Jun 30, 2016

ಖುಲಾಸೆಗೊಂಡ ‘ಬಾಂಬ್ ಎಸ್.ಐ’ ನೆನಪಿಸಿದ ದಿನಗಳು

ಡಾ. ಅಶೋಕ್. ಕೆ. ಆರ್.
ಆಗಿನ್ನೂ ಎರಡನೇ ವರುಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿ. ಮಾವೋವಾದದ ಎಬಿಸಿಡಿಯಾಗಲೀ ನಕ್ಸಲ್ ವಾದದ ಅಆಇಈಯಾಗಲೀ ಸರಿಯಾಗಿ ಗೊತ್ತಿರಲಿಲ್ಲವಾದರೂ ನಿಧಾನಕ್ಕೆ ಮನಸ್ಸು ಅವೆರಡೂ ವಾದಗಳೆಡೆಗೆ ಆಕರ್ಷಿತವಾಗುತ್ತಿದ್ದ ದಿನಗಳವು. ಚುನಾವಣೆ ಪ್ರಕ್ರಿಯೆಗಳಿಂದಾಗಲೀ, ಮತದಾನದ ಮೂಲಕವಾಗಲೀ ಯಾವುದೇ ಬದಲಾವಣೆ ಸಾಧ್ಯವೇ ಇಲ್ಲ ಎಂದು ಧೃಡವಾಗಿ ನಂಬಿದ್ದ ದಿನಗಳವು. ಕ್ರಾಂತಿಯೆಂಬುದು ಬಂದೂಕಿನ ನಳಿಕೆಯ ಮೂಲಕವೇ ಆಗುವಂತದ್ದು ಎಂಬ ನಂಬಿಕೆ ಕಚ್ಚಿಕೊಂಡಿತ್ತು. ಸಿದ್ಧಾಂತಗಳ ಗಾಢ ಪ್ರಭಾವಗಳೇನು ಇರದಿದ್ದ ಹೊತ್ತಿನಲ್ಲಿ ಬಂದೂಕಿನ ಮೂಲಕ ಕ್ರಾಂತಿಯೆಂಬುದು ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಗುಂಡಿಟ್ಟು ಕೊಂದುಬಿಟ್ಟರೆ ಸಾಕು, ಕ್ರಾಂತಿ ಸಫಲವಾಗಿ ದೇಶ ಫಳ ಫಳ ಹೊಳೆಯುತ್ತ ನಳನಳಿಸುತ್ತದೆ ಎಂಬುದಷ್ಟೇ ಯೋಚನೆ. ಬಂದೂಕೆಲ್ಲಿ ಹೊಂದಿಸೋದು, ಯಾವ ರಾಜಕಾರಣಿಯನ್ನು – ಅಧಿಕಾರಿಯನ್ನು ಮೊದಲು ಮುಗಿಸೋದು ಎನ್ನುವ ಕನಸುಗಳಲ್ಲಿ ತೇಲುತ್ತಿದ್ದಾಗಲೇ ರೋಮಾಂಚನಗೊಳಿಸುವಂತ ಸುದ್ದಿ ಬೆಂಗಳೂರಿನಿಂದ ಬಂತಲ್ಲ: “ಶಾಸಕರ ಭವನದಲ್ಲಿ ಬಾಂಬ್ ಪತ್ತೆ!”. ಆ ಸುದ್ದಿ ಓದಿದ ನಂತರ ಮೂಡಿದ ಒಂದೇ ಬೇಸರವೆಂದರೆ ಆ ಬಾಂಬ್ ಸ್ಪೋಟಗೊಳ್ಳುವ ಮೊದಲೇ ಪತ್ತೆಯಾಗಿಬಿಟ್ಟಿದ್ದು. ಎರಡೋ ಮೂರೋ ದಿನದ ನಂತರ ಬಾಂಬ್ ಇಟ್ಟವನ ಪತ್ತೆಯೂ ಆಯಿತು, ಪೋಲೀಸ್ ಇಲಾಖೆಯಲ್ಲೇ ಇದ್ದ ಎಸ್.ಐ ಆಗಿ ಕಾರ್ಯವನಿರ್ವಹಿಸುತ್ತಿದ್ದ ಗಿರೀಶ್ ಮಟ್ಟೆಣ್ಣನವರ್ ಬಾಂಬ್ ಇಟ್ಟಿದ್ದು.

