Oct 9, 2015

ಡಿಜಿಟಲೀಕರಣ ಒಳ್ಳೆಯದು …. ಆದರೀ ಪ್ರಚಾರವಲ್ಲ…..

digital india
Dr Ashok K R
ದಶಕದ ಹಿಂದೆ ಮೊಬೈಲ್ ಫೋನೆಂದರೆ ನೋಕಿಯಾ ಎಂದೇ ಜನಜನಿತ. ನೋಕಿಯಾ ಫೋನಿನ ತಯಾರಕರ ಹೆಸರು ನಮಗ್ಯಾರಿಗಾದರೂ ಗೊತ್ತಿದೆಯಾ? ವಾಕ್ಮನ್ ತಯಾರಿಸುವಲ್ಲಿ, ಸಂಗೀತ ಕೇಳುವ ಸಾಧನಗಳನ್ನು ತಯಾರಿಸುವಲ್ಲಿ ಸೋನಿ ಕಂಪನಿ ಅಗ್ರಗಣ್ಯ, ಅದರ ನಿರ್ಮಾತೃವಿನ ಹೆಸರು ಎಷ್ಟು ಜನಕ್ಕೆ ಗೊತ್ತಿದೆ? ಇತ್ತೀಚೆಗೆ ದೇಶದಲ್ಲಿ ಸದ್ದು ಮಾಡುತ್ತಿರುವುದು ಶಿಯೋಮಿ ಮೊಬೈಲು ಫೋನುಗಳು, ಅದನ್ನು ತಯಾರಿಸಿದವರ್ಯಾರು? ಸ್ಮಾರ್ಟ್ ಫೋನುಗಳ ಬೆಲೆಯನ್ನು ಭಾರತದಲ್ಲಿ ತುಂಬ ಕಡಿಮೆ ದರಕ್ಕೆ ಸಿಗುವಂತೆ ಮಾಡಿದ್ದು ಮೈಕ್ರೋಮ್ಯಾಕ್ಸ್ ಮತ್ತು ಕಾರ್ಬನ್ ಕಂಪನಿಗಳು. ಅದರ ಮಾಲೀಕರ್ಯಾರು? ಮೇಲಿನ ಬಹುತೇಕ ಪ್ರಶ್ನೆಗೆ ನಿಮ್ಮ ಉತ್ತರ ‘ಗೊತ್ತಿಲ್ಲ’ ಎಂದೇ ಅಲ್ಲವೇ. ನನಗೂ ಗೊತ್ತಿಲ್ಲ ಬಿಡಿ. ಫೇಸ್ ಬುಕ್ಕಿನ ಸಂಸ್ಥಾಪಕನ್ಯಾರು? ಮೈಕ್ರೊಸಾಫ್ಟಿನ ಒಡೆಯನ್ಯಾರು? ಆ್ಯಪಲ್ ಕಂಡುಹಿಡಿದಿದ್ದ್ಯಾರು? ಗೂಗಲ್ಲಿನ ಈಗಿನ ಸಿಇಒ ಹೆಸರೇನು? ಮಾರ್ಕ್ ಝುಕರ್ ಬರ್ಗ್, ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್, ಸತ್ಯ ನಾದೆಲ್ಲ….. ನಿಯಮಿತವಾಗಿ ಪತ್ರಿಕೆ ಓದುವವರಾದರೆ ನಿಮಗೂ ಈ ನಾಲ್ಕೂ ಹೆಸರುಗಳು ಗೊತ್ತಿರುತ್ತವೆ. ಇವುಗಳಷ್ಟೇ ಜನಪ್ರಿಯ ಬ್ರ್ಯಾಂಡುಗಳಾದ ನೋಕಿಯಾ, ಸೋನಿ, ಶಿಯೋಮಿಯ ಹೆಸರು ಪತ್ರಿಕೆಗಳಲ್ಲಿ ಮುಳುಗಿ ಹೋಗುವವರಿಗೂ ತಿಳಿಯುವುದಿಲ್ಲ ಆದರೆ ಫೇಸ್ ಬುಕ್, ಮೈಕ್ರೋಸಾಫ್ಟ್, ಆ್ಯಪಲ್ಲಿನ ವಿಷಯದಲ್ಲಿ ಪತ್ರಿಕೆ ಮೇಲೆ ಕಣ್ಣಾಡಿಸುವವರಿಗೂ ತಿಳಿದಿರುತ್ತದೆ. ಕಾರಣವೇನಿರಬಹುದು? ನಿಮಗೆ ಹೆಸರು ಗೊತ್ತಿರುವ ಅಷ್ಟೂ ಕಂಪನಿಗಳು ಅಮೆರಿಕಾ ಮೂಲದ್ದಾದರೆ ನೋಕಿಯಾ ಫಿನ್ ಲ್ಯಾಂಡಿನದು, ಸೋನಿ ಜಪಾನಿನದು, ಶಿಯೋಮಿ ಚೀನಾದ್ದು ಮತ್ತು ಮೈಕ್ರೋಮ್ಯಾಕ್ಸ್ , ಕಾರ್ಬನ್ ಬಿಡಿ ಅವು ನಮ್ಮದೇ ಭಾರತದ್ದು. ಫೇಸ್ ಬುಕ್, ಮೈಕ್ರೋಸಾಫ್ಟ್, ಆ್ಯಪಲ್ಲುಗಳೆಲ್ಲವೂ ಶ್ರೇಷ್ಟವಾಗಿವೆ ಎನ್ನುವುದು ಎಷ್ಟು ಸತ್ಯವೋ ಸೋನಿ, ನೋಕಿಯಾ ಕೂಡ ಅಷ್ಟೇ ಶ್ರೇಷ್ಟ ಗುಣಮುಟ್ಟದ ಉತ್ಪನ್ನಗಳನ್ನು ತಯಾರಿಸುತ್ತಿದ್ದವಲ್ಲವೇ? ಒಂದು ದೇಶದ ಕಂಪನಿಗಳ ನಿರ್ಮಾತೃಗಳ ಹೆಸರುಗಳೇ ಎಲ್ಲರ ಬಾಯಲ್ಲಿ ನಲಿಯುವಂತೆ ಮಾಡಲು ಆ ಕಂಪನಿಗಳ ಮಾರ್ಕೆಟಿಂಗ್ ಜಾಣ್ಮೆ ಎಷ್ಟು ಕಾರಣವೋ ಅಮೆರಿಕಾದ ಉಗುಳೂ ಶ್ರೇಷ್ಟ ಎಂಬಂತೆ ವರದಿ ಮಾಡುವ ಮಾಧ್ಯಮಗಳೂ ಕಾರಣ. ಅಮೆರಿಕಾದ ಈ ಲಾಬಿಗೆ ಪೂರಕವಾಗಿ ಬಹುದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿಯೂ ವರ್ತಿಸುತ್ತಾರೆಂದರೆ ಅದು ನಮ್ಮ ದೇಶದ ಅಭಿವೃದ್ಧಿ ಮಾದರಿಯ ದುರಂತ.

