Feb 27, 2017

ಡೈರಿ-ಸಿ.ಡಿ.ಇತ್ಯಾದಿಗಳು ಮತ್ತು ರಾಜಕೀಯ ಪಕ್ಷಗಳ ಪಾರದರ್ಶಕತೆಯೂ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇಂಡಿಯಾದಂತಹ ಸಂಸದೀಯ ಪ್ರಜಾಪ್ರಭುತ್ವಕ್ಕೆ ರಾಜಕೀಯ ಪಕ್ಷಗಳೇ ಜೀವಾಳ. ಅದರಲ್ಲೂ ಬಹುಪಕ್ಷೀಯ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಿ ಮುಂದೆ ಸಾಗಲು ಸಿದ್ದಾಂತಗಳ ಮೂಲದಿಂದ ಹುಟ್ಟಿದ ಬಲಾಢ್ಯ ರಾಜಕೀಯ ಪಕ್ಷಗಳು ಅತ್ಯವಶ್ಯ. ಹಾಗೆ ಪಕ್ಷಗಳ ಸಂಖ್ಯಾದೃಷ್ಠಿಯಿಂದ ನೋಡಿದರೆ ನಾವು ಭಾರತೀಯರು ಶ್ರೀಮಂತರೇನೆ! ಯಾಕೆಂದರೆ ನಮ್ಮ ದೇಶದಲ್ಲಿ ಈಗ 7 ರಾಷ್ಟ್ರೀಯ ಪಕ್ಷಗಳು ಹಾಗು ಸುಮಾರು 48 ಮಾನ್ಯತೆ ಪಡೆಯಲ್ಪಟ್ಟ ಪ್ರಾದೇಶಿಕ ಪಕ್ಷಗಳು ಇವೆ, ಇನ್ನು ನೊಂದಾಯಿತವಾಗಿದ್ದರೂ ಮಾನ್ಯತೆ ಪಡೆಯದ ನೂರಕ್ಕೂ ಹೆಚ್ಚು ಪಕ್ಷಗಳಿವೆ. ಸಾವಿರಾರು ಜಾತಿ ಉಪಜಾತಿಗಳಿರುವನಮ್ಮಲ್ಲಿ ಮುಂದೊಂದು ದಿನ ಜಾತಿಗಳ ಸಂಖ್ಯೆಯನ್ನೂ ಮೀರಿ ಪಕ್ಷಗಳು ಸೃಷ್ಠಿಯಾದರೆ ಅಚ್ಚರಿ ಪಡಬೇಕಿಲ್ಲ. ಇವೆಲ್ಲ ಮಾತುಗಳನ್ನು ಈಗ ಹೇಳಲು ಕಾರಣ. ಕಳೆದೊಂದು ವಾರದಿಂದ ಕರ್ನಾಟಕದ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಠಿಸಿರುವ ಕಾಂಗ್ರೆಸ್ ಪರಿಷದ್ ಸದಸ್ಯರೊಬ್ಬರ ಡೈರಿ ಪ್ರಕರಣ. ಆದಾಯ ತೆರಿಗೆ ಇಲಾಖೆಯವರು ವಶಪಡಿಸಿಕೊಂಡಿದ್ದಾರೆಂದು ಹೇಳಲಾಗುತ್ತಿರುವ ಈ ಡೈರಿಯಲ್ಲಿ ಕಾಂಗ್ರೆಸ್ಸಿನ ಸಚಿವರುಗಳಿಂದ ಹಣ ಸಂಗ್ರಹಿಸಿ ಪಕ್ಷದ ಹೈಕಮ್ಯಾಂಡಿಗೆ ದೇಣಿಗೆ ನೀಡಿದ್ದಾರೆಂಬ ವಿವರಗಳು ಅದರಲ್ಲಿವೆಯೆಂದು ಬಾಜಪದ ರಾಜ್ಯಾದ್ಯಕ್ಷರಾದ ಶ್ರೀ ಯಡಿಯೂರಪ್ಪನವರು ಆರೋಪಿಸಿದ ಬೆನ್ನಲ್ಲೆ ಆಂಗ್ಲಬಾಷೆಯ ವಾಹಿನಿಯೊಂದು ಸದರಿ ಡೈರಿಯದು ಎನ್ನಲಾದ ಕೆಲವು ಪುಟಗಳನ್ನು ಪ್ರಕಟಿಸಿದೆ. ಇದೀಗ ಇದು ಬಾರಿ ವಿವಾದಕ್ಕೆ ಕಾರಣವಾಗಿದ್ದು, ಆರೋಪ ಪ್ರತ್ಯಾರೋಪಗಳು ಎಗ್ಗಿರದೆ ನಡೆಯುತ್ತಿವೆ. ಈ ಡೈರಿಯ ಸತ್ಯಾಸತ್ಯತೆಯನ್ನಾಗಲಿ, ಅದರಲ್ಲಿರುವ ಹೆಸರು ಮೊತ್ತಗಳ ಬಗ್ಗೆ ನಾನು ಮಾತನಾಡಲು ಇಲ್ಲಿ ಇಚ್ಚಿಸುವುದಿಲ್ಲ. ನನ್ನ ಕುತೂಹಲ ಮತ್ತು ವಿಷಾದ ಇರುವುದು ಈ ರಾಷ್ಟ್ರೀಯ ಪಕ್ಷಗಳು ತಮ್ಮತಮ್ಮ ಹೈಕಮ್ಯಾಂಡಿಗೆ ಪಕ್ಷವನ್ನು ನಡೆಸಲು ಮತ್ತು ಇತರೆ ರಾಜ್ಯಗಳ ಚುನಾವಣೆಗಳನ್ನು ನಡೆಸಲು ಹಣ ನೀಡುತ್ತಲೇ ಬಂದಿರುವ ಕೆಟ್ಟ ಸಂಪ್ರದಾಯದ ಬಗ್ಗೆ ಮಾತ್ರ. 
ಇವತ್ತು ಬಾಜಪದ ಮೇಲೆ ಕಾಂಗ್ರೆಸ್ ಕೂಡ ಅಂತಹುದೆ ಆಪಾದನೆಯನ್ನು ಮಾಡಿ ಸಿ.ಡಿ.ಒಂದನ್ನು ಬಿಡುಗಡೆ ಮಾಡಿದೆ. ಇವನ್ನೆಲ್ಲ ನೋಡಿದರೆ ಈ ರೀತಿ ಹೈಕಮ್ಯಾಂಡಿಗೆ ಹಣ ನೀಡುವುದು ಯಾವುದೇ ಪಕ್ಷಗಳ ಮಟ್ಟಿಗೂ ನಿಷಿದ್ದವೇನಲ್ಲ ಮತ್ತು ಹೊಸತಲ್ಲವೆಂದೂ ತಿಳಿಯುತ್ತಿದೆ. ಯಾಕೆ ಹೀಗೆ? ಎಂದರೆ ಉತ್ತರ ನಮ್ಮ ರಾಜಕೀಯ ಪಕ್ಷಗಳ ನಿಧಿ ಸಂಗ್ರಹಣೆ ಮತ್ತು ಖಚರ್ುವೆಚ್ಚಗಳ ವಿಷಯದಲ್ಲಿ ಪಾರದರ್ಶಕತೆ ಇಲ್ಲದೆ ಇರುವುದೇ ಆಗಿದೆ. ಯಾಕೆಂದರೆ ಪಕ್ಷಗಳು ಸಾರ್ವಜನಿಕರಿಂದಾಗಲಿ ಉದ್ಯಮಿಗಳಿಂದಾಗಲಿ ಸಂಗ್ರಹಿಸುವ ಪಕ್ಷದ ನಿಧಿಯ ವಿಚಾರದಲ್ಲಿ ಮೊದಲಿಂದಲೂ ರಹಸ್ಯ ಕಾಪಾಡುತ್ತಲೇ ಬಂದಿವೆ. ಇಂದಿಗೂ ನಮ್ಮ ರಾಜಕೀಯ ಪಕ್ಷಗಳು ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಗೆ ಸೇರದೇ ಇರುವುದೇ ಈ ಎಲ್ಲ ಸಮಸ್ಯೆಗಳ ಮೂಲ ಎಂದರೆ ತಪ್ಪಾಗಲಾರದು. ಮಾಹಿತಿ ಹಕ್ಕು ಕಾನೂನನ್ನು ಜಾರಿಗೆ ತಂದ ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರಕಾರವಾಗಲಿ, ಇವತ್ತು ಆಡಳಿತ ನಡೆಸುತ್ತಿರುವ ಬಾಜಪ ನೇತೃತ್ವದ ಎನ್.ಡಿ.ಎ. ಆಗಲಿ ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ತರಲು ಯಾವ ಆಸಕ್ತಿಯನ್ನೂ, ಅವಸರವನ್ನು ತೋರಿಸುತ್ತಿಲ್ಲ. ಇದು ನಮ್ಮ ರಾಜಕೀಯ ಪಕ್ಷಗಳ ಮನೋಬಾವವನ್ನು ತೋರಿಸುತ್ತದೆ. ರಾಷ್ಟ್ರವನ್ನು ಭ್ರಷ್ಟಾಚಾರ ಮುಕ್ತವನ್ನಾಗಿ ಮಾಡಲು ಹೊರಟಂತೆ ಮಾತಾಡುವ ಪಕ್ಷಗಳು ತಮ್ಮ ಪಕ್ಷದೊಳಗಿನ ವ್ಯವಸ್ಥೆಯನ್ನು ಸುದಾರಿಸುವ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ.

