Jan 29, 2016

ಮೇಕಿಂಗ್ ಹಿಸ್ಟರಿ: ಕಂಪನಿಯ ಹೊಗಳುಭಟ್ಟ ಮಕ್ಕಳು

making history
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಬ್ರಿಟೀಷರೆಡೆಗೆ ಒಡೆಯರ್ ಕುಟುಂಬ ತೋರಿದ ನಿಷ್ಠೆ ರಾಜವಂಶದ ಆಡಳಿತದ ಉಳಿದ ಅವಧಿಯಲ್ಲೂ ಬದಲಾಗಲಿಲ್ಲ. ಸಹಕಾರಿ ಒಪ್ಪಂದಕ್ಕೆ ಸಹಿ ಹಾಕಿದ ಕೆಲವು ದಿನಗಳ ನಂತರ ಲಕ್ಷ್ಮಿ ಅಮ್ಮಣ್ಣಿ ಮತ್ತವರ ಅತ್ತೆ ದೇವಜಮ್ಮಣ್ಣಿ ಗವರ್ನರ್ ಜೆನರಲ್ ಗೆ ಕೃತಜ್ಞತಾಪತ್ರ ಬರೆಯುತ್ತಾರೆ. “ನಮ್ಮ ಮಕ್ಕಳಿಗೆ ಮೈಸೂರು, ನಗರ ಮತ್ತು ಚಿತ್ರದುರ್ಗವನ್ನು ನೀವು ದಯಪಾಲಿಸಿರುವುದು ಮತ್ತು ಪೂರ್ಣಯ್ಯನವರನ್ನು ದಿವಾನರನ್ನಾಗಿ ನೇಮಿಸಿರುವುದು ನಮಗೆ ಅತೀವ ಸಂತಸವನ್ನುಂಟುಮಾಡಿದೆ. ನಮ್ಮ ಸರಕಾರ ಅಧಿಕಾರವಂಚಿತವಾಗಿ ನಲವತ್ತು ವರುಷಗಳಾಗಿತ್ತು. ಈಗ ನಮ್ಮ ಮಕ್ಕಳಿಗೆ ಸರಕಾರದಲ್ಲಿರುವ ಅವಕಾಶವನ್ನು ನೀಡುವ ಕೃಪೆ ತೋರಿದ್ದೀರಿ ಮತ್ತು ದಿವಾನರಾಗಿ ಪೂರ್ಣಯ್ಯನವರನ್ನು ನೇಮಿಸಿದ್ದೀರಿ. ಸೂರ್ಯ ಚಂದ್ರರಿರುವವರೆಗೆ ನಾವು ನಿಮಗೆ ಎದುರಾಡುವುದಿಲ್ಲ. ಯಾವಾಗಲೂ ನಾವು ನಿಮ್ಮ ರಕ್ಷಣೆಯಲ್ಲಿರುತ್ತೀವಿ, ಆಜ್ಞಾಪಾಲಕರಾಗಿರುತ್ತೀವಿ. ನೀವು ನಮಗೆ ಮಾಡಿದ ಈ ಸಹಾಯದ ನೆನಪು ಮುಂದಿನ ಎಲ್ಲಾ ತಲೆಮಾರಿನವರಲ್ಲೂ ಇರುತ್ತದೆ. ನಿಮ್ಮ ಸರಕಾರದ ಮೇಲಿನ ನಮ್ಮ ಅವಲಂಬನೆಯನ್ನು ನಮ್ಮ ವಂಶಾವಳಿಯಲ್ಲಾರೂ ಮರೆಯುವುದಿಲ್ಲ”. (17)

