Feb 13, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 18

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ .... ಭಾಗ 17 ಓದಲು ಇಲ್ಲಿ ಕ್ಲಿಕ್ಕಿಸಿ


ಕಾಲೇಜಿನ ಒಳಗೆ ಹೋಗುವಾಗಲೇ ಲೋಕಿಗೆ ಸಿಂಚನಾ ಸಿಕ್ಕಿದಳು. “ಯಾಕೋ ಲೋಕೇಶ್ ಟ್ರಿಪ್ಪಿಗೆ ಬರಲ್ಲ ಅಂದುಬಿಟ್ಯಂತೆ. ಪೂರ್ಣಿ ಬರ್ತಾ ಇದ್ದಾಳೆ. ನೀನು ಬರೋದಿಲ್ಲ ಅಂದರೆ ಹೇಗೆ ಹೇಳು?” ಮುಗುಳ್ನಗುತ್ತಾ ಕೇಳಿದಳು ಸಿಂಚನಾ.
‘ಏನು ಕಾರಣ ಅಂತ ಹೇಳೋದು?’ ಎಂದು ಯೋಚಿಸುತ್ತಾ “ಶಿವಮೊಗ್ಗದ ಕಡೆಯ ಊರುಗಳನ್ನೆಲ್ಲಾ ನೋಡಿಬಿಟ್ಟಿದ್ದೀನಿ ಸಿಂಚನಾ. ಅದಕ್ಕೆ ಬರಲ್ಲ ಅಂದೆ”

“ಓ! ನಿನಗಿನ್ನೂ ವಿಷಯ ಗೊತ್ತಾಗಿಲ್ಲ. ಪ್ಲಾನ್ ಬದಲಾಗಿದೆ. ನಿನ್ನ ತರಹಾನೇ ಬಹಳಷ್ಟು ಜನ ಶಿವಮೊಗ್ಗದ ಸುತ್ತಮುತ್ತಲೆಲ್ಲಾ ನೋಡಿದ್ದೀವಿ ಅಂದ್ರು ಅದಿಕ್ಕೆ ಶಿವಮೊಗ್ಗದ ಬದಲು ಮಧುರೈ ಮತ್ತು ಕೊಡೈಕೆನಾಲಿಗೆ ಹೋಗೋದು ಅಂತ ನಿರ್ಧರಿಸಿದ್ದೀವಿ”

“ಹೌದಾ! ನನಗೀ ವಿಷಯ ಗೊತ್ತೇ ಇರಲಿಲ್ಲವಲ್ಲ. ಮಧುರೈ ನಾನೂ ನೋಡಿಲ್ಲ. ಅಲ್ಲಿಗಾದರೆ ನಾನೂ ಬರ್ತೀನಿ” ಆ ವಿಷಯ ತನಗೆ ತಿಳಿದಿರಲಿಲ್ಲವೆಂಬಂತೆ ಮಾತನಾಡಿದ ಲೋಕಿ.

“ಸರಿ, ಹಾಗಾದರೆ. ನಾಡಿದ್ದರೊಳಗಾಗಿ ದುಡ್ಡು ಕೊಟ್ಟುಬಿಡಬೇಕು ಲೋಕಿ. ಆರೂನೂರೈವತ್ತು ರುಪಾಯಿ. ಬರೀ ಬಸ್ಸಿಗೆ. ಊಟದ ಖರ್ಚೆಲ್ಲ ಅವರವರದೇ”

“ನಾಳೇನೆ ತಂದುಕೊಡ್ತೀನಿ ಸಿಂಚನಾ” ಇಬ್ಬರೂ ತರಗತಿಯೆಡೆಗೆ ಹೋದರು.

