Jan 4, 2012

ಒಂದು ಗಲಭೆಯ ಸುತ್ತ. . .

--> ಡಾ. ಅಶೋಕ್. ಕೆ. ಆರ್
ಒಂದು ಬೆಳಿಗ್ಗೆ ಬಸ್ಸಿನಲ್ಲಿ: - “ಏ ರಫೀಕ್. ಬಾ ಇಲ್ಲಿ. ಇಲ್ಲೇ ಸೀಟು ಖಾಲಿ ಇದೆ”. ರಫೀಕ್ ಅವಳೆಡೆಗೆ ನೋಡಿದ. ಹಿಂದಿರುಗಿ ತನ್ನ ಗೆಳೆಯರಾದ ಗಣೇಶ, ರಾಜು, ರಷೀದ್ ಕುಳಿತಿದ್ದೆಡೆಗೆ ನೋಡಿದ. ಮುಸಿಮುಸಿ ನಗಲಾರಂಭಿಸಿದ್ದರು. “ಏನ್ ಯೋಚಿಸುತ್ತಿದ್ದೀಯೋ? ಬಾ ಬೇಗ ಏನೋ ಕೊಡಬೇಕು” ಅವಳು ಮತ್ತೆ ಕೂಗಿದಳು. ನಿಂತಲ್ಲಿಂದ ಒಂದಿಂಚೂ ಅತ್ತಿತ್ತ ಕದಲದೆ ಅವಳೆಡೆಗೆ ನೋಡುತ್ತಾ “ಇಲ್ಲ ರಶ್ಮಿ ದೀದಿ. ನಾನಿಲ್ಲೇ ಎಲ್ಲಾದರೂ ಕೂತ್ಕೋತೀನಿ” ಎಂದ್ಹೇಳಿ ತಲೆತಗ್ಗಿಸಿದ. “ಯಾಕೋ? ಏನಾಯ್ತು? ಅಮ್ಮ ನಿನಗೂ ತಿಂಡಿ ಕೊಟ್ಟು ಕಳುಹಿಸಿದ್ದಾರೆ. ಬಾ”. ತಗ್ಗಿಸಿದ ತಲೆಯನ್ನು ಮೇಲೆತ್ತದೆ “ಇಲ್ಲ ದೀದಿ. ನಾನಲ್ಲಿ ಬಂದು ಕೂತರೆ ಇವರೆಲ್ಲ ರೇಗಿಸ್ತಾರೆ. ಹೆಣ್ಮುಕ್ಕ ಹೆಣ್ಮುಕ್ಕ ಅಂತಾರೆ. ಆಮೇಲೆ ತಗೋತೀನಿ ಬಿಡು”. ರಶ್ಮಿ ಮತ್ತವಳ ಪಕ್ಕದಲ್ಲಿ ಕುಳಿತಿದ್ದ ಅವಳ ಗೆಳತಿ ಜೋರು ದನಿಯಲ್ಲಿ ನಕ್ಕರು. “ಈಗ ಎಂಟನೇ ತರಗತಿಗೆ ಬಂದಿದ್ದೀರ. ದೊಡ್ಡ ಗಂಡಸಂಗೆ ಆಡ್ತೀರಲ್ಲ. ಬಾರೋ ಇಲ್ಲಿ. ಅದ್ಯಾವನು ರೇಗಿಸ್ತಾನೋ ನಾನೂ ನೋಡ್ತೀನಿ” ಎಂದು ಜೋರು ಮಾಡಿದಳು. ರಫೀಕ ಮತ್ತೆ ತನ್ನ ಗೆಳೆಯರೆಡೆಗೆ ನೋಡಿದ. ನಗು ಕಡಿಮೆಯಾಗಿತ್ತು, ಮಾಯವಾಗಿರಲಿಲ್ಲ. ‘ದಯವಿಟ್ಟು ರೇಗಿಸಬೇಡ್ರೋ’ ಎಂದು ಕಣ್ಣಿನಲ್ಲೇ ಬೇಡುತ್ತ ರಶ್ಮಿಯ ಪಕ್ಕ ಬಂದು ಕುಳಿತ. “ಇನ್ನು ಸರಿಯಾಗಿ ಮೀಸೆ ಮೂಡಿಲ್ಲ ನಿನ್ನ ಫ್ರೆಂಡ್ಸಿಗೆ, ಪಿಯುಸಿ ಓದ್ತಿರೋ ನನ್ನನ್ನೂ ರೇಗಿಸ್ತಾರಂತ?!” ಅವಳ ಪ್ರಶ್ನೆಗೆ ಉತ್ತರವೀಯದೆ ಆಕೆಯಿತ್ತ ತಿಂಡಿಯನ್ನು ತಿನ್ನತೊಡಗಿದ. ಬಸ್ಸು ಹೊರಟಿತು.