ಮೈಸೂರು ಮತ್ತು ಕರ್ನಾಟಕದಲ್ಲಿ ಗೆರಿಲ್ಲಾ ಯುದ್ಧದ ಲಕ್ಷಣಗಳು 1831ರಲ್ಲಿ ಕಾಣಿಸಿಕೊಂಡಾಗ ಮದ್ರಾಸಿನ ಗವರ್ನರ್ ಲಷಿಂಗ್ಟನ್ ಗೆ ರಾಜ ಪತ್ರ ಬರೆಯುತ್ತಾರೆ: “ನಿಮ್ಮ ದೃಡ ನಿಶ್ಚಯ ಮತ್ತು ಕಾರುಣ್ಯದಿಂದ ನನಗೆ ಅತ್ಯಂತ ಉನ್ನತ ಪದವಿ ಸಿಕ್ಕಿದೆ; ನಾನು ಹುಟ್ಟಿದ ಶ್ರೀರಂಗಪಟ್ಟಣದ ಮುಖ್ಯಸ್ಥನಾಗುವ ಅವಕಾಶ ಲಭಿಸಿದೆ. ದಯಾಮಯನಾದ ದೇವರು ನಿಮ್ಮ ಪ್ರೀತಿ – ಕರುಣೆಯ ನೆರಳನ್ನು ನಮ್ಮ ಮೇಲೆ ಸದಾ ಇರುವಂತೆ ನೋಡಿಕೊಳ್ಳಲಿ. ನಿಮ್ಮ ನಿರ್ದೇಶನದ ಪ್ರಕಾರವೇ ಶ್ರೀರಂಗಪಟ್ಟಣದ ವ್ಯವಹಾರಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ನನ್ನನ್ನು ಬೆಳೆಸಿ ಪೋಷಿಸಿ ರಕ್ಷಿಸುತ್ತಿರುವವರು ನೀವು. ನನ್ನಾಸೆಗಳು ಈಡೇರಲು ನಿಮ್ಮ ಕರುಣೆಯನ್ನು ನಿರೀಕ್ಷಿಸುವೆ. ನೀವು ನಮ್ಮೆಡೆಗೆ ತೋರಿದ ಕೃಪೆಗಳಲ್ಲಿ ಹಾಲಿ ರೆಸೆಡೆಂಟರ ನೇಮಕ ಪ್ರಮುಖವಾದುದು. ಅತ್ಯಂತ ಅರ್ಹರಾದ ಈ ರೆಸಿಡೆಂಟರು ತಮ್ಮ ನ್ಯಾಯಪರತೆಯ ಸಲಹೆಗಳಿಂದ ನಮ್ಮ ಸರಕಾರದ ವ್ಯವಹಾರಗಳನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುತ್ತಾರೆ. ನನ್ನ ವ್ಯವಹಾರದ ನಿರ್ವಹಣೆಯಲ್ಲಿ ಮತ್ತು ನನ್ನ ಏಳಿಗೆಯಲ್ಲಿ ರೆಸಿಡೆಂಟರು ವಹಿಸುವ ಪಾತ್ರವನ್ನು ಲೇಖನಿಯಿಂದಾಗಲೀ, ಮಾತಿನಿಂದಾಗಲೀ ವರ್ಣಿಸುವುದು ಅಸಾಧ್ಯ. ನಿಮಗೆ ಸರಿಯಾದ ರೀತಿಯಿಂದ ಧನ್ಯವಾದಗಳನ್ನೇಳುವುದೂ ನನಗೆ ಶಕ್ಯವಿಲ್ಲ.

ಮತ್ತಿನ್ನೇನು ಹೇಳಲಿ” (18)

ಮತ್ತೇನೂ ಬೇಡ! ಅಯ್ಯೋ ವಿಧಿಯೇ! ಹೇಳುವುದಕ್ಕೇನು ಉಳಿದಿದೆ?

ಅದೇ ವರುಷ ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆಯ ನೆಪವೊಡ್ಡಿ ಬ್ರಿಟೀಷರು ಮೈಸೂರಿನ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಂಡರು. ಬ್ರಿಟೀಷ್ ಸರಕಾರದ ಈ ನಿರ್ಧಾರವನ್ನು ಕೇಳಿ ಬೇಸರಗೊಂಡ ರಾಜ ಕ್ಷೀಣ ಅಳುವಿನ ಮೂಲಕ ಅಸಹನೆ ತೋರಿದ; ರಾಜನ ಪ್ರತಿಕ್ರಿಯೆಯನ್ನು ಫೋರ್ಟ್ ಸೇಂಟ್ ಜಾರ್ಜಿಗೆ ಬರೆದ ಪತ್ರದಲ್ಲಿ ರೆಸೆಡೆಂಟ್ ಕ್ಯಾರಾಮೇಯರ್ ವಿವರಿಸುತ್ತಾ “……ನಿನ್ನೆ ಸಂಜೆ ರಾಜನ ಜೊತೆ ಚರ್ಚೆ ನಡೆಸಿದೆ…..ರಾಜನ ಸುತ್ತ ಅವನ ಕುಟುಂಬದವರಿದ್ದರು – ಮಾನಸಿಕವಾಗಿ ಜರ್ಜರಿತರಾಗಿದ್ದರು. ಸಂಧಾನ ನಡೆಸಲು ರಾಜ ನನ್ನ ಸಹಾಯ ಕೇಳಿದ. ಸಾಮ್ರಾಜ್ಯದಾದ್ಯಂತ ರಾಜನ ವ್ಯಕ್ತಿತ್ವಕ್ಕೆ ಅಪಮಾನವುಂಟಾಗುವುದನ್ನು ತಡೆಯುವುದು ಆತನ ಪ್ರಮುಖ ಉದ್ದೇಶವಾಗಿತ್ತು. ….. ಇಡೀ ಮೈಸೂರು ಸಂಸ್ಥಾನವನ್ನು ನೇರ ಆಡಳಿತಕ್ಕೆ ಒಳಪಡಿಸುವ ಗವರ್ನರ್ ಜೆನರಲ್ ನ ನಿರ್ಧಾರದಲ್ಲಿ ರವಷ್ಟು ಬದಲಾವಣೆ ಮಾಡಬೇಕೆನ್ನುವುದು ರಾಜನ ಕೋರಿಕೆಯಾಗಿತ್ತು. ಮೈಸೂರಿನ ಎಂಟು ಗ್ರಾಮಗಳನ್ನು ಬಿಟ್ಟುಕೊಟ್ಟರೆ ಸಾಕು ನಾನು ‘ರಾಜ’ನಾಗಿಯೇ ಉಳಿಯುತ್ತೇನೆ ಎಂಬುದಾತನ ಕೋರಿಕೆ”. (19)

