Jan 22, 2016

ಮೇಕಿಂಗ್ ಹಿಸ್ಟರಿ: ನಿಗ್ರಹಕ್ಕಾಗಿ ಸಹಕಾರಿ ಒಪ್ಪಂದ!

saketh rajan
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್

ಟಿಪ್ಪು ಸಾಮ್ರಾಜ್ಯದ ಪತನದ ಎರಡು ತಿಂಗಳ ನಂತರ ಬ್ರಿಟೀಷರು ಮತ್ತು ಎರಡನೆ ಕೃಷ್ಣರಾಜ ಒಡೆಯರ್ ನಡುವೆ ಆದ ಹದಿನಾರು ಕಲಮುಗಳ ಒಪ್ಪಂದ ಸ್ವತಂತ್ರವಾಗಿದ್ದ ಕರ್ನಾಟಕವನ್ನು ವಸಾಹತುಶಾಹಿಯ ಸರಪಳಿಗಳಿಂದ ಬಂಧಿಸಿತು. ಈ ಒಪ್ಪಂದವು ನಿಜಾರ್ಥದಲ್ಲಿ ದಾಸ್ಯ ಮನೋಭಾವಕ್ಕೆ ಶರಣಾದುದನ್ನು ಸೂಚಿಸುತ್ತಿತ್ತು. ಹೆಸರೇ ಸೂಚಿಸುವಂತೆ ಈ ಒಪ್ಪಂದವು ಮೈಸೂರಿನ ಸ್ವತಂತ್ರವನ್ನು ಕಸಿದುಕೊಂಡು ಬ್ರಿಟೀಷರ ವಸಾಹತಿನ ಒಂದು ಹೆಚ್ಚುವರಿ ರಾಜ್ಯವಾಗಿ ಮಾಡಿತು. ಈ ಒಪ್ಪಂದದಲ್ಲಿನ ಪ್ರಮುಖಾಂಶಗಳ ಬಗ್ಗೆ ಗಮನ ಹರಿಸೋಣ.

ಎರಡನೇ ಕಲಮಿನ ಪ್ರಕಾರ ಸ್ವತಂತ್ರ ಸೇನೆಯನ್ನು ಕಟ್ಟುವ ಹಕ್ಕನ್ನು ಕಸಿಯಲಾಯಿತು. ಬ್ರಿಟೀಷರು ‘ಪ್ರಭುತ್ವದ ರಕ್ಷಣೆಗೆ ಮತ್ತು ಭದ್ರತೆಗೆ’ ಸೇನೆಯನ್ನು ನಿಯೋಜಿಸುತ್ತದೆ. ಒಂದೇ ಏಟಿನಲ್ಲಿ ಮೈಸೂರಿನ ಸ್ವತಂತ್ರವೂ ಹೋಯಿತು ಮತ್ತು ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ಶಕ್ತಿಹೀನವೂ ಆಯಿತು. ಬ್ರಿಟೀಷರ ಸೈನ್ಯವನ್ನು ಬೆಂಗಳೂರಿನ ಕಂಟೋನ್ ಮೆಂಟ್ ಪ್ರದೇಶದಲ್ಲಿ ಸ್ಥಾಪಿಸಲಾಯಿತು ಮತ್ತು ಈ ಜಾಗದಲ್ಲಿ ಮೈಸೂರು ಸರಕಾರದ ಆಡಳಿತವಿರದೆ ನೇರವಾಗಿ ಬ್ರಿಟೀಷರ ಆಡಳಿತವಿತ್ತು. ಆದರೂ ಮೈಸೂರಿಗೆ ಒಂದು ಪುಟ್ಟ ಸೇನೆಯನ್ನು ಬ್ರಿಟೀಷರ ಮೇಲ್ವಿಚಾರಣೆಯಲ್ಲಿ ಇಟ್ಟುಕೊಳ್ಳುವ ಭಿಕ್ಷೆ ಲಭಿಸಿತು; ಸಂಸ್ಥಾನದೊಳಗೆ ಕಾನೂನು ಸುವ್ಯವಸ್ಥೆಯನ್ನು ಕಾಪಿಡಲು ಮತ್ತು ಬ್ರಿಟೀಷರ ಇನ್ನಿತರೆ ಯುದ್ಧಗಳಿಗೆ ಸೈನಿಕರನ್ನು ಪೂರೈಸಲು.

