Aug 24, 2014

ಸಮಾಧಿಗಳ ಆಗರವಾಗುತ್ತಿರುವ ಕಲಾಗ್ರಾಮ


ಕಲಾಗ್ರಾಮದಲ್ಲಿ ಅನಂತಮೂರ್ತಿಯವರ ಅಂತ್ಯಸಂಸ್ಕಾರ

ಡಾ ಅಶೋಕ್ ಕೆ ಆರ್
ಸತ್ತ ಖ್ಯಾತನಾಮರನ್ನು ಸಮಾಧಿಯ ಪ್ರತಿಮೆಯೊಳಗೆ ಬಂಧಿಸುವುದು ಹೊಸತೇನಲ್ಲ. ಕೆಲವೊಮ್ಮೆ ಈ ಸಮಾಧಿಯ ಸ್ಥಳಗಳು ಅವರ ಹಾದಿಯಲ್ಲಿ ಕೊಂಚ ದೂರವಾದರೂ ನಡೆದು ಅನುಭೂತಿ ಪಡೆದುಕೊಳ್ಳುವವರಿಗೆ ಸಹಕಾರಿಯಾಗುತ್ತದೆ. ಬಹಳಷ್ಟು ಬಾರಿ ಈ ಸ್ಥಳಗಳು ರಂಜನೀಯ ಪ್ರೇಕ್ಷಣೀಯ ಸ್ಥಳಗಳಾಗಿ ಪರಿವರ್ತಿತವಾಗಿ ವಾಣಿಜ್ಯ ಉದ್ದೇಶಕ್ಕೆ ಮೀಸಲಾಗಿಬಿಡುವ ಅಪಾಯವಿದೆ. ಅನೇಕ ಕಡೆ ಈ ಅಪಾಯ ಜಾರಿಯೂ ಆಗಿಹೋಗಿದೆ.

