Sep 23, 2016

ಮೇಕಿಂಗ್ ಹಿಸ್ಟರಿ: ಕಿತ್ತೂರು (1824)

Making history by saketh rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
23/09/2016
ಕಿತ್ತೂರನ್ನು ಬ್ರಿಟೀಷ್ ವಸಾಹತುಶಾಹಿಯ ಕೈಗೊಂಬೆ ರಾಜ್ಯವನ್ನಾಗಿ ಉಳಿಸಿಕೊಳ್ಳುವ ಚೆನ್ನಮ್ಮಳ ಹೋರಾಟ, ವಿವಿಧ ಊಳಿಗಮಾನ್ಯ ದೊರೆಗಳ ಪ್ರಕರಣಗಳಲ್ಲಾದಂತೆಯೇ, ಬ್ರಿಟೀಷರೊಂದಿಗೆ ಸಶಸ್ತ್ರ ಕದನಕ್ಕೆ ದಾರಿ ಮಾಡಿತು. 

ನಾವೀಗಾಗಲೇ ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದ ಕೊನೆಯ ಅಧ್ಯಾಯದಲ್ಲಿ ಗಮನಿಸಿದಂತೆ, ಕಿತ್ತೂರಿನ ದೇಸಾಯಿ, ಮಲ್ಲಾಸರ್ಜಾರ ಮಗ ಶಿವಲಿಂಗ ರುದ್ರ ಸರ್ಜಾ ಬ್ರಿಟೀಷರ ಸಲುವಾಗಿ ಪೇಶ್ವೆಗಳನ್ನು ತೊರೆದುಬಿಟ್ಟ, 1818ರಲ್ಲಿ. ಮರಾಠ ಪ್ರಾಂತ್ಯವನ್ನು ವಶಪಡಿಸಿಕೊಳ್ಳುವ ಹೋರಾಟದಲ್ಲಿ ಅವನು ಬ್ರಿಟೀಷರ ಕೈ ಜೋಡಿಸಿದ. (36) ಈ ಸೇವೆಯನ್ನು ಪರಿಗಣಿಸುತ್ತಾ, ಮುನ್ನೂರ ಐವತ್ತು ಹಳ್ಳಿಗಳಷ್ಟಿದ್ದ ಅವನ ಪ್ರಾಂತ್ಯವನ್ನು ಉಳಿಸಿಕೊಳ್ಳುವ ಅವಧಿಯನ್ನು ಬ್ರಿಟೀಷರು ವಿಸ್ತರಿಸಿದರು, ಮೈಸೂರಿನ ನಂತರ ಕರ್ನಾಟಕದಲ್ಲಿದ್ದ ಅತಿ ದೊಡ್ಡ ಪ್ರಾಂತ್ಯವಿದು. ಮಲ್ಲಸರ್ಜವನ್ನು ಟಿಪ್ಪು ಸುಲ್ತಾನ್ 1785ರಲ್ಲಿ ಸೋಲಿಸಿ, ವಶಪಡಿಸಿಕೊಂಡು ಬಂಧನದಲ್ಲಿಟ್ಟಿದ್ದ. ಅವನ ಸಂಸ್ಥಾನ ಕೊನೆಗೊಂಡಿತ್ತು. ಕಿತ್ತೂರು ದೇಶಗತಿಗಳಿಗೆ, ಇತಿಹಾಸ ಒಂದು ಪೂರ್ಣ ಸುತ್ತು ಹೊಡೆದಿತ್ತು. ಆದರೆ 1787ರಲ್ಲಿ, ಮರಾಠರ ಸಂಚು ಟಿಪ್ಪು ಸುಲ್ತಾನನನ್ನು ಸೋಲಿಸಿದಾಗ, ಮಲ್ಲಸರ್ಜ ಮತ್ತೆ ಸ್ಥಾಪಿತನಾಗಿದ್ದ. ವಿಜಯಿಗಳು ಗಡಿಯಾರದ ಮುಳ್ಳನ್ನು ಮತ್ತೆ ತಿರುಗಿಸಿದ್ದರು ಮತ್ತು ಮಲ್ಲಸರ್ಜನಿಗೆ ಅವನ ಅಧಿಕಾರ ಕ್ಷೇತ್ರವಿದ್ದ ಹನ್ನೊಂದು ಹಳ್ಳಿಗಳನ್ನು ಕಾಣ್ಕೆಯಾಗಿ ನೀಡಿದ್ದರು. (37) 1800ರಲ್ಲಿ, ದೊಂಡಿಯಾ ವಾಗ್ ಕರ್ನಾಟಕದ ಉತ್ತರ ಭಾಗಗಳಲ್ಲಿ ಸಂಚರಿಸುತ್ತಿದ್ದಾಗ, ಕಿತ್ತೂರು ದೇಸಾಯಿಗಳು ದೊಂಡಿಯಾನನ್ನು ಹುಡುಕುತ್ತಿದ್ದ ಬ್ರಿಟೀಷರಿಗೆ ನೂರು ಕುದುರೆಸವಾರರನ್ನು ಮತ್ತು ನೂರು ಕಾಲಾಳು ಸೈನಿಕರನ್ನು ಕೊಟ್ಟರು. ಸಂಗೊಳ್ಳಿಯ ಕೋಟೆಯನ್ನೂ ವಸಾಹತುಶಾಹಿಗಳು ಸೇವೆಗೆ ಮೀಸಲಿಟ್ಟರು. (38) ಮನ್ರೋ ಬಹಿರಂಗಪಡಿಸಿದಂತೆ, ಬ್ರಿಟೀಷರು ಕಳೆದೆರಡು ದಶಕಗಳಿಂದ ದೇಸಾಯಿಗಳನ್ನು ಪೋಷಿಸಿ ಬೆಳೆಸಿದ್ದರು. ಬ್ರಿಟೀಷರ ಉದಾರತನ ಅಂತಿಮವಾಗಿ ಶಿವಲಿಂಗ ರುದ್ರ ಸರ್ಜನನ್ನು ಅವರೆಡೆಗೆ ಬರುವಂತೆ ಮಾಡಿತು ಮತ್ತು ಅವನು ತನ್ನ ಕಡೆಯಿಂದ ಮುನ್ನೂರೈವತ್ತು ಹಳ್ಳಿಗಳನ್ನು ಪಡೆದುಕೊಂಡು, ಪೇಶ್ವೆಗಳ ಸಾಮ್ರಾಜ್ಯದ ದಕ್ಷಿಣಕ್ಕಿರುವ ಪ್ರಮುಖ ಆಸರೆಯಾಗಿದ್ದ.

