Aug 29, 2015

ಮೀಸಲಾತಿ; ಇನ್ನೂ ಒಂದು ತಲೆಮಾರೂ ಮುಗಿದಿಲ್ಲ....

ಡಾ.ಸಿ.ಎಸ್.ದ್ವಾರಕಾನಾಥ್
ಗುಜರಾತಿನಲ್ಲಿ ಮತ್ತೆ ಮೀಸಲಾತಿಗೆ ಬೆಂಕಿ ಇಟ್ಟಿದ್ದಾರೆ!? ಗುಜರಾತಿನ ಮೀಸಲಾತಿ ವಿರೋಧಿ ಚಳುವಳಿಯ ಹಿನ್ನೆಲೆ, ಸಂಘಪರಿವಾರದ ನಡುವಳಿಕೆಗಳು, ಮನುವಾದಿ ಹಿನ್ನೆಲೆಯಿಂದ ಬಂದ ಹಾರ್ದಿಕ್ ಪಟೇಲ್ ಎಂಬ ’ಬಾಲಅಸ್ತ್ರ’! ಅವನ ಭಾಷೆ, ಅವನ ನುಡಿಕಟ್ಟು ಅವನ ಮನಸ್ಥಿತಿ ಎಲ್ಲವನ್ನು ಕಂಡಾಗ ಇದು ಒಂದು ಪೂರ್ವಗ್ರಹ ಪೀಡಿತ ಮೀಸಲಾತಿ ವಿರೋಧಿಗಳ ಷಡ್ಯಂತ್ರದಂತೆ ಕಾಣುತ್ತಿದೆ... ಆದರೆ... ಈ ನೆಪವನ್ನಿಟ್ಟುಕೊಂಡ ಸಂಘಪರಿವಾರದ ಮನಸ್ಸುಗಳು ಫೇಸ್‍ಬುಕ್ ಮತ್ತು ವಾಟ್ಸಪ್ಪುಗಳಲ್ಲಿ ಮೀಸಲಾತಿ ಬಗ್ಗೆ ಹಿಂದಿನಿಂದಲೂ ಮಾಡಿಕೊಂಡು ಬಂದ ವಾದವನ್ನೇ ಮತ್ತೆಮತ್ತೆ ಮಂಡಿಸುತ್ತಿವೆ... “...ಮೀಸಲಾತಿ ನೀಡುವುದಿದ್ದರೆ ಆರ್ಥಿಕ ಆಧಾರದ ಮೇಲೆ ನೀಡಬೇಕು, ಮೇಲ್ಜಾತಿಗಳಲ್ಲಿ ಬಡವರಿಲ್ಲವೆ? ಶೇ.35ಕ್ಕೆ ಸೀಟು, 95ಕ್ಕೆ ಸೀಟಿಲ್ಲ! ಇದ್ಯಾವ ನ್ಯಾಯ? ಮೀಸಲಾತಿಯಿಂದ ಪ್ರತಿಭೆ (ಮೆರಿಟ್) ನಾಶವಾಗುತ್ತಿದೆ, ಜಾತಿಗಳನ್ನು ಹುಟ್ಟುಹಾಕುವ ಮೀಸಲಾತಿಯನ್ನು ಕಿತ್ತು ಹಾಕಬೇಕು, ಇನ್ನೆಷ್ಟು ದಿನ ಮೀಸಲಾತಿ ನೀಡಬೇಕು? ಮೀಸಲಾತಿ ತೆಗೆಯುವವರೆಗೂ ಈ ದೇಶ ಉದ್ದಾರವಾಗಲ್ಲ...” ಮುಂತಾದ ವಾದಗಳನ್ನು ತಲೆಗೊಂದರಂತೆ ಮಂಡಿಸುತ್ತಿದ್ದಾರೆ ಇವಕ್ಕೆಲ್ಲಾ ಎಷ್ಟೇ ತರ್ಕಬದ್ದವಾಗಿ ಉತ್ತರಿಸಿದರೂ ಅಂತವರು ನಮ್ಮ ಯಾವ ಮಾತುಗಳನ್ನು ಒಪ್ಪುವಂತ ಮನಸ್ಥಿತಿ ಹೊಂದಿಲ್ಲ. ಆದ್ದರಿಂದ ಇಲ್ಲಿ ಒಂದಷ್ಟು ಒಳಹೊಕ್ಕು ಸರಳೀಕರಿಸಿ ಮೀಸಲಾತಿಯ ಅನಿವಾರ್ಯತೆಯನ್ನು ಹೇಳಬೇಕಾಗಿದೆ ಯಾಕೆಂದರೆ ಇಲ್ಲಿ ಮೀಸಲಾತಿ ವಿರೋಧಿಗಳೊಂದಿಗೆ ಮೀಸಲಾತಿ ಪಡೆಯುತ್ತಿರುವ ಅರಿವಿಲ್ಲದ “ಶೂಭ್ರಾ”ಗಳು ಸೇರಿಕೊಂಡವರಿದ್ದಾರೆ.!!

