Oct 31, 2018

ಮೀಟೂ ಮತ್ತು ಶಬರಿಮಲೆ ವಿವಾದಗಳ ನಡುವೆ ನಾವು ಮರೆತದ್ದೇನು?

ಕು.ಸ.ಮಧುಸೂದನ ರಂಗೇನಹಳ್ಳಿ 
ಇಂಡಿಯಾದ ಸಂಸದೀಯ ಪ್ರಜಾಸತ್ತೆಯ ದೌರ್ಬಲ್ಯ ಮತ್ತು ದುರಂತವಿರುವುದೇ ನಮ್ಮ ಈ ತೆರನಾದ ನಡವಳಿಕೆಗಳಲ್ಲಿ. ಈ ನೆಲದ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳು ಕಾಲಕಾಲಕ್ಕೆ ಇಂತಹ ಹುಸಿಕ್ರಾಂತಿಗಳ ಹೆಸರಿನಲ್ಲಿ ಪ್ರಜಾಸತ್ತಾತ್ಮಕ ಚುನಾವಣೆಗಳನ್ನು, ಅವುಗಳ ಸುತ್ತ ಚರ್ಚೆಯಾಗಬೇಕಾದ ವಿಚಾರಗಳ ದಾರಿ ತಪ್ಪಿಸುತ್ತ ಹೋಗುವುದು ನಡೆದುಕೊಂಡೇ ಬಂದಿದೆ.ನಾವು ಸಹ ನಮಗರಿವಿದ್ದೊ ಇಲ್ಲದೆಯೊ ದಾರಿ ತಪ್ಪುತ್ತಲೇ ಬರುತ್ತಿದ್ದೇವೆ. 

ಇದೀಗ ಎರಡು ವಿಷಯಗಳು ಇಡೀದೇಶದ ಗಮನವನ್ನು ಸೆಳೆದಿದ್ದು ನಮ್ಮ ಗಮನ ಮತ್ತು ಚರ್ಚೆಗಳನ್ನು ಆ ಎರಡು ವಿಚಾರಗಳೇ ಆವರಿಸಿಕೊಂಡಿವೆ. ಮೊದಲನೆಯದು ಮಾಜಿ ನಟಿ ತನುಶ್ರೀ ದತ್ತಾ ಶುರು ಮಾಡಿದ ಮೀಟೂ ಅಭಿಯಾನವಾದರೆ ಎರಡನೆಯದು, ಶಬರಿಮಲೆಗೆ ಮಹಿಳೆಯರ ಮುಕ್ತ ಪ್ರವೇಶದ ಬಗ್ಗೆ ಎದ್ದಿರುವ ವಿವಾದ ಮತ್ತು ಅದರ ಪರ-ವಿರೋಧ ಪ್ರತಿಭಟನೆಗಳು!. 
ಇವುಗಳ ಟೈಮಿಂಗ್ ನೋಡಿ. 

ಕೇಂದ್ರದಲ್ಲಿ ಬಾಜಪ ಸರಕಾರ ನಾಲ್ಕೂವರೆ ವರ್ಷಗಳ ಆಡಳಿತವನ್ನು ಮುಗಿಸಿ ಮುಂದಿನ ಮೇ ತಿಂಗಳ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಅಧಿಕಾರ ಹಿಡಿಯುವ ಹವಣಿಕೆಯಲ್ಲಿದೆ. ಇನ್ನೊಂದೆಡೆ 2019ರ ಮೇ ಚುನಾವಣೆಗಳಿಗೆ ದಿಕ್ಸೂಚಿಯಾಗಬಹುದಾದ ಪಂಚ ರಾಜ್ಯಗಳ ಚುನಾವಣೆಗಳಿಗೆ ದಿನಾಂಕ ಘೋಷಣೆಯಾಗಿದ್ದು ಚುನಾವಣಾ ಜ್ವರ ಕಾವೇರುತ್ತಿದೆ. 

ಕಳೆದ ನಾಲ್ಕು ವರ್ಷಗಳ ಕೇಂದ್ರದಲ್ಲಿನ ಬಾಜಪದ ಆಡಳಿತದಿಂದ ಜನತೆ ಭ್ರಮನಿರಸನಗೊಂಡಿದ್ದಾರೆ. ಸತತಬೆಲೆ ಏರಿಕೆ, ಹೆಚ್ಚುತ್ತಿರುವ ಅಲ್ಪಸಂಖ್ಯಾತರ ಮತ್ತು ದಲಿತರ ಮೇಲಿನ ದೌರ್ಜನ್ಯಗಳು ಮತದಾರರನ್ನು ಕಂಗೆಡಿಸಿವೆ. 2014ರ ಹೊತ್ತಿನಲ್ಲಿನ ಶ್ರೀನರೇಂದ್ರಮೋದಿಯವರ ಜನಪ್ರಿಯತೆಯ ಗ್ರಾಫ್ ಇಳಿಯುತ್ತಿದೆ. ಹಿಂದುತ್ವದ ಅಲೆಯ ಉಬ್ಬರ ಇಳಿಮುಖವಾಗುತ್ತಿದೆ. ಹೆಚ್ಚುತ್ತಿರುವ ನಿರುದ್ಯೋಗ ಯುವಜನತೆಗೆ ವಾಸ್ತವ ಮತ್ತು ಭ್ರಮೆಗಳ ನಡುವಿನ ಅಂತರವನ್ನು ಅರಿವು ಮಾಡಿಸತೊಡಗಿದೆ. ಮುಂದಿನ ಚುನಾವಣೆಗಾಗಿ ಜನರನ್ನುಮರಳು ಮಾಡುವ ಹೊಸ ಘೋಷಣೆಗಾಗಿ, ಹೊಸ ಅಲೆಯೊಂದಕ್ಕಾಗಿ ಬಾಜಪ ತಲೆಕೆಡಿಸಿಕೊಂಡು ಕೂತಿದೆ. 