ಅದೇ ಸಂಜೆ ಅದೇ ಬಸ್ಸು: -
“ಲೋ. ಕಿಟಕಿ ಪಕ್ಕ ಬ್ಯಾಗ್ ಇಟ್ಟಿದ್ದೆ. ರೀಸಸ್ಸಿಗೆ ಹೋಗಿ ಬರೋಷ್ಟರಲ್ಲಿ ಕೂತುಬಿಟ್ಟಿದ್ದೀರಲ್ಲ. ನನ್ನ ಜಾಗ ಬಿಡ್ರೋ” ಗೋಗರೆದ ರಫೀಕ. ಅವನ ಬ್ಯಾಗನ್ನು ಅವನಿಗೆ ಹಿಂದಿರುಗಿಸುತ್ತ “ಏನ್ ಸೀಟ್ ರಿಸರ್ವ್ ಮಾಡ್ಸಿದ್ಯಾ? ಹೋಗ್ ಹೋಗು. ಬೇರೆಯಲ್ಲಾದರೂ ಕೂತ್ಕೋ ಹೋಗು” ರಷೀದ್ ಇಷ್ಟು ಹೇಳಿ ಗಣೇಶನೆಡೆಗೆ ನೋಡಿ ಕಣ್ಣುಮಿಟುಕಿಸಿದ. ಗಣೇಶ ಚುಡಾಯಿಸುವ ದನಿಯಲ್ಲಿ “ಹೋಗಪ್ಪ. ನಿನ್ನ ರಶ್ಮಿ ದೀದಿ ಎಲ್ಲಾದರೂ ಸೀಟು ಹಿಡಿದಿರುತ್ತಾಳೆ” ಎಂದು ಹೇಳುತ್ತಿದ್ದಂತೆ ರಫೀಕನಿಗೆ ಕೋಪವೇರಿ ಗಣೇಶನ ಕೊರಳಪಟ್ಟಿ ಹಿಡಿದೆಳೆದ, ಶರ್ಟಿನ ಮೊದಲ ಗುಂಡಿ ಕಿತ್ತು ಬಂತು. “ನಮ್ಮ ಜೊತೇನೇ ಪಂಗಾ ತಗೊತೀಯೇನೋ” ಎಂದಬ್ಬರಿಸುತ್ತ ಗಣೇಶನ ಅಕ್ಕಪಕ್ಕ ಕುಳಿತಿದ್ದ ರಾಜು ರಷೀದ ಮೇಲೆದ್ದು ಮೂವರು ರಫೀಕನ ಎದೆ ಮೇಲೆ ಕೈಹಾಕಿ ರಭಸದಿಂದ ನೂಕಿದರು. ನಾಲ್ಕೆಜ್ಜೆ ಹಿಂದೆ ಹೋದವನು ಆಯತಪ್ಪಿ ಬೀಳುವಷ್ಟರಲ್ಲಿ ಕಂಡಕ್ಟರ್ ಅವನನ್ನು ಹಿಡಿದು ಮೇಲೆತ್ತಿದ. “ಲೋ ನಿಮಗೆಲ್ಲ ತಿಂದಿದ್ದು ಹೆಚ್ಚಾಯ್ತ? ನನ್ನ ಬಸ್ಸಲ್ಲೇ ಕಿತ್ತಾಡ್ತೀರಾ? ಎಲ್ಲರನ್ನೂ ಹೊರಗೆ ಅಟ್ಟಿಬಿಡ್ತೀನಿ ನೋಡಿ” ಎಂದು ಗದರಿಸಿ ಅಲ್ಲೇ ಇದ್ದ ಒಂದು ಖಾಲಿ ಸೀಟಿನಲ್ಲಿ ರಫೀಕನಿಗೆ ಕೂರುವಂತೆ ಸೂಚಿಸಿ ರಾಜುವಿನೆಡೆಗೆ ತಿರುಗಿ “ಯಾಕೋ ರಾಜು ಈ ಪುಂಡಪಟಲಾಮ್ಮಿನ ಜೊತೆ ಸೇರಿ ನೀನೂ ಹಾಳಾಗ್ ಬೇಕು ಅಂತಿದ್ದೀಯಾ ಹೇಗೆ? ನಿಮ್ಮಪ್ಪನಿಗೆ ಹೇಳ್ಬೇಕಾ?” ಎಂದು ಕೇಳಿದ. “ಹೇ ಹೇ. ಸುಮ್ಮನೆ ತಮಾಷೆಗೆ ಆಟಾಡ್ತಿದ್ದೋ ಅಂಕಲ್. ಮನೇಗೆಲ್ಲ ಹೇಳ್ಬೇಡಿ” ಹಲ್ಲುಕಿರಿಯುತ್ತ ಹೇಳಿ ಸುಮ್ಮನಾದ.