ತನ್ನ ವಯಸ್ಸಾದ ಮೂಳೆಗಳಿಗೆ ಕಚಗುಳಿ ಇಟ್ಟುಕೊಂಡು ನಗುತ್ತಾ ವೆಲ್ಲೆಸ್ಲಿ ಮರಣಗುಂಡಿಯೊಳಗೆ ಮಗ್ಗಲು ಬದಲಿಸಿರಬೇಕು. ತುಣುಕು ಚೂರಿಗೆ ಅರ್ಹನೆಂದು ಸ್ವತಃ ನಂಬಿದ್ದ ರಾಜನಿಗೆ ಪೂರ್ತಿ ಪೌಂಡ್ ಬ್ರೆಡ್ಡೇ ಲಭಿಸಿತ್ತು!

ಸಹಕಾರಿ ಒಪ್ಪಂದಕ್ಕೆ ಸಹಿ ಹಾಕಿದಾಗ ರಾಜನಿನ್ನೂ ಅಂಬೆಗಾಲಿಡುತ್ತಿದ್ದ ಹಸುಗೂಸು. ಈಗ ಮೂವತ್ತೈದು ವರ್ಷದ ಗಂಡಸು. ಮೂರು ವಾರದ ನಂತರ ಈ ಕೈಗೊಂಬೆ ರಾಜ ಗವರ್ನರ್ ಜೆನರಲ್ ವಿಲಿಯಂ ಬೆಂಟಿಕ್ ಗೆ ಒಂದು ಪತ್ರ ಬರೆಯುತ್ತಾನೆ. “ನನ್ನನ್ನು ಎತ್ತರಕ್ಕೇರಿಸುವ ಸಾಮರ್ಥ್ಯವಿರುವ ನಿಮ್ಮ ಅಮೂಲ್ಯ ಸಲಹೆಗಳಿಗಾಗಿ ಎದುರು ನೋಡುತ್ತಿದ್ದೀನಿ. ಕಾರಣ ನನ್ನನ್ನು ಸಾಕಿ ರಕ್ಷಿಸಿ ಪೋಷಿಸಿದ ಘನ ಸರಕಾರಕ್ಕೆ ನನ್ನ ಜೀವ ಮುಡಿಪು……

ಸೋಲರಿಯದ ಬ್ರಿಟೀಷ್ ಸರಕಾರದ ಕಾಂತಿಯಿಂದ ಹೈದರಾಲಿ ಎಂಬ ಶಕ್ತ ನಕ್ಷತ್ರ ಮುಳುಗಲಾರಂಭಿಸಿದಾಗಷ್ಟೇ ನನ್ನ ಮನೆಯ ಮೇಲೆ ಏಳಿಗೆಯ ಸೂರ್ಯೋದಯವಾಗಿದ್ದು; ಸರಕಾರದ ಕೃಪೆಯ ಅಂಚಿನಿಂದ.

