Feb 7, 2014

“ಬದಲಾಗದಿದ್ದಲ್ಲಿ ನಾವಿಂದು ಜಗವಾ ಬದಲಾಯಿಸುವೆವೆಂದು” !

Mohammad Irshad

“ಹೆಣ್ಣು ಮಕ್ಕಳು ಗಂಡು ಮಕ್ಕಳನ್ನು ನೋಡುವುದು ಗಂಡು ಮಕ್ಕಳು ಹೆಣ್ಣು ಮಕ್ಕಳನ್ನು ನೋಡುವುದು ಹರಾಮ್ . ಹೆಣ್ಣು 15 ತುಂಬಿದಾಗ ಆಕೆ ದೊಡ್ಡವಳಾಗುತ್ತಾಳೆ . ಆದ್ದರಿಂದ ನಾಟಕದಲ್ಲಿ ಭಾಗವಹಿಸುವುದು ಡಾನ್ಸ್ ಮಾಡುವುದು ಹರಾಮ್ . ಜಿಲ್ಲಾದ್ಯಂತ ಸ್ಕೂಲ್ ಡೇ ಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಇದು ಹರಾಮ್.
ನಮ್ಮ ಮದರಸಾದ ವಿದ್ಯಾರ್ಥಿಗಳನ್ನು ಸ್ಕೂಲ್ ಡೇ ಯಲ್ಲಿ ಡಾನ್ಸ್ ಮಾಡಬಾರದು ಎಂದು ಕಡ್ಡಾಯವಾಗಿ ಹೇಳಿದ್ದೇವೆ.ತಂದೆ ತಾಯಿಯಂದಿರು ಪ್ರೋತ್ಸಾಹ ಕೊಡಬಾರದು ಎಂದಿದ್ದೇವೆ. ಸಣ್ಣ ಮಕ್ಕಳೂ ಡಾನ್ಸ್ ಮಾಡಿದರೂ ದೊಡ್ಡ ಮಕ್ಕಳು ಡಾನ್ಸ್ ಮಾಡಿದ್ರೂ ಹರಾಮ್ ಹರಾಮೇ. ಸಣ್ಣದಲ್ಲೇ ಪ್ರೋತ್ಸಾಹ ಕೊಟ್ಟರೆ ಅವರು ದೊಡ್ಡರವಾದ ಮೇಲೂ ಅಂಥಹಾ ತಪ್ಪು ಮಾಡುತ್ತಾರೆ. ಇದು ಕಮಿಟಿಯ ತೀರ್ಮಾನ ಕೂಡಾ ಹೌದು” ಹೀಗೆ ಮಾಧ್ಯಮವೊಂದರ ಜೊತೆ ಅಧಿಕೃತವಾಗಿ ಮಾತನಾಡುವಾಗ ಕೊಡಿಪ್ಪಾಡಿ ಮದರಸಾದ ಸದರ್ ( ಧಾರ್ಮಿಕ ಶಿಕ್ಷಕರೊಬ್ಬರು ) ಹೇಳಿದ ಅಧಿಕೃತ ಮಾತು. ಜೊತೆಗೆ ನನ್ನ ಜೊತೆ ಮಾತನಾಡುತ್ತಾ ಇಸ್ಲಾಂ ಧರ್ಮದಲ್ಲಿ ಚೆಸ್ ಹೊರತು ಪಡಿಸಿ ಇತರ ಕ್ರೀಡೆಗಳಲ್ಲಿ ಕೂಡಾ ಭಾಗವಹಸುವ ಹಾಗಿಲ್ಲ ಎಂಬ ಮಾತನ್ನೂ ಹೇಳಿದ್ದಾರೆ . ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂಬ ಅಲಿಖಿತ ಫತ್ವಾ ( ಅಭಿಪ್ರಾಯ) ಕುರಿತು ಉಂಟಾಗುತ್ತಿರುವ ವಿವಾದದ ಸಂಧರ್ಬದಲ್ಲಿ ಅವರ ಅಧಿಕೃತ ಹೇಳಿಕೆಯನ್ನು ನೀವು ಗಮನಿಸಬೇಕು.
ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ತಮ್ಮ ಪ್ರತಿಭೆಗಳನ್ನು ಹೊರಹಾಕೋದಕ್ಕೆ ವೇದಿಕೆ ಸ್ಕೂಲ್ ಡೇ ಅಥವಾ ಪ್ರತಿಭಾ ಕಾರಂಜಿಯಂತಹಾ ಸ್ಪರ್ಧೆಗಳು. ಜಿಲ್ಲೆಯ ಸಾಕಷ್ಟು ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರು ವಿರೋಧಗಳ ನಡುವೆಯೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತಿದ್ದಾರೆ. ಆದರೆ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ಹರಾಮ್ ಅಥವಾ ಧರ್ಮ ವಿರೋಧಿ ಎಂದು ಫತ್ವಾ ಕೊಡುವುದು ಖಂಡನೀಯ. ಕೊಡಿಪ್ಪಾಡಿ ಶಾಲೆಯ ವಿದ್ಯಾರ್ಥಿನಿಯರಲ್ಲಿ ನಾವು ಮಾತನಾಡಿಸಿದಾಗ ತಮ್ಮ ಮನದ ಅಭಿಲಾಶೆಯಲನ್ನು ಅವರು ತೋಡಿಕೊಂಡರು. ಪಾಪ ಆ ಮಕ್ಕಳಿಗೆ ಇತರ ಸಹಪಾಠಿಗಳ ಜೊತೆಗೆ ವೇದಿಕೆಯಲ್ಲಿ ತಮ್ಮ ಟಾಲೆಂಟ್ ತೋರಿಸೋದಕ್ಕೆ ಆಸೆ ಇದೆ. ಆದರೆ ಧರ್ಮಗುರುವಿನ ನಿರ್ಬಂಧ ಈ ಮಕ್ಕಳ ಆಸೆಯನ್ನು ಚಿವುಟಿ ಹಾಕಿದೆ. ಇಂಥಹಾ ವರದಿಯನ್ನು ಮಾಡಿದ್ದೇ ತಪ್ಪು ಇದು ಇಸ್ಲಾಂ ಧರ್ಮ ವಿರೋಧಿ ನೀತಿ ಎಂಬುವಂತ್ತೆ ಅಥವಾ ಅಲ್ಲಿ ಅಂಥಹಾ ಪ್ರಕರಣ ನಡೆದೇ ಇಲ್ಲವೆಂಬುವಂತ್ತೆ ಕೆಲವರು ಬಿಂಬಿಸ ಹೊರಟಿರುವುದು ಶೋಚನೀಯ. ಅದೆಷ್ಟೋ ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇಂದು ಮುಸ್ಲಿಂ ಸಮುದಾಯದ ಯುವಕರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ಈ ನಿರ್ಭಂಧ ಅನ್ವಯವಾಗೋದಿಲ್ವಾ? ಇತರ ಸಮುದಾಯದ ಹೆಣ್ಣು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವಾಗ ವೀಕ್ಷಕರಾಗಿ ಮುಸ್ಲಿಂ ಸಮುದಾಯದ ಮಹಿಳೆಯರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಹಾಗಾದ್ರೆ ಧರ್ಮದ ನಿರ್ಭಂಧಗಳು ಇಲ್ಲಿ ಜಾರಿಯಾಗೋದಿಲ್ವಾ ? ತಮ್ಮ ಹೆಣ್ಣುಮಕ್ಕಳು ಮಾತ್ರ ಡಾನ್ಸ್ ಮಾಡಬಾರದು ಇತರ ಹೆಣ್ಣುಮಕ್ಕಳು ಡಾನ್ಸ್ ಮಾಡುವಾಗ ನೋಡಬಹುದು ಇದೆಂಥಾ ನೀತಿ ಸ್ವಾಮಿ. ಮುಸ್ಲಿಂ ಸಮುದಾಯ ಈನಿಟ್ಟಿನಲ್ಲಿ ವಿಶಾಲವಾಗಿ ಚಿಂತನೆ ನಡೆಸಬೇಕಾಗಿದೆ. ಹೆಣ್ಣು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸೋದರಲ್ಲಿ ಅಶ್ಲೀಲತೆಯನ್ನು ಹುಡುಕುವ ಪ್ರಯತ್ನ ನಿಜಕ್ಕೂ ಅಶ್ಲೀಲತೆಯಿಂದ ಕೂಡಿದೆ. ಶಾಲೆಗಳಲ್ಲಿ ಎಲ್ಲಾ ಧರ್ಮೀಯ ವಿದ್ಯಾರ್ಥಿಗಳೂ ವಿಧ್ಯಾರ್ಜನೆ ಮಾಡುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಆಟೋಟ ಸ್ಪರ್ಧೆಗಳು ಮಕ್ಕಳ ಭೌಧಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಪೂರಕವಾದ ಅಂಶಗಳು. ಹೆಣ್ಣು ಮಕ್ಕಳು ಶಾಲೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಯಾವುದೇ ರೀತಿಯಲ್ಲಿ ಧರ್ಮಕ್ಕೆ ಚ್ಯುತಿ ಆಗೋದಿಲ್ಲ. ಅಥವಾ ಆ ಹೆಣ್ಣು ಮಕ್ಕಳು ಕೆಟ್ಟು ಹೋಗೋದಿಲ್ಲ .ಧರ್ಮ ಪ್ರತಿಯೊಬ್ಬರ ಖಾಸಗಿ ಹಕ್ಕು , ಇಸ್ಲಾಂ ಧರ್ಮ ಇಂಥಹಾ ಯಾವುದೇ ಸಂಕುಚಿತ ಮನೋಭಾವಕ್ಕೆ ಆಸ್ಪದ ನೀಡುವುದಿಲ್ಲ. ವಿಶಾಲತೆಯ ಚಿಂತನೆಗೆ ಇಸ್ಲಾಂ ಯಾವತ್ತಿಗೂ ಅವಕಾಶ ನೀಡುತ್ತದೆ ಎಂದು ತಾನು ತಿಳಿದುಕೊಂಡಿದ್ದೇನೆ.ಆದರೆ ಧರ್ಮದ ಹೆಸರಲ್ಲಿ ಕೆಲ ಅಜ್ಞಾನಿಗಳು ಈ ರೀತಿಯ ಗೊಂದಲವನ್ನು ಹುಟ್ಟಿಸಿ ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳುವುದು ತಪ್ಪು. ಈ ಕುರಿತು ವರದಿ ಮಾಡುವುದನ್ನು ಇಸ್ಲಾಂ ವಿರೋಧಿ ಎಂದು ಬಣ್ಣಿಸುವುದು ಹಾಸ್ವಾಸ್ಪದ. ಈ ವಿಚಾರದ ಕುರಿತು ಮಾದ್ಯಮಗಳಿಗೆ ಹೇಳಿಕೆ ನೀಡಿದಕ್ಕಾಗಿ ಬೆದರಿಕೆಗಳನ್ನು ಹಾಕುವುದು ಖಂಡನೀಯ. ಹಿಂದೂ ಧರ್ಮದಲ್ಲಿರುವ ಕೆಲ ಮೌಢ್ಯತೆಯ ಕುರಿತಾಗಿ ಸಾಕಷ್ಟು ವರದಿಗಳು ವಿಮರ್ಶೆಗಳು ನಡೆಯುತ್ತನೇ ಇದೆ. ಇವುಗಳ ಕುರಿತಾಗಿ ನಾನೂ ಸಾಕಷ್ಟು ವರದಿಗಳನ್ನು ಮಾಡಿದ್ದೇನೆ. ಮಂಗಳೂರಿನ ಮುನೀರ್ ಕಾಟಿಪಳ್ಳರಂಹತಾ ಎಡಪಂಥೀಯ ಹೋರಾಟಗಾರರೂ ಧ್ವನಿ ಎತ್ತಿದ್ದಾರೆ.ಆ ಸಂಧರ್ಭದಲ್ಲಿ ನೀನೊಬ್ಬ ಮುಸ್ಲಿಂಮನಾಗಿ ಹಿಂದೂ ಧರ್ಮದ ಕುರಿತಾಗಿ ಹೇಗೆ ಮಾತನಾಡಿದೆ ನನ್ನನ್ನು ಯಾರೂ ಕೇಳಲಿಲ್ಲ. ಯಾಕೆಂದರೆ ಅದು ಒಬ್ಬ ಪ್ರತ್ರಕರ್ತನ ಕರ್ತವ್ಯ. ಅದನ್ನೇ ನಾನು ಮಾಡಿದ್ದೇನೆ. ಅದನ್ನು ತಪ್ಪೆಂದು ಹೇಳ ಹೊರಟಿರುವವರಿಗೆ ಈ ಮಾತು ಸೂಕ್ತ ಅನ್ನಿಸುತ್ತೆ “ ತಪ್ಪೆಂದಾದರೆ ಆಗಲಿ ತಪ್ಪಾ ಮಾಡೋಣ ಬಾ ಓ ನನ್ನ ಸಂಗಾತಿಯೇ” ಈ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದ ಚಿಂತಕರು ಪ್ರಮುಖ ಪಾತ್ರ ವಹಿಸಬೇಕಾದ ಅಗತ್ಯತೆ ಇದೆ.

No comments:

Post a Comment