Jan 15, 2016

ಮೇಕಿಂಗ್ ಹಿಸ್ಟರಿ: ಒಡೆಯರ್-ಕರ್ನಾಟಕದ ಮೊದಲ ಕೈಗೊಂಬೆ

saketh rajan
ಕೈಗೊಂಬೆಯ ತಯಾರಿಕೆ.
ಸಾಕೇತ್ ರಾಜನ್
ಕನ್ನಡಕ್ಕೆ: ಡಾ ಅಶೋಕ್ ಕೆ ಆರ್
ಒಂದು ಶತಮಾನದ ಪ್ರಭುತ್ವ ಬ್ರಿಟೀಷರಿಗೆ ತಮ್ಮ ವಸಾಹತು ನೀತಿಗಳನ್ನು ರೂಪಿಸಲು ಸಹಕರಿಸಿತ್ತು. 1799ರಲ್ಲಿ ಟಿಪ್ಪು ಸುಲ್ತಾನನ ಸೋಲಿನ ನಂತರ ಒಡೆಯರ್ ವಂಶವನ್ನು ಪೀಠದ ಮೇಲೆ ವಿಜ್ರಂಭಿಸುವಂತೆ ಮಾಡುವಲ್ಲಿ ಬ್ರಿಟೀಷ್ ವಸಾಹತು ನೀತಿ ಮಹತ್ತರ ಪಾತ್ರ ವಹಿಸಿತು. ಒಡೆಯರ್ ಆಡಳಿತದ ಉನ್ನತಿಯ ಹಿಂದಿನ ಕಾರಣಗಳ ಬಗ್ಗೆ ಅಂದಿನ ಗವರ್ನರ್ ಜೆನರಲ್ ವೆಲ್ಲೆಸ್ಲಿ ಹೇಳಿದ ಮಾತುಗಳನ್ನು ಗಮನಿಸುವುದಕ್ಕೆ ಮುಂಚೆ ಮೈಸೂರಿನ ರಾಣಿ ಲಕ್ಷ್ಮಿ ಅಮ್ಮಣ್ಣಿ ವಸಾಹತು ಶಕ್ತಿಯ ಮುಂದೆ ತಲೆಬಾಗಿ ಶರಣಾಗಿ ಒಡೆಯರನ್ನು ಬ್ರಿಟೀಷರ ಕೈಗೊಂಬೆಯಾಗಿ ತಯಾರಿಸುವುದರಲ್ಲಿ ವಹಿಸಿದ ಪಾತ್ರವನ್ನು ಅರಿಯೋಣ.

1766ರಲ್ಲಿ ಮರಣಹೊಂದಿದ ಎರಡನೇ ಕೃಷ್ಣರಾಜ ಒಡೆಯರನ ಹೆಂಡತಿ ಲಕ್ಷ್ಮಿ ಅಮ್ಮಣ್ಣಿ. ನಂಜರಾಜ ಮತ್ತು ಚಾಮರಾಜ ಅವರ ಮಕ್ಕಳು. ಈರ್ವರನ್ನೂ ಹೈದರಾಲಿ ಅರಮನೆಯಲ್ಲೇ ಬಂಧಿಯಾಗಿಸಿದ್ದ. ಕೆಲವು ವರುಷಗಳ ನಂತರ ಮಕ್ಕಳಿಬ್ಬರ ಮರಣವಾಗಿ ಲಕ್ಷ್ಮಿ ಅಮ್ಮಣ್ಣಿ ಮೊಮ್ಮಗನಾದ ಮೂರನೇ ಕೃಷ್ಣರಾಜ ಒಡೆಯರನನ್ನು ದತ್ತಕಕ್ಕೆ ತೆಗೆದುಕೊಳ್ಳುತ್ತಾರೆ. ಆತ ಹುಟ್ಟಿದ್ದು 1792ರಲ್ಲಿ.

1770ರ ಸಮಯದಲ್ಲೇ ಮದ್ರಾಸಿನ ಬ್ರಿಟೀಷ್ ಗವರ್ನರನ್ನು ಸಂಪರ್ಕಿಸಿದ್ದ ಲಕ್ಷ್ಮಿ ಅಮ್ಮಣ್ಣಿ ಹೈದರಾಲಿಯ ಪತನಕ್ಕೆ ಬ್ರಿಟೀಷರು ಶ್ರಮಪಟ್ಟರೆ ಬ್ರಿಟೀಷರಿಗೆ ವಿಧೇಯಳಾಗಿರುವುದಾಗಿ ತಿಳಿಸಿದರು. “ಬ್ರಿಟೀಷರ ಕ್ಯಾಂಪಿನ ಖರ್ಚಿಗೆ ಒಂದು ಕೋಟಿ ರುಪಾಯಿ; ಕಂಪನಿಗೆ ವರುಷಕ್ಕೆ ಹದಿನೈದು ಲಕ್ಷ; ಜೊತೆಗೆ ಮೈಸೂರು ರಾಜ್ಯದ ರಕ್ಷಣೆಗೆ ನಿಲ್ಲುವ ಬ್ರಿಟೀಷ್ ಸೈನಿಕರ ಖರ್ಚಿಗೆ ವಾರ್ಷಿಕ ಮೂವತ್ತಾರು ಲಕ್ಷ ಹಣವನ್ನು ನೀಡುವುದಾಗಿ” ಲಕ್ಷ್ಮಿ ಅಮ್ಮಣ್ಣಿ 1782ರ ಮೇ ತಿಂಗಳಲ್ಲಿ ಮದ್ರಾಸಿನ ಗವರ್ನರ್ ಮೆಕ್ ಕಾರ್ಟ್ನಿಗೆ ಪತ್ರ ಬರೆಯುತ್ತಾರೆ (1).