ಇದೇ ಸಮಯದಲ್ಲಿ ಪಂಚರಾಜ್ಯ ಚುನಾವಣೆಗಳಲ್ಲಿ ಪ್ರಮುಖವಾದ ರಾಜಾಸ್ಥಾನ, ಮದ್ಯಪ್ರದೇಶ ಮತ್ತು ಚತ್ತೀಸಗಡ್ ರಾಜ್ಯಗಳಲ್ಲಿ ಬಾಜಪ ಸೋಲುತ್ತದೆಯೆಂದು ಸಮೀಕ್ಷಾವರದಿಗಳು ಭವಿಷ್ಯ ನುಡಿಯುತ್ತಿವೆ. ಹಾಂಗಂದ ಮಾತ್ರಕ್ಕೆ ಕಾಂಗ್ರೇಸ್ ಇಲ್ಲಿ ಸುಲಭವಾಗಿ ಗೆದ್ದು ಬಿಡುತ್ತದೆಯೆಂದೇನು ಅಲ್ಲ. ಹೀಗಾಗಿ ಎರಡೂ ಪಕ್ಷಗಳು ಭರ್ಜರಿಯಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿವೆ. 

ಇಂತಹ ಸಂಕೀರ್ಣ ಸಮಯದಲ್ಲಿ ಚುನಾವಣೆಗಳಲ್ಲಿ ಚರ್ಚೆಯಾಗಬೇಕಿದ್ದ ಪ್ರಮುಖ ವಿಚಾರಗಳ ಬಗ್ಗೆ ಮಾಧ್ಯಮಗಳು ಮಾತಾಡಬೇಕಿತ್ತು. ಮತ್ತದು ಅವುಗಳ ಕರ್ತವ್ಯವೂ ಆಗಿತ್ತು. ಆದರೀಗ ಶುರುವಾಗಿರುವ ಮೀಟೂ ಅಭಿಯಾನ ಮತ್ತು ಶಬರಿಮಲೆಗೆ ಮಹಿಳೆಯರ ಮುಕ್ತ ಪ್ರವೇಶದದ ವಿವಾದಗಳು ನಮ್ಮ ಮಾಧ್ಯಮಗಳ (ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳೆರಡೂ) ಕೇಂದ್ರಬಿಂದುವಾಗಿವೆ. ಡಿಸೆಂಬರಿನಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ನಿಜಕ್ಕೂ ಚರ್ಚೆಯ ವಿಷಯವಾಗ ಬೇಕಿದ್ದ ಸತತ ಬೆಲೆ ಏರಿಕೆ, ಕುಸಿಯುತ್ತಿರುವ ಆರ್ಥಿಕ ವ್ಯವಸ್ಥೆ ಮತ್ತು ಹೆಚ್ಚುತ್ತಿರುವ ನಿರುದ್ಯೋಗದಂತಹ ಸಮಸ್ಯೆಗಳು ಹಿಂದಿನ ಸೀಟಿಗೆ ಹೋಗಿವೆ. ನಾವೂ ಸಹ ಈಎರಡು ವಿಚಾರಗಳನ್ನೇ ಹಿಡಿದುಕೊಂಡು ಪುಟಗಟ್ಟಲೆ ಬರೆಯುತ್ತ, ಗಂಟೆಗಟ್ಟಲೆ ಹರಟುತ್ತ ಕೂತಿದ್ದೇವೆ. 

