Aug 19, 2016

ಅಂತರರಾಷ್ಟ್ರೀಯ ಕ್ರೀಡಾಕೂಟಗಳ ಕಳಪೆ ಸಾಧನೆಯ ಹಿಂದಿನ ನಗ್ನಸತ್ಯಗಳು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
19/08/2016

ಒಲಂಪಿಕ್ಸ್ ಸೇರಿದಂತೆ ಯಾವುದೇ ಅಂತರರಾಷ್ಟ್ರೀಯ ಕ್ರೀಡಾಕೂಟಗಳು ನಡೆದಾಗ ನಮ್ಮ ದೇಶದ ಕ್ರೀಡಾಪಟುಗಳ ಕಳಪೆ ಸಾಧನೆಗಳ ಬಗ್ಗೆ ಜೋರುದನಿಯ ಚರ್ಚೆಗಳ ಜೊತೆಜೊತೆಗೆ ಕ್ರೀಡಾಪಟುಗಳನ್ನು, ಕ್ರೀಡಾವ್ಯವಸ್ಥೆಯನ್ನು ಟೀಕಿಸುವುದು ನಮ್ಮ ಸಂಪ್ರದಾಯವಾಗಿ ಬಿಟ್ಟಿದೆ. ಬಹುಶ: ಸ್ವಾತಂತ್ರ ದೊರೆತ ಇಷ್ಟು ವರ್ಷಗಳ ನಂತರವೂ ನಾವು ಪರಸ್ಪರ ದೋಷಾರೋಪಣೆಯಲ್ಲಿ ಮುಳುಗಿದ್ದೇವೆಯೇ ಹೊರತು ನಮ್ಮ ವೈಫಲ್ಯಗಳಿಗಿರಬಹುದಾದ ಕಾರಣಗಳನ್ನು ಹೆಕ್ಕಿ ತೆಗೆದು ಪರಿಹಾರ ಕಂಡು ಕೊಳ್ಳುವ ಪ್ರೌಢಿಮೆಯನ್ನು ತೋರಿಲ್ಲ. ಆ ನಿಟ್ಟಿನಲ್ಲಿ ನನಗೆ ಕಂಡುಬಂದ ಸಮಸ್ಯೆಗಳನ್ನು ಇಲ್ಲಿ ಪಟ್ಟಿ ಮಾಡಲು ಪ್ರಯತ್ನಿಸಿದ್ದೇನೆ:

ನಮ್ಮ ಕ್ರೀಡಾವೈಫಲ್ಯಕ್ಕೆ ಕಾರಣಗಳು:

1. ಕ್ರೀಡಾಸಂಸ್ಕೃತಿಯ ಕೊರತೆ:

ನನಗನ್ನಿಸುವಂತೆ ನಮ್ಮ ಕ್ರೀಡಾವೈಫಲ್ಯಕ್ಕೆ ಬಹುಮುಖ್ಯ ಕಾರಣವೆಂದರೆ ಇದೆ! ಯಾಕೆಂದರೆ ಬೇರೆ ಹಲವು ರಾಷ್ಟ್ರಗಳಲ್ಲಿರುವಂತೆ ಕ್ರೀಡೆಗಳು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿ ಬೆಳೆಯಲು ನಾವು ಅವಕಾಶ ಕೊಟ್ಟಿಲ್ಲ. ಮೊದಲು ಬಡರಾಷ್ಟ್ರವಾಗಿದ್ದು, ಇದೀಗ ಅಭಿವೃದ್ದಿಶೀಲರಾಷ್ಟ್ರದ ಮಿತಿಯನ್ನು ದಾಟಿ ಬಲಿಷ್ಠ ಆರ್ಥಿಕ ಶಕ್ತಿಯಾಗುವ ದಿಸೆಯಲ್ಲಿ ದಾಪುಗಾಲು ಹಾಕುತ್ತಿರುವ ನಾವಿವತ್ತಿಗೂ ಕ್ರೀಡೆಗಳನ್ನು ಸಮಯ ಕಳೆಯುವ ಮತ್ತು ವ್ಯರ್ಥ ಮನೋರಂಜನೆಯ ಭಾಗವನ್ನಾಗಿ ಮಾತ್ರ ನೋಡುತ್ತಿದ್ದೇವೆ. ನಮ್ಮ ಒಟ್ಟು ಜನಸಂಖ್ಯೆಯ ಶೇಕಡಾ ಎಪ್ಪತ್ತು ಜನರು ಹಳ್ಳಿಗಳಲ್ಲಿ ವಾಸವಿದ್ದು ಕೃಷಿಯನ್ನು, ಕೃಷಿಯಾಧಾರಿತ ಕಸುಬುಗಳನ್ನು ಅವಲಂಬಿಸಿಯೇ ಬದುಕುತ್ತಿದ್ದಾರೆ. ಅವರ ದೈನಂದಿನ ಚಟುವಟಿಕೆಗಳು ಶುರುವಾಗುವುದೇ ಅವತ್ತಿನ ತುತ್ತಿನ ಚೀಲ ತುಂಬಿಸಿಕೊಳ್ಳುವ ಸಲುವಾಗಿ. ಹಾಗಾಗಿ ಅಂತಲ್ಲಿನ ಬಹುತೇಕ ಪೋಷಕರ ಮುಖ್ಯ ಗುರಿ ತಮ್ಮ ಮಕ್ಕಳನ್ನು ಯಾವುದಾದರೊಂದು ಉದ್ಯೋಗದಲ್ಲಿ ತೊಡಗಿಸಿ ಅವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವುದಾಗಿರುತ್ತದೆ. ಇಂತಹ ಸನ್ನಿವೇಶದಲ್ಲಿ ಬದುಕುತ್ತಿರುವ ಅವರಿಗೆ ಕ್ರೀಡೆಗಳು ವ್ಯರ್ಥ ಸಮಯ ಕಳೆಯುವ ಸಾದನಗಳೆಂದು ಅನಿಸಿದ್ದರೆ ಅವರ ತಪ್ಪೇನು ಇಲ್ಲ. ಇನ್ನು ನಮ್ಮ ಸರಕಾರಗಳು ಏನೇ ಬಡಾಯಿ ಕೊಚ್ಚಿಕೊಂಡರೂ ಗ್ರಾಮೀಣ ಭಾಗದ ಶೇಕಡಾ 60ರಷ್ಟು ಶಾಲೆಗಳಲ್ಲಿ ಇವತ್ತಿಗು ದೈಹಿಕ ಶಿಕ್ಷಕರುಗಳಿಲ್ಲ. ಅಕಸ್ಮಾತ್ ಇದ್ದರೂ ಮಕ್ಕಳಿಗೆ ಆಟವಾಡಲು ಬೇಕಾದ ಕ್ರೀಡಾ ಸಲಕರಣೆಗಳೇ ಇರುವುದಿಲ್ಲ. ಹಾಗಾಗಿ ಬಹುತೇಕ ಹಳ್ಳಿಗಳಲ್ಲಿ ಆಟದ ಸಮಯದಲ್ಲಿ ಜೂಟಾಟ, ಕೋಕೋಗಳನ್ನು, ಕಬಡ್ಡಿಯನ್ನು ಮಾತ್ರ ಆಡಿಸುವುದನ್ನು ಕಾಣಬಹುದಾಗಿದೆ.ನಮ್ಮ ದುರದೃಷ್ಟವೆಂದರೆ ಜೂಟಾಟ ಮತ್ತು ಖೋಖೋಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿಸುವುದಿಲ್ಲವೆನ್ನುವುದಾಗಿದೆ. ಶಾಲೆಗಳಲ್ಲಿ ಹೆಚ್ಚೆಂದರೆ ನಮ್ಮ ಹೆಣ್ಣಮಕ್ಕಳಿಗೆ ಆಡಲು ಒಂದು ರಿಂಗ್ ಅನ್ನು ಅಥವಾ ಒಂದು ಥ್ರೋಬಾಲ್ ನೀಡಲಾಗಿರುತ್ತದೆ. ಇಷ್ಟಲ್ಲದೆಶಾಲೆಗಳಲ್ಲಿ ಪ್ರತಿದಿನಕ್ಕೆ ಎಂಟು ಪಿರಿಯಡ್ಗಳಿದ್ದರೆ ಆಟಕ್ಕೆಂದು ಕೇವಲ ಒಂದು ಪಿರಿಯಡ್ ಇದ್ದು ಅದನ್ನೂ ಸಂಜೆ ಶಾಲೆ ಬಿಡುವ ಮುಂಚೆ ನಿಗದಿ ಪಡಿಸಲಾಗಿರುತ್ತದೆ. ಆಗ ಎಲ್ಲಾ ತರಗತಿಯ ಮಕ್ಕಳೂ ಒಮ್ಮೆಲೆ ಮೈದಾನಕ್ಕೆ ನುಗ್ಗುವುದರಿಂದ ಯಾವ ಆಟವನ್ನೂ ಏಕಾಗ್ರತೆಯಿಂದ ಕಲಿಯಲಾಗಲಿ ಆಡಲಾಗಲಿ ಸಾದ್ಯವಿಲ್ಲ. ಇದರ ಜೊತೆಗೆ ಬೆಳೆಗ್ಗೆಯಿಂದ ಅಭ್ಯಾಸದಲ್ಲಿ ಸುಸ್ತಾಗಿ ಮನೆಗೆ ಮರಳುವ ಅವಸರದಲ್ಲಿರುವ ಮಕ್ಕಳಿಗೆ ಆಟಗಳ ಬಗ್ಗೆ ಆಟದಲ್ಲಿ ಆಸಕ್ತಿ ಇರುವುದಿಲ್ಲ. ಜೊತೆಗೆ ದೂರದ ಹಳ್ಳಿಗಳಿಂದ ಶಾಲೆಗೆ ಬರುವ ಮಕ್ಕಳು-ಮುಖ್ಯವಾಗಿ ಹೆಣ್ಣುಮಕ್ಕಳು- ಕತ್ತಲಾಗುವುದರ ಒಳಗೆ ನಡೆದುಕೊಂಡು ಮನೆ ಸೇರಬೇಕಿರುವುದರಿಂದ ಅವರುಗಳು ಸಹ ಸಕ್ರಿಯವಾಗಿ ಕ್ರೀಡೆಗಳಲ್ಲಿ ಬಾಗವಹಿಸಲಾರರು. ಪ್ರೌಢಶಾಲೆಯ ಹಂತದ ಕೊನೆಯವರೆಗೆ ಬರುವ ತನಕವೂ ನಮ್ಮ ಮಕ್ಕಳಿಗೆ ಕ್ರೀಡೆಯ ನೈಜಮಹತ್ವ ತಿಳಿಯುವುದೇ ಇಲ್ಲ. ಹಾಗೆ ಅವರಿಗೆ ತಿಳಿದು ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಹೊತ್ತಿಗೆ ಅವರ ಶಿಕ್ಷಣ ಮುಗಿಯುತ್ತ ಬಂದಿರುತ್ತದೆ. ಇನ್ನು ನಾನು ಮೊದಲೇ ಹೇಳಿದಂತೆ ನಮ್ಮ ಪೋಷಕರಿಗೆ ಕ್ರೀಡೆಗಿಂತ ದೈನಂದಿನ ಬದುಕೇ ಮುಖ್ಯವಾಗಿದ್ದು ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಬ್ಯಾಸವಿಲ್ಲವಾಗಿದೆ.