ಶಿವಲಿಂಗ ರುದ್ರ ನಿಗ್ರಹಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿ ಬ್ರಿಟೀಷರ ಸಾಮಂತನಾಗಿದ್ದ. 1824ರ ಸೆಪ್ಟೆಂಬರ್ ಹನ್ನೊಂದರಂದು ಅವನು ಮರಣ ಹೊಂದಿದ. ಅವನಿಗೆ ಗಂಡು ಮಕ್ಕಳಿಲ್ಲದ ಕಾರಣದಿಂದ, ಅವನ ಸಾಮ್ರಾಜ್ಯ ಬ್ರಿಟೀಷರ ಕೈವಶವಾಯಿತು. ಯಾವಾಗ ಬ್ರಿಟೀಷರು ಈ ಕ್ಷೇತ್ರವನ್ನು ವಶಪಡಿಸಿಕೊಂಡು, ದೇಸಾಯಿಗಳ ಕುಟುಂಬಕ್ಕೆ ಸಾಕಾಗುವಷ್ಟು ಸಂಪತ್ತು, ಹಣ ಮತ್ತು ನಿವೃತ್ತಿ ವೇತನವನ್ನು ನಿಗದಿಪಡಿಸಲು ಪ್ರಯತ್ನಿಸಿದರೋ ಆಗ ಮಲ್ಲಸರ್ಜನ ಪತ್ನಿ, ಯುವ ವಿಧವೆ ಚೆನ್ನಮ್ಮ ಹಾಗೆ ಮಾಡಬಾರದೆಂದು ಬೇಡಿಕೊಂಡಳು ಮತ್ತು ದತ್ತು ಪುತ್ರನನ್ನು ಬ್ರಿಟೀಷರು ಒಪ್ಪಿಕೊಂಡು ಪ್ರಾಂತ್ಯದ ಮುಂದುವರಿಕೆಗೆ ಒಪ್ಪಬೇಕೆಂದು ಕೇಳಿಕೊಂಡಳು. ಹಾಗಾಗಿ ಚೆನ್ನಮ್ಮಳ ವಸಾಹತು ವಿರುದ್ಧದ ಹೋರಾಟ, ಕಿತ್ತೂರನ್ನು ಬ್ರಿಟೀಷರ ನಿಯತ್ತಿನ ಸಾಮಂತರಾಗಿ ಮುಂದುವರೆಸುವುದಕ್ಕಾಗಿತ್ತು. ಈ ಬೇಡಿಕೆಗಳನ್ನು ಬ್ರಿಟೀಷರು ಒಪ್ಪದೇ ಇದ್ದ ಕಾರಣಕ್ಕೆ ಸಶಸ್ತ್ರ ಹೋರಾಟ ಪ್ರಾರಂಭವಾಯಿತು ಮತ್ತಿದು ಕರ್ನಾಟಕದ ಖ್ಯಾತ ವಸಾಹತು ವಿರೋಧಿ ಹೋರಾಟವಾಯಿತು. 

