Apr 26, 2018

ಇವು ಜೀವಚ್ಛವದಂತ ಆತ್ಮಗಳ ಕರುಳು ಕಿವುಚುವ ಆಕ್ರಂದನ...

ಅಸಹಾಯಕ ಆತ್ಮಗಳು. 
ಪಮ್ಮಿ ದೇರಲಗೋಡು(ಪದ್ಮಜಾ ಜೋಯಿಸ್)

(ಕು.ಸ.ಮಧುಸೂದನ್ ರವರ ಅಸಹಾಯಕ ಆತ್ಮಗಳು ಲೇಖನ ಸರಣಿಯು ಹಿಂಗ್ಯಾಕೆಯಲ್ಲಿ ಪ್ರಕಟಗೊಂಡಿತ್ತು. 'ಅಸಹಾಯಕ ಆತ್ಮಗಳೀಗ' ಪುಸ್ತಕದ ರೂಪ ಪಡೆದಿದೆ. ಪುಸ್ತಕದ ಕುರಿತಾಗಿ ಪದ್ಮಜಾ ಜೋಯಿಸ್ ರವರು ಬರೆದಿರುವ ಪರಿಚಯದ ಲೇಖನ ಹಿಂಗ್ಯಾಕೆಯ ಓದುಗರಿಗಾಗಿ) 

ಕು. ಸ. ಮಧುಸೂದನನಾಯರ್ ರಂಗೇನಹಳ್ಳಿ ಅವರು ಬರೆದ ಈ ಪುಸ್ತಕದೊಳಗಿನ ಕತೆಗಳನ್ನು ಓದುತ್ತ ಹೋದಂತೆ ಹಲವು ಅಸಹಾಯಕ ಆತ್ಮಗಳ ಆಕ್ರಂದನ ಕೇಳಿದಂತಾಗಿ ಒಂದು ಕ್ಷಣ ಬೆಚ್ಚಿದ್ದು ನಿಜ.

ತಮ್ಮ ಸಂಪೂರ್ಣ ಬದುಕನ್ನು ವೇಶ್ಯಾವೃತ್ತಿಯ ನರಕದಲ್ಲಿ ಕಳೆದ ಹತ್ತೊಂಭತ್ತು ಹೆಣ್ಣುಮಕ್ಕಳ ಕತೆಗಳನ್ನು ಅವರ ಬಾಯಿಂದಲೇ ಕೇಳಿ ಅವನ್ನು ಅಕ್ಷರ ರೂಪಕ್ಕಿಳಿಸಿರುವ ಮಧುಸೂದನ್ ರವರ “ಅಸಹಾಯಕ ಆತ್ಮಗಳು” ಪುಸ್ತಕದ ಬಗ್ಗೆ ಒಂದೆರಡು ಮಾತು ಹೇಳಲೇ ಬೇಕಿದೆ


ಆದರಲ್ಲೂ ಎಂ ವಿ ಪ್ರತಿಭಾ ಸಾಗರ್ ಅವರ ಮುನ್ನುಡಿಯಲ್ಲಿನ ಮಾತು “ನಿಜವಾಗಿಯೂ ಆ ಯಾವ ಹೆಣ್ಮಕ್ಕಳಲ್ಲೂ ನನಗೆ ಕಿಂಚಿತ್ತೂ ದೋಷ ಕಾಣಲಿಲ್ಲ, ಅಸಹಾಯಕತೆ ಅನ್ನೋದು ಹೆಣ್ಣಿಗೇ ಮೀಸಲಾ ?? ಹೌದು ಜಗತ್ತಿನಾವ ಗಂಡಸೂ ಉತ್ತರಿಸಲಾರ...” ಪ್ರತಿಗಳಿಗೆಯೂ ಈ ಮಾತು ಮನದೊಳಗೆ ಅನುರಣನಗೊಳ್ಳುತ್ತಲೇ ಇದೇ....

ನನ್ನ ಕೈ ಸೇರಿದ ಪುಸ್ತಕ ಹಾಳು ವ್ಯವಹಾರದ ಚಿಂತೆ ಮರೆಸಿ ಒಂದೇ ಗುಕ್ಕಿನಲ್ಲಿ ಪೂರ್ಣ ಓದಿಸಿಕೊಂಡಿತು ... ಪ್ರತಿ ಹೆಣ್ಣಿನ ಕಥೆಯ ಕೊನೆಯಲ್ಲಿನ ಇತಿಶ್ರೀಗಳು ಮೈಯಲ್ಲಿ ಮುಳ್ಳೆಬ್ಬಿಸಿ ಕಂಬನಿಯ ಒರತೆ ಮರೆತ ಕಣ್ಣಂಚಲ್ಲಿ ಹನಿಗಳಾಗಿ ಉದುರಿದ್ದು ಸುಳ್ಳಲ್ಲ.....