ಈ ಹಿಂದೆ ಕೇಂದ್ರ ಮಾಹಿತಿ ಆಯೋಗವು ರಾಜಕೀಯ ಪಕ್ಷಗಳು ಸಾರ್ವಜನಿಕ ಹಿತಾಸಕ್ತಿಯ ಸಂಸ್ಥೆಗಳಾಗಿದ್ದು ಮತ್ತು ಸಾರ್ವಜನಿಕರು ಪ್ರತಿನಿಧಿಸುವ ಸಂಸ್ಥೆಗಳಾಗಿರುವುದರಿಂದ ಅವು ಸಹ ಮಾಹಿತಿ ಹಕ್ಕು ಕಾಯಿದೆ ಅಡಿ ಬರುತ್ತವೆ ಎಂದು ಹೇಳಿತ್ತು. ಆದರೆ ಯಾವುದೇ ರಾಜಕೀಯ ಪಕ್ಷಗಳೂ ಆಯೋಗದ ಮಾತುಗಳಿಗೆ ಸೊಪ್ಪು ಹಾಕಲಿಲ್ಲ. ಅದಕ್ಕೆ ತಕ್ಕಂತೆ ಯು.ಪಿ.ಎ.ಸರಕಾರ ಮಾಹಿತಿ ಹಕ್ಕು ಕಾಯಿದೆಯನ್ನೇ ತಿದ್ದುಪಡಿಗೆ ಒಳಪಡಿಸಿತು. ಇವತ್ತು ರಾಜಕೀಯ ಪಾರದರ್ಶಕತೆಯ ಬಗ್ಗೆ ಮಾತನಾಡುವ ಬಾಜಪ ಅವತ್ತು ಅದನ್ನು ವಿರೋಧಿಸಲೇ ಇಲ್ಲ.