ಆಗಿನ್ನೂ ಕೈಯಲ್ಲಿ ಮೊಬೈಲಿರಲಿಲ್ಲ. ಸ್ಮಾರ್ಟ್ ಫೋನುಗಳ ಭರಾಟೆಯೂ ಇರಲಿಲ್ಲ. ಗೂಗಲಿಸಿ ಗಿರೀಶ್ ಮಟ್ಟೆಣ್ಣನವರ್ ಬಗ್ಗೆ ತಿಳಿದುಕೊಳ್ಳಲು ಇಂಟರ್ನೆಟ್ ಸೆಂಟರ್ರಿಗೆ ಹೋಗಬೇಕಿತ್ತು. ಘಂಟೆಗೆ ಇಪ್ಪತ್ತು ರುಪಾಯಿ ತೆತ್ತು ಇಂಟರ್ನೆಟ್ಟಿನಲ್ಲಿ ಹುಡುಕುವುದಕ್ಕಿಂತ ಮಾರನೇ ದಿನದ ಎಲ್ಲಾ ಪತ್ರಿಕೆಗಳನ್ನು ತೆಗೆದುಕೊಂಡರೆ ಹೆಚ್ಚಿನ ವಿಷಯಗಳು ತಿಳಿಯುತ್ತವೆ ಎಂಬುದರ ಅರಿವಿತ್ತು. ಒಂದು ದಿನ ತಡೆದು ಕನ್ನಡದ ಅಷ್ಟೂ ದಿನಪತ್ರಿಕೆಗಳನ್ನು ಗುಡ್ಡೆ ಹಾಕಿಕೊಂಡು ಕುಳಿತೆ. ಪ್ರಾಮಾಣಿಕ ಅಧಿಕಾರಿ, ವ್ಯವಸ್ಥೆಯಿಂದ ಬೇಸತ್ತು ಇಂತಹ ಕೆಲಸ ಮಾಡಿದ್ದಾನೆ ಎಂಬ ವರದಿ ಎಲ್ಲಾ ಪತ್ರಿಕೆಗಳಲ್ಲೂ ಇತ್ತು. ಗಿರೀಶ್ ಮಟ್ಟೆಣ್ಣನವರ್ ಬಗ್ಗೆ ಒಂದಷ್ಟು ಅನುಕಂಪದಿಂದಲೇ ಬರೆದಿದ್ದರು. ವರದಿಯ ಕೊನೆಗೆ ಆದರೂ ಬಾಂಬಿಡುವುದು ಪ್ರಜಾಪ್ರಭುತ್ವದಲ್ಲಿ ಸರಿಯಾದ ಕೆಲಸವಲ್ಲ, ಹೋರಾಡಲು ಪ್ರಜಾಪ್ರಭುತ್ವದಲ್ಲಿ ಅನೇಕಾನೇಕ ದಾರಿಗಳಿವೆ ಎಂಬರ್ಥದ ಸಾಲುಗಳಿರುತ್ತಿದ್ದವು. ಥೂತ್ತೇರಿಕೆ ಇಂತಹ ಪತ್ರಿಕೆಗಳಿರೋವರ್ಗೂ ಕ್ರಾಂತಿಯಾಗಲ್ಲ ಅಂತ ಬಯ್ಕೊಂಡು ಇನ್ನೊಂದು ಸುತ್ತು ಗಿರೀಶ್ ಮಟ್ಟೆಣ್ಣನವರ್ ಬಗ್ಗೆ ಓದಿಕೊಂಡಿದ್ದಾಯಿತು. ಗಿರೀಶ್ ಮಟ್ಟೆಣ್ಣನವರ್ ಬಗ್ಗೆ ಅಭಿಮಾನ ಮೂಡಿತು.

