Mar 7, 2014

ನದಿ ತಿರುಗಿಸುವ ದುಸ್ಸಾಹಸ.....

ಡಾ.ಅಶೋಕ್.ಕೆ.ಆರ್.

ನಾಗರೀಕತೆಗೆ ಮೂಲವಾದ ನದಿಗಳ ಬಗೆಗಿನ ಮನುಷ್ಯನ ನೋಟ ದಿಕ್ಕುತಪ್ಪಿಹೋಗಿದೆ. ಪ್ರಪಂಚದೆಲ್ಲರಿಗಿಂತ ಬುದ್ಧಿವಂತ ಜೀವಿ ಎಂದು ನಮ್ಮ ಬೆನ್ನು ನಾವೇ ತಟ್ಟಿಕೊಂಡರೂ ಪ್ರಕೃತಿಯ ಮುಂದೆ ನಾವೆಲ್ಲರೂ ತೃಣಮಾತ್ರರೆಂಬುದನ್ನು ಮರೆಯಬಾರದು. ಪ್ರಕೃತಿ ಪ್ರತಿಯೊಂದನ್ನೂ ಕಾರಣವಿಲ್ಲದೆ ಮಾಡುವುದಿಲ್ಲ, ಅದು ನದಿಯ ಹರಿವಿನ ಜಾಡಿರಬಹುದು, ನದಿ ಸಮುದ್ರಕ್ಕೆ ಸೇರುವ ಬಗೆಯಿರಬಹುದು ಪ್ರತಿಯೊಂದಕ್ಕೂ ಕಾರಣವಿದ್ದೇ ಇದೆ; ಜೀವಸಂಕುಲವನ್ನು ಪೊರೆಯುವ ಪ್ರಕೃತಿಯ ಪ್ರೀತಿಯ ಸಿಂಚನವಿದೆ. ಇಂತಹ ಪರಿಸರವನ್ನು ಮಲಿನಗೊಳಿಸಿದ ಮೊದಲ ಶ್ರೇಯಸ್ಸು ಶತಶತಮಾನಗಳ ಹಿಂದೆ ಕೃತಕವಾಗಿ ಬೆಂಕಿ ಸೃಷ್ಟಿಸಿದ ಆದಿಮಾನವನದು. ಪ್ರಕೃತಿಯ ವಿರುದ್ಧ ಈಜಲು ತೊಡಗಿದ್ದು ಅಲೆಮಾರಿತನವನ್ನು ತೊರೆದು ಒಂದೆಡೆ ನೆಲೆ ನಿಂತು ವ್ಯವಾಸಾಯ ಆರಂಭಿಸಿದ ತಲೆಮಾರಿನದು. ಅಂದಿನಿಂದ ಇಂದಿನವರೆಗೂ ವಿವಿಧ ರೂಪದಲ್ಲಿ ನಾವೆಲ್ಲರೂ ಪ್ರಕೃತಿಯ ವಿರುದ್ಧ ಈಜುತ್ತಲೇ ಇದ್ದೇವೆ, ನಮ್ಮ ಶಕ್ತಿಗೆ ತಕ್ಕಷ್ಟು ಪರಿಸರ ನಾಶಗೊಳಿಸುತ್ತಲೇ ಸಾಗಿದ್ದೇವೆ.

