Jul 1, 2016

ಮೇಕಿಂಗ್ ಹಿಸ್ಟರಿ: ಕೃಷಿ ಕಂದಾಯ ಮತ್ತದರ ಶೋಷಕ ಶರಾತ್: ಭಾಗ 2

saketh rajan ashok kr
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
01/07/2016
1809 – 10ರಲ್ಲಿ ಇಡೀ ಕೆನರಾ ಪ್ರಾಂತ್ಯದಲ್ಲಿ ಬೆಳೆ ಕಡಿಮೆಯಾಗಿತ್ತು ಮತ್ತದರ ಬೆಲೆಯೂ ಕುಸಿದು ಬಿದ್ದಿತ್ತು. ಈ ಕುಸಿದ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ದಕ್ಷಿಣ ಕೆನರಾದ ರೈತರು ಸರಕಾರಕ್ಕೆ ಕಟ್ಟಬೇಕಾದ ತೆರಿಗೆಯನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದರು. ಕರ ನಿರಾಕರಣೆಯ ಅವರ ಹೋರಾಟ ಆ ಕ್ಷಣದ ಅವರ ತೊಂದರೆಗಳಿಗೆ ಮತ್ತು ಕಂದಾಯ ನೀತಿಗಳು ಮತ್ತು ಕಂಪನಿ ಸರಕಾರದ ಆಡಳಿತ ವೈಖರಿಯ ಕಾರಣಕ್ಕೆ ಶುರುವಾಯಿತು. ಪರಿಣಾಮವಾಗಿ ಭೂಕಂದಾಯದ ಸಂಗ್ರಹ ಮತ್ತು ಇತರೆ ಆದಾಯವೂ ಗಮನಾರ್ಹವಾಗಿ ಕಡಿಮೆಯಾಯಿತು….1820 ಮತ್ತು 1825ರ ನಡುವೆ ಭೂ ಕಂದಾಯದ ಸಂಗ್ರಹ ನಿಧಾನಕ್ಕೆ ಏರಿಕೆ ಕಂಡಿತು, ಆದರೆ ನಂತರ ಕಡಿಮೆಯಾಗುತ್ತಾ ಸಾಗಿ 1830-31ರಲ್ಲಿ ಕನಿಷ್ಟ ಮಟ್ಟ ತಲುಪಿತು”. (220) 

ಆಗಿನ ಜಿಲ್ಲಾಧಿಕಾರಿ ಹ್ಯಾರಿಸ್ ಅನ್ನು ಉಲ್ಲೇಖಿಸುತ್ತ ಶ್ಯಾಮ್ ಭಟ್ ಬರೆಯುತ್ತಾರೆ: “’ಇದು ಬೇಳೆ ಕಾಳುಗಳು ಬೆಲೆ ಕಡಿಮೆಯಾಗಿರುವ ಮೂರನೇ ವರುಷ; ಮತ್ತು ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ಬೆಲೆ ಕನಿಷ್ಟವಾಗಿದೆ, ರೈತರನ್ನು ಪುನಶ್ಚೇತನಗೊಳ್ಳಲಾಗದ ದೈನೇಸಿ ಸ್ಥಿತಿ ದೂಡಿಬಿಟ್ಟಿದೆ; ಕೆಲವು ಉತ್ತಮವಾಗಿರುವ ರೈತರು ಭೂಕಂದಾಯವನ್ನು ಕಟ್ಟಿದ್ದಾರಾದರೂ, ಅವರಲ್ಲೂ ಅನೇಕರು ಆ ಮೊತ್ತವನ್ನು ಕಟ್ಟಿರುವುದು ತಮ್ಮ ಭೂಮಿಯನ್ನು ಮಾರಾಟ ಮಾಡಿ ಅಥವಾ ಅಡ ಇಟ್ಟು’. ಕೆಲವು ಸಂದರ್ಭದಲ್ಲಿ ಮಾರಾಟಕ್ಕಿಟ್ಟ ಭೂಮಿಯ ಬೆಲೆ ಅದರ ಬೆಲೆಯ ಅರ್ಧಕ್ಕಿಂತಲೂ ಕಡಿಮೆಗೆ ಮಾರಾಟವಾಗಿತ್ತು. ಜಿಲ್ಲೆಯ ರೈತರ ಈ ಹೀನಾಯ ಪರಿಸ್ಥಿತಿಗೆ ಹೆಚ್ಚಾಗಿ ಅಂದಾಜಿಸಿದ್ದಷ್ಟೇ ಕಾರಣವಲ್ಲವೆನ್ನುವುದು ಹ್ಯಾರಿಸ್ ಅಭಿಪ್ರಾಯವಾಗಿತ್ತು. ಅವನ ಪ್ರಕಾರ ಇದು ವ್ಯಾಪಾರ ವಹಿವಾಟಿನಲ್ಲಾದ ಸ್ಥಗಿತತೆ ಮತ್ತು ಸಮಾಜದ ಬಡ್ಡಿವ್ಯಾಪಾರಿಗಳ ಪಾತ್ರವೂ ಇತ್ತು. 

ಆದರೆ ಹೆಚ್ಚಾಗಿ ಅಂದಾಜಿಸಿದ್ದ ಪರಿಣಾಮ ಮತ್ತು ಬಾಕಿ ಮನ್ನಾ ಸಲೀಸಾಗಿ ಮಾಡದೇ ಇದ್ದ ಕಾರಣದಿಂದ ರೈತರ ಮೇಲೀಗಾಗಲೇ ಇದ್ದ ತೊಂದರೆಗಳ ಜೊತೆಗೆ ಆರ್ಥಿಕ ಬಿಕ್ಕಟ್ಟೂ ಜೊತೆಯಾಗುವಂತಾಯಿತು. ರೈತರ ಬಡತನ ಅವರನ್ನು ಬಡ್ಡಿವ್ಯಾಪಾರಿಗಳ ಬಳಿಗೋಗುವಂತೆ ಮಾಡಿತು. ಸರಕಾರದ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ರೈತರು ತಮ್ಮ ಭೂಮಿಯನ್ನು ಬಡ್ಡಿವ್ಯಾಪಾರಿಗಳ ಬಳಿ ಅಡವಿಟ್ಟರು. ದಕ್ಷಿಣ ಕೆನರಾದಲ್ಲಿ ಎರಡು ರೀತಿಯ ಅಡವುಗಳಿದ್ದವು; ಭೂಮಿ ಮತ್ತದರ ಬೆಳೆಯನ್ನು ಪ್ರತ್ಯೇಕವಾಗಿ ಅಡಕ್ಕೆ ಇಟ್ಟುಕೊಳ್ಳಲಾಗುತ್ತಿತ್ತು. ಭೂಮಿಯನ್ನು ಅಡಕ್ಕೆ ಇಟ್ಟುಕೊಂಡರೆ ಅದಕ್ಕೆ ಭೋಗ್ಯವೆಂದು ಅಥವಾ ಜೀವಂತ ಒತ್ತೆಯೆಂದು ಕರೆಯುತ್ತಿದ್ದರು ಮತ್ತು ಬೆಳೆಯನ್ನು ಒತ್ತೆ ಇಟ್ಟುಕೊಂಡರೆ ತೊರದೂ ಅಥವಾ ತೊರದೂವೂ ಅಥವಾ ಸತ್ತ ಒತ್ತೆಯೆಂದು ಕರೆಯುತ್ತಿದ್ದರು. 