ಕೆಲವು ದಿನಗಳಲ್ಲಿ ಗಿರೀಶ್ ಮಟ್ಟೆಣ್ಣನವರ್ ಜಾಮೀನಿನ ಮೇಲೆ ಬಿಡುಗಡೆಗೊಂಡರು. ವಾರಕ್ಕೊಮ್ಮೆ ಹಾಯ್ ಬೆಂಗಳೂರ್, ಲಂಕೇಶ್ ಪತ್ರಿಕೆ ಓದುವ ಹವ್ಯಾಸವಿತ್ತಲ್ಲ. ಹಾಯ್ ಬೆಂಗಳೂರಿನ ಸಂಪಾದಕೀಯ ‘ಹಲೋ’ದಲ್ಲಿ ಗಿರೀಶ್ ಮಟ್ಟೆಣ್ಣನವರ್ ಎಂಬ ಪ್ರಾಮಾಣಿಕನ ಪ್ರಾಮಾಣಿಕತೆ ಹೀಗೆ ಬಾಂಬು ಇಡುವಂತಹ ದುಸ್ಸಾಹಸದಲ್ಲಿ ಕಳೆದುಹೋಗಬಾರದು, ಜನರ ದನಿಯಾಗುವಂತಹ ವ್ಯಕ್ತಿಯಾಗಿ ಆತ ಬೆಳೆಯಬೇಕು ಎಂದು ತುಂಬಾ ಕಕ್ಕುಲಾತಿಯಿಂದ ರವಿ ಬೆಳೆಗೆರೆ ಬರೆದುಕೊಂಡಿದ್ದರು. ಜೊತೆಗೆ ಹಾಯ್ ಬೆಂಗಳೂರ್ ಕಛೇರಿಯಿಂದಲೇ ಗಿರೀಶ್ ಮಟ್ಟೆಣ್ಣನವರ್ ನೇತೃತ್ವದಲ್ಲಿ ‘ನಿಮ್ಮೊಂದಿಗೆ’ ಎಂಬ ಸಂಘಟನೆ ಮಾಡುವ, ನೀವು ಬನ್ನಿ ಕೈ ಜೋಡಿಸಿ, ಭ್ರಷ್ಟಾಚಾರದ ವಿರುದ್ಧ ಹೋರಾಡುವ ಎಂಬ ಕರೆಯೂ ಇತ್ತು. ಒಂದು ಸಂಜೆ ಆರಕ್ಕೆ ಹಾಯ್ ಬೆಂಗಳೂರ್ ಕಛೇರಿಯಲ್ಲಿ ಸಭೆ ಕರೆಯಲಾಗಿತ್ತು. ಕ್ರಾಂತಿ ಆಗೋ ಸಮಯದಲ್ಲಿ ಸುಮ್ನೆ ಕೂರೋಕ್ಕಾಗುತ್ಯೇ? ಕಾಲೇಜಿಗೆ ಬಂಕ್ ಹೊಡೆದು, ಮೈಸೂರು ಬಸ್ ಸ್ಟ್ಯಾಂಡಿಗೆ ಹೋಗಿ ‘ಮೈಸೂರು ಮಲ್ಲಿಗೆ – 180’ ಹತ್ತಿದೆ. ಒಂದರಷ್ಟೊತ್ತಿಗೆ ನಾಯಂಡನಹಳ್ಳಿಯಲ್ಲಿ ಇಳಿದು ಅಲ್ಲೇ ರಸ್ತೆ ಬದಿಯಿದ್ದ ಹೋಟೆಲ್ಲೊಂದರಲ್ಲಿ ಅನ್ನ ಸಾಂಬಾರ್ ತಿಂದು ದೇವೇಗೌಡ ಪೆಟ್ರೋಲ್ ಬಂಕಿನ ಕಡೆಗೋಗುವ ಬಿಎಂಟಿಸಿ ಹತ್ತಿದೆ. ಪೆಟ್ರೋಲ್ ಬಂಕ್ ಸ್ಟಾಪಿನಲ್ಲಿ ಇಳಿದು ಅವರಿವರನ್ನು ಹಾಯ್ ಬೆಂಗಳೂರ್ ಆಫೀಸಿನ ವಿಳಾಸ ಕೇಳಿಕೊಂಡು ಅದರ ಹತ್ತಿರ ಹೋದಾಗ ಎರಡೂವರೆಯಾಗಿತ್ತು. ಸಭೆಗಿನ್ನೂ ಸಾಕಷ್ಟು ಸಮಯವಿತ್ತು. ಅಲ್ಲಿಲ್ಲಿ ಅಡ್ಡಾಡುತ್ತ, ಯಾವುದೋ ಪಾರ್ಕಿನಲ್ಲಿ ಕುಳಿತು