ಬಹಳಷ್ಟು ಚರ್ಚೆ, ಸಂಧಾನದ ನಂತರ ರಾಣಿ ಲಕ್ಷ್ಮಿ ಅಮ್ಮಣ್ಣಿ ಮತ್ತು ಬ್ರಿಟೀಷ್ ಸಾಮ್ರಾಜ್ಯ 1782ರಲ್ಲಿ ರಹಸ್ಯ ಒಪ್ಪಂದವೊಂದಕ್ಕೆ ಸಹಿ ಹಾಕುತ್ತಾರೆ. ಅದು ‘ಮೈಸೂರಿನ ಹಿಂದೂ ಸಾಮ್ರಾಜ್ಯವನ್ನು ಪುನರ್ ಸ್ಥಾಪಿಸುವ ರಾಣಾ ಒಪ್ಪಂದ’(2). ಹೈದರಾಲಿಯನ್ನು ಸೋಲಿಸಿ ಒಡೆಯರ್ ಸಾಮ್ರಾಜ್ಯವನ್ನು ಮರುಸ್ಥಾಪಿಸುವುದಕ್ಕೆ ಬ್ರಿಟೀಷರು ಒಪ್ಪಿದರಾದರೂ ಬ್ರಿಟೀಷರಿಡುವ ಪ್ರತಿ ಹೆಜ್ಜೆಗೂ ಇಂತಿಷ್ಟು ಬೆಲೆ ನಿಗದಿ ಮಾಡಿದರು. ಕೊಯಮತ್ತೂರನ್ನು ಆಕ್ರಮಿಸಲು ಮೂರು ಲಕ್ಷ ಪಗೋಡಾ, ಬಾಲಘಟಕ್ಕೆ ಏರಲು ಒಂದು ಲಕ್ಷ, ಮೈಸೂರನ್ನು ಆಕ್ರಮಿಸಲು ಒಂದು ಲಕ್ಷ ಮತ್ತು ಕೊನೆಯದಾಗಿ ಶ್ರೀರಂಗಪಟ್ಟಣಕ್ಕೆ ಪ್ರವೇಶಿಲು ಐದು ಲಕ್ಷ ಪಗೋಡಾ (3). ಲಕ್ಷ್ಮಿ ಅಮ್ಮಣ್ಣಿ ಬ್ರಿಟೀಷರಿಗೆ ಒಟ್ಟು ಹತ್ತು ಲಕ್ಷ ಪಗೋಡಾಗಳನ್ನು ನೀಡುವ ಆಶ್ವಾಸನೆ ಕೊಟ್ಟಳು.

1792ರಲ್ಲಿ ವಸಾಹತುವಿನ ವಿರುದ್ಧ ಪ್ರಾರಂಭವಾದ ಮೂರನೇ ಯುದ್ಧದ ಸಮಯದಲ್ಲಿ ಮೈಸೂರು ವಸಾಹತುವಿಗೆ ಒಳಪಡುವ ಸಾಧ್ಯತೆಗಳು ರಾಣಿಯನ್ನು ಉತ್ಸುಕಗೊಳಿಸಿದ್ದವು! ಬ್ರಿಟೀಷರಿಗೆ ಕೊಡುವ ಪಗೋಡಗಳನ್ನು ಮತ್ತಷ್ಟು ಹೆಚ್ಚಿಸುವಂತೆ ಈ ಉತ್ಸುಕತೆ ಪ್ರೇರೇಪಿಸಿತು. “ದೇವರ ದಯೆಯಿಂದ ನಾವು ಬದುಕುಳಿದು ಆಂಗ್ಲರು ಟಿಪ್ಪುವನ್ನು ಸೋಲಿಸಿ ನಮ್ಮ ರಾಜ್ಯವನ್ನು ಮರಳಿಸಿದರೆ ಬ್ರಿಟೀಷ್ ಸೈನಿಕರ ಖರ್ಚಿಗಾಗಿ ಒಂದು ಕೋಟಿ ಪಗೋಡಾವರೆಗೂ ನೀಡುತ್ತೇವೆ” ಎಂದು ಬರೆದರು (4).

“……..ನಮ್ಮ ಸಾಮ್ರಾಜ್ಯವನ್ನು ಮರಳಿ ಗಳಿಸಲು ಸಹಾಯ ಮಾಡಲೆಂದೇ ನಿಮ್ಮನ್ನು ಈ ಭೂಮಿಗೆ ಕಳುಹಿಸಲಾಗಿದೆ ಎನ್ನುವ ಅರಿವು ನಮಗುಂಟಾಗಿದೆ. ನಿಮ್ಮ ಮನಸ್ಸಿನ ಶುದ್ಧತೆ ಮತ್ತು ವ್ಯಕ್ತಿತ್ವದ ಘನತೆಯ ಬಗ್ಗೆ ಕೇಳಿ ತಿಳಿದಿದ್ದೀವಿ. ನಿಮ್ಮಲ್ಲಿ ಸಂಪೂರ್ಣ ನಂಬಿಕೆಯಿಟ್ಟು ನಮ್ಮನ್ನು ರಕ್ಷಿಸಬೇಕು, ನಮಗೆ ಸಹಾಯ ಮಾಡಬೇಕು ಎಂದು ಬೇಡಿಕೊಳ್ಳುತ್ತೇವೆ. ನ್ಯಾಯಾನ್ಯಾಯಗಳನ್ನು ಪರಿಶೀಲಿಸಿ ದೇವರ ಚಿತ್ತ ಮತ್ತು ನಿಮ್ಮ ಅಚ್ಚಳಿಯದ ಖ್ಯಾತಿಯನ್ನು ನೆನಪಿಟ್ಟುಕೊಂಡು ನಿಮ್ಮ ಎಂದಿನ ಒಳ್ಳೆಯತನದ ಮೂಲಕ ಶತ್ರುಗಳನ್ನು ಬೇರುಸಹಿತ ಕಿತ್ತು ನಮ್ಮ ಸಾಮ್ರಾಜ್ಯದ ಮರುಸ್ಥಾಪನೆಗೆ ಕಾರಣಕರ್ತರಾಗಬೇಕು. ಕಳೆದ ಬಾರಿಯ ಒಪ್ಪಂದದ ಪ್ರಕಾರ ನಡೆದುಕೊಳ್ಳಬೇಕು. ಒಂದು ಕೋಟಿ ಪಗೋಡಾಗಳನ್ನು ಯುದ್ಧದ ಖರ್ಚು – ವೆಚ್ಚಕ್ಕಾಗಿ ನೀಡುತ್ತೇವೆ” ವಸಾಹುತಿನ ಜೀತ ರಾಣಿ ಲಕ್ಷ್ಮಿ ಅಮ್ಮಣ್ಣಿ 1798ರಲ್ಲಿ ಮದ್ರಾಸಿನ ಗವರ್ನರ್ರಿಗೆ ಬರೆದ ಪತ್ರವಿದು (5).