ಕು.ಸ.ಮಧುಸೂದನ್ ನಾಯರ್ ರಂಗೇನಹಳ್ಳಿ 
ಮಧು ಮೇಷ್ಟ್ರು ( ನಂಗೊತ್ತಿಲ್ಲ ಇವರು ಯಾಕೆ ನಂಗೆ ಮೇಷ್ಟ್ರು ಅನ್ನಿಸ್ತಾರಂತ, ಮುಖಪುಟದಲ್ಲಿ ಪರಿಚಯವಾದಂದಿನಿಂದ ಹಾಗೇ ಅನ್ನಿಸ್ತಾರೆ) ಇದನ್ನು ಓದಿ ಇದರ ಬಗ್ಗೆ ಬರೆಯಿರಿ ಅಂತ ಅಪ್ಪಣೆ ಕೊಡಿಸಿದ್ದರು, ಬಹುಶಃ ಅಷ್ಟು ಯೋಗ್ಯ ಬರಹಗಾರಳೇನಲ್ಲ ಅವರ ಮೇಲಿನ ಅಭಿಮಾನವಷ್ಟೇ ಬರವಣಿಗೆಗೆ ಕಾರಣ... ಬಹುಶಃ ಶತಮಾನಗಳಿಂದಲೂ ನಿವಾರಿಸಲೆತ್ನಿಸುವ ಪ್ರಯತ್ನ ನೆಡೆಯುತ್ತಲೇ ಇದೆಯೆಂದುಕೊಂಡರೂ ರಕ್ತಬೀಜಾಸುರದಂತೆ ಹಬ್ಬುತ್ತಲೇ ಇರುವ ಸಾಮಾಜಿಕ ಪಿಡುಗಲ್ಲಿ ವೇಶ್ಯಾವಾಟಿಕೆಗೆ ಮೊದಲ ಸ್ಥಾನವೇನೋ ಎಂದು ಹೇಳಲು ವಿಷಾದವಾಗುತ್ತದೆ,

ಯತ್ರ ನಾರ್ಯಸ್ತು ಪೂಜ್ಯಂತೇ ಎಂದು ಹೇಳುವ ನೆಲದಲ್ಲೀ .. ಅನಾದಿ ಕಾಲದಿಂದಲೂ ವೀರ ಸುಸಂಸ್ಕೃತ ವಿದ್ಯಾವಂತ ಮಹಿಳೆಯರ ಆದರ್ಶ ನಾರಿಯರ ಉದಾಹರಣೆಗಳಿದ್ದೂ ಈ ಪಿಡುಗು ನಿವಾರಿಸಲಾರದ್ದು ವ್ಯವಸ್ಥೆಯ ಹೀನಾಯ ಸೋಲಾ ?? ನಿವಾರಿಸಲಿಚ್ಛಿಸದ ಪಾಖಂಡಿತನವಾ ??

ಹೆಣ್ಣಿಗೆ ಹೆಣ್ಣೇ ಶತೃವೆನ್ನೋದೂ ಒಂದು ಕಾರಣವಾ? ಅವಲಂಬನೆ ಅನಿವಾರ್ಯವೆಂದುಕೊಳ್ಳುವ ಹೆಣ್ಮಕ್ಕಳ ದೌರ್ಬಲ್ಯ ಕಾರಣವಾ? ಲೈ಼ಂಗಿಕತೆಯ ಬಗೆಗಿನ ಅಜ್ಞಾನ ಕಾರಣವಾ ? ಪ್ರಕೃತಿ ಸಹಜ ಕ್ರಿಯೆಯನ್ನ ಅದೊಂದು ಅಸಹಜ, ಅಪಚಾರ , ಅನೈತಿಕ ಕೃತ್ಯವೆನ್ನುವ಼ಂತೆ ಬಿಂಬಿಸಿರುವ ನಮ್ಮ ಅವೈಚಾರಿಕ ನಿಲುವುಗಳು ಕಾರಣವಾ ? ಅಂತೂ ಪರಿಸ್ಥಿತಿ ಸುಧಾರಿಸಿಲ್ಲ....

ಇದರಲ್ಲಿ ಅತ್ಯಂತ ಆಶ್ಚರ್ಯ ತರುವ ಮುಖ್ಯ ವಿಷಯಗಳೆ಼ಂದರೇ ಅಪರೋಕ್ಷವಾಗಿ ವೇಶ್ಯರಾಗಲು ಪ್ರೇರೇಪಿಸಿ ಅದರಿಂದಲೇ ಬದುಕು ಕಟ್ಟಿಕೊಂಡು ಅದಕ್ಕೆ ಕಾರಣರಾದವರನ್ನು ಅಸ್ಪ್ರುಶ್ಯರಂತೆ ಹೀನಾಯವಾಗಿ ಕಾಣುವ ಮನೆಮಂದಿ, ಇದಕಿಂದ ಬೇರೆ ವಿಷಾದವೇನಿದೆ ?

ನೋವು ನೀಡಿ ಸುಖ ಪಡೆದು ಅದರ ಶಿಕ್ಷೆ ಮಾತ್ರ ಸುಖಕೊಟ್ಟರಿಗೆ ಅಂದರೇ ಇದಕಿಂತ ವಿಪರ್ಯಾಸವೇನಿದೆ ?

ಇದಕಿಂತ ಬೇರೇನಾದರೂ ಮಾಡಬಹುದಿತ್ತು ಅಂತನ್ನುವವರು ಬೇರೆ ಅಂದರೇನೆನ್ನುವುದನ್ನು ಮೊದಲೂ ಕೊನೆಗೂ ಸೂಚಿಸುವುದಿಲ್ಲ, ಯಾರದಾದರೂ ಸಹಾಯ ಕೇಳಬಹುದಿತ್ತು ಎನ್ನುವರು ಕೂಡಾ ತಾವೇ ಆ ಸಹಾಯದ ಆರಂಭಿಕರಾಗಿ ಇಂಥದೊಂದು ದುರಂತ ತಡೆಯಲು ನಾಂದಿಯಾಗುವ ಸಾಹಸಕ್ಕೆಸಳುವುದಿಲ್ಲ,

ಇಂಥವರನ್ನು ಭೇಟಿಯಾಗಿ ವಿಷಯವನ್ನು ಪುಸ್ತಕ ರೂಪಕ್ಕಿಳಿಸುವ ಯೋಚನೆ ಮಧುಮೇಷ್ಟ್ರಂಥವರಿಗಲ್ಲದೇ ಇನ್ನಾರಿಗೆ ಬರಲು ಸಾಧ್ಯ? ಎದುರು ಕೂತು ಆ ದುರಂತಗಾಥೆಗಳ ಕೇಳಿ ಅರಗಿಸಿಕೊಂಡ ಗುಂಡಿಗೆಗೊಂದು ಶಹಭ್ಭಾಸ್ ಹೇಳಬೇಕನ್ಸತ್ತೆ, ಅದನ್ನು ಸರಳ ಸುಲಭ ಶೈಲಿಯಲ್ಲಿ ಎಲ್ಲರ ಅಂತರಂಗಕ್ಕಿಳಿಯುವಂತೆ ಬರೆದ ಕೈಗಳಿಗೆ ಹ್ಯಾಟ್ಸಾಫ್..

ಲಾಭಕ್ಕೆ಼ಂದೇ ಪ್ರಕಾಶನ ಸಂಸ್ಥೆ ಮಾಡಿ ಪ್ರಕಟಿಸುವವರ ನಡುವೆ ಕನಿಷ್ಠ ಅಸಲಿನ ಆಸೆಯೂ ಇಲ್ಲದೇ ಪ್ರಕಟಿಸಿದ ಪ್ರಕಾಶಕರು ಆನಂದಕೊರಟಿಯವರಿಗೆ ಆ ಎಲ್ಲ ಅಸಹಾಯ ಆತ್ಮಗಳ , ಹಾಗೂ ಅಂತಹ ಅದಕಿಂತ ವಿಭಿನ್ನ ಪರಿಸ್ಥಿತಿಗಳಲ್ಲಿರುವ ಹೆಣ್ಣುಗಳ ಪರವಾಗಿ ಧನ್ಯವಾದಗಳು....