ತರಗತಿಯಲ್ಲಿ ಪಾಠ ಶುರುವಾಗಿ ಐದು ನಿಮಿಷಗಳಾದರೂ ಗೌತಮ್ ಬಂದಿರಲಿಲ್ಲ. ಸಿಂಚನಾ ಅವನನ್ನೇ ಹುಡುಕುತ್ತಿದ್ದಳು. ‘ಛೇ! ಏನಾದರೂ ಹೆಚ್ಚು ಕಡಿಮೆ ಮಾಡಿಕೊಂಡುಬಿಟ್ನಾ?’ ಎಂಬ ಅನುಮಾನ ಮನಸ್ಸಿನಲ್ಲಿ ಹಾದುಹೋಯಿತು. ‘ಆ ರೀತಿಯೇನು ಆಗಿರೋದು ಬೇಡಪ್ಪಾ’ ದೇವರಲ್ಲಿ ಮೊರೆಯಿಟ್ಟಳು.
* * *
          
 ತಂದೆ ಕೆಲಸಕ್ಕೆ ಹೋಗಿದ್ದರು; ತಾಯಿ ಯಾವುದೋ ಮದುವೆಗೆ ಹೋಗಿದ್ದರು; ಗೌತಮ್ ಒಬ್ಬನೇ ರೂಮಿನಲ್ಲಿ ಕುಳಿತಿದ್ದ. ಎದುರಿಗಿದ್ದ ಟೇಬಲ್ ಮೇಲಿದ್ದ ಎರಡು ಸಿಗರೇಟನ್ನು ನೋಡುತ್ತಾ ಕುಳಿತಿದ್ದ. ನಾನ್ಯಾಕೆ ಅವಳನ್ನು ನನ್ನನ್ನು ಪ್ರೀತಿಸು ಎಂದು ಬೇಡಿಕೊಂಡೆ. ನನಗೇನು ಪ್ರೀತಿಗೆ ಕೊರತೆಯಿತ್ತಾ? ನನ್ನ ತಂದೆ ತಾಯಿ ನನ್ನನ್ನು ಪ್ರೀತಿಸುವಷ್ಟು ಬಹುಶಃ ಇನ್ಯಾರೂ ಪ್ರೀತಿಸೋದಿಲ್ಲ. ಎಲ್ಲಾ ವಿಷಯಗಳ ಬಗ್ಗೆಯೂ ತಂದೆಯೊಡನೆ ಮುಕ್ತವಾಗಿ ಚರ್ಚಿಸುತ್ತೇನೆ. ಒಬ್ಬನೇ ಮಗ ಎಂಬ ಕಾರಣಕ್ಕೆ ಯಾವುದೇ ವಿಷಯದಲ್ಲೂ ನಿರ್ಬಂಧ ವಿಧಿಸೋದಿಲ್ಲ. ಎಲ್ಲಾ ವಿಷಯಗಳಲ್ಲೂ ಸ್ವಂತ ನಿರ್ಧಾರ ತೆಗೆದುಕೊಳ್ಳೋದಿಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಏನಾದರೂ ತಪ್ಪು ಮಾಡಿದರೆ ತಿದ್ದುತ್ತಾರೆ. ನನಗ್ಯಾಕೆ ಬೇಕಿತ್ತು ಈ ಪ್ರೀತಿ ಪ್ರೇಮದ ಗುಂಗು? ಇನ್ನು ತಾಯಿಯಂತೂ ಗೆಳತಿಯಂತಿದ್ದಾರೆ. ಸಿಂಚನಾ ಇಷ್ಟವಾಗ್ತಿದ್ದಾಳೆ ಎಂದಾಗ ಖುಷಿ ಪಟ್ಟಿದ್ದರು. ಅವಳೂ ನಿನ್ನನ್ನು ಪ್ರೀತಿಸೋದಿಕ್ಕೆ ಒಪ್ಪಿದ ದಿನ ಮನೆಗೆ ಕರೆದುಕೊಂಡು ಬಾ ಎಂದಿದ್ದರು. ಈಗ ಅವರಿಗೆ ಏನು ಹೇಳೋದು? ಯಾವತ್ತೂ ಸಿಗರೇಟು ಸೇದದೇ ಇದ್ದವನು ಇವತ್ತ್ಯಾಕೆ ತಂದಿದ್ದೀನಿ. ಯಾಕೋ ಭಯವಾಗ್ತಿದೆ. ಸ್ನೇಹಿತರ ಬಲವಂತಕ್ಕೋ, ಸುಮ್ನೆ ತಮಾಷೆಗೋ ಒಂದು ಸೇದಿದರೆ ಬಿಡೋ ಸಾಧ್ಯತೆಗಳಿರುತ್ತವೆ. ಆದರೆ ದುಃಖ ಶಮನ ಮಾಡೋದಿಕ್ಕೆ ಕಲಿತರೆ ಬಹುಶಃ ನನ್ನ ಚಿತೆ ಉರಿದು ಹೋದಾಗಲೇ ಆ ಅಭ್ಯಾಸ ತಪ್ಪಿಹೋಗೋದು. ಒಂದು ಹುಡುಗಿಯ ಪ್ರೀತಿ ಸಿಗಲಿಲ್ಲ ಅನ್ನೋ ಕಾರಣಕ್ಕೆ ಸಿಗರೇಟು ಕಲಿಯಬೇಕಾ? ಎರಡೂ ಸಿಗರೇಟುಗಳನ್ನು ತೆಗೆದುಕೊಂಡು ಬಚ್ಚಲುಮನೆಗೆ ಹೋಗಿ ಒಲೆಯೊಳಗೆ ಹಾಕಿ, ಮೇಲೊಂದು ಪೇಪರ್ ಇಟ್ಟು ಬೆಂಕಿ ಕೊಟ್ಟ. ಸಿಗರೇಟಿನ ಘಮ ಬಚ್ಚಲುಮನೆಯಿಡೀ ತುಂಬಿತು. ಐದಾರು ಕಾಯಿಸಿಪ್ಪೆ ಹಾಕಿ ನೀರು ಕಾಯಿಸಿಕೊಂಡು ಸ್ನಾನ ಮಾಡಿದ. ಒಬ್ಬನೇ ಇದ್ದರೆ ಮನಸ್ಸಿಗೆ ಕೆಟ್ಟ ಯೋಚನೆಗಳು ಬರುತ್ತೆ ಎಂದುಕೊಂಡು ಹೊರಹೋಗಲು ಅಣಿ ಮಾಡಿಕೊಂಡ. ತಲೆ ಬಾಚಿಕೊಳ್ಳಲು ಕನ್ನಡಿ ಎದುರಿಗೆ ನಿಂತಾಗ ಮತ್ತೆ ನೆನಪಾದದ್ದು ಸಿಂಚನಾ. ನೋಡೋದಿಕ್ಕೂ ಚೆನ್ನಾಗಿಯೇ ಇದ್ದೀನಿ, ದಿನಾ ವ್ಯಾಯಾಮ ಮಾಡೋದ್ರಿಂದ ಅಂಗಸೌಷ್ಠವನೂ ಚೆನ್ನಾಗಿದೆ. ತರಗತಿಯ ಇತರ ಹುಡುಗರಿಗೆ ಹೋಲಿಸಿದರೆ ಒಳ್ಳೆಯವನೂ ಹೌದು; ಜೊತೆಗೆ ಪ್ರತಿಭಾವಂತ; ನನ್ನಂಥವನ ಪ್ರೇಮ ಪ್ರಸ್ತಾಪವನ್ನು ತಿರಸ್ಕರಿಸಿಬಿಟ್ಟಳಲ್ಲ. ನಿಜವಾಗಲೂ ಅವಳಿಗೆ ನಿಶ್ಚಿತಾರ್ಥವಾಗಿದೆಯಾ? ನನ್ನನ್ನು ತಿರಸ್ಕರಿಸೋ ಕಾರಣಕ್ಕಾಗಿ ಸುಮ್ಮನೆ ಒಂದು ಸುಳ್ಳು ಹೇಳಿರಬೇಕು. ಆದರೂ ಪಾಪ ಅವಳು ಸುಳ್ಳು ಹೇಳೋ ಹುಡುಗಿಯಲ್ಲ; ಅವಳಿಗೆ ಮದುವೆ ಗೊತ್ತಾಗಿದೆಯೆಂದ ಮೇಲೆ ನಾನ್ಯಾಕೆ ಅವಳನ್ನು ಮಾತನಾಡಿಸಲಿ? ಹೌದು ಇದೇ ಸರಿ! ಅವಳನ್ನು ಸಂಪೂರ್ಣವಾಗಿ ಮರೆಯಬೇಕೆಂದರೆ ಅವಳನ್ನು ಮಾತನಾಡಿಸೋದಾಗಲೀ, ನೋಡೋದಾಗಲೀ ಮಾಡಲೇಬಾರದು. ಅವಳಾಗಿದ್ದವಳೇ ಮಾತನಾಡಿಸಿದರೂ ಮೌನಕ್ಕೆ ಶರಣಾಗಬೇಕು. ಕೊನೆಗೊಂದು ನಿರ್ಧಾರ ಮಾಡಿದ್ದರಿಂದ ಮನ ಕೊಂಚ ನಿರಾಳವಾಯಿತು. ಆವಾಗಲೇ ಗೌತಮ್ ಗಮನಿಸಿದ್ದು. ರಾತ್ರಿಯೆಲ್ಲ ನಿದ್ದೆ ಬರದ ಕಾರಣ ಕಣ್ಣು ಕೆಂಪಾಗಿ ಹೋಗಿತ್ತು. ಮಲಗೋಣ ಎಂದು ಹಾಸಿಗೆಯ ಮೇಲೆ ಅಡ್ಡಾದ, ಯಾಕೋ ನಿದ್ದೆ ಬರಲಿಲ್ಲ. ದಿಂಬಿನ ಕೆಳಗಿದ್ದ ಸಿಂಚನಾಳ ಫೋಟೋವನ್ನು ತೆಗೆದು ಹರಿದು ಹಾಕಿ ಕಿಟಕಿಯಿಂದ ಹೊರಗೆ ಎಸೆದ, ನಿದ್ರೆ ಆವರಿಸಿದಂತಾಯಿತು.
* * *
          