ಕೊಟ್ಟ ಸಾಲಕ್ಕೆ ಬಡ್ಡಿವ್ಯಾಪಾರಿಗಳು ವಿಧಿಸುತ್ತಿದ್ದ ಬಡ್ಡಿ ವಾರ್ಷಿಕ 6 ರಿಂದ 12%ವರೆಗಿರುತ್ತಿತ್ತು; ಇದು ನಿರ್ಧರಿತವಾಗುತ್ತಿದ್ದುದು ಸಾಲದ ಮೊತ್ತವೆಷ್ಟು ಎನ್ನುವುದರ ಮೇಲೆ; ಸಾಲದ ಮೊತ್ತ ಕಡಿಮೆಯಾಗಿದ್ದರೆ ಬಡ್ಡಿ ಅಧಿಕವಾಗಿರುತ್ತಿತ್ತು ಮತ್ತು ಸಾಲದ ಮೊತ್ತ ಹೆಚ್ಚಿನದ್ದಾಗಿದ್ದರೆ ಬಡ್ಡಿ ಕಡಿಮೆಯಿರುತ್ತಿತ್ತು. ಬಹುತೇಕ ಪ್ರಕರಣಗಳಲ್ಲಿ ರೈತರು ಸಾಲ ತೀರಿಸುವಲ್ಲಿ ವಿಫಲರಾಗುತ್ತಿದ್ದರು ಮತ್ತು ಕೊನೆಗೆ ವಿಧಿ ಇಲ್ಲದೆ ತಮ್ಮ ಭೂಮಿಯನ್ನು ಬಡ್ಡಿವ್ಯಾಪಾರಿಗಳಿಗೆ ಮಾರಿಬಿಡುತ್ತಿದ್ದರು, ಇಡೀ ಗ್ರಾಮೀಣ ಭಾರತದಲ್ಲಿ ಕಾಣಬರುವ ಸಾಮಾನ್ಯ ಚಿತ್ರವಿದು. 1820ರ ಸಮಯದಲ್ಲಿ ಕಂಡುಬಂದ ಮತ್ತೊಂದು ಚಿತ್ರವೆಂದರೆ ತೆರಿಗೆ ಬಾಕಿಯನ್ನು ವಸೂಲು ಮಾಡುವ ಸಲುವಾಗಿ ಸರಕಾರವೇ ಭೂಮಿಯನ್ನು ಸಾರ್ವಜನಿಕ ಹರಾಜಿನ ಮೂಲಕ ಮಾರಾಟ ಮಾಡುತ್ತಿದ್ದುದು. 

ಈ ರೀತಿಯ ಸತತ ಕಡೆಗಣನೆಯ ಸಂದರ್ಭದಲ್ಲಿ ರೈತರು ಜೇಡರ ಬಲೆಯಲ್ಲಿ ಸಿಕ್ಕಂತಾದರು ಮತ್ತು 1820ರ ಕೊನೆಯ ಭಾಗದಲ್ಲಿ, ಪುರಾತನ ಮೂಲಗಾರರ ಆಸ್ತಿ ಬಡ್ಡಿವ್ಯಾಪಾರಿಗಳ ದೋಚುವ ಕೈಗಳ ವಶವಾಗುತ್ತಿದ್ದದ್ದು ಕೆನರಾ ಜಿಲ್ಲೆ ಮತ್ತು ಕೆನರಾ ಪ್ರಾಂತ್ಯದರೆಡರಲ್ಲೂ ಸಾಮಾನ್ಯವಾದ ಸಂಗತಿಯಾಗಿಬಿಟ್ಟಿತ್ತು. 

1831ರ ಫೆಬ್ರವರಿ 1ರಂದು ಕೆನರಾದ ಜಿಲ್ಲಾಧಿಕಾರಿ ಡಿಕಿನ್ಸನ್ ನಿರ್ದೇಶಕ ಮಂಡಳಿಗೆ ಬರೆಯುತ್ತಾರೆ. ‘ಈ ಜಿಲ್ಲೆಯ ಕಂದಾಯ ಸಂಗ್ರಹ ಮೇಲೆ ಕಳೆದ ಮೂರು ಅಥವಾ ನಾಲ್ಕು ವರ್ಷದ ಮಾರುಕಟ್ಟೆಯಿಂದ ಪ್ರಭಾವಿತವಾಗಿದೆ ಎಂದು ಸರಕಾರಕ್ಕೆ ತಿಳಿಸುವುದು ನನ್ನ ಕರ್ತವ್ಯವೆನ್ನುವುದು ಸತ್ಯ. ಕಂದಾಯ ಎಷ್ಟು ಹೆಚ್ಚಿದೆಯೆಂದರೆ ರೈತರಿಗೆ ಅದನ್ನು ಕಟ್ಟುವುದು ಅಸಾಧ್ಯವೇ ಆಗಿದೆ. ಅವರಲ್ಲೀಗ ಗರಿಷ್ಟ ಮಟ್ಟದ ಬಿಕ್ಕಟ್ಟಿನ ಪರಿಸ್ಥಿತಿಯಿದೆ ಮತ್ತು ಅವರನ್ನು ಉಳಿಸುವ ಸಲುವಾಗಿ ಹಾಗೂ ಅವರು ದಿವಾಳಿಯಾಗುವುದನ್ನು ತಡೆಯುವ ಸಲುವಾಗಿ ಕಂದಾಯದ ದೊಡ್ಡ ಮೊತ್ತವನ್ನು ಮನ್ನಾ ಮಾಡುವುದು ಅತ್ಯವಶ್ಯಕ ಎಂದು ಹೇಳುವುದಕ್ಕೆ ನನಗೆ ಯಾವುದೇ ರೀತಿಯ ಹಿಂಜರಿಕೆಯಿಲ್ಲ….ಕೆನರಾದ ಕೆಲ ಪ್ರದೇಶಗಳಲ್ಲಿನ ಜನರ ಬಡತನ ಮತ್ತವರ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಕಣ್ಣಾರೆ ಕಾಣುವುದು ಅಪಾರ ನೋವಿನ ಸಂಗತಿ; ಪೂರ್ವ ಕರಾವಳಿಯ ರೈತರನ್ನಷ್ಟೇ ನೋಡಿರುವ ಮಹನೀಯರಿಗೆ ಇಲ್ಲಿನ ಪರಿಸ್ಥಿತಿಯ ಕಲ್ಪನೆಯೂ ಮೂಡಲಾರದು…’ 