ಸೂರ್ಯಕಾಂತ ಕಾಮತರ ಅಭಿಪ್ರಾಯ ಆಸಕ್ತಿಕರವಾಗಿದೆ. ಬ್ರಿಟೀಷರ ಕೃತಘ್ನತೆಯ ಬಗ್ಗೆ ಆತ ಸಿಟ್ಟಿಗೆದ್ದಿದ್ದ. ಕಾಮತ್ ಬರೆಯುತ್ತಾರೆ: “ಕಿತ್ತೂರಿನ ಅಧಿಕಾರ ಕ್ಷೇತ್ರ ಬ್ರಿಟೀಷರಿಗೆ 1801ರಲ್ಲಿ ದೋಂಡಿಯಾ ವಾಗನ ವಿರುದ್ಧದ ಹೋರಾಟಕ್ಕೆ ಸಾಕಷ್ಟು ಸಹಾಯವನ್ನು ಮಾಡಿತ್ತು ಮತ್ತು ನಂತರ 1818ರಲ್ಲಿ ಪೇಶ್ವೆಗಳ ವಿರುದ್ಧದ ಯುದ್ಧದಲ್ಲಿ ಸಹಕಾರ ನೀಡಿತ್ತು. ಆದರೂ ಬ್ರಿಟೀಷರು ಇದಕ್ಕೆ ಪ್ರತಿಯಾಗಿ ಕೃತಜ್ಞತೆ ತೋರಿಸಲಿಲ್ಲ.” (39) ಈ ರೀತಿಯ ಇತಿಹಾಸದ ರಚನೆ ಅಪಾಯಕಾರಿ, ಯಾಕೆಂದರೆ ಅದು ಕಿತ್ತೂರು ಪುನಃ ಪುನಃ ಬ್ರಿಟೀಷರು ಭಾರತವನ್ನು ಆಕ್ರಮಿಸುವುದಕ್ಕೆ ಸಹಕರಿಸಿದ್ದರ ಅಪಾಯಗಳನ್ನು ಗುರುತಿಸಲು ವಿಫಲವಾಯಿತು. ಬದಲಿಗೆ, ಬ್ರಿಟೀಷರು ತಮ್ಮ ನಿಯತ್ತಿನ ಸಾಮಂತರಿಗೆ ನಿರಂತರ ಸಹಾಯ ಮಾಡದ ಬಗ್ಗೆ ಈ ಇತಿಹಾಸ ಮಾತನಾಡುತ್ತದೆ. ಇದರಲ್ಲಿ ರವಷ್ಟು ದೇಶಪ್ರೇಮವಿದೆ ಒಪ್ಪೋಣ. ಆದರದು ಚರ್ಮದಾಳದಲ್ಲಿದೆ. ಮೈತ್ರಿ ಮಾಡಿಕೊಳ್ಳುವ ಊಳಿಗಮಾನ್ಯ ವರ್ಗದವರಲ್ಲಿ ಎಷ್ಟು ದೇಶಪ್ರೇಮವಿರುತ್ತದೋ ಅಷ್ಟು ಮಾತ್ರ ಇದರಲ್ಲೂ ಇರಲು ಸಾಧ್ಯ. 

ಹಾಗಿದ್ದರೂ, ಪ್ರತಿಗಾಮಿ ಊಳಿಗಮಾನ್ಯ ವರ್ಗಕ್ಕೆ ಸೇರಿದ ಕಿತ್ತೂರಿನ ದೇಸಾಯಿಗಳು, ಐತಿಹಾಸಿಕ ಸಂದರ್ಭಗಳ ಕಾರಣದಿಂದ ಸಶಕ್ತ ಬ್ರಿಟೀಷ್ ವಿರೋಧಿ ಭಾವನೆಗಳನ್ನು ಪ್ರತಿಧ್ವನಿಸಿ, ಜನಸಮೂಹದ ವಸಾಹತು ವಿರೋಧಿ ಪ್ರಜ್ಞೆಯನ್ನು ಕ್ರೋಡೀಕರಿಸಿದ್ದನ್ನು ಗಮನಿಸುವುದು ಅವಶ್ಯಕ. ಚೆನ್ನಮ್ಮ 1824ರ ಅಕ್ಟೋಬರ್ 18ರಂದು ತನ್ನ ಆಸ್ಥಾನದ ಸದಸ್ಯರನ್ನುದ್ದೇಶಿಸಿ, ಥಾಕರೆಯನ್ನು ಮತ್ತು ಖಜಾನೆಯನ್ನು ವಶಪಡಿಸಿಕೊಂಡು ಕೋಟೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಹಾದಿಯಲ್ಲಿದ್ದ ಬ್ರಿಟೀಷ್ ಸರಕಾರದ ನಿರ್ಧಾರವನ್ನು ಪ್ರಶ್ನಿಸುತ್ತಾ ಮಾಡಿದ ಕೆಳಗಿನ ಭಾಷಣವು, ಹೇಗೆ ಕೊಳೆಯುತ್ತಿರುವ ವರ್ಗದ ಜನರನ್ನು ಪ್ರತಿನಿಧಿಸುವವರೂ ಕೂಡ ವಸಾಹತು ವಿರೋಧಿ ಪ್ರಜ್ಞೆಯನ್ನು ಬೆಳೆಸಿಕೊಳ್ಳಬಲ್ಲರು ಎನ್ನುವುದನ್ನು ತಿಳಿಸುತ್ತದೆ; ಈ ಹೋರಾಟ ಬ್ರಿಟೀಷರ ಕೈಕೆಳಗೆ ತಮ್ಮ ಊಳಿಗಮಾನ್ಯ ಸೌಕರ್ಯಗಳನ್ನು ಉಳಿಸಿಕೊಳ್ಳಲು ಮಾತ್ರವಾಗಿತ್ತು ಎನ್ನುವುದೂ ಹೌದು. 