ಬ್ಯಾಗಿನಲ್ಲಾಕಿಕೊಂಡು ಬಂದಿದ್ದ ಪುಸ್ತಕವನ್ನೋದುತ್ತಾ ಕಾಲ ಕಳೆದು ಸಭೆಯ ಸಮಯಕ್ಕೆ ಹಾಯ್ ಬೆಂಗಳೂರು ಆಫೀಸಿಗೆ ಬಂದೆ. ಟೆರೇಸಿನಲ್ಲಿ ಸಭೆಯಿತ್ತು. ಇನ್ನೂರು ಮುನ್ನೂರು ಜನ ಸೇರಿದ್ದರು. ದೂರದ ಬೀದರ್ರಿನಿಂದಲೂ ಜನರು ಬಂದಿದ್ದರು; ಬಳ್ಳಾರಿ, ಹೊಸಪೇಟೆ, ಗುಲ್ಬರ್ಗ, ಮಂಗಳೂರು ಹೀಗೆ ಹತ್ತಲವು ಜಿಲ್ಲೆಗಳಿಂದ ಜನರು ಬಂದಿದ್ದರು. ಯುವಕರೇ ಹೆಚ್ಚಿದ್ದದ್ದು, ನಿವೃತ್ತರಾಗಿದ್ದ ಆಯುರ್ವೇದಿಕ್ ವೈದ್ಯರೊಬ್ಬರೂ ಬಂದಿದ್ದರು. ಒಂದಷ್ಟೊತ್ತು ರವಿ ಬೆಳಗೆರೆ ಮಾತನಾಡಿದರು. ನಂತರ ಗಿರೀಶ್ ಮಟ್ಟೆಣ್ಣನವರ್ ಮಾತನಾಡಿದರು. ಸಂಘಟನೆ ಯಾವ ರೀತಿ ಇರಬೇಕು, ಯಾವ ರೀತಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು. ಮೊದಲಿಗೆ ಪ್ರತಿ ಜಿಲ್ಲೆಯಲ್ಲಿ, ನಂತರ ಪ್ರತಿ ತಾಲ್ಲೂಕಿನಲ್ಲಿ ಐದಾರು ಜನರ ಪುಟ್ಟ ಪುಟ್ಟ ತಂಡಗಳನ್ನು ಮಾಡಿಕೊಂಡು ಹೋರಾಡಬೇಕಾದ ರೀತಿಯ ಬಗ್ಗೆ ಮಾತನಾಡಿದರು. ಒಂದು ಒಂದೂವರೆ ಘಂಟೆಯ ನಂತರ ಕಾರ್ಯಕ್ರಮ ಮುಗಿಯಿತು. ಬಂದೂಕಿನ ನಳಿಕೆಯ ಮೂಲಕ ಬರುವ ಕ್ರಾಂತಿಯಷ್ಟು ಪ್ರಖರವಾಗಿರುವುದಿಲ್ಲ, ಆದರೂ ಇದ್ದುದರಲ್ಲೇ ವಾಸಿ ಎಂದುಕೊಳ್ಳುತ್ತ ಜೇಬಿನಲ್ಲಿದ್ದ ಚಿಕ್ಕ ಪುಸ್ತಕಕ್ಕೆ ಗಿರೀಶ್ ಮಟ್ಟೆಣ್ಣನವರ ಆಟೋಗ್ರಾಫ್ ಪಡೆದುಕೊಂಡೆ. ನಾನು ಪಡೆದುಕೊಂಡ ಮೊಟ್ಟಮೊದಲ ಹಾಗೂ ಕಟ್ಟಕಡೆಯ ಆಟೋಗ್ರಾಫದು! ಆ ಪುಸ್ತಕ ಎಲ್ಲಿದೆಯೋ ಈಗ ಮರೆತುಹೋಗಿದೆ. ಮತ್ತೆ ನಾಯಂಡನಹಳ್ಳಿಗೆ ಬಂದು ಮೈಸೂರಿನ ಬಸ್ ಹತ್ತಿ ರೂಮು ಸೇರಿದಾಗ ಮಧ್ಯರಾತ್ರಿಯಾಗಿತ್ತು. ಇನ್ನೇನು ನಾಳೆಯಿಂದ ಕ್ರಾಂತಿ ಶುರುವಾಯ್ತಲ್ಲ ಎಂದುಕೊಂಡು ಮಲಗಿದೆ.