ಈಗ ಮೀಸಲಾತಿ ಪಡೆಯಲು ಹೊರಟಿವುದು ಬಹುತೇಕ ಈಗ ಅಕ್ಷರ ಜ್ಞಾನ ಪಡೆಯುತ್ತಿರುವ ಮೊದಲ ತಲೆಮಾರು... ಕಳೆದ ಪಾರ್ಲಿಮೆಂಟಿನಲ್ಲಿ ಕೇಂದ್ರ ಸಚಿವರಾಗಿದ್ದ ನಾರಾಯಣಸ್ವಾಮಿಯವರು ಮಂಡಿಸಿದ ಅಂಕಿ-ಅಂಶಗಳ ಪ್ರಕಾರ SC ಗಳಿಗೆ 22.5ಶೇ ಮೀಸಲಿದ್ದು ಅದರಲ್ಲಿ ಈವರೆಗೂ ಬಳಸಿರುವುದು ಸುಮಾರು 8.5% ಅಷ್ಟೆ. ST ಗಳಿಗೆ 7.5% ಇದ್ದು ಬಳಕೆಯಾಗಿರುವುದು ಕೇವಲ 3.5%, ಅಂತೆಯೇ OBC ಗಳಿಗೆ 27% ಇದ್ದು ಅದು ಬಳಕೆಯಾಗಿರುವುದು 4.5 ರಿಂದ 5% ಮಾತ್ರ! ಇನ್ನೂ ಪೂರ್ತಿಯಾಗಿ ಮೀಸಲಾತಿ ಒಂದು ತಲೆಮಾರಿನ ಮೂರನೇ ಒಂದು ಭಾಗಕ್ಕೂ ತಲುಪಲಿಲ್ಲ ಅಷ್ಟರಲ್ಲಿ ಏನೆಲ್ಲಾ ತಂತ್ರ, ಕುತಂತ್ರ, ಷಡ್ಯಂತ್ರ ನೋಡಿ.

ಜಾತಿಯನ್ನೇ ನೀತಿಯನ್ನಾಗಿ ಮಾಡಿಕೊಂಡ ದೇಶವಿದು, ಇದು ಕುಲಕಸುಬುಗಳನ್ನೇ ನುಂಗಿ ನೀರು ಕುಡಿದ ದೇಶ ಕೂಡ. ನಮ್ಮ ತಲೆಮಾರನ್ನು ಹೊರತುಪಡಿಸಿ ಹಿಂದಿನ ತಲೆಮಾರುಗಳನ್ನು ಒಮ್ಮೆ ಅವಲೋಕಿಸೋಣ. ಹಿಂದು ಧರ್ಮದ ತಳಪಾಯವಾದ ಚರ್ತುವರ್ಣ ಸಿದ್ಧಾಂತದ ಮೇಲಿನ ಮೂರು ವರ್ಗಗಳಾದ ಪುರೋಹಿತರು, ರಾಜರು(ಚಕ್ರವರ್ತಿಗಳು) ಮತ್ತು ವ್ಯಾಪಾರಸ್ತರೇ ಮುಂತಾದವರಿಗೆ ನಾಲ್ಕನೇ ವರ್ಣದ ಶೂದ್ರರು, ದಲಿತರು, ಅಲ್ಪಸಂಖ್ಯಾತರು ಸೇವೆ ಮಾಡುತ್ತಲೇ ಬಂದರು. ಇಂದು ಅದೇ ತಳಸಮುದಾಯ ಕುಡಿಗಳೇ ಮೀಸಲಾತಿಯನ್ನು ಬೇಡುತ್ತಿರುವುದು.

ಇಲ್ಲಿ ಅನೇಕ ಕುಲಗಳು ಮಾತನಾಡುತ್ತಿವೆ, ಒಮ್ಮೆ ಸಾವದಾನದಿಂದ ನೋಡಿ... ನಿಮ್ಮ ಮೂರೂ ವರ್ಣಗಳಿಗೆ ಕ್ಷೌರ ಮಾಡುತ್ತಲೇ ಬಂದ ಕ್ಷೌರಿಕ, ನಿಮಗೆ ಬಟ್ಟೆ ನೇಯ್ದುಕೊಟ್ಟ ದೇವಾಂಗ, ಅದನ್ನು ಹೊಲೆದುಕೊಟ್ಟ ಸಿಂಪಿಗ, ಅದನ್ನು ಒಗೆದು ಇಸ್ತ್ರಿ ಮಾಡಿಕೊಟ್ಟ ಅಗಸ, ನಿಮಗೆ ಚಪ್ಪಲಿ ಮಾಡಿಕೊಟ್ಟ ಚಮ್ಮಾರ, ನಿಮಗೆ ಕುಡಿಯಲಿಕ್ಕೆ, ಸ್ನಾನಕ್ಕೆ ನೀರುಕೊಟ್ಟ ನೀರಗಂಟಿ, ನಿಮ್ಮ ಸಂಧ್ಯಾವಂದನೆ, ಪೂಜೆಗಾಗಿ, ನಿಮ್ಮ ಗರ್ಭಗುಡಿಗೆ ದೇವರ ವಿಗ್ರಹ ಮಾಡಿಕೊಟ್ಟ ವಿಶ್ವಕರ್ಮ, ದೇವರ ದೀಪ ಹಚ್ಚಲು ಮಣ್ಣ ದೀಪ ಮಾಡಿಕೊಟ್ಟ ಕುಂಬಾರ, ಅದಕ್ಕೆ ಬತ್ತಿ ಮಾಡಿಕೊಟ್ಟ ಒಕ್ಕಲಿಗ, ಅದಕ್ಕೆ ಎಣ್ಣೆ ಮಾಡಿಕೊಟ್ಟ ಗಾಣಿಗ, ದೇವರ ಪೂಜೆಗೆ ಹೂವು ಬೆಳೆದು ಹರಿಶಿನ, ಕುಂಕುಮ ತಂದುಕೊಟ್ಟ ಬಲಿಜ, ನಿಮ್ಮ ಹೂವಿಗೆ ಬುಟ್ಟಿ ಮಾಡಿಕೊಟ್ಟ ಮೇದರ... ನಿಮಗೆ ಊದುಕಡ್ಡಿ ಮಾಡಿಕೊಟ್ಟ ಸಾಬಿ, ನೀವು ಪೂಜೆಗೆ ಕೂರಲು ಪೀಠಮಾಡಿಕೊಟ್ಟ ಬಡಗಿ... ಹೀಗೆ ಇಡೀ ಪೂಜೆಯಲ್ಲಿ ಮೇಲಿನವರದು ಮಂತ್ರದ ಉಗುಳು ಎನ್ನುವುದನ್ನು ಬಿಟ್ಟರೆ ಮಿಕ್ಕದ್ದೆಲ್ಲಾ ಕೆಳಗಿನವರು ತಮ್ಮ ‘ಮೆರಿಟ್’ನಿಂದ ಮಾಡಿಕೊಟ್ಟಿದ್ದೆ.