ಅದೇ ರಾತ್ರಿ ಎರಡು ಅಂಗಡಿಗಳ ಬಳಿ: -
            “ವಿಷಯ ಗೊತ್ತಾಯ್ತ ರಮೇಶ. ಇವತ್ತು ಸಂಜೆ ಬಸ್ಸಿನಲ್ಲಿ ಒಬ್ಬ ಸಾಬಿ ಹುಡುಗ ನಮ್ಮ ಇಬ್ಬರ ಹುಡುಗರಿಗೆ ಶರ್ಟೆಲ್ಲ ಹರಿದು ರಕ್ತ ಸುರಿಯುವಂತೆ ಹೊಡೆದನಂತೆ”
            “ಹೌದಾ?! ಇವರದ್ಯಾಕೋ ಅತಿಯಾಯ್ತು ನೋಡು. ಏನಕ್ಕಂತೆ?”
            “ಲವ್ ಜಿಹಾದೂ. ಆ ಸಾಬೇ ನಮ್ಮ ಹುಡುಗಿಯೊಬ್ಬಳ ಬಳಿಯೇ ಕುಳಿತುಕೊಳ್ಳುತ್ತಿದ್ದನಂತೆ. ಇವರು ಯಾಕೆ ಅಂಥ ಕೇಳಿದ್ದಾರೆ. ಅಷ್ಟಕ್ಕೇ. . .”
            “ಒಂದು ಮೀಟಿಂಗ್ ಸೇರಿಸು. ಏನಾದ್ರೂ ಮಾಡಬೇಕು ಇದರ ಬಗ್ಗೆ”
* * *
            “ವಿಷಯ ಗೊತ್ತಾಯ್ತ ಹಮೀದ್ ಭಾಯ್?”
            “ಏನು ಅಲಿ?”
            “ಇವತ್ತು ಸಂಜೆ ಬಸ್ಸಿನಲ್ಲಿ ನಮ್ಮ ಹುಡುಗನೊಬ್ಬನಿಗೆ ಇಬ್ಬರು ಹಿಂದೂ ಹುಡುಗರು ರಕ್ತ ಕಾರುವಂತೆ ಹೊಡೆದರಂತೆ”
            “ಹೌದಾ?! ಇವರದ್ಯಾಕೋ ಅತಿಯಾಯ್ತು ನೋಡು. ಒಂದು ಮೀಟಿಂಗ್ ಸೇರಿಸು. ಏನಾದ್ರೂ ಮಾಡಬೇಕು ಇದರ ಬಗ್ಗೆ”
* * *
ಮತ್ತೊಂದು
ಹೈವೇಯಲ್ಲಿನ ಒಂದು ಹೋಟೆಲಿನಲ್ಲಿ: -
“ನಿಮ್ಮನ್ನು ಅಲ್ಲಿ ನೋಡಿದ್ದೀನಿ. ಅಲ್ಲೇ ಇದ್ರಲ್ವಾ ನೀವಿಬ್ಬರೂ” ಕಾಫಿ ಹೀರುತ್ತ ಕುಳಿತಿದ್ದ ಪ್ರಭಾ ಮತ್ತು ಉಮಾರ ಬಳಿ ಬಂದು ಖಾಲಿಯಿದ್ದ ಅವರೆದುರಿಗಿನ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾ ಕೇಳಿದ ಅನ್ಸಾರಿ. ಅವನೊಟ್ಟಿಗೆ ಬಂದ ನದೀಮ ಅವನ ಪಕ್ಕದಲ್ಲಿ ಆಸೀನನಾದ.