“1807ರಲ್ಲಿ ಗವರ್ನರ್ ಜೆನರಲ್ ಸರ್ ಜಾರ್ಜ್ ಬಾರ್ಲವ್ ಈ ರೀತಿಯ ನಿರ್ಣಯ ಕೈಗೊಂಡರು….. ಮೈಸೂರಿನ ರಾಜ ಯುದ್ಧ ಮತ್ತು ಶಾಂತಿಯ ಸಮಯದಲ್ಲಿ ನಾಲ್ಕು ಸಾವಿರ ಕುದುರೆಗಳನ್ನು ತನ್ನ ಸ್ವಂತ ಖರ್ಚಿನಿಂದ ಸಾಕಬೇಕು. ಕಂಪನಿಯ ಅಧಿಕಾರಿಗಳು ಈ ವ್ಯವಸ್ಥೆಯನ್ನು ಆಗಾಗ್ಗೆ ಪರಿಶೀಲಿಸುತ್ತಾರೆ ಮತ್ತು ಅವರ ಮರ್ಜಿಯಲ್ಲಿ ಈ ಸಾಕಾಣಿಕೆ ಚಾಲ್ತಿಯಲ್ಲಿರುತ್ತದೆ……”  – ಲಷಿಂಗ್ ಟನ್, ಮದ್ರಾಸಿನ ಗವರ್ನರ್ (10).

ಮೈಸೂರಿನ ಹಣಕಾಸು ಒಪ್ಪಂದದ ಬಗ್ಗೆಯೂ ಅದೇ ಕಲಮಿನಲ್ಲಿ ವಿವರಿಸಲಾಗಿದೆ. ಅದರ ಪ್ರಕಾರ ಮುಂದಿನ ತಿಂಗಳಿನಿಂದಲೇ ವರುಷಕ್ಕೆ 24.5 ಲಕ್ಷ ರುಪಾಯಿಗಳನ್ನು ಹನ್ನೆರಡು ಕಂತುಗಳಲ್ಲಿ ಮೈಸೂರು ಸಂಸ್ಥಾನ ಕಕ್ಕಬೇಕು. 1896ರಲ್ಲಿ ಈ ಮೊತ್ತವನ್ನು 35 ಲಕ್ಷ ರುಪಾಯಿಗಳಿಗೆ ಏರಿಸಲಾಯಿತು ಮತ್ತು 1928ರಲ್ಲಿ ಮತ್ತೆ ಹಳೆಯ ಮೊತ್ತಕ್ಕೇ ಇಳಿಸಲಾಯಿತು. ಇಷ್ಟು ದೊಡ್ಡ ಖರ್ಚು ಮೈಸೂರು ಸಾಮ್ರಾಜ್ಯದ ಮೇಲುಂಟು ಮಾಡಿದ ಅನಾಹುತಗಳನ್ನು ಮೂರನೇ ಅಧ್ಯಾಯದ ಕೊನೆಯ ಪುಟಗಳಲ್ಲಿ ಚರ್ಚಿಸೋಣ. ಸದ್ಯಕ್ಕೆ ನೆನಪಿಡಬೇಕಾದ ವಿಷಯವೆಂದರೆ ಮುಂದಿನ ನೂರು ವರುಷಗಳ ಕಾಲ ಬ್ರಿಟೀಷರಿಗೆ ಕೊಡಬೇಕಾದ ಈ ಹಣ ಮೈಸೂರು ಸಂಸ್ಥಾನದ ಅತಿ ದೊಡ್ಡ ಖರ್ಚಿನ ಬಾಬತ್ತಾಗಿತ್ತು. 1809 – 10ರ ಸಮಯದಲ್ಲಿ ಮೈಸೂರು ಸಂಸ್ಥಾನದ ವಾರ್ಷಿಕ ಆದಾಯವಿದ್ದಿದ್ದು ಕೇವಲ 28,24,646 (11).