ಆ ಸಂದರ್ಭದಲ್ಲಿ ಘನ ಸರಕಾರ ಈ ದಿಕ್ಕುಗೆಟ್ಟ ಕುಟುಂಬಕ್ಕೆ ಜೀವ ಕೊಟ್ಟು ಶಕ್ತಿ ನೀಡಿತು. ಪ್ರಾರ್ಥಿಸುವುದರ ಹೊರತಾಗಿ ನಮ್ಮ ಕುಟುಂಬ ಬ್ರಿಟೀಷ್ ಸರಕಾರಕ್ಕೆ ಯಾವ ಸೇವೆಯನ್ನೂ ನೀಡಲಾಗಲಿಲ್ಲ. ಯುದ್ಧದಲ್ಲೂ ಭಾಗಿಯಾಗಲಿಲ್ಲ. ಆಕ್ರಮಿಸಿದ ರಾಜ್ಯವನ್ನಾಳುವ ಹಕ್ಕು ಸರಕಾರದ್ದು. ಏನೇನೂ ಅಲ್ಲದ ನನ್ನನ್ನು ಕಂಪನಿಯು ಮಗನಂತೆ ಕಂಡಿತು….. ಈ ರಾಜ್ಯದ ಪೀಠದ ಮೇಲೆ ನನ್ನನ್ನು ಕುಳ್ಳಿರಿಸಿದರು. ನಾನಿನ್ನೂ ಮಗುವಾಗಿದ್ದಾಗಲೇ ಪಿತೃ ವಾತ್ಸಲ್ಯದಿಂದ ನನಗೀ ಸ್ಥಾನ ನೀಡಿದರು.

ಕಂಪನಿ ಸರಕಾರದ ದತ್ತು ಪುತ್ರ ನಾನೆಂದು ಎಣಿಸಿದ್ದೇನೆ.

ನನ್ನ ನಿಷ್ಠೆಭರಿತ ಸೇವೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ. ಶಕ್ತಿಯುತ ಸರಕಾರಕ್ಕೆ ನನ್ನ ನಿಷ್ಠೆಯನ್ನು ತೋರಿಸಿ ನಿಮ್ಮ ಕರುಣೆ ಭವಿಷ್ಯದಲ್ಲೂ ಮುಂದುವರೆಯಲಿ ಎಂದು ಆಶಿಸುತ್ತೇನೆಯೇ ಹೊರತು ಉಳಿದ ರಾಜರಂತೆ ಸಾಮ್ರಾಜ್ಯವನ್ನು ವಿಸ್ತರಿಸುವ, ಸಂಪತ್ತೆಚ್ಚಿಸಿಕೊಳ್ಳುವ ಆಸೆಗಳು ನನಗಿಲ್ಲ.

…….ನನ್ನ ಬಾಲ್ಯದ ಸಮಯದಲ್ಲಿದ್ದ ‘ಗೌರವ’ವನ್ನು, ಅಸಹಾಯಕ ಪರಿಸ್ಥಿಯನ್ನು ಈಗ ವರುಷಗಳ ನಂತರ ಪ್ರಬುದ್ಧತೆಯ ದೃಷ್ಟಿಯಿಂದ ನೆನಪಿಸಿಕೊಂಡಾಗ ನಾಚಿಕೆಯಾಗುತ್ತದೆ. ದುಃಖಭರಿತ ಆತ್ಮ ಅಸ್ತಿತ್ವದಲ್ಲಿರುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದೇ ಲೇಸು. ದೈವಾಂಶಸಂಭೂತರಾದ ದೊರೆಯ ದೃಷ್ಟಿ ನನ್ನ ಮೇಲೆ ಬಿದ್ದು ನನ್ನ ವಿಧಿಯನ್ನೇ ಬದಲಿಸಿಬಿಟ್ಟಿತು. ನಿರ್ಗತಿಕನ ಮೇಲೆ ನಿಮ್ಮ ಕೃಪಾ ದೃಷ್ಟಿ ಬಿದ್ದರೆ ಅವನ ಅವಶ್ಯಕತೆಗಳೆಲ್ಲವೂ ಸಾಕೆನ್ನುವವರೆಗೆ ಪೂರೈಸುತ್ತದೆ, ಅವನ ದೌರ್ಬಲ್ಯಗಳೇ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ದೊರೆಯ ಒಂದು ತೀಕ್ಷ್ಣದೃಷ್ಟಿಗೆ ತಾಮ್ರದಂತಿರುವ ನನ್ನನ್ನು ಶುದ್ಧ ಚಿನ್ನವನ್ನಾಗಿ ಪರಿವರ್ತಿಸುವ ಶಕ್ತಿಯಿದೆ.” (20)