“ ಕಿತ್ತೂರು ನಮ್ಮದು. ನಮ್ಮ ಪ್ರಾಂತ್ಯಕ್ಕೆ ನಾವೇ ಮಾಲೀಕರು. ನಾವವರ ಅನುಮತಿ ತೆಗೆದುಕೊಂಡಿಲ್ಲವೆಂಬ ಕಾರಣಕ್ಕೆ ದತ್ತು ಪಡೆದಿರುವುದು ಮಾನ್ಯವಲ್ಲ ಎನ್ನುತ್ತಾರೆ ಬ್ರಿಟೀಷರು. ಮಗನನ್ನು ದತ್ತು ಪಡೆಯಲು ಅವರ ಅನುಮತಿ ಪಡೆಯಬೇಕು ಎಂದು ಎಲ್ಲಿ ಹೇಳಲಾಗಿದೆ? ರಾಜಕೀಯ ದಲ್ಲಾಳಿ ಥಾಕರೆ, ಅಧಿಕಾರದ ಸೊಕ್ಕಿನಿಂದ, ದತ್ತು ಪಡೆದ ವಿಚಾರದಲ್ಲಿ ನಾವವರಿಗೆ ಸುಳ್ಳಾಡಿದ್ದೇವೆ ಎಂದು ಹೇಳುತ್ತಾನೆ. ಕಂಪನಿಯ ಸೇವಕನಾದ ಡಾ. ಬೆಲ್ ರಂತವರ ಮಾತುಗಳನ್ನು ಥಾಕರೆ ನಂಬುತ್ತಾನೆ ಆದರೆ ನಮ್ಮನ್ನು ನಂಬಲು ಆತ ತಯಾರಿಲ್ಲ. ಈ ಬ್ರಿಟೀಷರು ನಮ್ಮ ಭೂಮಿಗೆ ಬಂದಿದ್ದು ವ್ಯಾಪಾರ ವಹಿವಾಟು ನಡೆಸುತ್ತೇವೆ ಎಂಬ ನೆಪದಿಂದ ಮತ್ತು ಇಲ್ಲಿ ನಮ್ಮ ನಮ್ಮ ನಡುವೆಯೇ ಕಿತ್ತಾಟಗಳಿರುವುದನ್ನು ಕಂಡ ಮೇಲೆ, ಅವರು ನಮ್ಮ ನೆಲವನ್ನು ದೋಚಿ ನಮ್ಮನ್ನು ಆಳಲು ಬಯಸುತ್ತಾರೆ. ದೊಡ್ಡ ಮೊತ್ತದ ನಜ್ರಾನ (ಕಪ್ಪ ಕಾಣಿಕೆ) ಕೊಡಬೇಕೆಂದು ಅವರು ಬಯಸುತ್ತಾರೆ. ಮೋಸದಿಂದ, ಕುತಂತ್ರದಿಂದ ಅವರು ದೇಶದ ಈ ಭಾಗದಲ್ಲಿ ಆಳ್ವಿಕೆ ನಡೆಸುತ್ತಿದ್ದ ಇತರರನ್ನು ಸೋಲಿಸಿರಬಹುದು. ಪೇಶ್ವೆಗಳು ನಮಗೆ ಏನಾದರೂ ತೊಂದರೆ ಮಾಡಿದ್ದರೆ, ಅವರು ನಮ್ಮದೇ ಅಣ್ಣತಮ್ಮಂದಿರು ಎನ್ನುವುದನ್ನು ಮರೆಯದಿರೋಣ. ಯಾವತ್ತಾದರೂ ಒಂದು ದಿನ ಅವರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ ಮತ್ತು ನಮ್ಮ ಪವಿತ್ರ ಭೂಮಿಯಿಂದ ವಿದೇಶಿಗರನ್ನು ಓಡಿಸಲು ನಮ್ಮೊಡನೆ ಕೈ ಜೋಡಿಸುತ್ತಾರೆ. ಈ ಬ್ರಿಟೀಷರು ನಮ್ಮ ಬಂಧುಗಳಾ? ಅವರು ಈ ದೇಶಕ್ಕೆ ಸೇರುತ್ತಾರಾ? ಥಾಕರೆ ಮತ್ತವನ ಹಿಂಬಾಲಕರು ಕಿತ್ತೂರೆಂಬ ಸಣ್ಣ ರಾಜ್ಯವನ್ನು ಅತಿ ಕಡಿಮೆ ಸಮಯದಲ್ಲಿ ಸೋಲಿಸಿಬಿಡಬಹುದು ಎಂಬ ಭ್ರಮೆಯಲ್ಲಿದ್ದಾರೆ. ಅವರು ತಪ್ಪು ತಿಳಿದುಕೊಂಡಿದ್ದಾರೆ. ಅವರಿಗೆ ಗೊತ್ತಿಲ್ಲ, ಕಿತ್ತೂರಿನ ಜನರಿಗೆ ಜೀವಕ್ಕಿಂತ ಸ್ವಾತಂತ್ರ್ಯದ ಮೇಲೆ ಪ್ರೀತಿ ಹೆಚ್ಚೆಂದು. ಕಿತ್ತೂರಿನ ಈ ಪವಿತ್ರ ಭೂಮಿಯ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು ಈ ಎಲ್ಲಾ ವರುಷಗಳಲ್ಲಿ ಸಾವಿರಾರು ಜನರ ರಕ್ತದ ಕೋಡಿಯೇ ಹರಿದಿದೆ. ನಮ್ಮದು ಸಣ್ಣ ರಾಜ್ಯ, ಅನುಮಾನ ಬೇಡ. ಬ್ರಿಟೀಷರ ಸೈನ್ಯಕ್ಕೆ ಹೋಲಿಸಿದರೆ ನಮ್ಮ ಸೈನ್ಯ ತುಂಬಾ ಚಿಕ್ಕದು. ಆದರೆ ನಮ್ಮ ಸೈನಿಕರು ಕೂಲಿಯಾಳುಗಳಲ್ಲ. ದೇಶಪ್ರೇಮ ಮತ್ತು ಈ ಪವಿತ್ರ ಭೂಮಿಯೆಡೆಗಿನ ಪ್ರೀತಿ ಹಾಗೂ ಸ್ವಾತಂತ್ರ್ಯ ಪ್ರೇಮ ಅವರ ನರ ನಾಡಿಗಳಲ್ಲಿ ಹರಿಯುತ್ತಿದೆ. ನಮ್ಮಲ್ಲಿನ ಒಬ್ಬರು ಬ್ರಿಟೀಷರ ಹತ್ತು ಸೈನಿಕರಿಗೆ ಸಮ. ಯಾವುದೇ ಸಂದರ್ಭದಲ್ಲೂ ನಾವು ಶರಣಾಗುವುದಿಲ್ಲ ಎಂದು ಥಾಕರೆ ಹಾಗೂ ಚಾಪ್ಲಿನ್ ಗೆ ನಾವು ತಿಳಿಸುತ್ತೇವೆ. ಕೊನೆಯ ಮನುಷ್ಯನಿರುವವರೆಗೂ ಕಿತ್ತೂರು ತನ್ನ ಭೂಮಿಗಾಗಿ ಹೋರಾಡುತ್ತದೆ. ಬ್ರಿಟೀಷರ ಗುಲಾಮರಾಗುವುದಕ್ಕಿಂತ ಸಾಯುವುದೇ ಮೇಲು.” (40) 