 ‘ಇವತ್ತಾಗಲೇ ಆರನೇ ತಾರೀಖು. ನಾಳೆ ಮಧ್ಯಾಹ್ನ ಕಾಲೇಜಿನ ಬಳಿಯಿಂದ ಮಧುರೈಗೆ ಬಸ್ ಹೊರಡುತ್ತದೆ. ನಾನು ಮತ್ತೆ ಮೈಸೂರಿಗೆ ವಾಪಸ್ಸು ಬರುತ್ತೀನಾ? ಅಥವಾ ಮಧುರೈಯಿಂದಾನೇ ಭೂಗತವಾಗಬೇಕಾಗುತ್ತಾ?’ ಬ್ಯಾಸ್ಕೆಟ್ ಬಾಲ್ ಗ್ರೌಂಡಿನಲ್ಲಿ ಕುಳಿತು ಯೋಚಿಸುತ್ತಿದ್ದ ಲೋಕಿ. ‘ತಮಿಳುನಾಡಿನಲ್ಲಿ ನೀನೇನು ಮಾಡಬೇಕೆಂದು ಆರನೇ ತಾರೀಖು ತಿಳಿಸುತ್ತೀವಿ’ ಎಂದು ಆಟೋ ಚಾಲಕ ಹೇಳಿದ್ದ. ಆಗಲೇ ಘಂಟೆ ಆರಾಯಿತು. ಸಂಜೆ ಐದರಿಂದ ಲೋಕಿ ಗ್ರೌಂಡಿನಲ್ಲೇ ಕುಳಿತು ‘ಯಾರಾದರೂ ಬರಬಹುದು’ ಎಂದು ಕಾಯುತ್ತಿದ್ದ. ದಾರಿಹೋಕರೆಲ್ಲ ಭೂಗತ ಸಂಘಟನೆಯ ನಿಗೂಢ ಮನುಷ್ಯರಂತೆ ಗೋಚರಿಸಲಾರಂಭಿಸಿದರು. ಲೈಬ್ರರಿಯಿಂದ ಮನೆಯೆಡೆಗೆ ಹೋಗುತ್ತಿದ್ದ ಪೂರ್ಣಿಮಾ ಲೋಕಿಯನ್ನು ನೋಡಿ ಗ್ರೌಂಡಿನ ಕಡೆಗೆ ಬಂದಳು. ‘ನನಗೆ ತುಂಬಾ ಮುಖ್ಯ ಕೆಲಸಗಳಿದ್ದಾಗಲೇ ಬರುತ್ತಾಳಲ್ಲ ಇವಳು’ ಎಂದೆನಿಸಿತು ಲೋಕಿಗೆ.