ಪ್ರಧಾನಿಯಾದ ಎರಡು ವರುಷದೊಳಗೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಬಾರಿಗೆ ಅಮೆರಿಕಾಕ್ಕೆ ಕಾಲಿಟ್ಟಿದ್ದಾರೆ. ಮೊದಲ ಭೇಟಿ ಅಬ್ಬರದಲ್ಲೇ ಕಳೆದುಹೋಗಿತ್ತು. ಈ ಬಾರಿಯ ಭೇಟಿ ವ್ಯವಹಾರಕ್ಕೆ ಎಂದು ಪ್ರಚಾರವಾಗಿತ್ತು. ಸಿಲಿಕಾನ್ ವ್ಯಾಲಿಯಲ್ಲಿ ನಮ್ಮ ದೇಶದ ಪ್ರಧಾನಿ ಅನೇಕ ಕಂಪನಿಗಳ ಸಿ.ಇ.ಒಗಳ ಜೊತೆಗೆ ಕುಳಿತು ಚರ್ಚಿಸಿದರು. ಬನ್ನಿ. ನಮ್ಮ ದೇಶಕ್ಕೆ ದುಡ್ಡು ತಗಂಡು ಬನ್ನಿ, ನಿಮಗೆ ಬೇಕಾದ ಸೌಲತ್ತುಗಳನ್ನೆಲ್ಲ ನಾವು ಕೊಡುತ್ತೇವೆ. ಮೇಕ್ ಇನ್ ಇಂಡಿಯಾ ಎಂದು ನಗೆಯಾಡಿದರು. ಮೋದಿಯವರ ಗೆಲುವಿನಲ್ಲಿ ಸಾಮಾಜಿಕ ಜಾಲತಾಣಗಳ ಕೊಡುಗೆ ಬಹಳ. ಅಂತಹ ಸಾಮಾಜಿಕ ಜಾಲತಾಣಗಳ ಪೈಕಿ ಫೇಸ್ ಬುಕ್ ಪ್ರಮುಖವಾದುದು. ಫೇಸ್ ಬುಕ್ಕಿನ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗರನ್ನು ಭೇಟಿಯಾಗಿ ಅಪ್ಪಿಕೊಂಡರು ನಮ್ಮ ಪ್ರಧಾನಿ. ಇಡೀ ಭಾರತವನ್ನು ಡಿಜಿಟಲ್ ಇಂಡಿಯಾ ಮಾಡಿಕೊಡಿ ಎಂದು ಫೇಸ್ ಬುಕ್ ಮತ್ತು ಗೂಗಲ್ಲಿಗೆ ಕೇಳಿಕೊಂಡರು ನಮ್ಮ ಪ್ರಧಾನಿ. ಡಿಜಿಟಲ್ ಇಂಡಿಯಾಕ್ಕೆ ಬೆಂಬಲ ಕೊಡುವಂತೆ ಮಾರ್ಕ್ ಝುಕರ್ ಬರ್ಗ್ ಫೇಸಬುಕ್ಕಿನ ತಮ್ಮ ಪ್ರೊಫೈಲ್ ಚಿತ್ರಕ್ಕೆ ಭಾರತ ದೇಶದ ಧ್ವಜವನ್ನು ವಿಲೀನಗೊಳಿಸಿದರು! ಆ ರೀತಿ ವಿಲೀನಗೊಳಿಸುವುದಕ್ಕೆ ಒಂದು ಆ್ಯಪನ್ನು ತಯಾರಿಸಿ ಲಕ್ಷಾಂತರ ಭಾರತೀಯರು ತಮ್ಮ ಪ್ರೊಫೈಲ್ ಚಿತ್ರ ಬದಲಿಸಲು ‘ನೆರವಾದರು’. ವಿದೇಶಿಗನೊಬ್ಬನಿಗೆ ಭಾರತದ ‘ಅಭಿವೃದ್ಧಿ’ಯ ಬಗ್ಗೆ ಎಷ್ಟೊಂದು ಪ್ರೀತಿ! Support Digital India ಅಭಿಯಾನಕ್ಕೆ ವಿರುದ್ಧವಾಗಿ ಮಾತನಾಡಿದವರು ದೇಶದ್ರೋಹಿಗಳಲ್ಲದೇ ಮತ್ತೇನು?!

ಡಿಜಿಟಲ್ ಇಂಡಿಯಾ 2014ರಲ್ಲಿ ಶುರುವಾಯಿತೇ?