ಬ್ರಿಟೀಷ್ ಸುಲಿಗೆಕೋರರು ದೇಶ ರಕ್ಷಿಸಲು ಬಂದಿರುವ ದೇವದೂತರು ಎಂಬ ರಾಣಿಯ ನಂಬಿಕೆಯ ಪ್ರದರ್ಶನ ಮತ್ತೆ 1799ರ ಫೆಬ್ರವರಿಯಲ್ಲಿ ಜಾಹೀರಾಯಿತು. ಈ ಬಾರಿಯ ಪತ್ರ ಮುಖ್ಯ ದೇವರಾದ ಗವರ್ನರ್ ಜೆನರಲ್ ಗೆ! “ನಾವು ಇತ್ತೀಚೆಗೆ ಕೇಳಿದ ಪ್ರಕಾರ ದಯಾಮಯನಾದ ದೇವರು ಅಪಾರ ಶಕ್ತಿಯನ್ನು ನಿಮಗೆ ಕರುಣಿಸಿ ಈ ದೇಶಕ್ಕೆ ಕಳುಹಿಸಿರುವುದು ನಮ್ಮನ್ನು ದುಃಖ ಸಂಕಟಗಳಿಂದ ಪಾರು ಮಾಡಲು. ಅನುಮಾನವೇ ಇಲ್ಲ. ನೀವು ಉದಾರವಾದಿ, ಸದುದ್ದೇಶದ ಧರ್ಮಬೀರು ಎಂದು ಕೇಳಿದ್ದೇವೆ. ಈ ಕಾರಣದಿಂದ ನಮ್ಮನ್ನು ರಕ್ಷಿಸಬೇಕೆಂದು ಕೋರುತ್ತೇನೆ” ಎಂದು ವಿನಮ್ರವಾಗಿ ತಲೆಬಾಗುತ್ತಾರೆ ಲಕ್ಷ್ಮಿ ಅಮ್ಮಣ್ಣಿ (6).

ಇದರ ನಂತರ ಬ್ರಿಟೀಷ್ ಸಾಮ್ರಾಜ್ಯ ಕಾರ್ಯತತ್ಪರವಾಗಲು ಹೆಚ್ಚಿನ ಸಮಯ ಬೇಕಾಗಲಿಲ್ಲ. ಕೈಗೊಂಬೆ ರಾಣಿಯ ಪ್ರಾರ್ಥನೆಗೆ ಒಲಿದು ಬಂದ ಬ್ರಿಟೀಷರು ಎರಡನೇ ಕೃಷ್ಣರಾಜ ಒಡೆಯರ್ ರವರ ರಂಗ ಪ್ರವೇಶ ನೆರವೇರಿಸಿದರು. ಒಂದು ಶತಮಾನದವರೆಗೆ ಯುದ್ಧ – ಆಕ್ರಮಣ – ನೇರ ವಸಾಹತು ಆಡಳಿತ ನೀತಿಯನ್ನು ಪಾಲಿಸಿದ್ದ ಬ್ರಿಟೀಷರು ಔಧಿನ ಆಕ್ರಮಣದ ನಂತರ ಕೈಗೊಂಬೆ ರಾಜರ ಮೂಲಕ ಆಡಳಿತ ನಡೆಸುವ – ದೇಶವನ್ನು ನಿಯಂತ್ರಿಸುವ ನೀತಿಯನ್ನು ಅಪ್ಪಿಕೊಂಡಿದ್ದರು.

“ಹೇಸ್ಟಿಂಗ್ಸಿನ ನಿರ್ಬಿಡೆಯ ನಿರ್ಧಾರ ಸ್ಥಳೀಯ ರಾಜರಿಗೆ ಯಾವುದೇ ಸ್ವತಂತ್ರ ನಿರ್ಣಯದ ಹಕ್ಕನ್ನು ನೀಡದೆ ಬ್ರಿಟೀಷರ ಅಧೀರರನ್ನಾಗಿ ಮಾಡಿತು. ಈ ಅಧೀನ ರಾಜ್ಯದ ಪರಿಕಲ್ಪನೆಯನ್ನು ಔಧಿನಲ್ಲಿ ಮೊದಲು ಪರಿಚಯಿಸಿದ್ದು ಹೇಸ್ಟಿಂಗ್ಸ್” – ಜಾರ್ಜ್ ಫಾರೆಸ್ಟ್.

ಈ ಕೈಗೊಂಬೆ ರಾಜರು ಬ್ರಿಟೀಷರಿಗೆ ಅನುಕೂಲ ಮಾಡಿಕೊಟ್ಟರು. ಪ್ರತ್ಯಕ್ಷ ಆಡಳಿತ ನೀತಿಯಿಂದ ಈ ರೀತಿಯ ಪರೋಕ್ಷ ಆಡಳಿತವನ್ನು ಅಪ್ಪಿಕೊಳ್ಳಲು ಬ್ರಿಟೀಷರಿಗೆ ಅನೇಕ ಕಾರಣಗಳಿದ್ದವು.

ಬಹುಮುಖ್ಯ ಕಾರಣವೆಂದರೆ – ಫ್ಯೂಡಲ್ ಮನಸ್ಥಿತಿಯಲ್ಲೇ ಇದ್ದ ಜನ ಸಮೂಹ, ನಮ್ಮನ್ನು ಆಳುತ್ತಿರುವುದು ನಮ್ಮದೇ ರಾಜ; ಬಣ್ಣ – ಭಾಷೆ – ಸಂಸ್ಕೃತಿಯಲ್ಲಿ ಚೂರೂ ಸಾಮ್ಯತೆಯಿರದ ಹೊರಗಿನವರಲ್ಲ ಎಂಬ ಭಾವನಾತ್ಮಕ ಭ್ರಮೆಯಲ್ಲಿ ಉಳಿಯಲು ಈ ಹೊಸ ನೀತಿ ಸಹಕಾರಿಯಾಗುತ್ತಿತ್ತು.

ಆಕ್ರಮಣಕಾರ ಸಮೂಹದ ದೃಷ್ಟಿಯಿಂದ ಅಡಗಿಕೊಂಡಿದ್ದ ಬ್ರಿಟೀಷ್ ನಾಗರೀಕತೆಯ ಬೆತ್ತಲನ್ನು ಫ್ಯೂಡಲ್ ಎಲೆ ಮುಚ್ಚುತ್ತಿತ್ತು. ಮೇಲಾಗಿ ಜನಸಮೂಹ ರಾಜನ ವಿರುದ್ಧವೋ ಸಮಾಜದ ವಿರುದ್ಧವೋ ಅಸಹನೆಯಿಂದ ರೊಚ್ಚಿಗೆದ್ದಾಗ ‘ಜನರಿಗಾಗಿ’ ಎಂಬ ನೆಪವೊಡ್ಡಿ ಬ್ರಿಟೀಷರು ಕೈಯಾಡಿಸಬಹುದಿತ್ತು. ಸಮೂಹದ ದೃಷ್ಟಿಯಲ್ಲಿ ಬ್ರಿಟೀಷರು ಔದಾರ್ಯ ತುಂಬಿದ ಅಧಿಪತಿಗಳಾದರು, ಅಂತಿಮ ತೀರ್ಪು ಹೇಳುವ ನ್ಯಾಯಾಧೀಶರಾದರು. ಈ ಅಂಶ ಅವರ ಲೂಟಿಯ ನಡವಳಿಕೆಯ ಮೇಲೊಂದು ಪರದೆ ಎಳೆದಿತ್ತು. ಕೈಗೊಂಬೆ ರಾಜರ ಮೂಲಕ ಹತ್ತೊಂಬತ್ತನೇ ಶತಮಾನವನ್ನು ಆಳುವ ಬ್ರಿಟೀಷರ ನಿರ್ಧಾರ ವಸಾಹತುಶಾಹಿ ವಿರೋಧಿ ಪ್ರಜ್ಞೆಯ ಬೆಳವಣಿಗೆಯನ್ನು ಮೊಟಕುಗೊಳಿಸಿತು.

ಟಿಪ್ಪುವಿನ ಸೋಲು ಭಾರತವನ್ನು ಸಂಪೂರ್ಣವಾಗಿ ಆಕ್ರಮಿಸುವುದರ ಸಂಕೇತವಾಯಿತು. ಈಗಷ್ಟೇ ಲಕ್ಷ್ಮಿ ಅಮ್ಮಣ್ಣಿಯ ಪ್ರಕರಣದಲ್ಲಿ ನೋಡಿದಂತೆ ಕರ್ನಾಟಕದ ಇನ್ನಿತರ ಸಣ್ಣ ಪುಟ್ಟ ರಾಜರು ಮತ್ತು ಮುಖ್ಯಸ್ಥರು ಸ್ವಇಚ್ಛೆಯಿಂದ ಬ್ರಿಟೀಷರಿಗೆ ಶರಣಾಗಿ ದಾಸ್ಯಕ್ಕೊಳಪಟ್ಟರು.

ಒಂದು ಶತಮಾನದ ಹಿಂದೆ ಬ್ರಿಟೀಷರ ಆಳ್ವಿಕೆಗೆ ಬಹುದೊಡ್ಡ ಭೂಪ್ರದೇಶ ಒಳಗಾಗಬಹುದೆಂಬ ಕಲ್ಪನೆ ಮೂಡುವುದೂ ಶಕ್ಯವಿರಲಿಲ್ಲ. ಕಾರಣ ಬ್ರಿಟೀಷರ ವಸಾಹತುಶಾಹಿ ನೆಲೆ ಕಂಡಿರಲಿಲ್ಲ ಮತ್ತವರು ತಮ್ಮ ಶಕ್ತಿ ಪ್ರದರ್ಶನ ಮಾಡಿರಲಿಲ್ಲ. ಹದಿನೆಂಟನೆಯ ಶತಮಾನದ ಪ್ರಾರಂಭದಲ್ಲಿ ಕೈಗೊಂಬೆ ರಾಜರು ತಮ್ಮ ನಿಯತ್ತನ್ನು ಬ್ರಿಟೀಷರಿಗೆ ಒತ್ತೆ ಇಡಲಾರಂಭಿಸುತ್ತಿದ್ದಂತೆ ವಸಾಹತುಶಾಹಿಯ ವ್ಯಾಪ್ತಿ ವಿಸ್ತಾರಗೊಳ್ಳಲಾರಂಭಿಸಿತು. ಈ ‘ನಿಯತ್ತಿನ’ ರಾಜರು ಇರದಿದ್ದರೆ ಪರೋಕ್ಷ ಆಳ್ವಿಕೆಯನ್ನು ಪ್ರಾಯೋಗಿಕವಾಗಿಯಾದರೂ ಪ್ರಾರಂಭಿಸಲು ಬ್ರಿಟೀಷರು ಮನಸ್ಸು ಮಾಡುತ್ತಿರಲಿಲ್ಲ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಭಾರತದ ಉದ್ದಗಲಕ್ಕೂ ಬ್ರಿಟೀಷ್ ಸಾಮ್ರಾಜ್ಯ ತಳವೂರಿದಾಗ ದೇಶದ ಎರಡನೇ ಮೂರರಷ್ಟು ಭೂಪ್ರದೇಶದಲ್ಲಿ ದೇಶೀಯ ರಾಜರೇ ಆಳ್ವಿಕೆ ನಡೆಸುತ್ತಿದ್ದರು. ಉಳಿಕೆ ಒಂದನೇ ಮೂರರಷ್ಟು ಭಾಗ ಮಾತ್ರ ನೇರವಾಗಿ ಬ್ರಿಟೀಷರ ಆಡಳಿತದಲ್ಲಿತ್ತು.