ಪದ್ಮಜಾ ಜೋಯಿಸ್ 
ಪ್ರವಾಹದ ವಿರುದ್ಧ ಈಜ ಹೊರಟಿರುವ ಲೇಖಕರೂ ಪ್ರಕಾಶಕರೂ ಇದರ ಹಿಂದೆ ದುಡಿದ ಪ್ರತಿ ಕೈ-ಮನಸುಗಳಿಗೂ ನ್ಯಾಯ ಸಲ್ಲಬೇಕಾದರೇ """ಪುಸ್ತಕದ ಪ್ರತಿಗಳು""" ಮಾರಾಟವಾಗಬೇಕು... ವಯೋಮಾನ ಭೇಧವಿಲ್ಲದೇ ಪ್ರತೀ ಹೆಣ್ಣುಗಳು ಓದಲೇಬೇಕಾದಂತ ಪುಸ್ತಕ , ದಯಮಾಡಿ ಕೊಂಡು ಓದಿ. ಆಧುನಿಕತೆಗೆ ಮಾರುಹೋಗಿ ಶ್ರೀಮಂತ ಸ್ವೇಚ್ಛ ಬದುಕಿನ ತೆವಲಿಗೆ ಬಿದ್ದು ಇಂಥದನ್ನು ಮಾಡುವವರಿಂದಾಗಿ ಹೊಟ್ಟೆಪಾಡಿಗೆ ಮಾಡುವವರೂ ಕೀಳಾಗುತ್ತಾರೆ.. ಅಂಥವರಿಗೂ ಒಂದು ಪಾಠವಿಲ್ಲಿದೆ , ಇ಼಼ಂಥ ಕಾಯಿಲೆಗಳು ಅಮರಿಕೊಂಡರೇ ಕೊನೆಗೆ ಒಂಟಿತನವೇ ಅನಾಥತೆಯೇ ಕಟ್ಟಿಟ್ಟ ಬುತ್ತಿ , ನರಕವೆಂದರೇನೆಂದು ಬದುಕು ಸಾಬೀತು ಪಡಿಸೀತು ಎಚ್ಚರ.

ಇಡೀ ಪುಸ್ತಕದ ಮೊದಲ ಹೆಗ್ಗಳಿಕೆಯೆಂದರೆ ಪ್ರತಿಭಾರವರೇ ಹೇಳಿದಂತೆ,ಇಂತಹ ಕತೆಗಳಲ್ಲಿ ಸಹಜವಾಗಿಯೇ ನುಸುಳಿಬಿಡಬಹುದಾದ ಅಬ್ಬರವಾಗಲಿ, ಸೆಕ್ಸಿನ ವೈಭವೀಕರಣವಾಗಲಿ ಇರದೆ, ಕೆರಳಿಸುವ ಸನ್ನಿವೇಶಗಳನ್ನು ಸೃಷ್ಠಿಸದೆ ಬದುಕಿನ ಕ್ರೌರ್ಯವನ್ನು ತಣ್ಣಗಿನ ದ್ವನಿಯಲ್ಲಿ ಹೇಳುತ್ತಾ ಹೋಗಿರುವುದು. ಜೊತೆಗೆ ಆಪ್ತವಾಗಿ ಕತೆ ಹೇಳುವ ಶೈಲಿ ಮನಸೆಳೆಯುತ್ತದೆ.

ಮತ್ತೆ ಪ್ರತಿಭಾರವರೆ ಹೇಳಿರುವಂತೆ ಇಡೀ ಪುಸ್ತಕವನ್ನು ಓದುತ್ತ ಕೂತ ಅಷ್ಟೂ ಸಮಯವೂ ಒಂದು ಟ್ರಾನ್ಸ್ ನಲ್ಲಿದ್ದಂತ ಅನುಭವವಾಗುವುದು.


ಒಟ್ಟಿನಲ್ಲಿ ಇಂತಹ ಪುಸ್ತಕಗಳು ಹೆಚ್ಚು ಜನರಿಗೆ ತಲುಪಬೇಕು.
ಪುಸ್ತಕದ ವಿವರಗಳು
ಪುಸ್ತಕದ ಹೆಸರು- ಅಸಹಾಯಕ ಆತ್ಮಗಳು,
ಲೇಖಕರು- ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ.
ಪ್ರಕಾಶಕರು- ಆನಂದ ನಿಲಯ ಪ್ರಕಾಶನ, ನಂ-22/12 ಎಂ.ಜಿ.ಕೆ.ಮೂರ್ತಿ ಬಡಾವಣೆ, 6ನೇ ಮುಖ್ಯರಸ್ತೆ-ಚಾಮರಾಜಪೇಟೆ, ಬೆಂಗಳೂರು, ದೂ:9844406266
ಪುಟಗಳು- 176
ಬೆಲೆ-150=00 ರೂಪಾಯಿಗಳು

No comments:

Post a Comment