Jan 14, 2016

ಚಿತ್ರ ವಿಮರ್ಶೆ: The Day i became a woman

Dr Ashok K R
ಮಾರ್ಜಿಯೆ ಮೆಶ್ಕಿನ್ ನಿರ್ದೇಶನದ ಪರ್ಷಿಯನ್ ಭಾಷೆಯ ಚಿತ್ರ ‘ದಿ ಡೇ ಐ ಬಿಕೇಮ್ ಎ ವಿಮೆನ್’ (The day I became a woman). ಇರಾನ್ ದೇಶದ ಈ ಚಿತ್ರ ಹೆಣ್ಣಿನ ಸ್ವಂತಿಕೆಯನ್ನು ಕಿತ್ತುಕೊಳ್ಳಬಯಸುವ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಜೀವಂತಿಕೆ ಮೆರೆಯುವ ಮೂರು ನಾಯಕಿಯರ ಕತೆ. ಪುಟ್ಟ ಹುಡುಗಿ ಹವಾ, ಮದುವೆಯಾಗಿರುವ ಯುವತಿ ಆಹೂ ಮತ್ತು ಸಾಯಲು ಸಿದ್ಧವಾಗಿರುವ ವಯಸ್ಸಿನ ಹೂರಾ ಚಿತ್ರದ ನಾಯಕಿಯರು. ಮೂವರಿಗೂ ಚಿತ್ರದಲ್ಲಿ ನೇರಾನೇರ ಸಂಬಂಧವಿಲ್ಲ, ಕನ್ನಡದ ಕಥಾಸಂಗಮದಂತೆ ಮೂರು ಭಿನ್ನ ಕತೆಗಳಿವೆ; ಇಲ್ಲಿ ಮೂರು ಕತೆಗಳ ಆಶಯದಲ್ಲಿ ಸಾಮ್ಯತೆಯಿದೆ, ಚಿತ್ರದ ಕೊನೆಗೆ ಮೂರೂ ಕತೆಗಳು ಒಂದುಗೂಡಲು ಪ್ರಯತ್ನಿಸುತ್ತವೆ.