ಈ ಪರೋಕ್ಷ ಆಡಳಿತಕ್ಕೆ ಮತ್ತೊಂದು ಕಾರಣ ಆಡಳಿತಗಾರರ ಕೊರತೆ ಬ್ರಿಟೀಷರಿಗೆ ಎದುರಾಗಿದ್ದು. ಭಾರತ ಮತ್ತು ಪ್ರಪಂಚದ ಇತರೆ ಭಾಗಗಳ ಮೇಲಿನ ಅತಿಕ್ರಮಣ ಮುಂದುವರೆದಂತೆ ದೊಡ್ಡದಾಗುತ್ತಲೇ ಸಾಗಿದ್ದ ಸಾಮ್ರಾಜ್ಯದ ರಕ್ಷಣೆಗೆ ತನ್ನ ದೇಶದ ಪ್ರಜೆಗಳನ್ನೇ ನೇಮಿಸುವುದು ತಲೆನೋವಿನ ಕೆಲಸವಾಯಿತು. ಈ ಕೊರತೆಯಿಂದಾಗಿಯೇ ಬ್ರಿಟೀಷರಷ್ಟೇ ಆಸೆಬುರುಕುರಾದ ಪೋರ್ಚುಗೀಸರು ದೇಶದಿಂದ ದೇಶಕ್ಕೆ ಅತಿಕ್ರಮಿಸುವುದನ್ನು ಕಡಿಮೆ ಮಾಡಿಬಿಟ್ಟಿದ್ದರು. ಈ ಸಮಸ್ಯೆಗೆ ಪರಿಹಾರವೆಂಬಂತೆ ಬ್ರಿಟೀಷರು ಕೈಗೊಂಬೆ ರಾಜರ ಮೂಲಕ ಆಡಳಿತ ನಡೆಸಲಾರಂಭಿಸಿದರು. ಕೈಗೊಂಬೆ ರಾಜರ ಸಹಾಯವಿಲ್ಲದಿದ್ದರೆ ಬ್ರಿಟೀಷ್ ಸಾಮ್ರಾಜ್ಯ ಇಷ್ಟರಮಟ್ಟಿಗೆ ವಿಸ್ತಾರಗೊಳ್ಳುವ ಸಾಧ್ಯತೆಯೇ ಇರಲಿಲ್ಲ.

ಮತ್ತು ಕೊನೆಯದಾಗಿ ಇಂಗ್ಲೆಂಡಿನ ಕೈಗಾರಿಕಾ ಬಂಡವಾಳದಲ್ಲಾದ ಏರಿಕೆ ಹದಿನೆಂಟನೆ ಶತಮಾನದ ಕೊನೆಗೆ ವಸಾಹತುಶಾಹಿಯ ಬುಡವನ್ನು ಗಟ್ಟಿಗೊಳಿಸಿತು. ಊಳಿಗಮಾನ್ಯ, ಕೈಗೊಂಬೆ ರಾಜರ ದೌರ್ಬಲ್ಯಗಳನ್ನು ಉಪಯೋಗಿಸಿಕೊಂಡು ಬಂಡವಾಳಶಾಹಿತನ ಮತ್ತು ವಸಾಹತುಶಾಹಿ ತಳವೂರಿತು.

1799ರ ಜೂನ್ 7ರಂದು ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶಕ ಹೆನ್ರಿ ದುಂಡಾಸ್ ಗೆ ಬರೆದ ಪತ್ರದಲ್ಲಿ ಗವರ್ನರ್ ಜೆನರಲ್ ವೆಲ್ಲೆಸ್ಲಿ ಪರೋಕ್ಷವಾಗಿ ಈ ಎಲ್ಲಾ ಅಂಶಗಳನ್ನು ಪ್ರಸ್ತಾಪಿಸಿದ್ದರು. ಕರ್ನಾಟಕದಲ್ಲಿ ಆಕ್ರಮಿಸಿದ ಪ್ರಾಂತ್ಯಗಳಲ್ಲಿ ಯಾವ ರೀತಿಯ ಆಡಳಿತವನ್ನು ಸ್ಥಾಪಿಸಬೇಕೆಂದು ಆತ ಚಿಂತಿಸುತ್ತಿದ್ದ. ರಾಣಾ ಒಪ್ಪಂದದ ಬಗ್ಗೆ ತಿಳಿಸುವ ಶ್ರಮವನ್ನಾತ ತೆಗೆದುಕೊಳ್ಳಲಿಲ್ಲ. ಆ ಒಪ್ಪಂದ ಪತ್ರ ರದ್ದಿ ಕಾಗದಕ್ಕಿಂತ ಹೆಚ್ಚಿನದ್ದಾಗಿರಲಿಲ್ಲ. 

ಅಷ್ಟರಲ್ಲಾಗಲೇ ಬ್ರಿಟೀಷರು ಅಂತಹ ಹಲವು ಒಪ್ಪಂದಗಳನ್ನು ಬರೆದು – ಸಹಿ ಹಾಕಿ – ಬಿಸಾಡಿದ್ದರು. ರಾಣಾ ಒಪ್ಪಂದಕ್ಕೆ ಬದ್ಧವಾಗಿರುವ ಅನಿವಾರ್ಯತೆ ಕಂಪನಿಗಿಲ್ಲವೆಂಬ ಅರಿವು ವೆಲ್ಲೆಸ್ಲಿಗಿತ್ತು. 

“ಘನತೆವೆತ್ತ ನಿರ್ದೇಶಕರ ಗಮನಕ್ಕೆ, ಟಿಪ್ಪು ಸುಲ್ತಾನನ ಪ್ರಾಂತ್ಯವನ್ನು ವಿಂಗಡಿಸಲು ಇರುವ ಹಲವು ಯೋಜನೆಗಳ ಸಾಧಕ ಭಾದಕಗಳ ವರದಿಯನ್ನು ಈ ಪತ್ರದ ಜೊತೆಗೆ ಲಗತ್ತಿಸಲಾಗಿದೆ. ಈ ವಿಂಗಡನೆಯನ್ನು ನಿಜಾಮರಿಗೆ, ಮರಾಠರಿಗೆ ಮತ್ತು ಕಂಪನಿಗೆ ಅನುಕೂಲಕರವಾಗುವಂತೆ ಮಾಡಲಾಗಿದೆ. ಈ ಭಾಗದ ಭೂಪ್ರದೇಶ, ಸಂಪನ್ಮೂಲ ಮತ್ತು ಹಲವು ಕೋಟೆಗಳ ಮತ್ತು ಆಳ್ವಿಕೆಗಳ ಶಕ್ತಿ ಹಾಗು ಸ್ಥಳವನ್ನು ಪರಿಶೀಲಿಸಿ ಈ ವರದಿ ತಯಾರಿಸಲಾಗಿದೆ. ನನ್ನ ನಿರ್ಧಾರದ ಪ್ರಕಾರ ಬ್ರಿಟೀಷರ ಮೇಲ್ವಿಚಾರಣೆಯಲ್ಲಿ ಮೈಸೂರಿನಲ್ಲೊಂದು ಸರಕಾರ ರಚಿಸಿ, ಟಿಪ್ಪು ರಾಜ್ಯದ ವಿಂಗಡಣೆಯಲ್ಲಿ ಒಂದು ಹಂತದವರೆಗೆ ಮರಾಠಾರನ್ನು ಒಳಗೊಳ್ಳುವುದು ಉತ್ತಮ. ಎಲ್ಲರ ಒಳಿತುಗಳನ್ನೂ ಲೆಕ್ಕ ಹಾಕಿ, ಕಂಪನಿಯನ್ನು ಮತ್ತಷ್ಟು ಸುಭದ್ರವಾಗಿಸಬೇಕು. ಆದಾಯ, ಸಂಪನ್ಮೂಲ, ಲಾಭ ಮತ್ತು ಮಿಲಿಟರಿ ಮೇಲುಗೈ ಪಡೆಯಲು ಈ ರೀತಿಯ ವಿಂಗಡಣೆ ಸಹಾಯಕ. ಜೊತೆಗೆ ಭಾರತ ನಿದ್ರಾವಸ್ಥೆಗೆ ಜಾರುವುದಕ್ಕೂ ಈ ವರದಿಯ ಅನುಷ್ಠಾನದ ಅಗತ್ಯವಿದೆ” ಎಂದು ಬರೆಯುತ್ತಾರೆ ವೆಲ್ಲೆಸ್ಲಿ (8).