ಕೂಟಿನ ಪ್ರತಿರೋಧದ ಸದ್ದಡಗಿಸಿದ ನಂತರ ಮಂಡಳಿ ದ್ವಿಮುಖ ನೀತಿಯನ್ನು ಅನುಸರಿಸಲಾರಂಭಿಸಿತು, ಸಂತ್ರಸ್ತ ರೈತರ ವಾರ್ಷಿಕ ಬಾಕಿ ಮನ್ನಾ ಮಾಡುತ್ತಿತ್ತು ಅಥವಾ ನಾಲ್ಕು ಅಥವಾ ಐದು ವರುಷದಷ್ಟು ಸುದೀರ್ಘ ಅವಧಿಗೆ ಬಾಕಿ ಉಳಿಸಿಕೊಂಡ ರೈತರ ಭೂಮಿಯನ್ನು ವಶಪಡಿಸಿಕೊಳ್ಳುತ್ತಿತ್ತು. ನೀತಿಯಲ್ಲಾದ ಈ ಬದಲಾವಣೆಯನ್ನು ಸ್ಪಷ್ಟವಾಗಿ 1830ರ ಆಡಳಿತಾತ್ಮಕ ದಾಖಲೆಗಳಲ್ಲಿ ಕಾಣಬಹುದು, ಹೆಚ್ಚಾಗಿ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿತ್ತು. ಸಾರ್ವಜನಿಕ ಹರಾಜನ್ನು ಸರಕಾರವೇ ನಡೆಸುತ್ತಿತ್ತು ಮತ್ತು ಬಹುತೇಕ ಪ್ರಕರಣಗಳಲ್ಲಿ ಮಾಲೀಕತ್ವ ಹಣವಿದ್ದವರ ವರ್ಗಕ್ಕೆ ಹೋಗುತ್ತಿತ್ತು, ಬಡ್ಡಿವ್ಯಾಪಾರಿಗಳಂತವರಿಗೆ. ಈ ರೀತಿಯ ಬಲವಂತದ ಮಾರಾಟ ಪ್ರಕರಣಗಳು ಬಡತನ ಹೆಚ್ಚಿದ್ದ ತಾಲ್ಲೂಕುಗಳಾದ ಬಂಟ್ವಾಳ, ಬೇಕಲ್ ಮತ್ತು ಮಂಗಳೂರಿನಲ್ಲಿ ಅಧಿಕವಾಗಿ ಕಾಣಬಹುದಿತ್ತು…. 

ಸರಕಾರೀ ಅಧಿಕಾರಿಗಳು ಮತ್ತು ಬಡ್ಡಿವ್ಯಾಪಾರಿಗಳ ನಡುವಿದ್ದ ಸಂಬಂಧ ಕೆನರಾದ ಉಪ ಜಿಲ್ಲಾಧಿಕಾರಿಯಾಗಿದ್ದ ಎ.ಎಫ್. ಹಡಲ್ ಸ್ಟೋನ್ 1826ರ ಜುಲೈ 29ರಂದು ಮಂಡಳಿಗೆ ಬರೆದ ವರದಿಯಿಂದ ಸ್ಪಷ್ಟವಾಗುತ್ತದೆ: 

‘ಬಾರ್ಕೂರು ತಾಲ್ಲೂಕಿನಲ್ಲಿ ಮುಂದಾಗಿ ಕೊಳ್ಳುವ ಪದ್ಧತಿ ಕೆಲವು ವರುಷಗಳಿಂದ ಸಂಪೂರ್ಣವಾಗಿತ್ತು. ಕರಾವಳಿಯ ವರ್ತಕರ ದಲ್ಲಾಳಿ, ಒಂದಷ್ಟು ಹಣದೊಂದಿಗೆ ಶಾನುಬಾಗರ ಜೊತೆಗೂಡುತ್ತಿದ್ದ; ಶಾನುಬಾಗರು ತೆರಿಗೆ ಸಂಗ್ರಹಿಸಲೋಗುವ ದಿನಗಳಲ್ಲಿ. ಈ ಎರಡೂ ಪಕ್ಷಗಳು ಒಬ್ಬರನ್ನೊಬ್ಬರು ಚೆನ್ನಾಗಿ ಅರಿತುಕೊಂಡಿದ್ದರು. ಶಾನುಬಾಗರು ಈಗಾಗಲೇ ಬಿಕ್ಕಟ್ಟಿನಲ್ಲಿದ್ದ ರೈತನಿಗೆ ತೆರಿಗೆ ಕಟ್ಟದೇ ಇದ್ದಲ್ಲಿ ಯಾವ ರೀತಿಯ ಅನಪೇಕ್ಷಿತ ಪರಿಣಾಮಗಳಾಗುತ್ತವೆ ಎಂದು ಹೇಳಿದರೆ ದಲ್ಲಾಳಿ ಈ ಪರಿಣಾಮಗಳನ್ನು ತಡೆಯುವ ಸಲುವಾಗಿ ತಾನು ಕೊಡಲು ಸಿದ್ಧವಾಗಿರುವ ಸಾಲವನ್ನು ಪಡೆದರಾಯಿತು, ಮುಂದಿನ ವರುಷದ ಬೆಳೆಯ ಆಧಾರದ ಮೇಲೆ ಎಂದು ತಿಳಿಸುತ್ತಿದ್ದ. ಇವೆಲ್ಲವನ್ನೂ ಪಕ್ಕಾ ಮಾಡಿಕೊಳ್ಳಲು, ವರ್ತಕ ಮುಂದಿನ ವರುಷದ ಜುಮ್ಮಾಬಂಧಿಯನ್ನು ಕೊಡುವ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಿದ್ದ ಮತ್ತಿದರಿಂದ ಬೆಳೆಯ ಮೇಲೆ ಸಂಪೂರ್ಣ ಹಕ್ಕನ್ನು ಹೊಂದಿಬಿಡುತ್ತಿದ್ದ. ಒಂದು ಬಾರಿ ಬಡ್ಡಿವ್ಯಾಪಾರಿಗಳ ಹಿಡಿತಕ್ಕೆ ಸಿಕ್ಕಿಬಿಟ್ಟರೆ ಅದರಿಂದ ಬಿಡಿಸಿಕೊಳ್ಳಲು ರೈತನಿಗೆ ಸಾಧ್ಯವೇ ಆಗುತ್ತಿರಲಿಲ್ಲ – ಅವನ ಸಂಕಷ್ಟಗಳು ಹೆಚ್ಚುತ್ತಿತ್ತು, ಮತ್ತು ಕೊನೆಗೆ ವರ್ತಕ ಆ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದ ಮತ್ತಾ ರೈತನನ್ನು ಅಲ್ಲೇ ಗುತ್ತಿಗೆಗೆ ನೇಮಿಸಿಕೊಳ್ಳುತ್ತಿದ್ದ’.” (221) 