ಮುಂದಿನ ಕಲಮು ಮೈಸೂರನ್ನು ಬ್ರಿಟೀಷರ ಮುಂದಿನ ಆಕ್ರಮಣಕ್ಕೆ ಬೇಕಾದ ಭೌಗೋಳಿಕ ಮತ್ತು ವಾಣಿಜ್ಯಕ ಚಿಮ್ಮುಹಲಗೆಯನ್ನಾಗಿ ಮಾಡಿಬಿಟ್ಟಿತು. ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧ ನಡೆಯಬಹುದಾದ ಯಾವುದೇ ಆಕ್ರಮಣವನ್ನು ಮೈಸೂರಿನ ಭೂಗೋಳ, ಸೈನ್ಯ ಮತ್ತು ಆದಾಯ ತಡೆಯುವಂತೆ ಯೋಜನೆಗಳನ್ನು ರೂಪಿಸಲಾಯಿತು. ಒಡೆಯರ್ “ಸೈನಿಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಮತ್ತು ಅನಿರೀಕ್ಷಿತ ಯುದ್ಧಗಳಿಂದುಟಾಗುವ ಖರ್ಚನ್ನು ಭರಿಸಬೇಕು” ಎಂದು ಸ್ಪಷ್ಟವಾಗಿ ತಿಳಿಸಲಾಯಿತು.

ನಾಲ್ಕನೇ ಕಲಮು ಬ್ರಿಟೀಷರಿಗೆ ಆದಾಯ ತೆರಿಗೆಯ ಸಂಗ್ರಹ ಮತ್ತು ಎಲ್ಲಾ ರೀತಿಯ ಆರ್ಥಿಕ ವ್ಯವಹಾರಗಳನ್ನು ನಿಯಂತ್ರಿಸುವ ಹಕ್ಕನ್ನು ನೀಡಿತು. ಅಲ್ಲಿಗೆ ಮೈಸೂರಿನ ಆರ್ಥಿಕ ಸ್ವಾತಂತ್ರ್ಯವನ್ನೂ ಮೊಟಕುಗೊಳಿಸಲಾಯಿತು.

ಆರ್ಥಿಕ ಮತ್ತು ರಾಜಕೀಯ ಸಂಕಷ್ಟದ ಸಮಯದಲ್ಲಿ ಮೈಸೂರು ಸಂಸ್ಥಾನವನ್ನು ಭಾಗಶಃ ಅಥವಾ ಪೂರ್ಣವಾಗಿ ವಶಪಡಿಸಿಕೊಳ್ಳುವ ಅಧಿಕಾರವನ್ನು ಐದನೇ ಕಲಮು ನೀಡಿತು. ರಾಜ್ಯದ ಸ್ವಾಯತ್ತತೆ ಹೆಸರಿಗೆ ಮಾತ್ರ ಉಳಿಯಿತು. ಇದೇ ಕಲಮು ರಾಜನಿಗೆ ವಾರ್ಷಿಕ ಆದಾಯದ ಇಪ್ಪತ್ತು ಪರ್ಸೆಂಟಿನಷ್ಟು (ನಂತರದ ದಿನಗಳಲ್ಲಿ ಇದನ್ನು 5%ಗೆ ಇಳಿಸಲಾಯಿತು) ಮತ್ತು ವಾರ್ಷಿಕ 3 ಲಕ್ಷ ರುಪಾಯಿಗಳನ್ನು ನೀಡಿತು. ಸಾರ್ವಜನಿಕರ ಹಣ ರಾಜರ ಮನೆಯ ಎಲ್ಲಾ ಖರ್ಚುಗಳಿಗೆ ವಿನಿಯೋಗವಾಗುತ್ತಿದ್ದರಿಂದ ಈ ಕಲಮು ನೀಡಿದ ಪ್ರತ್ಯೇಕ ಮೊತ್ತ ರಾಜನ ಪಾಕೆಟ್ ಮನಿಯಾಗಿತ್ತು. ಇದೇ ರೀತಿ ಮೈಸೂರಿನ ದಿವಾನರಿಗೆ ನಿಯಮಿತ ಸಂಬಳದ ಜೊತೆಗೆ ಒಟ್ಟು ಆದಾಯದ 1% ಮೊತ್ತವನ್ನು ನೀಡಲಾಗುತ್ತಿತ್ತು. ಈ ರೀತಿಯಾಗಿ ಮೈಸೂರಿನ ರಾಜ ಮತ್ತವನ ಪ್ರಧಾನ ಮಂತ್ರಿ ವಸಾಹತುಶಾಹಿಯ ನಾಚಿಕೆಗೆಟ್ಟ ಮಧ್ಯವರ್ತಿಗಳಾದರು, ಮೈಸೂರಿನ ಜನಸಮೂಹದ ಶ್ರಮದ ಹಣದಲ್ಲಿ ಐಷಾರಾಮಿ ಜೀವನ ನಡೆಸುವವರಾದರು.