ಬಾಲಕಿ ಹವಾಗೊಬ್ಬ ಕರಿಯ ಅನಾಥ ಗೆಳೆಯ. ದಿನಾ ಬರುವಂತೆ ಅವತ್ತೂ ಅವನು ಹವಾಳ ಮನೆಯ ಬಳಿಗೆ ಬರುತ್ತಾನೆ. ಅವತ್ತವಳಿಗೆ ಒಂಭತ್ತು ವರ್ಷ ತುಂಬುತ್ತಿರುತ್ತದೆ. ದೊಡ್ಡವಳಾದ (ವಯಸ್ಸಿನಲ್ಲಿ) ಹುಡುಗಿ ಹುಡುಗರೊಟ್ಟಿಗೆ ಆಡುವಂತಿಲ್ಲ. ತಲೆಯ ಮೇಲೊಂದು ಹೊದಿಕೆ ಹಾಕಿಕೊಳ್ಳಬೇಕು. ಹವಾಳ ಅಮ್ಮ ಮತ್ತು ಅಜ್ಜಿ ಹೊಸ ಹೊದಿಕೆಯನ್ನು ತಯಾರು ಮಾಡುವುದರಲ್ಲಿ ನಿರತರು. ಗೆಳೆಯನೊಟ್ಟಿಗೆ ಆಡುವುದರ ಹೊರತಾಗಿ ಮತ್ತೇನೂ ಯೋಚನೆ ಬಾರದ ಹುಡುಗಿ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ಈ ಹೊಸ ರೀತಿ ನೀತಿಗಳೆಲ್ಲ ಹನ್ನೆರಡು ಘಂಟೆಯ ನಂತರ ಎಂದು ತಿಳಿದುಕೊಂಡು ಅಲ್ಲಿಯವರೆಗಾದರೂ ಹೋಗಿ ಆಡಿ ಬರುತ್ತೇನೆ ಕೊನೆಯ ಸಲ ಎಂದು ಬೇಡಿಕೊಂಡು ತಲೆಯ ಮೇಲೊಂದು ಬಟ್ಟೆ ಹಾಕಿಕೊಂಡು ನೆರಳಿನ ಮೂಲಕ ಸಮಯ ತಿಳಿಯಲು ಕಡ್ಡಿಯೊಂದನ್ನು ತೆಗೆದುಕೊಂಡು ಕರಿಯ ಗೆಳೆಯನ ಮನೆಯ ಕಡೆಗೆ ಓಡಿ ಹೋಗುತ್ತಾಳೆ. ಕರಿಯ ಗೆಳೆಯನೀಗ ಬಂಧಿತನಾಗಿದ್ದಾನೆ! ಅವನ ಅಕ್ಕ ಓದಿಕೋ ಎಂದವನನ್ನು ಕೂಡಿ ಹಾಕಿರುತ್ತಾಳೆ. ಕಿಟಕಿಯ ಮೂಲಕ ಇಬ್ಬರ ಸಂಭಾಷಣೆ, ಚಾಕಲೇಟಿನ ವಿನಿಮಯ ನಡೆಯುತ್ತದೆ. ಕಿಟಕಿಯ ಒಂದು ಬದಿಯಲ್ಲಿ ಅವನು, ಮತ್ತೊಂದು ಬದಿಯಲ್ಲಿ ಇವಳು. ಒಂದು ಕಡೆಯಿಂದ ನೋಡಿದರೆ ಹುಡುಗ ಬಂಧಿತನಂತೆ ಕಾಣುತ್ತಾನೆ ಮತ್ತೊಂದು ಕಡೆಯಿಂದ ಹುಡುಗಿ ಬಂಧಿತಳಂತೆ ಕಾಣುತ್ತಾಳೆ. ಪುರುಷ ಪ್ರಧಾನ ವ್ಯವಸ್ಥೆ ಇಬ್ಬರನ್ನೂ ಬಂಧಿಸಿದೆಯಲ್ಲವೇ?

