Feb 12, 2016

ಮೇಕಿಂಗ್ ಹಿಸ್ಟರಿ: ಬ್ರಿಟೀಷರ ವಿದೂಷಕ

saket rajan
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
1857, ಭಾರತದ ಮೊಟ್ಟ ಮೊದಲ ಸ್ವಾತಂತ್ರ್ಯ ಸಂಗ್ರಾಮ ಸಾಧ್ಯವಾಗಿದ್ದು ಶಸ್ತ್ರಸಜ್ಜಿತ ದೀರೋದ್ದಾತ ಸೈನಿಕರು, ರೈತರು, ಕುಶಲಕರ್ಮಿಗಳಿಂದ ಮತ್ತವರಿಗೆ ಜೊತೆಯಾದ ಕೆಲವು ರಾಜ – ರಾಣಿಯರಿಂದ. ಬ್ರಿಟೀಷ್ ಸಾಮ್ರಾಜ್ಯವನ್ನು ಭಾರತದಿಂದ ಕಿತ್ತೊಗೆಯುವ ಬೆದರಿಕೆ ಹಾಕಿದ್ದ ಸಂಗ್ರಾಮವದು. ನಗರ ಪ್ರದೇಶದಲ್ಲಿ ಸಂಗ್ರಾಮವನ್ನು ಹತ್ತಿಕ್ಕಿದ ನಂತರ ಉತ್ತರ ಭಾರತದಲ್ಲಿ ಹೋರಾಟ ಹಳ್ಳಿಗಳಿಗೆ ತಲುಪಿತ್ತು. ಕರ್ನಾಟಕದ ಫ್ಯೂಡಲ್ ದೊರೆಗಳಾದ ದೇಸಾಯಿ ಮತ್ತು ದೇಶಮುಖರು ಬ್ರಿಟೀಷರ ವಿರುದ್ಧ ಹೋರಾಡುವ ಛಾತಿ ತೋರಿಸಿದರು; ಶತಮಾನಗಳಿಂದ ತಮ್ಮದಾಗಿದ್ದ ಭೂಮಿಯ ಒಡೆತನವನ್ನು ಮತ್ತೆ ದಕ್ಕಿಸಿಕೊಳ್ಳಲು. ಹೆಸರಿಗೆ ಮಾತ್ರ ಇದ್ದ ಚೂರು ಪಾರು ಅಧಿಕಾರವನ್ನೂ 1831ರಲ್ಲಿ ಬ್ರಿಟೀಷರು ಕಿತ್ತುಕೊಂಡಾಗ ಮೈಸೂರಿನ ಸಾಮ್ರಾಜ್ಯರಹಿತ ರಾಜರಾಗಿದ್ದ ಮೂರನೇ ಕೃಷ್ಣರಾಜ ಒಡೆಯರ್ ಒಳಗಣ ಕತ್ತಲ ಕೋಣೆಗಳಲ್ಲಿ ಬ್ರಾಹ್ಮಣ ಸಲಹೆಗಾರರೊಂದಿಗೆ ತನ್ನನ್ನು ಮತ್ತೆ ಪೀಠದ ಮೇಲೆ ಕುಳ್ಳಿರಿಸಬೇಕೆಂದು ಬ್ರಿಟೀಷರ ಬಳಿ ಹೇಗೆಲ್ಲಾ ಬೇಡಿಕೊಳ್ಳಬೇಕು ಎಂದು ತಾಲೀಮು ನಡೆಸದ ದಿನವೇ ಇರಲಿಲ್ಲ. 1857ರ ಸಂಗ್ರಾಮ, ಸಹಕಾರಿ ಒಪ್ಪಂದಕ್ಕೆ ಸಹಿ ಹಾಕಿದ್ದ ಕರ್ನಾಟಕದ ಅನೇಕ ಸೇವಕ ರಾಜರಿಗೆ ತಮ್ಮ ಸಾಮ್ರಾಜ್ಯವನ್ನು ಮರಳಿ ತಮ್ಮದಾಗಿಸಿಕೊಳ್ಳಲು ಅವಕಾಶ ಒದಗಿಸಿದರೆ ಮೈಸೂರಿನ ಕೈಗೊಂಬೆ ರಾಜ ಬ್ರಿಟೀಷರೆಡೆಗಿದ್ದ ತನ್ನ ನಿಯತ್ತನ್ನು ಇಂಚೂ ಸಡಿಲಿಸಲಿಲ್ಲ. ತನ್ನ ಅಸಹನೆಯನ್ನು ತುಂಬ ಜಾಗರೂಕ ಗೊಣಗಾಟದಿಂದ ತೋರಿಸುತ್ತಿದ್ದ; ಅದು ಪ್ರತಿಭಟನೆಯ ಕೂಗಿನಂತೆ ತೋರಬಾರದೆಂಬ ಎಚ್ಚರಿಕೆ ಇರುತ್ತಿತ್ತು. ಪ್ರತಿಭಟಿಸುವುದು ಅತ್ಲಾಗಿರಲಿ ಮೈಸೂರಿನ ರಾಜ ಬ್ರಿಟೀಷರ ಪರ ವಕಾಲತ್ತು ವಹಿಸುತ್ತ ಬ್ರಿಟೀಷರ ಪರವಾಗಿ ಇತರೆ ರಾಜರಿಗೆ ಪತ್ರ ಬರೆಯುತ್ತಿದ್ದ! ಬ್ರಿಟೀಷ್ ರಾಜ್ ಅಪಾಯದಲ್ಲಿರುವ ಈ ಸಂದರ್ಭದಲ್ಲಿ ಹಣ, ಸೈನ್ಯವನ್ನು ಕೊಟ್ಟು ವಸಾಹತುಶಾಹಿಯನ್ನು ರಕ್ಷಿಸಬೇಕು ಎಂದು ಕೇಳಿಕೊಳ್ಳುತ್ತಿದ್ದ!