ನಮ್ಮ ಪ್ರಚಾರ ಪ್ರಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ನೀವು ಯಾವ ಕಾರಣಕ್ಕಾಗಿಯಾದರೂ ಟೀಕಿಸಬಹುದು ಆದರೆ ಅವರ ಮಾರ್ಕೆಟಿಂಗ್ ಬುದ್ಧಿಯನ್ನು ಮಾತ್ರ ಹೊಗಳದೇ ಇರಲಾಗದು. ಯಾವ ವಿಷಯಕ್ಕೆ ಹೇಗೆ ಪ್ರಚಾರ ಪಡೆದುಕೊಳ್ಳಬೇಕೆಂದು ಅವರಿಗಿಂತ ಚೆನ್ನಾಗಿ ಅರಿತವರು ಮತ್ತೊಬ್ಬರು ಸದ್ಯದಲ್ಲಿ ಕಾಣಿಸುತ್ತಿಲ್ಲ. ಒಂದು ಕೆಲಸ ಮಾಡಿ ಹತ್ತು ಕೆಲಸದ ಪ್ರಚಾರ ಪಡೆದುಕೊಳ್ಳುವುದು ಅವರಿಗೆ ನೀರು ಕುಡಿದಷ್ಟೇ ಸಲೀಸು! ಇದರ ಅರಿವಾಗಿದ್ದು ಈ ಸರಕಾರದಿಂದ ಅತಿ ಹೆಚ್ಚು ಪ್ರಚಾರ ಪಡೆದ ಕೆಲವು ಯೋಜನೆಗಳ ಅಸಲಿಯತ್ತನ್ನು ಗಮನಿಸಿದಾಗ. ತಿಂಗಳುಗಳ ಹಿಂದೆ ಸರಕಾರದ ವತಿಯಿಂದ ರಾಷ್ಟ್ರೀಯ ಬ್ಯಾಂಕುಗಳಲ್ಲಿ ವಿಮಾ ಯೋಜನೆ ಜಾರಿಗೊಂಡಿತು. 12 ರುಪಾಯಿಯ ಅಪಘಾತ ವಿಮೆ, 330 ರುಪಾಯಿಯ ಸಾಮಾನ್ಯ ವಿಮೆ. ಎರಡೂ ಅತ್ಯುತ್ತಮ ಯೋಜನೆಗಳೇ. ಸಾಮಾನ್ಯ ವಿಮೆಯ ನೀತಿ ನಿಯಮಗಳು ಇನ್ನೂ ಅಷ್ಟು ಸ್ಪಷ್ಟವಾಗಿ ಅರಿವಾಗುವುದಿಲ್ಲವಾದರೂ ಇರುವುದರಲ್ಲಿ ಜನರಿಗೆ ಉಪಯುಕ್ತವಾಗುವ ವಿಮೆಗಳು ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ. ಇದರ ಜೊತೆಜೊತೆಗೆ ಅಟಲ್ ಬಿಹಾರಿ ವಾಜಪೇಯಿಯವರ ಹೆಸರಿನಲ್ಲೊಂದು ಪಿಂಚಣಿ ಯೋಜನೆಯನ್ನು ಘೋಷಿಸಲಾಯಿತು. ಈ ಪಿಂಚಣಿ ಯೋಜನೆ ತೆರಿಗೆ ಕಟ್ಟದ ಅಸಂಘಟಿತ ವಲಯಕ್ಕೆ ಅನುಕೂಲಕರವೆಂದು ಪರಿಚಯಿಸಲಾಯಿತು. ಇತ್ತೀಚೆಗೆ ನನಗೆ ಅಂಟಿಕೊಂಡಿರುವ ಒಂದು ‘ಜಾಡ್ಯ’ವೆಂದರೆ ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಏನೇ ಸುದ್ದಿ ಬಂದಿದ್ದರೂ ಅದರ ಮೂಲ ಲೇಖನವನ್ನು ಹುಡುಕಿ ಪೂರ್ತಿಯಾಗಿ ಓದುವುದು. ವೆಬ್ ಸೈಟಿನಲ್ಲಿ ಆ ಪಿಂಚಣಿ ಯೋಜನೆಯ ವಿವರಗಳನ್ನು ಸರಕಾರೀ ವೆಬ್ ಸೈಟಿನಲ್ಲೇ ನೋಡಿದೆ. ವಿವರಗಳನ್ನೆಲ್ಲಾ ಸರಿಯಾಗಿ ಓದಿಕೊಂಡ ನಂತರ ತಿಳಿದಿದ್ದು ಇದು ಹಿಂದಿನ ಸರಕಾರವೇ ಜಾರಿ ಮಾಡಿದ್ದ ರಾಷ್ಟ್ರೀಯ ಪಿಂಚಣಿ ಯೋಜನೆಯ ಚೂರುಪಾರು ತಿದ್ದುಪಡಿಯಾದ ಯೋಜನೆಯೆಂದು! ಹಳೆಯ ಮದ್ಯವನ್ನು ಹೊಸ ಬಾಟಲಿಯಲ್ಲಾಕಿದಂತೆಯೇ ಈ ಸರಕಾರದ ಅನೇಕ ಕಾರ್ಯಗಳಿವೆ ಎಂದರದು ಉತ್ಪ್ರೇಕ್ಷೆಯ ಮಾತಲ್ಲ.

‘ಡಿಜಿಟಲ್ ಇಂಡಿಯಾ’ ಎನ್ನುವುದು ಯಾವಾಗ ಪ್ರಾರಂಭವಾಯಿತು? ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ನಂತರವಾ? ಖಂಡಿತ ಅಲ್ಲ. ಇಪತ್ತು ವರುಷಗಳ ಹಿಂದೆ ಒಂದು ಲ್ಯಾಂಡ್ ಲೈನ್ ಫೋನ್ ಬೇಕೆನ್ನಿಸಿದರೆ ಬಿ.ಎಸ್.ಎನ್.ಎಲ್ ಗೆ ಅರ್ಜಿ ಹಾಕಿ ವರುಷಗಟ್ಟಲೇ ಕಾಯಬೇಕಿತ್ತು. ಕ್ರಮೇಣ ಲ್ಯಾಂಡ್ ಲೈನ್ ಫೋನುಗಳು ವೇಗ ಪಡೆದುಕೊಂಡಿತು. ಹದಿನೈದು ವರುಷಗಳ ಹಿಂದೆ ಮೊಬೈಲೆಂಬುದು ದುಬಾರಿ ವಸ್ತುವಾಗಿತ್ತು. ಮೊಬೈಲ್ ಕೊಂಡುಕೊಳ್ಳುವುದಕ್ಕೆ ಹಣ ವೆಚ್ಚ ಮಾಡುವುದರ ಜೊತೆಜೊತೆಗೆ ಒಳಬರುವ – ಹೊರಹೋಗುವ ಕರೆಗಳಿಗೆಲ್ಲ ಹೆಚ್ಚೆಚ್ಚು ಹಣ ತೆರಬೇಕಿತ್ತು. ಐದೇ ವರ್ಷದ ಅಂತರದಲ್ಲಿ ಒಳಬರುವ ಕರೆಗಳು ಉಚಿತವಾಗಿ, ಹೊರಹೋಗುವ ಕರೆಗಳ ವೆಚ್ಚ ವಿಪರೀತವಾಗಿ ತಗ್ಗಿದ ಪರಿಣಾಮ ಎಲ್ಲರ ಕೈಯಲ್ಲೂ ಮೊಬೈಲು ರಿಂಗಣಿಸಲಾರಂಭಿಸಿತು. ಇನ್ನೈದು ವರುಷಗಳಲ್ಲಿ ಮಾಮೂಲಿ ಫೋನುಗಳ ಜಾಗವನ್ನು ಸ್ಮಾರ್ಟ್ ಫೋನುಗಳು ಆಕ್ರಮಿಸಿಕೊಂಡುಬಿಟ್ಟವು. ದರಕಡಿತದ ಜೊತೆಜೊತೆಗೆ ಅತಿ ಕಡಿಮೆ ದುಡ್ಡಿನಲ್ಲಿ ಅಂತರ್ಜಾಲ ಸಿಗಲಾರಂಭಿಸಿದ್ದು ಕೂಡ ಸ್ಮಾರ್ಟ್ ಫೋನುಗಳ ಸಂಖೈ ಹೆಚ್ಚಲು ಕಾರಣವಾಗಿದೆ. ಕಳೆದ ಹದಿನೈದು ಇಪ್ಪತ್ತು ವರುಷಗಳಿಂದ ನಿರಂತರವಾಗಿ ನಡೆಯುತ್ತಿರುವ ತಂತ್ರಜ್ಞಾನದ ಬೆಳವಣಿಗೆಯ ‘ಪ್ರಕ್ರಿಯೆ’ಯಿದು. ನೆನಪಿರಲಿ ಇದು ಅಭಿವೃದ್ಧಿಯಲ್ಲ, ಪ್ರಕ್ರಿಯೆಯಷ್ಟೇ. ಲ್ಯಾಂಡ್ ಲೈನ್ ಫೋನುಗಳು ಬಂದಿದ್ದು, ಮೊಬೈಲುಗಳು ಕಡಿಮೆ ಬೆಲೆಗೆ ದಕ್ಕಲಾರಂಭಿಸಿದ್ದು, ಸ್ಮಾರ್ಟ್ ಫೋನುಗಳ ಯುಗ ಪ್ರಾರಂಭವಾಗಿದ್ದು ಯಾರ ಯಾರ ಆಡಳಿತಾವಧಿಯಲ್ಲಿ ಎಂದೇನಾದರೂ ನಿಮಗೆ ನೆನಪಿದೆಯಾ? I support Digital India ಎಂದು ಬೊಬ್ಬೆ ಹೊಡೆದವರಿಗೂ ಅದರ ನೆನಪಿರಲಿಕ್ಕಿಲ್ಲ. ಯಾಕೆ ನೆನಪಿಲ್ಲವೆಂದರೆ ನಮಗಾಗಲೀ ಆಡಳಿತದಲ್ಲಿರುವವರಿಗಾಗಲೀ ತಂತ್ರಜ್ಞಾನದ ಬೆಳವಣಿಗೆ ‘ಅಭಿವೃದ್ಧಿಯ ಮಾಪಕ’ ಎಂಬ ಭ್ರಮೆಗಳಿರಲಿಲ್ಲ. ಆ ಭ್ರಮೆಯನ್ನು ಜನರಲ್ಲಿ ತುಂಬಲು ಕಳೆದಲವು ವರುಷಗಳಿಂದ ಸಾಮಾಜಿಕ ಜಾಲತಾಣಗಳನ್ನು ಯಶಸ್ವಿಯಾಗಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ನರೇಂದ್ರ ಮೋದಿಯವರು ಪ್ರಯತ್ನಿಸುತ್ತಿದ್ದಾರೆ, ಮತ್ತದರಲ್ಲಿ ಅವರು ಯಶಸ್ಸನ್ನೂ ಕಂಡಿದ್ದಾರೆ. ಆದರೀ ಪ್ರಚಾರ, ಯಶಸ್ಸಿನಿಂದ ದೇಶಕ್ಕೆ ನಿಜಕ್ಕೂ ಉಪಯೋಗವಾಗುತ್ತದೆಯಾ?