‘ಬೃಹತ್ ಅಣೆಕಟ್ಟುಗಳು ನವಭಾರತದ ದೇಗುಲಗಳು’ ಎಂದಿದ್ದರು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರು. ಬೃಹತ್ ಅಣೆಕಟ್ಟುಗಳು ಪರಿಸರದ ಮೇಲುಂಟುಮಾಡುವ ಪರಿಣಾಮಗಳ ಬಗ್ಗೆ ಅಷ್ಟೇನೂ ಯೋಚಿಸಿಲ್ಲದ ಕಾಲವದು. ಬೃಹತ್ ಅಣೆಕಟ್ಟೆ ಸಾವಿರಾರು ಎಕರೆ ಒಣ ಭೂಮಿಗೆ ನೀರಾವರಿ ಸೌಲಭ್ಯ, ಬೆಳೆಯುವ ನಗರಗಳಿಗೆ ಕೇಳಿದಷ್ಟು ನೀರು – ಇಂತಹ ಹತ್ತು ಹಲವು ನಿರೀಕ್ಷೆಗಳಿದ್ದವು ಬೃಹತ್ ಅಣೆಕಟ್ಟೆಗಳಿಂದ. ಜನರ ಸರ್ವ ಸ್ವಾಗತದ ನಡುವೆ ನಿರ್ಮಾಣವಾಗುತ್ತಿದ್ದ ಬೃಹತ್ ಅಣೆಕಟ್ಟುಗಳ ಮೇಲೆ ನೆಹರೂಗೆ ಕೆಲವು ವರುಷಗಳಲ್ಲಿ ಅಪನಂಬುಗೆ ಮೂಡಿತು. ‘ಬೃಹತ್ತಾದದ್ದನ್ನು ಕಟ್ಟಬಲ್ಲೆವೆಂದು ತೋರಿಸುವುದಕ್ಕಾಗಿ ದೊಡ್ಡದನ್ನು ಕಟ್ಟುತ್ತಿದ್ದೇವಷ್ಟೇ. ಅಸಲಿಗೆ ಭಾರತದ ಬೆಳವಣಿಗೆಗೆ ಬೇಕಿರುವುದು ಚಿಕ್ಕ ಅಣೆಕಟ್ಟುಗಳು, ಸಣ್ಣ ಪ್ರಮಾಣದ ವಿದ್ಯುತ್ ಉತ್ಪಾದನಾ ಘಟಕಗಳು’ ಎಂದುಬಿಟ್ಟರು ನೆಹರು. ಆದರಷ್ಟರಲ್ಲಾಗಲೇ ಬೃಹತ್ ಅಣೆಕಟ್ಟುಗಳ ಮೇಲಿನ ವ್ಯಾಮೋಹ ಅವುಗಳು ಬೇಡುವ ಅಪಾರ ಪ್ರಮಾಣದ ಹಣದಿಂದಾಗಿ ರಾಜಕಾರಣಿಗಳ, ಅಣೆಕಟ್ಟು ವ್ಯಾಪಾರಿಗಳ ಗಮನ ಸೆಳೆದಿತ್ತು. ಇವತ್ತಿಗೂ ಅಣೆಕಟ್ಟುಗಳ ಮೇಲಿನ ವ್ಯಾಮೋಹ ಮರೆಯಾಗಿಲ್ಲ.
     
     ಮಳೆಯಾಧಾರಿತ ಪ್ರದೇಶವಾದ ಮಂಡ್ಯದಲ್ಲಿ ಕೆ.ಆರ್.ಎಸ್ ಕಟ್ಟುವ ಮುನ್ನ ರಾಗಿ, ಹುರುಳಿ ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಕೆ.ಆರ್.