ಈ ಹೋರಾಟದಲ್ಲಿ ಎರಡು ಕಂತುಗಳಿದ್ದವು. ಮೊದಲನೆಯದು 1824ರ ಅಕ್ಟೋಬರ್ 23ರಂದು ನಡೆಯಿತು ಮತ್ತು ಕಿತ್ತೂರು ವಿಜಯಿಯಾಯಿತು; ಎರಡನೆಯ ಹೋರಾಟ ನವೆಂಬರ್ 29ಕ್ಕೆ ಶುರುವಾಗಿ 1824ರ ಡಿಸೆಂಬರ್ 5ರವರೆಗೆ ನಡೆಯಿತು, ಕಿತ್ತೂರು ಸೋತಿತು. 

ಕಿತ್ತೂರಿನ ದಂಡಿನಲ್ಲಿ 7000 ಸೈನಿಕರು, 2000 ಕುದುರೆಗಳು, 1000 ಒಂಟೆಗಳು, 50 ಆನೆಗಳು, ಎರಡು 24 ಪೌಂಡ್ ಹಿತ್ತಾಳೆಯ ಬಂದೂಕು ಮತ್ತು 14 ಇತರೆ ಉತ್ತಮ ಮಟ್ಟದ ಬಂದೂಕುಗಳಿದ್ದವು. ಇದರ ಹೊರತಾಗಿ ಹತ್ತಿರತ್ತಿರ 6000 ಶೇಟ್ ಸನ್ನದಿಗಳು ಅಥವಾ ಸಶಸ್ತ್ರ ಆಳುಗಳಿದ್ದರು, ಇವರನ್ನು ವಿಶೇಷ ಭೂ ಗುತ್ತಿಗೆಯ ಆಧಾರದಲ್ಲಿದ್ದರು. ಈ ಗುತ್ತಿಗೆಯ ಪ್ರಕಾರ ದೇಶಾಯಿಗಳು ಆದೇಶಿಸಿದಾಗ ಅವರು ಸೈನಿಕರಾಗಿ ಯುದ್ಧಕ್ಕೆ ಬರಬೇಕಿತ್ತು, ಬಾಕಿ ಸಮಯದಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡಬೇಕಿತ್ತು. (41) 

250 ಜನರ ಪಡೆಯೊಂದಿಗೆ ಅಧಿಕಾರವನ್ನು ವಹಿಸಿಕೊಳ್ಳಲು ಥಾಕರೆ ಕಿತ್ತೂರಿಗೆ ಬಂದಾಗ, ಕೋಟೆ ತನ್ನ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ ಎನ್ನುವುದರಿವಾಯಿತು ಮತ್ತು ಎರಡನೇ ದಿನವೇ ಕೋಟೆಯ ಬಾಗಿಲುಗಳನ್ನು ಹಾಕಿಬಿಡಲಾಗಿತ್ತು. ಹಾಗಾಗಿ ಬಾಗಿಲುಗಳನ್ನು ಸ್ಪೋಟಿಸಿ, ಬಲವಂತದಿಂದ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಾಗಿ ಬೆದರಿಸಿದ. ತನ್ನ ಬೆದರಿಕೆಗೆ ಬೆಂಬಲವಾಗಿ ಬಂದೂಕುಗಳನ್ನು ಕದಲದ ಬಾಗಿಲಿಗೆದುರಾಗಿರಿಸಿದ. 

ಅಷ್ಟೊತ್ತಿಗೆ ಚೆನ್ನಮ್ಮ ಕೋಟೆಯನ್ನು ರಕ್ಷಿಸಬೇಕೆಂದು ನಿರ್ಧರಿಸಿದ್ದಳು. ಕೋಟೆ ಬಾಗಿಲಿನಿಂದ ಹೊರಗೋಗಿ ಬ್ರಿಟೀಷ್ ಬೆದರಿಕೆಯನ್ನು ಮಣಿಸಿಬರಬೇಕೆಂದು ತನ್ನ ಪಡೆಗಳಿಗೆ ಆದೇಶಿಸಿದಳು. ಯುದ್ಧದ ವಸ್ತ್ರವನ್ನು ಧರಿಸಿ, ಕೋಟೆಯಿಂದ ಅಶ್ವಾರೋಹಿಗಳ ದಾಳಿಯನ್ನು ಗಮನಿಸುತ್ತಿದ್ದ ಚೆನ್ನಮ್ಮ ಥಾಕರೆಗೆ ಅಚ್ಚರಿ ಉಂಟುಮಾಡಿದಳು. ಈ ಸಂದರ್ಭದಲ್ಲಿ, ವಸಾಹತುಶಾಹಿಗಳು ಇಷ್ಟು ದೊಡ್ಡ ಮಟ್ಟದ ಪ್ರತಿರೋಧವನ್ನು ನಿರೀಕ್ಷಿಸಿರಲಿಲ್ಲ. ಪ್ರಭುತ್ವವನ್ನು ಇದು ವಿವಸ್ತ್ರಗೊಳಿಸಿತು ಮತ್ತವರ ಕ್ಷುಲ್ಲಕ ಸೈನ್ಯವನ್ನು ಸೋಲಿಸಲಾಯಿತು. 80 ಬ್ರಿಟೀಷ್ ಸೈನಿಕರು, ಕೆಲವು ಅಧಿಕಾರಿಗಳು ಮತ್ತು ಥಾಕರೆಯನ್ನು ಹತ್ಯೆ ಮಾಡಲಾಯಿತು. 40 ಜನರನ್ನು ಯುದ್ಧಖೈದಿಗಳಾಗಿ ಬಂಧಿಸಲಾಯಿತು. 

