Jan 11, 2017

ಡಿ.ಎಂ.ಕೆ.ಯ ಅರವತ್ಮೂರರ ಯುವನಾಯಕ ಸ್ಟಾಲಿನ್

ಸ್ಟಾಲಿನ್ ಮತ್ತು ಕರುಣಾನಿಧಿ (ಸಾಂದರ್ಭಿಕ ಚಿತ್ರ)
ಕು.ಸ.ಮಧುಸೂದನ ರಂಗೇನಹಳ್ಳಿ
ಅಂತೂ ಕೊನೆಗೂ ಕರುಣಾನಿದಿಯವರ ಪುತ್ರರೂ ಡಿ.ಎಂ.ಕೆ.ಪಕ್ಷದ ಯುವ ನಾಯಕರೂ ಆದ ಶ್ರೀ ಸ್ಟಾಲಿನ್ ಅವರಿಗೆ ಪಕ್ಷದ ಕಾರ್ಯಾದ್ಯಕ್ಷ ಹುದ್ದೆ ಲಬಿಸಿದೆ. ಈ ಹುದ್ದೆಗೆ ನಿಜಕ್ಕೂ ಅರ್ಹರಾಗಿದ್ದ ಸ್ಟಾಲಿನ್ ಅವರಿಗೆ ಈ ಹುದ್ದೆ ಸಿಕ್ಕಿರುವುದು ಅವರ 63ನೇ ವಯಸ್ಸಿನಲ್ಲಿ ಎನ್ನುವುದೇ ವಿಷಾದದ ಸಂಗತಿಯಾಗಿದೆ. 1977ರ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಸ್ಟಾಲಿನ್ ಎಂಭತ್ತರ ದಶಕದ ಉತ್ತರಾರ್ದದಲ್ಲಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡ ಸ್ಟಾಲಿನ್ ಅವರದು ಪಕ್ಷದ ಅದ್ಯಕ್ಷರಾಗುವ ತನಕದ ಹಾದಿ ಬಹಳ ಕಠಿಣವಾದದ್ದೇನು ಅಲ್ಲದಿದ್ದರೂ ಬಹಳ ಸಹನೆ ಬಯಸುವಂತಹದ್ದಾಗಿತ್ತು ಎನ್ನುವುದೇ ವಿಶೇಷ! ಇದಕ್ಕೆ ಕಾರಣ ಇಂಡಿಯಾದ ರಾಜಕಾರಣಿಗಳ ಪಟ್ಟಭದ್ರ ಮನಸ್ಥಿತಿ ಮತ್ತು ಪಾಳೇಗಾರಿಕೆಯ ನಡವಳಿಕೆಗಳೇ ಕಾರಣವೆಂದರೆ ತಪ್ಪಾಗಲಾರದು.
ಇಂಡಿಯಾದ ರಾಜಕಾರಣದಲ್ಲಿ ಬದಲಾವಣೆ ಎನ್ನುವುದು ಅಷ್ಟು ಸುಲಭಕ್ಕೆ ಒಲಿದು ಬರುವಂತದ್ದಲ್ಲ. ರಾಜಕಾರಣಿಗಳಿಗೆ ನಿವೃತ್ತಿಯ ವಯಸ್ಸೆಂಬುದು ಇಲ್ಲದಿರುವುದೇ ಈ ಬದಲಾವಣೆಯ ಪ್ರಕ್ರಿಯೆಗೆ ತಡೆಯಾಗುತ್ತಲಿದೆ. ಮತದಾನದ ವಯಸ್ಸನ್ನು ಕಡಿಮೆ ಮಾಡಿ ವರುಷಗಳೇ ಕಳೆದರೂ ರಾಜಕಾರಣಿಗಳು ಅದೇ ಹಳೆಯ ವಯೋವೃದ್ದರೇ ಆಗಿರುವುದು ಈ ನಾಡಿನ ದುರಂತ. ಕುಟುಂಬ ರಾಜಕಾರಣದಲ್ಲಿ ನಿರತವಾದ ಪಕ್ಷಗಳಲ್ಲಿ ಮಾತ್ರ ಉತ್ತರಾಧಿಕಾರಿಯ ಹೆಸರಲ್ಲಿ ತಮ್ಮದೆ ಕುಟುಂಬದ ಯುವ ಕುಡಿಗಳನ್ನು ರಾಜಕೀಯಕ್ಕೆ ಪರಿಚಯಿಸುವುದರ ಹೊರತು ಇತರೆ ಪಕ್ಷಗಳು ಯುವಪೀಳಿಗೆಗಳಿಗೆ ರಾಜಕೀಯ ಅಧಿಕಾರ ನೀಡುವಲ್ಲಿ ಹಿಂದೆ ಬಿದ್ದಿದೆ. ಹೀಗೆ ಕೌಟುಂಬಿಕ ರಾಜಕಾರಣದ ಹಿನ್ನೆಲೆಯಲ್ಲಿ ಯುವ ಪೀಳಿಗೆಗೆ ಅಧಿಕಾರ ಹಸ್ತಾಂತರಿಸಿದ ಒಂದೆರಡು ಸನ್ನಿವೇಶಗಳ ಬಗ್ಗೆ ನಾವೀಗ ನೋಡೋಣ.