ಎಸ್ಸಿನ ನಂತರ ಅರ್ಧಕರ್ಧ ಮಂಡ್ಯ ನೀರಾವರಿಗೆ ಒಳಪಟ್ಟು ಹಸಿರಿನಿಂದ ಕಂಗೊಳಿಸಲಾರಂಭಿಸಿತು. ಎಲ್ಲಿ ನೋಡಿದರಲ್ಲಿ ಭತ್ತ, ಸಕ್ಕರೆ ಕಾರ್ಖಾನೆಗಳು, ಆಲೆಮನೆಗಳು ಹೆಚ್ಚಾದ ನಂತರ ಕಬ್ಬು ಬೆಳೆಯುವಿಕೆಯೇ ಪ್ರಧಾನವಾಗಲಾರಂಭಿಸಿದೆ. ಮಂಡ್ಯದ ಹಿರಿತಲೆಗಳು ಹೇಳುವಂತೆ ಮುಂಚೆ ಎಲ್ಲ ತರಹದ ಬೇಳೆ ಕಾಳು, ಕಾಯಿ ಪಲ್ಲೆಗಳನ್ನೂ ಬೆಳೆದುಕೊಳ್ಳುತ್ತಿದ್ದರಂತೆ; ಈಗ ಬೆಳೆಯುವ ಕಷ್ಟ ತೆಗೆದುಕೊಳ್ಳುವವರೂ ಕಡಿಮೆ, ಯಾಕೋ ಭೂಮಿಗೂ ಕಸುವಿಲ್ಲವೇನೋ ಎಂಬ ಅಭಿಪ್ರಾಯ ಅವರದು. ನೀರಾವರಿಗೆ ಒಳಪಟ್ಟ ಜಮೀನು ಹೆಚ್ಚೆಚ್ಚು ರಸಗೊಬ್ಬರವನ್ನೂ ಬೇಡುತ್ತದೆ. ಸತತ ನೀರಿನ ಹರಿಯುವಿಕೆ ಸತ್ವಯುತ ಮಣ್ಣನ್ನು ತನ್ನೊಡನೆಯೇ ಕೊಂಡೊಯ್ದುಬಿಡುತ್ತದೆ ಎಂಬುದು ನಿಧಾನವಾಗಿಯಾದರೂ ಅರಿವಾಗುತ್ತಿದೆ. ‘ಅಯ್ಯೋ ಬಿಸಿಲು ಕಣ್ರೀ’ ‘ಆ ಒಣ ಭೂಮೀಲಿ ಏನ್ರೀ ಬೆಳೀತಾರೆ’ ಎಂದು ಹಳೆ ಮೈಸೂರು ಭಾಗದಿಂದ ತೆಗಳಿಸಿಕೊಳ್ಳುವ ಉತ್ತರ ಕರ್ನಾಟಕದಿಂದಲೇ ನಾವು ದಿನನಿತ್ಯ ಉಪಯೋಗಿಸುವ ಅಷ್ಟೂ ಬೇಳೆ ಕಾಳುಗಳು ಬರುತ್ತಿದೆಯೆಂಬ ಸತ್ಯ ನೀರಾವರಿಯ ಬಗೆಗಿನ ನಮ್ಮ ವೈಜ್ಞಾನಿಕ ದೃಷ್ಟಿಕೋನದಲ್ಲೇ ತಪ್ಪಿದೆಯೆಂಬ ಭಾವ ಮೂಡಿಸುತ್ತದೆ. ಹಿನ್ನೀರಿನ ನೆಪದಲ್ಲಿ ಒಂದಿಡೀ ನಗರವನ್ನೇ ಮುಳುಗಿಸಿದ ಖ್ಯಾತಿಯ ಆಲಮಟ್ಟಿಯ ನೀರಾವರಿ ಪ್ರದೇಶದಲ್ಲೂ ಈಗ ಕಬ್ಬು ಭತ್ತಗಳದೇ ಸುಗ್ಗಿ. ಒಂದು ಪ್ರದೇಶವನ್ನು ನೀರಾವರಿಗೊಳಪಡಿಸಲು ಹಿನ್ನೀರಿನ ನೆಪದಲ್ಲಿ ಬಹಳಷ್ಟು ಭೂಪ್ರದೇಶವನ್ನು ಮುಳುಗಿಸಿಬಿಡುವ, ಭೂಮಿಯ ತಾಪವನ್ನೇರಿಸುವ ಬೃಹತ್ ಅಣೆಕಟ್ಟೆಗಳೇ ಬೇಕೆ?