ಒಪ್ಪಂದದ ಹದಿಮೂರನೇ ಕಲಮು ಮೈಸೂರು ರಾಜ್ಯವನ್ನು ಬ್ರಿಟೀಷ್ ಬಂಡವಾಳದ ಮಾರುಕಟ್ಟೆಯನ್ನಾಗಿ ಪರಿವರ್ತಿಸಿತು.

ಈ ಒಪ್ಪಂದವು ಬ್ರಿಟೀಷ್ ಸರಕಾರ ವ್ಯಕ್ತಿಯೊಬ್ಬನನ್ನು ಮೈಸೂರು ಸಂಸ್ಥಾನದ ಏಜೆಂಟನನ್ನಾಗಿ ಬಲವಂತದಿಂದ ನೇಮಿಸಿತು. ವಸಾಹತುಶಾಹಿಯ ಕಾಣದ ಕೈಯಾದ ಈ ಏಜೆಂಟನಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇನೇ ಸಾಮ್ರಾಜ್ಯದೊಳಗೆ ನಡೆಯುವ ಪ್ರತೀ ಸಂಗತಿಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಮೇಲ್ವಿಚಾರಿಸಿ, ‘ಸಲಹೆ’ ನೀಡುವ ಅಧಿಕಾರವಿತ್ತು. ರಾಜನ ವೈಯಕ್ತಿಕ ವಿಷಯದಲ್ಲಿಯೂ ‘ಸಲಹೆ’ ನೀಡಬಹುದಾಗಿತ್ತು ಮತ್ತು ಈ ಎಲ್ಲಾ ಸಲಹೆಗಳನ್ನೂ ರಾಜ ಒಂದು ನಗುವಿನೊಂದಿಗೆ ತಲೆದೂಗಿ ಒಪ್ಪಿ ಜಾರಿಗೊಳಿಸಬೇಕಿತ್ತು. 14ನೇ ಕಲಮಿನ ಪ್ರಕಾರ “ಅಗತ್ಯವಿರುವಾಗ ಕಂಪನಿ ಸರಕಾರ ರಾಜನ ವ್ಯವಹಾರ, ನ್ಯಾಯಪಾಲನೆ, ವಹಿವಾಟು ವಿಸ್ತರಣೆ, ಕೃಷಿ, ರಫ್ತು – ಆಮದು, ಕೈಗಾರಿಕೆಗೆ ನೀಡಬೇಕಾದ ಪ್ರೋತ್ಸಾಹ ಮತ್ತು ಇನ್ನಿತರೆ ವಿಷಯಗಳ ಬಗ್ಗೆ ನಿರ್ಧಾರಗಳನ್ನು ತಿಳಿಸುತ್ತದೆ. ಕಂಪನಿ ಸರ್ಕಾರದ ಎಲ್ಲಾ ನಿರ್ಧಾರಗಳನ್ನೂ ಗಮನವಿಟ್ಟು ಆಲಿಸಿ ಪಾಲಿಸುತ್ತೇನೆಂದು” ಮಹಾರಾಜ ಪ್ರಮಾಣ ಮಾಡಬೇಕಿತ್ತು.

