಾಣಕ್ಕಿಂತ ಕಪ್ಪು ಆಸ್ತಿಯ ಪ್ರಮಾಣ ಹೆಚ್ಚಿದ್ದೇ ಇದೆ. ವಿದೇಶದಲ್ಲಿರುವ ಹಣವನ್ನು ವಾಪಸ್ಸು ತಂದು ಜನರ ಅಕೌಂಟಿಗೆ ತಲಾ ಹದಿನೈದು ಲಕ್ಷದಂತೆ ಹಾಕುತ್ತೇನೆ ಎಂಬ ಪ್ರಧಾನಿಯವರ ಚುನಾವಣಾಪೂರ್ವ ಮಾತುಗಳು ಕೇವಲ ‘ಜುಮ್ಲಾ’ ಎಂದು ಬಿಜೆಪಿ ಪಕ್ಷದ ಅಧ್ಯಕ್ಷರೇ ಹೇಳಿಬಿಟ್ಟಿದ್ದಾರೆ. ಕೊನೆ ಪಕ್ಷ ಕಪ್ಪು ಆಸ್ತಿಯನ್ನು ಕಂಡು ಹಿಡಿಯಲು, ಸರಕಾರಕ್ಕೆ ವಾಪಸ್ಸಾಗುವಂತೆ ಮಾಡಲು ಸರಕಾರ ಏನಾದರೂ ಯೋಜನೆ ರೂಪಿಸುತ್ತದಾ? ಕಾದು ನೋಡಬೇಕು, ಹೆಚ್ಚಿನ ನಿರೀಕ್ಷೆಗಳಿಟ್ಟುಕೊಳ್ಳದೇ ಕಾಯಬೇಕು.

ಪ್ರಧಾನಿಯವರು ಈ ನಿರ್ಧಾರವನ್ನು ಘೋಷಿಸಿದ್ದು ಸಂಕಷ್ಟದಲ್ಲಿದ್ದ ಬ್ಯಾಂಕುಗಳಿಗೆ ನೆರವಾಗಲು ಎಂಬ ಅಂಶವೂ ಸಾಕಷ್ಟು ಚರ್ಚೆಯಲ್ಲಿದೆ. ನಿನ್ನೆಯಷ್ಟೇ ಡಿ.ಎನ್.ಎ ಪ್ರಕಟಿಸಿದ ವರದಿಯಲ್ಲಿ ಬ್ಯಾಂಕುಗಳು ಕಾರ್ಪೊರೇಟ್ ಉದ್ದಿಮೆದಾರರಿಗೆ ಸಾಲಮನ್ನಾ ಮಾಡಿದ ವಿವರಗಳಿದ್ದವು, ಆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಸಾಲ ಮಾಡಿ ದೇಶ ತೊರೆದು ಹೋದ ವಿಜಯ್ ಮಲ್ಯ. ವಸೂಲಾಗದ ಸಾಲದ ಮೊತ್ತ ತುಂಬಾ ಹೆಚ್ಚಾಗಿಬಿಟ್ಟಿದೆ, ಕಾರ್ಪೊರೇಟ್ ವಲಯದ್ದೇ ಇದರಲ್ಲಿ ಸಿಂಹಪಾಲು. ಸಾಲ ವಸೂಲಿ ಮಾಡುವುದಕ್ಕಾಗುತ್ತಿಲ್ಲ, ಜನರ ಬಳಿ ಮನೆಯಲ್ಲಿರುವ ದುಡ್ಡು ಬ್ಯಾಂಕು ತಲುಪಿದರೆ ಅಷ್ಟರ ಮಟ್ಟಿಗೆ ಬ್ಯಾಂಕುಗಳು ಉಸಿರಾಡುವಂತಾಗುತ್ತವೆ ಎನ್ನುವುದು ಈ ನಿರ್ಧಾರಕ್ಕೆ ಕಾರಣವೆಂದು ಕೆಲವರ ಆಂಬೋಣ. ಕಾರ್ಪೊರೇಟ್ ಮನಸ್ಥಿತಿಗೆ ಪೂರಕವಾಗಿಯೇ ಕೆಲಸ ಮಾಡುವ ಸರಕಾರಗಳು ಒಂದು ಯೋಜನೆ ರೂಪಿಸಿರುವುದರ ಹಿಂದೆ ಎಂತೆಂಥ ಉದ್ದೇಶಗಳಿರುತ್ತವೆಯೋ ಸಾಮಾನ್ಯರಿಗೆ ಅರ್ಥವಾಗುವುದಾದರೂ ಹೇಗೆ? ಕಾಳಧನ ಹೊಂದಿದವರ್ಯಾರೂ ಸಾಲಿನಲ್ಲಿ ನಿಂತು ಸತ್ತು ಹೋದ ವರದಿಗಳಿಲ್ಲ. ಬಿಳಿ ಹಣ ಹೊಂದಿದವರು, ಹಣವನ್ನೇ ಸರಿಯಾಗಿ ಕಾಣದವರಷ್ಟೇ ಸಾಲಿನಲ್ಲಿ ನಿಂತು ಬಸವಳಿದಿದ್ದಾರೆ. ಬಸವಳಿದ ಭಾರತದ ಜನರು ಈ ಯೋಜನೆಯಿಂದ ಚೂರಾದರೂ ಭ್ರಷ್ಟಾಚಾರ ಕಡಿಮೆಯಾಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಜನರ ನಿರೀಕ್ಷೆ ಹುಸಿಯಾಗದಿರಲಿ......

No comments:

Post a Comment