Aug 1, 2018

ಯಾರಿವನು?

ಪದ್ಮಜಾ ಜೋಯಿಸ್ 
ಹೋದಲ್ಲಿ ಬಂದಲ್ಲಿ ,
ಕುಳಿತಲ್ಲಿ ನಿಂತಲ್ಲಿ.
ಪರಿಚಿತರು ಕಾಡುತ್ತಾರೆ
ಸಖಿಯರು ದುಂಬಾಲು ಬೀಳುವರು, 
ನಿನ್ನ ಕನಸು ಮನಸುಗಳಲ್ಲಿ,
ಕಾವ್ಯ ಕಥನಗಳಲ್ಲಿ,
ಬದುಕು ಸಾವುಗಳಲಿ
ಝರಿಯಾಗಿ ಹರಿದವ
ಜೀವವಾಗಿ ಮಿಡಿದವ 
ಪ್ರೇಮಿಯಾಗಿ ಕಾಡಿದವ
ವಿರಹವನೇ ಉಣಿಸಿದವ
ಯಾರವ ಹೇಳೇ ಯಾರವ ??

ಹೇಳಲಾದರೂ ಎ಼ಂತು
ಏನು ತಾನೇ ಹೇಳಲಿ ??
ಸ್ಮಶಾನವಾಸಿಯಾದ
ಇಬ್ಬರನ್ನೂ ಧರಿಸಿದ 
ಪರಶಿವನಾ...??
ಕಲಂಕಿತ ಗೋಪಿಯರಿಗೆಲ್ಲ 
ತನ್ನೆಸರು ನೀಡಿ ಉದ್ಧರಿಸಿ
ಕಳ್ಳನಾಗೇ ನಿ಼ಂತ
ಜಗದೋದ್ಧಾರಕನಾ ??
ಲೋಕವೆಲ್ಲದರ ನ್ಯಾಯಕ್ಕೆ
ತನ್ನವಳ ಬಲಿಯೇ ನೀಡಿ
ಅಗ್ನಿಸ್ಸಾಕ್ಷಿ ಮನಃಸ್ಸಾಕ್ಷಿಗೆ
ಎರವಾದ ಪುರುಷೋತ್ತಮನಾ??

ಅಕ್ಕಂಗೆ ಚನ್ನಮಲ್ಲಿಕಾರ್ಜುನ...
ಮೀರಾಗೆ ಮಾಧವ...
ರಾಧೆಗೆ ಗೋವಿಂದನಂತೆ...
ನಾನೆಷ್ಟವರವಳು ...??
ಹೇಳಿಕೇಳಿ ಅಲೆಮಾರಿ...
ಅವಳಿಗೊಂದು ಶಾಪವಂತೆ
"" ನೆಲೆಯೂ ಇಲ್ಲ ಗಂಡನೂ ಇಲ್ಲ""
ಹೇಳಲೇನು ?? ಯಾರವನು ??
ಎದೆಯೊಳಗಿನ ಕನಸಿನರಾಜ
ಹಗಲೂ ಕವನಗಳಾಗಿ..
ರಾತ್ರಿ ಕನಸುಗಳಾಗಿ...
ಬದುಕಿಡೀ ಮರಿಚೀಕೆಯಾಗಿ
ಜೀವನ್ಮರಣದ ಒಲವಸುಧೆಯಾಗಿ
ನನಗೇ ಅಪರಿಚಿತನಾಗಿ....
ನೀವವನ ಕಂಡಿರುವಿರಾ???!?!
ನೀವಿವನ ಕಾಣಬಲ್ಲಿರಾ ???

ಹೋದಲ್ಲಿ ಬಂದಲ್ಲಿ 
ಕೂತಲ್ಲಿ ನಿ಼ಂತಲ್ಲಿ
ಕನಸಲ್ಲಿ ಮನಸಲ್ಲಿ
ಕಾವ್ಯಕಥನಗಳಲ್ಲಿ
ಹಗಲಿರುಳು ನನಗೀಗ
ಇವನದೇ ಗೀಳು...
ಯಾರವನು ?? ಯಾರಿವನು ???

No comments:

Post a Comment