“ಏನು ಲೋಕಿ ಒಬ್ಬನೇ ಕುಳಿತುಬಿಟ್ಟಿದ್ದೀಯಾ?”

“ಸುಮ್ನೆ ಹೀಗೆ ಕುಳಿತಿದ್ದೆ ಪೂರ್ಣಿಮಾ”

ಆತನ ದನಿಯಲ್ಲಿದ್ದ ಅಸಹನೆಯ ಗುರುತಾಗದೆ ಇರಲಿಲ್ಲ ಪೂರ್ಣಿಮಾಳಿಗೆ. ‘ಪೂರ್ಣಿ ಅಂತ ಕರೆಯುತ್ತಿದ್ದವನು ಇವತ್ತೇನು ಪೂರ್ಣಿಮಾ ಅಂತಿದ್ದಾನಲ್ಲ. ನಾನು ಬಂದಿದ್ದು ಬಹುಶಃ ಇವನಿಗೆ ಇಷ್ಟವಾಗಲಿಲ್ಲವೆನ್ನಿಸುತ್ತೆ. ಯಾಕೆ ಲೋಕಿ ದಿನೇ ದಿನೇ ನಿಗೂಢವಾಗ್ತಾ ಇದ್ದಾನೆ. ನಗರದಾಚೆಗಿರುವ ನನ್ನ ಗೆಳತಿಯರ ಮನೆಯ ಬಳಿಯೆಲ್ಲ ಒಬ್ಬೊಬ್ಬನೇ ಓಡಾಡುತ್ತಿರುತ್ತಾನಂತೆ. ಎಡಗೈಯಲ್ಲಿ ಒಂದು ಪುಸ್ತಕ, ಬಲಗೈಯಲ್ಲಿ ಹಾಳು ಸಿಗರೇಟು.... ಅವತ್ತು ಪೋಲೀಸ್ ಠಾಣೆಯಲ್ಲಿ ನಕ್ಸಲೀಯರ ಬಗೆಗಿನ ವರದಿಯನ್ನು ಅಷ್ಟೊಂದು ಆಸಕ್ತಿಯಿಂದ ಓದುತ್ತಿದ್ದ; ಈತನೇನಾದರೂ ನಕ್ಸಲರೊಂದಿಗೆ...... ಇರಲಾರದು, ಖಾಲಿ ಕುಳಿತ ಮನಸ್ಸಿಗೆ ಏನೇನೋ ಯೋಚನೆಗಳು’.
ಮುಂದುವರೆಯುವುದು...

No comments:

Post a Comment

Related Posts Plugin for WordPress, Blogger...