ಬೆಂಜಮಿನ್ ಹೇನ್ಸ್ 1802ರಷ್ಟು ಮೊದಲೇ ಬರೆದಿದ್ದ Report relative to the Mysore Surveyಯಲ್ಲಿ ಊಳಿಗಮಾನ್ಯತೆಯ ಸಾಲದಿಂದುಂಟಾದ ಪರಿಸ್ಥಿತಿಯನ್ನು ಮುಂಗಂಡಿದ್ದಾನೆ. ಅವನು ಬರೆಯುತ್ತಾನೆ: “ಕರಾವಳಿಯಲ್ಲಿ ಕೃಷಿಯನ್ನು ಹಾಳುಗೆಡವಿದ ದೊಡ್ಡ ತಲೆಬಿಸಿ ಸಂಗತಿಯೆಂದರೆ ಸರಕಾರಕ್ಕೆ ತೆರಿಗೆ ಹಣವನ್ನು ಮುಂಗಡವಾಗಿ ನೀಡುವುದು, ಬಿತ್ತನೆ ನಡೆಯುವ ಮೊದಲೇ ನೀಡುವುದು ಮತ್ತು ಪುನಃ ಬೆಳೆ ಕಟಾವಾಗುವ ಮೊದಲೇ ನಿಗದಿತ ಸಮಯಕ್ಕೆ ಹಣವನ್ನು ನೀಡುವುದು. ಯಾವ ಜಮೀನ್ದಾರ, ಗುತ್ತಿಗೆದಾರ ಅಥವಾ ಕೃಷಿಕನ ಬಳಿ ಮುಂಗಡವಾಗಿ ಕೊಡಲು ಹಣವಿರುತ್ತಿರಲಿಲ್ಲವಾದ್ದರಿಂದ ಹಣಕ್ಕಾಗಿ ಅವರು ಸಾಹುಕಾರರ ಅಥವಾ ಬಡ್ಡಿವ್ಯಾಪಾರಿಗಳ ಬಳಿಯೇ ಕೈಚಾಚಬೇಕಿತ್ತು. ಹಣ ಬೇಡುತ್ತಿರುವ ವ್ಯಕ್ತಿಯ ಪ್ರಾಮಾಣಿಕತೆಗೆ ಅನುಗುಣವಾಗಿ ಹಣವನ್ನು ಮುಂಗಡವಾಗಿ ನೀಡುತ್ತಿದ್ದರು, 2% ಬಡ್ಡಿ ಪ್ರತಿ ತಿಂಗಳಿಗೆ ನಿಗದಿಯಾಗುತ್ತಿತ್ತು ಮತ್ತು ಮುಂಗಡ ಹಣದಲ್ಲಿ ಐದು ಪ್ರತಿಶತಃದಷ್ಟನ್ನು ಮುರಿದುಕೊಳ್ಳುತ್ತಿದ್ದರು. ಎರಡನೇ ಮತ್ತು ಮೂರನೇ ಕಂತಿಗೆ (ಅಷ್ಟರಲ್ಲಿ ಬೆಳೆಗಳು ಬೆಳೆದಿರುತ್ತಿದ್ದವು) ಮುಂಗಡ ಹಣದಲ್ಲೇನನ್ನೂ ಮುರಿದುಕೊಳ್ಳುತ್ತಿರಲಿಲ್ಲ, ಆದರೆ ನಾಲ್ಕನೇ ಬಾರಿ ಹಣ ಪಡೆಯುವಾಗ ಬೆಳೆಯನ್ನು ಒತ್ತೆ ಇಡಬೇಕಿತ್ತು. ಬಹಳಷ್ಟು ಬಡ್ಡಿವ್ಯಾಪಾರಿಗಳು ತತ್ ಕ್ಷಣ ಮಾರುವುದಕ್ಕೆ ಒತ್ತಾಯಿಸುತ್ತಿದ್ದರು ಮತ್ತು ತಾವೇ ಖರೀದಿದಾರರಾಗಿಬಿಡುತ್ತಿದ್ದರು, ಮಾರುಕಟ್ಟೆಯಲ್ಲಿರುವ ಮೌಲ್ಯಕ್ಕಿಂತ ಐದರಿಂದ ಹತ್ತು ಪರ್ಸೆಂಟಿನಷ್ಟು ಕಡಿಮೆ ಬೆಲೆಗೆ ಕೊಂಡುಕೊಳ್ಳುತ್ತಿದ್ದರು”. (222) 