“ಹೌದು. ಅಲ್ಲೇ ಇದ್ವಿ. ಒಂದು ವಾರವಾಯ್ತು ಬಂದು. ನಿಮ್ಮನ್ನೂ ನೋಡಿದ್ದೀನಿ”
“ನಾವೂ ಹೊರಗೆ ಬಂದು ಒಂದು ವಾರವಾಯ್ತಷ್ಟೇ!”
“ಯಾವ ಕೇಸು?”
“ಅದೂ ಅದೂ. .  .”
“ಪರವಾಗಿಲ್ಲ ಹೇಳಿ”
“ಖೋಟಾನೋಟು! ನಿಮ್ಮದು?”
“ಖೋಟಾನೋಟಾ?! ನಮ್ಮದು ಅಷ್ಟೆಲ್ಲ ದೊಡ್ಡ ಕೇಸಲ್ಲಪ್ಪ. ಚಿಕ್ಕ ಪುಟ್ಟ ಒಡವೆ ಕದಿಯಬೇಕಾದರೆ ಸಿಕ್ಕಿಹಾಕಿಕೊಂಡಿದ್ದೆವು ಅಷ್ಟೇ!”. ಅದೂ ಇದೂ ಹರಟುತ್ತಾ ಹದಿನೈದು ನಿಮಿಷ ಕಳೆದರು. ನದೀಮ ಅನ್ಸಾರಿಯ ಕಿವಿಯಲ್ಲೇನೋ ಉಸುರಿದ. ಅನ್ಸಾರಿ ಸರಿಯೆಂಬಂತೆ ತಲೆಯಾಡಿಸುತ್ತ “ನಿಮ್ಮದೇನೂ ಅಭ್ಯಂತರವಿಲ್ಲದಿದ್ದರೆ ನಮ್ಮ ಜೊತೆ ಬನ್ನಿ. ಮೈಸೂರಿಗೆ ಹೋಗೋಣ. ಒಂದು ಚಿಕ್ಕ ಬ್ಯುಸಿನೆಸ್ಸು. ನಿಮಗೂ ಕಮಿಷನ್ ಸಿಗುತ್ತೆ. ಜೊತೆಯಲ್ಲಿಬ್ಬರು ಹುಡುಗೀರಿದ್ರೆ ಅನುಮಾನ ಪಡೋರು ಕಡಿಮೆ”. ಪ್ರಭಾ, ಉಮಾ ತಮ್ಮತಮ್ಮಲ್ಲೇ ಚರ್ಚಿಸಿ ಐದು ನಿಮಿಷದ ನಂತರ ಕಾಫಿಯ ದುಡ್ಡು ಕೊಟ್ಟು ನದೀಮ ತಂದಿದ್ದ ಕಾರಿನಲ್ಲಿ ಮೈಸೂರಿನ ಕಡೆಗೆ ಹೊರಟರು. ಅದೇ ಸಮಯಕ್ಕೆ ಹೋಟೆಲಿನ ಫೋನ್ ರಿಂಗಣಿಸಿತು.