ಈ ಯುದ್ಧವನ್ನು ಹೇಗೆ ಸ್ವೀಕರಿಸಲಾಯಿತು ಎನ್ನುವುದರ ಬಗ್ಗೆ ಸದಾಶಿವ ಒಡೆಯರ್ ತಿಳಿಸುತ್ತಾರೆ. “ಆ ರಾತ್ರಿ ಕಿತ್ತೂರಿನಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಅರಮನೆಯಲ್ಲಿ, ಕೋಟೆಯಲ್ಲಿ ಮತ್ತಿಡೀ ಪಟ್ಟಣದಲ್ಲಿ ವಿಜಯೋತ್ಸವ ನಡೆದಿತ್ತು. 

ಕೋಟೆಯ ಗೋಡೆಗಳನ್ನು ಬೆಳಕಿನಿಂದಲಂಕರಿಸಲಾಗಿತ್ತು ಮತ್ತು ವಿಜಯದ ಸಂಕೇತವಾಗಿ ಕಹಳೆಯ ಸದ್ದು ಗಾಳಿಯಲ್ಲಿ ಮಾರ್ದನಿಸಿ, ಕೋಟೆಯ ಗೋಡೆಗಳಿಗೆ ಬಡಿದು, ಸುತ್ತಲಿನ ಹಸಿರ ಬೆಟ್ಟ ಹಾಗೂ ಕಿತ್ತೂರನ್ನು ಸುತ್ತುವರೆದಿದ್ದ ಕಣಿವೆಯಲ್ಲಿ ಪ್ರತಿಧ್ವನಿಸಿತು.” (42) ಕಿತ್ತೂರಿನ ಆಸ್ಥಾನದ ಗ್ರಹಿಕೆಯನ್ನು ಹಂಚಿಕೊಳ್ಳುತ್ತಾ ಸದಾಶಿವ ಹೇಳುತ್ತಾರೆ: “ಕಿತ್ತೂರಿನ ಧೀರ ಸೈನಿಕರು, ಪ್ರಬಲ ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ಅಮೋಘ ಜಯ ಗಳಿಸಿದರು ಮತ್ತು ಅವರನ್ನು ಸಂಪೂರ್ಣವಾಗಿ ಹೊಡೆದೋಡಿಸಿ ಸೋಲಿಸಿದರು.” (43) 

ಬ್ರಿಟೀಷ್ ಸೈನಿಕರ ಸಾವು ಕೆಳಗಿನ ಹಂತದ ಅಧಿಕಾರಿಗಳಲ್ಲಿ ಗಾಬರಿ ಹುಟ್ಟಿಸಿದರೆ, ಬಾಂಬೆಯ ಗವರ್ನರ್ ಎಲ್ಫಿನ್ ಸ್ಟೋನ್ ಈ ಘಟನೆಯಿಂದ ಭೀತನಾಗದಿದ್ದರೂ ಇದು ಬೇರೆ ಪ್ರಾಂತ್ಯಗಳಿಗೆ ಹರಡುವ ಬಗ್ಗೆ ಚಿಂತಿತನಾಗಿದ್ದ. ಥಾಕರೆಯ ಕಾರ್ಯಗಳನ್ನು ಆತ ಸಂಪೂರ್ಣ ಬೆಂಬಲಿಸಿದ್ದನಾದರೂ ಶಕ್ತ ಪಡೆಯನ್ನು ತೆಗೆದುಕೊಂಡು ಹೋಗಿ ಗುರಿಯನ್ನು ಸಾಧಿಸದೇ ಇರುವುದು ಮೂರ್ಖತನ ಎಂದು ಭಾವಿಸಿದ. (44) 

ಎರಡನೇ ಕಂತಿನ ಯುದ್ಧ ಪ್ರಾರಂಭವಾಗುವುದಕ್ಕೆ ಒಂದು ತಿಂಗಳು ಮೊದಲು, ಚೆನ್ನಮ್ಮ ಎರಡು ವಿರೋಧಾತ್ಮಕ ಸಂಭಾವ್ಯಗಳನ್ನು ನಿರೀಕ್ಷಿಸುತ್ತಿದ್ದರೆ, ಬ್ರಿಟೀಷ್ ವಸಾಹತುಶಾಹಿಗಳು ತಮ್ಮ ಕಡೆಯಿಂದ ಒಂದೇ ಗುರಿಯೊಂದಿಗೆ ಮುಂದುವರೆದಿದ್ದರು. 

ದತ್ತು ಮಗನನ್ನು ಕಿತ್ತೂರಿನ ಉತ್ತರಾಧಿಕಾರಿ ಎಂದು ಪರಿಗಣಿಸಬೇಕು ಎಂದು ಬ್ರಿಟೀಷರಿಗೆ ಮನವಿ ಮಾಡುತ್ತಿದ್ದಾಗಲೇ, ಯುದ್ಧಕ್ಕೆ ಬೇಕಾದ ತಯಾರಿಗಳೂ ನಡೆಯುತ್ತಿದ್ದವು. ಶೇಟ್ ಸನ್ನದಿಗಳಿಗೆ ಬರಹೇಳಲಾಯಿತು ಮತ್ತು 5000 ಶೇಟ್ ಸನ್ನದಿಗಳು ಸೇರಿದರು. ತನ್ನ ಗಂಡನಂತೆಯೇ ಬ್ರಿಟೀಷರ ಸೇವೆ ಮಾಡುತ್ತಿದ್ದ ಇತರೆ ಮಾಜಿ ಪೇಶ್ವೆಯ ಸಾಮಂತರೆಡೆಗೂ ಸಹಾಯಕ್ಕಾಗಿ ನೋಡಿದರು. ನವೆಂಬರ್ ತಿಂಗಳ ಕೊನೆಯಷ್ಟೊತ್ತಿಗೆ ಕಿತ್ತೂರು ಕೋಟೆಯಲ್ಲಿ ಹನ್ನೆರಡು ಸಾವಿರ ಮಂದಿ ಹೋರಾಟಕ್ಕೆ ಅಣಿಯಾಗಿ ನಿಂತಿದ್ದರು. ಇದೇ ಸಮಯದಲ್ಲಿ ವಸಾಹತುಶಾಹಿಗಳನ್ನು ತೃಪ್ತಿಪಡಿಸಲು ಬಂಧನದಲ್ಲಿಟ್ಟಿದ್ದ ಬ್ರಿಟೀಷರನ್ನು ಬಿಡುಗಡೆಗೊಳಿಸಿದರು. ಆದರೆ ಯಾವಾಗ ಬ್ರಿಟೀಷರು ಮತ್ತೊಂದು ಯುದ್ಧಕ್ಕೆ ಅಣಿಯಾಗುತ್ತಿದ್ದಾರೆ ಎಂದು ತಿಳಿದು ಬಂತೋ, ಅವರ ಮೇಲಿನ ಭರವಸೆಯನ್ನು ಕಳೆದುಕೊಂಡಳು ಮತ್ತು ಯುದ್ಧಕ್ಕೆ ಸಿದ್ಧವಾದಳು. 

ಈ ನಿರ್ಣಾಯಕ ಹಂತದಲ್ಲಿ, ಚೆನ್ನಮ್ಮ ಶರಣಾಗಿಬಿಡಬಹುದಿತ್ತು. ಬ್ರಿಟೀಷರ ಮುಂದೆ ತಲೆತಗ್ಗಿಸಿ ನಿಂತು ಅವರ ಮುಂದುವರಿಕೆಗೆ ತಡೆ ಒಡ್ಡಬಹುದಿತ್ತು. ಆದರೂ ಆಕೆ ಹೋರಾಟದ ದಾರಿಯನ್ನು ಆಯ್ದುಕೊಂಡಳು. ಮತ್ತಿದು ಬೃಹತ್ ವ್ಯತ್ಯಾಸವನ್ನುಂಟುಮಾಡಿತು. ತನ್ನ ಪಡೆಗಳ ಜೊತೆಗೂಡಿ ಹೋರಾಡಿ ಯುದ್ಧವನ್ನು ಸೋತುಹೋದರು, ಸರಿ. ಆದರೆ ಇತಿಹಾಸದ ಪುಟಗಳಲ್ಲಿ ವೀರ ಮಹಿಳೆಯಾಗಿ, ವಸಾಹತುಶಾಹಿಗೆ ಸವಾಲೊಡ್ಡಿದ ರಾಣಿಯಾಗಿ ದಾಖಲಾದಳು. ಒಡೆಯರ್ ರಂತಹ ಬ್ರಿಟೀಷರ ಕೈಗೊಂಬೆಗಳಿಗೆ ತದ್ವಿರುದ್ಧ ನೆಲೆಯಲ್ಲಿ ನಿಂತಳು. 

ಬ್ರಿಟೀಷರು ತಮ್ಮ ಕಡೆಯಿಂದ, ಮೊದಲ ಕಂತಿನ ಯುದ್ಧ ಮುಗಿನ ನಂತರ ತಿಂಗಳಿನಲ್ಲಿ ತಮ್ಮ ಪಡೆಗಳನ್ನು ಸೇರಿಸಲಾರಂಭಿಸಿದರು, ಥಾಕರೆ ಮಾಡಿದ ತಪ್ಪು ಮತ್ತೆ ಪುನರಾವರ್ತನೆಯಾಗಬಾರದಿತ್ತು. ಹತ್ತಿರತ್ತಿರ 25,000ದಷ್ಟಿದ್ದ ಬ್ರಿಟೀಷರ ಪಡೆ ಕಿತ್ತೂರನ್ನು ಸುತ್ತುವರೆಯಿತು. ಇದಕ್ಕೆ ಮೈಸೂರಿನ ಕೈಗೊಂಬೆ ರಾಜ, ಮೂರನೇ ಕೃಷ್ಣರಾಜ ಒಡೆಯರ್, 2 ಬಂದೂಕುಗಳು, 700 ಕಾಲಾಳು ಸೈನಿಕರು ಮತ್ತು 2000 ಅಶ್ವಾರೋಹಿಗಳ ಪಡೆಗಳನ್ನು ಕಳುಹಿಸಿಕೊಟ್ಟಿದ್ದ, ಮುಂದೆ ವಸಾಹತು ನಡೆಸಿದ ಹತ್ಯಾಕಾಂಡಕ್ಕೆ ಇದವನ ಸಹಾಯವಾಗಿತ್ತು. (45) 