ಶಾಮ ರಾವ್ ಬರೆಯುತ್ತಾರೆ: “1857ರಲ್ಲಿ ಭಾರತ ಸರ್ಕಾರ ಇನ್ನೂರು ಮಂದಿ ಸಿಲ್ಲೇದಾರರು ಈ ತಕ್ಷಣ ಹಿಂದೂಸ್ಥಾನಕ್ಕೆ ಹೋಗಬೇಕೆಂದು ನಿರ್ದೇಶಿಸಿತು. ಈ ನಿರ್ದೇಶನ ಮುಂದೆ ಅನೂರ್ಜಿತವಾದರೂ ಮೈಸೂರಿನ ಉತ್ತರಕ್ಕಿರುವ ಸುರಪುರದಲ್ಲಿ ಅಷ್ಟೇ ಸಂಖೈಯ ಜನರನ್ನು ನೇಮಿಸಲಾಗಿತ್ತು ಮತ್ತು ಆ ಭಾಗದಲ್ಲಿ 1857 – 58ರಲ್ಲಿ ನಡೆದ ಸಣ್ಣ ಪುಟ್ಟ ಯುದ್ಧಗಳಲ್ಲಿ ಭಾಗವಹಿಸಿದ್ದರು.” (32)

ಕರ್ನಾಟಕದ ಸುರಪುರದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸತ್ತ ಐನೂರರಷ್ಟು ಜನರ ದೇಹಹೊಕ್ಕಿದ್ದು ಮೈಸೂರಿನ ಕೈಗೊಂಬೆ ರಾಜನ ಜನರ ಕೈಯಲ್ಲಿದ್ದ ಬಂದೂಕಿನ ಗುಂಡುಗಳು.