2012ರಲ್ಲಿ ಉತ್ತರಪ್ರದೇಶದ ವಿದಾನಸಭೆಗಳನ್ನು ಎದುರಿಸಿದ ಸಮಾಜವಾದಿ ಪಕ್ಷದ ಮುಲಾಯಂಸಿಂಗ್ ಯಾದವ್ ಹೊಸ ಪೀಳಿಗೆಯನ್ನು ಅರ್ಥಮಾಡಿಕೊಂಡಂತೆ, ತಮ್ಮ ಪುತ್ರ ಅಖಿಲೇಶ್ ಯಾದವರನ್ನು ಪಕ್ಷದ ಮುಂಚೂಣಿಗೆ ತಂದು ಯಶಸ್ವಿಯಾಗಿದ್ದರು. ಆಡಳಿತ ನಡೆಸುತ್ತಿದ್ದ ಬಹುಜನ ಪಕ್ಷಕ್ಕೆ ಆಡಳಿತ ವಿರೋಧಿ ಅಲೆ ಇದ್ದರೂ ಸಮಾಜವಾದಿ ಪಕ್ಷಕ್ಕೆ ಸ್ಪಷ್ಟ ಬಹುಮತ ಬರುವುದು ಕಷ್ಟವಾಗಿತ್ತು. ಇಂತಹ ಸಮಯದಲ್ಲಿ ರಾಜಕೀಯ ಅಖಾಡಕ್ಕಿಳಿದ ಅಖಿಲೇಶ್ ರಾಜ್ಯದ ಯುವಜನತೆಯ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಒಟ್ಟು ಮತದಾರರಲ್ಲಿ ಶೇಕಡಾ ಐವತ್ತಕ್ಕು ಹೆಚ್ಚಿರುವ ಯುವ ಮತದಾರರಿಗೆ ಹಿರಿಯರಾದ ಮುಲಾಯಂಸಿಂಗ್ ಅವರಿಗಿಂತ ತಮ್ಮದೇ ಓರಗೆಯ ಅಖಿಲೇಶ್ ಪ್ರಿಯವಾದದ್ದರಲ್ಲಿ ಅಚ್ಚರಿಯೇನಲ್ಲ.ಅಖಿಲೇಶ್ ಪಕ್ಷದೊಳಗೆ ಪ್ರವೇಶಿಸಿದ ಕೂಡಲೆ ಆ ಪಕ್ಷದ ಪ್ರಚಾರದ ವೈಖರಿ ಹಾಗು ಪ್ರಣಾಳಿಕೆಗಳ ಆದ್ಯತೆಗಳೆ ಬದಲಾಗಿಬಿಟ್ಟವು. ಅದುವರೆಗು ಕಂಪ್ಯೂಟರ್ ಅನ್ನು ವಿರೋಧಿಸುತ್ತಿದ್ದ ಮುಲಾಯಂರು ಅಖಿಲೇಶರ ಒತ್ತಡಕ್ಕೆ ಮಣಿದು ವಿದ್ಯಾವಂತ ಯುವಕರಿಗೆ ಲ್ಯಾಪ್ ಟಾಪ್ ನೀಡುವ ಯೋಜನೆಯನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಬೇಕಾಯಿತು. ಈ ದಿಸೆಯಲ್ಲಿ ಯುವಜನತೆಯನ್ನು ಆಕರ್ಷಿಸಿದ ಅಖಿಲೇಶ್ ತಮ್ಮ ಸಮಾಜವಾದಿ ಪಕ್ಷಕ್ಕೆ ಸ್ಪಷ್ಟ ಬಹುಮತ ತಂದುಕೊಡುವಲ್ಲಿ ಯಶಸ್ವಿಯಾದರು. ಸಾರ್ವಜನಿಕರ ಇಚ್ಚೆಯಂತೆ ಮುಲಾಯಮರು ತಾವು ಪಕ್ಷದ ರಾಷ್ಟ್ರೀಯ ಅದ್ಯಕ್ಷರಾಗಿ ಉಳಿದು ಅಖಿಲೇಶರನ್ನು ಮುಖ್ಯ ಮಂತ್ರಿಯನ್ನಾಗಿ ಮಾಡಿದರು.