     
     ಹಿಂದಿನ ಕಾಲದವರು ಕೆರೆಗಳಿಗೆ ಪ್ರಾಮುಖ್ಯತೆ ಕೊಟ್ಟಿದ್ದು ಯಾಕೆಂದು ನಮಗೆ ಅರಿವೇ ಆಗಿಲ್ಲ. ಹೆಚ್ಚು ಭೂಪ್ರದೇಶವನ್ನು ಆಕ್ರಮಿಸದ, ಒಂದಿಡೀ ಊರಿಗೆ ಕೆಲವೊಮ್ಮೆ ಸುತ್ತಮುತ್ತಲಿನ ಅಷ್ಟೂ ಊರುಗಳಿಗೆ ನೀರುಣಿಸುವ ಕೆರೆ ಕಟ್ಟುವ ಪದ್ಧತಿ ನಿಂತುಹೋಗಿ ಎಷ್ಟೋ ವರುಷಗಳೇ ಆಗಿವೆ. ಈಗ ಮಳೆಯಾದರೂ ಕೆರೆ ತುಂಬದಂತೆ ಜಾಗ್ರತೆ ವಹಿಸಿ ಕೆರೆಯನ್ನು ಮಾರಾಟದ ಭೂಮಿಯಾಗಿ ಪರಿವರ್ತಿಸುವ ಕಾಲಘಟ್ಟ. ಬೆಂಗಳೂರಿನಲ್ಲಿ ಲೇಕ್ ವ್ಯೀವ್ ಅಪಾರ್ಟುಮೆಂಟುಗಳು ತಲೆಯೆತ್ತುತ್ತವೆ ಕೆರೆಯೊಂದರ ಭಾಗವನ್ನು ಅಧಿಕೃತವಾಗಿ ಕಬಳಿಸಿ. ಕೆಲವೇ ವರುಷದ ನಂತರ ಆ ಕೆರೆ ಕೂಡ ನೀರ ಹರಿವಿಲ್ಲದೆ ಒಣಗಿ ಮತ್ತೊಂದು ಅಪಾರ್ಟುಮೆಂಟಿಗೆ ಭೂಮಿಯಾಗುತ್ತದೆ. ಹಳ್ಳಿಗಳ ಕೆರೆಗಳೂ ಈಗ ಕೆರೆಗಳಾಗಿ ಉಳಿದಿಲ್ಲ. ಅಣೆಕಟ್ಟಿನ ನೀರು ನಮಗೂ ತಲುಪಬೇಕು ಎಂಬ ಹೋರಾಟದ ನಡುವೆ ಶತಮಾನಗಳಿಂದ ನೀರುಣಿಸಿದ ಕೆರೆಗಳ ರಕ್ಷಣೆಗೆ ಆದ್ಯತೆ ಸಿಗುತ್ತಿಲ್ಲ. ಸರಕಾರಗಳಿಗೂ ಅಧಿಕಾರಿಗಳಿಗೂ ಕೂಡ ಕೆರೆಯೆಂದರೆ ಅಷ್ಟೇನೂ ಅಕ್ಕರೆಯಿಲ್ಲ. ಕೆರೆಯ ಪುನಶ್ಚೇತನವೆಂಬುದು ಕೇವಲ ಕೆಲವು ಕೋಟಿಗಳ ಲೆಕ್ಕಾಚಾರ, ಅದೇ ಬೃಹತ್ ನೀರಾವರಿ ಯೋಜನೆಗಳದು ಸಾವಿರ ಸಾವಿರ ಕೋಟಿಯ ಬಾಬತ್ತು.