ನಿಮಗೆ ಅನ್ನ ಕೊಟ್ಟವನು ರೈತ (ಇಲ್ಲಿ ಒಕ್ಕಲಿಗ, ಲಿಂಗಾಯಿತರಾದಿಯಾಗಿ ಅನೇಕ ಜಾತಿವರ್ಗಗಳಿವೆ) ನಿಮಗೆ ತರಕಾರಿ ಬೆಳೆದು ಕೊಟ್ಟವನು ತಿಗಳ, ತರಕಾರಿ ಕೊಯ್ಯಲು ಕತ್ತಿ, ಯುದ್ದಮಾಡಲು ಕಠಾರಿ ಮಾಡಿಕೊಟ್ಟವನು ಕಮ್ಮಾರ, ನಿಮ್ಮ ಸಾರಿಗೆ ಉಪ್ಪು ಮಾಡಿಕೊಟ್ಟವನು ಉಪ್ಪಾರ, ನಿಮಗೆ ಹಾಲು, ಮೊಸರು, ಬೆಣ್ಣೆ ತುಪ್ಪ ಕೊಟ್ಟವನು ಗೊಲ್ಲ, ಕಾಡಿನ ಜೇನು, ಉತ್ಪನ್ನ ಕೊಟ್ಟವನು ಬೇಡ, ನಿಮ್ಮ ಮಲವನ್ನು ತಲೆಮೇಲೆ ಹೊತ್ತವನು ಭಂಗಿ, ನಿಮ್ಮ ಬೀದಿ ಗುಡಿಸಿ ಸ್ವಚ್ಚಗೊಳಿಸಿದವನು ಹೊಲೆಯ, ನಿಮ್ಮ ಸೂರಿಗೆ ಕಲ್ಲು, ಮಣ್ಣು ಹೊತ್ತವರು ವಡ್ಡರು, ನಿಮ್ಮ ಸೂರಿಗೆ ಕಲ್ಲು,ಮಣ್ಣು ಹೊತ್ತವನು ಒಡ್ಡ, ನೀವು ಮಲಗಲು ಹಾಸಿಗೆ ಮಾಡಿಕೊಟ್ಟವನು ಪಿಂಜಾರ, ನಿಮಗೆ ಬೆಚ್ಚಗೆ ಹೊದೆಯಲು ಕಂಬಳಿ ಮಾಡಿಕೊಟ್ಟವನು ಕುರುಬ, ನಿಮಗೆ ಬೇಕಾದಾಗ ಮತ್ತುನೀಡಲು ಸೇಂದಿ ಮಾಡಿಕೊಟ್ಟವನು ಈಡಿಗ... ನಿಮ್ಮ ಕಾಯಿಲೆಗೆ ಔಷಧಿ ಮಾಡಿಕೊಟ್ಟವರು, ನಿಮಗೆ ಮನರಂಜನೆ ನೀಡಿದವರು ದೊಂಬ, ದೊಂಬಿದಾಸ, ಸುಡುಗಾಡು ಸಿದ್ದರಾದಿಯಾಗಿ ಅನೇಕ ಅಲೆಮಾರಿಗಳು, ಆದಿವಾಸಿಗಳು... ಮಿಕ್ಕಂತೆ ನಿಮಗೆ ಅನೇಕ ರೀತಿಯಲ್ಲಿ ಪ್ರತ್ಯಕ್ಷವಾಗೋ, ಪರೋಕ್ಷವಾಗೋ ನಿಮ್ಮ ಸುತ್ತಾ ನಿಮ್ಮನ್ನು ತಾವು ಶ್ರಮದಿಂದ ರೂಪಿಸಿದ ಅದೆಷ್ಟೊ ಹೇಳ ಹೆಸರಿಲ್ಲದ ನೂರಾರು ಸಮುದಾಯಗಳಿವೆ... ಕಡೆಗೆ ನಿಮ್ಮ ಚಿತಾಭಸ್ಮವನ್ನು ನೀರ ಮೇಲೆ ಕೊಂಡೊಯ್ಯುವವನು ಬೆಸ್ತ..