ನೀರಿನಿಂದ ಸುತ್ತುವರಿದ ದೇಶದಿಂದ ಬಂದ, ಸಮುದ್ರ ವ್ಯಾಪಾರದಲ್ಲಿ ಏಕಸ್ವಾಮ್ಯ ಮೆರೆದಿರುವ ಕಂಪನಿಯೊಂದರ ಪರವಾಗಿ ಕಾರ್ಯನಿರ್ವಹಿಸುವ, ಆಕ್ರಮಣಕಾರಿ ಯೋಧರ ಪಡೆಯನ್ನು ಹೊಂದಿರುವ ವೆಲ್ಲೆಸ್ಲಿ ಈ ರೀತಿಯಲ್ಲಿಯೇ ಯೋಚಿಸಬೇಕಿತ್ತು. ಕಣ್ರೆಪ್ಪೆ ಬಡಿಯುವಷ್ಟರ ಶ್ರಮವನ್ನೂ ಪಡದೆ ಮೈಸೂರು ಸಂಸ್ಥಾನವನ್ನು ಲಂಡನ್ನಿನಲ್ಲಿದ್ದ ನಿರ್ದೇಶಕರ ಜೇಬಿಗೆ ಸೇರಿಸಿಬಿಡುತ್ತಾರೆ. ಬ್ರಿಟೀಷರಿಂದ ಗುತ್ತಿಗೆ ಪಡೆದ ಆಧಾರದ ಮೇಲೆ ಭಾರತವನ್ನಾಳುತ್ತಿದ್ದ 568 ರಾಜರಲ್ಲಿ ಕೆಲವೇ ಕೆಲವರಿಗೆ ಮಾತ್ರ ಕಡಲ ತೀರದ ಭಾಗ್ಯ ದಕ್ಕಿತ್ತು. ಮೈಸೂರು ಸಾಮ್ರಾಜ್ಯ ಭೂಪ್ರದೇಶದಿಂದ ಸುತ್ತುವರಿದಿತ್ತು, ಕಡಲ ತೀರಕ್ಕೆ ಸಂಪರ್ಕವಿರಲಿಲ್ಲ.

ಒಡೆಯರ್ ಸೂಕ್ತ ಕೈಗೊಂಬೆ ಎನ್ನುವುದನ್ನು ಸಾಬೀತುಪಡಿಸಲು ತನ್ನ ವಾದಗಳನ್ನು ಮುಂದಿಡುತ್ತಾನೆ ವೆಲ್ಲೆಸ್ಲಿ “ಮೈಸೂರಿನ ಹೊಸ ಸರಕಾರವನ್ನು ಯಾರ ಕೈಯಲ್ಲಿಡಬೇಕು ಎಂದು ನಿರ್ಧರಿಸುವ ಅನಿವಾರ್ಯತೆ ಎದುರಾಗಿದೆ. ಪಟ್ಟಕ್ಕೆ ಸರಿಯಾದ ವ್ಯಕ್ತಿ ಯಾವ ಪಕ್ಷದಲ್ಲೂ ಇಲ್ಲದಿದ್ದಾಗ್ಯೂ ನನ್ನ ಪ್ರಕಾರ ಟಿಪ್ಪುವಿನ ಕುಟುಂಬ ಮತ್ತು ಮೈಸೂರಿನ ಹಳೆಯ ರಾಜ ಕುಟುಂಬದಿಂದ ಆಯ್ಕೆ ಮಾಡಬೇಕು.

1796ರ ನಂತರ ಭಾರತದಲ್ಲಿ ಬ್ರಿಟೀಷರ ಶಕ್ತಿಯನ್ನು ಕುಂದಿಸುವುದೇ ಟಿಪ್ಪುವಿನ ಆಸೆ – ಆಶಯವಾಗಿತ್ತು. ಅವನ ಕೆಲಸಗಳೆಲ್ಲವೂ ಆ ನಿಟ್ಟಿನಲ್ಲಿಯೇ ಇದ್ದವು…. ಅಚಲ ಉದ್ದೇಶ ಕಾರ್ಯತತ್ಪರವಾಗಲೆಂದು ಟಿಪ್ಪು ಅತ್ಯುತ್ಸಾಹದಿಂದ ಉಗ್ರತೆಯಿಂದ ಹಗೆಕಾರುತ್ತಿದ್ದ…. ಶ್ರೀರಂಗಪಟ್ಟಣದಲ್ಲಿ ಲಭ್ಯವಾಗಿರುವ ಅನೇಕ ಸಾಕ್ಷ್ಯಾಧಾರಗಳು ಇಂಗ್ಲೀಷರ ವಿರುದ್ಧ ಆತನಿಗಿದ್ದ ಅಸಹನೆಯನ್ನು ತೋರಿಸುತ್ತದೆ. ಆಡಳಿತ ನಡೆಸಲು ಬೇಕಾದ ಉತ್ಸಾಹ ಆತನ ಹೃದಯದಲ್ಲಿ ಚಿಮ್ಮುತ್ತಿದ್ದುದೇ ಈ ಅಸಹನೆಯಿಂದ. ಅವನ ನೀತಿ ನಿಯಮಗಳು, ಅವನ ಸರಕಾರದ ರೂಪುರೇಷೆಗಳೆಲ್ಲವುದರಲ್ಲೂ ಬ್ರಿಟೀಷರ ವಿರುದ್ಧದ ದ್ವೇಷ ಎದ್ದು ಕಾಣಿಸುತ್ತದೆ.