ವಸಾಹತುಶಾಹಿಯ ಕೃಷಿ ಕಂದಾಯ ಒಂದೆಡೆ ಕಂಪನಿಯನ್ನು ಶ್ರೀಮಂತಗೊಳಿಸಿದರೆ ಮತ್ತೊಂದೆಡೆ ಕೃಷಿ ಭೂಮಿಯನ್ನು ಆಕ್ರಮಣಕಾರಿ ಹದ್ದಿನಂತಹ ಬಡ್ಡಿವ್ಯಾಪಾರಿಗಳ ಕೈವಶ ಮಾಡಿಬಿಟ್ಟಿತು; ಈ ಬಡ್ಡಿವ್ಯಾಪಾರಿಗಳು ಕರಾವಳಿಯ ಭೂಮಾಲೀಕರಾಗಿ ಹೊರಹೊಮ್ಮಿದರು, ವಸಾಹತು ಲೂಟಿಯಿಂದ ಉದ್ಭವವಾದ ಹೊಸ ಊಳಿಗಮಾನ್ಯ ವರ್ಗ. ಭಟ್ ಮತ್ತು ಹಡಲ್ ಸ್ಟೋನ್ ಉಲ್ಲೇಖಿಸುವ ಈ ಬಡ್ಡಿ ವ್ಯಾಪಾರಿಗಳು ಬೇರ್ಯಾರೂ ಅಲ್ಲ, ಕರಾವಳಿಯ ವರ್ತಕರು – ನಾವೀಗಾಗಲೇ ಉಲ್ಲೇಖಿಸಿರುವ ಮಧ್ಯಮವರ್ತಿ ಗೌಡ ಸಾರಸ್ವತ ಬ್ರಾಹ್ಮಣರು. ಮೊದಲಿಗೆ ಬಂದರು ಪಟ್ಟಣದ ಮಧ್ಯಮವರ್ತಿ ವರ್ತಕರಾಗಿದ್ದ, ನಂತರ ಬಡ್ಡಿವ್ಯಾಪಾರಿಗಳಾಗಿ ಪೂರ್ವದ ಹಳ್ಳಿಗಳತ್ತ ವಲಸೆ ಹೋದ ಗೌಡ ಸಾರಸ್ವತ ಬ್ರಾಹ್ಮಣರು ಭೂಮಿಯನ್ನು ಕಬಳಿಸುತ್ತ ಊಳಿಗಮಾನ್ಯ ಭೂಮಾಲೀಕರ ಹೊಸ ಪದರವಾದರು; ಅವರ ಶೋಷಕ ಹಿಡಿತದಲ್ಲಿ ಕರಾವಳಿಯ ಬಹಳಷ್ಟು ಜನರು ಬಂಧಿಯಾದರು. ಈ ಪೂರ್ವದ ಪಯಣದಲ್ಲಿ, ಕೆಲವರು ಘಟ್ಟದ ಮೇಲೇರಿ ಸಮೃದ್ಧ ಮಲೆನಾಡಿನಲ್ಲೂ ಮೇಯಲಾರಂಭಿಸಿದರು. 

ವಸಾಹತು – ಮಧ್ಯಮವರ್ತಿ – ಊಳಿಗಮಾನ್ಯ ಬಂಧವನ್ನು ಮತ್ತಷ್ಟು ವಿವರವಾಗಿ ತಿಳಿಸುತ್ತಾ, ಶ್ಯಾಮ್ ಭಟ್ ಹೇಳುತ್ತಾರೆ: “ಈ ಬಡ್ಡಿವ್ಯಾಪಾರಿಗಳ ಜನನ ಮತ್ತವರು ಸಮಾಜದಲ್ಲಿ ವಿಶಿಷ್ಟ ಪ್ರಭಾವಿ ಗುಂಪಾಗಿ ಬೆಳೆದದ್ದು ವಿಚಿತ್ರವಾದ ವಸಾಹತು ಪರಿಸ್ಥಿತಿಯ ಕಾರಣದಿಂದ… 

ಹೊಸ ಭೂಮಾಲೀಕರು, ಬಡ್ಡಿವ್ಯಾಪಾರಿಗಳು ಮತ್ತು ಅಧಿಕಾರಿಗಳು (ಬ್ರಾಹ್ಮಣ, ಸಾರಸ್ವತ ಮತ್ತು ಬಂಟ್ ಕುಟುಂಬಗಳಿಂದ ಬಂದವರು) ಬ್ರಿಟೀಷ್ ಅಧಿಕಾರಶಾಹಿಯ ಜೊತೆಗೆ ಹತ್ತಿರದ ನಂಟನ್ನು ಬೆಳೆಸಿಕೊಂಡಿದ್ದರು; ಬ್ರಿಟೀಷರ ಕಂದಾಯ ಮತ್ತು ನ್ಯಾಯಂಗ ತಮಗೆ ಎಲ್ಲ ವಿಧದಲ್ಲೂ ಅನುಕೂಲಕರವಾಗಿರುವಂತೆ ನೋಡಿಕೊಂಡರು. 1799 – 1800 ನಂತರ ಅಸ್ತವ್ಯಸ್ತಗೊಂಡ ರಾಜಕೀಯ ವ್ಯವಸ್ಥೆಯು, ಭೂಮಿ ಹೊಂದಿದ ಬ್ರಾಹ್ಮಣರಿಗೆ, ಬಂಟರಿಗೆ ಮತ್ತು ವರ್ತಕರಿಗೆ ಕಂಪನಿ ಮತ್ತು ಕೃಷಿಕರ ನಡುವೆ ಪ್ರಭಾವಿ ಮತ್ತು ಸಂಕೀರ್ಣ ವ್ಯಕ್ತಿಗಳಾಗಿ ಬೆಳೆಯುವ ಎಲ್ಲಾ ಸಾಧ್ಯತೆಗಳನ್ನೂ ಒದಗಿಸಿಕೊಟ್ಟಿತು. 1826ರಲ್ಲಿ ಕೊಟ್ಟ ವರದಿಯೊಂದರಲ್ಲಿ ಕೆನರಾದ ಉಪಜಿಲ್ಲಾಧಿಕಾರಿ ಎ.ಎಫ್. ಹಡಲ್ ಸ್ಟೋನ್ ದಕ್ಷಿಣ ಕೆನರಾದ ಶಾನುಭಾಗರು ನಡೆಸಿದ ಮೋಸದ ಕೆಲಸಗಳನ್ನು ತಿಳಿಸುತ್ತಾರೆ. ಕೃಷಿಕರ ಅಜ್ಞಾನವನ್ನೇ ಬಂಡವಾಳ ಮಾಡಿಕೊಂಡು ಒತ್ತೆ ಪತ್ರಗಳನ್ನು ಮಾರಾಟ ಪತ್ರಗಳನ್ನಾಗಿ ಪರಿವರ್ತಿಸಿ, ಅವರ ಸಹಿ ಪಡೆದುಕೊಂಡು ಮೋಸ ಮಾಡಿದರು. ಈ ಸ್ಥಳೀಯ ಕಂದಾಯ ಅಧಿಕಾರಿಗಳು ಮಾಡಿದ ಇನ್ನೂ ಹೆಚ್ಚಿನ ಅನಾಹುತಕಾರಿ ಕಾರ್ಯವೆಂದರೆ ಸ್ಥಳೀಯ ವರ್ತಕ ಬಡ್ಡಿವ್ಯಾಪಾರಿಗಳ ಜೊತೆಗೆ ಅನೈತಿಕ ಮೈತ್ರಿ ಮಾಡಿಕೊಂಡಿದ್ದು…. ವರ್ತಕ ವರ್ಗಕ್ಕೆ ಸೇರಿದ ಕೆಲವರು ಆಡಳಿತದಲ್ಲಿದ್ದರು, ಮತ್ತವರು ಸರಕಾರೀ ಅಧಿಕಾರಿಗಳಾಗಿ ಹಾಗು ಬಡ್ಡಿವ್ಯಾಪಾರಿಗಳಾಗಿ ಎರಡೆರಡು ಕೆಲಸ ಮಾಡುತ್ತಿದ್ದ ಎಲ್ಲಾ ಸಾಧ್ಯತೆಗಳೂ ಇತ್ತು. ಈ ವರ್ತಕ ಬಡ್ಡಿ ವ್ಯಾಪಾರಿಗಳು ಕಂದಾಯ ಅಧಿಕಾರಿಗಳೇ ಆಗಿರಲಿಲ್ಲ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅವರಲ್ಲಿ ಕೆಲವರು, ಉದಾಹರಣೆಗೆ ಬಂಟ್ವಾಳದ ಕೊಂಕಣಿಗಳು ಆ ಪ್ರದೇಶದಲ್ಲಿ ಉನ್ನತಿ ಹೊಂದುತ್ತಿದ್ದ ವರ್ತಕರಾಗಿದ್ದರು”. (223) 