ಶಿವರಾಮ ಕಾರಂತರ ಬಾಲವನ
ಸಾಹಿತಿಯ ಹುಟ್ಟು, ಬೆಳವಣಿಗೆ ಅಥವಾ ಸಾವು ಪ್ರತಿಮೆಯೊಳಗೆ ಬಂಧಿಸಪಟ್ಟರೂ ಮುಂದಿನ ಪೀಳಿಗೆಯವರಿಗೂ ಪ್ರೇರಕವಾದ ರೂಪ ಪಡೆದಿರುವುದು ಕೆಲವೇ ಕೆಲವು ಕಡೆ. ಅಂತಹದರಲ್ಲಿ ಕುಪ್ಪಳ್ಳಿಯ ಕವಿಶೈಲ, ಕುವೆಂಪುರವರು ಹುಟ್ಟಿದ ಮನೆ, ಪುತ್ತೂರಿನಲ್ಲಿರುವ ಶಿವರಾಮ ಕಾರಂತರ ಬಾಲವನ ಪ್ರಮುಖವಾದವು. ಕುವೆಂಪುರವರಿಗೆ ಕವಿಶೈಲ ಸ್ಪೂರ್ತಿಯಾಗಿತ್ತು, ಅವರ ಅನೇಕ ಬರಹಗಳಲ್ಲಿ ಕವಿಶೈಲ ಕೂಡ ಒಂದು ಪಾತ್ರವಾಗಿ ಮೂಡಿ ಬಂದಿದೆ. ಇನ್ನು ಶಿವರಾಮ ಕಾರಂತರು ಪುತ್ತೂರಿನಲ್ಲಿರುವ ಮನೆಯಲ್ಲಿ ವಾಸವಿದ್ದರು. ಅಲ್ಲಿಟ್ಟಿರುವ ಅನೇಕ ವಸ್ತುಗಳನ್ನು ಸ್ವತಃ ಉಪಯೋಗಿಸಿದ್ದರು. ಅವರ ಮನೆಯ ಜೊತೆಗೆ ಅಲ್ಲೀಗ ಗೃಂಥಾಲಯವಿದೆ, ರಂಗಮಂದಿರವಿದೆ, ಈಜುಕೊಳವಿದೆ. ಒಂದಷ್ಟು ವಾಣೀಜ್ಯೀಕರಣಗೊಂಡಿದ್ದರೂ ಸ್ಪೂರ್ತಿಗಾಗಿ ಅವರು ಒಡನಾಡಿದ ಮರಗಿಡಗಳ ಜೊತೆ ಸಂವಹನಿಸುವುದಕ್ಕಾಗಿಯಾದರೂ ಅಲ್ಲಿಗೆ ಭೇಟಿ ಕೊಡಬಹುದು. ಇದೇ ಮಾತನ್ನು ಧಾರವಾಡಕ್ಕೆ ಹೋಗಿದ್ದಾಗ ನೋಡಿದ ದ.ರಾ.ಬೇಂದ್ರೆಯವರಿಗೆ ಸ್ಪೂರ್ತಿ ನೀಡಿದ ಸಾಧನಕೇರಿಯ ಬಗ್ಗೆ ಹೇಳಲು ಸಾಧ್ಯವಿಲ್ಲ. ಬೇಂದ್ರೆಯವರದೊಂದು ಪ್ರತಿಮೆ, ಅವರ ಕೆಲವು ಸಾಲುಗಳ ಪ್ಲೆಕ್ಸ್ ಗಳನ್ನೊರತುಪಡಿಸಿದರೆ ಅದು ಸಂಪೂರ್ಣ ವಾಣಿಜ್ಯೀಕರಣಗೊಂಡ ಲೇಕ್ ಅಷ್ಟೇ. ಇನ್ನು ಕವಿಶೈಲದ ಬುಡದಲ್ಲಿ ಅದರ ಎದುರುಗಡೆಯೇ ಇರುವ ಪೂರ್ಣಚಂದ್ರ ತೇಜಸ್ವಿಯವರ ಸಮಾಧಿಯೂ ಕೂಡ ಬೇಡದ ಸ್ಥಳದಲ್ಲಿರುವಂತೆಯೇ ಭಾಸವಾಗುತ್ತದೆ. ಅವರ ಸ್ವಂತ ಊರು ಕುಪ್ಪಳ್ಳಿಯೆಂಬುದು ನಿಜವಾದರೂ ತೇಜಸ್ವಿಯೆಂದರೆ ಮೂಡಿಗೆರೆ ಹ್ಯಾಂಡ್ ಪೋಸ್ಟ್, ಕುಪ್ಪಳ್ಳಿ ಎಂದರೆ ಕುವೆಂಪು.
ಇನ್ನು ಬೆಂಗಳೂರಿನಲ್ಲಿ ರಾಜ್ ಕುಮಾರರ ಸಮಾಧಿ ಕಂಠೀರವ ಸ್ಟುಡಿಯೋದಲ್ಲಿದೆ. ಅವರು ಅಲ್ಲಿಯೇ ಕೆಲಸ ಮಾಡಿದವರು ಎಂದು ಸಮಾಧಾನ ಪಡಬಹುದಾದರೂ ಸಮಾಧಿಗಳಿಗಷ್ಟೆ ಬೆಲೆ ಕೊಡುತ್ತ ಹೋದರೆ ಏನಾಗುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ವಿಷ್ಣುವರ್ಧನರ ಸಮಾಧಿಯಿದೆ. ಅಭಿಮಾನ್ ಸ್ಟುಡಿಯೋಗೆ ಸೇರಿದ ಜಾಗದಲ್ಲಿ ಅವರ ಸಮಾಧಿ ನಿರ್ಮಿಸಿ ಆ ಸ್ಟುಡಿಯೋದ ಮಾಲೀಕರು ಅದಕ್ಕೆ ತಕರಾರು ತೆಗೆದು…… ಸತ್ತ ನಂತರ ಇಷ್ಟೆಲ್ಲ ಮಾಡಬೇಕಾ ಎನ್ನಿಸುವಂತೆ ಮಾಡಿದೆ. ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಹೊಂದಿಕೊಂಡಂತೆ ಕಲಾಗ್ರಾಮ ನಿರ್ಮಿಸಲಾಗಿದೆ. ಎಲ್ಲಾ ರಂಗಚಟುವಟಿಕೆಗಳೂ ರವೀಂದ್ರ ಕಲಾಕ್ಷೇತ್ರಕ್ಕೆ ಸೀಮಿತವಾಗದಿರಲಿ ಎಂಬ ಉದ್ದೇಶದಿಂದ ಕಲಾಗ್ರಾಮ ನಿರ್ಮಿಸಲಾಗಿದೆ. ನಗರದ ಹೃದಯ ಭಾಗದಲ್ಲೇ ಇರುವ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಆ ಟ್ರಾಫಿಕ್ಕಿನಲ್ಲಿ ಹೋಗುವ ಮನಸ್ಸು ಮಾಡದವರಿಗೆ ಟ್ರಾಫಿಕ್ಕು ಕೊಂಚ ಕಮ್ಮಿಯಿರುವ ಕಲಾಗ್ರಾಮ ಸೂಕ್ತ ಎಂಬ ಭಾವನೆಯಿತ್ತು. ಇಲ್ಲಿ ತುಂಬಾ ಕಾರ್ಯಕ್ರಮಗಳೇನೂ ನಡೆಯುವುದಿಲ್ಲವಾದರೂ ಕಾಲ ಸವೆದಂತೆ ಕಾರ್ಯಕ್ರಮಗಳ ಸಂಖೈಯೂ ಹೆಚ್ಚಾಗುತ್ತಿದೆ. (ಎಲ್ಲಾ ಕಾರ್ಯಕ್ರಮಗಳೂ ಕಲಾಗ್ರಾಮದಲ್ಲೇ ನಡೆಯಲು ಶುರುವಾಗಿ, ರವೀಂದ್ರ ಕಲಾಕ್ಷೇತ್ರ ಖಾಲಿ ಹೊಡೆದುಬಿಟ್ಟರೆ ನಷ್ಟದ ನೆಪದಲ್ಲಿ ಹೃದಯ ಭಾಗದಲ್ಲಿರುವ ಜಾಗವನ್ನು ಸರ್ಕಾರ ಬೇರೆ ವಾಣಿಜ್ಯ ವ್ಯವಹಾರಕ್ಕೆ ಉಪಯೋಗಿಸಬಹುದು ಎಂಬ ಭಯವೂ ಇದೆ!) ಇಂತಹ ಉದ್ದೇಶದ ಕಲಾಗ್ರಾಮವನ್ನು ಈಗ ನಿಧಾನಕ್ಕೆ ಮಸಣದ ಮನೆಯಾಗಿ ಪರಿವರ್ತಿಸುವ ಕ್ರಿಯೆ ಆರಂಭವಾಗಿಹೋಗಿದೆಯಾ?
ಜಿ.ಎಸ್.ಶಿವರುದ್ರಪ್ಪನವರ ಮರಣವಾದಾಗ ಅವರ ಸಮಾಧಿ ನಿರ್ಮಾಣವಾಗಿದ್ದು ಇದೇ ಕಲಾಗ್ರಾಮದಲ್ಲಿ. ಊರ ಹೊರಗಿನ ಜಾಗ, ವಿಶಾಲವಾದ ಜಾಗ ಎಂಬ ಕಾರಣಕ್ಕೆ ಇಲ್ಲಿಗೆ ತರಲು ನಿರ್ಧರಿಸಿದರೇನೋ. ಈಗ ಅನಂತಮೂರ್ತಿಯವರ ದೇಹವನ್ನು ಮತ್ತಿದೇ ಕಲಾಗ್ರಾಮಕ್ಕೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಸಮಾಧಿ ಕಟ್ಟುವ ಕೆಲಸವೂ ಭರದಿಂದ ಸಾಗುವುದರಲ್ಲಿ ಅನುಮಾನವಿಲ್ಲ. ಜಿ.ಎಸ್.ಎಸ್ ಆಗಲೀ ಅನಂತಮೂರ್ತಿ ಆಗಲೀ ಮತ್ಯಾರಾದರೂ ಆಗಿರಲಿ ಅವರಿಗೆ ಗೌರವ ಸಿಗಬೇಕಾದದ್ದು ಅವರ ಬರಹ, ವಿಚಾರಗಳಿಂದಲೇ ಹೊರತು ಸಮಾಧಿಯಿಂದಲ್ಲವಲ್ಲ. ಹೋಕ್ಕೊಳ್ಳಲಿ ಜಿ.ಎಸ್.ಎಸ್, ಅನಂತಮೂರ್ತಿಯವರಿಗೆ ಕಲಾಗ್ರಾಮ ಸ್ಪೂರ್ತಿಯ ಸೆಲೆಯಾಗಿತ್ತೇ? ಇಲ್ಲವಲ್ಲ. ಖ್ಯಾತನಾಮರ ಸಮಾಧಿಗಾಗಿ ಮುಂದಿನ ಕಲಾವಿದರ ಭವಿಷ್ಯ ರೂಪಿಸಬೇಕಾದ ಸ್ಥಳಗಳನ್ನು ದುರುಪಯೋಗಪಡಿಸಿಕೊಳ್ಳುವುದು ಸರಿಯಾ?