ಮೊಬೈಲು, ಅಂತರ್ಜಾಲ, ಸಾಮಾಜಿಕ ಜಾಲತಾಣಗಳಿಂದ ಅಗಾಧವೆನ್ನಿಸುವಷ್ಟು ಉಪಯೋಗಗಳಿವೆ. ದೂರದ ಗೆಳೆಯರನ್ನು ಹತ್ತಿರವಾಗಿಸುತ್ತೆ, ನಮ್ಮ ಭಾವನೆಗಳನ್ನು ಪರಿಚಯವೇ ಇಲ್ಲದವರೊಡನೆ, ಗೆಳೆಯರೊಡನೆ ಹಂಚಿಕೊಳ್ಳಲು ನೆರವಾಗುತ್ತದೆ, ಒಂದು ಅಭಿಪ್ರಾಯ ರೂಪಿಸಲು, ಮಧ್ಯಪ್ರಾಚ್ಯದ ದೇಶಗಳಲ್ಲಿ ಕ್ರಾಂತಿಯನ್ನೇ ಪ್ರಾರಂಭಿಸಲು ಕೂಡ ಈ ತಂತ್ರಜ್ಞಾನಗಳು ನೆರವಾಗಿವೆ. ಅದರಲ್ಲಿ ಎರಡು ಮಾತಿಲ್ಲ. ಇದರ ಜೊತೆಜೊತೆಗೆ ಒಂದು ಭ್ರಮಾ ಲೋಕವನ್ನು ಸೃಷ್ಟಿಸಿ ನೈಜ ಪ್ರಪಂಚದಿಂದ ವಿಮುಖರನ್ನಾಗಿಸುವುದರಲ್ಲಿಯೂ ಇವುಗಳ ಪಾತ್ರ ದೊಡ್ಡದಾಗುತ್ತಲೇ ಇದೆ. ತಂತ್ರಜ್ಞಾನವನ್ನು ನಾವು ಉಪಯೋಗಿಸಬೇಕೆ ಹೊರತು ತಂತ್ರಜ್ಞಾನ ನಮ್ಮನ್ನು ಉಪಯೋಗಿಸುವಂತೆ ಮಾಡಬಾರದಲ್ಲವೇ? ಡಿಜಿಟಲ್ ಇಂಡಿಯಾ ಅವಶ್ಯಕ, ದಿನನಿತ್ಯದ ಅನೇಕ ಕೆಲಸಗಳನ್ನು ಸಲೀಸಾಗುವಂತೆ ಮಾಡುತ್ತದೆ. ಯಾವ ಪ್ರಚಾರವೂ ಇಲ್ಲದೆ ನಮ್ಮ ಬ್ಯಾಂಕುಗಳು, ಅನೇಕ ಕಛೇರಿಗಳು ಸಂಪೂರ್ಣ ಕಂಪ್ಯೂಟರ್ ಮಯವಾಗಿಬಿಟ್ಟಿರುವುದು ಸುಳ್ಳಲ್ಲವಲ್ಲ. ಈ ಸೌಲಭ್ಯ ದೇಶದ ಎಲ್ಲಾ ಪ್ರಜೆಗಳಿಗೂ ತಲುಪಿದರೆ ಅದು ಸಂತಸದ ಸಂಗತಿಯೇ. ಸಲೀಸಾಗುವಂತೆ ಮಾಡುವುದಕ್ಕೆ ನಮ್ಮ ದೇಶದ ಪ್ರಧಾನ ಮಂತ್ರಿ ವಿದೇಶಿ ಕಂಪನಿಗಳ ಸಿ.ಇ.ಒಗಳ ಜೊತೆ ಹಲ್ಲುಕಿರಿಯುತ್ತ ಮಾತನಾಡುವ ಅವಶ್ಯಕತೆ ಇದೆಯೇ? ಡಿಜಿಟಲ್ ಇಂಡಿಯಾದ ಅತಿ ಪ್ರಚಾರದ ವಿರುದ್ಧ ಮಾತನಾಡಿದರೆ, ಇಲ್ಲಿನ ಸಮಸ್ಯೆಗಳನ್ನು ಮೊದಲು ಸರಿಮಾಡಿ ಅಂದರೆ ‘ನೋಡಿ ನೋಡಿ ನೀವು ಇದನ್ನು ಹೇಳೋದಕ್ಕೂ ಫೇಸ್ ಬುಕ್ಕೇ ಬೇಕಾಯಿತು. ಗೂಗಲ್ಲೇ ಬೇಕಾಯಿತು’ ಎಂದು ಹೇಳುವ ತಂತ್ರಜ್ಞಾನದ ಕುರುಡು ಭಕ್ತರಿದ್ದಾರೆ. ಇವೆಲ್ಲವೂ ನಮ್ಮ ಅಭಿವ್ಯಕ್ತಿಗೆ ಒಂದು ಮಾಧ್ಯಮವಷ್ಟೇ, ಈ ಮಾಧ್ಯಮವಿಲ್ಲದಿದ್ದರೆ ಬೇರೆ ಮಾಧ್ಯಮದ ಮೂಲಕ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತೇವೆ ಎನ್ನುವುದನ್ನವರು ಮರೆತೇ ಬಿಡುತ್ತಾರೆ. ಫೇಸ್ ಬುಕ್ ಬರುವುದಕ್ಕೆ ಮುಂಚೆ ಆರ್ಕುಟ್ ಉಪಯೋಗಿಸುತ್ತಿದ್ದೋ. ಅದಕ್ಕೂ ಮುಂಚೆ ಪತ್ರಿಕೆಗಳ ‘ನಿಮ್ಮ ಅಂಕಣ’ ‘ವಾಚಕರ ವಾಣಿ’ಗೆ ಪತ್ರ ಬರೆಯುತ್ತಿದ್ದೋ, ಫೇಸ್ ಬುಕ್ ಮುಚ್ಚಿ ಹೋದರೆ ಮತ್ತೊಂದು ಮಾಧ್ಯಮದ ಮೂಲಕ ಅಭಿವ್ಯಕ್ತಿ ವ್ಯಕ್ತಪಡಿಸುತ್ತೇವೆ ಎನ್ನುವುದನ್ನವರು ಮರೆತೇ ಬಿಡುತ್ತಾರೆ! ಒಂದು ಕಡೆಯಿಂದ ಮತ್ತೊಂದೆಡೆಗೆ ನಮ್ಮನ್ನು ಶೀಘ್ರವಾಗಿ ಹೋಗುವಂತೆ ಅನುಕೂಲ ಮಾಡಿಕೊಡುತ್ತದೆ ಎಂಬ ಕಾರಣಕ್ಕೆ ಕಾರು, ಬೈಕು, ಬಸ್ಸುಗಳನ್ನು ತಲೆ ಮೇಲೆ ಹೊತ್ತಿಕೊಳ್ಳಲಾದೀತೆ? ನಮ್ಮ ಪ್ರಧಾನ ಮಂತ್ರಿಯವರು ಮಾಡುತ್ತಿರುವುದು ಅದೇ ಕೆಲಸ ಎನ್ನುವುದು ವಿಪರ್ಯಾಸದ ಸಂಗತಿ. ಮಾಹಿತಿ ತಂತ್ರಜ್ಞಾನ ಖಾತೆಯ ಮಂತ್ರಿಯೊಬ್ಬ ಮಾಡಬೇಕಾದ ಕೆಲಸವನ್ನು ಪ್ರಧಾನಿ ಮಾಡುವುದು ಅವಶ್ಯಕವೇ?

