Dec 31, 2013

ಪುಟ ತಿರುವುವ ಮುನ್ನ



ಡಾ ಅಶೋಕ್ ಕೆ ಆರ್
ಮಾಧ್ಯಮ ಮತ್ತು ‘ಭವಿಷ್ಯಕರ್ತರು’ ಸೃಷ್ಟಿಸಿದ ಪ್ರಳಯದ ‘ಭೀತಿ’ ಅಸ್ತಂಗತವಾಗಿ ಒಂದು ವರುಷ ಕಳೆದು ಹೋಗಿ ಶತಮಾನಗಳಿಂದ ಸಹಜವೆಂಬಂತೆ ಒಪ್ಪಿಕೊಂಡಿದ್ದ ಗುಲಾಮತ್ವದ ಮನಃಸ್ಥಿತಿಯ ಸಮಾಜವನ್ನು  ಪ್ರಳಯರೂಪದಲ್ಲಿ ಬಂದು ಶುದ್ಧೀಕರಿಸಿದ ನೆಲ್ಸನ್ ಮಂಡೇಲಾರ ಸಾವಿನೊಂದಿಗೆ ಮತ್ತೊಂದು ವರುಷ ಉರುಳಿ ಹೋಗಿದೆ. ಹಿಂದಿನ ವರುಷಗಳಿಗೂ ಹೊಸ ವರುಷದ ಬರುವಿಕೆಗಾಗಿ ಕಾಯ್ದಿರುವ 2013ಕ್ಕೂ ಹೆಚ್ಚಿನ ವ್ಯತ್ಯಾಸಗಳಿವೆಯೇ?
ಭಾರತ ಪಾಕ್ ಚೀನಾ ಗಡಿಗಳ ನಡುವೆ ಮುಂದುವರೆಯುತ್ತಲೇ ಸಾಗುತ್ತಿರುವ ಉದ್ವಿಗ್ನ ಪರಿಸ್ಥಿತಿ, ಸಿರಿಯಾ ಈಜಿಪ್ಟ್ ಗಳಲ್ಲಿ ನಿಲ್ಲದ ಹಿಂಸಾಚಾರ, ಮತ್ತಷ್ಟು ಹೊಸ ದೇಶಗಳಲ್ಲಿ ಹಿಂಸಾಚಾರದ ಪ್ರಾರಂಭ, ಈ ವರುಷವೂ ಸಂಪೂರ್ಣ ಪರಿಹಾರ ಕಾಣದ ತೆಲಂಗಾಣ, ಹೋದ ಡಿಸೆಂಬರಿನಲ್ಲಿ ನಡೆದ ದೆಹಲಿ ಅತ್ಯಾಚಾರ ಪ್ರಕರಣ ಮೂಡಿಸಿದ ಅನೇಕ ಪ್ರತಿಭಟನೆ ಚರ್ಚೆ ಶಿಕ್ಷೆಗಳ ನಂತರವೂ ದಿನಂಪ್ರತಿ ನಡೆಯುತ್ತಿರುವ ಬರ್ಬರ ಅತ್ಯಾಚಾರ...... ಮತ್ತದೇ ಹಳೆಯ ಘಟನೆಗಳ ಪುನರಾವರ್ತನೆಯೇ ಆಗುತ್ತದೆಯೇ ವರ್ಷಂಪ್ರತಿ? ಮುಖಗಳ ದೇಶಗಳ ಬದಲಾವಣೆಯೊಂದಿಗೆ? ಹಣದುಬ್ಬರ, ಹಗರಣಗಳ ಮೇಲೆ ಹಗರಣಗಳು, ಕೋಮುವಾದದ ಹೆಚ್ಚಳವೆಲ್ಲವೂ ನಿರಾಶಾದಾಯಕ ಮನಸ್ಥಿತಿಯತ್ತ ನಮ್ಮನ್ನು ದೂಡುತ್ತವಾದರೂ ಆಶಾದಾಯಕವಾಗುಳಿಯುವುದಕ್ಕೂ ಅನೇಕಾನೇಕ ಸಂಗತಿಗಳು ನಮ್ಮನ್ನು ಪ್ರೇರೇಪಿಸುತ್ತವೆ. ಈ ಪ್ರೇರೇಪಣೆಯೇ ನಮ್ಮನ್ನು ಮತ್ತಷ್ಟು ಸಮಾಜಮುಖಿ ಕೆಲಸಗಳಿಗೆ, ಚಳುವಳಿಗಳಿಗೆ, ಓದಿಗೆ, ಬರವಣಿಗೆಗೆ ಹಚ್ಚುತ್ತವೆ ಎಂದರೆ ತಪ್ಪಾಗಲಾರದು.