     
     ಇಲ್ಲಿಯವರೆಗಿನ ಎಲ್ಲ ಯೋಜನೆಗಳಿಗೂ ಕಳಶವಿಟ್ಟಂತೆ ಮತ್ತೊಂದು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ನದಿಯ ಹರಿವನ್ನು ತಾತ್ಕಾಲಿಕವಾಗಿ ತಡೆಗಟ್ಟಿಯೇ ಅನೇಕ ಎಡವಟ್ಟುಗಳನ್ನು ಮಾಡಿಕೊಂಡ ಮನುಷ್ಯ ಈಗ ನದಿಯನ್ನೇ ತಿರುಗಿಸಲೊರಟಿದ್ದಾನೆ! ಕಾರಣ ಮತ್ತದೇ ನದಿ ಸಮುದ್ರಕ್ಕೆ ಸೇರಿ ವ್ಯರ್ಥವಾಗುವುದನ್ನು ಉನ್ನತ ತಂತ್ರಜ್ಞಾನದಿಂದ ತಪ್ಪಿಸಿ ಬರದ ಜಿಲ್ಲೆಗಳಿಗೆ ನೀರುಣಿಸುವ ಮಹತ್ಕಾರ್ಯಕ್ಕೆ ಎಂಬ ನೆಪ. ದಕ್ಷಿಣ ಕನ್ನಡದ ನೇತ್ರಾವತಿ ನದಿಯನ್ನು ತಿರುಗಿಸಿ ಬರಪೀಡಿತ ಜಿಲ್ಲೆಗಳಿಗೆ ನೀರುಣಿಸಬೇಕೆಂದು ಯೋಜಿಸಿದ ಸರಕಾರಗಳು ದಕ್ಷಿಣ ಕನ್ನಡದ ಜನರ ಪ್ರತಿಭಟನೆಗೆ ಮಣಿದು ಆ ಯೋಜನೆಯಿಂದ ದೂರ ಸರಿದಂತೆ ಮಾಡಿ ಈಗ ನೇತ್ರಾವತಿ ನದಿಯ ಉಪನದಿಗಳಿಗೇ ಕೈಹಾಕಿದೆ ಎತ್ತಿನಹೊಳೆ ಯೋಜನೆಯ ಮೂಲಕ. ‘ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಹುಟ್ಟಿ ಕಾಡಿನೊಳಗೆ ಹರಿದು ಸಮುದ್ರಕ್ಕೆ ಸೇರಿ  ವ್ಯರ್ಥವಾಗುತ್ತಿರುವ ನೀರನ್ನು ತಿರುಗಿಸಿ ಹರಿಸಿ ನೀರಿನ ಕ್ಷಾಮ ಎದುರಿಸುತ್ತಿರುವ ಚಿಕ್ಕಬಳ್ಳಾಪುರ, ಕೋಲಾರದಂತಹ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುತ್ತೇವೆ’ ಎಂದು ಯೋಜನೆ ಪರವಾಗಿರುವವರ ಮಾತು ಕೇಳಿದರೆ ಹೌದಲ್ಲಾ, ಎಷ್ಟು ಒಳ್ಳೆಯ ಯೋಜನೆ ಎಂಬ ಭಾವ ಕ್ಷಣ ಮಾತ್ರವಾದರೂ ಮೂಡದೆ ಇರದು. ಅದರಲ್ಲೂ ಕೋಲಾರ, ಚಿಕ್ಕಬಳ್ಳಾಪುರದ ಜನತೆ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುವವರನ್ನೆಲ್ಲಾ ತಮ್ಮ ವೈರಿಗಳೆಂದು ಕಂಡರೆ ಅಚ್ಚರಿಯಿಲ್ಲ. ಆದರೀ ಯೋಜನೆ ಅಷ್ಟು ಸರಳವಾಗಿದೆಯೇ?
        