ನಿಮ್ಮೊಂದಿಗೆ ಸಂಘಟನೆಯ ಹೋರಾಟ ಯಾವ ರೀತಿ ಇರುತ್ತದೆ, ಯಾವ ರೀತಿ ಇರಬೇಕು ಎಂದು ಹಗಲುಗನಸು ಕಾಣುವುದೂ ಸರಿಯಾಗಿ ಪ್ರಾರಂಭವಾಗಿರಲಿಲ್ಲ, ಗಿರೀಶ್ ಮಟ್ಟೆಣ್ಣನವರ್ ‘ನಿಮ್ಮೊಂದಿಗೆ’ ಇರುವುದಿಲ್ಲ ಎಂದು ನಿರ್ಧರಿಸಿ ಬಿಜೆಪಿ ಪಕ್ಷಕ್ಕೆ ಹಾರಿಬಿಟ್ಟರು! ಅಲ್ಲಿಗೆ ಶಾಸಕರ ಭವನಕ್ಕೆ ಬಾಂಬಿಟ್ಟಿದ್ದು ಪ್ರಚಾರಕ್ಕೇ ಹೊರತು ಬೇರೆ ಕಾರಣಕ್ಕಲ್ಲ ಎಂದರಿವಾಗಿ ಪಿಗ್ಗಿ ಬಿದ್ದಿದ್ದಕ್ಕೆ ಬಯ್ದುಕೊಂಡು ಸುಮ್ಮನಾದೆ. ಮುಂದೆ ಬರೆದ ‘ಆದರ್ಶವೇ ಬೆನ್ನು ಹತ್ತಿ’ ಕಾದಂಬರಿಯಲ್ಲಿ ಒಂದು ಪಾತ್ರಕ್ಕೆ ಪ್ರೇರಣೆಯಾದರು ಗಿರೀಶ್ ಮಟ್ಟೆಣ್ಣನವರ್. ಇಷ್ಟೆಲ್ಲ ನೆನಪಾಗಿದ್ದು ಮೊನ್ನೆ ನ್ಯಾಯಾಲಯ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಗಿರೀಶ್ ಮಟ್ಟೆಣ್ಣನವರನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದಾಗ.

1 comment:

  1. ಗಿರೀಶ್ ಮಟ್ಟೆಣ್ಣವರ್ ಬಿಜೆಪಿಯಂಥ ಪ್ರತಿಗಾಮಿ ಮನೋಭಾವದ ಪಕ್ಷವನ್ನು ಸೇರಿ ಕಳೆದು ಹೋದದ್ದು ವಿಷಾದನೀಯ. ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಸಕಾರಾತ್ಮಕ ಬದಲಾವಣೆ ತರಬೇಕಾದರೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಹಾಗೂ ಪ್ರತಿ ಲೋಕಸಭಾ ಕ್ಷೇತ್ರದಲ್ಲಿಯೂ ಜನಪರ ಕಾನೂನುಗಳನ್ನು ರೂಪಿಸುವ, ಜನವಿರೋಧಿ ಬ್ರಿಟಿಷರ ಕಾಲದ ಅಥವಾ ಅಧಿಕಾರಶಾಹಿ ಮನೋಭಾವದ ಶೋಷಕ ಕಾನೂನುಗಳನ್ನು ರದ್ದುಪಡಿಸಿ ಜನರಿಗೆ ಶೀಘ್ರವಾಗಿ ಸರ್ಕಾರಿ ಕಛೇರಿ ಸಂಬಂಧಿತ ಕೆಲಸಗಳನ್ನು ಮಾಡಿಕೊಡುವಂಥ ವ್ಯವಸ್ಥೆಯ ಬಗ್ಗೆ ಒತ್ತಡ ಹೇರುವ ರಾಜಕೀಯ ರಹಿತ ಸಂಘಟನೆಗಳ ಅಗತ್ಯ ಇದೆ. ಆಯಾ ವಿಧಾನಸಭಾ ಕ್ಷೇತ್ರ ಹಾಗೂ ಲೋಕಸಭಾ ಕ್ಷೇತ್ರಗಳಲ್ಲಿ ಜನರಿಗೆ ಯಾವ ರೀತಿಯ ರೀತಿಯ ಕಾನೂನುಗಳು