ಇಷ್ಟು ಮಾತುಗಳನ್ನು ಲೇಖನಿಯಿಂದ ಹರಿಯಬಿಟ್ಟ ವಸಾಹತುಶಾಹಿಯ ಮಧ್ಯವರ್ತಿ ಕೊನೆಗೆ ವಿಷಯಕ್ಕೆ ಬಂದ. “ಈ ಸಂದರ್ಭದಲ್ಲಿ ನನ್ನ ಕೋರಿಕೆ ಮತ್ತು ಮೊದಲ ಆಸೆಯನ್ನು ನಿಮ್ಮಲ್ಲಿ ಹೇಳಬಯಸುತ್ತೇನೆ…..ಈ ಸರಕಾರದ ಬಗ್ಗೆ ನೀವು ಮಾಡಿರುವ ಹೊಸ ಯೋಜನೆಯಲ್ಲಿ ನನ್ನ ಹೆಸರಾಗಲೀ, ಕುಟುಂಬದ ಪ್ರತಿಷ್ಟೆಯಾಗಲಿ ಪ್ರಸ್ತಾಪವಾಗಿಲ್ಲ. ಗೌರವ ಮತ್ತು ಪ್ರತಿಷ್ಠೆಗೆ ಮುಕ್ಕಾಗುವುದು ಜೀವ ಕಳೆದುಕೊಳ್ಳುವುದಕ್ಕಿಂತ ಹೆಚ್ಚಿನ ಭೀತಿ ಮೂಡಿಸುತ್ತದೆ. ದೊರೆಯಲ್ಲಿ ನನ್ನ ಕೋರಿಕೆಯೆಂದರೆ ಹೊಸ ನೀತಿಯಲ್ಲಿ ನನ್ನ ಹೆಸರು ಮುಂದುವರೆಸಬೇಕು ಮತ್ತು ಪ್ರತಿಷ್ಟೆಯನ್ನು ಕಾಪಿಡಬೇಕು. ನನ್ನ ಬಹುತೇಕ ವ್ಯವಹಾರಗಳು ಮೈಸೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ನಡೆಯುತ್ತಾದ್ದರಿಂದ ಆ ತಾಲ್ಲೂಕಿನ ಆಳ್ವಿಕೆ ಕೈತಪ್ಪಿಹೋದರೆ ಕಷ್ಟವಾಗುತ್ತದೆ.” (21)

ಮಂಡಿಯೂರಿ ಬೇಡಿಕೊಂಡಂತಿದ್ದ ರಾಜನ ಪತ್ರಕ್ಕೆ ಬೆಂಟಿಕ್ ಕಾಟಾಚಾರಕ್ಕೊಂದು ಪ್ರತಿಕ್ರಿಯೆ ಕೊಟ್ಟ. ರಾಜನ ಹಳಹಳಿಕೆಗಳನ್ನು ಲೆಕ್ಕಕ್ಕಿಟ್ಟುಕೊಳ್ಳದ ಬ್ರಿಟೀಷರು 1881ರವರೆಗೂ ತಮ್ಮ ನಿರ್ಣಯವನ್ನು ಜಾರಿಯಲ್ಲಿಟ್ಟಿದ್ದರು. ಪ್ರತಿಷ್ಟೆ ಮತ್ತು ಗೌರವ ಮಣ್ಣುಪಾಲಾದ ಮೇಲೂ ಮೂರನೇ ಕೃಷ್ಣರಾಜ ಒಡೆಯರ್ ತುಂಬು ಜೀವನವನ್ನು ಪೂರೈಸಿದರು, ಬ್ರಿಟೀಷರಿಗೆ ಸಂಪೂರ್ಣ ನಿಷ್ಠರಾಗಿ. ಒಂದಿನಿತೂ ಪಶ್ಚಾತ್ತಾಪದ ಮನೋಭಾವವಿಲ್ಲದೆ ಸುಖದ ಸುಪ್ಪತ್ತಿಗೆಯಲ್ಲಿ ರಾಜ ಕೊನೆಯ ಉಸಿರೆಳೆದ.

ಶಾಮ ರಾವ್ ಬರೆಯುತ್ತಾರೆ: “1846ರ ಜನವರಿ ತಿಂಗಳಿನಲ್ಲಿ ಬ್ರಿಟೀಷರು ಸಟ್ಲೆಜ್ ನದಿದಂಡೆಯಲ್ಲಿ ಸಿಖ್ ಪಡೆಗಳನ್ನು ಸೋಲಿಸಿದ ಸುದ್ದಿ ಗವರ್ನರ್ ಜನರಲ್ ಮುಖಾಂತರ ಮಾರ್ಚಿನಲ್ಲಿ ಮೈಸೂರು ಮಹಾರಾಜರಿಗೆ ತಲುಪುತ್ತದೆ. ವಿಜಯಕ್ಕೆ ಅಭಿನಂದನೆಗಳನ್ನು ಕಳುಹಿಸಿದ ಮಹಾರಾಜ ಕೋಟೆಯೊಳಗಿಂದ ಆಕಾಶಕ್ಕೆ 21 ಸುತ್ತು ಗುಂಡು ಹಾರಿಸುವ (ರಾಯಲ್ ಸೆಲ್ಯೂಟ್) ಮೂಲಕ ಬ್ರಿಟೀಷರ ಗೆಲುವನ್ನು ಸಂಭ್ರಮಿಸುತ್ತಾರೆ. ಬ್ರಿಟೀಷ್ ಸೈನ್ಯದ ಗೆಲುವಿನ ಸುದ್ದಿಗಳು ತಲುಪಿದಾಗಲೆಲ್ಲ ಇಂತಹ ಗೌರವಾನ್ವಿತ ಕೆಲಸಗಳು ನಡೆಯುತ್ತಲೇ ಇದ್ದವು. ಲಾರ್ಡ್ ದಾಲ್ ಹೌಸಿ ಭಾರತ ಸರಕಾರದ ಉನ್ನತ ಹುದ್ದೆ ಅಲಂಕರಿಸಿದಾಗ ಮಹಾರಾಜ ಏಪ್ರಿಲ್ 1848ರಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತಾ ಕಳೆದ ನಲವತ್ತೊಂಭತ್ತು ವರುಷಗಳಿಂದ ಬ್ರಿಟೀಷ್ ಸರಕಾರದೊಂದಿಗಿರುವ ಸ್ನೇಹ ಮತ್ತು ಗೌರವವನ್ನು ಮುಂದೆಯೂ ಕಾಪಿಡುವುದು ನನ್ನ ಕರ್ತವ್ಯ ಎಂದು ಬರೆಯುತ್ತಾರೆ.” (22)

ಕೈಗೊಂಬೆ ರಾಜ ಬ್ರಿಟೀಷರ ಮುಂದೆ ಮತ್ತಷ್ಟು ಮಗದಷ್ಟು ಶರಣಾದರು. ಫೆಬ್ರವರಿ 1854ರಲ್ಲಿ ತನ್ನ ಅರವತ್ತನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗವಹಿಸುವಂತೆ ಕೋರಿ ಗವರ್ನರ್ ಜನರಲ್ ದಾಲ್ ಹೌಸಿಗೊಂದು ಆಮಂತ್ರಣ ಪತ್ರ ಬರೆಯುತ್ತಾರೆ: “ನನ್ನ ಏಳಿಗೆಗೆ ನನಗೇ ಮುಜುಗರವಾಗುವ ರೀತಿಯಲ್ಲಿ ಆಸಕ್ತಿ ತೋರುವ ದೊರೆಗಳಿಗೆ, ನನಗೆ ಅರವತ್ತು ವರುಷ ತುಂಬಿದ ಸಂದರ್ಭದಲ್ಲಿ ಶಾಸ್ತ್ರರೀತ್ಯ ಕೆಲವು ವಿಧಿವಿಧಾನದ ಸಮಾರಂಭವನ್ನು ಆಯೋಜಿಸಿದ್ದೇನೆ ಎಂದು ತಿಳಿಸಬಯಸುತ್ತೇನೆ. ದೊರೆಗಳ ಅಮೂಲ್ಯ ಸಮಯ ವ್ಯರ್ಥ ಪಡಿಸುವ ಉದ್ದೇಶ ನನಗಿಲ್ಲ. ನಮ್ಮಲ್ಲಿ ಅರವತ್ತು ವರುಷವಾಗುವುದು ತುಂಬ ಸಂಭ್ರಮದ ಸಂಗತಿ. ನಮ್ಮ ಕುಟುಂಬಕ್ಕೆ ಈ ವಿಷಯ ಮತ್ತಷ್ಟು ಮಹತ್ವದ್ದಾಗಿರುವುದಕ್ಕೆ ಕಾರಣ ಕಳೆದ ಇಪ್ಪತ್ತು ತಲೆಮಾರಿನಿಂದ ನಮ್ಮ ವಂಶದಲ್ಯಾರೂ ಅರವತ್ತರ ಪ್ರಾಯ ಮುಟ್ಟಿಲ್ಲ. ನನ್ನನ್ನು ಉಳಿಸಿ ಬೆಳೆಸಿದ ನೀವು ಆ ದಿನದಂದು ನಮ್ಮ ಜೊತೆ ಇರಬೇಕೆಂದು ಆಶಿಸುತ್ತೇನೆ. ನನ್ನ ಸುವಿಧಿಗೆ ಬ್ರಿಟೀಷ್ ಸರಕಾರದ ರಕ್ಷಣೆಯೇ ಕಾರಣ. ಬ್ರಿಟೀಷ್ ಸರಕಾರವೆಂದರೆ ನನ್ನ ಹೆತ್ತವರ ಸಮಾನ…..” (23)

