Feb 12, 2014

ಮತ್ತೆ ಮತ್ತೆ ಡಬ್ಬಿಂಗ್ - - - ಸ್ವಾರ್ಥ ಅಹಂಕಾರದ ಸೋಗಿನಲ್ಲಿ ‘ಸಂಸ್ಕೃತಿ’ಯ ರಕ್ಷಣೆ?!



ಡಾ ಅಶೋಕ್. ಕೆ. ಆರ್.

ವರುಷದ ನಂತರ ಮತ್ತೆ ಕರ್ನಾಟಕದಲ್ಲಿ ‘ಡಬ್ಬಿಂಗ್’ ಬಗೆಗಿನ ಚರ್ಚೆ ತಾರಕಕ್ಕೇರಿದೆ. ಡಬ್ಬಿಂಗ್ ಪರವಾಗಿರುವವರು ಡಬ್ಬಿಂಗ್ ವಿರೋಧಿಸುವವರ ನಡುವಿನ ವಾಕ್ಸಮರವೂ ಹೆಚ್ಚಾಗುತ್ತ ಕೆಲವೊಮ್ಮೆ ಹೀನ ಭಾಷೆಯ ಪ್ರಯೋಗವೂ ಆಗುತ್ತಿದೆ. ಈ ವರುಷವಾದರೂ ಡಬ್ಬಿಂಗ್ ಬಗೆಗಿನ ಚರ್ಚೆ ಒಂದು ತಾರ್ಕಿಕ ಅಂತ್ಯ ಕಾಣುತ್ತದಾ ಅಥವಾ ಕಳೆದ ಸಲವಾದಂತೆ ಈ ಸಲವೂ ಯಾವೊಂದು ನಿರ್ಣಯವೂ ಸಾಧ್ಯವಾಗದೆ ಯಥಾಸ್ಥಿತಿ ಮುಂದುವರೆದು ಮತ್ತೊಂದು ವರುಷವೋ ಎರಡು ವರುಷದ ನಂತರವೋ ಮತ್ತೆ ಡಬ್ಬಿಂಗ್ ವಿವಾದಕ್ಕೊಳಪಟ್ಟು ಸುದ್ದಿ ಮಾಡುತ್ತದಾ? ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಪತ್ರಿಕಾಗೋಷ್ಟಿಯಲ್ಲಿ ಡಬ್ಬಿಂಗ್ ಪರ – ವಿರೋಧಿಗಳು ಹೇಳುವ ಸಂಗತಿಗಳೆಲ್ಲವೂ ಡಬ್ಬಿಂಗ್ ವಿಷಯದ ಬಗೆಗಿನ ಮೇಲ್ನೋಟದ ಸಂಗತಿಗಳೇ ಹೊರತು ಅಂತರಾಳದಲ್ಲಿರುವ ಸತ್ಯಗಳನ್ನು ಜನರಿಗೆ ತಿಳಿಸುವ ಯತ್ನವನ್ನು ಡಬ್ಬಿಂಗ್ ಪರವಾಗಿರುವವರೂ ಮಾಡುತ್ತಿಲ್ಲ, ಡಬ್ಬಿಂಗ್ ವಿರೋಧಿಗಳೂ ಮಾಡುತ್ತಿಲ್ಲ.

ಡಬ್ಬಿಂಗ್ ವಿರುದ್ಧವಾಗೋ ಪರವಾಗೋ ನಡೆಯುತ್ತಿರುವ ಹೋರಾಟಕ್ಕೆ ದಶಕಗಳ ಇತಿಹಾಸವಿದೆ. ಕನ್ನಡ ಚಿತ್ರರಂಗವಿನ್ನೂ ಮದ್ರಾಸಿನಲ್ಲೇ ನೆಲೆಗೊಂಡಿದ್ದ ಕಾಲವದು. ಕರ್ನಾಟಕದಲ್ಲಿ ಸುಸಜ್ಜಿತ ಸ್ಟುಡಿಯೋಗಳಾಗಲೀ, ಚಿತ್ರ ನಿರ್ಮಾಣಕ್ಕೆ ಬೇಕಾದ ಇತರೆ ಸೌಕರ್ಯಗಳಾಗಲೀ ಇರದಿದ್ದ ಕಾಲವದು. ಒಂದು ಕನ್ನಡ ಚಿತ್ರ ತೆಗೆಯಬೇಕೆಂದರೆ ಇಡೀ ತಂಡದೊಟ್ಟಿಗೆ ಮದ್ರಾಸಿಗೆ ಹೊರಡಬೇಕಾದ ಪರಿಸ್ಥಿತಿ. ಅಲ್ಲಿನ ಚಿತ್ರರಂಗದವರ, ತಾಂತ್ರಿಕ ವರ್ಗದವರ ಮರ್ಜಿಗೆ ಬಿದ್ದು ಚಿತ್ರ ತೆಗೆಯುವ ಪರಿಸ್ಥಿತಿ. ಇಷ್ಟೆಲ್ಲ ಕಷ್ಟ ನಷ್ಟಗಳ ನಡುವೆ ತಯಾರಾಗುತ್ತಿದ್ದ ಚಿತ್ರಗಳ ಸಂಖೈಯೂ ಕಡಿಮೆಯಿತ್ತು. ವರುಷಕ್ಕೆ ಎರಡಂಕಿಯ ಚಿತ್ರಗಳನ್ನು ನಿರ್ಮಿಸಿದರೆ ಅದೇ ಹೆಚ್ಚೆಂಬ ಭಾವ. ಇದೇ ಸಮಯದಲ್ಲಿ ಡಬ್ಬಿಂಗ್ ಚಿತ್ರಗಳು ಕೂಡ ತೆರೆಕಂಡು ಕನ್ನಡ ಚಿತ್ರರಂಗ ಮತ್ತಷ್ಟು ಸಂಕಷ್ಟದ ಸ್ಥಿತಿಗೆ ದೂಕಲ್ಪಟ್ಟಿತು. ವರುಷಕ್ಕೆ ಐದಾರು ಚಿತ್ರಗಳಷ್ಟೇ ತೆರೆಕಂಡು ಆ ಚಿತ್ರಗಳು ಕೂಡ ಡಬ್ಬಿಂಗ್ ಚಿತ್ರಗಳ ಜೊತೆ ಸ್ಪರ್ಧಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿ ಕನ್ನಡ ಚಿತ್ರರಂಗ ಶಾಶ್ವತವಾಗಿ ಮುಚ್ಚುವ ಸಂದರ್ಭ ಒದಗಿ ಬಂದಿತ್ತು. ಕನ್ನಡ ನಾಡಿನ ಸಂಸ್ಕೃತಿಯ ಒಂದು ಭಾಗವಾಗಿದ್ದ ಕನ್ನಡ ಚಿತ್ರರಂಗ ವಿನಾಶದಂಚಿಗೆ ಹೋಗುತ್ತಿದುದ್ದನ್ನು ಮೊದಲು ಗುರುತಿಸಿ ಹೋರಾಟಕ್ಕಿಳಿದಿದ್ದು ಕನ್ನಡದ ಸಾಹಿತಿಗಳು. ಅ.ನ.