ಅಗತ್ಯವೋ ಅಂಥ ಕಾನೂನು ರೂಪಿಸಲು ವಿಧಾನಸಭೆ ಹಾಗೂ ಲೋಕಸಭಾ ಸದಸ್ಯರಿಗೆ ನಿರಂತರ ಒತ್ತಡ ಹೇರುವ ಗುಂಪುಗಳ (ಪ್ರೆಶರ್ ಗ್ರೂಪ್) ಅಗತ್ಯ ಇಂದು ಇದೆ. ಆಯಾ ವಿಧಾನಸಭಾ ಹಾಗೂ ಲೋಕಸಭಾ ಕ್ಷೇತ್ರದ ಸಮಾಜದ ಗಣ್ಯ ವ್ಯಕ್ತಿಗಳು (ಉದಾಹರಣೆಗೆ ವೈದ್ಯರು, ವಕೀಲರು, ಇಂಜಿನಿಯರುಗಳು, ಉದ್ಯಮಿಗಳು, ಪತ್ರಕರ್ತರು, ಉಪನ್ಯಾಸಕರು, ಪ್ರೊಫೆಸರುಗಳು, ಶ್ರೀಮಂತ ಕೃಷಿಕರು ಇತ್ಯಾದಿ) ಒಗ್ಗೂಡಿ ರಾಜಕೀಯ ರಹಿತ ಪ್ರೆಶರ್ ಗ್ರೂಪುಗಳನ್ನು ರಚಿಸಿಕೊಂಡು ನಮಗೆ ದೇಶಕ್ಕೆ ಹಾಗೂ ರಾಜ್ಯದ ಸುಧಾರಣೆಗೆ ಎಂಥ ಕಾನೂನುಗಳು ಬೇಕು ಅವುಗಳನ್ನು ರೂಪಿಸುವಂತೆ ಒತ್ತಡ ಹೇರುತ್ತಾ ಇದ್ದರೆ ಶಾಸಕರಿಗೆ ಹಾಗೂ ಲೋಕಸಭಾ ಸದಸ್ಯರಿಗೆ ಅವುಗಳನ್ನು ರೂಪಿಸದೆ ಇರಲು ಅಸಾಧ್ಯವಾಗುವ ಸನ್ನಿವೇಶ ನಿರ್ಮಾಣವಾಗಬಹುದು. ಈಗಿನ ನಮ್ಮ ದೇಶದ ಪರಿಸ್ಥಿತಿಯಲ್ಲಿ ನಮಗೆ ಇಂಥ ಕಾನೂನುಗಳು ಅಗತ್ಯ, ಅವುಗಳನ್ನು ರೂಪಿಸಿ; ಕೆಲವು ಓಬೀರಾಯನ ಕಾಲದ ಅನವಶ್ಯಕ ಹಾಗೂ ಜನರಿಗೆ ಪೀಡೆಕಾರಕವಾದ ಕಾನೂನುಗಳು ಬೇಡ ಇವುಗಳನ್ನು ರದ್ದುಪಡಿಸಿ ಎಂದು ಶಾಸಕರ ಹಾಗೂ ಸಂಸದರ ಮೇಲೆ ಒತ್ತಡ ಹೇರುವ ಸಾಂಘಿಕ ವ್ಯವಸ್ಥೆ ಇಲ್ಲ. ಜನ ಒಬ್ಬೊಬ್ಬನಾಗಿ ಹೋಗಿ ಹೇಳಿದರೆ ಶಾಸಕರು ಹಾಗೂ ಸಂಸದರು ಕ್ಯಾರೇ ಮಾಡುವುದಿಲ್ಲ.

    ಇಂದು ಎಲ್ಲರೂ ಹಣ ಮಾಡುವುದು, ಶ್ರೀಮಂತಿಕೆ ಗಳಿಸುವುದು, ವೈಭವದ ಹಾಗೂ ಆಡಂಬರದ ಜೀವನ ನಡೆಸುವುದು ಇವುಗಳಲ್ಲಿ ಮುಳುಗಿ ಕಳೆದುಹೋಗಿದ್ದಾರೆ. ಅತ್ಯಂತ ಪ್ರತಿಭಾವಂತ ಎಂದು ವಿದ್ಯಾಭ್ಯಾಸದ ಹಂತದಲ್ಲಿ ಕಂಡುಬರುವ ನಮ್ಮ ಇಂದಿನ ಪೀಳಿಗೆ ಸಾಮಾಜಿಕ ಕಾಳಜಿಯನ್ನು ಬೆಳೆಸಿಕೊಂಡೇ ಇಲ್ಲ. ಇಂದಿನ ನಮ್ಮ ವಿದ್ಯಾಭ್ಯಾಸ ಪದ್ಧತಿ ಎಂಬುದು ಸಾಮಾಜಿಕ ಕಾಳಜಿಯನ್ನು ವ್ಯಕ್ತಿಯಲ್ಲಿ ಬೆಳೆಸುವಲ್ಲಿ ಸಂಪೂರ್ಣ ವಿಫಲವಾಗಿದೆ.

    ReplyDelete