ಪ್ರತಿ ವರ್ಷ ಬಹುತೇಕ ರಾಜಕೀಯಪಕ್ಷಗಳಿಗೆ ಕಾರ್ಪೋರೇಟ್ ಕಂಪನಿಗಳು ಮತ್ತು ಉದ್ಯಮಿಗಳು, ವ್ಯಾಪಾರಸ್ಥರು ಕೋಟ್ಯಾಂತರ ರೂಪಾಯಿ ದೇಣಿಗೆಗಳನ್ನು ನೀಡುತ್ತಿದ್ದು, ಅದನ್ನು ಪಡೆಯುವ ಪಕ್ಷಗಳು ಯಾವುದೇ ಅಧಿಕೃತ ಲೆಕ್ಕಪತ್ರಗಳ ದಾಖಲೆಯನ್ನು ಇಟ್ಟಿರುವುದಿಲ್ಲ. ರಾಜಕೀಯ ಪಕ್ಷವೊಂದು ತನ್ನ ಕಚೇರಿಯನ್ನು ನಡೆಸಲು, ಅದರ ರಾಷ್ಟ್ರೀಯ ನಾಯಕರುಗಳು ದೇಶದಾದ್ಯಂತ ವಿಮಾನದಲ್ಲಿ ಪ್ರಯಾಣಿಸಲು, ಆಗಾಗ ಹಲವು ತೆರನಾದ ರ್ಯಾಲಿಗಳನ್ನು ಸಂಘಟಿಸಲು ಇಂತಹ ಹಣವನ್ನೇ ನಂಬಿಕೊಂಡಿರುತ್ತವೆ. ಅದೇರೀತಿ ಚುನಾವಣಾ ಸಮಯದಲ್ಲಿ ಅಭ್ಯರ್ಥಿಗಳ ಗೆಲುವಿಗೆ ಖರ್ಚುಮಾಡಲು, ಚುನಾವಣಾ ಸಮಾವೇಶಗಳನ್ನು ಆಯೋಜಿಸಲು ರಾಜಕೀಯ ಪಕ್ಷಗಳು ಕೋಟ್ಯಾಂತರ ರೂಪಾಯಿಗಳನ್ನು ಇವತ್ತಿಗೂ ಖರ್ಚು ಮಾಡುತ್ತಿವೆ. ಈ ಹಣ ತಮಗೆ ಎಲ್ಲಿಂದ ಬರುತ್ತದೆಯೆಂಬ ಸತ್ಯವನ್ನು ಯಾವ ಪಕ್ಷಗಳೂ ಹೇಳುವುದಿಲ್ಲ. ಕೇವಲ ದೇಣಿಗೆಗಳಿಂದ ಮಾತ್ರ ಈ ಹಣ ಸಂಗ್ರಹವಾಗುವುದಿಲ್ಲ. ಬದಲಿಗೆ ಬೃಹತ್ ಕಾಮಗಾರಿಗಳನ್ನು ಪಡೆಯುವ ಗುತ್ತಿಗೆದಾರರು ಸಹ ಈ ಹಣ ನೀಡುತ್ತಾರೆ.

ತಮಾಷೆ ನೋಡಿ: ಒಂದು ಕಡೆ ರಾಜಕೀಯ ಪಕ್ಷಗಳು ತಮ್ಮ ನಿಧಿಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದಿಲ್ಲ. ಇನ್ನೊಂದು ಕಡೆ ಪಕ್ಷಗಳಿಗೆ ಹಣ ನೀಡುವ ಖಾಸಗಿ ಸಂಸ್ಥೆಗಳು ಸಹ ಮಾಹಿತಿಹಕ್ಕು ಕಾಯಿದೆಯವ್ಯಾಪ್ತಿಗೆ ಬರದೇ ಇರುವುದರಿಂದ ಅವೂ ಸಹ ಹಣ ನೀಡಿಕೆಯ ಬಗ್ಗೆ ಮಾಹಿತಿ ನೀಡುವುದಿಲ್ಲ. ಅಲ್ಲಿಗೆ ಎಲ್ಲವೂ ಗುಪ್ತ್ ಗುಪ್ತ್ ಕಾರ್ಯಾಚರಣೆ. ಇವತ್ತಿನವರೆಗು ಒಂದೇ ಒಂದು ರಾಜಕೀಯ ಪಕ್ಷವೂ ತಾನು ಸಂಗ್ರಹಿಸಿದ ಮತ್ತು ಖರ್ಚು ಮಾಡಿದ ಹಣದ ಬಗ್ಗೆ ಮಾತನಾಡಿದ್ದು ಇಂಡಿಯಾದ ರಾಜಕೀಯ ಇತಹಾಸದಲ್ಲಿಯೇ ಇಲ್ಲ. 