ದುರಂತವೆಂದರೆ ಮೇಲಿನ ಯಾವುದೇ ಶ್ರಮವನ್ನು, ಕುಶಲ ಕುಲವೃತ್ತಿಗಳನ್ನು ಶಿಕ್ಷಣವನ್ನಾಗಿ ಪರಿಗಣಿಸದ ಈ ದೇಶದ ಮೇಲ್ಜಾತಿ ಮನಸ್ಸು, ಕುಂತು ಚಿಂತಿಸುವ, ಯೋಚಿಸುವ, ಮಂತ್ರ ವದರುವ, ಮಾತನಾಡುವಂತಹ ಬುದ್ಧಿ ಪೂರ್ವಕ ಕ್ರಿಯೆಯನ್ನೇ ಶಿಕ್ಷಣವೆಂದು ಪರಿಗಣಿಸಿತು. ಹಾಗಾಗಿ ಈ ದೇಶದ ಶಿಕ್ಷಣ ಪದ್ದತಿ ಬುದ್ಧಿ ಆಧಾರಿತವಾಯಿತೆ ಹೊರತು ಶ್ರಮ ಆಧಾರಿತವಾಗಲಿಲ್ಲ, ಇದರೊಂದಿಗೆ ತಲೆಮಾರುಗಳಿಂದಲೂ ಮೇಲಿನವರಾದ ನೀವು ಹೇಳುವವರಾಗೇ ಮುಂದುವರೆದಿರಿ, ಕೆಳಗಿನವರಾದ ನಾವು ಕೇಳುವವರಾಗಿಯೇ ಮುಂದುವರೆದೆವು, ನೀವು ಮಂತ್ರ ಹೇಳಿದಿರಿ ಅದು ನಮಗರ್ಥವಾಗದಿದ್ದರೂ ಅರ್ಥವಾದವರಂತೆ ತಲೆತೂಗಿದೆವು, ನೀವು ಹರಿಕತೆ ಮಾಡಿದಿರಿ ನಾವು ತಣ್ಣಗೆ ತೂಕಡಿಸುತ್ತಾ ಕೇಳಿಸಿಕೊಂಡೆವು, ನೀವು ವೇದ, ಉಪನಿಷತ್ತು, ಭಗವತ್ಗೀತೆ, ಪಾರಾಯಣ, ಭಾಗವತಗಳನ್ನು ತೋರಿ ‘ಅದರಲ್ಲಿ ಏನೆಲ್ಲಾ ಇದೆ’ ಅಂದಿರಿ, ನಾವು ಪ್ರಶ್ನಿಸದೆ ಒಪ್ಪಿಕೊಂಡೆವು, ನೀವು, ನಮಗೂ, ನಾವು ಕಾಣದ ದೇವರಿಗೂ ಮಧ್ಯೆ ಮಧ್ಯವರ್ತಿಗಳಾದಿರಿ, ನಮಗೆ ದೇವರು, ಸ್ವರ್ಗ, ನರಕದ ಬಗ್ಗೆ ಹೇಳುತ್ತಾ ನಮ್ಮನ್ನು ಭಯ ಭಕ್ತಿಯಿಂದ ಇರುವಂತೆ ನೋಡಿಕೊಂಡಿರಿ, ನೀವು ಆಳಿದಿರಿ ನಾವು ಆಳಿಸಿಕೊಂಡೆವು, ನಾವು ಬೆಳೆದದ್ದನ್ನು, ರೂಪಿಸಿದ್ದನ್ನು ನಮ್ಮಿಂದ ಪಡೆದು ನಮಗೇ ಮಾರಿದಿರಿ ನಾವು ನಮ್ರವಾಗಿ ಕೊಂಡುಕೊಂಡೆವು... ಕೆಳಸಮುದಾಯಗಳು ಉತ್ಪಾದಕ ಸಮುದಾಯಗಳಾಗೇ ಉಳಿದುಬಿಟ್ಟವು, ಮೇಲುಸಮುದಾಯಗಳು ಅನುತ್ಪಾದಕ ಸಮುದಾಯಗಳಾಗಿಯೇ ಮುಂದುವರೆದವು.!