ಹಾಗಂತ ಮೀಟೂ ಅಭಿಯಾನ ವ್ಯರ್ಥವೆಂದೊ ಅನಗತ್ಯವೆಂದೊ ನಾನು ಹೇಳುತ್ತಿಲ್ಲ. ನೂರಾರು ವರ್ಷಗಳಿಂದ ತಮ್ಮ ಮೇಲೆ ನಡೆಯುತ್ತಿದ್ದ ಲೈಂಗಿಕ ಶೋಷಣೆಯ ಕರಾಳತೆಯನ್ನು ನಮ್ಮ ಹೆಣ್ಣುಮಕ್ಕಳು ಈಗಲಾದರೂ ಮುಕ್ತವಾಗಿ ಬಹಿರಂಗವಾಗಿ ಹೇಳಿಕೊಳ್ಳುತ್ತಿರುವುದು ಸ್ವಾಗತಾರ್ಹ ವಿಚಾರವೇ ಸರಿ. ಆ ಮಟ್ಟಿಗೆ ನಮ್ಮ ಮಹಿಳೆ ಒಂದು ಹೆಜ್ಜೆ ಮುಂದಿಟ್ಟಿರುವುದು ಸಮಾನ ಸಮಾಜದ ಆಶಯ ಹೊಂದಿರುವವರೆಲ್ಲ ಸ್ವಾಗತಿಸಲೇ ಬೇಕಾದಕ್ರಮ. ಅದೇ ರೀತಿ ಮಹಿಳೆಯನ್ನು ದೇವತೆಯೆಂದು ಪೂಜಿಸುವ ಈ ಸಮಾಜದಲ್ಲಿ ಆಕೆಗೆ ದೇವಾಲಯ ಪ್ರವೇಶವನ್ನು ನಿರಾಕರಿಸುವ ಪುರುಷ ಪ್ರದಾನ ವ್ಯವಸ್ಥೆಯ ವಿರುದ್ದ ಸಿಡಿದು ನಿಂತಿರುವ ಮಹಿಳೆಯರ ಹೋರಾಟವನ್ನು ನಿರ್ಲಕ್ಷಿಸುವುದು ಸಾದ್ಯವಿರದಮಾತು. ಇವೆರಡೂ ಪ್ರತಿಭಟನೆ ಪ್ರತಿಕ್ರಿಯೆಗಳು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಖಂಡಿತಾ ಅಗತ್ಯವಾದಂತವುಗಳೇನೊ ನಿಜ. 

ಅದರೀ ಎರಡು ಚಳುವಳಿಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವ ನಮ್ಮ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ಇವೆರಡೇ ಈ ದೇಶದ ನೆಲದ ಸಮಸ್ಯೆಯೇನೊ ಎಂಬಂತೆ ವೈಭವೀಕರಿಸುತ್ತ ಜನರ ಗಮನವನ್ನು ಚುನಾವಣೆಗಳಿಂದ ಬೇರೆಡೆಗೆ ಸೆಳೆಯಲು ಯತ್ನಿಸುತ್ತಿರುವುದೇ ನನ್ನ ಆತಂಕಕ್ಕೆ ಕಾರಣ. ನೀವೇ ನೋಡಿ ಶಬರಿ ಮಲೆಯ ಲಿಂಗ ತಾರತಮ್ಯದ ವಿಚಾರವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡ ಬಾಜಪ ಅದನ್ನು ಹಿಂದುತ್ವದ ಪ್ರಶ್ನೆಯನ್ನಾಗಿಸಿ ಜನರ ದಾರಿ ತಪ್ಪಿಸುತ್ತಿದೆ. 

ಈ ವಿಚಾರಗಳನ್ನು ಚರ್ಚಿಸುವ ಭರದಲ್ಲಿ ನಾವು ಬರುತ್ತಿರುವ ಚುನಾವಣೆಗಳನ್ನು, ಆಡಳಿತ ಪಕ್ಷವೊಂದಕ್ಕೆ ನಾವು ಕೇಳಬೇಕಾಗಿರುವ ಪ್ರಶ್ನೆಗಳನ್ನು ನೇಪಥ್ಯಕ್ಕೆ ಸರಿಸುವಲ್ಲಿ ನಮ್ಮ ನಡುವಿನ ಕೆಲಶಕ್ತಿಗಳು ಪ್ರಯತ್ನಿಸುತ್ತಿರುವುದನ್ನು ನಾವು ಗಮನಿಸುತ್ತಲೇ ಇಲ್ಲ. 

ನಾವೀಗ ಬಹುಮುಖ್ಯವಾದ ಘಟ್ಟದಲ್ಲಿ ನಿಂತಿದ್ದೇವೆ. ಈಗ ತೆಗೆದುಕೊಳ್ಳಬೇಕಾದ ನಿರ್ದಾರವೊಂದು ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಠಿಯಿಂದ ಬಾರಿ ಮಹತ್ವ ಪಡೆದಿದೆ ಎನ್ನುವುದನ್ನು ನಾವು ಮರೆಯಲಾಗದು. ಈ ಎರಡೂ ಅಭಿಯಾನಗಳಿಗೆ ನಮ್ಮ ಬೆಂಬಲ ನೀಡುತ್ತಲೇ ರಾಜಕೀಯ ಬದಲಾವಣೆಯೊಂದಕ್ಕೆ ಜನತೆಯನ್ನು ಅಣಿಗೊಳಿಸಬೇಕಿದೆ. 

1 comment:

  1. ನಿಮ್ಮ ಎಣಿಕೆ ಸರಿಯಾಗಿದೆ. ನಿರ್ಣಾಯಕ ಕಾಲಘಟ್ಟದಲ್ಲಿ ಜನರ ದಿಕ್ಕು ತಪ್ಪಿಸುವ ತವಕ ಮಾಧ್ಯಮಗಳಿಗೆ ಮೂಡುವುದರ ಹಿಂದಿರುವ ಶಕ್ತಿಗಳು ಯಾವಿರಬಹುದು?

    ReplyDelete