Aug 30, 2015

ಆತುರದ ತೀರ್ಮಾನಗಳೇಕೆ?

MM Kalburgi
ಖ್ಯಾತ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿಯವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ವರದಿಗಳ ಪ್ರಕಾರ ಇಪ್ಪತ್ತರ ಆಸುಪಾಸಿನ ಯುವಕ ಅವರ ಮನೆ ಪ್ರವೇಶಿಸಿ ಗುಂಡಿಕ್ಕಿ ಕೊಂದಿದ್ದಾನೆ. ಕಾರಣಗಳು ಇನ್ನೂ ಪತ್ತೆಯಾಗಿಲ್ಲವಷ್ಟೇ. ತನಿಖೆ ಪ್ರಾರಂಭವಾಗಿ prima facie ಇಂತಹ ಕಾರಣಕ್ಕೆ ಕೊಲೆಯಾಗಿರಬಹುದು ಎಂದು ಪೋಲೀಸರು ನಿರ್ಧರಿಸುವವರೆಗೂ ಕಾಯು ತಾಳ್ಮೆ ನಮ್ಮಲ್ಲಿಲ್ಲವೇ? ಎಂಬ ಬೇಸರ ಮೂಡುವುದು ಸಾಮಾಜಿಕ ಜಾಲತಾಣಗಳಲ್ಲಿನ ಜನರ ವರ್ತನೆಯನ್ನು ಗಮನಿಸಿದಾಗ.
ಕಲಬುರ್ಗಿಯವರನ್ನು ನಮ್ಮಂತವರು ಓದಿಕೊಂಡಿರುವುದು ಪತ್ರಿಕೆಗಳಲ್ಲಿನ ಅವರ ಅಂಕಣಗಳ ಮುಖಾಂತರ ಮಾತ್ರ. ಹಿಂದೂ ಧರ್ಮದ ಸೋಗಲಾಡಿತನಗಳ ವಿರುದ್ಧ ಬರೆಯುತ್ತಿದ್ದರು, ಮಾತನಾಡುತ್ತಿದ್ದರು. ಆ ಕಾರಣಕ್ಕಾಗಿ ಬಲಪಂಥೀಯ ಸಂಘಟನೆಗಳು ಅವರ ಮೇಲೆ ಕೋಪಗೊಂಡಿದ್ದು, ಆ ಕೋಪ ಅವರ ಮೇಲಿನ ಹಲ್ಲೆಗೂ ಪ್ರೇರೇಪಿಸಿದ್ದು, ಕಲಬುರ್ಗಿಯವರಿಗೆ ಪೋಲೀಸ್ ಬೆಂಗಾವಲು ನೀಡಿದ್ದೆಲ್ಲವೂ ಸತ್ಯವೇ. (ಬೆಂಗಾವಲು ಸಾಕೆಂದು ಇತ್ತೀಚೆಗೆ ಅವರು ಹೇಳಿದ್ದರಂತೆ). ಅಲ್ಲಿಗೆ ಬಲಪಂಥೀಯರಿಂದ ಹತ್ಯೆಗೊಳಗಾಗಿರಬಹುದಾದು ಒಂದು ಸಾಧ್ಯತೆಯೇ ಹೊರತು ಅದೇ ಕಾರಣ ಎಂದು ಖಡಾಖಂಡಿತವಾಗಿ ಹೇಳಲು ಸದ್ಯಕ್ಕೆ ಸಾಧ್ಯವಿಲ್ಲ. 
ಇದು ಉಗ್ರ ಬಲಪಂಥೀಯರದೇ ಕೃತ್ಯ ಎಂದು ನೋಡಿ ಬಂದವರಂತೆ ಹೇಳುತ್ತಿರುವವರ ನಡುವೆ, 'ನೋಡಿ, ಈ ವಿಚಾರವಾದಿಗಳು ಈ ಘಟನೆಯನ್ನು ಬಲಪಂಥೀಯರ ತಲೆಗೆ ಕಟ್ಟಿಬಿಡುತ್ತಾರೆ. ವೈಯಕ್ತಿಕ ಕಾರಣಕ್ಕಾಗಿ ಕೊಲೆ ನಡೆದಿದ್ದರೂ ಬಲಪಂಥೀಯರದೇ ಕೃತ್ಯ ಎಂದು ಗೂಬೆ ಕೂರಿಸುತ್ತಾರೆ' ಎಂದು ಹೇಳುವವರ ಸಂಖೈಯೂ ಕಡಿಮೆಯಿಲ್ಲ. ಬಲಪಂಥೀಯರು ಮಾಡೇ ಇಲ್ಲ ಎನ್ನುವ ಖಚಿತತೆ ಅವರಲ್ಲಿದೆಯಾ? ಉಹ್ಞೂ. ಫೇಸ್ ಬುಕ್ನಂತಹ ಒಂದು ವೇದಿಕೆಯಿದೆ ಒದರಿಕೊಂಡುಬಿಡೋಣ ಎಂಬ ಮನಸ್ಥಿತಿಯಷ್ಟೇ. 'ಹಿಂದೂಗಳನ್ನು ಟೀಕಿಸುತ್ತಿದ್ದ. ಹಿಂಗೇ ಸಾಯ್ಬೇಕು. ವಿಚಾರವಾದಿಗಳೆಲ್ಲರಿಗೂ ಇದೇ ಗತಿ' ಎಂದು ಅಟ್ಟಹಾಸ ಮಾಡುತ್ತಿರುವವರೂ ಇದ್ದಾರೆ! 
ಈ ತರಹದ ಅನಗತ್ಯ ಆತುರದ ತೀರ್ಮಾನಗಳಿಂದ ಆಗುವ ಅನಾಹುತಗಳೇನು ಅನ್ನುವುದನ್ನು ಕರ್ನಾಟಕದಲ್ಲೇ ಕಂಡಿದ್ದೇವೆ. ಡಿ.ಕೆ.ರವಿಯ ಸಾವಿನಲ್ಲಿ. ಅದು ಆತ್ಮಹತ್ಯೆಯೆಂದೇ ತೀರ್ಮಾನಿಸಿಬಿಟ್ಟ ಜನರು ಪೋಲೀಸ್ ಅಧಿಕಾರಿಗಳು prima facie ಹೇಳಿದ್ದನ್ನೂ ನಂಬಲಿಲ್ಲ, ಪ್ರಾಥಮಿಕ ತನಿಖೆಯ ನಂತರ ನಮ್ಮ ಪೋಲೀಸರು ಹೇಳಿದ್ದನ್ನೂ ನಂಬಲಿಲ್ಲ. ಕೊನೆಗೆ ಸಿಬಿಐ ಇದು ಹತ್ಯೆ ಎಂದು ಹೇಳಿತಾ? ಒಂದು ಕೊಲೆಗೆ/ಸಾವಿಗೆ ಹತ್ತಾರು ಕೋನಗಳಿರುತ್ತವೆ. ಬಹುತೇಕ ಪ್ರಕರಣಗಳಲ್ಲಿ ಒಂದೆರಡು ದಿನಗಳಲ್ಲೇ ಅಸಲೀ ಕಾರಣ ಪೋಲೀಸರಿಗೆ ತಿಳಿಯುತ್ತದೆ. ತುಂಬ ಬುದ್ಧಿವಂತಿಕೆಯ ಕೊಲೆ ಪ್ರಕರಣಗಳಲ್ಲಿ ಒಂದಷ್ಟು ತಡವಾಗಬಹುದು. ಒಂದೆರಡು ದಿನ ಕಾಯುವ ತಾಳ್ಮೆಯೂ ನಮ್ಮಲ್ಲಿ ಸತ್ತುಹೋಗಿದೆಯೇ?
ಸಂಶೋಧಕರೊಬ್ಬರ ಹತ್ಯೆಯ ಸಂದರ್ಭದಲ್ಲಿ ನಿಜ ಆರೋಪಿಗಳಿಗೆ ಶಿಕ್ಷೆಯಾಗಲಿ ಎಂದು ಆಶಿಸೋಣ, ಪೋಲೀಸರು, ಸರಕಾರ ನಿಷ್ಕ್ರಿಯತೆ ತೋರಿಸಿದರೆ ಪ್ರತಿಭಟಿಸೋಣ. ಊಹೆಗಳೊಂದಿಗೆ, ನಮ್ಮದೇ ಕಥೆಗಳೊಂದಿಗೆ, ದ್ವೇಷದೊಂದಿಗೆ ಸತ್ತ ಜೀವಕ್ಕೆ ಅವಮಾನ ಮಾಡದಿದ್ದರದೇ ಪುಣ್ಯ.

