 |
ಮಂಜಾವರಿಸಿದ ಕೆರೆಯಲ್ಲಿ ಗುಳುಮುಳುಕ |
ಡಾ. ಅಶೋಕ್. ಕೆ. ಆರ್. ಕನಕಪುರದ ಬಳಿ ಒಂದು ಕಾರ್ಯಕ್ರಮಕ್ಕೆ ಹೋಗುವುದಿತ್ತು. ನೈಸ್ ರಸ್ತೆಯ ಕನಕಪುರ ಜಂಕ್ಷನ್ನಿನ ಹತ್ತಿರದಲ್ಲೇ ಇರುವ ಆಗರ ಕೆರೆಗೆ ಬಹಳ ವರುಷಗಳ ಹಿಂದೆ ಒಂದು ಬಾರಿ ಹೋಗಿದ್ದೆ. ಆ ಕೆರೆ ಈಗ ಹೇಗಿದೆ, ಪಕ್ಷಿಗಳಿದ್ದಾವೋ ಇಲ್ಲವೋ ನೋಡೋಣವೆಂದುಕೊಂಡು ಬೆಳಗಿನ ಆರರ ಸಮಯದಷ್ಟೊತ್ತಿಗೆ ಆಗರ ಕೆರೆಯನ್ನು ತಲುಪಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದ ಕಾರಣ ಆಗರ ಕೆರೆ ತುಂಬಿ ನಿಂತಿತ್ತು. ಕೆರೆಯ ಒಂದು ಬದಿಯಲ್ಲಿ ನಮ್ಮ ಅಭಿವೃದ್ಧಿಯ ಕುರುಹಾಗಿ ಕೆಲವು ಹೊಸ ಕಟ್ಟಡಗಳು ನಿರ್ಮಾಣವಾಗುತ್ತಿದ್ದವು. ಮತ್ತೊಂದು ತುದಿಯಲ್ಲಿ ಕಿರು ಅರಣ್ಯ ಹರಡಿಕೊಂಡಿತ್ತು. ಭಾನುವಾರವಾಗಿದ್ದರಿಂದ ಜನರ ಸಂಖ್ಯೆ ಹೆಚ್ಚಾಗಿಯೇ ಇತ್ತು.
 |
ಬೆಳಗಿನ ಕಾಯಕ |
ಕೆರೆಗಳು ನೀರು ತುಂಬಿಕೊಂಡಿರುವಾಗ ಪಕ್ಷಿಗಳ ಸಂಖೈ ಒಂದಷ್ಟು ಕಡಿಮೆಯೆಂದೇ ಹೇಳಬೇಕು. ಒಂದಷ್ಟು ಗುಳುಕಮುಳುಕ, ಬೆಳ್ಳಕ್ಕಿ, ಬೂದು ಕೊಕ್ಕರೆ, ನೀರುಕಾಗೆ ಬಿಟ್ಟರೆ ಹೆಚ್ಚಿನ ಪಕ್ಷಿಗಳು ಕಾಣಿಸಲಿಲ್ಲ. ಮಂಜು ಕೆರೆಯ ಮೇಲ್ಮೈಯನ್ನು ಆವರಿಸಿತ್ತು. ಮಂಜಿನ ಹಿನ್ನಲೆಯಲ್ಲಿ ಗುಳುಕಮುಳುಕದ ಫೋಟೋ ತೆಗೆಯುವಷ್ಟರಲ್ಲಿ ಮಂಜಿನ ಹೊದಿಕೆ ಮತ್ತಷ್ಟು ದಟ್ಟವಾಯಿತು. ಎದುರಿನ ಅರಣ್ಯದ ಭಾಗ ಕಾಣಿಸದಂತಾಯಿತು. ಬೆಳಕರಿಯುವ ಮುನ್ನವೇ ತೆಪ್ಪದಲ್ಲಿ ಮೀನಿಡಿಯಲು ಅತ್ತ ಕಡೆಗೆ ಸಾಗಿದ್ದವರು ಮಂಜಿನ ಹೊದಿಕೆಯಲ್ಲಿ ಇತ್ತ ಕಡೆಯ ತೀರಕ್ಕೆ ಸಾಗಿ ಬರುತ್ತಿದ್ದ ದೃಶ್ಯ ವೈಭವಯುತವಾಗಿತ್ತು. ಗಿಡಮರಗಳ ಪ್ರತಿಬಿಂಬದ ಚಿತ್ರಗಳನ್ನು ಕ್ಯಾಮೆರಾಗೆ ತುಂಬಿಕೊಂಡೆ. ಕೊಂಚ ಸಮಯದ ಕಳೆದ ನಂತರ ಮಂಜಿನ ಹೊದಿಕೆ ನಿಧಾನವಾಗಿ ಸರಿದುಕೊಳ್ಳಲಾರಂಭಿಸಿತಾದರೂ ರವಿಯು ಮೋಡದ ನಡುವಿನಿಂದ ಹೊರಬರಲು ಉತ್ಸಾಹ ತೋರಲಿಲ್ಲ.
