Feb 5, 2016

ಮೇಕಿಂಗ್ ಹಿಸ್ಟರಿ: ವಸಾಹತುಶಾಹಿಯ ನಿಯತ್ತಿನ ಸೇವಕ

making history
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್

ಅಧಿಕಾರದಲ್ಲಿದ್ದ ಕೈಗೊಂಬೆ ರಾಜರು ಬ್ರಿಟೀಷ್ ಸಾಮ್ರಾಜ್ಯದ ವಿಸ್ತರಣೆಗೆ ಎಲ್ಲಾ ರೀತಿಯ ಸಹಕಾರವನ್ನೂ ನೀಡಿದರು. 1803ರಲ್ಲಿ ಮೈಸೂರಿನ ದಿವಾನರಾಗಿದ್ದ ಪೂರ್ಣಯ್ಯ ಸೆಂಟ್ ಜಾರ್ಜಿನ ಆದೇಶದಂತೆ 2245 ಕುದುರೆಗಳು ಮತ್ತು 4026 ಸೈನಿಕರನ್ನು ಬ್ರಿಟೀಷರ ಯುದ್ಧದಾಹಕ್ಕೆ ಸೇವೆ ನೀಡಲು ಕಳುಹಿಸುತ್ತಾರೆ. ಅರವತ್ತು ಸಾವಿರ ಎತ್ತಿನ ಗಾಡಿಯಷ್ಟು ದವಸ ಧಾನ್ಯ ಮತ್ತು ಅರವತ್ತು ಸಾವಿರ ಕುರಿಗಳನ್ನು ಬ್ರಿಟೀಷರಿಗೆ ಕಳುಹಿಸಿದರು ಎನ್ನುವ ಶಾಮರಾವ್ ಮುಂದುವರೆಸುತ್ತಾ “ಯುದ್ಧ ಭೂಮಿಯಲ್ಲಿದ್ದ ಬ್ರಿಟೀಷ್ ಕಮಾಂಡರುಗಳಿಗೆ ಲಂಬಾಣಿಗಳು ಎಷ್ಟು ವೇಗವಾಗಿ ತೆಗೆದುಕೊಂಡು ಹೋಗಲು ಸಾಧ್ಯವೋ ಅಷ್ಟು ವೇಗವಾಗಿ ಸಾಮಗ್ರಿಗಳನ್ನು ಒದಗಿಸುತ್ತಿದ್ದರು ಪೂರ್ಣಯ್ಯ. ಜೊತೆಗೆ ಕೆನರಾದ ಕಲೆಕ್ಟರುಗಳಿಗೂ ಸಾಮಾನು ಸರಂಜಾಮುಗಳನ್ನು ಕಳುಹಿಸಿ ಬೇರೆಡೆ ಇದ್ದ ಬ್ರಿಟೀಷ್ ಸೈನ್ಯಕ್ಕೆ ರಫ್ತು ಮಾಡಿಸುತ್ತಿದ್ದರು. ಯುದ್ಧ ಭೂಮಿಯಲ್ಲಿದ್ದ ಮೈಸೂರು ಸೈನಿಕರ ಬ್ರಿಟೀಷ್ ಸೇವೆಯಲ್ಲಿ ಯಾವುದೇ ಕುಂದುಕೊರತೆ ಬಾರದಿರಲೆಂಬ ಉದ್ದೇಶದಿಂದ ಅವರ ಸಂಬಳ ಮತ್ತು ಬಡ್ತಿ ಕಾಲಕಾಲಕ್ಕೆ ಸಿಗುವಂತೆ ಮುತುವರ್ಜಿ ವಹಿಸಿದರು ದಿವಾನರು.” (26)

ಮುಂದುವರೆಸುತ್ತಾ “1804ರಲ್ಲಿ ಮರಾಠ ಕ್ಯಾಂಪೇನಿಗೆ ಸಂಬಂಧಪಟ್ಟಂತೆ ಉಡುಗೊರೆ, ಬಹುಮಾನ, ಸಂಬಳ ಮತ್ತು ಸೈನ್ಯ ವಾಪಸ್ಸಾಗುವವರೆಗೆ ಆದ ಒಟ್ಟು ಖರ್ಚು ಹತ್ತಿರತ್ತಿರ 4,10,000 ಪಗೋಡಾ (12,30,000 ರುಪಾಯಿ).” (27)

ಮೂರನೇ ಕೃಷ್ಣರಾಜ ಒಡೆಯರ್ ಪರವಾಗಿ ಪೂರ್ಣಯ್ಯ 1807ರ ತನಕ ಆಡಳಿತ ನಡೆಸಿದರು. ರಾಜನಿಗೆ ಆ ವರುಷ ಹದಿನಾಲ್ಕು ತುಂಬಿತು; ಆಡಳಿತದ ಚುಕ್ಕಾಣಿ ರಾಜನಿಗೆ ಸಿಕ್ಕಿತು. ಗೌರವಾದರ, ಸಂಪತ್ತು ಮತ್ತು ಕೊಂಡಾಡುವಿಕೆಯೊಂದಿಗೆ ಬ್ರಿಟೀಷರು ಪೂರ್ಣಯ್ಯನವರನ್ನು ಬೀಳ್ಕೊಟ್ಟರು. ಪೂರ್ಣಯ್ಯನವರು ನಿವೃತ್ತಿಯಾದಾಗ ವೆಲ್ಲೆಸ್ಲಿ ಬರೆಯುತ್ತಾರೆ: “ದಿವಾನರ ಕೆಲಸ ಕಾರ್ಯದ ರೀತಿ ಪ್ರಶಂಸಾರ್ಹ; ಅದರಲ್ಲೂ ಮರಾಠ ಯುದ್ಧದಲ್ಲಿ ಬುದ್ಧಿವಂತಿಕೆಯಿಂದ ಒಂಚೂರೂ ತಡಮಾಡದೆ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಕಳುಹಿಸಿಕೊಟ್ಟರು. ಪೂರ್ಣಯ್ಯನವರನ್ನು ನೇಮಿಸುವಾಗ ಅವರ ಕುರಿತು ನಮಗಿದ್ದ ನಿರೀಕ್ಷೆಗಳಿಗೆ ತಮ್ಮ ಅಸಾಧಾರಣ ಆಡಳಿತ ವೈಖರಿಯಿಂದ ನ್ಯಾಯ ಒದಗಿಸಿದ್ದಾರೆ.” (28)

1810ರಲ್ಲಿ ಮೈಸೂರಿನ 1500 ಕುದುರೆ ಸವಾರರನ್ನು ನಾಗಪುರ ಮತ್ತು ಮಲ್ವಾದ ಯುದ್ಧಭೂಮಿಗೆ ಕಳುಹಿಸಲಾಯಿತು. 1817ರಲ್ಲಿ ಸಾವಿರ ಕುದುರೆ ಸವಾರರು ನಿಜಾಮರೊಂದಿಗಿನ ಕದನದಲ್ಲಿ ಭಾಗಿಯಾಗಿದ್ದರು. 1817 – 18ರಲ್ಲಿ ಮರಾಠ ಸಾಮ್ರಾಜ್ಯವನ್ನು ಕಬಳಿಸುವಾಗ ಮೈಸೂರಿನ ನೂರಾರು ಸೈನಿಕರು ಮತ್ತು ಕಾಲಾಳುಗಳನ್ನು ಉಪಯೋಗಿಸಿಕೊಳ್ಳಲಾಯಿತು, ಬಾಜಿರಾವ್ ಪೇಶ್ವೆ ಓಡಿಹೋಗುವವರೆಗೆ. (29)

ಮೂರನೇ ಕೃಷ್ಣರಾಜ ಒಡೆಯರ್ ರೀತಿಯ ನಿಯತ್ತಿನ ಸೇವಕರು ತಮ್ಮ ಬ್ರಿಟೀಷ್ ದೊರೆಗಳಿಗೆ, ಜನ – ಧನ – ವಸ್ತುಗಳನ್ನು ಪೂರೈಸಿದ ಕಾರಣಕ್ಕೆ ಕರ್ನಾಟಕ ಅತಿಕ್ರಮಣಕ್ಕೊಳಗಾಯಿತು ಮತ್ತು ಭಾರತ ಬ್ರಿಟೀಷ್ ಸಾಮ್ರಾಜ್ಯದ ಅಡಿಯಾಳಾಯಿತು. ಬಿಳಿ ಜನರ ಹೊರೆ ಹೊತ್ತವರು ಬಿಳಿ ಜನರ ಯುದ್ಧದಲ್ಲಿ ಕಾದಾಡಿದರು. ವಸಾಹತುಶಾಹಿತನ ವಿಶ್ವವನ್ನಾಕ್ರಮಿಸುವುದಕ್ಕೆ ಇದು ಎಷ್ಟು ಮುಖ್ಯವಾಗಿತ್ತು ಎನ್ನುವುದರ ಕುರಿತು ಥಾಮಸ್ ಮನ್ರೋ ಹೀಗೆ ಹೇಳುತ್ತಾನೆ: “ಪ್ರಪಂಚದಲ್ಲಿದುವರೆಗೂ ಮಾಡಿರದ ಪ್ರಯೋಗವನ್ನು ನಾವಿಲ್ಲಿ ಮಾಡುತ್ತಿದ್ದೇವೆ; ದೇಶೀ ಸೈನ್ಯವನ್ನು ಉಪಯೋಗಿಸಿ ವಿದೇಶಿ ಆಕ್ರಮಣವನ್ನು ಬಲಪಡಿಸುವ ಪ್ರಯೋಗ…….” (30)

ಕಾರ್ಲ್ ಮಾರ್ಕ್ಸ್ ಇದನ್ನೇ ತನ್ನ ವೈಶಿಷ್ಟ್ಯದಲ್ಲಿ ಹೇಳಿದ್ದಾನೆ. “ಭಾರತವನ್ನು ಆಂಗ್ಲ ಶಕ್ತಿ ವಶದಲ್ಲಿಟ್ಟುಕೊಂಡಿರುವುದು ಭಾರತೀಯರು ಖರ್ಚು ಮಾಡಿ ನಿರ್ವಹಿಸುತ್ತಿರುವ ಭಾರತೀಯ ಸೈನ್ಯದಿಂದ.” (31)

ಇತಿಹಾಸದ ಈ ದ್ರೋಹ ಕಪಾಲಕ್ಕೆ ಹೊಡೆದಾಗ ಖಿನ್ನತೆ ಮೂಡದಿದ್ದೀತೆ?

ಬಹುತೇಕ ಇತಿಹಾಸಕಾರರು ಕರ್ನಾಟಕದ ಬಗ್ಗೆ ಬರೆಯುವಾಗ ಬ್ರಿಟೀಷರ ವಿರುದ್ಧ ನಿಂತ ರಾಣಿ ಚೆನ್ನಮ್ಮರನ್ನು ಬೆಂಬಲಿಸುತ್ತಾರೆ. ಸಾಮಾಜಿಕ ಹೋರಾಟಕ್ಕೆ ಇತಿಹಾಸಕಾರರ ಬೆಂಬಲ ಶ್ಲಾಘನೀಯ. ಇತಿಹಾಸಕಾರರಲ್ಲಿನ ವಸಾಹತುಶಾಹಿ ವಿರೋಧಿ ರಾಷ್ಟ್ರೀಯತೆ ಪ್ರಜ್ಞೆಯ ಪ್ರತಿಫಲನವಿದು. ಆದರಿದೇ ಸಮಯದಲ್ಲಿ ಬಹುತೇಕರು ಮೈಸೂರಿನ ಕೈಗೊಂಬೆ ರಾಜರನ್ನೂ ಬೆಂಬಲಿಸಿಬಿಡುತ್ತಾರೆ. ಇದು ದ್ವಂದ್ವ ನೀತಿ. ದ್ವಂದ್ವಕ್ಕಿಂತಲೂ ಹೆಚ್ಚಾಗಿ ಅವಕಾಶವಾದಿತನದಿಂದ ಇತಿಹಾಸವನ್ನು ಅಪಮಾನಿತಗೊಳಿಸುವ ನಡೆ. ಮೂರನೇ ಕೃಷ್ಣರಾಜ ಒಡೆಯರ್ ನಿಯತ್ತಿನಿಂದ ಎರಡು ಬಂದೂಕು, ಏಳು ನೂರು ಸೈನಿಕರು, 2000 ಕಾಲಾಳುಗಳನ್ನು ಚೆನ್ನಮ್ಮಳ ಹೋರಾಟವನ್ನು ಹತ್ತಿಕ್ಕಲು 1824ರಲ್ಲಿ ಕಿತ್ತೂರಿಗೆ ಕಳುಹಿಸಿದ್ದರ ಕುರಿತಾಗಿ ಇತಿಹಾಸಕಾರರು ಏನನ್ನುತ್ತಾರೆ? ಕಿತ್ತೂರಿನ ಕೋಟೆಯನ್ನು ಮೈಸೂರಿನ ಬಂದೂಕುಗಳು ಸೀಳಿಹಾಕಲಿಲ್ಲವೇ? ರಾಜನ ಕುದುರೆ ಸವಾರರು ರಾಣಿಯ ಕಾಲಾಳುಗಳ ಶಿರಚ್ಛೇದನ ನಡೆಸಲಿಲ್ಲವಾ? ರಾಜನ ರೈಫಲ್ಲುಗಳು ರಾಣಿಯ ಸೈನಿಕರ ಮಾಂಸ ಮಜ್ಜೆಯೊಳಗೆ ಉಕ್ಕಿನ ಗುಂಡುಗಳನ್ನು ತೂರಿಸಲಿಲ್ಲವಾ? ಈ ರಾಜ ಬ್ರಿಟೀಷರ ನಿಯತ್ತಿನ ಗುಲಾಮನಲ್ಲದೆ ಮತ್ತಿನ್ನೇನು?

ಮುಂದಿನ ಅಧ್ಯಾಯ: ಬ್ರಿಟೀಷರ ವಿದೂಷಕ

No comments:

Post a Comment