ಕೃರಂಥ ಮೇರು ಕಾದಂಬರಿಕಾರರು ಡಬ್ಬಿಂಗ್ ವಿರೋಧಿ ಚಳುವಳಿಗೆ ಮುಂದಾಳುವಾದರು. ಸಾಹಿತಿಗಳು ಎಚ್ಚರಿಸಿದ ನಂತರ ಅಪಾಯದ ಆಳವರಿತ ಚಿತ್ರರಂಗವೂ ಕೂಡ ಸಂಪೂರ್ಣವಾಗಿ ಡಬ್ಬಿಂಗ್ ವಿರೋಧಿ ಚಳುವಳಿಗೆ ಧುಮುಕಿತು. ರಾಜ್ ಕುಮಾರ್ ನೇತೃತ್ವ ವಹಿಸಿದರು. ಕನ್ನಡ ಚಿತ್ರರಂಗ ಮರಣಶಯ್ಯೆಯಲ್ಲಿದ್ದು ಅದು ಮತ್ತೆ ಜೀವಪಡೆದು ಉಸಿರಾಡುವಂತಾಗಬೇಕೆಂಬ ಉದ್ದೇಶದಿಂದ ನಡೆದ ಈ ಚಳುವಳಿ ಡಬ್ಬಿಂಗ್ ನಿಷೇಧಕ್ಕೊಳಪಡುವಲ್ಲಿ ಮಹತ್ವದ ಪಾತ್ರ ವಹಿಸಿತು. ಆದರೆ ಗಮನಿಸಿಬೇಕಾದ ಮುಖ್ಯ ಅಂಶವೆಂದರೆ ಡಬ್ಬಿಂಗ್ ಅಧಿಕೃತವಾಗಿ ನಿಷೇಧಕ್ಕೊಳಪಟ್ಟಿರಲಿಲ್ಲ. ಸರ್ಕಾರ ಡಬ್ಬಿಂಗ್ ನಿಷೇಧಿಸಿ ಆದೇಶ ಹೊರಡಿಸಲಿಲ್ಲ. ಚಿತ್ರರಂಗದ ಒಕ್ಕೂಟಗಳು, ವಿತರಕರು, ಪ್ರದರ್ಶಕರು ಅನಧಿಕೃತವಾಗಿ ಡಬ್ಬಿಂಗ್ ನಿಷೇಧಿಸಿದರು. ಭಾರತದ ಬಹುಭಾಷಾ ವ್ಯವಸ್ಥೆಯಲ್ಲಿ ರಾಜ್ಯವೊಂದು ಡಬ್ಬಿಂಗ್ ನಿಷೇಧಿಸುವುದು ಕಾನೂನಿನ ಪ್ರಕಾರವೂ ಮಾನ್ಯವಾಗುತ್ತಿರಲಿಲ್ಲ. ಅವತ್ತಿನ ಪರಿಸ್ಥಿತಿಯಲ್ಲಿ ಡಬ್ಬಿಂಗ್ ಪರವಾಗಿ ಮಾತನಾಡಿದವರು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಕಾರಣ ಎಲ್ಲರಿಗೂ ಕನ್ನಡ ಚಿತ್ರರಂಗದ ಉಳಿವಿನ ಚಿಂತೆಯಿತ್ತು. ಕನ್ನಡ ಸಂಸ್ಕೃತಿಯ ಒಂದು ಭಾಗ ಸಂಪೂರ್ಣವಾಗಿ ಕಣ್ಮರೆಯಾಗುವುದು ಯಾರಿಗೂ ಬೇಕಿರಲಿಲ್ಲ. ಡಬ್ಬಿಂಗಿನ ನಿಷೇಧ ಮತ್ತು ಹಂತಹಂತವಾಗಿ ಮದ್ರಾಸಿನ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳುತ್ತಾ ಕರ್ನಾಟಕದಲ್ಲೇ ಚಿತ್ರ ನಿರ್ಮಾಣಕ್ಕೆ ಅವಶ್ಯಕವಾದ ಸ್ಟುಡಿಯೋಗಳನ್ನು – ಲ್ಯಾಬುಗಳನ್ನು ನಿರ್ಮಿಸಿಕೊಂಡ ಕಾರಣ ಚಿತ್ರರಂಗ ಸಶಕ್ತವಾಗಿ ಬೆಳೆಯತೊಡಗಿತು. ಚಿತ್ರರಂಗ ಸಶಕ್ತವಾದರೂ ಸಿನಿಮಾಗಳು ಸಶಕ್ತವಾಗುವುದಕ್ಕೆ ಕಾರಣ ಆಗಿನ ನಿರ್ದೇಶಕರು ಆಯ್ದುಕೊಳ್ಳುತ್ತಿದ್ದ ಕಥಾವಸ್ತು. ಕಾದಂಬರಿ ಆಧಾರಿತ ಚಿತ್ರಗಳು ಅತಿ ಹೆಚ್ಚು ಬಿಡುಗಡೆಯಾಗುತ್ತಿದ್ದವು. ಕಾದಂಬರಿ ಆಧಾರಿತ ಚಿತ್ರವೆಂದರೆ ಯಾರಿಗೂ ನೋಡಲು ಸಿಗದ ‘ಆರ್ಟ್ ಸಿನಿಮಾ’ ಎಂಬ ಈಗಿನ ಭಾವವಿರದೆ ವಾಣಿಜ್ಯಾತ್ಮಕವಾಗಿಯೂ ಯಶಸ್ಸು ಕಾಣುತ್ತಿದ್ದ ಚಿತ್ರಗಳವು. ಕಾದಂಬರಿಯಾಧಾರಿತವಲ್ಲದಿದ್ದರೂ ಕಥಾವಸ್ತು ಉತ್ತಮವಾಗಿರುತ್ತಿತ್ತು. ಕನ್ನಡ ಚಿತ್ರವೊಂದು ಬಿಡುಗಡೆಯಾಗುತ್ತಿರುವುದು ಪರಭಾಷಾ ಸಿನಿಮಾರಂಗದವರಿಗೂ ಕುತೂಹಲ ಕೆರಳಿಸುತ್ತಿತ್ತು. ಭಾರತದ ಅತ್ಯುತ್ತಮ ನಟ ನಿರ್ದೇಶಕರಲ್ಲೊಬ್ಬರಾದ ಕಮಲ್ ಹಾಸನ್ ಕೂಡ ಇತ್ತೀಚೆಗೆ ಕನ್ನಡದ ಆ ವೈಭವದ ದಿನಗಳನ್ನು, ಕನ್ನಡ ಚಿತ್ರಗಳನ್ನು ವೀಕ್ಷಿಸಲು ಮದ್ರಾಸಿನಿಂದ ಬೆಂಗಳೂರಿಗೆ ಬರುತ್ತಿದ್ದ ಸಂಗತಿಗಳನ್ನು ಹಂಚಿಕೊಂಡಿದ್ದರು. ಡಬ್ಬಿಂಗ್ ನಿಷೇಧದಿಂದ ಕನ್ನಡ ಚಿತ್ರರಂಗ ಸಶಕ್ತವಾಯಿತಾ ಅಥವಾ ಚಿತ್ರಗಳ ಗುಣಮಟ್ಟದಿಂದಲಾ?