ಹೋಗ್ಲಿ ಬಿಡಿ. ನಮ್ಮ ಪ್ರಧಾನ ಮಂತ್ರಿಯವರದು ವಿಪರೀತ ಉತ್ಸಾಹದ ಪ್ರಕೃತಿ, ಎಲ್ಲಾ ಕೆಲಸವನ್ನೂ ಅಚ್ಚುಕಟ್ಟಾಗಿ ತಾನು ಮಾತ್ರ ಮಾಡಬಲ್ಲೆ ಎಂಬ ನಂಬಿಕೆ ಅವರದು ಎಂದು ಸದ್ಯಕ್ಕೆ ಅಂದುಕೊಳ್ಳೋಣ. ‘ನಮ್ಮ ದೇಶದ ಯುವಕರು ಆ್ಯಂಡ್ರಾಯ್ಡ್, ಐಒಎಸ್, ವಿಂಡೋಸ್ ಮೊಬೈಲುಗಳಲ್ಲಿ ಯಾವುದನ್ನು ಖರೀದಿಸಬೇಕು ಎಂಬುದರ ಬಗ್ಗೆಯೇ ಹೆಚ್ಚು ಚರ್ಚಿಸುತ್ತಾರೆ’ ಎಂದು ಆಡಿಕೊಂಡು ಹೊಗಳಿದ್ದನ್ನೋ ಹೊಗಳಿ ಆಡಿಕೊಂಡಿದ್ದನ್ನೋ ಮರೆತೇ ಬಿಡೋಣ. ಡಿಜಿಟಲ್ ಇಂಡಿಯಾ ಎಂಬ ಯೋಜನೆಗೆ ಗೂಗಲ್, ಫೇಸ್ ಬುಕ್ ಹೇಗೆ ಸಹಕಾರ ಕೊಡುತ್ತವೆ ಎಂದು ನೋಡಿದರೆ ನಿರಾಶೆಯಲ್ಲ, ಭಯವಾಗುತ್ತದೆ. ಮೈಕ್ರೋಸಾಫ್ಟ್ ಅಂತರ್ಜಾಲದ ಲೆಕ್ಕದಲ್ಲಿ ಅಷ್ಟು ಪ್ರಚಲಿತವಲ್ಲವಾದ್ದರಿಂದ ಸದ್ಯಕ್ಕೆ ಅದನ್ನು ಮರೆಯಬಹುದು. ಗೂಗಲ್ ಭಾರತದ ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಕೊಡುವುದಾಗಿ ಭರವಸೆ ಕೊಟ್ಟಿದೆ. ಫೇಸ್ ಬುಕ್ ಮೂಲೆಮೂಲೆಯಲ್ಲಿರುವ ವ್ಯಕ್ತಿಗೂ ಉಚಿತ ಅಂತರ್ಜಾಲ ಸೌಲಭ್ಯ ಸಿಕ್ಕಿ ಅವನ ಜೀವನ ಸಂತಸಮಯವಾಗಿರುವಂತೆ ಮಾಡುವುದೇ ನಮ್ಮ ಗುರಿ ಎಂದು ಹೇಳುತ್ತದೆ. ಎಷ್ಟು ಕರ್ಣಾನಂದಕರವಾಗಿದೆಯಲ್ಲವೇ? ಹೀಗೆ ಉಚಿತವಾಗಿ ನೀಡುವ ಭರವಸೆ ಕೊಡುತ್ತಿರುವ ಗೂಗಲ್ ಮತ್ತು ಫೇಸ್ ಬುಕ್ ಸಮಾಜ ಸೇವಾ ಸಂಸ್ಥೆಗಳೂ ಅಲ್ಲ, ನಮ್ಮನ್ನಾಳುತ್ತಿರುವ ಸರಕಾರಗಳೂ ಅಲ್ಲ. ಅವರಿಗೆ ವ್ಯವಹಾರಿಕವಾಗಿ ಲಾಭವಿಲ್ಲದೇ ಯಾಕೆ ಈ ರೀತಿ ಉಚಿತ ಉಚಿತ ಎಂದು ಬೊಬ್ಬೆ ಹೊಡೆಯುತ್ತಿವೆ ಎಂದು ಯೋಚಿಸಬೇಕಲ್ಲವೇ? ಕೊನೇ ಪಕ್ಷ ನಮ್ಮ ಪ್ರಧಾನಿಯಾದರೂ ಯೋಚಿಸಬೇಕಿತ್ತಲ್ಲವೇ?

ಉಚಿತ ಅಂತರ್ಜಾಲದ ಹಿಂದಿನ ಸತ್ಯವೇನು?