“ಹಲೋ”
“ಹಲೋ ನಾನು ರಮೇಶ”
“ರಮೇಶಣ್ಣ!! ನಾನೇ ಈಗ ನಿಮಗೆ ಫೋನ್ ಮಾಡುವವನಿದ್ದೆ ನೋಡಿ. ಒಂದು ಮುಖ್ಯವಾದ ವಿಷಯ. ಈಗ ಅರ್ಧ ಘಂಟೆಗೆ ಮೊದಲು ನಮ್ಮ ಇಬ್ಬರು ಹುಡುಗೀರು ಬಂದು ಕಾಫಿ ಕುಡಿಯುತ್ತಿದ್ದರು. ಅವರು ಬಂದ ಐದು ನಿಮಿಷಕ್ಕೆ ಅವರು ಇಬ್ಬರು ಬಂದರು. ಬೇರೆ ಬೇರೇನೆ ಕುಳಿತಿದ್ದರು. ಅವರಿಬ್ಬರೂ ನಂತರ ನಮ್ಮವರ ಬಳಿಗೆ ಬಂದು ಏನೋ ಗುಸುಗುಸು ಮಾತನಾಡಿ ತಮ್ಮ ಜೊತೇಲೇ ಕರೆದುಕೊಂಡುಹೋಗಿಬಿಡೋದಾ?!! ನಾನಿವತ್ತು ಒಬ್ಬನೇ ಬೇರೆ ಇದ್ದೆ. ಇಲ್ಲಾಂದ್ರೆ ಇಲ್ಲೇ ಹಿಡಿದುಹಾಕಿಬಿಡ್ತಿದ್ದೆ”
“ಇರಲಿ ಇರಲಿ. ಯಾವ ಕಡೆ ಹೊರಟರು?”
“ಮೈಸೂರಿನ ಕಡೆಗೆ. ಇನ್ನರ್ಧ ಘಂಟೇಲಿ ನಿಮ್ಮ ಊರಿನ ಬಳಿ ಬರ್ತಾರೆ”
“ಯಾವ ಗಾಡಿ?”
“ಮಾರುತಿ ಆಮ್ನಿ, ಬಿಳಿ ಬಣ್ಣದ ಗಾಡಿ. ಕೇರಳ ರಿಜಿಷ್ಟ್ರೇಶನ್ದು”
“ನಾವು ವಿಚಾರಿಸ್ತೀವಿ ಬಿಡು. ನಿನಗೆ ನಂತರ ಫೋನ್ ಮಾಡ್ತೀನಿ. ನಾಳೆ ಮೀಟಿಂಗಿದೆ”
ಅದೇ ರಾತ್ರಿ ಪೋಲೀಸ್ ಠಾಣೆಯಲ್ಲಿ: -
ಒಳಗೇನು ನಡೀತು, ಹೊರಗೇನು ನಡೀತು ಅನ್ನೋದು ಸರಿಯಾಗಿ ಯಾರಿಗೂ ತಿಳಿದಿಲ್ಲ. ಬಹುಶಃ ಪೋಲೀಸರಿಗೂ!! ‘ಅವರೆಲ್ಲ ಕಳ್ಳರು, ನಾವು ನೋಡ್ಕೋತೀವಿ ಬಿಡಿ’ ಅಂತ ಪೋಲೀಸರು; ‘ಇಲ್ಲ. ಇದು ಮತ್ತೊಂದು ಲವ್ ಜಿಹಾದ್ ಕೇಸು. ಬಸ್ಸಿನಲ್ಲಿ ಕಾಲೇಜು ಹುಡುಗರು ಲವ್ ಜಿಹಾದ್ ಮಾಡಿದ್ರೆ ಇಲ್ಲಿ ಇವರು. ನಮ್ಮ ಹುಡುಗರಿಗೆ ಅವರ ಬಸ್ಸಿನಲ್ಲಿ ರಕ್ತ ಬರೋ ರೀತಿ ಹೊಡೆದರೂ ನಾವು ಸುಮ್ಮನಿರಬೇಕಾ?’ ಅಂತ ಸಂಘದವರು.