ತುಳುನಾಡಿನ ಪರಿಸ್ಥಿತಿಯನ್ನು ಒಟ್ಟಾರೆಯಾಗಿ ಅವಲೋಕಿಸುತ್ತ, ಶ್ಯಾಮ್ ಭಟ್ “ವಸಾಹತು ಮಾಲೀಕರ ಸ್ಪಷ್ಟ ಆಸಕ್ತಿ ಸ್ಥಳೀಯರು ಸಂಪೂರ್ಣವಾಗಿ ಕುಸಿಯುವಂತೆ ಮಾಡುವುದಾಗಿತ್ತು” ಎಂದ್ಹೇಳಿ ಮುಕ್ತಾಯಗೊಳಿಸುತ್ತಾರೆ. (224) 

ನೇರವಾಗಿ ಮದ್ರಾಸ್ ಪ್ರಾಂತ್ಯದ ಆಡಳಿತದಲ್ಲಿದ್ದ ಬಳ್ಳಾರಿಯ ಪರಿಸ್ಥಿತಿ, ದಕ್ಷಿಣ ಕನ್ನಡದ ಪರಿಸ್ಥಿತಿಗಿಂತ ಬೇರೆಯಾಗಿರಲಿಲ್ಲ. 1824ರಲ್ಲಿ ದಕ್ಷಿಣದ ಜಿಲ್ಲೆಗಳಲ್ಲಿದ್ದ ಪರಿಸ್ಥಿತಿಯ ಬಗ್ಗೆ ಪ್ರಾಂತ್ಯದ ಗವರ್ನರ್ ಆಗಿದ್ದ ಮನ್ರೋ ಟಿಪ್ಪಣಿ ಮಾಡಿಕೊಂಡಿದ್ದ; ಇಲ್ಲಿನ ಕಂದಾಯ ಪದ್ಧತಿಯನ್ನು ಎರಡು ದಶಕಗಳ ಹಿಂದೆ ಕಿರಿಯ ಅಧಿಕಾರಿಯಾಗಿದ್ದಾಗ ಮನ್ರೋನೇ ನಿರ್ಧರಿಸಿದ್ದ. “ಬಳ್ಳಾಯಿಯಲ್ಲಿ….. ಸತತವಾದ ಶಾಂತಿಯ ದಿನಗಳಲ್ಲಿ ಉತ್ತಮಗೊಳ್ಳಬೇಕಿದ್ದ ಇಲ್ಲಿನ ಜನರ ಪರಿಸ್ಥಿತಿ ಕಳೆದ ಇಪ್ಪತ್ತು ವರುಷಗಳಿಂದ ಕುಸಿದು ಹೋಗಿದೆ. ಇದಕ್ಕೆ ಹತ್ತಲವು ಕಾರಣಗಳನ್ನು ನೀಡಬಹುದು…. (ಒಂದು) ಮೂರು ಮತ್ತು ಹತ್ತು ವರುಷದ ಗುತ್ತಿಗೆ ಪದ್ಧತಿಯಲ್ಲಿ, ಗುತ್ತಿಗೆಯ ಮೊತ್ತ ಎಲ್ಲಾ ವರುಷಗಳಿಗೂ ಒಂದೇ ಇರುತ್ತಿತ್ತು, ಇದು ಹವಾಮಾನದಲ್ಲಾಗುತ್ತಿದ್ದ ವೈಪರೀತ್ಯಗಳ ಸಂದರ್ಭವನ್ನು ಪರಿಗಣನೆಗೆ ತೆಗೆದುಕೊಳ್ಳದಿದ್ದ ಕಾರಣ ಗುತ್ತಿಗೆದಾರನಿಗೆ ಯಾವುದೇ ಸಹಾಯವಾಗುತ್ತಿರಲಿಲ್ಲ. ಹವಾಮಾನ ವೈಪರೀತ್ಯ ಕಂಡ ಸಂದರ್ಭದಲ್ಲೆಲ್ಲ ರೈತರು ದಿವಾಳಿಯಾದರು….” (225) 