ಮದುವೆಯಾಗಿರುವ ಯುವತಿ ಆಹೂಗೆ ಸೈಕಲ್ ರೇಸಿನಲ್ಲಿ ಭಾಗವಹಿಸಿ ಜಯಗಳಿಸುವ ಆಸೆ. ರೇಸಿನಲ್ಲಿ ಭಾಗವಹಿಸುವುದು ಗಂಡನಿಗೆ ಇಷ್ಟವಿಲ್ಲ. ಕಣ್ತಪ್ಪಿಸಿ ಬಂದು ರೇಸಿನಲ್ಲಿ ಉತ್ಸುಕತೆಯಿಂದ ಸೈಕಲ್ಲು ತುಳಿಯುತ್ತಿರುತ್ತಾಳೆ. ಕುದುರೆಯೇರಿ ಇವಳನ್ನು ಹುಡುಕಿ ಬರುವ ಗಂಡ ರೇಸು ನಿಲ್ಲಿಸಿ ನಡಿ ಮನೆಗೆ ಎಂದು ಬೆದರಿಸುತ್ತಾನೆ. ಆಹೂ ನಿಲ್ಲುವುದಿಲ್ಲ. ವಾಪಸ್ಸು ಹೋದ ಗಂಡ ಹಿರೀಕರನ್ನು ಕರೆತರುತ್ತಾನೆ. ಆಹೂ ನಿಲ್ಲುವುದಿಲ್ಲ. ವಿಚ್ಛೇದನ ಕೊಟ್ಟುಬಿಡ್ತೀನಿ ಎಂಬ ಬೆದರಿಕೆಗೂ ಜಗ್ಗುವುದಿಲ್ಲ. ವಾಪಸ್ಸು ಹೋದ ಗಂಡ ಮೌಲ್ವಿಯನ್ನು ಕರೆತಂದು ವಿಚ್ಛೇದನ ಕೊಟ್ಟುಬಿಡುತ್ತಾನೆ. ಆಹೂಳ ಸೈಕಲ್ಲಿನ ವೇಗ ತಗ್ಗುವುದಿಲ್ಲ. ಆಹೂಳ ತವರು ಮನೆಯವರು ಬಂದು ಹೀಯಾಳಿಸುತ್ತಾರೆ, ರೇಸು ನಿಲ್ಲಿಸಿ ನಡಿ ಮನೆಗೆ ಎನ್ನುತ್ತಾರೆ. ಆಹೂ ನಿಲ್ಲುವುದಿಲ್ಲ. ಕೊನೆಗವಳ ಅಣ್ಣಂದಿರು ಬಂದು ಗೆಲುವಿನ ಹಂತದಲ್ಲಿದ್ದ ಆಹೂಳ ಸೈಕಲ್ ತಡೆದು ಹೊಡೆಯಲಾರಂಭಿಸುತ್ತಾರೆ. ಕ್ಯಾಮೆರಾ ನಿಧಾನಕ್ಕೆ ಹಿಂದಾಗುತ್ತದೆ. ಆಹೂ ಸೈಕಲ್ ರೇಸಿನಿಂದ ಹಿಂದೆ ಸರಿದುಬಿಟ್ಟಳಾ? 