“ಗವರ್ನರ್ ಜನರಲ್ ರವರ ಪತ್ರಮುಖೇನ ದೆಹಲಿಯ ಬಂಡಾಯವನ್ನು ಹತ್ತಿಕ್ಕಿದ ಸುದ್ದಿ ತಲುಪಿದಾಗ ಮೈಸೂರಿನ ಮಹಾರಾಜ 1857ರ ಡಿಸೆಂಬರ್ 9ರಂದು ಅಭಿನಂದನಾ ಪತ್ರವನ್ನು ಬರೆದ. ‘ಬಂಗಾಲದ ದಂಗೆಕೋರರು ಮತ್ತು ಬಂಡಾಯಗಾರರು ನಡೆಸಿದ ವಿದ್ರೋಹದ ಬಗ್ಗೆ ತಿಳಿದಾಗ ನನಗಾದ ದುಃಖ ಸಣ್ಣದಲ್ಲ. ಭಾರತದಾಗಸದಲ್ಲಿ ಕಾರ್ಮೋಡಗಳು ಕವಿಯಿತಾದರೂ ಬ್ರಿಟೀಷರೆಂಬ ಪ್ರಖರ ಸೂರ್ಯ ಈ ಕಾರ್ಮೋಡಗಳನ್ನು ಸರಿಸಿಯೇ ಸರಿಸುತ್ತಾರೆ ಎನ್ನುವುದು ನನ್ನ ದೃಡ ನಂಬುಗೆಯಾಗಿತ್ತು. ಬ್ರಿಟೀಷರ ಬಲಶಾಲಿ ಸೈನ್ಯ ಸರಕಾರದ ವಿರುದ್ಧ ಬಂಡಾಯವೆದ್ದಿರುವ ದಂಗೆಕೋರರನ್ನು ಸದೆಬಡಿಯುತ್ತಾರೆ ಎಂಬ ನನ್ನ ನಿರೀಕ್ಷೆ ಸಂಪೂರ್ಣ ವಾಸ್ತವವಾಗಿ ಬದಲಾಗಿರುವುದು ನಿಮ್ಮ ಪತ್ರದಿಂದ ತಿಳಿದು ಕುಣಿದಾಡುವಷ್ಟು ಸಂತಸವಾಗಿದೆ. ಅನೇಕ ದೇಶೀ ರಾಜರು ಈ ದುರಿತ ಕಾಲದಲ್ಲಿ ಬ್ರಿಟೀಷ್ ಸರಕಾರಕ್ಕೆ ನಿಷ್ಟರಾಗಿದ್ದು ತಮ್ಮಿಂದಾದ ಸಹಾಯವನ್ನು ಮಾಡಿದ್ದನ್ನು ತಿಳಿದು ಸಮಾಧಾನವಾಯಿತು. ಹಿಂದೆ ಬ್ರಿಟೀಷರು ವಿಜಯಿಯಾದ ಸಂದರ್ಭದಲ್ಲಿ ಮಾಡಿದಂತೆಯೇ ಈ ಬಾರಿಯೂ ರಾಯಲ್ ಸೆಲ್ಯೂಟ್ ಸಲ್ಲಿಸಿ ಮೈಸೂರಿನ ಬೀದಿಗಳಲ್ಲಿ ಸಿಹಿ ಹಂಚಿದ್ದೇವೆ’.” (33)

ಮತ್ತೆ 1858ರ ಫೆಬ್ರವರಿಯಲ್ಲಿ, ಇಪ್ಪತ್ತು ವರುಷದ ಮುಂಚೆ ಮೈಸೂರಿನ ರೆಸಿಡೆಂಟರಾಗಿದ್ದ ಜನರಲ್ ಜೆ.ಎಸ್. ಫ್ರೇಸರ್ ಗೆ ಬರೆದ ಪತ್ರದಲ್ಲಿ ರಾಜ ತನ್ನ ಭಾವನೆಗಳನ್ನು ತೋಡಿಕೊಂಡಿದ್ದು ಹೀಗೆ: “ಈ ದೇಶದಲ್ಲಿ ನಡೆದ ದಂಗೆ ತಣ್ಣಗಾಗಿ ಶಾಂತಿಯ ಮರುಸ್ಥಾಪನೆಯಾಗುತ್ತಿರುವುದು ತೃಪ್ತಿಕರ ಸಂಗತಿ. ಉತ್ತರ ಮತ್ತು ಪಶ್ಚಿಮ ಪ್ರಾಂತ್ಯಗಳಲ್ಲಿ ಕವಿದಿದ್ದ ದಟ್ಟ ಮೋಡಗಳು ನಿಧಾನಕ್ಕೆ ಚದುರುತ್ತಿದೆ ಮತ್ತು ವಿದ್ರೋಹಿಗಳನ್ನು ಪ್ರತೀ ಹಳ್ಳಿ – ಪಟ್ಟಣಗಳಲ್ಲಿ ಹಿಡಿದು ಸದೆಬಡಿಯಲಾಗುತ್ತಿದೆ. ನನ್ನ ಸ್ವಂತ ದೇಶ (ಮೈಸೂರು) ಇಂತಹ ಮಲಿನ ಮನಸ್ಸಿನ ಜನರಿಂದ ಮುಕ್ತವಾಗಿದೆ ಎಂದು ತಿಳಿಸಲು ಹರ್ಷವಾಗುತ್ತಿದೆ; ಈ ಖುಷಿಗೆ ಬುದ್ಧಿವಂತ, ನ್ಯಾಯಪರ ನಿರ್ಣಯಗಳನ್ನು ತೆಗೆದುಕೊಂಡ ಸರ್ ಮಾರ್ಕ್ ಕಬ್ಬನ್ ಕಾರಣ. ಈ ದಂಗೆಯಿಂದ ನಡೆದ ರಕ್ತಪಾತದ ಭಯಭೀತ ದೃಶ್ಯಗಳು, ಮತ್ತೀ ದಂಗೆಯನ್ನತ್ತಿಕ್ಕಲು ಇಂಗ್ಲೆಂಡಿನ ಅತ್ಯುತ್ತಮ ಧೈರ್ಯಶಾಲಿ ಆಫೀಸರುಗಳು ಮಾಡಿದ ತ್ಯಾಗದ ಬಗ್ಗೆ ಸದ್ಯಕ್ಕೆ ಹೆಚ್ಚು ಹೇಳುವುದಿಲ್ಲ. ನನ್ನ ಏಳಿಗೆ ಮತ್ತು ಸಂತಸ ಬ್ರಿಟೀಷ್ ಸರಕಾರದ ಯಶಸ್ಸು ಮತ್ತು ಅಧಿಕಾರವನ್ನು ಅವಲಂಬಿಸಿರುವ ಕಾರಣ ಬ್ರಿಟೀಷ್ ಸರಕಾರವನ್ನು ನನ್ನ ಆಪ್ತ ಗೆಳೆಯನೆಂದೇ ಪರಿಗಣಿಸಿದ್ದೇನೆ.” (34)