ಮಾತಿಗೆ ಮಾತು ಬೆಳೀತು. ಯಾರಲ್ಲೂ ತಾಳ್ಮಯಿರಲಿಲ್ಲ. ಮೈಸೂರಿನಲ್ಲಿ ಕೈಹತ್ತುತ್ತಿದ್ದ ಹಣವನ್ನು ನೆನೆಯುತ್ತಾ ನಾಲ್ವರು ಕಳ್ಳರು ಠಾಣೆಯೊಳಗೆ ಸೊಳ್ಳೆ ಹೊಡೆಯುತ್ತಿದ್ದರು.
ಮಾತು ಮಾತಲ್ಲೇ ಉಳಿಯಲಿಲ್ಲ.
ಯಾರೋ ಠಾಣೆಯೆಡೆಗೆ ಕಲ್ಲೆಸೆದರು. ಮತ್ಯಾರೋ ಚಪ್ಪಲಿ ತೂರಿದರು. ಮರುಕ್ಷಣ ಎತ್ತನೋಡಿದರತ್ತ ಪೋಲೀಸರ ಲಾಠಿ ರೊಯ್ಯನೆ ಬೀಸಲಾರಂಭಿಸಿತು.
ನಗರ ಉದ್ವಿಗ್ನ; ನಿಷೇಧಾಜ್ಞೆ ಜಾರಿ.
* * * *
ಕೊನೆಗೆ
ಪ್ರತಿಭಟನಾ ಸಭೆ. ಒಂದೆರಡು ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿಯರನ್ನು ಬಲವಂತವಾಗಿ ಕರೆತಂದು ಕೂರಿಸಿದ ಪರಿಣಾಮ ಸಭೆ ‘ಬೃಹತ್ತಾಗಿತ್ತು’. ಪೋಲೀಸರಿಗೆ, ಅವರಿಗೆ, ಇವರಿಗೆ ಎಲ್ಲರಿಗೂ ಉಗಿದು ಉಪ್ಪಿನಕಾಯ್ಹಾಕಿ ಕೊನೆಯಲ್ಲಿ ಬಾಯಿಗೆ ಕಪ್ಪು ಬಟ್ಟೆ ಸುತ್ತಿಕೊಂಡು ಮುಖ್ಯರಸ್ತೆಯಲ್ಲಿ ಮೆರವಣಿಗೆ ಹೊರಟರು. ಅಂದು ಶುಕ್ರವಾರವಾದ್ದರಿಂದ ಮೆರವಣಿಗೆ ಮಸೀದಿಯ ಕಡೆಗೇ ಹೆಜ್ಜೆ ಹಾಕಿದ್ದು ಕೇವಲ ಆಕಸ್ಮಿಕವಷ್ಟೇ! ಹೆಚ್ಚು ಅರ್ಥ ಕಲ್ಪಿಸುವ ಬುದ್ಧಿಜೀವಿಗಳ ಬುದ್ಧಿ ನಮಗೆ ಖಂಡಿತ ಬೇಡ.
ಬಸ್ಸಿನಲ್ಲಿ: -
“ನೋಡೋ ರಫೀಕ. ಇವತ್ತು ನಮ್ಮಣ್ಣನ ಮೊಬೈಲ್ ತಂದಿದ್ದೀನಿ. ಟಚ್ ಸ್ಕ್ರೀನ್ದೂ” ಗಣೇಶ ಜೇಬಿನಿಂದ ಮೊಬೈಲಿನ ಚೂರೇ ಚೂರು ದರ್ಶನ ಮಾಡಿಸಿ ಒಳಗೆ ಸೇರಿಸಿದ. ರಫೀಕನ ಕಣ್ಣಲ್ಲಿ ಆಸೆ ನೀರೂರಿತು. “ಲೋ ನಿಮ್ಮಣ್ಣನಿಗೆ ಗೊತ್ತಾದರೆ?”