ಟಿಪ್ಪುವಿನ ವಂಶಜರೂ ಕೂಡ ಈ ನೀತಿ ನಿಯಮಾವಳಿಗಳ ಪ್ರಕಾರವೇ ಶಿಕ್ಷಣ ಪಡೆದಿರುತ್ತಾರೆ. ಮತ್ತು ಅದೇ ಪೂರ್ವಾಗ್ರಹದಿಂದ ಮೈಸೂರಿನ ರಾಜಪೀಠದಿಂದ ಕಾರ್ಯನಿರ್ವಹಿಸುತ್ತಾರೆ. ಈ ಭಾವನೆಗಳು ಯುದ್ಧದ ಕಾರಣದಿಂದ ಮತ್ತಷ್ಟು ಹೆಚ್ಚಾದರೆ ಅಚ್ಚರಿಯಿಲ್ಲ. ನಮ್ಮ ಯಶಸ್ಸು ಅವನ ತಂದೆಯ ಸಾಮ್ರಾಜ್ಯವನ್ನು ಅಲುಗಾಡಿಸಿದೆ…. ಅವನು ಪಟ್ಟದ ಮೇಲೆ ಕೂರುವುದು ನಮ್ಮ ಕೃಪೆಯಿಂದ…. ನಮ್ಮ ನಿಯಂತ್ರಣದಲ್ಲಾತ ಇರಬೇಕು….. ಈ ಎಲ್ಲಾ ಅಂಶಗಳು ಅವನನ್ನು ಅಪಮಾನಿತನನ್ನಾಗಿಸುತ್ತದೆ….. ಆತ್ಮಸಾಕ್ಷಿಯ ರಾಜನಾರೂ ಇದನ್ನು ಒಪ್ಪಿಕೊಳ್ಳಲಾರರು…. ಸಾಮ್ರಾಜ್ಯ ಮತ್ತು ಸಂಪನ್ಮೂಲದಲ್ಲಿ ಕಡಿತವಾದಾಗ ಅವನು ತಂದೆಯ ಸಾಮ್ರಾಜ್ಯವನ್ನು ಮರಳಿ ಗಳಿಸಲು ನಮ್ಮೊಡನೆ ಯುದ್ಧದಲ್ಲಿ ತೊಡಗಿದರೂ ಕಳೆದುಕೊಳ್ಳುವುದಕ್ಕಿಂತ ಗಳಿಸುವುದೇ ಹೆಚ್ಚು. ಹೆತ್ತವರ ಬತ್ತದ ಉತ್ಸಾಹ ಮತ್ತವರ ಭಯರಹಿತ ಶಕ್ತಿಯನ್ನು ನೋಡಿಯೇ ಬೆಳೆದ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ವಂಶಸ್ಥರು ಸ್ವತಂತ್ರ ಆಡಳಿತದ ಅಧಿಕಾರಯುತ ನಡವಳಿಕೆಗೆ ಒಗ್ಗಿಹೋಗಿರುವವರು ಮತ್ತು ಮಿಲಿಟರಿ ಶಕ್ತಿಯ ವೈಭವವನ್ನು ಕಂಡವರು. ಉದ್ದೇಶಪೂರ್ವಕವಾಗಿ ವಿಸ್ತಾರವಾದ ಶಕ್ತಿಯುತ ಸಾಮ್ರಾಜ್ಯವನ್ನು ಮರಳಿಗಳಿಸಲು ಅವರು ಪ್ರಯತ್ನಿಸಬಹುದು.

ಹಾಗಾಗಿ ಅವರ ವಂಶಸ್ಥರನ್ನು ಮೈಸೂರು ಸಾಮ್ರಾಜ್ಯದ ಪಟ್ಟದಲ್ಲಿ ಕೂರಿಸುವುದು ಕುಸಿದುಬಿಡಬಹುದಾದ ತಳಪಾಯವನ್ನು ನಾವೇ ಹಾಕಿದಂತೆ.

ಮೈಸೂರಿನ ಈ ವಿಚ್ಛಿದ್ರಕಾರಿ ಶಕ್ತಿ ದುರ್ಬಲಗೊಂಡಿದೆಯೇ ಹೊರತು ನಿರ್ನಾಮವಾಗಿಲ್ಲ.

ಬ್ರಿಟೀಷ್ ಸರಕಾರ ಮತ್ತು ಒಡೆಯರ್ ಕುಟುಂಬದ ಮಧ್ಯೆ ಸ್ನೇಹ – ಕಾರುಣ್ಯ ಅವರ ದುರ್ವಿಧಿಯ ದೆಸೆಯಿಂದಾಗಿ ಇದ್ದೇ ಇದೆ. ನಮ್ಮ ಶತ್ರುಗಳೊಡನೆ ಅವರಿಗೆ ಯಾವುದೇ ಸಂಬಂಧವಿಲ್ಲ. ಅವರ ಸ್ಥಾನದ ಉನ್ನತೀಕರಣ ನಿಮ್ಮ ಕೃಪೆಯ ಫಲವಾಗಿರುತ್ತದೆ ಮತ್ತು ನಿಮ್ಮ ಬೆಂಬಲದಿಂದ ಮಾತ್ರ ಅವರು ಪೀಠದ ಮೇಲೆ ಉಳಿಯಬಲ್ಲರು.