ಹಣ್ಣು ಹಣ್ಣು ಮುದುಕಿ ಹೂರಾಳ ಪ್ರತೀ ಬೆರಳಿನಲ್ಲೂ ಬಣ್ಣ ಬಣ್ಣದ ಬಟ್ಟೆಯ ತುಂಡು. ಪ್ರತೀ ತುಂಡು ಖರೀದಿಸಬೇಕಾದ ಒಂದೊಂದು ವಸ್ತುವಿನ ಸಂಕೇತ. ಯಾವ ತುಂಡು ಯಾವುದಕ್ಕೆ ಎಂದು ಮರೆತುಹೋದರೆ ಎಂಬ ಕಾರಣಕ್ಕೆ ಮತ್ತೊಂದು ಚೀಟಿ! ಯೌವನದಲ್ಲಿ ಆಸೆಪಟ್ಟ, ಖರೀದಿಸಲಾಗದ ವಸ್ತುಗಳನ್ನೆಲ್ಲ ಗುಡ್ಡೆ ಹಾಕಿಕೊಂಡು ಸಾಮಾನು ಸಾಗಿಸುವ ಬಡ ಹುಡುಗರ ನೆರವಿನಿಂದ ಸಮುದ್ರ ತೀರಕ್ಕೆ ಬಂದು ಸಾಮಾನುಗಳನ್ನೆಲ್ಲ ಸ್ವಚ್ಛಂದ ಆಕಾಶದ ಕೆಳಗೆ ಜೋಡಿಸಿ ಸಂತಸಪಡುತ್ತಾಳೆ ಹೂರ. ಕರಿ ಹುಡುಗನೊಬ್ಬನನ್ನು ದತ್ತು ತೆಗೆದಿಕೊಳ್ತೀನಿ ಬರ್ತೀಯಾ ನನ್ನ ಜೊತೆಗೆ ಈ ಸಾಮಾನುಗಳೆಲ್ಲ ನಿನ್ನದೇ ಆಗುತ್ತೆ ಎಂದು ಕೇಳುತ್ತಾಳೆ, ಇಲ್ಲಪ್ಪ ನನಗೆ ಅಮ್ಮ ಇದ್ದಾಳೆ ಎಂದು ನಿರಾಕರಿಸುತ್ತಾನೆ ಹುಡುಗ. ಅಫ್ಘನ್ ಬಾಲಕನೊಬ್ಬನಿಗೆ ಅದೇ ಪ್ರಶ್ನೆ ಕೇಳುತ್ತಾಳೆ, ಅವನೂ ಇಲ್ಲವೆನ್ನುತ್ತಾನೆ. ಆ ಸಾಮಾನುಗಳನ್ನೆಲ್ಲ ಖಾಲಿ ಆಯಿಲ್ ಡ್ರಮ್ಮಿನಿಂದ ಮಾಡಿದ ದಿಡೀರ್ ದೋಣಿಗಳ ಮೇಲೆ ಹುಡುಗರು ಹೇರುತ್ತಿದ್ದಾಗ ಉಳಿದೆರಡು ಕತೆಗಳು ಸಂಧಿಸುತ್ತವೆ. ಮಧ್ಯಾಹ್ನವಾಗಿದ್ದರಿಂದ ‘ದೊಡ್ಡವಳಾಗಿ’ ಬಿಟ್ಟಿರುವ ಹವಾ ತಲೆಹೊದಿಕೆಯೊಂದಿಗೆ ಅಮ್ಮನ ಕೈಹಿಡಿದು ಹೂರಾಳನ್ನು ಆಸೆ ಕಂಗಳಿಂದ ನೋಡುತ್ತಿದ್ದಾಳೆ. ಸೈಕಲ್ ರೇಸಿನಲ್ಲಿ ಭಾಗವಹಿಸಿದ್ದ ಇಬ್ಬರು ಯುವತಿಯರು, ಇಷ್ಟೆಲ್ಲ ಆಸ್ತಿ ನಮ್ಮ ಬಳಿ ಇದ್ದಿದ್ದರೆ ಮದುವೆಯಾಗಿಬಿಡುತ್ತಿತ್ತು ಎಂದು ಹೂರಾಳ ಬಳಿ ನಗುತ್ತಾ ಹೇಳುತ್ತಾರೆ. ಮಾತಿನ ನಡುವೆ ಆಹೂಳ ವಿಷಯ ಪ್ರಸ್ತಾಪವಾಗುತ್ತದೆ. ಒಬ್ಬ ಯುವತಿ ಆಹೂ ರೇಸನ್ನು ಪೂರ್ಣಗೊಳಿಸಿದಳು ಎಂದರೆ ಮತ್ತೊಬ್ಬಳು ಇಲ್ಲ ವಾಪಸ್ಸು ಕರೆದುಕೊಂಡು ಹೋಗಿಬಿಟ್ಟರು ಎಂದಳು. ಆಹೂ ರೇಸನ್ನು ಪೂರೈಸಿದಳಾ? ದಿಡೀರ್ ದೋಣಿಗಳ ಮೇಲೆ ಕುಳಿತ ಹೂರಾ ಸಮುದ್ರದ ಮೇಲೆ ತೇಲುತ್ತಾ ಚೂರು ಚೂರೇ ಮುಂದೆ ಸಾಗುತ್ತಾಳೆ, ಹುಯ್ದಾಡುತ್ತಾಳೆ…..