2. ಮೂಲ ಸೌಕರ್ಯಗಳ ಕೊರತೆ:

ಸರಕಾರದ ಬೇರೆಲ್ಲ ಕ್ಷೇತ್ರಗಳಂತೆಯೇ ಇಲ್ಲಿಯೂ ಮೂಲಸೌಕರ್ಯಗಳ ಕೊರತೆಯಿದೆ. ಮೊದಲೇ ಹೇಳದಂತೆ ಬಹಳಷ್ಟು ಶಾಲೆಗಳಲ್ಲಿ ದೈಹಿಕ ಶಿಕ್ಷಕರುಗಳೇ ಇರುವುದಿಲ್ಲ. ಒಂದೊಮ್ಮೆ ಇದ್ದರೂ ಮಕ್ಕಳಿಗೆ ಆಟದ ಮೈದಾನವೇ ಇರುವುದಿಲ್ಲ. ಇನ್ನು ಕ್ರೀಡಾ ಉಪಕರಣಗಳ ಬಗ್ಗೆ ನೋಡಿದರೆ ಎಷ್ಟೊ ವರ್ಷಕ್ಕೊಮ್ಮೆ ಸರಕಾರ ಪೂರೈಸುವ ಸಲಕರಣೆಗಳು ಸಹ ಉತ್ತಮ ಗುಣಮಟ್ಟದ್ದಾಗಿರುವುದಿಲ್ಲ. ಇನ್ನು ಈಗಾಗಲೇ ಕರ್ತವ್ಯ ನಿರ್ವಹಿಸುವ ದೈಹಿಕ ಶಿಕ್ಷಕರುಗಳಿಗೆ ಆಧುನಿಕವಾಗಿ, ವೈಜ್ಞಾನಿಕ ರೀತಿಯಲ್ಲಿ ಕ್ರೀಡಾಳುಗಳನ್ನು ತಯಾರು ಮಾಡುವ ಕುರಿತಂತೆ ತರಬೇತಿಗಳನ್ನು ಆಗಿಂದ್ಹಾಗೆ ನೀಡಲಾಗುತ್ತಿಲ್ಲ. ಇನ್ನು ಶಾಲೆಗಳಲ್ಲಿ ಕನಿಷ್ಠ ಪ್ರಥಮ ಚಿಕಿತ್ಸೆಯ ಪೆಟ್ಟಿಗೆಯೂ ಲಭ್ಯವಿರುವುದಿಲ್ಲ. ಇದಕ್ಕೆ ಪೂರಕವಾಗಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ನಮ್ಮ ಮಕ್ಕಳ ದೈಹಿಕ ಶಕ್ತಿಯು ಅಷ್ಟಕ್ಕಷ್ಟೇ ಇರುತ್ತದೆ.ಇನ್ನು ನಮ್ಮ ಸರಕಾರಗಳು ಆಯವ್ಯಯದಲ್ಲಿ ಕ್ರೀಡೆಗಳಿಗಾಗಿ ಮೀಸಲಿರಿಸುವ ಅನುದಾನದ ಮೊತ್ತ ಒಟ್ಟು ಆಯವ್ಯಯದ ಶೇಕಡಾ 2 ಅನ್ನು ದಾಟುತ್ತಿಲ್ಲ.

3. ಕ್ರೀಡಾಪಟುಗಳಿಗೆ ಉದ್ಯೋಗಾವಕಾಶಗಳ, ಜೀವನ ಭದ್ರತೆಯ ಗ್ಯಾರಂಟಿ ಇಲ್ಲದಿರುವುದು.

ತನ್ನ ಮಗುವೊಂದು ಕ್ರೀಡಾಪಟುವಾಗಿ ಒಂದು ಹಂತದವರೆಗು ಯಶಸ್ಸಿನತ್ತ ಹೋದರೆ ಅವನಿಗೊಂದು ಉದ್ಯೋಗ ದೊರೆತು ಆತನ ಬದುಕು ನೆಲೆ ಕಾಣುತ್ತದೆಯೆಂಬ ಯಾವ ಭರವಸೆಯೂ ನಮ್ಮ ಪೋಷಕರಿಗೆ ಇಲ್ಲದಿರುವುದು ಸಹ ಮಕ್ಕಳನ್ನು ಕ್ರೀಡೆಗೆ ಕಳಿಸಲು ಹಿಂಜರಿಯಲಿರುವ ಒಂದು ಮುಖ್ಯ ಕಾರಣವಾಗಿದೆ. ಸರಕಾರಿ ಉದ್ಯೋಗಗಳಲ್ಲಿ ಕ್ರೀಡಾಪಟುಗಳಿಗೆ ಈಗಿರುವ ಮೀಸಲಾತಿಯ ಪ್ರಮಾಣ ಬಹಳ ಕಡಿಮೆಯಿದ್ದು ಅದೂ ಕೂಡ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಪಟುಗಳಿಗಷ್ಟೆ ಮೀಸಲಾಗಿದೆ. ಇರುವ ಆ ಅಲ್ಪ ಮೀಸಲಾತಿಯನ್ನೂ ಕ್ರಿಕೇಟಿನಂತಹ ಜನಪ್ರಿಯ ಹಾಗು ಶ್ರೀಮಂತ ಆಟಗಳೇ ನುಂಗಿ ಹಾಕುತ್ತಿರುವುದು ಮತ್ತೊಂದು ವಿಪರ್ಯಾಸ. ಇನ್ನು ನಮ್ಮ ಖಾಸಗಿ ಉದ್ಯಮಗಳು ಕ್ರಿಕೇಟ್ ಮತ್ತು ಹಾಕಿಯನ್ನು ಹೊರತು ಪಡಿಸಿದಂತೆ ಬೇರಿನ್ನಾವ ಕ್ರೀಡೆಗಳ ಬಗ್ಗೆಯೂ ಆಸಕ್ತಿ ತೋರದೆ ಇರುವುದು. ಉಳಿದ ಕ್ರೀಡೆಗಳ ಆಟಗಾರರಿಗೆ ಕೆಲಸ ನೀಡುವ ಮಾತು ದೂರದ್ದಾಯಿತು. ಹೀಗೆ ಯಾವುದೇ ರೀತಿಯ ಬದುಕಿನ ಭದ್ರತೆಯಿಲ್ಲದ ಕ್ರೀಡೆಯನ್ನು ತಮ್ಮ ಮಕ್ಕಳು ವೃತ್ತಿಪರವಾಗಿ ತೆಗೆದುಕೊಳ್ಳುವುದನ್ನು ಯಾವ ಪೋಷಕರೂ ಆಶಿಸುವುದಿಲ್ಲ. ಇನ್ನು ಬೇರೇ ಉದ್ಯೋಗದಲ್ಲಿರುವವರು ತಮ್ಮ 60ನೇ ವಯಸ್ಸಿಗೆ ನಿವೃತ್ತರಾಗಿ ಪಿಂಚಣಿಯ ಸೌಲಭ್ಯ ಪಡೆದರೆ ಕ್ರೀಡಾಪಡುಗಳು ತಮ್ಮ 30ರಿಂದ 40ನೇ ವಯಸ್ಸಿನ ಒಳಗೇ ನಿವೃತ್ತಿಯಾಗಬೇಕಿದ್ದು ನಂತರದಲ್ಲಿ ಅವರು ಜೀವನ ಸಾಗಿಸಲು ಕ್ರೀಡೆಯ ಭಾಗವಾದ ತರಭೇತಿದಾರರ ಅಥವಾ ಸಹಾಯಕರ ಕೆಲಸ ಮಾಡಬೇಕೇ ಹೊರತು ಬೇರಿನ್ನಾವ ಕೆಲಸಗಳೂ ಅವರಿಗೆ ದೊರೆಯುವುದು ಕಷ್ಟ. ಅದೂ ಅಲ್ಲದೆ ಕ್ರೀಡಾಬ್ಯಾಸದ ನೆಪದಲ್ಲಿ ಅವರ ಶಿಕ್ಷಣವೂ ಮೊಟಕಾಗಿರುತ್ತದೆ. ತರಭೇತುದಾರರ ಹುದ್ದೆಯೂ ಪ್ರಭಾವಶಾಲಿಗಳಿಗೆ ಬಿಟ್ಟರೆ ಎಲ್ಲರಿಗೂ ದೊರೆಯುವುದು ಕಷ್ಟ.

4. ಕ್ರೀಡಾ ಸಂಸ್ಥೆಗಳಲ್ಲಿನ ಭ್ರಷ್ಟಾಚಾರಗಳು ಮತ್ತು ರಾಜಕಾರಣಿಗಳ ಆಡಳಿತ.