ಹತ್ತರ ಲೆಕ್ಕದಲ್ಲಿ ಚಿತ್ರಗಳನ್ನು ತಯಾರಿಸುತ್ತಿದ್ದ ಕನ್ನಡ ಚಿತ್ರರಂಗ ಈಗ ನೂರರ ಲೆಕ್ಕದಲ್ಲಿ ಚಿತ್ರಗಳನ್ನು ತಯಾರಿಸುತ್ತಿದೆ. ತೆಲುಗು ತಮಿಳು ಮಲಯಾಳಂ ಚಿತ್ರಗಳಿಗಿರುವ ವಿಶಾಲ ಮಾರುಕಟ್ಟೆಯನ್ನು ಗಳಿಸಿಕೊಳ್ಳಲು ಕನ್ನಡ ಚಿತ್ರರಂಗ ಯಶಸ್ವಿಯಾಗಿಲ್ಲವಾದರೂ ಕನ್ನಡದಲ್ಲಿ ಬರುತ್ತಿರುವ ಚಿತ್ರಗಳ ಪ್ರಮಾಣ ಮತ್ತು ಶೇಕಡಾವಾರು ಯಶಸ್ಸು ಉಳಿದ ಚಿತ್ರರಂಗಗಳಿಗೆ ಸರಿಸಮನಾಗಿಯೇ ಇದೆ. ಉದ್ಯಮದ ರೂಪ ಪಡೆದಿರುವ ಚಿತ್ರರಂಗ ಪರಭಾಷಾ ಚಿತ್ರಗಳ ಪೈಪೋಟಿಯಿದ್ದಾಗ್ಯೂ ಕೊನೇ ಪಕ್ಷ ಸಂಖ್ಯಾದೃಷ್ಟಿಯಿಂದ ಕಳೆಗುಂದಿಲ್ಲ. ಒಂದು ವರುಷ ಉತ್ತಮ ಚಿತ್ರಗಳನ್ನು ನೀಡಿದರೆ ಮಗದೊಂದು ವರ್ಷ ಹೆಸರಿಗೊಂದೂ ಒಳ್ಳೆಯ ಚಿತ್ರಗಳಿಲ್ಲದೆ ಸೊರಗುವುದೂ ಇದೆ. ಈ ರೀತಿಯ ವಿದ್ಯಮಾನ ಎಲ್ಲ ಚಿತ್ರರಂಗದಲ್ಲೂ ಸಾಮಾನ್ಯ. 2013ರನ್ನೇ ಉದಾಹರಿಸುವುದಾದರೆ ಸ್ವಂತ ಕಥೆಯ ಹೊಸ ಆಲೋಚನೆಯ ಚಿತ್ರಗಳು ಕನ್ನಡದಲ್ಲಿ ಗೆಲುವು ಕಂಡಷ್ಟು ಉಳಿದ ದಕ್ಷಿಣ ಕನ್ನಡ ಭಾಷೆಯ ಚಿತ್ರಗಳಲ್ಲಿ ಕಂಡಿಲ್ಲ. ಲೂಸಿಯಾ, ಜಟ್ಟ, 6-5=2 ಥರಹದ ಚಿತ್ರಗಳು ಖ್ಯಾತ ಸಿನಿಮಾಕರ್ಮಿಗಳ ಗಮನ ಸೆಳೆದಿದೆ. ತನ್ನೆಲ್ಲಾ ನೂನ್ಯತೆಗಳ ನಡುವೆ ವರುಷದಿಂದ ವರುಷಕ್ಕೆ ಬೆಳೆಯುತ್ತಲೇ ಸಾಗುತ್ತಿರುವ ಕನ್ನಡ ಚಿತ್ರರಂಗ ಎಪ್ಪತ್ತೈದು ವರುಷಗಳ ಧೃಡ ತಳಪಾಯದ ನಂತರವೂ ಡಬ್ಬಿಂಗ್ ಬಂದುಬಿಟ್ಟರೆ ಕನ್ನಡ ಚಿತ್ರರಂಗವೇ ಮುಳುಗಿಹೋಗುವುದು ಖಚಿತ ಎಂದು ಬೊಬ್ಬಿರಿಯುತ್ತಿರುವುದೇಕೆ? ಕನ್ನಡ ಚಿತ್ರೋದ್ಯಮದಲ್ಲೇ ಡಬ್ಬಿಂಗ್ ವಿಷಯವಾಗಿ ಒಡಕಿನ ದನಿ ಕೇಳುತ್ತಿರುವುದೇಕೆ?

ಡಬ್ಬಿಂಗ್ ವಿಷಯವಾಗಿ ಚರ್ಚೆಗಳು ಪುನರಾರಂಭಗೊಂಡಿದ್ದು ನವಯುಗದ ಪ್ರಮುಖ ಮಾಧ್ಯಮಗಳಲ್ಲೊಂದಾದ ಅಂತರ್ಜಾಲದಲ್ಲಿ. ಬನವಾಸಿ ಬಳಗದ ಏನ್ ಗುರುವಿನಂಥಹ ಬ್ಲಾಗುಗಳು ಡಬ್ಬಿಂಗ್ ಚರ್ಚೆಯನ್ನು ಪ್ರಾರಂಭಿಸಿದವು ಎಂದರೆ ಸುಳ್ಳಲ್ಲ. ಅನಧಿಕೃತ ಡಬ್ಬಿಂಗ್ ನಿಷೇಧ ಕರ್ನಾಟಕದಲ್ಲಿ ಚಾಲ್ತಿಯಲ್ಲಿದ್ದ ಕಾರಣ ಪರಭಾಷೆಯ ಚಿತ್ರಗಳು ಆಯಾ ಭಾಷೆಯಲ್ಲಿಯೇ ತೆರೆಕಾಣುತ್ತಿದ್ದವು. ಚಿತ್ರರಂಗದಲ್ಲಿ ಅನ್ವಯವಾಗಿದ್ದ ಡಬ್ಬಿಂಗ್ ನಿಷೇಧ ಕಾಲಕ್ರಮೇಣದಲ್ಲಿ ಪ್ರಬಲವಾಗಿ ಬೆಳೆದ ಕಿರುತೆರೆಗೂ ಅನಾಚೂನವಾಗಿ ಅನ್ವಯವಾಗುತ್ತ ಬಂತು. ಇದೇ ಸಮಯದಲ್ಲಿ ಡಬ್ಬಿಂಗ್ ನಿಷೇಧಕ್ಕೊಳಗಾಗಿಲ್ಲದ ಪಕ್ಕದ ತಮಿಳುನಾಡು - ಆಂಧ್ರದಲ್ಲಿ ಡಿಸ್ಕವರಿ, ನ್ಯಾಷನಲ್ ಜಿಯೋಗ್ರಾಫಿಕ್, ಅನಿಮಲ್ ಪ್ಲಾನೆಟ್ಟಿನಂಥಹ ವಿಜ್ಞಾನಕ್ಕೆ ಸಂಬಂಧಪಟ್ಟ ವಾಹಿನಿಗಳು, ಪೋಗೋ, ಕಾರ್ಟೂನ್ ನೆಟ್ವರ್ಕಿನಂತಹ ಮಕ್ಕಳು ಅತಿಯಾಗಿ ವೀಕ್ಷಿಸುವ ವಾಹಿನಿಗಳು ಅಲ್ಲಿನ ಮಾತೃಭಾಷೆಯಲ್ಲಿ ಬರಲಾರಂಭಿಸಿದವು. ಜೊತೆಜೊತೆಗೆ ಅಲ್ಲಿನ ವಾಹಿನಿಗಳಲ್ಲಿ ಇತರೆ ಭಾಷೆಯ ಡಬ್ ಆದ ಧಾರವಾಹಿಗಳೂ ಪ್ರಸಾರ ಕಾಣುತ್ತಿದ್ದವು. ಕನ್ನಡಕ್ಕೆ ಡಬ್ ಆದ ಧಾರವಾಹಿಗಳು ಬರಬೇಕೆಂದು ಯಾರೂ ಬಯಸಲಿಲ್ಲವಾದರೂ ವಿಜ್ಞಾನಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳು ಮಕ್ಕಳು ಹೆಚ್ಚಾಗಿ ವೀಕ್ಷಿಸುವ ವಾಹಿನಿಗಳನ್ನಾದರೂ ಕನ್ನಡಕ್ಕೆ ಡಬ್ ಮಾಡಲು ಅವಕಾಶ ನೀಡಬೇಕು ಎಂಬ ಬೇಡಿಕೆ ಪ್ರಾರಂಭವಾಯಿತು. ಕಾರಣ ಸ್ಪಷ್ಟ. ವಿಜ್ಞಾನಕ್ಕೆ ಸಂಬಂಧಪಟ್ಟ ವಾಹಿನಿಗಳು ನೆರೆರಾಜ್ಯಗಳಲ್ಲಿ ಅಲ್ಲಿನ ಮಾತೃಭಾಷೆ ಬಲ್ಲ ಎಲ್ಲರಿಗೂ ತಲುಪುತ್ತಿತ್ತು, ತತ್ಪರಿಣಾಮವಾಗಿ ಆ ಜ್ಞಾನ ಪ್ರಸರಣವೂ ಹೆಚ್ಚಿತು. ಅದೇ ಕರ್ನಾಟಕದಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ವೀಕ್ಷಿಸಲು