ಈ ಒಪ್ಪಂದದ ಬಗ್ಗೆ ಬರೆಯುತ್ತಾ, ವೆಲ್ಲೆಸ್ಲಿ: “ಈ ಒಪ್ಪಂದವನ್ನು ರಚಿಸುವಾಗ ಮೈಸೂರು ಸರಕಾರ ಮತ್ತು ಕಂಪನಿಯ ನಡುವೆ ಅಸಮತೋಲನದ ಉದ್ದಿಶ್ಯಗಳಿರಬೇಕು ಎನ್ನುವುದು ನನ್ನ ನಿರ್ಧಾರವಾಗಿತ್ತು. ಮತ್ತು ರಾಜ ಉತ್ತರ ದಿಕ್ಕನ್ನು ನಮ್ಮ ಸಶಕ್ತ ಬೇಲಿಯನ್ನಾಗಿ ಕೊಡುವಂತೆ ಮಾಡುವುದಾಗಿತ್ತು.

ಈ ದೃಷ್ಟಿಕೋನದಿಂದ ರಾಜನ ದೇಶದ ರಕ್ಷಣೆಗಾಗಿ ವಾರ್ಷಿಕ ಏಳು ಲಕ್ಷ ಪಗೋಡಾಗಳನ್ನು ಪಡೆಯುವ ಬಗ್ಗೆ ಚರ್ಚೆ ನಡೆಸಿದೆ. ದುರದೃಷ್ಟವಶಾತ್ ಎರಡೆರಡು ಸರಕಾರ ಮತ್ತು ಆಡಳಿತಗಾರರಲ್ಲಿನ ದ್ವಂದ್ವಗಳು ಔಧ್, ಕರ್ನಾಟಿಕ್ ಮತ್ತು ತಂಜಾವೂರಿನಲ್ಲಿ ಅಸ್ತಿತ್ವಕ್ಕೆ ಬಂದು ಎಲ್ಲರಿಗೂ ಮುಜುಗರ ಉಂಟುಮಾಡಿದ್ದನ್ನು ನೆನಪಿಗೆ ತಂದುಕೊಂಡು ಮೈಸೂರಿನ ಆಂತರಿಕ ವ್ಯವಹಾರವನ್ನು ನಿಯಂತ್ರಿಸುವ ಸರ್ವ – ಶಕ್ತ ಅಧಿಕಾರವನ್ನು ಕಂಪನಿಗೆ ನೀಡಬೇಕೆಂದು ದೃಡ ನಿಶ್ಚಯ ಮಾಡಿದೆ. ಮೈಸೂರಿನ ಮೇಲೆ ಅಗತ್ಯ ಬಿದ್ದಾಗ ನೇರ ಆಡಳಿತ ನಡೆಸುವ ಹಕ್ಕನ್ನು ಉಳಿಸಿಕೊಳ್ಳಬೇಕು. ಯುದ್ಧದ ಸಮಯದಲ್ಲಿ ಮತ್ತು ಕಂಪನಿಯ ವಿರುದ್ಧ ದ್ರೋಹ ನಡೆದಲ್ಲಿ ನಿಗದಿತ ಮೊತ್ತಕ್ಕಿಂತ ಅಧಿಕ ಮೊತ್ತವನ್ನು ಪಡೆಯಬಹುದಾಗಿದೆ.

ಈ ವ್ಯವಸ್ಥೆಯಿಂದ ರಾಜನ ಸಂಸ್ಥಾನದ ಎಲ್ಲಾ ಸಂಪನ್ಮೂಲಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂದು ನನ್ನ ನಂಬುಗೆ…. ನನ್ನ ದೃಷ್ಟಿಯಲ್ಲಿದು ಅತ್ಯಂತ ಸರಳ, ಮುಕ್ತ ಮತ್ತು ಚಾಣಾಕ್ಷ ನಡೆ. ರಾಜನನ್ನು ಪಟ್ಟಕ್ಕೇರಿಸುವ ಸಂದರ್ಭದಲ್ಲಿ ಕಂಪನಿಯ ಮೇಲಿನ ಆತನ ಅವಲಂಬನೆಯನ್ನು ಸ್ಪಷ್ಟವಾಗಿ ತಿಳಿಯಪಡಿಸುವುದು ಭವಿಷ್ಯದಲ್ಲಿನ ಅನುಮಾನ ಮತ್ತು ಅನವಶ್ಯಕ ಚರ್ಚೆಗಳಿಗಿಂತ ಉತ್ತಮ” (12).