2 comments:

 1. Wonderful article. News channel anchors sound like they are judges, still worse they take upon themselves the role of God almighty.

  I have a complaint against you. When you yourself advocate in your blogs the need for equanimity in making opinion, I think you should listen to yourself once. By calling AAP as a party of jokers with hats in one of your conversations with our common friend, you have violated your own dictum. Not that you should not criticize a political party , you get that right from our constitution itself. But my objection is share those jokes with us also which made you laugh.

  ReplyDelete
  Replies
  1. ನಾನದನ್ನು ಹೇಳಿದ್ದಕ್ಕೂ ಅದು ನಿನಗೆ ಕನ್ವೇ ಆಗಿ ನೀನದನ್ನು ಅರ್ಥಮಾಡಿಕೊಂಡದ್ದಕ್ಕೂ ತುಂಬಾ ವ್ಯತ್ಯಾಸವಿದೆ! ರಾಜಕೀಯೇತರ ಕಾರ್ಯಕ್ರಮಗಳಿಗೂ ಆಪ್ ಎಂದು ಬರೆದಿರುವ ಟೊಪ್ಪಿಗಳನ್ನು ಹಾಕಿಕೊಂಡು ಬರುವುದನ್ನು ನೋಡಿದಾಗ ಯೂನಿಫಾರ್ಮ್ ಧರಿಸಿದ ಮಕ್ಕಳಂತೆ ಕಂಡು ನಗು ಬರುತ್ತದೆ ಎನ್ನುವುದು ನನ್ನ ಅಭಿಪ್ರಾಯವಾಗಿತ್ತು. ರಾಜಕೀಯ ಕಾರ್ಯಕ್ರಮಗಳಲ್ಲಿ ಧರಿಸುವುದರ ಬಗ್ಗೆಯಲ್ಲ...

   Delete