ಇಂಗ್ಲೀಷ್ ಭಾಷೆ ಅನಿವಾರ್ಯವೆಂಬ ಪರಿಸ್ಥಿತಿ. ಇಂಗ್ಲೀಷ್ ತಿಳಿಯದವರು ಆ ವಾಹಿನಿಗಳನ್ನು ವೀಕ್ಷಿಸಿ ಅರ್ಥಮಾಡಿಕೊಳ್ಳುವುದು ಅಸಾಧ್ಯ. ಇಂಗ್ಲೀಷ್ ಬಲ್ಲವರಿಗೂ ಕೂಡ ಅಮೆರಿಕಾದ ಶೈಲಿಯಲ್ಲಿರುವ ಭಾಷೆಯನ್ನು ಅರ್ಥ ಮಾಡಿಕೊಳ್ಳುವುದು ಕೆಲವೊಮ್ಮೆ ಕಷ್ಟ. ಆ ಕಾರಣಕ್ಕೋ ಏನೋ ಬಹಳಷ್ಟು ಇಂಗ್ಲೀಷ್ ವಾಹಿನಿಗಳು ಆಂಗ್ಲದಲ್ಲೇ ಸಬ್ ಟೈಟಲ್ಸ್ ನೀಡುತ್ತವೆ! ಇನ್ನು ಮಕ್ಕಳು ಹೆಚ್ಚಾಗಿ ವೀಕ್ಷಿಸುವ ಕಾರ್ಟೂನ್ ಚಾನೆಲ್ಲುಗಳು ಮಾತೃಭಾಷೆಯಲ್ಲೇ ಇದ್ದರೆ ಅವುಗಳಿಗೆ ಭಾಷಾ ಪ್ರೇಮವಾದರೂ ಬೆಳೆಯುತ್ತದೆ ಎಂಬುದು ಡಬ್ಬಿಂಗ್ ಪರವಾಗಿ ವಾದಿಸುತ್ತಿದ್ದವರ ಅಭಿಪ್ರಾಯ. ಇಂಗ್ಲೀಷ್ ಶಾಲೆಗಳಿಗೆ ಹೋಗಿ ಮನೆಯಲ್ಲೂ ಇಂಗ್ಲೀಷ್ ಭಾಷೆಯ ವಾಹಿನಿಗಳನ್ನೇ ನೋಡುವ ಮಕ್ಕಳಿಗೆ ಕನ್ನಡದ ಬಗ್ಗೆ ಪ್ರೀತಿ ಮೂಡಲು ಹೇಗೆ ಸಾಧ್ಯ ಎಂದವರ ವಾದ. ನಾನು ಗಮನಿಸಿರುವಂತೆ ಪೋಗೋ ಕಾರ್ಟೂನ್ ನೆಟ್ ವರ್ಕ್ ವೀಕ್ಷಿಸುವ ಬಹುತೇಕ ಮಕ್ಕಳಿಗೆ ಅದರಲ್ಲಿ ಬರುವ ಇಂಗ್ಲೀಷ್ ಮಾತುಗಳು ಅರ್ಥವಾಗುವುದು ಕಡಿಮೆ. ಮತ್ತೆ, ನಮ್ಮದಲ್ಲದ ಇಂಗ್ಲೀಷ್ ಶೈಲಿ ಇದಕ್ಕೆ ಕಾರಣ. ಕಾರ್ಟೂನ್ ಕಥೆಗಳನ್ನು ಅರ್ಥವಾಗದ ಇಂಗ್ಲೀಷ್ ಭಾಷೆಯಲ್ಲಿ ನೋಡುವುದಕ್ಕಿಂತ ಅರ್ಥವಾಗುವ ಮಾತೃಭಾಷೆಯಲ್ಲಿ ನೋಡುವುದು ಮೇಲು. ಆದರೆ ಡಬ್ಬಿಂಗ್ ವಿರೋಧಿಗಳ ಪ್ರಾಬಲ್ಯ ಡಬ್ಬಿಂಗ್ ಪರವಾಗಿದ್ದವರದ್ದಕ್ಕಿಂತ ಹೆಚ್ಚಿದ್ದ ಕಾರಣ ವಿಜ್ಞಾನ ಮತ್ತು ಕಾರ್ಟೂನ್ ವಾಹಿನಿಗಳು ಇವತ್ತಿಗೂ ಕರ್ನಾಟಕದಲ್ಲಿ ಇಂಗ್ಲೀಷಿನಲ್ಲೇ ಬರುತ್ತಿದೆ. ಡಿಟಿಎಚ್ ಸೌಲಭ್ಯ ಹೊಂದಿದ ಮನೆಗಳಲ್ಲಿ ತಮಿಳು ತೆಲುಗಿನಲ್ಲೂ ಆ ವಾಹಿನಿಗಳು ಕರ್ನಾಟಕದಲ್ಲಿ ಪ್ರಸಾರವಾಗುತ್ತಿವೆ. ವಿಜ್ಞಾನ ಮತ್ತು ಕಾರ್ಟೂನ್ ವಾಹಿನಿಗಳ ಡಬ್ಬಿಂಗಿಗೆ ಅವಕಾಶ ನೀಡಿಬಿಟ್ಟರೆ ಅದೇ ನೆಪದಲ್ಲಿ ಧಾರವಾಹಿಗಳನ್ನೂ ಡಬ್ಬಿಂಗ್ ಮಾಡಲು ಪ್ರಾರಂಭಿಸಿಬಿಡುತ್ತಾರೆ. ಅಲ್ಲಿಗೆ ಕನ್ನಡದ ಕಿರುತೆರೆ ಪ್ರಪಂಚ ಸಂಪೂರ್ಣವಾಗಿ ನಿರ್ನಾಮವಾಗಿಹೋಗುತ್ತದೆ ಎಂದು ಸಮಜಾಯಿಸಿ ಕೊಟ್ಟುಕೊಂಡರು. ವಿಜ್ಞಾನ ವಾಹಿನಿಗಳ ಡಬ್ಬಿಂಗಿಗೆ ಒತ್ತಾಯಿಸುವುದರ ಹಿಂದೆ ಧಾರವಾಹಿಗಳನ್ನು ಡಬ್ ಮಾಡಬಯಸುವ ಜನರ ಕೈವಾಡವಿದೆ ಎಂದು ಆರೋಪಿಸಿದರು. ಅವರ ಆರೋಪ ಸಂಪೂರ್ಣ ನಿರಾಧಾರವಾದುದು ಎಂದು ಹೇಳಲು ಆಗುವುದಿಲ್ಲವಾದರೂ ಬಹಳಷ್ಟು ಕನ್ನಡಿಗರ ‘ಕನ್ನಡ ಭಾಷೆಯಲ್ಲಿ ವಿಜ್ಞಾನದ ವಾಹಿನಿಯನ್ನು ವೀಕ್ಷಿಸುವ’ ಹಕ್ಕನ್ನು ಕಿತ್ತುಕೊಂಡಂತಾಗಲಿಲ್ಲವೇ?

ನಂತರದಲ್ಲಿ ಈ ಡಬ್ಬಿಂಗ್ ವಿವಾದ ತಾರಕ್ಕೇರಿದ್ದು ಹಿಂದಿಯಲ್ಲಿ ಅಮೀರ್ ಖಾನ್ ನಿರ್ವಹಿಸಿದ ‘ಸತ್ಯಮೇವ ಜಯತೇ’ ಕಾರ್ಯಕ್ರಮ ಪ್ರಸಾರವಾದ ಸಮಯದಲ್ಲಿ. ಎಂದಿನಂತೆ ‘ಸತ್ಯಮೇವ ಜಯತೇ’ ಪರರಾಜ್ಯಗಳಲ್ಲಿ ಆಯಾ ಭಾಷೆಯಲ್ಲೇ ಡಬ್ಬಿಂಗ್ ಆಗಿತ್ತು. ಒಂದು ಉತ್ತಮ ಸಾಮಾಜಿಕ ಕಾರ್ಯಕ್ರಮವಿದು ಎಂಬ ಪ್ರಚಾರ ಪಡೆದಿದ್ದ ‘ಸತ್ಯಮೇವ ಜಯತೇ’ ಕನ್ನಡದಲ್ಲೂ ಡಬ್ ಆಗಿ ಬರುತ್ತದೆ ಎಂಬ ಸುದ್ದಿ ಹಬ್ಬಿತ್ತು. ‘ಸತ್ಯಮೇವ ಜಯತೇ’ ಕನ್ನಡಕ್ಕೆ ಡಬ್ ಆಗಿದ್ದ ಕೆಲವು ಟ್ರೇಲರ್ ಗಳನ್ನು ಯೂಟ್ಯೂಬಿನಲ್ಲೂ ಹಾಕಿದ್ದರು. ಮತ್ತೆ ಡಬ್ಬಿಂಗ್ ವಿರೋಧಿಗಳ ಗುಂಪು ‘ಸತ್ಯಮೇವ ಜಯತೆ’ಯ ಕನ್ನಡ ಅವತರಣಿಕೆಯ ಪ್ರಸಾರವನ್ನು ವಿರೋಧಿಸಿ ಅದು ಪ್ರಸಾರವಾಗದಂತೆ ನೋಡಿಕೊಂಡರು, ಕೊನೆಗೆ ಯುಟ್ಯೂಬಿನಲ್ಲಿದ್ದ ಟ್ರೇಲರನ್ನು ತೆಗೆಸಿಹಾಕಿದರು. ಈ ಗಲಭೆಗಳೆಲ್ಲ ಕೊನೆಗೆ Competition Commission of India (ಸಿ ಸಿ ಐ) ಅಂಗಳದಲ್ಲಿ ಕಾನೂನು ಸಮರವಾಗಿ ಮಾರ್ಪಾಡಾಯಿತು.