ಕೋಟೆಯ ಹೊರಗಿದ್ದ ಪಡೆಗಳು ಬ್ರಿಟೀಷರ ಗುಂಡಿನೇಟಿಗೆ ತತ್ತರಿಸಿಹೋದವು. ಇಡೀ ಕಿತ್ತೂರು ಸೈನ್ಯ ಕೋಟೆಯೊಳಗೆ ಸೇರಿತು, ಕೋಟೆಯ ಬಾಗಿಲನ್ನು ಪುಡಿಗಟ್ಟಿದ ನಂತರ ಡಿಸೆಂಬರ್ 5ರಂದು ಅಪಾರ ಸಂಖೈಯ ಜನರ ಮಾರಣಹೋಮವಾಯಿತು. ಪಟ್ಟಣವನ್ನು ದೋಚಲಾಯಿತು, ಅರಮನೆಯನ್ನು ನೆಲಸಮಗೊಳಿಸಲಾಯಿತು ಮತ್ತು ಅದರಲ್ಲಿದ್ದ ಮರದ ಕಂಬಗಳನ್ನು ವಸಾಹತುಶಾಹಿಗಳು ಹರಾಜಿಗಿಟ್ಟರು. ಕಾಲು ಶತಮಾನದ ಹಿಂದೆ ಶ್ರೀರಂಗಪಟ್ಟಣದಲ್ಲಿ ನಡೆದದ್ದು ಕಿತ್ತೂರಿನಲ್ಲಿ ಪುನರಾವರ್ತನೆಯಾಗಿತ್ತು; ಭಾರತದ ಇನ್ನೂ ಅನೇಕ ಪ್ರದೇಶದಲ್ಲಿ ಆದಂತೆ. ಬ್ರಿಟೀಷರು ಭಾರತದಲ್ಲಿದ್ದ ಬಗ್ಗೆ ಕಾರ್ಲ್ ಮಾರ್ಕ್ಸ್ ಸುಖಾಸುಮ್ಮನೆ ಬರೆಯಲಿಲ್ಲ, ಮಾರ್ಕ್ಸ್ ಹೇಳುತ್ತಾನೆ: “ಬೂರ್ಜ್ವಾ ನಾಗರೀಕತೆಯಲ್ಲಿ ಅಡಕವಾಗಿರುವ ಬೂಟಾಟಿಕೆ ಮತ್ತು ಕ್ರೂರತೆ ನಮ್ಮ ಕಣ್ಣ ಮುಂದೆ ತೆರೆದುಕೊಂಡಿದೆ, ತನ್ನ ಮನೆಯಲ್ಲಿ ಗೌರವಾನ್ವಿತ ರೂಪ ಪಡೆದುಕೊಂಡಿರುವ ಈ ನಾಗರೀಕತೆ, ವಸಾಹತುಗಳಲ್ಲಿ ಬೆತ್ತಲಾಗಿದೆ.” (46) 

ಚೆನ್ನಮ್ಮ ಕಿತ್ತೂರಿನ ಶರಣಾಗತಿಯ ಪತ್ರಕ್ಕೆ ಸಹಿ ಹಾಕಿದಳು ಮತ್ತು ಚೆನ್ನಮ್ಮಳನ್ನು ಬೈಲಹೊಂಗಲದಲ್ಲಿ ಬಂಧಿಸಿಡಲಾಯಿತು. ಹತಾಶಳಾಗಿದ್ದ ಚೆನ್ನಮ್ಮ ಚಿಕ್ಕ ವಯಸ್ಸಿನಲ್ಲಿಯೇ 1829ರಲ್ಲಿ ಮೃತಪಟ್ಟಳು. 

ಆದರಿದು ಕಿತ್ತೂರಿನ ಬಗ್ಗೆ ಕೇಳಿಬರುವ ಕೊನೆಯ ಸಂಗತಿಯೇನಲ್ಲ. 1830ರಲ್ಲಿ, ಸಂಗೊಳ್ಳಿ ರಾಯಣ್ಣನ ಗೆರಿಲ್ಲಾ ಯುದ್ಧವಿತ್ತು. 1833ರಲ್ಲಿ ಶಂಕರಣ್ಣ ಬಂಡಾಯವನ್ನು ಮುನ್ನಡೆಸಿದ. ನರಪ್ಪ ಗಣಪತಿ, ಶೇಕ್ ಸುಲೇಮಾನ್, ನಾಗಪ್ಪ ಬೇಡ, ನವಯ್ ಶೆಟ್ಟಿ ಮತ್ತು ರುದ್ರಪ್ಪ ಕೋಟಗಿ ತಮ್ಮ ಬಂಡಾಯಕ್ಕೆ ಪೋರ್ಚುಗೀಸರ ಬೆಂಬಲವನ್ನು ಪಡೆಯಲು ಪ್ರಯತ್ನಿಸಿದರು. (47)

ಮುಂದಿನ ವಾರ:
ಬೆಳಗುತ್ತಿ-ಬಾದಾಮಿ-ನಿಪ್ಪಾಣಿ-ಚಿತ್ರದುರ್ಗ-ಬೀದರ್

No comments:

Post a Comment