May 27, 2016

ಮತದಾರರಿಗೂ ಒಂದು ಬಾಂಡ್ ಪೇಪರ್ ಬರೆದು ಕೊಡಿ!

bond paper congress
ಡಾ. ಅಶೋಕ್. ಕೆ. ಆರ್
27/05/2016
ಪಶ್ಚಿಮ ಬಂಗಾಳದಲ್ಲೊಂದು ಅಭೂತಪೂರ್ವ ಘಟನೆ ಸಂಭವಿಸಿದೆ. ನೆಹರೂ ಕುಟುಂಬದ ಮುಂದೆ ದೇಹಬಾಗಿಸಿ ಜೀ ಹುಜೂರ್ ಎಂಬ ಸಂಸ್ಕೃತಿಯನ್ನು ಹಾಸಿ ಹೊದ್ದಿಕೊಂಡಿರುವ ಕಾಂಗ್ರೆಸ್ಸಿನಲ್ಲಿ ಈ ಘಟನೆ ಸಂಭವಿಸುವುದರಿಂದ ಇದೇನು ತುಂಬಾ ಅಚ್ಚರಿಯ ಘಟನೆಯಲ್ಲ, ಗಾಬರಿಗೆ ಎದೆ ಹಿಡಿದುಕೊಂಡುಬಿಡುವಂತಹ ಆಘಾತದ ಘಟನೆಯೂ ಅಲ್ಲ! ಸೋನಿಯಾ ಗಾಂಧೀ ‘ಜೀ’ಗೆ, ರಾಹುಲ್ ಗಾಂಧೀ ‘ಜೀ’ಗೆ ಕೈಮುಗೀರಿ ಅಂದ್ರೆ ಕಾಲಿಗೆ ಬೀಳೋ ಜನರೇ ಹೆಚ್ಚಿರುವ ಕಾಂಗ್ರೆಸ್ಸಿನಲ್ಲಿ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ‘ಬಾಂಡ್ ಪೇಪರ್’ ರಾಜಕಾರಣ ಶುರುವಾಗಿದೆ! 

ಇತ್ತೀಚೆಗಷ್ಟೇ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಉಸಿರೇ ನಿಂತು ಹೋಗಿದ್ದ ಕಾಂಗ್ರೆಸ್ಸಿಗೆ ಒಂದಷ್ಟು ಗಾಳಿ ಪಶ್ಚಿಮ ಬಂಗಾಳದಲ್ಲೂ ದಕ್ಕಿದೆ. ತೃಣಮೂಲ ಕಾಂಗ್ರೆಸ್ಸಿನ ಅಬ್ಬರದ ನಡುವೆಯೂ ನಲವತ್ತನಾಲ್ಕು ಸ್ಥಾನಗಳನ್ನು ಗಳಿಸಿಕೊಂಡು ಎಡಪಕ್ಷಗಳನ್ನು ಮೂರನೇ ಸ್ಥಾನಕ್ಕೆ ತಳ್ಳಿ ಅಧಿಕೃತ ವಿರೋಧ ಪಕ್ಷವಾಗಿದೆ. ಬಹುಶಃ ಈ ಸಾಧನೆ ಕಾಂಗ್ರೆಸ್ಸಿಗೇ ಆಶ್ಚರ್ಯ ಮೂಡಿಸಿರಬೇಕು. 2011ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಗೆದ್ದ ಶಾಸಕರು ಚುನಾವಣೆ ಮುಗಿಯುತ್ತಿದ್ದಂತೆಯೇ ಗಂಟು ಮೂಟೆ ಕಟ್ಟಿಕೊಂಡು ತೃಣಮೂಲ ಕಾಂಗ್ರೆಸ್ಸಿನ ತೆಕ್ಕೆಗೆ ಬಿದ್ದುಬಿಟ್ಟಿದ್ದರು. ಈ ಸಲವೂ ಅಂತಹುದೇನಾದರೂ ನಡೆದು ಬಿಟ್ಟೀತೆಂದು ಹೆದರಿ ಬಂಗಾಳದ ಕಾಂಗ್ರೆಸ್ ಘಟಕ ಬಾಂಡ್ ಪೇಪರ್ ರಾಜಕಾರಣವನ್ನು ಪರಿಚಯಿಸಿದ್ದಾರೆ. ಬಾಂಡ್ ಪೇಪರ್ ಕಾಂಗ್ರೆಸ್ಸಿನ ಅಧ್ಯಕ್ಷೆ ಸೋನಿಯಾ ಗಾಂಧೀ ‘ಜೀ’ಯವರಿಗೆ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧೀ ‘ಜೀ’ಯವರಿಗೆ. ‘ನಾನು ಯಾವುದೇ ಪಕ್ಷವಿರೋಧಿ ಚಟುವಟಿಕೆ ನಡೆಸುವುದಿಲ್ಲ, ಪಕ್ಷದ ರೀತಿ ನೀತಿಗಳು, ಪಕ್ಷದ ನಿರ್ಧಾರಗಳು ನನಗೆ ಒಪ್ಪಿತವಾಗದೇ ಹೋದರೂ ಅವುಗಳ ವಿರುದ್ಧ ನಾನು ಮಾತನಾಡುವುದಿಲ್ಲ. ಒಂದು ವೇಳೆ ಅಂತದ್ದೇನನ್ನಾದರೂ ಮಾಡಬೇಕೆಂದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನ ಸಂಪೂರ್ಣ ನಿಷ್ಠೆ ಅಧ್ಯಕ್ಷೆ ಸೋನಿಯಾ ಗಾಂಧೀ ‘ಜೀ’ಯವರಿಗೆ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧೀ ‘ಜೀ’ಯವರಿಗೆ’ ಎಂಬ ಗುಲಾಮತ್ವದ ಸಾಲುಗಳು ಎರಡು ಪುಟದ ಬಾಂಡು ಪೇಪರಿನುದ್ದಕ್ಕೂ ತುಂಬಿದೆ. ಕಾಂಗ್ರೆಸ್ಸಿನೊಳಗಿನ ಗುಲಾಮತ್ವ ಮನಸ್ಥಿತಿ ಮತ್ತೊಂದು ಮಜಲನ್ನೇ ತಲುಪಿದೆ ಎಂದು ಹೇಳಬಹುದು.