ವಯಸ್ಸಿನ ಜೊತೆಜೊತೆಗೆ ರಾಜನ ನಾಯಿ ನಿಯತ್ತು ಮತ್ತು ಹೊಗಳುಭಟ್ಟತನವೂ ಹೆಚ್ಚುತ್ತಿದ್ದುದಕ್ಕೆ ಶಾಮರಾಯರ ಈ ಹೇಳಿಕೆಯೇ ಸಾಕ್ಷಿ: “ಬ್ರಿಟೀಷ್ ಸೈನ್ಯ ಸೆಬಾಸ್ಟಪೋಲ್ ನಲ್ಲಿ ರಷ್ಯನ್ನರ ವಿರುದ್ಧ ಜಯಗಳಿಸಿದ ಸುದ್ದಿ ದಾಲ್ ಹೌಸಿಯ ಪತ್ರದ ಮೂಲಕ ತಿಳಿದಾಗ ಮಹಾರಾಜ ಅಭಿನಂದಿಸುತ್ತಾ ದೊರೆಗಳ ಪತ್ರದಲ್ಲಿದ್ದ ವಿಜಯದಲೆಗಳನ್ನು ಸಂಭ್ರಮಿಸುವ ಉದ್ದೇಶದಿಂದ ಭಾರತದ ಸಂಪ್ರದಾಯದಲ್ಲಿ ಮಾಡುತ್ತಿದ್ದಂತೆ ಬೀದಿ ಬೀದಿಯಲ್ಲಿ ಸಿಹಿ ಹಂಚಲು ಮತ್ತು ರಾಯಲ್ ಸೆಲ್ಯೂಟ್ ಮೂಲಕ ಗೌರವ ಸಲ್ಲಿಸುವಂತೆ ಆದೇಶ ನೀಡಿದ್ದೇನೆ ಎಂದು ಬರೆಯುತ್ತಾರೆ.