ಇದು ಅವತ್ತಿನ ಒಪ್ಪಂದದ ಬಹುಮುಖ್ಯ ಅಂಶವಾಗಿತ್ತು, ಉಳಿದೆಲ್ಲ ಕಲಮುಗಳು ಈ ಶರತ್ತುಗಳ ಆಧಾರದ ಮೇಲೆ ರೂಪಿಸಲಾಗಿದ್ದ ಅಲ್ಪ ಸ್ವಲ್ಪ ಬದಲಾವಣೆಗಳಷ್ಟೇ. ಕೀರಿಟಧಾರಿ ಹುಳುವಿಗೆ ಮುಲುಕಲೂ ಆಗದಷ್ಟು ಸ್ಥಳವಷ್ಟೇ ಕೊನೆಗೆ ಉಳಿದಿದ್ದು. ಕರ್ನಾಟಕದ ಇತಿಹಾಸದಲ್ಲಿಯೇ ಯಾವೊಬ್ಬ ರಾಜನೂ ತನ್ನ ಅಧಿಕಾರದ ವ್ಯಾಪ್ತಿಯನ್ನು ಇಷ್ಟೊಂದು ಶರತ್ತುಗಳಿಗೆ ಒಪ್ಪಿಸಿರಲಿಲ್ಲ. ಮೈಸೂರಿನ ಈ ಕೈಗೊಂಬೆಗಳು ತಮ್ಮ ಕೆಲಸವನ್ನು ‘ನಿಷ್ಟೆಯಿಂದ’ ನಿರ್ವಹಿಸಿದರು. ಸಕಲ ಅವಮಾನಗಳನ್ನೂ ನುಂಗಿಕೊಂಡು. ಈ ರಾಜರು ಬ್ರಿಟೀಷರ ಮುಖಸ್ತುತಿ ಮಾಡಿದ್ದ ರೀತಿಯನ್ನು ನಂತರ ನೋಡೋಣ. ಕೊಳೆಯಲಾರಂಭಿಸಿದ್ದ ಫ್ಯೂಡಲ್ ಸಮುಚ್ಛಯದಿಂದ ಬಂದ ಈ ಸೋತ ರಾಜರಿಗೆ ಅಚಾನಕ್ಕಾಗಿ ನೆನಪಾಗಬಹುದಾಗಿದ್ದ ‘ಫ್ಯೂಡಲ್ ಪ್ರತಿಷ್ಟೆಯ’ ನೆವವೂ ಬ್ರಿಟೀಷರ ವಿರುದ್ಧ ಪ್ರಚೋದಿಸಲಿಲ್ಲ.

ಈ ಒಪ್ಪಂದದಲ್ಲಿದ್ದ ಅವಮಾನಕಾರಿ ಅಂಶಗಳಿಂದ ಸಮಾಧಾನಗೊಳ್ಳದ ಬ್ರಿಟೀಷರು 1807ರಲ್ಲಿ ಪೂರಕ ಒಪ್ಪಂದದ ಮೂಲಕ ಪಟ್ಟನ್ನು ಮತ್ತಷ್ಟು ಬಿಗಿಗೊಳಿಸಿದರು (13).

ಕರ್ನಾಟಕವನ್ನು ವಸಾಹತು ಶಕ್ತಿಗಳಿಗೆ ಒಪ್ಪಿಸಲು ಈ ಪೂರಕ ಒಪ್ಪಂದದ ಪಾತ್ರ ಹಿರಿದು. ಹತ್ತು ಜಿಲ್ಲೆಯ ಸಂಸ್ಥಾನ ಹೊಂದಿದ್ದ ಮೈಸೂರು ಒಡೆಯರ್ ಗಳ ಜೊತೆಗೆ ಬ್ರಿಟೀಷರು ಇನ್ನೂ ಹಲವು ರಾಜರು, ಪಾಳೇಗಾರರೊಂದಿಗೆ ಇದೇ ತರಹದ ಹೊಂದಾಣಿಕೆಯನ್ನು ಮಾಡಿಕೊಂಡರು. 