ನೀವು ನಿಮ್ಮ ಬುದ್ಧಿ ಪೂರ್ವಕ ಶಿಕ್ಷಣದಿಂದ ನಮ್ಮ ಎಲ್ಲಾ ವೃತ್ತಿ, ಕುಲವೃತ್ತಿಗಳನ್ನು ಕಸಿದು ಶಿಕ್ಷಣವನ್ನಾಗಿ, ತಾಂತ್ರಿಕತೆಯನ್ನಾಗಿ ಪರಿವರ್ತಿಸಿದಿರಿ ಆದರೆ ನಮಗೆ ಅಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲಿಲ್ಲ!? ಯಾಕೆಂದರೆ ನಮಗೆ ಬುದ್ಧಿ ಆಧಾರಿತ ಶಿಕ್ಷಣವೇ ಇರಲಿಲ್ಲ... ನೀವು ಮುಂದುವರೆದವರಾಗಿಯೇ ಮುಂದುವರೆದಿರಿ ಸಹಜವಾಗಿಯೇ ನಾವು ಹಿಂದುಳಿದವರಾಗೇ ಹಿಂದುಳಿದೆವು. ನೀವು ಈ ದೇಶದ ಸಂಪನ್ಮೂಲಗಳನ್ನು, ಅಧಿಕಾರವನ್ನು, ಆಡಳಿತವನ್ನು, ವ್ಯಾಪಾರ ವಹಿವಾಟುಗಳನ್ನು ನಿಮ್ಮ ಕೈಯಲ್ಲಿ ಹಿಡಿದಿರಿ, ನಾವು ಕುಲವೃತ್ತಿಗಳನ್ನು ಕಳಕೊಂಡು ಬರಿಗೈ ಆದೆವು. ನಿಮ್ಮೊಂದಿಗೆ ನಿಮ್ಮ ಬೌದ್ದಿಕ ಶಿಕ್ಷಣದ ಸ್ಪರ್ಧೆಯಲ್ಲಿ ಸ್ಪರ್ಧಿಸಲಾರದೆ ಸೋತೆವು.