ಐದೂವರೆ ವರುಷದ ಮೊದಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಾಡಿದ ವಚನಭೃಷ್ಟತೆಯಿಂದ ಸೃಷ್ಟಿಯಾದ ಅನುಕಂಪದ ಅಲೆ, ಯಡಿಯೂರಪ್ಪನವರು ಅಧಿಕಾರ ಹಿಡಿಯುವುದಕ್ಕೂ ನಡೆಸಿದ ಹೋರಾಟದ ರಾಜಕೀಯ, ಇಷ್ಟು ವರುಷ ಕಾಂಗ್ರೆಸ್, ಜನತಾ ಪಕ್ಷದ ಆಡಳಿತವನ್ನು ನೋಡಿ ಸಾಕಾಗಿದ್ದೇವೆ, ಈ ಬಿಜೆಪಿಯವರು ಏನು ಮಾಡುತ್ತಾರೋ ನೋಡೋಣ ಎಂಬ ಜನರ ನಿರೀಕ್ಷೆ ಬಿಜೆಪಿಗೆ ಆಡಳಿತ ನೀಡಿತು. ಪೂರ್ಣ ಬಹುಮತ ದೊರಕದಿದ್ದರೂ ಪಕ್ಷೇತರರ ನೆರವಿನಿಂದ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಸ್ವತಃ ಬಿಜೆಪಿಯ ಕಾರ್ಯಕರ್ತರೇ ಅಚ್ಚರಿಯ ಆಘಾತಕ್ಕೊಳಗಾಗುವಂತಹ ಆಡಳಿತ ನೀಡಿದರು! ಹಗರಣಗಳ ಮೇಲೆ ಹಗರಣ, ಐದು ವರುಷಕ್ಕೆ ಮೂರು ಮುಖ್ಯಮಂತ್ರಿಗಳು, ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ತಮ್ಮ ಮಂತ್ರಿಗಳ ಸಮೇತ ಜೈಲು ಸೇರಿದ್ದನ್ನು ನೋಡುವ ಸೌಭಾಗ್ಯವೂ ಕನ್ನಡಿಗರಿಗೆ ದೊರೆಯಿತು. ವೈಯಕ್ತಿಕ ಬದುಕಿನಲ್ಲೂ ಲಂಪಟರಾಗಿ ಆ ಲಂಪಟತನ ಜಗಜ್ಜಾಹೀರಾದ ಈ ದುರ್ಸಮಯದಲ್ಲೇ ಕರ್ನಾಟಕದಲ್ಲಿ ಒಂದರ ಹಿಂದೊಂದರಂತೆ ಸುದ್ದಿವಾಹಿನಿಗಳು ಜನ್ಮತಳೆದಿದ್ದು ಕೇವಲ ಕಾಕತಾಳೀಯವಿರಲಾರದು. ಬಿಜೆಪಿಯ ಆಡಳಿತಾವಧಿಯಲ್ಲಿ ರಾಜಕಾರಣವೆಂಬುದು ಜನರಿಗೆ ಮನರಂಜನೆಯ ವಸ್ತುವಾಗಿಬಿಟ್ಟಿತ್ತು. ಧಾರವಾಹಿಗಳು ಬೇಸರ ಮೂಡಿಸಿದಾಗ ಯಾವ ಉತ್ತಮ ಚಲನಚಿತ್ರವೂ ಇಲ್ಲದಾಗ ಸುದ್ದಿ ವಾಹಿನಿಗಳನ್ನು ನೋಡುವಂತಹ ಮನೋಭಾವ ಬೆಳೆದುಬಿಟ್ಟಿತ್ತು! ಈ ಹಗರಣಗಳು ಸಾಲದೆಂಬಂತೆ ಆಪರೇಷನ್ ಕಮಲದ ಹೆಸರಿನಲ್ಲಿ ಮತ್ತಷ್ಟು ಅಪಸವ್ಯ ನಡೆದು, ನಾನೇನು ಕಮ್ಮಿ ಎನ್ನುವಂತೆ ಕುಮಾರಸ್ವಾಮಿ ಮತ್ತವರ ಪಕ್ಷ ರೆಸಾರ್ಟ್ ರಾಜಕೀಯ ನಡೆಸಿ ಸರಕಾರವನ್ನು ಬೀಳಿಸುವ ಪ್ರಯತ್ನವನ್ನು ನಿರಂತರವಾಗಿ ಜಾರಿಯಲ್ಲಿಟ್ಟಿದ್ದರು. ಅಧಿಕೃತ ವಿರೋಧ ಪಕ್ಷವಾದ ಕಾಂಗ್ರೆಸ್ ಒಮ್ಮೆ ಬಳ್ಳಾರಿಗೆ ಪಾದಯಾತ್ರೆ ನಡೆಸಿದ್ದು ಬಿಟ್ಟರೆ ಮೌನದಿಂದಿತ್ತು. ಜೆಡಿಎಸ್ ಅಧಿಕೃತ ವಿರೋಧ ಪಕ್ಷಕ್ಕಿಂತಲೂ ಉತ್ಸಾಹದಿಂದ ಸರಕಾರದ ಹಗರಣಗಳನ್ನು ಹೊರಗೆಳೆಯುವುದರಲ್ಲಿ ಆಸಕ್ತಿ ತೋರಿತು, ಒಮ್ಮೆ ಯಡಿಯೂರಪ್ಪನವರು ಮುಖ್ಯಮಂತ್ರಿ ಖುರ್ಚಿಯನ್ನು ಬಿಟ್ಟ ಮೇಲೆ ನಿರುತ್ಸಾಹಗೊಂಡ ಜೆಡಿಎಸ್ ನ ಉದ್ದಿಶ್ಯಗಳೂ ಪ್ರಾಮಾಣಿಕವಾಗಿರಲಿಲ್ಲ. ಐದು ವರುಷಗಳಿಂದ ಯಾವೊಂದು ಪ್ರಮುಖ ಅಭಿವೃದ್ಧಿಯೂ ಕಾಣದೆ ದೇಶದ್ಯಾಂತ ರಾಜಕೀಯವಾಗಿ ಅಪಹಾಸ್ಯಕ್ಕೊಳಗಾದ ಕರ್ನಾಟಕ 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಯಡಿಯೂರಪ್ಪನವರ ಕೆಜೆಪಿ, ಶ್ರೀರಾಮುಲುವಿನ ಬಿಎಸ್ ಆರ್, ಜೆಡಿಎಸ್ ಪಕ್ಷಗಳೆಲ್ಲವನ್ನೂ ತಿರಸ್ಕರಿಸಿ ಕಾಂಗ್ರೆಸ್ಸಿಗೆ ಪೂರ್ಣ ಬಹುಮತ ನೀಡಿದರು. ಬಿಜೆಪಿಯ ಆಂತರಿಕ ಕಲಹ ಅವರ ಕೆಟ್ಟ ಆಡಳಿತ ಕಾಂಗ್ರೆಸ್ಸನ್ನು ಗೆಲ್ಲಿಸಿತೇ ಹೊರತು ಈ ಗೆಲುವಿನಲ್ಲಿ ಕಾಂಗ್ರೆಸ್ಸಿಗರ ಪಾತ್ರ ಕಡಿಮೆಯೇ. ಸರಕಾರವೆಂಬುದು ದೂರದೃಷ್ಟಿ ಯೋಜನೆಗಳನ್ನು ರೂಪಿಸಬೇಕೆ ಹೊರತು ದಾನದ ರೂಪದಲ್ಲಿ ತನ್ನಲ್ಲಿರುವ ಜನರ ಹಣವನ್ನು ಹಂಚುವ ಸಂಸ್ಥೆಯಾಗಬಾರದು. ಬಿಜೆಪಿಯ ಆಡಳಿತಾವಧಿಯಲ್ಲಿ ನಡೆದ ಹಣ ಹಂಚಿಕೆ ಕಾಂಗ್ರೆಸ್ಸಿನ ಸರಕಾರದಿಂದಲೂ ಮುಂದುವರಿಕೆಯಾಗಿರುವುದು ತುರ್ತು ಓಟಿನ ಆಸೆಗೆ ಬಿದ್ದ ಪರಿಣಾಮವಷ್ಟೇ. ಅಪೌಷ್ಟಿಕತೆ ಹೆಚ್ಚಿರುವ ಕಾರಣದಿಂದ ಒಂದು ರುಪಾಯಿಯ ಅಕ್ಕಿ, ಶಾಲಾ ಮಕ್ಕಳಿಗೆ ಹಾಲು ನೀಡುವುದನ್ನು ಸಮರ್ಥಿಸಿಕೊಳ್ಳಬಹುದಾದರೂ ಬಿದಾಯಿ ಯೋಜನೆ, ಮಠ ಮಾನ್ಯಗಳಿಗೆ ನೀಡುವ ‘ದಾನವನ್ನು’ ಸಮರ್ಥಿಸಿಕೊಳ್ಳುವುದು ಕಷ್ಟ. ಸಮಾಜವಾದಿ ಹಿನ್ನೆಲೆಯಿಂದ ಬಂದ ಸಿದ್ಧರಾಮಯ್ಯನವರ ಆಡಳಿತದ ಮೇಲೆ ನಿರೀಕ್ಷೆಯೂ ಹೆಚ್ಚಿದೆ. ಒಂದಷ್ಟು ಯಡವಟ್ಟುಗಳು, ಅತ್ಯಾತುರದ ಅನವಶ್ಯಕ ನಿರ್ಧಾರಗಳು, ದುರುದ್ದೇಶಪೂರಿತ ನಿಧಾನಗತಿ ಈಗಿನ ಸರಕಾರದ ವರ್ಚಸ್ಸನ್ನು ಕಡಿಮೆಗೊಳಿಸುತ್ತಿದೆಯಾದರೂ ಹಿಂದಿನ ಸರಕಾರದ ಆಡಳಿತಾವಧಿಗೂ ಈಗಿನ ಸರಕಾರದ ಆಡಳಿತಾವಧಿಗೂ ಇರುವ ಬಹುದೊಡ್ಡ ವ್ಯತ್ಯಾಸ ಜನರ ಮನದಿಂದ ರಾಜಕಾರಣವೆಂಬುದು ಮನರಂಜನೆಯ ಭಾಗ ಎಂಬ ಭಾವ ದೂರಾಗುತ್ತಿರುವುದು. ಕೆಲಮಟ್ಟಿಗಾದರೂ ಸುದ್ದಿವಾಹಿನಿಗಳನ್ನು ವೀಕ್ಷಿಸಬಹುದೀಗ!