  ಪಶ್ಚಿಮ ಘಟ್ಟವೆಂಬುದು ಕಾನನದ ತವರು. ಪ್ರಪಂಚದೆಲ್ಲೂ ಸಿಗದ ವೈವಿಧ್ಯಮಯ ಪ್ರಾಣಿ ಪಕ್ಷಿ ಗಿಡ ಸಂಕುಲಗಳು ಘಟ್ಟದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಮಾತ್ರವಲ್ಲದೆ ಪಶ್ಚಿಮ ಘಟ್ಟದ ಕಾರಣದಿಂದಾಗಿ ಹುಟ್ಟುವ ಅನೇಕಾನೇಕ ನದಿಗಳು ಅರ್ಧ ಕರ್ನಾಟಕಕ್ಕೆ ನೀರುಣಿಸುತ್ತಿವೆ. ಇಂತಹ ಘಟ್ಟದಲ್ಲಿ ನದಿ ತಿರುಗಿಸುವ ಎತ್ತಿನಹೊಳೆ ಕಾರ್ಯಕ್ಕೆ ಸದ್ಯ ಅಂದಾಜು ಮಾಡಿರುವ ವೆಚ್ಚವೇ ಹನ್ನೊಂದು ಸಾವಿರ ಕೋಟಿಗೂ ಹೆಚ್ಚು! ನದಿಯನ್ನು ತಿರುಗಿಸಬೇಕು, ಅಲ್ಲಲ್ಲಿ ಕಾಡಿನೊಳಗೆಯೇ ಕಟ್ಟೆಗಳನ್ನು ಕಟ್ಟಬೇಕು, ಬೆಟ್ಟಗಳು ಅಡ್ಡವಾದರೆ ನೀರನ್ನು ಮೇಲೆತ್ತಿ ಮತ್ತೆ ಕೆಳಕ್ಕೆ ಹರಿಸಬೇಕು, ಹೊಸ ಹರಿವಿನ ದಾರಿಯನ್ನು ತೋರಬೇಕು. ಇಷ್ಟೆಲ್ಲಾ ಸಾಧ್ಯವಾಗಬೇಕಾದರೆ ನಾಶವಾಗುವ ಕಾಡೆಷ್ಟು? ನೀರನ್ನು ಮೇಲೆತ್ತಲು ಬೇಕಾದ ವಿದ್ಯುಚ್ಛಕ್ತಿಯೆಷ್ಟು? ಆ ವಿದ್ಯತ್ ಉತ್ಪಾದಿಸಲು ಮತ್ತಷ್ಟು ನಾಶವಾಗುವ ಪರಿಸರವೆಷ್ಟು? ಹೊಸ ಹರಿವಿನ ದಾರಿಯಲ್ಲಿ, ಹಳೆಯ ಹರಿವಿನ ಹಾದಿಯಲ್ಲಿ ನಾಶವಾಗುವ ಗೊಂದಲಕ್ಕೊಳಗಾಗುವ ಜೀವಸಂಕುಲವೆಷ್ಟು? ಯೋಜನೆಯನ್ನು ಜಾರಿಗೊಳಿಸಲು ಬೃಹತ್ ಯಂತ್ರಗಳು ಕಾಡು ಸೀಳಿ ಸಾಗುವುದರಿಮದ ಆಗುವ ನಾಶವೆಷ್ಟು? ಇದ್ಯಾವುದನ್ನು ಅಂದಾಜಿಸಿಲ್ಲ, ಅಂದಾಜಿಸಲಾಗುವುದೂ ಇಲ್ಲ. ಇಂಧನ ಖಾತೆಯ ಜೊತೆಜೊತೆಗೆ ಇತ್ತೀಚೆಗೆ ಪರಿಸರ ಖಾತೆ ವಹಿಸಿಕೊಂಡಿರುವ ಕರ್ನಾಟಕದವರೇ ಆದ ವೀರಪ್ಪ ಮೊಯ್ಲಿ ವೀರಾವೇಷದೊಂದಿಗೆ ಈ ಯೋಜನೆಯನ್ನು ಬೆಂಬಲಿಸುತ್ತಿದ್ದಾರಲ್ಲ ಯಾಕೆ? ಚಿಕ್ಕಬಳ್ಳಾಪುರ ಮತ್ತು ಕೋಲಾರದ ಜನತೆಯ ಮೇಲೆ ವಿಶೇಷವಾದ ಪ್ರೀತಿಯಿದೆ ಮೊಯ್ಲಿಯವರಿಗೆ ಎಂದೆಲ್ಲ ಭ್ರಮಿಸುವುದು ಸರಿಯಲ್ಲ. ಪರಿಸರ ಖಾತೆಯ ಹಿಂದಿನ ಸಚಿವರಿಂದ ತಡೆಹಿಡಿಯಲಾಗಿದ್ದ ಅನೇಕಾನೇಕ ಪರಿಸರ ಮಾರಕ ಯೋಜನೆಗಳಿಗೆ ವೀರಪ್ಪ ಮೊಯ್ಲಿಯವರು ಅತ್ಯಾತುರದಿಂದ ಅನುಮತಿ ನೀಡುತ್ತಿರುವುದು ಅವರಿಗೆ ಅಥವಾ ಅವರ ಪಕ್ಷಕ್ಕೆ ಚುನಾವಣೆಗಾಗಿ ಕ್ಯಾಷ್ ಬ್ಯಾಕ್ ಸಿಗುತ್ತಿರುವ ಅನುಮಾನ ಮೂಡಿಸದೆ ಇರದು.