ಈ ಫೇಸ್ ಬುಕ್ ಮತ್ತು ಗೂಗಲ್ಲುಗಳು ಹೇಗೆ ನಾವು ದಿನನಿತ್ಯ ಉಪಯೋಗಿಸುವ ಅಂತರ್ಜಾಲದ ಮಾಹಿತಿಯನ್ನು ಕಳ್ಳಗಣ್ಣಿನಿಂದ ನೋಡುತ್ತವೆ ಎನ್ನುವುದನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಅಂತರ್ಜಾಲದಲ್ಲಿ ನೀವು ಒಂದು ಮೊಬೈಲನ್ನೋ, ಸೆಕೆಂಡ್ ಹ್ಯಾಂಡ್ ಬೈಕನ್ನೋ ಕೊಂಡುಕೊಳ್ಳಲು ಗೂಗಲ್ಲಿನಲ್ಲಿ ಹುಡುಕಿರುತ್ತೀರಿ ಎಂದುಕೊಳ್ಳಿ. ಹುಡುಕಿ ಮುಗಿಸಿದ ನಂತರ ನೀವು ಫೇಸ್ ಬುಕ್ ತೆಗೆಯಿರಿ, ಜಿಮೇಲ್ ತೆರೆಯಿರಿ ಆ ಮೊಬೈಲು, ಬೈಕಿನ ಜಾಹೀರಾತುಗಳೇ ಕಾಣಿಸಿಕೊಳ್ಳುತ್ತವೆ. ಜಾಹೀರಾತುಗಳೇನು ತಪ್ಪಲ್ಲ. ಅದು ಆ ವಸ್ತು ಮಾರುವ ಕಂಪನಿಗೂ ಗೂಗಲ್ಲೂ ಫೇಸ್ ಬುಕ್ಕಿಗೂ ಅನಿವಾರ್ಯ. ಅದನ್ನು ಒಪ್ಪೋಣ. ಆದರೆ ಯಾವ ಜಾಹೀರಾತು ಮೊದಲು ಕಾಣಬೇಕೆಂದು ನಿರ್ಧರಿಸುವುದರಲ್ಲಿ ಅಂತರ್ಜಾಲವನ್ನು ಕೆಲವೇ ಕಂಪನಿಗಳ ಏಕಸ್ವಾಮ್ಯಕ್ಕೆ ಒಳಪಡಿಸುವುದರ ಅಪಾಯ ಕಾಣಿಸುತ್ತದೆ. ಉದಾಹರಣೆಗೆ ಒಂದು ಕಂಪನಿಯವರು ಹೆಚ್ಚು ದುಡ್ಡು ಕೊಟ್ಟರೆ ಅವರ ಜಾಹೀರಾತಷ್ಟೇ ಕಾಣಿಸುವಂತೆ, ಅವರ ವೆಬ್ ಪುಟವಷ್ಟೇ ಗೂಗಲ್ ಹುಡುಕಾಟದಲ್ಲಿ ಸಿಗುವಂತೆ ಮಾಡಿಬಿಡುವುದು ದೊಡ್ಡ ಕೆಲಸವಲ್ಲ. ಒಮ್ಮೆ ಇದು ನಡೆದುಹೋದರೆ ಜಾಹೀರಾತುಗಳಿಗೆ ಹೆಚ್ಚು ಹಣ ವೆಚ್ಚ ಮಾಡಿ ಕಳಪೆ ವಸ್ತುಗಳನ್ನು ನೀಡುವ ವೆಬ್ ಪುಟಗಳಿಗೇ ಜನರು ಶರಣಾಗಿಬಿಡಬೇಕಾದ ಪರಿಸ್ಥಿತಿ ಉಂಟಾಗಬಹುದು. ವಸ್ತುಗಳ ವಿಷಯ ಬಿಡಿ. ಇದೇ ಮಾದರಿಯಲ್ಲಿ ಸುದ್ದಿ – ಅಭಿಪ್ರಾಯಗಳನ್ನು ಜನರ ಮೇಲೆ ಹೇರಲಾಗುವುದಿಲ್ಲ ಎಂದು ಯಾರಾದರೂ ಪ್ರಮಾಣ ಮಾಡಿ ಹೇಳಬಲ್ಲರೇ? ಈಗಿರುವ ದೃಶ್ಯ, ಮುದ್ರಣ ಮಾಧ್ಯಮಗಳು ಪೇಯ್ಡ್ ನ್ಯೂಸ್ ಭೂತಕ್ಕೆ ಸಿಲುಕಿದಾಗ ಯಾವ ನಿರ್ಬಂಧವೂ ಇಲ್ಲದ ಅಂತರ್ಜಾಲ ನೈಜ ಸುದ್ದಿಗೆ ಅನುಕೂಲಕರ ಎಂದು ಭಾವಿಸಲಾಗಿತ್ತು. ನಿಧಾನಕ್ಕೆ ಅಂತರ್ಜಾಲ ಕೂಡ ಪೇಯ್ಡ್ ನ್ಯೂಸಿನ ಮತ್ತೊಂದು ರೂಪಕ್ಕೆ ಒಳಗಾಗುತ್ತಿರುವ ಪ್ರಕ್ರಿಯೆಯನ್ನು ನಾವಿಂದು ಕಾಣಬಹುದು. ಹಣ ಕೊಟ್ಟು ಅಂತರ್ಜಾಲವನ್ನು ಉಪಯೋಗಿಸುತ್ತಿರುವಾಗಲೇ ಗೂಗಲ್ ಫೇಸ್ ಬುಕ್ ಈ ರೀತಿ ನಡೆದುಕೊಳ್ಳುತ್ತದೆಯೆಂದರೆ ಇನ್ನೂ ಅವುಗಳಿಗೇ ವೈಫೈ ಜಾಲವನ್ನು ಉಚಿತವಾಗಿ ಜನರಿಗೆ ನೀಡುವಂತೆ ಮಾಡಿಬಿಟ್ಟರೆ ಅವರು ಎಷ್ಟೆಲ್ಲ ರೀತಿಯಲ್ಲಿ ನಮ್ಮನ್ನು ವಂಚಿಸಬಹುದು? ಕಂಪನಿಗಳಿಗೆ ಶರಣಾದ ಸರಕಾರಗಳು ಆ ಕಂಪನಿಗಳ ಉಚಿತ ಅಂತರ್ಜಾಲದ ಮುಖಾಂತರ ಹೇಗೆಲ್ಲ ನಮ್ಮನ್ನು ಮೂರ್ಖರನ್ನಾಗಿಸಬಹುದು? ಒಮ್ಮೆ ಅವಶ್ಯಕತೆ ಇದ್ದವರಿಗೆ ಇಲ್ಲದವರಿಗೆಲ್ಲ ಅಂತರ್ಜಾಲವನ್ನು ಚಟವಾಗಿಸಿಬಿಟ್ಟ ಮೇಲೂ ಉಚಿತವಾಗಿಯೇ ನೀಡುತ್ತಾರಾ? ಅನುಮಾನವೇ. ಏಳು ವರುಷಗಳ ಕೆಳಗೆ ಮೊಬೈಲುಗಳಲ್ಲಿ ಅನಿಯಮಿತ ಅಂತರ್ಜಾಲ 49ರುಪಾಯಿಗೆ ಸಿಗುತ್ತಿತ್ತು. ವೇಗ ಈಗಿನಷ್ಟಲ್ಲದಿದ್ದರೂ ತಕ್ಕಮಟ್ಟಿಗೆಯೇ ಇತ್ತು. ಈಗ 250 ರುಪಾಯಿಗೆ ಒಂದು ಜಿಬಿ ಮಾತ್ರ ಸಿಗುತ್ತಿದೆ. ಮೊಬೈಲುಗಳನ್ನು, ಅಂತರ್ಜಾಲವನ್ನು ಉಪಯೋಗಿಸುವವರ ಸಂಖೈ ಹೆಚ್ಚಾಗುತ್ತಿದ್ದಂತೆ ಬೆಲೆಯೂ ಕಡಿಮೆಯಾಗಬೇಕಿತ್ತಲ್ಲವೇ? ಆಗುತ್ತಿರುವುದು ಮಾತ್ರ ಸಂಪೂರ್ಣ ವಿರುದ್ಧವಾಗಿ.