1856ರ ಫೆಬ್ರವರಿ 29ರಂದು ಕ್ಯಾನಿಂಗ್ ಕಲ್ಕತ್ತಾಗೆ ಆಗಮಿಸಿ ಗವರ್ನರ್ ಜನರಲ್ ಹುದ್ದೆಯನ್ನಲಂಕರಿಸಿದರು. ಪತ್ರ ಮುಖೇನ ಮಹಾರಾಜರಿಗೆ ಈ ವಿಷಯ ತಿಳಿದಾಗ ನಿಮ್ಮ ಆಗಮನ ರಾಜ್ಯಗಳಿಗೆ ಮತ್ತು ಒಟ್ಟಾರೆಯಾಗಿ ಭಾರತದ ಜನರಿಗೆ ಹೆಚ್ಚು ಸಂತಸ ಮತ್ತು ಸಮೃದ್ಧಿ ತರಲಿದೆಯೆಂದು ನಂಬಿದ್ದೇವೆ ಎಂದು ಬರೆಯುತ್ತಾರೆ. ಲಾರ್ಡ್ ಕ್ಯಾನಿಂಗರಿಂದ ರಷ್ಯಾದ ಜೊತೆಗಾದ ಶಾಂತಿಯ ಒಪ್ಪಂದದ ಬಗ್ಗೆ ಮಹಾರಾಜರಿಗೆ ತಿಳಿದಾಗ, ವಿಷಯ ತಿಳಿಯುತ್ತಿದ್ದಂತೆಯೇ ರಾಯಲ್ ಸೆಲ್ಯೂಟಿಗೆ ಆದೇಶಿಸಿದ್ದಾಗಿ ತಿಳಿಸುತ್ತಾ ‘ದೊರೆಗಳ ಪತ್ರದಿಂದ ಬ್ರಿಟೀಷ್ ಮಹಾರಾಣಿಯವರ ಸೈನ್ಯ ಕ್ರಿಮಿಯಾದಲ್ಲಿ ರಷ್ಯನ್ನರ ವಿರುದ್ಧ ವಿಜಯದುಂಧುಬಿ ಮೊಳಗಿಸಿದ ವಿಷಯ ತಿಳಿದು ಅಪಾರ ಸಂತಸವಾಯಿತು. ಶೌರ್ಯ, ಸಾಹಸ, ಯುದ್ಧ ಕಾಲದ ಸಂಕಷ್ಟಗಳನ್ನು ತಾಳ್ಮೆಯಿಂದ ಎದುರಿಸಿದ ರೀತಿಯೆಲ್ಲವೂ ಪ್ರತಿಷ್ಟೆ ಮತ್ತು ವ್ಯಕ್ತಿತ್ವನ್ನು ಎತ್ತಿ ಹಿಡಿಯುವಂತವು. ಯುರೋಪಿನ ಶಾಂತಿ ಒಳ್ಳೆಯದನ್ನೇ ಮಾಡುತ್ತದೆ. ಇಂಗ್ಲೆಂಡಿನಲ್ಲಿ ಶಾಂತಿಯ ಮರುಸ್ಥಾಪನೆಯಾಗಿರುವುದಕ್ಕೆ ದೊರೆಗಳಿಗೆ ಮತ್ತು ಬ್ರಿಟೀಷ್ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತಾ ಮಹಾರಾಣಿಯವರು ನೂರ್ಕಾಲ ಸಮೃದ್ಧಿಯಾಗಿ ಬಾಳಲಿ ಎಂದು ಪ್ರಾರ್ಥಿಸುತ್ತೇನೆ. ವ್ಯಾಪಾರ ಮತ್ತು ವ್ಯವಹಾರ ಹೆಚ್ಚಲಿ, ಪ್ರಪಂಚದ ಎಲ್ಲಾ ಭಾಗಗಳಿಗೂ ತಲುಪಲಿ’.”(24)

ಕಂಪನಿಯ ದತ್ತು ಪುತ್ರರ ಬಂದೂಕಿನಿಂದ ಗುಂಡು ಹಾರಿದ್ದು ವಸಾಹತುಶಾಹಿಯ ನಿರ್ನಾಮಕ್ಕಲ್ಲ ಬದಲಿಗೆ ಅವರ ಕುಟಿಲ ವಿಜಯಗಳಿಗೆ. ಇದನ್ನು ರಾಜರ ಶಾಂತಿಪ್ರಿಯತೆ ಎಂದು ತಪ್ಪಾಗಿ ಅರ್ಥೈಸಿಬಿಡಬಾರದು. ಕೈಗೊಂಬೆ ರಾಜ ಮುಠ್ಠಾಳನೇನಲ್ಲ. ಬ್ರಿಟೀಷ್ ರಕ್ಷಣೆಯ ಫ್ಯೂಡಲ್ ದೊರೆಯಾತ. ಜನಪ್ರತಿರೋಧವನ್ನು ಹತ್ತಿಕ್ಕುವುದರಲ್ಲಿ ಯಾವತ್ತಿಗೂ ಹಿಂದೆ ಬೀಳಲಿಲ್ಲ. ಆತನ ಬಂದೂಕು ಮೈಸೂರನ್ನು ಬ್ರಿಟೀಷ್ ಇಂಡಿಯಾದ ಆಭರಣವನ್ನಾಗಿ ಮಾಡಿತು; ರಾಣಿ ತೊಟ್ಟಿದ್ದ ಭಾರತವೆಂಬ ನೆಕ್ಲೇಸಿನಲ್ಲಿದ್ದ ಅಮೂಲ್ಯವಾದ ಮುತ್ತು.

ಕೃಷ್ಣರಾಜ ಒಡೆಯರ್ ಯಾವಾಗಲೂ ಇಟ್ಟುಕೊಳ್ಳುತ್ತಿದ್ದ ಖಡ್ಗದ ಹಿಡಿಯಲ್ಲಿ ಇಂಗ್ಲೆಂಡಿನ ರಾಣಿ ದಯಪಾಲಿಸಿದ ‘ಪದಕ’ವಿತ್ತು. (25)

No comments:

Post a Comment