“ಅಣ್ಣನಿಗೆ ಜ್ವರ ಬಂದು ಮಲಗಿದ್ದ. ಎತ್ತುಕೊಂಡು ಬಂದ್ಬಿಟ್ಟೆ. ಗೊತ್ತಾದ ಮೇಲೆ ನೋಡಿಕೊಂಡರಾಯಿತು ಬಿಡು”
“ತೋರಿಸೋ ಮೊಬೈಲ್ನಾ”
“ಹೋಗಲೇ! ನಿನ್ನೆ ನನಗೆ ಹೊಡೆಯಕ್ಕೆ ಬಂದೆ. ಮೊಬೈಲೂ ತೋರಿಸಲ್ಲ, ಏನೂ ತೋರಿಸಲ್ಲ”
“ಲೋ ಗಣೇಶಾ! ಇಷ್ಟೆಯೇನೋ ಫ್ರೆಂಡ್ ಶಿಪ್ಪೂ? ನಿನ್ನ ಶರ್ಟಿನ ಗುಂಡಿ ನಾನೇ ಹೊಲೆದುಕೊಡ್ತೀನಿ. ಪ್ಲೀಸ್ ತೋರಿಸೋ”
ಕಣ್ಣುಮುಚ್ಚಿ ಗಹನವಾಗಿ ಯೋಚಿಸಿ ಕಣ್ತೆರೆದು “ಸರಿ. ತೋರಿಸ್ತೀನಿ. ನಮ್ಮ ಮನೆಯವರಿಗೆ ಹೇಳಬಾರದು ನೀನು”. ತಲೆಯಾಡಿಸಿದ ರಫೀಕ. ಮೊಬೈಲನ್ನು ಕೈಯಲ್ಲಿಡಿದು “ಯಾವ ಗೇಮಿದೆಯೋ ಇದರಲ್ಲಿ?” ಎಂದು ಕೇಳಿದ.
“ಕಾರ್ ರೇಸಿದೆ. ಬೊಂಬಾಟಾಗಿದೆ. ಆಡ್ತೀಯಾ?”
“ಹ್ಞೂ ಹ್ಞೂ” ಕಣ್ಣರಳಿಸಿದ.
“ಒಂದೇ ಒಂದು ಸಲ. ಜಾಸ್ತಿ ಕೇಳಬಾರದು”
“ಸರಿ ಕಣೋ. ಒಂದೇ ಸಲ. ವಾಪಸ್ಸು ಕೊಟ್ಬಿಡ್ತೀನಿ” ರಫೀಕ ಕಾರ್ ರೇಸನ್ನು ಶುರುಮಾಡುತ್ತಿದ್ದಂತೆ ಚಲಿಸುತ್ತಿದ್ದ ಬಸ್ಸು ಮೆರವಣಿಗೆಯ ಕಾರಣದಿಂದ ಸ್ತಬ್ಧವಾಯಿತು. ಕತ್ತು ಮೇಲೆತ್ತಿ ನೋಡುತ್ತಾ “ಏನಾಯ್ತೋ ಗಣೇಶಾ? ಬಸ್ಯಾಕೆ ನಿಂತೋಯ್ತು?”.
“ಏನೋ ಗೊತ್ತಿಲ್ಲಪ್ಪ! ಜನ ಅಷ್ಟೊಂದು ಇರೋದು ನೋಡಿದ್ರೆ ಏನೋ ಸ್ಟ್ರೈಕಿರಬೇಕು. ಲೇ ಲೇ ಕಾರು ಎತ್ತೆತಲೋ ಹೋಗ್ತಿದೆ. ಸರಿಯಾಗಿ ನೋಡ್ಕೊಂಡು ಆಡು. ಇಲ್ಲಾಂದ್ರೆ ವಾಪಸ್ಸು ಕೊಡು” ಮೊಬೈಲಿನ ಕಡೆಗೆ ನೋಡುತ್ತಾ ರೇಗಿದ ಗಣೇಶ. . .
* * * * *
ಕಳೆದ ವಾರ ಗೌರಿ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಕಥೆ.

1 comment:

  1. ಕಥೆಗೊ೦ದು ಒಳ್ಳೆ scheme ಇಟ್ಕೊ೦ಡು, ಸರ್ರಿಯಾಗಿ sketch ಹಾಕಿ, ಪಾತ್ರಗಳ ಮೇಲೆ ಚೆನ್ನಾಗಿ workout ಮಾಡಿದ್ದೀರಾ. ಬಹಳ ಒಳ್ಳೆ attempt.

    ReplyDelete