ಓ! ಮೂರು ಕತೆಗಳಲ್ಲೂ ಪ್ರಮುಖವಾದ ಪಾತ್ರವೊಂದರ ಬಗ್ಗೆ ಹೇಳುವುದನ್ನೇ ಮರೆತಿದ್ದೆ. ಸಮುದ್ರವೇ ಮೂರು ಕತೆಗಳಲ್ಲಿನ ಬಂಧ, ಸಮುದ್ರವೇ ಇಲ್ಲಿ ಪ್ರಮುಖ ಪಾತ್ರ. ಬಾಲಕಿಯ ಕತೆ ನಡೆಯುವಾಗ ಸಮುದ್ರದ ಅಲೆಗಳು ದಡ ತಲುಪಿ ಮತ್ತೆ ವಾಪಸ್ಸಾಗುತ್ತಿರುವ ದೃಶ್ಯಗಳಿವೆ, ರೇಸು ನಡೆಯುವಾಗ ರಸ್ತೆ ಪಕ್ಕದಲ್ಲಿ ಮೈಚಾಚಿ ಮಲಗಿರುವ ಸಮುದ್ರ ಆಹೂಳ ಗಂಡ ವಿಚ್ಛೇದನ ಕೊಟ್ಟಾಗ ಮತ್ತವಳ ಅಣ್ಣಂದಿರು ಸಾಯ ಬಡಿಯುವಾಗ ರೊಚ್ಚಿಗೆದ್ದು ದಡಕ್ಕಪ್ಪಳಿಸುತ್ತದೆ – ದಡ ದಾಟುವುದಿಲ್ಲ ಮತ್ತು ಹೂರಾಳ ಕತೆ ಸಾಗುವಾಗ ಸಮುದ್ರ ಸಂಪೂರ್ಣ ಶಾಂತವಾಗಿದೆ. ಮೂರು ಕತೆಗಳಲ್ಲಿ ಮನಸ್ಸಿನ ಚಲನಶೀಲತೆಗೆ ಸಂಬಂಧಿಸಿದಂತೆ ಮೂರು ವಸ್ತುಗಳನ್ನು ಉಪಯೋಗಿಸಿಕೊಳ್ಳಲಾಗಿದೆ. ಮೊದಲ ಕತೆಯಲ್ಲಿ ಸಮುದ್ರ ತೀರದಲ್ಲಿರುವ ಹುಡುಗರು ಹವಾಳಿಗೊಂದು ಪ್ಲಾಸ್ಟಿಕ್ ಮೀನು ಕೊಡುತ್ತಾರೆ, ಸಮುದ್ರದ ನೀರಿನಲ್ಲಿ ಮೀನು ಬಿಟ್ಟರೆ ರವಷ್ಟು ದೂರ ಮುಂದೆ ಸಾಗಿ ಮತ್ತೆ ದಡಕ್ಕೇ ಬಂದುಬಿಡುತ್ತದೆ. ಚಲನಶೀಲತೆ ಇದೆ ಆದರೆ ಹಿಂದಕ್ಕೂ ಮುಂದಕ್ಕೂ ಸಾಗುತ್ತಿದೆಯಷ್ಟೆ. ಎರಡನೆಯ ಕತೆಯಲ್ಲಿ ಸೈಕಲ್ಲು ಚೈನಿನ ಶಬ್ದವೇ ಚಲನಶೀಲತೆ. ಕತೆ ಸಾಗುವ ಇಡೀ ಸಮಯ ಹಿನ್ನೆಲೆ ಸಂಗೀತದಲ್ಲಿ ಚೈನು ತಿರುಗುವ ಶಬ್ದವಿದೆ. ಅಡೆತಡೆಗಳು ಬಂದರೂ ಚಲನಶೀಲತೆ ಮುಂದಾಗಿಯೇ ಸಾಗುತ್ತಿದೆ. ಇನ್ನು ಮೂರನೇ ಕತೆಯಲ್ಲಿ ಹೂರಾಳ ಸ್ವತಂತ್ರ ಮನಸ್ಸಿನ ಚಲನಶೀಲತೆಯ ಸಂಕೇತವಾಗಿ ಶಾಂತ ಸಮುದ್ರದಲ್ಲಿ ಅತ್ತಿಂದಿತ್ತ ಭರ್ರನೆ ಓಡಾಡುವ ಸ್ಪೀಡು ಬೋಟುಗಳಿವೆ. 

ದೃಶ್ಯಗಳಲ್ಲೇ ಭಾವನೆಗಳನ್ನು ದಾಟಿಸುವ, ಸಮುದ್ರವನ್ನು ಪಾತ್ರವನ್ನಾಗಿ ಸೃಷ್ಟಿಸಿರುವ ಸೌಂದರ್ಯವನ್ನು ಕಾಣಲಿಕ್ಕೆ ಈ ಸಿನಿಮಾವನ್ನು ನೋಡಲೇಬೇಕು.

(ಈ ಸಿನಿಮಾ ನೋಡುವ ಅವಕಾಶ ಸಿಕ್ಕಿದ್ದು ಮನುಜಮತ ಮತ್ತು ಸಹಮತ, ಹಾಸನ ಆಯೋಜಿಸಿದ್ದ ‘ಸ್ತ್ರೀಮತ’ ಸಿನಿಮಾ ಹಬ್ಬದ ಸಂದರ್ಭದಲ್ಲಿ)

No comments:

Post a Comment