ಆಕ್ರಮಣಕಾರರ ವಿರುದ್ಧ ಧೀರೋದ್ದಾತ ಹೋರಾಟ ನಡೆಸಿ ಹುತಾತ್ಮರಾದವರ ಬಗ್ಗೆ ಸಂತಸ ವ್ಯಕ್ತಪಡಿಸಿದ ಕೈಗೊಂಬೆ ರಾಜನ ಅಪಾರ ನಿಷ್ಠೆಗೆ ಬ್ರಿಟೀಷರ ಪ್ರತಿಕ್ರಿಯೆ ಹೇಗಿತ್ತು? 

ಭಾರತ ಸರಕಾರಕ್ಕೆ 1860ರ ಜೂನ್ ನಲ್ಲಿ ಬರೆದ ಪತ್ರದಲ್ಲಿ ಕಬ್ಬನ್: “ಈ ದುರಿತಕಾಲದುದ್ದಕ್ಕೂ ಮಹಾರಾಜರು ನಿಷ್ಟೆಯನ್ನು ತೋರಿಸಿದರು. ಬ್ರಿಟೀಷ್ ಆಳ್ವಿಕೆ ಸ್ಥಿರವಾಗಿರಬೇಕೆಂಬ ಆಸೆಯನ್ನು ಸಂದರ್ಭ ಸಿಕ್ಕಾಗಲೆಲ್ಲ ತೋರಿಸಿದರು. ಬ್ರಿಟೀಷ್ ಸರಕಾರಕ್ಕೆ ದ್ರೋಹವೆಸಗುವ, ನಮ್ಮ ವೈರಿಗಳಿಗೆ ಸಹಾಯ ಮಾಡುವ ಯಾವ ಕೆಲಸವನ್ನೂ ಮಹಾರಾಜ ಮಾಡಲಿಲ್ಲ.” (35)

ಕಬ್ಬನ್ನಿನ ಪತ್ರ ತಲುಪಿದ ನಂತರ ಆಗ ವೈಸರಾಯ್ ಆಗಿದ್ದ ಕ್ಯಾನಿಂಗ್ ಕೈಗೊಂಬೆ ರಾಜರಿಗೆ: “ಇತ್ತೀಚೆಗಷ್ಟೇ ಮೈಸೂರಿನ ಕಮಿಷನರ್ ರಿಂದ ಬಂದ ಪತ್ರದಲ್ಲಿ ಅವರ ಅಧಿಕಾರವಿದ್ದ ಜಿಲ್ಲೆಗಳಲ್ಲಿ ಶಾಂತಿ ಕಾಪಾಡಲು ನೀವು ಮಾಡಿದ ಸಹಾಯದ ಬಗ್ಗೆ ಉಲ್ಲೇಖಿಸಿದ್ದಾರೆ. ಈ ದಂಗೆಯ ಪ್ರಾರಂಭದಿಂದಲೂ ಮಹಾರಾಜರು ಬ್ರಿಟೀಷ್ ಸರಕಾರದ ಜೊತೆಯಲ್ಲಿರುತ್ತಾರೆಂಬ ಬಗ್ಗೆ ನನಗೆ ಅರಿವಿತ್ತು. ಪ್ರತೀ ಸಂದರ್ಭದಲ್ಲೂ ಇದು ಎದ್ದು ಕಾಣುತ್ತಿತ್ತು. ಮಹಾರಾಜರು ಬ್ರಿಟೀಷ್ ಆಳ್ವಿಕೆಯಲ್ಲಿಟ್ಟಿರುವ ನಂಬುಗೆ, ಆ ನಂಬಿಕೆಯ ಬಹಿರಂಗ ತೋರ್ಪಡಿಸುವಿಕೆ, ಬ್ರಿಟೀಷರೆಡೆಗೆ ನೀವು ತೋರಿದ ಕಾರುಣ್ಯ ಮತ್ತು ರಾಣಿಯ ಸೈನಿಕರಿಗೆ ನೀವು ಕೊಟ್ಟ ಅಪರಿಮಿತ ತತ್ ಕಾಲೀನ ಸಹಾಯವೆಲ್ಲವನ್ನೂ ತುಂಬು ಹೃದಯದ ಮೆಚ್ಚುಗೆಯೊಂದಿಗೆ ಕಮಿಷನರ್ ವಿವರಿಸಿ ಬರೆದಿದ್ದಾರೆ.” (36)