ಇನ್ನು ದೇಶದ ರಾಜಕೀಯ ಮುಂದಿನ ವರುಷದ ಲೋಕಸಭಾ ಚುನಾವಣೆಯ ನಿರೀಕ್ಷೆಯಲ್ಲಿದೆ. ಹತ್ತು ವರುಷಗಳ ಹಿಂದೆ ‘ಇಂಡಿಯಾ ಶೈನಿಂಗ್’ ಎಂದಬ್ಬರಿಸುತ್ತ ಚುನಾವಣಾ ಪ್ರಚಾರ ಕೈಗೊಂಡ ಬಿಜೆಪಿ ನೇತೃತ್ವದ ಎನ್ ಡಿ ಎ ಮಾಧ್ಯಮಗಳ ಬೆಂಬಲವಿದ್ದಾಗ್ಯೂ ಗೆಲುವು ಸಾಧಿಸಲಿಲ್ಲ. ಗೆಲುವು ಸಾಧಿಸಿದ ಯು.ಪಿ.ಎ ತನ್ನ ಮೊದಲ ಐದು ವರುಷಗಳಲ್ಲಿ ತಣ್ಣಗೆ ಕಾರ್ಯನಿರ್ವಹಿಸಿ ಹೆಚ್ಚು ಖ್ಯಾತಿಯನ್ನೂ ಪಡೆಯದೇ ಕುಖ್ಯಾತಿಯನ್ನೂ ಪಡೆಯದೆ ಎರಡನೇ ಬಾರಿಗೂ ಆಡಳಿತ ನಡೆಸುವ ಅನುಮತಿ ಪಡೆಯಿತು. ನಂತರದಲ್ಲಿ ನಡೆದದ್ದೂ ಒಂದರ್ಥದಲ್ಲಿ ದರೋಡೆಯೇ. ಒಂದಾದನಂತರ ಮತ್ತೊಂದು ಸಾವಿರಾರು ಕೋಟ್ಯಾಂತರ ರುಪಾಯಿಯ ಹಗರಣಗಳು ನಡೆದು ಯು.ಪಿ.ಎ ವರ್ಚಸ್ಸನ್ನು ಪಾತಾಳಕ್ಕಿಳಿಸಿದವು. ಯಾವೊಂದು ವಿಷಯಕ್ಕೂ ಅತಿ ಭಾವುಕತೆಗೆ ಒಳಗಾಗದೆ ಮಾತನಾಡುತ್ತಿದ್ದ ಮನಮೋಹನ್ ಸಿಂಗ್ ತಮ್ಮ ಮೌನದಿಂದಲೇ ಮೊದಲ ಐದು ವರುಷಗಳ ಕಾಲ ‘ಪರವಾಗಿಲ್ಲ ಈ ಯಪ್ಪ’ ಎಂಬ ಭಾವ ಮೂಡಿಸಿದ್ದರು; ನಂತರದ ಐದು ವರುಷದಲ್ಲಿ ಅವರ ಅದೇ ಮೌನವೇ ಅವರ ದೌರ್ಬಲ್ಯವಾಗಿ ಟೀಕೆಗೊಳಪಡುತ್ತಿದೆ. ನರಸಿಂಹರಾವರ ಕಾಲದಲ್ಲಿ ಭಾರತ ದೇಶವನ್ನು ವಿದೇಶಿ ಮಾರುಕಟ್ಟೆಗೆ ತೆರೆಯುವಂತೆ ಮಾಡಿ ಜಾಗತೀಕರಣದ ಪ್ರವಾಹಕ್ಕೆ ಒಡ್ಡಿ ನವಮಧ್ಯಮ ವರ್ಗದ ಸೃಷ್ಟಿಗೆ ಕಾರಣಕರ್ತರಾಗಿ ಅವರಿಂದ ಅಪಾರ ಪ್ರಮಾಣದ ಹೊಗಳಿಕೆ ಗಿಟ್ಟಿಸಿಕೊಂಡ ಮನಮೋಹನ್ ಸಿಂಗ್ ಇವತ್ತು ಅದೇ ಜಾಗತೀಕರಣದ ದುಷ್ಪರಿಣಾಮಗಳನ್ನು, ಹಣದುಬ್ಬರವನ್ನು ನಿಯಂತ್ರಿಸಲಾಗದೆ ಜನರ ವಿರೋಧ ಕಟ್ಟಿಕೊಂಡಿದ್ದಾರೆ. ಮಾಡಿಕೊಂಡ ಹಗರಣಗಳು, ದೇಶ ಮುನ್ನಡೆಸುವಲ್ಲಿ, ಹಣದುಬ್ಬರ ನಿಯಂತ್ರಿಸುವಲ್ಲಿ ತೋರಿದ ನಿರ್ಲಕ್ಷ್ಯಗಳೆಲ್ಲವೂ ಯು.ಪಿ.ಎ ಸರಕಾರವನ್ನು 2014ರ ಚುನಾವಣೆಯಲ್ಲಿ ಸೋಲಿಸಲೇಬೇಕು. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರಕಾರವೇನಾದರೂ ಮತ್ತೆ ಅಧಿಕಾರವಿಡಿದುಬಿಡುವ ಚಮತ್ಕಾರ ನಡೆದುಬಿಟ್ಟರೆ ಅದು ಬಿಜೆಪಿಯ ಮುಂದಿನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯಿಂದಲೇ ನಡೆಯಬೇಕು! ಹತ್ತು ವರುಷಗಳ ಹಿಂದೆ ನಡೆದ ಗುಜರಾತಿನ ಗೋದ್ರಾ ದುರಂತ ಮತ್ತು ಗೋದ್ರೋತ್ತರ ಹಿಂಸಾಚಾರ ನಡೆದ ಅವಧಿಯಲ್ಲಿ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಗೋದ್ರೋತ್ತರ ಹಿಂಸಾಚಾರ ತಡೆಯುವಲ್ಲಿ ವಿಫಲರಾಗಿದ್ದಷ್ಟೇ ಅಲ್ಲದೆ ಹಿಂಸಾಚಾರ ನಡೆಸಿದ ಜನರಿಗೆ ಅವರ ನೇತೃತ್ವದ ಸರಕಾರ ಬೆಂಬಲವನ್ನೂ ನೀಡಿತೆಂಬ ಆರೋಪ ಹೊತ್ತಿದ್ದರು. ಒಂದು ಧರ್ಮದ ಜನರನ್ನು ಉಳಿದ ಧರ್ಮದವರ ಮೇಲೆ ಎತ್ತಿಕಟ್ಟಿಯೇ ಬೆಳೆದ ಪಕ್ಷದವರಿಂದ ಈ ರೀತಿಯ ಹಿಂಸಾಚಾರ ಜರುಗುವುದು ಅಸಹಜವೇನಲ್ಲ. ತನಿಖಾ ಆಯೋಗಗಳ ಒಂದಷ್ಟು ತೀರ್ಪುಗಳು ಮೋದಿ ಪರವಾಗಿ ಒಂದಷ್ಟು ಮೋದಿಗೆ ವಿರುದ್ಧವಾಗಿ ಬಂದಿವೆ. ಹತ್ತೇ ವರುಷಗಳಲ್ಲಿ ಕೋಮುವಾದಿಯಾಗಿದ್ದ ವ್ಯಕ್ತಿ ಕೋಮುವಾದದ ಮೇಲೆ ಅಭಿವೃದ್ಧಿಯ ಮುಖವಾಡ ಧರಿಸಿ ಭಾರತ ಗೆಲ್ಲಿಸಿ ಎಂದು ಅಬ್ಬರಿಸುತ್ತಿದ್ದಾರೆ! ಇವರ ಅಭಿವೃದ್ಧಿಯ ಮಾಪಕಗಳನ್ನು ನಿರ್ಧರಿಸುತ್ತಿರುವುದು ಕಾರ್ಪೋರೇಟ್ ಬೆಂಬಲಿತ ಮಾಧ್ಯಮ. ಮತ್ತಿವರ ‘ಅಭಿವೃದ್ಧಿ’ಯ ಮಾದರಿಗೆ ಮನಸೋತಿರುವವರೂ ಅನೇಕರಿದ್ದಾರೆ, ಅದು ನಿಜವಾಗಿಯೂ ಅಭಿವೃದ್ಧಿಗೆ ಬೆಂಬಲವಾಗಿಯೋ ಅಥವಾ ಕೋಮುವಾದಕ್ಕೆ ಬೆಂಬಲವಾಗಿಯೋ ಕಾದು ನೋಡಬೇಕು. ಎಮರ್ಜೆನ್ಸಿ ವಿಧಿಸಿದ ಇಂದಿರಾ ಗಾಂಧಿ, ಇಂದಿರಾ ಗಾಂಧಿಯ ಹತ್ಯೆಯ ತರುವಾಯ ನಡೆದ ಅಮಾಯಕ ಸಿಖ್ ನರಮೇಧ ನಡೆಸಿದವರನ್ನೂ ಗೆಲ್ಲಿಸಿದ, ನಕ್ಸಲರ ಹೆಸರಿನಲ್ಲಿ ಅನೇಕ ಆದಿವಾಸಿಗಳನ್ನು ನಿರ್ಗತಿಕರಾಗಿಸಿದವರನ್ನು ಗೆಲ್ಲಿಸುತ್ತಲೇ ಬಂದಿರುವ ನಮ್ಮ ಜನತೆ ನರೇಂದ್ರ ಮೋದಿಯನ್ನು ಗೆಲ್ಲಿಸಿದರೆ ಅಚ್ಚರಿಯೇನಿಲ್ಲ. ಈ ಬಾರಿ ಅದಕ್ಕೆ ಅಭಿವೃದ್ಧಿಯ ಮುಖವಾಡವಿರುತ್ತದೆಯಷ್ಟೇ. ಮೋದಿಗೆ ಅಷ್ಟು ಸುಲಭ ಗೆಲುವು ದಕ್ಕಲು ಷಡ್ಯಂತ್ರಗಳಲ್ಲಿ ಪರಿಣಿತರಾಗಿರುವ ಕಾಂಗ್ರೆಸ್ಸಿಗರು ಬಿಡುತ್ತಾರಾ? 2014ರ ಆರಂಭದ ದಿನಗಳು ರಾಜಕೀಯ ಚದುರಂಗದಾಟದ ಬಹುದೊಡ್ಡ ನಡೆಗಳನ್ನು ಕಾಣಲಿದೆ.

‘ಥೂ! ಏನ್ ಜನಾರೀ ನಮ್ಮೋರು. ಬರೀ ಹಣ, ಜಾತಿ, ಧರ್ಮ ನೋಡ್ಕೊಂಡು ವೋಟ್ ಮಾಡ್ತಾರೆ’ ಎಂಬ ಎಂದಿನ ಪ್ರಜಾಪ್ರಭುತ್ವದೆಡೆಗಿನ ಸಿನಿಕತವನ್ನು ನಿವಾಳಿಸುವಂತೆ ಗೆದ್ದು ಬಂದಿದ್ದು ಅರವಿಂದ್ ಕೇಜ್ರಿವಾಲ್ ನೇತೃತ್ವದ ‘ಆಮ್ ಆದ್ಮಿ’ ಪಕ್ಷ. ವಿದ್ಯಾರ್ಥಿ ಜೀವನದಲ್ಲಿದ್ದಾಗ ಅರವಿಂದ್ ಕೇಜ್ರಿವಾಲರ ಬಗ್ಗೆ ಮೊದಲು ಕೇಳಿದ್ದು. ಆಗವರಿಗೆ ಪ್ರತಿಷ್ಟಿತ ಮ್ಯಾಗ್ಸೆಸ್ಸೆ ಪ್ರಶಸ್ತಿ ಬಂದಿತ್ತು. ಅರವಿಂದ್ ಕೇಜ್ರಿವಾಲರ ಬಗ್ಗೆ ಮತ್ತಷ್ಟು ಹುಡುಕಿದಾಗ ಅವರ ‘ಪರಿವರ್ತನ್’ ಸಂಸ್ಥೆಯ ಬಗ್ಗೆ ಮಾಹಿತಿ ಸಿಕ್ಕಿತ್ತು. ‘ಪರಿವರ್ತನ್’ ಸಂಸ್ಥೆಯ ಅಂತರ್ಜಾಲ ಪುಟ ತಡಕಾಡಿದಾಗ ಮೊಟ್ಟ ಮೊದಲ ಬಾರಿಗೆ ಮಾಹಿತಿ ಹಕ್ಕುವಿನ ಬಗ್ಗೆ ತಿಳಿದುಕೊಂಡಿದ್ದೆ. ಅರವಿಂದ್ ಕೇಜ್ರಿವಾಲರ ಸದ್ಯದ ರಾಜಕೀಯ ಧೋರಣೆಗಳು ಮತ್ತವರ ಪಕ್ಷದವರು ಕೆಲವೊಮ್ಮೆ ತೋರುವ ‘ನಾವಷ್ಟೇ ಪರಿಶುದ್ಧರು’ ಎಂಬ ಸರ್ವಾಧಿಕಾರಿ ಮನಸ್ಸಿನ ದುರಹಂಕಾರದ ವರ್ತನೆಯನ್ನು ಒಪ್ಪುವುದು ಕಷ್ಟಸಾಧ್ಯವಾದರೂ ಕೇವಲ ಒಂದು ವರುಷದಲ್ಲಿ ಪಕ್ಷವನ್ನು ಕಟ್ಟಿ ರಾಜಧಾನಿಯ ಜನರ ಬಳಿಗೆ ಕೊಂಡೊಯ್ದು ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಕಡಿಮೆ ಸಾಧನೇಯೇನಲ್ಲ. ಹಣ, ಜಾತಿ, ಧರ್ಮದ ಬೆಂಬಲವಿಲ್ಲದೆ ಗೆಲ್ಲುವ ಅಭ್ಯರ್ಥಿಗಳನ್ನು ಅಲ್ಲಲ್ಲಿ ಉದಾಹರಣೆಯ ರೀತಿ ಕಾಣುತ್ತಿದ್ದೇವಾದರೂ ಇಷ್ಟು ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದ್ದು ಅಪರೂಪ. ಕಾಂಗ್ರೆಸ್ಸಿನ ಶರತ್ತು ರಹಿತ ಬಾಹ್ಯ ಬೆಂಬಲದಿಂದ ಸರಕಾರ ರಚಿಸುತ್ತಿರುವ ಆಮ್ ಆದ್ಮಿ ಪಕ್ಷದ ಮುಂದಿನ ಆಡಳಿತದ ರೀತಿ ದೇಶದ ಚುನಾವಣಾ ದೃಷ್ಟಿಯನ್ನೇ ಬದಲಿಸಬಲ್ಲದು. 2014, ಆಮ್ ಆದ್ಮಿಯ ಆಡಳಿತದ ದೃಷ್ಟಿಯಿಂದಲೂ ಮಹತ್ತರವಾದುದು.

ಪುಟಿದೆದ್ದ ಕನ್ನಡ ಚಿತ್ರರಂಗ

ಮುಂಗಾರು ಮಳೆ, ದುನಿಯಾ ಚಿತ್ರಗಳು ಕನ್ನಡದಲ್ಲಿ ಮೂಡಿಸಿದ ಹೊಸ ಗಾಳಿಗೆ ಚುಂಗಿನ ವಾಸನೆ ಹತ್ತಿ ಹೊಸತನವಿಲ್ಲದ ಸ್ವಮೇಕ್ ಚಿತ್ರಗಳು ಮತ್ತು ಪುನಾರವರ್ತಿತ ರಿಮೇಕ್ ಚಿತ್ರಗಳನ್ನೇ ನೀಡುತ್ತ ಬಾಕ್ಸಾಫೀಸಿನಲ್ಲಿ ಕೆಲವೊಂದು ಗೆಲುವು ಕಾಣುತ್ತಿದ್ದರೂ ಹೊಸ ಅಲೆಯ ಸೃಷ್ಟಿಯಲ್ಲಿ ವಿಫಲವಾಗುತ್ತಿದ್ದ ಕನ್ನಡ ಚಿತ್ರರಂಗ ಈ ವರುಷ ಹೊಸ ಹುರುಪಿನೊಂದಿಗೆ ಮೇಲೆದ್ದಿದೆ. ದಕ್ಷಿಣದ ಉಳಿದ ರಾಜ್ಯದ ಚಿತ್ರಗಳಿಗಿಂತ ಉತ್ತಮ ಚಿತ್ರಗಳನ್ನು ನೀಡಿ ಪರಭಾಷೆಯ ಸಿನಿಪ್ರಿಯರನ್ನು ಆಕರ್ಷಿಸಿದೆ. ಸಿದ್ಧ ಸೂತ್ರಗಳನ್ನು, ಸ್ಟಾರ್ ನಟರನ್ನು ಮರೆತು ಚಿತ್ರ ನಿರ್ಮಿಸಿದ ನಿರ್ದೇಶಿಸಿದ ನಟಿಸಿದ ಹೊಸಬರ ಚಿತ್ರಗಳು ಗಮನ ಸೆಳೆದಿವೆ. ನಿರ್ಮಾಣದ ಹಂತದಿಂದಲೇ ಗಮನ ಸೆಳೆದ ‘ಲೂಸಿಯಾ’ ಚಿತ್ರ, ಮಾತುಗಳಿಂದಲೇ ಗೆದ್ದ ‘ಸಿಂಪಲ್ಲಾಗ್ ಒಂದ ಲವ್ ಸ್ಟೋರಿ’, ಸಾಮಾಜಿಕ ಕಳಕಳಿಯಿಂದ ವಿಮರ್ಶಕರ ಮೆಚ್ಚುಗೆ ಗಳಿಸಿದ ‘ಜಟ್ಟ’, ಶಿವರಾಜ್ ಕುಮಾರರಿಂದ ಉತ್ತಮ ಅಭಿನಯ ತೆಗೆಸಿದ ‘ಕಡ್ಡಿಪುಡಿ’, ಕಥಾವಿಧಾನದಿಂದ ಗಮನ ಸೆಳೆದ ‘ಗೊಂಬೆಗಳ ಲವ್’, ಯಾವೊಂದು ಪ್ರಚಾರವನ್ನೂ ಮಾಡದೆ ಮಾಧ್ಯಮದವರ ‘ಸಹಾಯ’ವನ್ನೂ ಪಡೆಯದೆ ಸದ್ದಿಲ್ಲದೆ ಚಿತ್ರಮಂದಿರಕ್ಕೆ ಬಂದು ಗಾಂಧಿನಗರಿಗೆಲ್ಲ ಆಘಾತ ಕೊಟ್ಟ ‘6-5=2’ ಈ ವರುಷ ಕನ್ನಡ ಚಿತ್ರರಂಗಕ್ಕೆ ಹೊಸತನ ನೀಡಿದ ಚಿತ್ರಗಳು. ಇನ್ನು ದರ್ಶನ್ ಅಭಿನಯದ ಬೃಂದಾವನ, ಬುಲ್ ಬುಲ್, ಹಾಡುಗಳು ಮತ್ತು ಸಿನಿಮೀಯ ನಂಬಲಸಾಧ್ಯ ಭಾವುಕತೆಯಿದ್ದ ಚಾರ್ಮಿನಾರ್, ನಿತ್ಯಾ ಮೆನನ್ನಿನ ಮೋಹಕ ಅಭಿನಯವಿದ್ದ ಮೈನಾ, ವರುಷದ ಕೊನೆಗೆ ಬಂದ ಕನ್ನಡದಲ್ಲೇ ‘ರಿಚ್’ ಎನ್ನಿಸುವಂತಹ ‘ಭಜರಂಗಿ’ ಗಲ್ಲಾಪೆಟ್ಟಿಗೆ ದೋಚಿದ ಸಿನಿಮಾಗಳು. ಹೊಸಬರ ಹೊಸ ಅಲೆಯ ಸಿನಿಮಾಗಳು ಗೆದ್ದಿರುವುದು ಮತ್ತಷ್ಟು ಹೊಸಬರನ್ನು ಪ್ರೋತ್ಸಾಹಿಸಬೇಕು, ಹಳಬರಿಗೆ ಹೊಸ ಆಲೋಚನೆಯನ್ನು ನೀಡಬೇಕು. ಗೆದ್ದೆತ್ತಿನ ಬಾಲ ಹಿಡಿದು ಮತ್ತದೇ ರೀತಿಯ ಚಲನಚಿತ್ರಗಳನ್ನು ನೀಡಿದರೆ ಪ್ರೇಕ್ಷಕನ ಮುಖ ಮತ್ತೆ ಮನೆಯ ಟಿವಿಯೊಳಗೆ ಹೂತುಕೊಳ್ಳುತ್ತದೆ! ಈ ವರುಷ ತೆರೆಕಂಡ ಕನ್ನಡ ಚಿತ್ರಗಳು ಭಾಷೆಯ ಪರಿಧಿಯನ್ನು ದಾಟಿ ಪರಭಾಷಿಕರಿಗೂ ತಲುಪುವಲ್ಲಿ ಕೊಂಚ ಮಟ್ಟಿಗಿನ ಯಶ ಕಂಡಿವೆ. ಕರ್ನಾಟಕದ ಸೀಮಿತ ಮಾರುಕಟ್ಟೆಯನ್ನು ದಾಟುವಂತಹ ಚಿತ್ರಗಳು ಹೆಚ್ಚೆಚ್ಚು ಬಂದಷ್ಟೂ ಹೊಸ ಬಗೆಯ ಚಿತ್ರಗಳನ್ನು ನಿರೀಕ್ಷಿಸಬಹುದು.

ಡಿಸೆಂಬರ್ ತಿಂಗಳೆಂದರೆ ಸಾಧಕರ ಸಾವಿನ ಮಾಸವಾಗುತ್ತಿದೆಯಾ? ಯಾಕೋ ಕಳೆದ ಹಲವು ವರುಷಗಳಿಂದ ಡಿಸೆಂಬರ್ ತಿಂಗಳಲ್ಲಿ ಸತ್ತ ಸಾಧಕರನ್ನು ನೆನಪಿಸಿಕೊಂಡರೆ ಈ ಅನುಮಾನ ಕಾಡುತ್ತದೆ. ಶತಶತಮಾನಗಳ ಕಾಲ ಬಿಳಿಯರ ದಬ್ಬಾಳಿಕೆಗೆ ಒಗ್ಗಿ ಹೋಗಿದ್ದ ಗುಲಾಮತ್ವವೇ ಸಹಜವೆಂಬಂತೆ ಒಪ್ಪಿಕೊಂಡಿದ್ದ ಕರಿಯರಿಗೆ ಮುಕ್ತಿಧಾತನಂತೆ ಬಂದಿದ್ದು ನೆಲ್ಸನ್ ಮಂಡೇಲಾ. ತಮ್ಮ ಜೀವಿತಾವಧಿಯ ಬಹುತೇಕ ವರುಷಗಳನ್ನು ಜೈಲಿನಲ್ಲೇ ಕಳೆದು, ಮಹಾತ್ಮ ಗಾಂಧಿಯ ಅಹಿಂಸಾ ತತ್ವದಿಂದ ಪ್ರೇರಿತರಾಗಿ ಅದೇ ಅಹಿಂಸೆಯಿಂದ ಕರಿಯರಿಗೊಂದು ಗೌರವ ತಂದುಕೊಟ್ಟ ಕೀರ್ತಿ ನೆಲ್ಸನ್ ಮಂಡೇಲಾರದು. ಕರಿಯರಿಗೆ ಸಿಕ್ಕ ಸ್ವಾತಂತ್ರ್ಯ ಬಿಳಿಯರ ಮೇಲೆ ನಡೆಯಬೇಕಾದ ಪ್ರತೀಕಾರವಲ್ಲ ಎಂಬುದನ್ನು ಪ್ರೀತಿಯಿಂದಲೇ ತಮ್ಮ ಜನರಿಗೆ ಹೇಳಿದ ನೆಲ್ಸನ್ ಮಂಡೇಲಾ ಸಾಯುವವರೆಗೂ ಅಧಿಕಾರದ ಅಪ್ಪುಗೆಯಲ್ಲಿರಬಹುದಿತ್ತೇನೋ. ಆದರೆ ಹಾಗೆ ಮಾಡದೆ ತಮ್ಮ ದೊಡ್ಡತನ ಮೆರೆದರು. ಇದೇ ತಿಂಗಳಾಂತ್ಯದಲ್ಲಿ ರಾಷ್ಟ್ರ ಕವಿ ಜಿ.