ಈ ಹಿನ್ನೆಲೆಯನ್ನರಿತ ‘ಬೆಳಕು’ ಡಾ.ಅಂಬೇಡ್ಕರ್ ಎಂಬ ಈ ಜಗತ್ತು ಕಂಡರಿಯದ ಸಮಾಜ ಶಾಸ್ತ್ರಜ್ಞ, ಮಾನವತವಾದಿ, ಪ್ರಜಾಪ್ರಭುತ್ವವಾದಿ ನಮಗಾಗಿ ಜನ್ಮತಾಳಿ ಬಂದರು, ತಾವು ಬರೆದ ಸಂವಿಧಾನದಲ್ಲಿ ಅವಕಾಶವಂಚಿತರಿಗೆ ಅವಕಾಶಗಳನ್ನು ಕಲ್ಪಿಸಬೇಕೆಂದು ಮೀಸಲಾತಿ ಕೊಟ್ಟರು, ಇದನ್ನು ‘ಪ್ರಾತಿನಿದ್ಯ’ ಎಂದರು, ಶತಶತಮಾನಗಳಿಂದ ವಂಚಿತರಾದವರಿಗೆ ದೇಶ ಕಟ್ಟುವ, ಶಾಸನ ರೂಪಿಸುವ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಿದರು. ಇದರಿಂದಾಗಿ ಅಸಮಾನತೆಯನ್ನೇ ಉಸಿರಾಡುವ ಈ ದೇಶಕ್ಕೆ ಸಮಾನತೆಯ ಹೊಸ ಗಾಳಿ ಬರಲಾಂಭಿಸಿತು... ದನಿಯಿಲ್ಲದ ಜಾತಿವರ್ಗಗಳಿಗೆ ಧ್ವನಿನೀಡಿ ಸ್ವಾಭಿಮಾನದಿಂದ ಬದುಕುವುದನ್ನು ಕಲಿಸಿದರು, ಸಂವಿಧಾನದ ಮೊದಲ ಫಲಗಳನ್ನು ಅನುಭವಿಸುತ್ತಿರುವ ಮೊದಲ ತಲೆಮಾರು ಇಂದಿನದು. ಈ ಒಂದು ತಲೆಮಾರಾದರೂ ಕೊಂಚ ಸಮಾನತೆಯಿಂದ ಬದುಕಲು ಸಾಧ್ಯವಾಗುತ್ತದೇನೋ ಎನ್ನುವಷ್ಟರಲ್ಲಿ ಇದನ್ನು ಸಹಿಸಲಾರದ ಮನಸ್ಸುಗಳು ಈ ಮೀಸಲಾತಿಯೆಂಬ ಸಮಾನತೆಯ ಆಶಯಕ್ಕೆ ಬೆಂಕಿ ಇಡುತ್ತಿವೆ!!

ಸುಮಾರು ಐದು ಸಾವಿರ ವರ್ಷಗಳಿಂದ ವಂಚಿತರಾದವರಿಗೆ ಸಂವಿಧಾನಬದ್ಧ ಮೀಸಲಾತಿಯಿಂದಾಗಿ ಕೇವಲ ಈ 50 ವರ್ಷಗಳಿಂದ ಸ್ಥಾನಮಾನ ದೊರಕುತ್ತಿದೆ, ಉಂಡವರು ಅದನ್ನು ಸಹಿಸದಿದ್ದರೆ ಹೇಗೆ?

ಇಲ್ಲೊಂದು ಸವಾಲಿದೆ, ಇದನ್ನು ನೀವು ಸ್ವೀಕರಿಸಬೇಕಿಲ್ಲ, ಕೇವಲ ಮಾತಿಗಾಗಿ... ಒಮ್ಮೆ ಈ ಬಗ್ಗೆ ಚಿಂತಿಸಿ ಅಥವಾ ಕಲ್ಪಿಸಿಕೊಳ್ಳಿ ಸಾಕು... ಶತಶತಮಾನಗಳಿಂದ ಶಿಕ್ಷಣ ಮತ್ತು ಶಿಕ್ಷಣದ ಲಾಭಗಳನ್ನು ಪಡೆದ ನೀವು ಕೇವಲ 10 ವರ್ಷ ಅಕ್ಷರದಿಂದ ದೂರವಿಡಿ, ನಿಮ್ಮ ಮನೆಮಠಗಳಲ್ಲಿ ಈ ಹತ್ತು ವರ್ಷ ಯಾರೂ ಅಕ್ಷರ ಕಲಿಯದಂತೆ ಇದ್ದುಬಿಡಿ, ನಿಮ್ಮವರೆಲ್ಲರನ್ನು ಅಕ್ಷರ ಜ್ಞಾನದಿಂದ ದೂರವಿರಿಸಿ, ಹತ್ತು ವರ್ಷದ ಆಚೆಗೆ ಶಿಕ್ಷಣ ಕೊಡಿ, ಈ ಹತ್ತು ವರ್ಷ ನಿಮಗೆ ಶಿಕ್ಷಣ ನಿರಾಕರಿಸಿದ ಪರಿಣಾಮ ಈ ದೇಶದ ಬಹುಜನರೆಲ್ಲಾ ಸೇರಿ ಸೂರ್ಯ-ಚಂದ್ರರಿರುವರೆಗೂ ನಿಮಗೆ ಮೀಸಲಾತಿ ನೀಡುವಂತೆ ನೋಡಿಕೊಳ್ಳುತ್ತೇವೆ. ಸಂವಿಧಾನವನ್ನು ತಿದ್ದುಪಡಿ ಮಾಡಿಸುತ್ತೇವೆ..., ಹತ್ತು ನಿಮಿಷ ಕಣ್ಣುಕಟ್ಟಿದರೇನೆ ಇರಲು ಸಾಧ್ಯವಾಗದವರಿಗೆ ಶತಶತಮಾನಗಳ ಕಾಲ ಕತ್ತಲ ಲೋಕದಲ್ಲಿದ್ದವರ ಬದುಕು ಹೇಗೆ ಅರ್ಥವಾಗಬೇಕು? ಒಮ್ಮೆ ದಯವಿಟ್ಟು ಅನ್ಯತಾ ಭಾವಿಸದೆ ಆತ್ಮಾವಲೋಕನ ಮಾಡಿಕೊಳ್ಳಿ...