ಹೀಗೆ ಕೃಷ್ಣರಾಜ ಒಡೆಯರ್ ಬ್ರಿಟೀಷರು ಭಾರತವನ್ನು ಲೂಟಿ ಮಾಡುವುದಕ್ಕೆ, ಸಹವರ್ತಿ ಕನ್ನಡಿಗರು ಮತ್ತು ಭಾರತೀಯರನ್ನು ಕೊಲ್ಲುವುದಕ್ಕೆ ತಮ್ಮ ಕೈಲಾದ ಸಹಾಯ ಮಾಡಿದರು. 1857ರ ಸ್ವಾತಂತ್ರ್ಯ ಸಂಗ್ರಾಮವನ್ನು ಹತ್ತಿಕ್ಕಿದ್ದನ್ನು ಮೈಸೂರಿನ ಬೀದಿಬೀದಿಗಳಲ್ಲಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಆದರವರನ್ನು ಚೂರೂ ಕರುಣೆಯಿಲ್ಲದೆ ವಿಮರ್ಶಿಸುವುದು ಸರಿಯಲ್ಲ. ಆ ಮನುಷ್ಯನಿಗೂ ಭಾವನೆಗಳಿದ್ದವು. ಉಳಿದ ಮನುಷ್ಯರಂತೆ ದುಃಖ ತೋಡಿಕೊಳ್ಳುತ್ತಿದ್ದ, ಕಣ್ಣೀರಿಡುತ್ತಿದ್ದ. ಆದರಾತನ ದುಃಖ ಬ್ರಿಟೀಷ್ ಆಫೀಸರುಗಳಿಗೆ ಮತ್ತು ವಸಾಹತುಶಾಹಿಯ ದುರಾಸೆಗೆ ಪೂರಕವಾಗಿದ್ದ ಜನರ ಸಾವಿಗಷ್ಟೇ ಸೀಮಿತವಾಗಿತ್ತು. ಅನುಮಾನವೇ ಬೇಡ, ಕರ್ನಾಟಕ ಕಂಡ ಅತ್ಯಂತ ಕೆಟ್ಟ ರಾಜರಲ್ಲಿ ಈತನೂ ಒಬ್ಬ. ರಕ್ತದ ಕಣಕಣದಲ್ಲೂ ಗುಲಾಮತ್ವವನ್ನು ಆವಾಹಿಸಿಕೊಂಡಿದ್ದ ರಾಜ ಕೊನೆಯುಸಿರೆಳೆಯುವ ಘಳಿಗೆಯಲ್ಲೂ ಬ್ರಿಟೀಷರ ಹೊಗಳುಭಟನಾಗಿಯೇ ಉಳಿದುಹೋದ.

ಕೊನೆಯ ಉಸಿರಿನವರೆಗೂ ದೇಶಪ್ರೇಮಿಯಾಗಿಯೇ ಇದ್ದ ಧೀರ ಟಿಪ್ಪು ಸುಲ್ತಾನನಿಗೂ ಈತನಿಗೂ ಜಿಗುಪ್ಸೆ ಮೂಡಿಸುವ ವ್ಯತ್ಯಾಸ.

ಬಹುಶಃ ಇತಿಹಾಸದ ವ್ಯಂಗ್ಯವೆಂದರೆ ಅಸಲಿ ವಜ್ರದ ಯೋಗ್ಯತೆಯನ್ನರಿಲು ಸಾಣೆ ಹಿಡಿದಾಗ ತುದಿಯ ಮತ್ತೊಂದು ಬದಿಯಲ್ಲಿ ಇಂತಹ ಮಾಗದ ತುರಿಕೆ ಗಾಯಗಳೂ ಇರುತ್ತವೆ.
ಅಧ್ಯಾಯ 1 ರ ಮುಕ್ತಾಯ.

No comments:

Post a Comment