ಪಕ್ಷದಲ್ಲಿ ಸ್ಥಾನ ಕೊಟ್ಟಿದ್ದಕ್ಕೆ, ಚುನಾವಣೆಗೆ ನಿಲ್ಲಲು ಟಿಕೇಟು ಕೊಟ್ಟಿದ್ದಕ್ಕೆ, ಮತ್ತು ಅಲ್ಲಿ ಇಲ್ಲಿ ಪಕ್ಷದ ಹೆಸರಿನಿಂದಲೇ ಗೆದ್ದಿದ್ದಕ್ಕೆ ಶಾಸಕರು ತಮ್ಮ ಪಕ್ಷದ ಮುಖಂಡರ ಅಣತಿಯಂತೆ ಇಂತಹುದೊಂದು ಬಾಂಡ್ ಪೇಪರ್ರಿಗೆ ಸಹಿ ಹಾಕುತ್ತಾರೆಂದ ಮೇಲೆ ಅವರಿಗೆ ಮತ ಹಾಕಿ ಗೆಲ್ಲಿಸಿದ ಮತದಾರರಿಗೂ ಒಂದು ಬಾಂಡ್ ಪೇಪರ್ ಬರೆದುಕೊಡುವುದು ನ್ಯಾಯಯುತವಾದುದಲ್ಲವೇ? ‘ನನಗೆ ನೀವೆಲ್ಲರೂ ಮತ ಹಾಕಿದ್ದಕ್ಕೆ ಧನ್ಯವಾದ. ನಾನು ಯಾವುದೇ ಜನವಿರೋಧಿ ಚಟುವಟಿಕೆ ನಡೆಸುವುದಿಲ್ಲ, ಭ್ರಷ್ಟನಾಗುವುದಿಲ್ಲ, ನಿಮ್ಮ ಜನಪರ ಸಲಹೆಗಳು ನನಗೆ ಒಪ್ಪಿತವಾಗದೇ ಹೋದರೂ ಅವುಗಳ ವಿರುದ್ಧ ನಾನು ಮಾತನಾಡುವುದಿಲ್ಲ. ಒಂದು ವೇಳೆ ಅಂತದ್ದೇನನ್ನಾದರೂ ಮಾಡಬೇಕೆಂದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನ ಸಂಪೂರ್ಣ ನಿಷ್ಠೆ ಮತದಾರರಿಗೆ’ ಎಂಬ ಬಾಂಡು ಪೇಪರನ್ನ್ಯಾಕೆ ಶಾಸಕ – ಸಂಸದರು ಆಯ್ಕೆಯಾದ ತಕ್ಷಣ ಕೊಡುವಂತಾಗಬಾರದು?

No comments:

Post a Comment