ಬೇರೆಲ್ಲೆಡೆಯಂತೆ ನಮ್ಮ ಕ್ರೀಡಾ ಸಂಸ್ಥೆಗಳು ಸಹ ಭ್ರಷ್ಟಾಚಾರಗಳ ಕೂಪಗಳಾಗಿ ಪರಿಣಮಿಸಿವೆ.ನಮ್ಮ ದೇಶದ ಶೇಕಡಾ 60ರಷ್ಟು ಕ್ರೀಡಾಸಂಸ್ಥೆಗಳು ರಾಜಕಾರಣಿಗಳ ಹಿಡಿತದಲ್ಲಿಯೇ ಇದ್ದು, ಕ್ರೀಡಾಪಟುಗಳ ಮಾತಿಗೆ ಬೆಲೆ ಇಲ್ಲದಂತಾಗಿದೆ.ಸದಾ ಯಾವುದಾದರು ಒಂದು ಅಧಿಕಾರದ ಕುರ್ಚಿಯಲ್ಲಿ ಕೂತಿರಬೇಕೆಂದು ಬಯಸುವ ನಮ್ಮ ರಾಜಕಾರಣಿಗಳು ತಮ್ಮ ಪ್ರಭಾವ, ಸಂಪರ್ಕ, ಹಣ ಬಳಸಿ ಕ್ರೀಡಾಸಂಸ್ಥೆಗಳ ಮುಖ್ಯಸ್ಥರ ಹುದ್ದೆಯಲ್ಲಿ ಕೂರುತ್ತಾರೆ. ತಾವು ಖರ್ಚು ಮಾಡಿದ ಹಣವನ್ನು ಪಡೆಯಲು ಮತ್ತು ತಮಗೆ ಬೇಕಾದ ಕ್ರೀಡಾಪಟುಗಳನ್ನು ಆಯ್ಕೆ ಮಾಡಲು ವಾಮಮಾರ್ಗಗಳನ್ನು ಅನುಸರಿಸುವುದರಿಂದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಅನ್ಯಾಯವಾಗುತ್ತಿದೆ.

5. ಕ್ರೀಡೋಪಕರಣಗಳ ದುಬಾರಿ ವೆಚ್ಚ:

ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಉಪಯೋಗಿಸುವ ಕ್ರೀಡೋಪಕರಣಗಳು ಬಹಳ ದುಬಾರಿಯಾಗಿದ್ದು ಭಾರತೀಯ ಆಟಗಾರರಿಗೆ ಅವು ದುರ್ಲಬವಾಗಿವೆ. ಜೊತೆಗೆ ಕ್ರೀಡಾಪಡುಗಳ ದೈಹಿಕ ಶಕ್ತಿಗೆ ಬೇಕಾದ ವಿಶೇಷ ಔಷದಿಗಳು,ಪಾನೀಯಗಳು ಸಹ ನಮ್ಮ ಆಟಗಾರರಿಗೆ ಎಟುಕದ ಬೆಲೆ ಹೊಂದಿವೆ.

6.ಅಲ್ಪಸಂಬಾವನೆ:

ಇನ್ನು ಕ್ರಿಕೇಟ್ ಹೊರತು ಪಡಿಸಿದರೆ ಉಳಿದ ಕ್ರೀಡಾಪಟುಗಳಿಗೆ ದೊರೆಯುವ ಸಂಬಾವನೆಯೂ ತೀರಾ ಅಲ್ಪಪ್ರಮಾಣದ್ದಾಗಿದೆ. ಇಂಡಿಯಾವು ವಿಶಾಲವಾದ ರಾಷ್ಟ್ರವಾಗಿದ್ದು ಇಲ್ಲಿ ಒಂದು ಪ್ರದೇಶದಿಂದ ಕ್ರೀಡಾಕೂಟ ನಡೆಯುವ ಇನ್ನೊಂದು ಪ್ರದೇಶಕ್ಕೆ ದುಬಾರಿ ಪ್ರಯಾಣವೆಚ್ಚವಿದ್ದು ಬಹಳಷ್ಟು ಸರಿ ಆಟಗಾರರೇ ಭರಿಸಬೇಕಾದ ಸ್ಥಿತಿಯಿದೆ.

7. ವೈಯುಕ್ತಿಕ ಪ್ರಾಯೋಜಕರ ಕೊರತೆ:

ಬಹುತೇಕ ಕ್ರೀಡಾಪಟುಗಳಿಗೆ ವೈಯುಕ್ತಿಕವಾದ ಪ್ರಾಯೋಜಕರೇ ಸಿಗದಂತಹ ಸ್ಥಿತಿ ಇದ್ದು, ಆಸಕ್ತಿಯುಳ್ಳ ಕ್ರೀಡಾಪಟುಗಳು ಸಾಲಸೋಲ ಮಾಡಿ ಕ್ರೀಡಾಕೂಟಗಳಲ್ಲಿ ಬಾಗವಹಿಸಬೇಕಾದ ಪರಿಸ್ಥಿತಿ ಇದೆ.