ಎಸ್. ಶಿವರುದ್ರಪ್ಪ ವಿಧಿವಶರಾದರು. ಕವಿತೆಗಳನ್ನು ಅಷ್ಟಾಗಿ ಓದುವ ಅಭ್ಯಾಸವಿಲ್ಲದ ನನಗೆ ಜಿ.ಎಸ್. ಶಿವರುದ್ರಪ್ಪನವರ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ನಮ್ಮಂಥ ಕವಿತಾ ಹೀನರಿಗೂ ಕೆಲವು ಉತ್ತಮ ಕವಿತೆಗಳನ್ನು ತಲುಪಿಸಿದ್ದು ಸಿ.ಎಸ್.ಅಶ್ವಥ್. ಶಿವರುದ್ರಪ್ಪನವರ ‘ಎಲ್ಲೋ ಹುಡುಕಿದೆ ಇಲ್ಲದ ದೇವರ’ ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ಗೀತೆಗಳನ್ನು ನಮಗೆ ತಲುಪಿಸಿದ ಶ್ರೇಯ ಅಶ್ವಥರದ್ದು. ಈಗ ಶಿವರುದ್ರಪ್ಪನವರೂ ಇಲ್ಲ ನಮ್ಮಂಥ ಪಾಮರರಿಗೆ ಉತ್ತಮ ಗೀತೆಗಳನ್ನು ತಲುಪಿಸುತ್ತಿದ್ದ ಅಶ್ವಥರೂ ಇಲ್ಲ.

ಎಂದಿನಂತೆ ಈ ವರುಷವೂ ಅನವಶ್ಯಕ ವಿವಾದಗಳಿಗೇನೂ ಬರವಿರಲಿಲ್ಲ. ಢುಂಡಿ ಕಾದಂಬರಿಯ ಬಗ್ಗೆ, ಬಸವಣ್ಣ ಎಂಬ ಸಿನಿಮಾ ಶೀರ್ಷಿಕೆಯ ಬಗ್ಗೆ ನಡೆದ ವಿವಾದಗಳು ಅವುಗಳ ಕತೃಗಳಿಗೆ ಕೊಂಚ ಜನಪ್ರಿಯತೆ ತಂದುಕೊಟ್ಟಿತೇ ಹೊರತು ಮತ್ತೇನೂ ಉಪಯೋಗವಾಗಲಿಲ್ಲ. ವರುಷದ ಕೊನೆಯ ತಿಂಗಳಲ್ಲಿ ಮೃತರಾದ ಶ್ರೀಕಂಠದತ್ತ ಒಡೆಯರರ ಸಾವು ನಮ್ಮ ಮಾಧ್ಯಮಗಳಲ್ಲಿ ಮತ್ತು ಕೆಲಜನರಲ್ಲಿ ಇನ್ನೂ ಉಳಿದಿರುವ ರಾಜಪ್ರಭುತ್ವದ ಗುಲಾಮಗಿರಿಯನ್ನು ನೆನಪಿಸಿತು. ಅನವಶ್ಯಕ ಪ್ರಚಾರ ಕೊಟ್ಟ ಮಾಧ್ಯಮಮಿತ್ರರು ಅದರಿಂದ ಸಾಧಿಸಿದ್ದಾದರೂ ಏನು ಎಂಬುದು ಇನ್ನೂ ನಿಗೂಢ! ದೃಶ್ಯ ಮಾಧ್ಯಮದ ವಿಪರೀತಕ್ಕೆ ರಾಜೇಶ್ ಬಲಿಯಾದದ್ದು ಮತ್ತೊಂದು ದುರಂತ. ಪ್ರಕೃತಿ ಕೂಡ ಈ ಬಾರಿ ಮುನಿದುಬಿಟ್ಟಿದ್ದಳು. ಜಲಪ್ರಳಯ, ಚಂಡಮಾರುತಗಳೆಲ್ಲವೂ ಅಪ್ಪಳಿಸಿತು. ಅಪಾರ ಹಾನಿ ಸಂಭವಿಸಿತು. ತಂತ್ರಜ್ಞಾನ ಅನೇಕ ಜನರ ಪ್ರಾಣವನ್ನೂ ಉಳಿಸಿತು. 2013ರಲ್ಲಿ ನಡೆದಿದ್ದು ಬಹಳಷ್ಟು, ನನ್ನ ನಿಲುಕಿಗೆ ಮುಖ್ಯವೆನ್ನಿಸಿದ್ದನ್ನು ಹಂಚಿಕೊಂಡಿದ್ದೇನೆ. ಮುಂದಿನ ವರುಷ ಶುಭ ತರಲಿ, ನಿಮಗೂ ನಮಗೂ ಮತ್ತು ಸಮಾಜಕ್ಕೂ....
ಪ್ರಜಾ ಸಮರಕ್ಕೆ ಬರೆದ ಲೇಖನ  

No comments:

Post a Comment