ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
22/08/2016
ಆಜಾದಿ ಬೇಕೆಂದೆ.
ಯಾವುದರಿಂದ  ಎಂದು ಕೇಳಿದ್ದರೆ ಹೇಳಬಹುದಿತ್ತು:
ನಿಮ್ಮ ಸನಾತನ ಧರ್ಮದ ವರ್ಣವ್ಯವಸ್ಥೆಯಿಂದ
ನಿಮ್ಮ ಜಾತಿ ವೈಷಮ್ಯದ ಕ್ರೂರತೆಯಿಂದ
ನಿಮ್ಮ ಸಿರಿವಂತಿಕೆಯ ತೆವಲಿನ  ಶೋಷಣೆಯಿಂದ
ನಿಮ್ಮ ಅಧಿಕಾರದ ಅಮಲಿನಿಂದ ನಡೆಸುವ ದಬ್ಬಾಳಿಕೆಯಿಂದ
ನಿಮ್ಮ  ದೊಡ್ಡಸ್ತಿಕೆಯ ದೌರ್ಜನ್ಯದಿಂದ.
ಅವರದೇನನ್ನೂ ಕೇಳಲಿಲ್ಲ
ಮರುಮಾತಾಡದೆ ದೇಶದ್ರೋಹಿಯ ಪಟ್ಟ ಕಟ್ಟಿದರು
ಸಾರ್ವಜನಿಕ ವೃತ್ತದಲಿ ನೇಣುಗಂಬವನೊಂದ ನೆಟ್ಟು
ನಮ್ಮನ್ನೆಲ್ಲ ಸರತಿಯ ಸಾಲಲ್ಲಿ ನಿಲ್ಲಿಸಿದರು.
ಎಲ್ಲ ಮುಗಿದಾದ ಮೇಲೆ-
ನ್ಯಾಯಾಧೀಶರೊಬ್ಬರನ್ನು ಕರೆತಂದು ವಿಚಾರಣೆ ಮಾಡಿಸಲಾಯಿತು.
ಶಿಕ್ಷೆಯನ್ನು ಊರ್ಜಿತಗೊಳಿಸಲಾಗಿದೆಯೆಂದು ಷರಾ ಬರೆಯಲಾಯಿತು
ಇದೀಗ ಊರ  ನೆತ್ತಿಯ ತುಂಬಾ ಹದ್ದುಗಳ ಗಸ್ತು...
ಈಗ ದೇಶಭಕ್ತಿಗೆ ಹೊಸ ವ್ಯಾಖ್ಯಾನ ಬರೆಯಲಾಗಿದೆ
ಪ್ರಶ್ನೆಗಳನ್ನು ನಿಷೇಧಿಸಲಾಗಿದೆ.
ಈ ಕವಿತೆ ಬರೆದ ಕವಿಯ ಹುಡುಕಲಾಗುತ್ತಿದೆ
ಹುಡುಕಿಕೊಡುವವರಿಗೆ ಬಹುಮಾನ ಘೋಷಿಸಲಾಗಿದೆ.
(ದೇಶದ್ರೋಹದ ಬಗ್ಗೆ ಮತ್ತೆಂದಾದರು ಬರೆಯಲಾಗುವುದು!)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