8. ವೈಜ್ಞಾನಿಕ ತರಭೇತಿ ಮತ್ತು ವೈಥದ್ಯಕೀಯ ಸಹಾಯದ ಕೊರತೆ:

ಇವತ್ತು ವಿಜ್ಞಾನ ಬಹಳ ವೇಗವಾಗಿ ಬೆಳೆಯುತ್ತಿದ್ದು, ಕ್ರೀಡೆಗಳು ಸಹ ಅದರ ಪ್ರಭಾವಕ್ಕೆ ಒಳಗಾಗಿವೆ. ಕ್ರೀಡಾಪಟುಗಳ ತರಭೇತಿಯನ್ನು ವೈಜ್ಞಾನಿಕವಾಗಿ ನೀಡುವ ಹಲವಾರು ವಿದಾನಗಳನ್ನು ವಿಶ್ವದ ಅನೇಕ ದೇಶಗಳು ಅಳವಡಿಸಿಕೊಂಡಿವೆ. ಕ್ರೀಡಾಪಟು ಒಬ್ಬನನ್ನು ವೈಜ್ಞಾನಿಕವಾಗಿ ತಯಾರು ಮಾಡುವ ದಿಸೆಯಲ್ಲಿ ನಾವು ಅಂತಹ ತರಭೇತಿ ಸಂಸ್ಥೆಗಳನ್ನು ಹುಟ್ಟುಹಾಕಲು ಮುಂದಾಗಿಯೇ ಇಲ್ಲ. ಅದೂ ಅಲ್ಲದೆ ಕ್ರೀಡಾಪಟುಗಳಿಗೆ ಆಧುನಿಕ ವೈದ್ಯಕೀಯ ಸವಲತ್ತುಗಳನ್ನು ಒದಗಿಸುವಲ್ಲಿಯೂ ನಾವು ಹಿಂದೆ ಬಿದ್ದಿದ್ದೇವೆ. ಹಾಗೆಯೇ ಕ್ರೀಡಾಪಟುಗಳನ್ನು ಮಾನಸಿಕವಾಗಿ ಗಟ್ಟಿಗೊಳಿಸುವ ಕ್ರೀಡಾ ಮನೋವಿಜ್ಞಾನಿಗಳ ಕೊರತೆಯು ನಮ್ಮಲ್ಲಿದೆ. ಇವತ್ತು ವಿಶ್ವದ ತೀರಾ ಪುಟ್ಟ ರಾಷ್ಟ್ರಗಳು ಸಹ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ತೋರುತ್ತಿದ್ದು ಅದಕ್ಕಾಗಿ ಬೇಕಾದ ಎಲ್ಲ ಆಧುನಿಕ ಅವಿಷ್ಕಾರಗಳನ್ನೂ ಬಳಸಿಕೊಳ್ಳುತ್ತಿದ್ದರೆ ನಾವು ಆ ವಿಷಯದಲ್ಲಿ ಆಸಕ್ತಿಯನ್ನೇ ತೋರಿಸದೆ ಹಿಂದೆ ಬಿದ್ದಿದ್ದೇವೆ.

9. ಕ್ರೀಡಾಪಟುಗಳಲ್ಲಿ ವೃತ್ತಿಪರತೆಯ ಕೊರತೆ:

ಇಂಡಿಯಾದಂತ ರಾಷ್ಟ್ರಗಳಲ್ಲಿ ಕ್ರೀಡಾಪಟುವೊಬ್ಬ ಮಾಡುವ ಅಲ್ಪಸಾಧನೆಯೂ ಅಗಾಧವಾಗಿ ಬಿಂಬಿಸಲ್ಪಟ್ಟು ಅವನನ್ನು ತಾರಾಪಟ್ಟಕ್ಕೆ ಕೊಂಡೊಯ್ಯುತ್ತದೆ. ಹೀಗೆ ಮಾಧ್ಯಮಗಳಲ್ಲಿ ತಾರಾ ಪಟ್ಟ ಪಡೆದ ಆಟಗಾರರು ನಂತರದ ದಿನಗಳಲ್ಲಿ ಅಲ್ಪತೃಪ್ತರಂತೆ ತಮ್ಮ ಕ್ರೀಡಾವೃತ್ತಿಯನ್ನು ನಿರ್ಲಕ್ಷಿಸತೊಡಗುತ್ತಾರೆ. ಮಹತ್ವಾಕಾಂಕ್ಷೆಯ ಯಾವ ಮನೋಬಾವವನ್ನೂ ಅವರಲ್ಲಿ ನಾವು ಕಾಣಲು ಸಾದ್ಯವಿಲ್ಲ. ನಮ್ಮ ಬಹುತೇಕ ಕ್ರೀಡಾಪಟುಗಳು ಕ್ರೀಡೆಯನ್ನು ಹವ್ಯಾಸಿ ಮಟ್ಟದಲ್ಲಿಯೇ ನೋಡುವುದರಿಂದ ವೃತ್ತಿಪರ ಸಾಧನೆಯ ಅಗತ್ಯ ಅವರಿಗೆ ಇರದಂತಾಗಿದೆ. ಒಂದಷ್ಟು ಜನಪ್ರಿತೆ ದೊರೆತೊಡನೆ ಅವರಿಗೆ ದೊರೆಯುವ ಜಾಹಿರಾತುಗಳು ಮತ್ತಿತರೆ ಸೌಲಭ್ಯಗಳ, ಸಿರಿವಂತಿಕೆಯಲ್ಲಿ ಮೈಮರೆಯುವ ಕ್ರೀಡಾಪಟುಗಳು ಸಾಧನೆಯ ಉತ್ತುಂಗಕ್ಕೆ ತಲುಪಲು ಬೇಕಾದ ಏಕಾಗ್ರತೆಗಳನ್ನು ಕಳೆದುಕೊಳ್ಳುವುದು ಇಂಡಿಯಾದಲ್ಲಿ ಸಾಮಾನ್ಯವಾಗಿದೆ. ಕಳೆದ ಒಲಂಪಿಕ್ಷ್ ನಲ್ಲಿ ಕಂಚಿನ ಪದಕ ಗೆದ್ದ ನಂತರ ಸೈನಾ ನೆಹ್ವಾಲರಿಗೆ ದೊರೆತ ಅಬ್ಬರದ ಪ್ರಚಾರ, ಜಾಹಿರಾತುಗಳು ಆಕೆಯನ್ನು ಮತ್ತಷ್ಟು ಸಾಧನೆ ಮಾಡುವತ್ತ ಕರೆದೊಯ್ಯಬೇಕಾಗಿತ್ತು, ಆದರೆ ಹಾಗಾಲಿಲ್ಲ. ಇಂಡಿಯಾದ ಬಹಳಷ್ಟು ಕ್ರೀಡಾಪಟುಗಳ ವಿಷಯದಲ್ಲಿ ಹೀಗಾಗಿದೆ. ಸಾಧನೆಯ ಒಂದು ಹಂತದ ನಂತರ ಮತ್ತಷ್ಟು ಮುಂದುವರೆದು ವಿಶ್ವಮಟ್ಟಕ್ಕೇರುವ ಛಲವಾಗಲಿ, ಅದಕ್ಕೆ ಬೇಕಾದ ಮಾನಸಿಕ ಸಿದ್ದತೆಯಾಗಲಿ ನಮ್ಮ ಕ್ರೀಡಾಪಟುಗಳು ತೋರಿಸುತ್ತಿಲ್ಲವೆಂಬುದು ಸಹ ನಿಜ.