      
    ಸರಕಾರದ ಪ್ರಕಾರ ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಒಂಭತ್ತು ಜಿಲ್ಲೆಗಳು ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತವೆ. ಒಟ್ಟು 24 ಟಿಎಂಸಿ ನೀರನ್ನು ಪಶ್ಚಿಮಘಟ್ಟದಿಂದ ಬಯಲುಸೀಮೆಗೆ ಹರಿಸಲಾಗುತ್ತಿದೆ. ಕುಡಿಯುವ ನೀರಿಗಾಗಿ ಮಾತ್ರ ಎಂದು ಸರಕಾರಗಳು ಹೇಳುತ್ತಿವೆಯಾದರೂ ಯೋಜನೆ ಜಾರಿಗೆ ಬಂದೇ ಬಿಟ್ಟರೆ ಹರಿವ ನೀರೆಲ್ಲವೂ ಪ್ರಬಲ ಕಾರ್ಖಾನೆಗಳ ಕಡೆಗೆ ಹರಿದರೆ ಅಚ್ಚರಿಪಡಬೇಕಿಲ್ಲ. ನದಿಯ ದಿಕ್ಕನ್ನೇ ಬದಲಿಸಹೊರಟವರಿಗೆ ಕುಡಿಯಲುದ್ದೇಶಿಸಿದ ನೀರನ್ನು ಕಾರ್ಖಾನೆಗೆ ತಿರುಗಿಸುವುದು ಕಷ್ಟವೇ? ಕೋಲಾರ, ಚಿಕ್ಕಬಳ್ಳಾಪುರದ ಅಂತರ್ಜಲ ವೃದ್ಧಯಾಗುತ್ತದೆ ಎಂದು ಹೇಳಿದ್ದಾರೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್. ಆ ಜಿಲ್ಲೆಗಳಲ್ಲಿ ಒಂದು ಸುತ್ತು ಹೋಗಿ ಬಂದರೆ ಎಲ್ಲೆಡೆಯೂ ಬೆಳೆದಿರುವ ನೀಲಗಿರಿ ತೋಪುಗಳಷ್ಟೇ ಕಾಣಿಸುತ್ತವೆ. ಅಂತರ್ಜಲವನ್ನು ಬರಿದಾಗಿಸುವ ಕುಖ್ಯಾತಿಯಿದೆ ನೀಲಗಿರಿ ಮರಗಳಿಗೆ. ಆದರೂ ಅವುಗಳಿಗೆ ಸಿಗುವ ಪ್ರೋತ್ಸಾಹ ನಿಂತಿಲ್ಲ. ಸ್ಥಳೀಯ ಪರಿಹಾರಗಳನ್ನುಡುಕದೆ ದೂರದಿಂದ ನದಿ ತಿರುಗಿಸುವ ದುಸ್ಸಾಹಸಕ್ಕೇಕೆ ಇಷ್ಟು ಆತುರ?
         
 ಕ್ಷಾಮದ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ದಕ್ಕುತ್ತದೆ ಎಂಬ ಸರಕಾರದ ಮಾತುಗಳನ್ನೇ ನಂಬೋಣ. ಕಾಡನ್ನು ಕಡಿದು ಘಟ್ಟದ ಪ್ರಾಕೃತಿಕ ಸಮತೋಲನವೇ ಏರುಪೇರಾಗಿ ಬಿಟ್ಟು ಮಳೆಯೇ ನಿಂತುಹೋಗಿ ದಿಕ್ಕು ಬದಲಿಸಿದ ನದಿಯೇ ನೀರಿಗಾಗಿ ಹಾಹಾಕಾರ ಎಬ್ಬಿಸಿಬಿಟ್ಟರೆ? ಮತ್ತೊಂದು ಮಗದೊಂದು ನದಿಯನ್ನು ತಿರುಗಿಸುತ್ತಾರೆಯೇ?

No comments:

Post a Comment