ಮೇಕ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಎನ್ನುತ್ತಾ ಎಲ್ಲವನ್ನೂ ಮಾರಿಬಿಡಲು ಹವಣಿಸುವ ಈ ಸರ್ಕಾರಕ್ಕೆ ನಮ್ಮ ದೇಶದ ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ನೀಡಲು ಒಂದು ಸಶಕ್ತ ಕಂಪನಿ ತನ್ನ ಅಧೀನದಲ್ಲೇ ಇರುವುದು ಕಾಣಿಸುವುದಿಲ್ಲವೇ? ಕೆಟ್ಟ ನಿರ್ವಹಣೆಯಿಂದ ಗ್ರಾಹಕರನ್ನು ಕಳೆದುಕೊಂಡಿರುವ ಬಿ.ಎಸ್.ಎನ್.ಎಲ್ಲಿಗೆ ಮರುಜೀವ ನೀಡುವ ಕೆಲಸವಾದರೆ ಈ ಖಾಸಗಿಯವರ ಹಾವಳಿ ಯಾಕೆ ಬೇಕು? ನಾವ್ಯಾಕೆ ಖಾಸಗಿ ಕಂಪನಿಗಳ ಸಿಮ್ಮುಗಳನ್ನು ಉಪಯೋಗಿಸಬೇಕು? ಸರಕಾರೀ ಉತ್ಪನ್ನವೆಂದರೆ ಕಳಪೆ, ಖಾಸಗಿಯದ್ದೆಂದರೆ ಶ್ರೇಷ್ಟ ಎಂಬ ಭ್ರಮೆಯನ್ನು ನೈಜವಾಗಿಸುವಲ್ಲಿ ನಮ್ಮ ಅಧಿಕಾರಿ ಶಾಹಿ, ರಾಜಕಾರಣಿಗಳ ಪಾತ್ರ ದೊಡ್ಡದು. ಅಂತಹ ಭ್ರಮೆಯನ್ನು ಕಡೆಗಣಿಸುವ ಕೆಲಸವನ್ನಾದರೂ ಭಾರತದ ಶಕ್ತಿಶಾಲಿ ಪ್ರಧಾನಿ ಮಾಡಬಹುದಿತ್ತಲ್ಲಾ? ದೇಶೀ ಅಧಿಕಾರಿಗಳ ಜೊತೆಗೆ ಚರ್ಚಿಸಿ ಇಲ್ಲೇ ಡಿಜಿಟಲ್ ಇಂಡಿಯಾ ರೂಪುಗೊಂಡುಬಿಟ್ಟರೆ ಫಾರಿನ್ ಸಿಇಓಗಳ ಜೊತೆ ದೇಶ ವಿದೇಶದ ಮಾಧ್ಯಮಗಳಲ್ಲಿ ಮಿಂಚುವ ಅವಕಾಶ ತಪ್ಪುತ್ತದೆಯೆನ್ನುವ ಕೊರಗಿರಬೇಕು. ಅಭಿವೃದ್ಧಿಗೂ ತಂತ್ರಜ್ಞಾನಕ್ಕೂ ಇರುವ ವ್ಯತ್ಯಾಸವನ್ನು ಅರಿಯದ ಪ್ರಧಾನಿಯೊಬ್ಬರು ತಂತ್ರಜ್ಞಾನವನ್ನೇ ಅಭಿವೃದ್ಧಿಗೆ ಸಮೀಕರಿಸುತ್ತಿರುವುದು ದೇಶದ ಮುಂದಿರುವ ಅಪಾಯದ ದಿನಗಳ ದಿಕ್ಸೂಚಿ ಎಂದರೆ ತಪ್ಪಲ್ಲ. ಮತ್ತು ಆ ಅಪಾಯದಿಂದ ತಂತ್ರಜ್ಞಾನವನ್ನು ಉಪಯೋಗಿಸುತ್ತಿರುವ ನನಗಾಗಲೀ ತಂತ್ರಜ್ಞಾನದ ಸಹಾಯದಿಂದ ಇದನ್ನು ಓದುತ್ತಿರುವ ನಿಮಗಾಗಲೀ ತೊಂದರೆಯಾಗುವುದಿಲ್ಲ ಮತ್ತು ಈ ದಿಕ್ಕುತಪ್ಪಿದ ಅಭಿವೃದ್ಧಿಯಿಂದ ತೊಂದರೆಗೊಳಗಾದವರ ಸುದ್ದಿಯೂ ನಮಗೆ ತಲುಪುವುದಿಲ್ಲ. ಕಾರಣ ತಂತ್ರಜ್ಞಾನ ಕೆಲವರ ಕಪಿಮುಷ್ಟಿಗೆ ಸಿಲುಕಿ ಏಕಸ್ವಾಮ್ಯಕ್ಕೆ ಒಳಪಡಲಿದೆ. “ಮೇಕ್ ಇನ್ ಇಂಡಿಯಾ ಅಲ್ಲ, ಮೇಕ್ ಇಂಡಿಯಾ ಎನ್ನುವುದು ನಮ್ಮ ಉದ್ದೇಶವಾಗಬೇಕು. ಚೀನಾ ದೇಶವೇನೂ ನಮ್ಮಲ್ಲಿ ಬನ್ನಿ ನಮ್ಮಲ್ಲಿ ಬನ್ನಿ ಎಂದು ಗೋಗರೆಯಲಿಲ್ಲ. ಚೀನಾವನ್ನು ಕಟ್ಟಿದರು, ವ್ಯಾಪಾರ ಮಾಡಬಯಸುವ ಕಂಪನಿಗಳು ಓಡೋಡಿ ಬಂದರು” ಎಂಬರ್ಥದ ಅರವಿಂದ್ ಕೇಜ್ರಿವಾಲರ ಮಾತುಗಳು ಇಲ್ಲಿ ಪ್ರಸ್ತುತ. PM ಪದದ ಅರ್ಥ Prime Minister ಎಂದಿದೆಯೇ ಹೊರತು Perfect Marketing ಎನ್ನುವುದಲ್ಲ ಎಂಬ ಸತ್ಯವನ್ನು ನಮ್ಮ ನರೇಂದ್ರ ಮೋದಿಯವರಿಗೆ ಮೊದಲು ಅರ್ಥ ಮಾಡಿಸಬೇಕಿದೆ.