ಮೈಸೂರಿನ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಈ ವ್ಯವಸ್ಥೆ ನಮ್ಮ ಸುರಕ್ಷತೆಗೆ ಅಪಾಯವೊಡ್ಡಿದ ಶತ್ರುಗಳನ್ನು ನಾಶಪಡಿಸುವುದಕ್ಕೆ ಸಹಾಯ ಮಾಡುವುದರ ಜೊತೆಗೆ ಅಧಿಕಾರವನ್ನು ನಮ್ಮ ಅನುಕೂಲಗಳಿಗೆ ತಕ್ಕಂತೆ ಸಂಪನ್ಮೂಲ ಒದಗಿಸುವವರಿಗೆ ಹಸ್ತಾಂತರಿಸಿದಂತಾಗುತ್ತದೆ. ಇಲ್ಲಿಯವರೆಗೂ ಅಶಾಂತಿಗೆ ಮತ್ತು ಎಚ್ಚರಿಕೆಗೆ ಕಾರಣವಾಗಿದ್ದ ಮೈಸೂರು ಸಂಸ್ಥಾನ ಬಹುಶಃ ಇನ್ನು ಮುಂದೆ ನಮ್ಮ ಹೊಸ ರಕ್ಷಣಾ ಕವಚವಾಗಬಹುದು. ಜೊತೆಗೆ ಕಂಪನಿಗೆ ಹಣ ಮತ್ತು ಶಕ್ತಿಯ ಹೊಸ ಮೂಲವಾಗಬಹುದು.

ಈ ಎಲ್ಲಾ ವಿಚಾರಗಳು ಮೈಸೂರು ಸಾಮ್ರಾಜ್ಯಕ್ಕೆ ಟಿಪ್ಪು ವಂಶಸ್ಥರಿಗಿಂತ ಮೈಸೂರು ರಾಜರ ವಂಶಸ್ಥರು ಸೂಕ್ತವೆಂಬ ನನ್ನ ನಿರ್ಧಾರಕ್ಕೆ ಪೂರಕವಾದವು” (9)

ವೆಲ್ಲೆಸ್ಲಿ ಇದಕ್ಕಿಂತ ಉತ್ತಮ ಆಯ್ಕೆಯನ್ನು ಮಾಡಲು ಸಾಧ್ಯವಿರಲಿಲ್ಲ. ನಾವು ಮುಂದೆ ನೋಡುವಂತೆ ಕರ್ನಾಟಕದಲ್ಲಿ ಒಡೆಯರ್ ಗಳು ಬ್ರಿಟೀಷರ ಮೊದಲ ಕೈಗೊಂಬೆ ರಾಜರಾದರು ಮತ್ತು ಬ್ರಿಟೀಷರಿಗೆ ಅತ್ಯಂತ ವಿಷಮ ಪರಿಸ್ಥಿತಿ ಎದುರಾದಾಗಲೂ ತಮ್ಮ ನಿಷ್ಠೆಯನ್ನು ಬದಲಿಸಲಿಲ್ಲ.

ಕರುನಾಡ ಇತಿಹಾಸದ ವ್ಯಂಗ್ಯವೆಂದರೆ ಕೆಲವೇ ದಿನಗಳ ಅಂತರದಲ್ಲಿ ಸಂಪೂರ್ಣ ವಿರುದ್ಧ ಅಭಿಪ್ರಾಯದ ರಾಜರು ಮೈಸೂರು ಸಂಸ್ಥಾನದ ಪೀಠವನ್ನು ಅಲಂಕರಿಸಿದ್ದು – ಟಿಪ್ಪು ಸುಲ್ತಾನ್ ಮತ್ತು ಎರಡನೆ ಕೃಷ್ಣರಾಜ ಒಡೆಯರ್. ವಸಾಹತುಶಾಹಿಯ ವಿರುದ್ಧ ಉಗ್ರ ದೇಶಪ್ರೇಮದಿಂದ ಹುಲಿಯಂತೆ ಘರ್ಜಿಸಿದ ಟಿಪ್ಪು ಒಂದೆಡೆಯಿದ್ದರೆ ಮತ್ತೊಂದೆಡೆ ವಸಾಹತುಶಾಹಿಯ ಅಂಗಿಯ ಚುಂಗಿಡಿದು ನೇತಾಡುತ್ತಿರುವ ದುರ್ಬಲ ಇಲಿ.

6 comments:

 1. By now there have been many articles exposing the ruling nature of Tippu Sultan, Now by knowing the nature of the ruler
  1. What is wrong if an alliance is made to protect the ethnic group who originally inhabited Mysore?
  2. Mysore was an independent state till Hyder Ali created a military coup, so what is wrong in making an alliance with British?
  3. Mysore rulers were among the top spot of getting respect from the British (Source poster posted in City Palace, Jaipur).
  I don't understand the need of the article, Moreover Tippu was killed by British only for name sake but this weak location of the fort was exposed to British by the Tippu's internal sources who were probably fed up with his administration.

  ReplyDelete
  Replies
  1. First of all this is not an article! This is translation of an english book titles "Making History". I think this explanation is enough for all your queries. i think further details in the book which will be published on weekly basis will probably answer your 3 questions.....

   Delete
 2. In Fact the write should publish the articles on Mysore rulers for their vision of building KRS, Kudhremukha Iron and Steel industries, Starting many universities to promote technical education.

  ReplyDelete
  Replies
  1. Since this is translation i should ask original author to write. But unfortunately original author is no more. Of course some mysore rulers have done good things but that will not change the facts of the history right? And more over for some bizzare reasons KRS, kudremukh industries, industries in bhadravathi was credited to Vishweswarayya not the mysore rulers!

   Delete
 3. Hyder Ali was the black cat. when Vijayanagara empire dismantled, adil shaahi and mysore were left. shivaji emerged from adil shahi and mysore also started to expand. the mautiry of mysore had reached to a point of leaving warfare which brings misery. But suddenly traitor in hyder ali rose and signed up with mughals who were descendents of ruthless genghis khan of mogolia and turkish invaders which is now playground of IS. Mughals renamed Karnataka Sangita to Hindustani and went on to convert everyone. Now tell us who was desh premi and which desh? apart from north indian plains hindi is alien in whole of north east or south of vindhyas. Karnataka ( south of vindhyas ) is the country which will be reclaimed from india in coming days and a very objective and irreligious democracy will be established.

  ReplyDelete
  Replies
  1. hyder ali signing up with mughals is deshdrohi and rani ammanni signing up with british is deshpremi?! Probably the discussion should continue after seeing the effects of british - mysore treaty in upcoming articles :-)

   Delete