1798ರಲ್ಲಿ ಬ್ರಿಟೀಷರು ಹೈದರಾಬಾದಿನ ನಿಜಾಮರೊಡನೆ ಸಹಕಾರಿ ಒಪ್ಪಂದಕ್ಕೆ ಸಹಿ ಹಾಕಿದರು; ಬ್ರಿಟೀಷ್ ಸೈನ್ಯದ ಖರ್ಚಿಗೆ ವಾರ್ಷಿಕ ಹದಿನಾಲ್ಕು ಲಕ್ಷ ರುಪಾಯಿಗಳನ್ನು ಕಪ್ಪವಾಗಿ ನೀಡುವ ಅಂಶ ಒಪ್ಪಂದದಲ್ಲಿತ್ತು (14). ಕಂಪನಿಯ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಸ್ವತಃ ಗವರ್ನರ್ ಜೆನರಲ್ ತಿಳಿಸಿದಂತೆ ಮೈಸೂರಿನ ಒಡೆಯರ್ ಜೊತೆ ಮಾಡಿಕೊಂಡ ಒಪ್ಪಂದ ನಿಜಾಮರು ಸಹಿ ಮಾಡಿದ ಒಪ್ಪಂದದ ಸ್ವಲ್ಪ ಬದಲಾದ ರೂಪವಾಗಿತ್ತಷ್ಟೆ (15). ಬೀದರ್, ರಾಯಚೂರು ಮತ್ತು ಗುಲ್ಬರ್ಗಾ ವಸಾಹತುಶಾಹಿಯ ಪರೋಕ್ಷ ಆಳ್ವಿಕೆಗೆ ಒಳಪಟ್ಟಿತು.

ಬೆಳಗಾವಿ, ಧಾರವಾಡ ಮತ್ತು ಉತ್ತರ ಕನ್ನಡದ ಭಾಗಗಳ ಆಳ್ವಿಕೆ ನಡೆಸುತ್ತಿದ್ದ ಕಿತ್ತೂರಿನ ದೇಸಾಯಿ ಕೂಡ ಈ ಸಹಕಾರಿ ಒಪ್ಪಂದಕ್ಕೆ ಸಹಿ ಹಾಕಿದವರಲ್ಲಿ ಒಬ್ಬ. 1792ರಲ್ಲಿ ಪೇಶ್ವೆಗಳಿಗೆ ಎಪ್ಪತ್ತು ಸಾವಿರ ರುಪಾಯಿಗಳನ್ನು ಕಾಣ್ಕೆಯಾಗಿ ನೀಡುತ್ತಿದ್ದ ದೇಸಾಯಿ 1818ರಲ್ಲಿ ಬ್ರಿಟೀಷರಿಗೆ 1,70,000 ರುಪಾಯಿಗಳನ್ನು ನೀಡಲು ಒಪ್ಪಿದ. ಆಗ ದೇಸಾಯಿ ಸಂಸ್ಥಾನದ ವಾರ್ಷಿಕ ಆದಾಯ ನಾಲ್ಕು ಲಕ್ಷವಿತ್ತು (16).

ವಿವಿಧ ಪಾಳೇಗಾರರು ಹಾಗು ದೇಶಗತಿಗಳು ವಿದೇಶಿ ಆಳ್ವಿಕೆಯ ಮುಂದೆ ಸಾಲುಗಟ್ಟಿ ನಿಂತು ತಮ್ಮ ಚಿಕ್ಕಪುಟ್ಟ ಆದರ್ಶಗಳನ್ನೆಲ್ಲ ಮೂಟೆಕಟ್ಟಿಟ್ಟು ಇದೇ ರೀತಿಯ ಒಪ್ಪಂದಗಳಿಗೆ ನಾಮುಂದು ತಾಮುಂದು ಎಂಬಂತೆ ಸಹಿ ಮಾಡಿದರು. ಕರ್ನಾಟಕ ದೇಶ ಗುಲಾಮತ್ವವನ್ನಪ್ಪಿಕೊಳ್ಳುವುದಕ್ಕೆ ಈ ಸಹಕಾರಿ ಒಪ್ಪಂದಗಳು ಕೀಲಿಕೈ ಆಯಿತು.


2 comments:

  1. Those who can not remember the past are condemned to repeat it.
    Really a good effort...

    ReplyDelete