10. ವಂಶವಾಹಿನಿಗಳ ಸಮಸ್ಯೆ:

ಕ್ರೀಡೆಗಳ ಕುರಿತಾದ ಭಾರತೀಯರ ಮನೋಬಾವನೆಯೂ ಇದಕ್ಕೆ ಕಾರಣ. ಇತ್ತೀಚೆಗಿನ ವೈಜ್ಞಾನಿಕ ಸಂಶೋದನೆಗಳ ಪ್ರಕಾರ ನಮ್ಮ ದೇಹರಚನೆಗಳು ಹಾಗು ಆಹಾರ ಪದ್ದತಿಗಳು ಕ್ರೀಡೆಗಳಿಗೆ ಪೂರಕವಾಗಿಲ್ಲವೆಂದು ಹೇಳಿವೆ. ಸಾವಿರಾರು ವರ್ಷಗಳಿಂದಲೂ ನಡೆಯುತ್ತ ಬಂದಿರುವ ಸ್ವಜಾತೀಯ ಮದುವೆಗಳಿಂದಾಗಿ ಭಾರತೀಯರ ವಂಶವಾಹಿನಿಯಲ್ಲಿ ಅನ್ಯ ಗುಂಪಿನೊಂದಿಗೆ ಕೊಟ್ಟು ಪಡೆಯುವ ಕ್ರಿಯೆಗಳ ನಡೆಯದೇ ಇರುವುದು ಸಹ ಭಾರತೀಯರಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಅಗತ್ಯವಾದ ಮಾನಸಿಕ ಮತ್ತು ದೈಹಿಕ ಸ್ವರೂಪಗಳ ಕೊರತೆ ಉಂಟಾಗಲು ಕಾರಣವೆಂದೂ ಇತ್ತೀಚೆಗೆ ನಡೆದ ಹಲವು ಸಂಶೋದನೆಗಳು ತೋರಿಸಿಕೊಟ್ಟಿವೆ.

11. ಮಾಧ್ಯಮಗಳ ನಿರಾಸಕ್ತಿ:

ಯಾವುದಾದರು ಅಂತರರಾಷ್ಟ್ರೀಯ ಕ್ರೀಡಾಕೂಟಗಳು ನಡೆದಾಗಲಷ್ಟೆ ಕ್ರೀಡೆಗಳ ಬಗ್ಗೆ ಆಸಕ್ತಿ ತೋರಿಸಿ ಅವುಗಳನ್ನು ವರದಿ ಮಾಡುವ ನಮ್ಮ ಮಾಧ್ಯಮಗಳು, ಸ್ಥಳೀಯವಾಗಿ ನಡೆಯುವ ರಾಜ್ಯ ರಾಷ್ಟ್ರೀಯ ಕ್ರೀಡಾಕೂಟಗಳನ್ನು ನಾಮಕಾವಸ್ತೆಗಷ್ಟೇ ವರದಿ ಮಾಡಿ ಕೈ ತೊಳೆದು ಕೊಳ್ಳುತ್ತಿವೆ. ಕ್ರಿಕೇಟಿಗೆ ನೀಡುವ ಪ್ರಚಾರದಲ್ಲಿ ಶೇಕಡಾ ಒಂದರಷ್ಟನ್ನೂ ಇತರೇ ಕ್ರೀಡೆಗಳಿಗೆ ನೀಡದ ಮಾಧ್ಯಮಗಳು, ಒಲಂಪಿಕ್ಸ್ ಕೂಟದಲ್ಲಿ ಪದಕ ಬಾರದೇ ಇದ್ದಾಗ ಮಾತ್ರ ನಮ್ಮ ಕ್ರೀಡಾಪಟುಗಳನ್ನು, ಕ್ರೀಡಾ ವ್ಯವಸ್ಥೆಯನ್ನು ಹಿಗ್ಗಾಮುಗ್ಗಾ ಟೀಕಿಸುವ ಚಾಳಿ ಹೊಂದಿವೆ. ಇದೀಗ ಎಲೆಕ್ಟ್ರಾನಿಕ್ ಮಾಧ್ಯಮಗಳು ಬಂದಮೇಲೂ ಚಿತ್ರಣವೇನೂ ಬದಲಾಗಿಲ್ಲ. ನಮ್ಮ ಬಹುತೇಕ ಸುದ್ದಿ ವಾಹಿನಿಗಳಲ್ಲಿ ಇವತ್ತಿಗೂ ಕ್ರೀಡಾ ಸುದ್ದಿಗೆಂದು ಒಂದು ನಿಗದಿತ ಸಮಯವನ್ನು ಕಲ್ಪಿಸಿ ಕ್ರೀಡಾ ಸುದ್ದಿಗಳನ್ನು ಹೇಳುವ-ತೋರಿಸುವ ಪರಿಪಾಠ ಬೆಳೆಸಿಕೊಂಡಿಲ್ಲ.ಕ್ರಿಕೇಟ್ ಸರಣಿಗಳು ಇದ್ದಾಗ ಮಾತ್ರ ಆಟ ಪ್ರಾರಂಭವಾಗುವುದಕ್ಕೆ ಮೊದಲಿನ ಒಂದು ಗಂಟೆ ಅದರ ಬಗ್ಗೆ ವಿಶ್ಲೇಷಣಾ ಕಾರ್ಯಕ್ರಮಗಳನ್ನು ತೋರಿಸುವ ನಮ್ಮ ವಾಹಿನಿಗಳಿಗೆ ಕ್ರೀಡೆಗಳಿಗೆ ಪ್ರಾಮುಖ್ಯತೆ ನೀಡಬೇಕೆಂಬ ಅರಿವಾಗಲಿ, ಆಶಯವಾಗಲಿ ಇಲ್ಲವಾಗಿದೆ.ಹಾದಿಬೀದಿಯ ಗಂಡಹೆಂಡತಿಯರ ಜಗಳಗಳನ್ನು ತೋರಿಸುವ ವಾಹಿನಿಗಳಿಗೆ ಕ್ರೀಡೆಗಳು ಸುದ್ದಿಯೆನಿಸುವುದೇ ಇಲ್ಲ. ಹೀಗಾಗಿ ನಮ್ಮ ಕ್ರೀಡೆಗಳಿಗೆ ಸಿಗಬೇಕಾದಷ್ಟು ಪ್ರಚಾರವಾಗಲಿ, ಪ್ರಸಾರದ ಸಮಯವಾಗಲಿ ದೊರೆಯುತ್ತಿಲ್ಲ. ಇವತ್ತಿಗೂ ನಮಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡೆಗಳ ತಾಜಾ ಮಾಹಿತಿ ಬೇಕೆಂದರೆ ಕ್ರೀಡಾಚಾನೆಲ್ಲುಗಳಿಗೆ ಹೋಗಿ ನೋಡಬೇಕಾದ ಸ್ಥಿತಿಯಿದೆ. ಸಾರ್ವಜನಿಕವಾಗಿ ಮನ್ನಣೆ ದೊರೆಯದೆ ಇರುವ ಕ್ರೀಡೆಗಳ ಬಗ್ಗೆ ಜನರು ಆಸಕ್ತಿ ತೋರಿಸದೇ ಇರುವುದಕ್ಕೆ ಇದೂ ಒಂದು ಕಾರಣ.

ಹೀಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ವಿಫಲವಾಗಿರುವುದಕ್ಕೆ ಹಲವಾರು ಕಾರಣಗಳಿವೆ. ನಮ್ಮೀ ವಿಫಲತೆಯಲ್ಲಿ ಸರಕಾರ, ಕ್ರೀಡಾವ್ಯವಸ್ಥೆ, ಮಾಧ್ಯಮಗಳು, ಜನತೆ ಹಾಗು ಸ್ವತ: ಕ್ರೀಡಾಪಟುಗಳು ಸಹ ಕಾರಣೀಭೂತರಾಗಿದ್ದಾರೆ. ಹಾಗಾಗಿ ನಮ್ಮ ವೈಫಲ್ಯಕ್ಕೆ ಯಾರೋ ಒಬ್ಬರನ್ನು, ಒಂದು ಕ್ಷೇತ್ರವನ್ನು ಬೆರಳು ಮಾಡಿ ತೋರಿಸುವುದು ಮೂರ್ಖತನವಾಗುತ್ತದೆ. 

No comments:

Post a Comment