ಯಾವುದೇ ಚಾರಿತ್ರಿಕ ಹಿನ್ನೆಲೆಗಳನ್ನು, ಕಟುವಾಸ್ತವಗಳನ್ನು ಅರಿಯದೆ ಯಾರದೋ ಶ್ರಮವನ್ನು ತಿನ್ನುತ್ತಾ ತೇಗುತ್ತಾ ಸುಮ್ಮನೆ ಕೂತು ವಿರೋಧಿಸಬಾರದು. ಬೀಸು ಹೇಳಿಕೆಗಳನ್ನು ನೀಡಬಾರದು.

ಈ ದೇಶದ ರಾಷ್ಟ್ರಗ್ರಂಥ ಸಂವಿಧಾನವೊಂದೆ, ಸಂವಿಧಾನದ ಆಶಯಗಳಿಗೆ ವಿರೋಧ ವ್ಯಕ್ತಪಡಿಸುವವನು ದೇಶದಲ್ಲಿ ರಾಷ್ಟ್ರೀಯವಾದಿಯಾಗಿ ಇರಲಾರ.... ಅಂತವನನ್ನು ರಾಷ್ಟ್ರಪ್ರೇಮಿ ಎಂದು ಕರೆಯಲು ಸಾಧ್ಯವಿಲ್ಲ....

2 comments:

 1. Nothing new.
  One sided, Biased, Prejudiced, Hatedness against Poor Brahmins. Pls note all our ancient stories start with " Once upon a time, there was a poor Brahman". Dont say all these were written by Brahmins.
  Girish Kulkarni (A Poor Brahmin)
  gkulkarni1973@gmail.com

  ReplyDelete
 2. ಇವನೊಬ್ಬ ಕಳ್ಳ ಲಂಕೇಶ್ ಪತ್ರಿಕೆಯಲ್ಲಿ ಸರ್ಕಾರದ ಸ್ಕ್ಯಾಮ್ ಒಂದನ್ನು ವರದಿ ಮಾಡಿದ್ದ ಪತ್ರಕರ್ತನ ಮೇಲೆ ಕೋರ್ಟ್ ಕೇಸ್ ಬಿದ್ದಿತ್ತು, ಅದನ್ನು ಇವನ ಬಳಿ ತೆಗೆದುಕೊಂಡು ಪತ್ರಕರ್ತ ಹೂದಾಗ ಇವನು ಅದನ್ನು ಡೀಲ್ ಮಾಡಿ ದೊಡ್ಡ ಮಟ್ಟದ ದುಡ್ಡು ಮಾಡಿಕೊಂಡು ಸಾಕ್ಷಿಗಳನ್ನೆಲ್ಲ ನಾಶ ಮಾಡಿ ಪತ್ರಕರ್ತ ಜೈಲಿಗೆ ಹೂಗುವ ಮಟ್ಟಕ್ಕೆ ತಂದಿದ್ದ.

  ReplyDelete