ಈಗ ಸಿ.ಸಿ.ಐ ಡಬ್ಬಿಂಗಿಗೆ ನಿಷೇಧ ವಿಧಿಸುವುದು ಕಾನೂನು ಮತ್ತು ಸಂವಿಧಾನ ಬಾಹಿರ ಎಂದು ಹೇಳಿರುವುದು ಡಬ್ಬಿಂಗ್ ಪರವಾಗಿದ್ದವರಲ್ಲಿ ಹರ್ಷ ಮೂಡಿಸಿದ್ದರೆ ಡಬ್ಬಿಂಗ್ ವಿರೋಧಿಗಳಲ್ಲಿ ಮತ್ತಷ್ಟು ಅಸಹನೆ ಉಂಟುಮಾಡಿದೆ. ಮತ್ತೊಂದು ಸುತ್ತಿನ ವಾದ ವಿವಾದಗಳು ಪ್ರಾರಂಭಗೊಂಡಿವೆ. ವಾದ ವಿವಾದಗಳು ಮತ್ತೆ ಹಳೆಯ ರೀತಿಯಲ್ಲಿಯೇ ಸಾಗುತ್ತ ಯಾವೊಂದು ನಿರ್ಣಯಕ್ಕೂ ಬರದಂತೆ ಮಾಡುತ್ತಿವೆ. ಸರಕಾರ ಕೂಡ ಇನ್ನೂ ಈ ವಿಷಯವಾಗಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಮೊದಲು ಡಬ್ಬಿಂಗ್ ವಿರೋಧಿಗಳು ಯಾವ ಕಾರಣಕ್ಕೆ ವಿರೋಧಿಸುತ್ತಿದ್ದಾರೆ ಎಂಬುದನ್ನು ಗಮನಿಸಿದರೆ ಎಪ್ಪತ್ತೈದು ವರುಷಗಳ ಸಶಕ್ತ ಸಿನಿಮಾರಂಗ ಡಬ್ಬಿಂಗ್ ಚಿತ್ರಗಳ ಆಗಮನದೊಂದಿಗೆ ಹೆಸರಿಲ್ಲದಂತೆ ಹೋಗಿಬಿಡುತ್ತದೆ ಎಂಬ ಭಯವಿದೆ ಚಿತ್ರೋದ್ಯಮದವರಿಗೆ. ಪರಭಾಷಾ ಚಿತ್ರಗಳ ಸತತ ಹಾವಳಿಯಿಂದಾಗ್ಯು ಕನ್ನಡ ಸಿನಿಮಾಗಳು ಹಿನ್ನಡೆದಿಲ್ಲ. ಉತ್ತಮ ಚಿತ್ರಗಳು ಯಾವ ಭಾಷೆಯಲ್ಲಿ ಬಂದರೂ ಅದನ್ನು ನೋಡುವಷ್ಟು ಉದಾರ ಮನಸ್ಸಿದೆ ಕನ್ನಡಿಗನಿಗೆ. ಪರಭಾಷೆಯ ಚಿತ್ರಗಳನ್ನು ಸಂಪೂರ್ಣ ಅರ್ಥವಾಗದ ಭಾಷೆಯಲ್ಲಿ ನೋಡುವುದಕ್ಕಿಂತ ಕನ್ನಡದಲ್ಲೇ ಡಬ್ ಆದ ನಂತರ ನೋಡುವುದು ಒಳ್ಳೆಯದಲ್ಲವೇ ಎಂಬುದು ಹಲವರ ಪ್ರಶ್ನೆ. ಉತ್ತಮ ಕನ್ನಡ ಚಿತ್ರವೊಂದು ಪರಭಾಷಾ ಚಿತ್ರದ ಹಾವಳಿಯಿಂದಾಗಿ ಸೋತ ಉದಾಹರಣೆಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಡಬ್ಬಿಂಗಿಂದ ಕನ್ನಡ ಚಿತ್ರೋದ್ಯಮ ಮಂಕಾಗಿ ಕನ್ನಡ ಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿರುವವರೆಲ್ಲ ನಿರ್ಗತಿಕರಾಗಿ ಬೀದಿಗೆ ಬಂದು ಬಿಡುತ್ತಾರೆ. ಚಿತ್ರಗಳಷ್ಟೇ ಅಲ್ಲದೆ ಧಾರವಾಹಿಗಳೂ ಕೂಡ ಡಬ್ಬಿಂಗ್ ಆಗುವುದರಿಂದ ನೂರಾರು ಜನರಿಗೆ ಆಶ್ರಯಧಾತವಾಗಿರುವ ಕಿರುತೆರೆ ಕೂಡ ನಷ್ಟ ಅನುಭವಿಸುತ್ತದೆ ಎಂಬ ಅದೇ ಹಳೆಯ ವಾದವನ್ನು ಹೇಳುತ್ತಿದ್ದಾರೆ. ಇಷ್ಟಕ್ಕೇ ನಿಲ್ಲದೆ ಡಬ್ಬಿಂಗಿನಿಂದಾಗಿ ಇಡೀ ಕನ್ನಡ ಸಂಸ್ಕೃತಿಯೇ ನಾಶದ ಅಂಚಿಗೆ ತಲುಪಿಬಿಡುತ್ತದೆ ಎಂದು ಹಲುಬುವವರ ಸಂಖ್ಯೆಯೂ ಹೆಚ್ಚಿದೆ. ಚಿತ್ರೋದ್ಯಮದ ಅನ್ನದ ಪ್ರಶ್ನೆಯನ್ನು ಇಡೀ ಕನ್ನಡದ ಸಂಸ್ಕೃತಿಯ ಪ್ರಶ್ನೆಯನ್ನಾಗಿ ಮಾರ್ಪಡಿಸಲು ಪ್ರಯತ್ನ ಪಡುವ ಸಿನಿರಂಗದವರ ಕಾರ್ಯ ಖಂಡನೀಯ. ಸಿನಿಮಾ ಎಂಬುದು ಕನ್ನಡ ಸಂಸ್ಕೃತಿಯ ಒಂದು ಸಣ್ಣ ಭಾಗವಷ್ಟೇ. ವಿಶಾಲವಾದ ಕನ್ನಡ ಸಂಸ್ಕೃತಿಯಿಂದ ಸಿನಿಮಾರಂಗ ಬೆಳೆಯುತ್ತದೆಯೇ ಹೊರತು ಕೇವಲ ಸಿನಿಮಾಗಳಿಂದ (ಅದರಲ್ಲೂ ಇತ್ತೀಚಿನ ವರ್ಷಗಳ ಸಿನಿಮಾಗಳಿಂದ) ಕನ್ನಡ ಸಂಸ್ಕೃತಿ ಬೆಳೆಯುತ್ತಿರುವುದು ಅಷ್ಟರಲ್ಲೇ ಇದೆ.