ಎಲ್ಲಿಯವರೆಗು ರಾಜಕೀಯಪಕ್ಷಗಳ ಆರ್ಥಿಕ ವ್ಯವಹಾರಗಳಲ್ಲಿ ಪಾರದರ್ಶಕತೆ ಬರುವುದಿಲ್ಲವೊ ಅಲ್ಲಿಯವರೆಗು ರಾಜಕೀಯ ಪಕ್ಷಗಳು ಕಾನೂನು ಬಾಹಿರವಾಗಿ ಇಂತಹ ಹಣಕಾಸು ವಹಿವಾಟುಗಳನ್ನು ನಡೆಸುತ್ತಲೇ ಇರುತ್ತವೆ.

ಇವತ್ತು ಕಾಂಗ್ರೆಸ್ಸಿನ ಹೈಕಮ್ಯಾಂಡಿಗೆ ದೇಣಿಗೆ ನೀಡಿದ ವಿಚಾರದ ಬಗ್ಗೆ ಬೊಬ್ಬಿರಿಯುತ್ತಿರುವ ಬಾಜಪ ಒಮ್ಮೆ ಹತ್ತು ವರ್ಷಗಳ ಹಿಂದಕ್ಕೆ ತಿರುಗಿ ನೋಡಲಿ. 2006ರಿಂದ ನಡೆಸಲು ಶುರು ಮಾಡಿದ ಆಪರೇಶನ್ ಕಮಲಕ್ಕೆ ಬೇಕಾಗಿದ್ದ ಕೋಟ್ಯಾಂತರ ರೂಪಾಯಿಗಳನ್ನು ಅದು ತಂದದ್ದು ಎಲ್ಲಿಂದ? ನಾನು ಬಾಜಪವನ್ನು ದೂರುವುದರ ಮೂಲಕ ಕಾಂಗ್ರೆಸ್ಸಿನ ಕ್ರಮವನ್ನು ಸಮರ್ಥಿಸಲು ಹೊರಟಿಲ್ಲ. ಬದಲಿಗೆ ಹೇಗೆ ಎರಡೂ ಪಕ್ಷಗಳು ಈ ಹಣಕಾಸಿನ ವಿಷಯದಲ್ಲಿ ಸಮಾನ ಅಪರಾಧಿಗಳು ಎಂಬುದನ್ನು ಮಾತ್ರ ಹೇಳಲು ಪ್ರಯತ್ನಿಸಿದ್ದೇನೆ.

ಕಪ್ಪುಹಣದ ಬಗ್ಗೆ, ಅದರ ಮೂಲೋತ್ಪಾಟನೆಯ ಬಗ್ಗೆ ಮಾತಾಡುವ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳೇ ನಿಜವಾದ ಕಪ್ಪುಹಣದ ಸೃಷ್ಠಿಗೆ ಕಾರಣಕರ್ತರುಗಳು. ಸಾರ್ವಜನಿಕರಿಗೆ ರಾಜಕೀಯ ಪಕ್ಷಗಳ ಬಗ್ಗೆ ನಂಬಿಕೆ ಬರಬೇಕಾದರೆ ಮೊದಲು ಪಕ್ಷಗಳು ತಮ್ಮನ್ನು ಪಾರದರ್ಶಕವಾಗಿಸಿಕೊಳ್ಳಲು ಪ್ರಯತ್ನಿಸಬೇಕು. ಅದಕ್ಕಿರುವ ಏಕೈಕ ಮಾರ್ಗವೆಂದರೆ ತಮ್ಮನ್ನೂ ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ತಂದುಕೊಂಡು ಜನತೆಯಲ್ಲಿ ವ್ಯವಸ್ಥೆಯ ಬಗ್ಗೆ ವಿಶ್ವಾಸ ಮೂಡಿಸಬೇಕು. ಈ ಕಾರ್ಯ ಆಗುವತನಕ ಜನತೆ ಕಾಂಗ್ರೆಸ್, ಬಾಜಪ ಮಾತ್ರವಲ್ಲ, ಯಾವುದೇ ರಾಜಕೀಯ ಪಕ್ಷಗಳನ್ನೂ ನಂಬುವುದಿಲ್ಲ. 

No comments:

Post a Comment