4 comments:

  1. This comment has been removed by a blog administrator.

    ReplyDelete
    Replies
    1. ಹೌದು ಸರ್... ಖಂಡಿತ ಇದು ಒಳ್ಳೆಯ ಬೆಳವಣಿಗೆಯಲ್ಲ

      Delete
  2. ನಿನ್ನೆಯ ಪ್ರಜಾವಾನಿಯಲ್ಲಿ ಪ್ರಸನ್ನ ಸರಿಯಾಗಿಯೇ ಬರೆದಿದ್ದಾರೆ, ಕಲಾಗ್ರಾ ಮ ಕಲಹ ಗ್ರಾಮವಾಗದಿರಲಿ, ಕುವೆಂಪು ನಿಧನರಾದಾಗ ಸರ್ಕಾರ ವಿ.ವಿ. ಆವರಣದಲ್ಲಿ ಅಂತ್ಯ ಸಂಸ್ಕಾರ ಮಾಡಲು ಹೊರಟಾಗ ತೇಜಸ್ವಿ ಅನ್ನು ವಿರೋಧಿಸಿದ್ದನ್ನು ನೆನಪಿಸಿಕೊಳ್ಳೋಣ ...

    ReplyDelete
    Replies
    1. ಬೇಕೋ ಬೇಡವೋ ಕಲಾಗ್ರಾಮವೆಂಬುದು ಸ್ಮಶಾನವಾಗಿ ಪರಿವರ್ತಿತವಾಗೇ ಬಿಟ್ಟಿದೆ. ಮುಂದೆ ಏನಾಗುತ್ತದೋ ಕಾದು ನೋಡಬೇಕಷ್ಟೇ

      Delete