ದಶಕಗಳ ಹಿಂದೆ ನಡೆದ ಚಳುವಳಿಗೂ ಈಗ ನಡೆಯುತ್ತಿರುವ ಚಳುವಳಿಗೂ ಇರುವ ಪ್ರಮುಖ ವ್ಯತ್ಯಾಸವೆಂದರೆ ಚಿತ್ರೋದ್ಯಮದಲ್ಲೇ ಒಗ್ಗಟ್ಟಿಲ್ಲದಿರುವುದು ಮತ್ತು ಅದಕ್ಕಿಂತಲೂ ಪ್ರಮುಖವಾಗಿ ಈಗಿನ ಡಬ್ಬಿಂಗ್ ವಿರೋಧಿ ಚಳುವಳಿಗೆ ಸಾಹಿತಿಗಳ ಬೆಂಬಲ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿರುವುದು. ಚಂದ್ರಶೇಖರ ಕಂಬಾರ, ಕುಂ.ವೀರಭದ್ರಪ್ಪನಂತಹ ಲೇಖಕರು ಬಹಿರಂಗವಾಗಿಯೆ ಡಬ್ಬಿಂಗ್ ಬರಬೇಕು ಎಂದು ಹೇಳಿಕೆ ನೀಡಿದ್ದಾರೆ. ಸಾಹಿತಿಗಳ ಬೆಂಬಲ, ಚಿತ್ರೋದ್ಯಮದ ಕೆಲವು ನಿರ್ಮಾಪಕರ ಬಹುತೇಕ ಪ್ರದರ್ಶಕರ ಬೆಂಬಲ ಡಬ್ಬಿಂಗ್ ವಿರೋಧಿ ಚಳುವಳಿಗೆ ಸಿಗುತ್ತಿಲ್ಲವೇಕೆ ಎಂಬುದರ ಬಗ್ಗೆ ಡಬ್ಬಿಂಗ್ ವಿರೋಧಿಗಳು ಚಿಂತಿಸುತ್ತಲೇ ಇಲ್ಲವಾ? ಕನ್ನಡ ಸಿನಿಮಾ ರಂಗ ಸಾಹಿತ್ಯದಿಂದ ದೂರವಾಗಿ ಎಷ್ಟೋ ಕಾಲವಾಯಿತು. ನಾಗರಹಾವು, ಭೂತಯ್ಯನ ಮಗ ಅಯ್ಯು, ಬಂಗಾರದ ಮನುಷ್ಯ ತರಹದ ಚಿತ್ರಗಳು ಕಾದಂಬರಿಯಿಂದ ಪಡಿಮೂಡಿ ಚಿತ್ರರಂಗದ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಂತವು. ಸಿದ್ಧ ಲಿಂಗಯ್ಯ, ಪುಟ್ಟಣ್ಣ ಕಣಗಾಲ್ ಇನ್ನೂ ಮುಂತಾದ ನಿರ್ದೇಶಕರಿಗೆ ಸಾಹಿತ್ಯದ ಮೇಲೆ ಪ್ರೀತಿಯಿತ್ತು, ಸಾಹಿತ್ಯ ಮತ್ತು ಸಿನಿಮಾಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿ ಓದುವ ಜನರಿಗೆ ಸೀಮಿತವಾಗಿದ್ದ ಪುಸ್ತಕಗಳನ್ನು ಸಿನಿಮಾಗಳ ಮೂಲಕ ನೋಡುವ ಜನರಿಗೂ ತಲುಪಿಸಿದರು. ಆದರೀಗ ಓದುವ ಜನರು ನೋಡದ ಸಿನಿಮಾಗಳನ್ನು ನಿರ್ಮಿಸುವುದರಲ್ಲೇ ಹೆಚ್ಚು ಕಾಲವ್ಯಯವಾಗುತ್ತಿದೆ. ಯಾವಾಗ ಸಾಹಿತ್ಯಕ್ಕೂ ಸಿನಿಮಾಕ್ಕೂ ಇದ್ದ ಅವಿನಾಭಾವ ಸಂಬಂಧ ಕಡಿದುಕೊಳ್ಳಲಾರಂಭಿಸಿತೋ ಸಾಹಿತಿಗಳಿಗೂ ಡಬ್ಬಿಂಗ್ ಬಂದರೆ ತಪ್ಪೇನು ನಮ್ಮ  ಜನ ನಮ್ಮ ಭಾಷೆಯಲ್ಲೇ ಮನರಂಜನೆ ಪಡೆದುಕೊಳ್ಳಬೇಕು ಎಂಬ ಭಾವನೆ ಮೂಡಲಾರಂಭಿಸಿದೆ. ಮತ್ತು ಕನ್ನಡ ಚಿತ್ರಗಳನ್ನು ವೀಕ್ಷಿಸುವ ಸಾಮಾನ್ಯ ಪ್ರೇಕ್ಷಕ ಕೂಡ ಡಬ್ಬಿಂಗ್ ಪರವಾಗಿ ಮಾತನಾಡಲಾರಂಭಿಸಿದ್ದಾನೆ. ಸಂಸ್ಕೃತಿ ರಕ್ಷಣೆ ಬಗ್ಗೆ ಬೊಬ್ಬಿಡುತ್ತಾ ಡಬ್ಬಿಂಗ್ ವಿರೋಧಿಸುತ್ತಿರುವ ಕನ್ನಡ ಸಿನಿಮಂದಿಯ ಸಂಸ್ಕೃತಿ ‘ಕಂಬಾರರಿಗೆ ನಾಚಿಕೆಯಾಗುವುದಿಲ್ಲವೇ?’ ಎಂಬ ಅಸಂಬದ್ಧ ಪ್ರಶ್ನೆ ಕೇಳಿದ ನಟ ಪ್ರೇಮ್ ಮೂಲಕ ಜಗಜ್ಜಾಹೀರಾಯಿತು. ಇನ್ನು ಡಬ್ಬಿಂಗ್ ವಿರೋಧಿಸುವ ತಂಡ ರೀಮೇಕ್ ಚಿತ್ರಗಳ ಬಗ್ಗೆ ಸೊಲ್ಲೆತ್ತುವುದಿಲ್ಲ. ಡಬ್ಬಿಂಗ್ ವಿರೋಧಿ ಹೋರಾಟದ ನೇತೃತ್ವ ವಹಿಸಿರುವ ಶಿವರಾಜ್ ಕುಮಾರ್ ಹಲವು ವರುಷಗಳಿಂದ ರೀಮೇಕ್ ಚಿತ್ರಗಳಲ್ಲಿ ನಟಿಸುತ್ತಿಲ್ಲವಾದರೂ ರೀಮೇಕ್ ತಪ್ಪೆಂದು ಎಂದೂ ಹೇಳಿಲ್ಲ. ಡಬ್ಬಿಂಗ್ ಬಂದುಬಿಟ್ಟರೆ ರೀಮೇಕ್ ಮಾಡುವುದು ಹೇಗೆ ಎಂಬ ಚಿಂತೆಯೂ ಅನೇಕ ‘ಕಳ್ಳ’ ನಿರ್ದೇಶಕರ ಮತ್ತು ‘ಮಿಮಿಕ್ರಿ’ ನಟರ ನಿದ್ದೆಗೆಡಿಸಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಮತ್ತು ಸೋತ ಪುನೀತ್ ರಾಜ್ ಕುಮಾರ್ ಚಿತ್ರ ನಿನ್ನಿಂದಲೇ ಯಲ್ಲಿರುವ ನಟಿ, ನಿರ್ದೇಶಕ, ತಾಂತ್ರಿಕ ವರ್ಗ ಬಹುತೇಕ ತೆಲುಗಿನಿಂದ ಬಂದಿರುವುದು. ಪರಭಾಷಿಕರನ್ನೇ ಸಂಪೂರ್ಣ ಉಪಯೋಗಿಸಿ ತೆಗೆದ ಚಿತ್ರದಿಂದ ಕನ್ನಡ ಸಂಸ್ಕೃತಿಯ ಉಳಿಕೆ ಹೇಗೆಂಬುದನ್ನು ಬಲ್ಲವರೇ ತಿಳಿಸಬೇಕು. ಭಾವವೇಶದಿಂದ ‘ಪ್ರಾಣ ಬಿಡ್ತೀವಿ’ ಎಂದು ಕೂಗಾಡುವ ಮೊದಲು ಶಿವರಾಜ್ ಕುಮಾರರಂತಹ ಹಿರಿಯ ನಟರು ಸಮಚಿತ್ತವಾಗಿ ಯೋಚಿಸುವುದನ್ನು ಮೊದಲು ಕಲಿಯಬೇಕು. ಇನ್ನು ನಿರ್ಮಾಪಕರಲ್ಲಿ ಕೆಲವರು ಡಬ್ಬಿಂಗ್ ಪರವಾಗಿ ಬಹಿರಂಗ ಹೇಳಿಕೆ ಕೊಡುತ್ತಿದ್ದಾರೆ, ಕೆಲವರು ಬಹಿರಂಗ ಹೇಳಿಕೆ ನೀಡಲು ಹಿಂಜರಿದರೂ ಡಬ್ಬಿಂಗ್ ಪರವಾಗಿದ್ದಾರೆ. ಕಾರಣ ನಟರ ಅದರಲ್ಲೂ ಕನ್ನಡ ನಾಯಕ ನಟರ ಅಬ್ಬರ. ಹತ್ತು ಚಿತ್ರಗಳು ಸೋತು ಒಂದೇ ಒಂದು ಚಿತ್ರ ಗೆಲುವು ಕಂಡರೂ ಆ ನಾಯಕ ನಟರ ಸಂಭಾವನೆ ಲಕ್ಷಗಳ ಲೆಕ್ಕದಿಂದ ಕೋಟಿಗಳ ಲೆಕ್ಕಕ್ಕೆ ದಾಟುತ್ತದೆ. ಉಳಿದ ಸಮಾರಂಭಗಳಿರಲಿ ಚಿತ್ರೋದ್ಯಮಕ್ಕೆ ಸಂಬಂಧಿಸಿದ ಸಮಾರಂಭಗಳಿಗೆ ಬರುವುದಕ್ಕೂ ಹಣ ಕೇಳುವವರ ಸಂಖ್ಯೆಯೇನೂ ಚಿತ್ರರಂಗದಲ್ಲಿ ಕಡಿಮೆಯಿಲ್ಲ. ಚೆನ್ನೈನಲ್ಲಿ ನಡೆದ ಭಾರತೀಯ ಸಿನಿಮಾರಂಗದ ಶತಮಾನೋತ್ಸವ ಸಂಭ್ರಮಕ್ಕೆ ಕನ್ನಡ ಚಿತ್ರರಂಗದ ದಿಗ್ಗಜರಲ್ಲನೇಕರು ಪಾಲ್ಗೊಳ್ಳದಿರುವುದಕ್ಕೆ ಹಣ ದೊರೆಯದಿರುವುದೇ ಕಾರಣ ಎಂಬುದು ಸುಳ್ಳೇನಲ್ಲ. ಪ್ರತಿಯೊಂದನ್ನೂ ಹಣದಿಂದಲೇ ತೂಗುವ, ಚಿತ್ರೋದ್ಯಮ ಉದ್ಯಮ ರೂಪದಲ್ಲಿರುವ ಕಲಾ ವಿಭಾಗ ಎಂಬುದನ್ನು ಮರೆತು ಹೋಗಿರುವ ಕಲಾವಿದರಿಗೆ ಅದನ್ನು ಮತ್ತೆ ನೆನಪಿಸಲೋಸಗವಾದರೂ ಡಬ್ಬಿಂಗ್ ತಂದೇ ತರುತ್ತೇವೆ ಎಂಬ ಹಟತೊಟ್ಟಿರುವವರ ಸಂಖ್ಯೆಯೂ ಕಡಿಮೆಯಿಲ್ಲ. ಇನ್ನು ನಿರ್ದೇಶಕರಲ್ಲಿ ಈ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಬಹಳಷ್ಟು ನಿರ್ದೇಶಕರು ಡಬ್ಬಿಂಗನ್ನು ವಿರೋಧಿಸುತ್ತಿದ್ದರೆ ಗುರುಪ್ರಸಾದ್ ರಂತಹ ನಿರ್ದೇಶಕರು ಡಬ್ಬಿಂಗ್ ಬರಲಿ ಎನ್ನುತ್ತಿದ್ದಾರೆ. ಗಾಂಧಿನಗರದಲ್ಲಿ ಸೈಕಲ್ ಹೊಡೆಯುತ್ತಿರುವ ಅನೇಕೆ ಹೊಸ ಪ್ರತಿಭಾವಂತ ನಿರ್ದೇಶಕರು ಕೂಡ ಡಬ್ಬಿಂಗ್ ಬರಲಿ ಎಂದೇ ಆಶಿಸುತ್ತಿದ್ದಾರೆ! ಕಾರಣ ಹೊಸ ರೀತಿಯ ಕಥೆಗಳನ್ನು ಕೊನೇ ಪಕ್ಷ ಕೇಳಲೂ ಸಿದ್ಧವಿಲ್ಲದ ನಿರ್ಮಾಪಕರು ಮತ್ತು ಕಲಾವಿದರು. ಕಥೆ ಕೇಳಲು ಕರೆಸಿ ಪರಭಾಷೆಯ, ಕೆಲವೊಮ್ಮೆ ಹೊರ ದೇಶದ ಚಿತ್ರಗಳ ಸಿಡಿ ಕೊಟ್ಟು ಇವಿಷ್ಟೂ ಚಿತ್ರ ಸೇರಿಸಿ ಒಂದು ಚಿತ್ರಕಥೆ ಮಾಡಿಬಿಡಿ ಎಂದು ಹೇಳುವವರೇ ಅಧಿಕ. ಇನ್ನು ಹತ್ತಲವು ರೀಮೇಕ್ ಚಿತ್ರಗಳಲ್ಲಿ ಒಂದು ಕಡೆ ಮೂಲ ಚಿತ್ರದ ಸಿ.ಡಿಯನ್ನು ಲ್ಯಾಪ್ ಟಾಪಿಗೆ ಹಾಕಿ ಚಿತ್ರೀಕರಣ ನಡೆಸುವವರೂ ಇದ್ದಾರೆ. ಕನ್ನಡ ಸಂಸ್ಕೃತಿಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ ಅನೇಕ ಕಲಾವಿದರ ನಿರ್ದೇಶಕರ ಚಿತ್ರಗಳ ಕಥೆಯಿದು. ಡಬ್ಬಿಂಗ್ ಬಂದುಬಿಟ್ಟರೆ ರೀಮೇಕಿಸುವುದಾದರೂ ಏನನ್ನು ಎಂಬ ಚಿಂತೆಯವರಿಗೆ! ಇನ್ನೂ ತಮಾಷೆಯ ಸಂಗತಿಯೆಂದರೆ ಡಬ್ಬಿಂಗ್ ವಿರೋಧಿ ಮಾತನಾಡುವವರದೇ ಕನ್ನಡ ಚಿತ್ರಗಳು ಹಿಂದಿ ಭಾಷೆಗೆ ಡಬ್ ಆಗಿ ಹಿಂದಿ ಚಾನೆಲ್ಲುಗಳಲ್ಲಿ ಬರುತ್ತವೆ. ಕೆಲವರ ಚಿತ್ರಗಳು ತಮಿಳ್ ತೆಲುಗಿಗೂ ಡಬ್ ಆಗುತ್ತವೆ. ಈ ಕಾರಣದಿಂದಲೇ ಕೆಲವೊಂದು ತೆಲುಗು ತಮಿಳು ಹಿಂದಿಯ ನಟರನ್ನು ಆ ಪಾತ್ರಕ್ಕೆ ಸೂಕ್ತವಲ್ಲದಿದ್ದರೂ ಅವಶ್ಯಕವಿಲ್ಲದಿದ್ದರೂ ಕನ್ನಡ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಕಾರಣ ಡಬ್ ಸಿನಿಮಾಗಳ ಸ್ಯಾಟೆಲೈಟ್ ಹಕ್ಕಿಗೆ ಹೆಚ್ಚು ಹಣ ಸಿಗುವ ಸಾಧ್ಯತೆಯಿರುತ್ತದೆ! ಕನ್ನಡಕ್ಕೆ ಡಬ್ ಆದರೆ ಕನ್ನಡ ಸಿನಿಮಾರಂಗದ ಕಾರ್ಮಿಕರ ಕೆಲಸ ಕಿತ್ತುಕೊಂಡಂತೆ ಎಂದು ಹೇಳುವವರು ತಮ್ಮ ಚಿತ್ರಗಳನ್ನು ಇತರೆ ಭಾಷೆಗೆ ಡಬ್ ಮಾಡಿದರೆ ಅಲ್ಲಿನ ಕಾರ್ಮಿಕರ ಅನ್ನ ಕಿತ್ತುಕೊಂಡಂತಾಗುತ್ತದೆ ಎಂದ್ಯಾಕೆ ಯೋಚಿಸುವುದಿಲ್ಲ?