4 comments:

  1. 'ಡಿಜಿಟಲ್ ಇಂಡಿಯಾ' ಎಂಬುದು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗಲೇ ಆರಂಭವಾಗಿತ್ತು ಆದರೆ ಅದಕ್ಕೆ ಡಿಜಿಟಲ್ ಇಂಡಿಯಾ ಎಂಬ ಹೆಸರು ಮಾತ್ರ ಕೊಟ್ಟಿರಲಿಲ್ಲ. ಉದಾಹರಣೆಗೆ ನಾನು ಇರುವುದು ಹಳ್ಳಿಯಲ್ಲೇ, ತಾಲೂಕು ಕೇಂದ್ರದಿಂದ ೧೭ ಕಿಲೋಮೀಟರ್ ದೂರದಲ್ಲಿ. ೨೦೦೯ರಲ್ಲೇ ನಮ್ಮಲ್ಲಿ ಲ್ಯಾಂಡ್ಲೈನ್ ಬ್ರಾಡ್ಬ್ಯಾಂಡ್ ಸಂಪರ್ಕ ಬಂದಿದೆ. ೨೦೦೬ ರಲ್ಲೇ ನಮ್ಮಲ್ಲಿ ಮೊಬೈಲ್ ಸಿಗ್ನಲ್ (ಬಿಎಸ್ಸೆನ್ನೆಲ್ ) ಸಿಗುತ್ತಿತ್ತು. ನಮ್ಮಲ್ಲಿ ಇಂದಿಗೂ ೩ಜಿ ಸಿಗ್ನಲ್ ಸಿಗುವುದಿಲ್ಲ. ಮೋದಿ ಬಂದು ಏನೂ ಬದಲಾವಣೆ ಆಗಲಿಲ್ಲ. ೨೦೧೧ರಲ್ಲಿಯೇ ನ್ಯಾಷನಲ್ ಆಪ್ಟಿಕಲ್ ಫೈಬರ್ ನೆಟ್ವರ್ಕ್ ಮೂಲಕ ದೇಶದ ಗ್ರಾಮೀಣ ಪ್ರದೇಶಗಳಿಗೆ ವೇಗದ ಇಂಟರ್ನೆಟ್ ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸಲಾಗಿತ್ತು. ಇದು ಮಾತ್ರ ಕುಂಟುತ್ತಾ ಸಾಗುತ್ತಿದ್ದು ಮೋದಿ ಅಧಿಕಾರಕ್ಕೆ ಬಂದ ನಂತರವೂ ಯಾವುದೇ ಗಮನಾರ್ಹ ಪ್ರಗತಿ ಆಗಲಿಲ್ಲ. ಇದಕ್ಕೆ ಹಣದ ಕೊರತೆ ಇಲ್ಲ, ಇಚ್ಛಾಶಕ್ತಿಯ ಕೊರತೆ ಇದೆ. ಯುಎಸ್ ಓ ಫಂಡ್ (ಯುನಿವರ್ಸಲ್ ಸರ್ವಿಸ್ ಒಬ್ಲಿಗೇಶನ್ ಫಂಡ್) ನಲ್ಲಿ ೨೫೦೦೦ ಕೋಟಿ ರೂಪಾಯಿಗಳು ಲಭ್ಯ ಇವೆ, ಆದರೂ ಕೆಲಸ ಮಾತ್ರ ಕ್ಷಿಪ್ರವಾಗಿ ಸಾಗುತ್ತಿಲ್ಲ. ಏರ್ಟೆಲ್ನಂಥ ಖಾಸಗಿ ಮೊಬೈಲ್ ಸಂಸ್ಥೆಗಳು ಹಳ್ಳಿಗೆ ೩ಜಿ ಸಂಪರ್ಕ ಕಲ್ಪಿಸುವ ಕುರಿತು ಯೋಚಿಸುತ್ತಲೇ ಇಲ್ಲ, ಕೇವಲ ನಗರಗಳಿಗೆ ಮಾತ್ರ ೩ಜಿ, ೪ಜಿ ಸಂಪರ್ಕ ಕಲ್ಪಿಸುವತ್ತಲೇ ಗಮನ ಹರಿಸಿವೆ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅಧಿಕಾರದಲ್ಲಿ ಇರುವವರೆಗೆ ಬಿಎಸ್ಸೆನ್ನೆಲ್ ಲ್ಯಾಂಡ್ಲೈನ್ ಬ್ರಾಡ್ಬ್ಯಾಂಡ್ ಸೇವೆ ತಕ್ಕಷ್ಟು ಉತ್ತಮವಾಗಿತ್ತು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದು ಆಗಾಗ ಹಾಳಾಗುತ್ತಿದೆ ಹಾಗೂ ಬೇಗನೆ ರಿಪೇರಿ ಕೂಡ ಆಗುವುದಿಲ್ಲ. ಹೀಗಾದರೆ ಇದು ಎಂಥ ಡಿಜಿಟಲ್ ಇಂಡಿಯ ಎಂದು ಕೇಳಬೇಕಾಗುತ್ತದೆ.

    ReplyDelete
    Replies
    1. ಖಾಸಗಿಗೆ ಅನುಕೂಲ ಮಾಡಿಕೊಡುವುದಕ್ಕೆ ಎಲ್ಲರೂ ತಾಮುಂದು ನಾಮುಂದು ಎಂದು ನಿಂತುಬಿಟ್ಟಿದ್ದಾರೆ...

      Delete
  2. Even his ardent critiques must admit the charm and the hype that our prime minister generates in his overseas trips. I literally get goosebumps.

    But to connect our villages and railway stations do we require Google and Microsoft's support? Isn't it antithetical to Make in India campaign? Don't we dozens of start ups ? Can't we trust our technological entrepreneurs?

    ReplyDelete
    Replies
    1. "ದೇಶೀ ಅಧಿಕಾರಿಗಳ ಜೊತೆಗೆ ಚರ್ಚಿಸಿ ಇಲ್ಲೇ ಡಿಜಿಟಲ್ ಇಂಡಿಯಾ ರೂಪುಗೊಂಡುಬಿಟ್ಟರೆ ಫಾರಿನ್ ಸಿಇಓಗಳ ಜೊತೆ ದೇಶ ವಿದೇಶದ ಮಾಧ್ಯಮಗಳಲ್ಲಿ ಮಿಂಚುವ ಅವಕಾಶ ತಪ್ಪುತ್ತದೆಯೆನ್ನುವ ಕೊರಗಿರಬೇಕು." ಅಷ್ಟೇ......

      Delete