ಮುಂದಿನ ತಿಂಗಳಿನಲ್ಲೇ, ಬಳ್ಳಾರಿಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ ಎಚ್ಚರಗೊಂಡು, on the depressed condition in the bellari district ಎಂಬ ಮತ್ತೊಂದು ಟಿಪ್ಪಣಿಯಲ್ಲಿ ಈ ವಿಷಯಗಳನ್ನು ಗಮನಿಸುತ್ತಾನೆ: “ಭೂ ಕಂದಾಯವನ್ನು ಐದನೇ ಒಂದಂಶದಷ್ಟು ಹೆಚ್ಚಿಸಿದ ಕಾರಣದಿಂದ ಬಡ ರೈತರಲ್ಲಿ ಕೆಲವೇ ಕೆಲವರು ಮಾತ್ರ ಪೂರ್ತಿ ಬಾಡಿಗೆಯನ್ನು ಕಟ್ಟಿದ್ದಾರೆ – ಬಹಳಷ್ಟು ಮಂದಿ 10 ರಿಂದ 50% ಅಥವಾ 60% ಮನ್ನಾ ಮಾಡಿಸಿಕೊಂಡಿದ್ದಾರೆ; ಇಷ್ಟೆಲ್ಲ ಆದ ನಂತರವೂ ಬಹಳಷ್ಟು ಮಂದಿ ಮತ್ತೆ ಸುಧಾರಿಸಿಕೊಳ್ಳಲೇ ಆಗಲಿಲ್ಲ, ಬಾಡಿಗೆ ಕಟ್ಟುವುದು ದೂರದ ಮಾತು. ಬಹುತೇಕರು ಪ್ರತಿ ವರುಷವೂ ಹಣ ಕಟ್ಟಲು ವಿಫಲರಾದರು, ಮತ್ತವರ ಭೂಮಿಯನ್ನು ತೊರೆದು ನಿಂತರು….ಗುತ್ತಿಗೆಯ ಸಮಯದಲ್ಲಿ ಬಡ ರೈತರ ಸಂಖೈ ಹೇರಿಕೆ ಕಂಡಿರುವುದು ಹೌದು, ಮತ್ತು ಭೂಮಿಯನ್ನು ತೊರೆದುಬಿಡುವ ಮತ್ತು ಭೂಮಿಯನ್ನು ಹಸ್ತಾಂತರಿಸುವ ಸಂದರ್ಭಗಳು ಹೆಚ್ಚಾದವು”. (226) 

ಬಾಂಬೆ ಸರಕಾರದ ಕೈಕೆಳಗೆ ಬಂದ ಉತ್ತರ ಕರ್ನಾಟಕದಲ್ಲೂ ಕೂಡ ಇಂತಹುದೇ ವಿದ್ಯಮಾನ ಕಂಡುಬಂತು. ಕಿತ್ತೂರಿನ ದೇಸಾಯಿಗಳು 1818ರಲ್ಲಿ ಬ್ರಿಟೀಷರಿಗೆ ವಾರ್ಷಿಕವಾಗಿ 1,75,000 ರುಪಾಯಿಗಳನ್ನು ಕಕ್ಕಲು ಒಪ್ಪಿಕೊಂಡಿದ್ದನ್ನು ನಾವೀಗಾಗಲೇ ನೋಡಿದ್ದೇವೆ. ಈ ಮೊತ್ತ ಕಿತ್ತೂರಿನ ದೇಸಾಯಿಗಳು ಪೇಶ್ವೆಗಳಿಗೆ ಕೊಡುತ್ತಿದ್ದ ಮೊತ್ತಕ್ಕಿಂತ ಎರಡು ಪಟ್ಟಷ್ಟಿತ್ತು ಮತ್ತು ಕಿತ್ತೂರಿನ ವಾರ್ಷಿಕ ಆದಾಯ 3,50,000 ರುಪಾಯಿಗಳಷ್ಟಿತ್ತು. ಇದರಿಂದ ಸ್ಪಷ್ಟವಾಗುವುದೇನೆಂದರೆ ಬ್ರಿಟೀಷರು ಕರ್ನಾಟಕದಲ್ಲಿದ್ದ ತಮ್ಮ ಕೈಗೊಂಬೆ ಸರಕಾರಗಳ ಅರ್ಧದಷ್ಟು ಆದಾಯವನ್ನು ದೋಚುತ್ತಿತ್ತು, ಕಡಿಮೆ ಮೊತ್ತವನ್ನಲ್ಲ. (227) 