ಇನ್ನು ಡಬ್ಬಿಂಗ್ ಪರವಾಗಿರುವ ಸಾಮಾನ್ಯ ಜನರ ಅಪೇಕ್ಷೆ ಪ್ರತಿಯೊಂದು ಸಿನಿಮಾವನ್ನು, ವಿಜ್ಞಾನದ ವಾಹಿನಿಯನ್ನು, ಕಾರ್ಟೂನ್ ನೆಟ್ ವರ್ಕನ್ನೂ ಕನ್ನಡದಲ್ಲೇ ನೋಡುವುದಕ್ಕೆ ಇಷ್ಟಪಡುತ್ತಿದ್ದಾನಷ್ಟೇ. ಡಬ್ಬಿಂಗ್ ಪರವಾಗಿರುವ ಪ್ರತಿಯೊಬ್ಬರಲ್ಲೂ ಈ ಜನಸಾಮಾನ್ಯನ ರೀತಿಯ ನಿಸ್ವಾರ್ಥತೆ ಖಂಡಿತ ಇಲ್ಲ. ಕನ್ನಡದ ಕೆಲವು ನಿರ್ಮಾಪಕರು ಈಗಾಗಲೇ ಕೆಲವು ಚಿತ್ರಗಳನ್ನು ಡಬ್ಬಿಂಗ್ ಮಾಡಿಸಿ ಇಟ್ಟುಕೊಂಡಿದ್ದಾರೆ, ಕೆಲವರು ಡಬ್ಬಿಂಗ್ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಅವರಲ್ಲನೇಕರು ಕಲಾವಿದರ ಸಂಭಾವನೆಗೆ ಬೆಚ್ಚಿ ಹೊಸಬರಿಗೆ ಪ್ರೋತ್ಸಾಹ ಕೊಡುವ ಮನಸ್ಸೂ ಇಲ್ಲದೆ ಹೊಸ ಚಿತ್ರಗಳ ನಿರ್ಮಾಣ ಕಾರ್ಯವನ್ನೇ ಸ್ಥಗಿತಗೊಳಿಸಿಬಿಟ್ಟಿದ್ದಾರೆ. ಅಂತಹ ನಿರ್ಮಾಪಕರಿಗೆ ಡಬ್ಬಿಂಗಿಗೆ ಅವಕಾಶ ಸಿಕ್ಕ ತಕ್ಷಣ ಒಂದಷ್ಟು ದುಡ್ಡು ಮಾಡಿಕೊಳ್ಳುವ ಹಂಬಲವಷ್ಟೇ ಇದೆ. ಅಬ್ಬಬ್ಬಾ ಎಂದರೆ ಡಬ್ಬಿಂಗಿಗೆ ಐದರಿಂದ ಹತ್ತು ಲಕ್ಷ ಖರ್ಚಾಗಬಹುದು. ಸ್ಯಾಟಲೈಟ್ ರೈಟ್ಸ್ ಮಾರಿಯೇ ಲಾಭ ಮಾಡಬಹುದು ಎಂಬುದವರ ಲೆಕ್ಕಾಚಾರ. ಇನ್ನು ಸಿ.ಸಿ.ಐನಲ್ಲಿ ಕೆಲವೊಂದು ನ್ಯಾಯಾಲಯಗಳಲ್ಲಿ ಡಬ್ಬಿಂಗ್ ಪರವಾಗಿ ಹೋರಾಟ ನಡೆಸುತ್ತಿರುವುದು ರಿಲಾಯನ್ಸಿನಂಥಹ ಬೃಹತ್ ಕಂಪನಿಗಳು ಎಂಬುದು ಚಲನಚಿತ್ರ ಕಾರ್ಮಿಕ ಒಕ್ಕೂಟದ ನಟ ಅಶೋಕ್ ರವರ ಆರೋಪ. ಸಿನಿಮಾರಂಗವನ್ನು ಬೃಹತ್ ಉದ್ಯಮದಂತೆ ಕಾಣುವ ಈ ಕಂಪನಿಗಳಿಗೆ ಡಬ್ಬಿಂಗಿಗೆ ಅವಕಾಶ ಸಿಕ್ಕರೆ ಮತ್ತಷ್ಟು ಮಗದಷ್ಟು ಹಣ ಮಾಡುವ ಸಂಭ್ರಮ. ಇವರ ಹಣ ಮಾಡುವ ಸಂಭ್ರಮಕ್ಕೆ ಚಿತ್ರಮಂದಿರಗಳ ಕೊರತೆಯಿಂದ ನಲುಗುವುದು ಕನ್ನಡ ಸಿನಿಮಾಗಳು ಎಂಬುದು ಸತ್ಯ.

ಒಟ್ಟಿನಲ್ಲಿ ಡಬ್ಬಿಂಗ್ ಪರ ಮತ್ತು ವಿರೋಧಿಗಳ ಮಾತುಗಳೆರಡರಲ್ಲೂ ಅರ್ಧ ಸತ್ಯ ಕಾಣುವುದರಿಂದ ಈ ಸಮಸ್ಯೆ ಶೀಘ್ರ ಪರಿಹಾರ ಕಾಣುವುದು ಕಷ್ಟ. ಕಾನೂನಿನ ದೃಷ್ಟಿಯಿಂದ ನೋಡಿದರೆ ಡಬ್ಬಿಂಗ್ ಇಂದಲ್ಲ ನಾಳೆ ಬರುವುದು ನಿಶ್ಚಿತ. ಉತ್ತಮ ಸಿನಿಮಾಗಳಿಂದ ಡಬ್ಬಿಂಗಿಗೆ ಉತ್ತರ ಕೊಡಬೇಕೇ ಹೊರತು ಡಬ್ಬಿಂಗ್ ಪರವಾಗಿರುವವರೆಲ್ಲರೂ ಕನ್ನಡದ್ರೋಹಿಗಳು ಎಂದರಚುವುದರಿಂದ ಯಾವ ಪ್ರಯೋಜನವೂ ಇಲ್ಲ. ಡಾ ರಾಜ್ ಕುಮಾರ್ ವಿರೋಧಿಸಿದ ಡಬ್ಬಿಂಗನ್ನು ಇಂದು ಬರಲು ಬಿಟ್ಟುಬಿಟ್ಟರೆ ಅದು ಅಣ್ಣಾವ್ರಿಗೆ ಆಗುವ ಅವಮಾನ ಎಂಬ ಭಾವನೆಯನ್ನು ತ್ಯಜಿಸಿ ಚಿತ್ರರಂಗ ಯೋಚಿಸಬೇಕು. ಡಬ್ಬಿಂಗ್ ಪರವಾಗಿರುವವರು ತಮ್ಮ ಸ್ವಾರ್ಥತೆಯನ್ನು ತೊರೆದು ಡಬ್ಬಿಂಗ್ ವಿರೋಧಿಗಳು ತಮ್ಮ ಅಹಂಕಾರವನ್ನು ತ್ಯಜಿಸಿ ಯೋಚಿಸಿದರೆ ಈ ಡಬ್ಬಿಂಗ್ ಸಮಸ್ಯೆ ಪರಿಹಾರವಾಗುವುದು ಸುಲಭವಾಗುತ್ತದೆ. ರಿಮೇಕ್ ಚಿತ್ರಗಳಿಗೆ ಕಡಿವಾಣ, ಡಬ್ಬಿಂಗಿಗೆ ಅವಕಾಶ ನೀಡಿದ ಸಂದರ್ಭದಲ್ಲಿ ಮೂಲ ಭಾಷೆಯ ಚಿತ್ರಗಳು ತೆರೆಕಾಣುವುದನ್ನು ತಡೆಯಬೇಕೆ (ಕಾನೂನಿನ ಮತ್ತು ಸಂವಿಧಾನದ ಪ್ರಕಾರ ಮೂಲ ಭಾಷೆಯ ಚಿತ್ರಗಳನ್ನು ತಡೆಯುವುದು ಕಷ್ಟ), ತಡೆಯಬೇಕೆಂದಾದರೆ ಹೇಗೆ ಎಂಬುದರ ಬಗ್ಗೆಯೂ ಆಲೋಚಿಸಿದರೆ ಕನ್ನಡ ಚಿತ್ರರಂಗವೂ ಉಳಿಯುತ್ತದೆ ಮತ್ತಷ್ಟು ಬೆಳೆಯುತ್ತದೆ ಕನ್ನಡ ಸಂಸ್ಕೃತಿಯ ಬೆಳವಣಿಗೆಗೆ ಸಣ್ಣ ಸಹಾಯವನ್ನೂ ಮಾಡುತ್ತದೆ.

ಪ್ರಜಾಸಮರಕ್ಕೆ ಬರೆದ ಲೇಖನ
image source - dask online

No comments:

Post a Comment