 |
ಆಹಾರದ ಹುಡುಕಾಟದಲ್ಲಿ |
 |
ಕೆಂಪು ಕಿಬ್ಬೊಟ್ಟೆಯ ಪಿಕಳಾರ |
 |
ಕೆಮ್ಮೀಸೆ ಪಿಕಳಾರ |
 |
ಗರುಡನ ಪ್ರತಿಬಿಂಬ |
 |
ತರುಣಿಯರ ಸ್ನೇಹ ಸಂಪಾದನೆ |
 |
ಮೋಡ ಮಂಜಿನಾಟದಲ್ಲಿ ರವಿಯ ಕಿರಣಗಳು |
ಬಿಸಿಲಿಗೆ, ಚಳಿ ಕಡಿಮೆಯಾದ ಮೇಲೆ ನೀರಿಗಿಳಿಯಬಹುದಾದ ಪಕ್ಷಿಗಳಿಗೆ ಕಾಯುತ್ತ ಅಲ್ಲೆ ಒಂದೆಡೆ ದಡದ ಪಕ್ಕದಲ್ಲಿ ಕುಳಿತೆ. ಎಡಬದಿಯಲ್ಲಿ, ಸ್ವಲ್ಪ ದೂರದಲ್ಲಿ ಇಬ್ಬರು ಹುಡುಗಿಯರು ಕೆರೆಯ ಸುತ್ತಮುತ್ತಲಲ್ಲಿ ವಾಸ ಮಾಡಿಕೊಂಡಿದ್ದ ಕಪ್ಪು – ಬಿಳುಪು ನಾಯಿಯೊಂದರ ಜೊತೆ ಗೆಳೆತನ ಬೆಳೆಸಿಕೊಳ್ಳುತ್ತಿದ್ದರು. ಅವರು ಕುಳಿತಿದ್ದ ಜಾಗದಲ್ಲಿ ಬೆಳೆದಿದ್ದ ಹಳದಿ ಹೂವಿನ ಗಿಡದ ಹೊದಿಕೆ, ಆ ಇಬ್ಬರು ಹುಡುಗಿಯರು, ಅವರೊಡನೆ ಆಟವಾಡುತ್ತಿದ್ದ ನಾಯಿಯ ಪ್ರತಿಬಿಂಬವೆಲ್ಲವೂ ಕೆರೆಯ ಶಾಂತ ನೀರಿನಲ್ಲಿ ಚಿತ್ತಾರ ಮೂಡಿಸಿತ್ತು. ಇಂತಹ ದೃಶ್ಯಾವಳಿಯನ್ನು ಕಣ್ಣಿನಲ್ಲಷ್ಟೇ ಅಲ್ಲ, ಕ್ಯಾಮೆರಾದಲ್ಲೂ ಸೆರೆಹಿಡಿದರೆ ಚೆಂದವಲ್ಲವೇ ಎಂದುಕೊಳ್ಳುತ್ತಾ ಅವರನ್ನು ಕೂಗಿ ಕರೆದು ʻಒಂದು ಫೋಟೋʼ ಎಂದು ಕೇಳಿ ಅನುಮತಿ ತೆಗೆದುಕೊಂಡು ಫೋಟೊ ತೆಗೆದು ಅವರ ಬಳಿ ಹೋಗಿ ಮೊಬೈಲಿಗೆ ಕಳಿಸಿ ಮತ್ತೆ ಬಂದು ದಡದಲ್ಲಿ ಪಕ್ಷಿಗಳಿಗೆ ಕಾಯುತ್ತ ಕುಳಿತೆ. ನೀರ ಪಕ್ಷಿಗಳ ಸುಳಿವಿರಲಿಲ್ಲ. ಅಷ್ಟರಲ್ಲಿ ತೆಪ್ಪದಲ್ಲಿಡಿದು ತಂದಿದ್ದ ಮೀನುಗಳನ್ನು ಸ್ವಚ್ಛಗೊಳಿಸುವ ಕಾರ್ಯ ಪ್ರಾರಂಭವಾಗಿತ್ತು. ಮೀನಿನ ಹೊಟ್ಟೆ, ಸಣ್ಣ ಕರುಳು, ದೊಡ್ಡ ಕರುಳು, ಹೃದಯಗಳನ್ನೆಲ್ಲಾ ನಾವು ತಿನ್ನುವುದಿಲ್ಲವಲ್ಲ. ಅದನ್ನೆಲ್ಲಾ ತೆಗೆಯುತ್ತಾ ಅಲ್ಲೇ ಮಣ್ಣಿನ ಮೇಲೆ ಒಂದಷ್ಟನ್ನು ನೀರಿಗೆ ಎಸೆಯುತ್ತಿದ್ದುದನ್ನೇ ಕಾಯುತ್ತಿದ್ದಂತೆ ಹತ್ತಾರು ಗರುಡಗಳು ಮತ್ತು ಒಂದೆರಡು ಹದ್ದುಗಳು ಕೆರೆಯ ಮೇಲಿನಾಕಾಶದಲ್ಲಿ ಪ್ರತ್ಯಕ್ಷವಾದವು. ಮೀನಿಡಿಯುವವರ ಗೆಳೆಯರೇ ಆಗಿಹೋಗಿದ್ದ ಈ ಪಕ್ಷಿಗಳು ಅವರ ತೀರ ಹತ್ತಿರ ಬಿದ್ದಿದ್ದ ಆಹಾರವನ್ನೂ ಹೊತ್ತೊಯ್ದು ಗಾಳಿಯಲ್ಲೇ ತಿಂದು ಮತ್ತೆ ಹಿಂದಿರುಗುತ್ತಿದ್ದವು. ನೀರಿಗೆ ಎಸೆಯುತ್ತಿದ್ದ ಆಹಾರವನ್ನು ಎತ್ತಿಕೊಳ್ಳಲು ಶಾಂತವಾಗಿದ್ದ ಕೆರಯ ನೀರಿನಲ್ಲಿ ಪಕ್ಷಿಗಳ ಪ್ರತಿಬಿಂಬ, ನೀರ ಹನಿಗಳ ಚಿಮ್ಮುವಿಕೆಯ ಫೋಟೋ ತೆಗೆಯಲು ಕ್ಯಾಮೆರಾದ ಶಟರ್ ವೇಗವನ್ನು ಹೆಚ್ಚಿಸಿಕೊಂಡೆ. ಮೋಡಗಳ ಮರೆಯಿಂದ ರವಿಯ ಕಿರಣಗಳು ಪಕ್ಷಿಗಳ ಮೇಲೆ, ನೀರ ಹನಿಗಳ ಮೇಲೆ ಬೀಳುತ್ತಾ ಸುಂದರ ಲೋಕವೇ ಕೆರೆಯ ಮೇಲೆ ಸೃಷ್ಟಿಯಾಯಿತು. ತೃಪ್ತಿಯಾಗುವಷ್ಟು ಫೋಟೋಗಳನ್ನು ತೆಗೆದು ದಡದಿಂದ ಎದ್ದವನಿಗೆ ಮೋಡ ಮಂಜಿನ ಹೊದಿಕೆಯಿಂದ ರವಿಯ ಕಿರಣಗಳು ನೃತ್ಯವಾಡುತ್ತಿದ್ದ ದೃಶ್ಯ ಕಂಡಿತು. ಕ್ಯಾಮೆರಾದ ಲೆನ್ಸ್ ಬದಲಿಸಿ ಬಣ್ಣರಹಿತ ʻನಾರ್ತರ್ನ್ ಲೈಟ್ಸಿನಂತೆʼ ಕಾಣುತ್ತಿದ್ದ ರವಿಯ ಕಿರಣಗಳ ಫೋಟೋ ತೆಗೆದುಕೊಂಡು ಬಂದವನಿಗೆ ಕೆರೆ ನೋಡಲು ಬಂದಿದ್ದ ಕೆಲವು ಫೇಸ್‌ಬುಕ್ ಗೆಳೆಯರು ಆಕಸ್ಮಿಕವಾಗಿ ಭೇಟಿಯಾದರು. ಅವರೊಡನೆ ಸ್ವಲ್ಪ ಸಮಯ ಹರಟಿ ಆಗರ ಕೆರೆಗೆ ವಿದಾಯವೇಳಿ ಹೊರಟೆ. ಕೆರೆಯ ದಡಕ್ಕೆ ಹೊಂದಿಕೊಂಡಿದ್ದ ಮರವೊಂದರ ಮೇಲೆ ಪಿಕಳಾರಗಳು ಕಾಣಿಸಿಕೊಂಡವು. ಬಿಸಿಲು ಬೀಳಲಾರಂಭಿಸಿದ್ದ ರೆಂಬೆಯ ಮೇಲೆ ಕುಳಿತು ಮೈಕಾಯಿಸಿಕೊಳ್ಳುತ್ತ, ಹಣ್ಣು ತಿನ್ನುತ್ತಿದ್ದ ಪಿಕಳಾರ ಹಕ್ಕಿಗಳು ʻಬರೀ ಕೆರೆಯೊಳಗಿನ ಪಕ್ಷಿಗಳ ಫೋಟೋ ತೆಗೆಯೋಕೆ ಬಂದಿದ್ದಾ? ಇಲ್ಲೇ ಇರುವ ನಮಗೆ ಬೆಲೆಯೇ ಇಲ್ಲ ಅಲ್ಲವೇ?ʼ ಎಂದು ಅಣಕಿಸಿದವು. ʻಹೇ ಹೇ ಹಂಗೇನಿಲ್ಲʼ ಎಂದೇಳುತ್ತಾ ಮತ್ತೆ ದೊಡ್ಡ ಲೆನ್ಸನ್ನು ಕ್ಯಾಮೆರಾಕ್ಕೆ ಹಾಕಿ ಪಿಕಳಾರ ಪಕ್ಷಿಗಳದೊಂದಷ್ಟು, ಅಲ್ಲೇ ದಡದ ಬಳಿ ಇದ್ದ ಮಿಂಚುಳ್ಳಿಯದೊಂದು ಫೋಟೋ ತೆಗೆದು ಒಂದು ಸುಂದರ ಸಮಾಧಾನಕರ ಬೆಳಗಿಗೆ ಕಾರಣವಾದ ಎಲ್ಲರಿಗೂ ಧನ್ಯವಾದಗಳನ್ನೇಳುತ್ತಾ ಕಾರು ಹತ್ತಿದೆ.
 |
ಸಾಮಾನ್ಯ ಮಿಂಚುಳ್ಳಿ |