ಇದೇ ಸಮಯದಲ್ಲಿ ಬಾಂಬೆ ಕರ್ನಾಟಕದಲ್ಲಿ ಬ್ರಿಟೀಷ್ ಕಂದಾಯ ಆಡಳಿತದ ಬಗ್ಗೆ ಫುಕಝಾವಾ ಹೇಳುತ್ತಾರೆ: “….1818ರಲ್ಲಿ ಭೂಕಂದಾಯ ನಿಗದಿಪಡಿಸುವಾಗ ಬ್ರಿಟೀಷರು ಮರಾಠರ ಕಾಲದ ಕೊನೆಯಲ್ಲಿದ್ದ ಅಧಿಕ ಕಂದಾಯವನ್ನು ಆಧಾರವಾಗಿಟ್ಟುಕೊಂಡರು. ರೈತರು ತಮ್ಮಿಡೀ ಬೆಳೆಯನ್ನು ಬಡ್ಡಿವ್ಯಾಪಾರಿಗಳ ಬಳಿ ಒತ್ತೆ ಇಡಬೇಕಾಗಿತ್ತು. ಬೆಳೆ ವೈಫಲ್ಯ ಸಾಮಾನ್ಯವಾಗಿತ್ತು ಮತ್ತು ಬೆಳೆ ಉತ್ತಮವಾಗಿ ಬಂದಾಗ ಬೆಲೆ ಕುಸಿದುಬಿಡುತ್ತಿತ್ತು. ಇಪ್ಪತ್ತು ವರುಷಗಳ ಕಾಲ ಈ ರೀತಿಯ ಹೆಚ್ಚಿನ ಕಂದಾಯದ ಕಾರಣದಿಂದ ಇಡೀ ಡೆಕ್ಕನ್ ಕಷ್ಟವನ್ನನುಭವಿಸಿತು ಎಂದು ಅಧಿಕೃತವಾಗಿಯೇ ಒಪ್ಪಿಕೊಳ್ಳಲಾಗಿತ್ತು, ಜನರು ಬಡತನದಿಂದ ನರಳಿದರು, ಹಳ್ಳಿಗಳು ನಾಶವಾಗಿದ್ದವು ಮತ್ತು ಭೂಮಿಯಲ್ಲಿ ಕೃಷಿ ಚಟುವಟಿಕೆಗಳೇ ನಿಂತುಹೋಗಿತ್ತು. ತೆರಿಗೆ ಮನ್ನಾ ಮಾಡುವುದವಶ್ಯಕವಾಗಿತ್ತು, ಆದರೆ ಈ ಮನ್ನಾ ನಿಜವಾಗಿಯೂ ರೈತರಿಗೆ ತಲುಪುವುದರ ಬಗ್ಗೆ ಯಾವ ಖಾತರಿಯೂ ಇರಲಿಲ್ಲ. ಹತ್ತಿ ಬೆಳೆಗೆ ಸೂಕ್ತವಾಗಿದ್ದ, ಕೃಷಿ ಮತ್ತಷ್ಟು ವಿಸ್ತರಿಸುವುದು ಸಾಧ್ಯವಿದ್ದ ಧಾರವಾಡದ ಪರಿಸ್ಥಿತಿಯಿದು. ಕರಾಬು ಭೂಮಿಯಲ್ಲಿ ಕೃಷಿ ಮಾಡಲೊರಡುವ ರೈತರಿಗೆ ಕೆಲವು ವರುಷಗಳ ಕಾಲ ಕಡಿಮೆ ಕಂದಾಯವನ್ನು ವಿಧಿಸುತ್ತಿದ್ದರಾದರೂ ನೆರೆಹೊರೆಯ ರಾಜರಾಳ್ವಿಕೆಯ ರಾಜ್ಯಗಳಲ್ಲಿ ಈ ಭೂ ಕಂದಾಯ ಮತ್ತಷ್ಟು ಕಡಿಮೆಯಿರುತ್ತಿತ್ತು. ಆದ್ದರಿಂದ ಈ ಹೊಸ ನೀತಿಗಳು ಕೃಷಿಯನ್ನೆಚ್ಚಿಸಲು ಹೆಚ್ಚಿನ ಸಹಾಯವನ್ನು ಮಾಡಲಿಲ್ಲ. ಹತ್ತೊಂಬತ್ತನೇ ಶತಮಾನದ ಮಧ್ಯಭಾಗದವರೆಗೂ ಧಾರವಾಡದ ಮೂರನೇ ಒಂದರಷ್ಟು ಸರಕಾರೀ ಭೂಮಿ ಕರಾಬಾಗಿ ಉಳಿದಿತ್ತು, ಜನಸಂಖೈಯಲ್ಲಿ ಅಪಾರ ಹೆಚ್ಚಳವಾಗಿದ್ದರೂ ಕೂಡ”. (228) 

ಧರ್ಮ ಕುಮಾರ್ ನಮಗೆ ಆ ಪ್ರದೇಶದ ರೈತರ ವಸ್ತುಸ್ಥಿತಿಯನ್ನು ಕುರಿತು ತಿಳಿಸುತ್ತಾರೆ: “ಭೂಕಂದಾಯ ಪ್ರಮಾಣ ಜಿಲ್ಲೆಯಿಂದ ಜಿಲ್ಲೆಗೆ ಬಹಳವೇ ವ್ಯತ್ಯಾಸವಾಗುತ್ತಿತ್ತು, ಮತ್ತು ಹಳ್ಳಿಯಿಂದ ಹಳ್ಳಿಗೂ ವ್ಯತ್ಯಾಸವಿರುತ್ತಿತ್ತು. ಯಾಕೆಂದರೆ ಕಂದಾಯ ಇಲಾಖೆ ಇನ್ನೂ ಅವ್ಯವಸ್ಥಿತವಾಗಿತ್ತು ಮತ್ತು ನಿರಂಕುಶವಾಗಿತ್ತು. ಭೂಕಂದಾಯ ಮತ್ತು ಸಮುದಾಯದ ಉಪಯೋಗಕ್ಕೆ ಹಾಗೂ ಹಳ್ಳಿಯ ಅಧಿಕಾರಿಗಳಿಗೆ ಅಧಿಕೃತವಾಗಿ ನಿಗದಿಮಾಡಿದ್ದ ಹಣವನ್ನೊರತುಪಡಿಸಿ ಕಂದಾಯ ಇಲಾಖೆಗಳು ಮಾಡುತ್ತಿದ್ದ ಸುಲಿಗೆ ಕೂಡ ಇತ್ತು. ಹೀಗಾಗಿ ಕೃಷಿಕನಿಗೆ ಕೊನೆಯಲ್ಲಿ ಉಳಿಯುತ್ತಿದ್ದುದು ಅತ್ಯಲ್ಪವಷ್ಟೇ; ಕಂದಾಯ ಮಂಡಳಿಯೇ 1818ರಲ್ಲಿ ಒಪ್ಪಿಕೊಂಡಂತೆ ಕೃಷಿಕನಿಗೆ ದಕ್ಕುತ್ತಿದ್ದುದು ಬೆಳೆಯ ಐದನೇ ಒಂದಂಶದಷ್ಟು ಅಥವಾ ಅದಕ್ಕಿಂತಲೂ ಕಡಿಮೆ”. (229) 

ಇದೇ ಪ್ರಶ್ನೆ ಮತ್ತು ಇದೇ ಪ್ರದೇಶದ ಬಗ್ಗೆ ಬರೆಯುತ್ತ, ನೀಲ್ ಚಾರ್ಲ್ಸ್ ವರ್ಥ್ ಹೇಳುತ್ತಾನೆ: “ಪುಣೆಯ ಪೇಶ್ವೆಗಳನ್ನು 1818ರಲ್ಲಿ ಪದಚ್ಯುತಿಗೊಳಿಸಿದ ನಂತರದ ಎರಡು ಮೂರು ದಶಕಗಳಲ್ಲಿ ಕಂಡು ಬಂದ ಪ್ರಮುಖ ಸಂಗತಿಯೆಂದರೆ ಕೃಷಿಯ ವ್ಯಾಪಕ ಕುಸಿತ….

ಮುಂದಿನ ವಾರ
ಕೃಷಿ ಕಂದಾಯ ಮತ್ತದರ ಶೋಷಕ ಶರಾತ್: ಭಾಗ 3

No comments:

Post a Comment