ಇನ್ನು ಒಡಿಸ್ಸಾದಲ್ಲಿ ಬಿಜು ಜನತಾದಳದ ನಾಯಕರಾದ ಶ್ರೀ ಬಿಜು ಪಟ್ನಾಯಕ್ ನಿದನರಾದ ನಂತರ ಅವರ ಪುತ್ರ ಶ್ರೀ ನವೀನ್ ಪಟ್ರಾಯಕ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಇನ್ನು ಕರ್ನಾಟಕದ ವಿಚಾರಕ್ಕೆ ಬಂದರೆ ಜಾತ್ಯಾತೀತ ಜನತಾದಳದ ದೇವೇಗೌಡರು ತಮ್ಮ ಪುತ್ರರನ್ನು ರಾಜಕೀಯಕ್ಕೆ ಹಿಂದೆಯೇ ಪರಿಚಯಿಸಿದ್ದರೂ, ಪಕ್ಷದ ನಾಯಕತ್ವದ ಜವಾಬ್ದಾರಿಯನ್ನು ನೀಡಿರಲಿಲ್ಲ. ಆದರೆ ಅವರ ಪುತ್ರ ಶ್ರೀ ಹೆಚ್,ಡಿ. ಕುಮಾರಸ್ವಾಮಿಯವರು 2006ರಲ್ಲಿ ತಂದೆಯವರಿಗೆ ಸೂಚನೆ ನೀಡದೆಯೇ ಬಾಜಪದೊಂದಿಗೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾಗಿ ಪಕ್ಷದ ನಾಯಕತ್ವವನ್ನು ತಾವೇ ತೆಗೆದುಕೊಂಡರು. ಇದೇ ರೀತಿ ಬಾಳಾ ಠಾಕ್ರೆಯ ನಂತರ ಅವರ ಮಗ ಉದ್ಬವ್ ಠಾಕ್ರೆ ಶಿವಸೇನೆಯ ನಾಯಕತ್ವ ವಹಿಸಿಕೊಂಡಿದ್ದರು. ರಾಷ್ಟ್ರೀಯ ಪಕ್ಷವಾದ ಕಾಂಗ್ರೇಸ್ಸಿನಲ್ಲಿ ರಾಹುಲ್ ಗಾಂದಿಯವರಿಗೆ ಉಪಾದ್ಯಕ್ಷ ಸ್ಥಾನ ನೀಡಲಾಗಿದ್ದರೂ ಪಕ್ಷದ ಜವಾಬ್ದಾರಿಗಳನ್ನಾಗಲಿ, ಅಧಿಕಾರದಲ್ಲಿದ್ದಾಗ ಸಚಿವ ಸ್ಥಾನದಂತಹ ಹೊಣೆಗಾರಿಕೆಗಳನ್ನು ಒಪ್ಪಿಕೊಳ್ಳಲು ಸ್ವತ: ಅವರೇ ಹಿಂಜರಿಯುತ್ತಿರುವಂತೆ ಕಾಣುತ್ತಿದೆ. ಹೀಗೆ ಇಂಡಿಯಾದ ಯಾವುದೇ ಪಕ್ಷದ, ಯಾವುದೆ ರಾಜಕಾರಣಿಯೂ ತಾವಾಗಿ ಯುವಕರಿಗೆ ಪಕ್ಷದ ನಾಯಕತ್ವ ವಹಿಸಿಕೊಟ್ಟ ಉದಾಹರಣೆಗಳುಕಂಡು ಬರುವುದು ವಿರಳ.

ಈ ಹಿನ್ನೆಲೆಯಲ್ಲಿ ನೋಡಿದರೆ ಕರುಣಾ ನಿದಿಯವರು ಸ್ಟಾಲಿನ್ ಅವರಿಗೆ ಪಕ್ಷದ ನಾಯಕತ್ವ ವಹಿಸಿಕೊಡಲು ಸಾಕಷ್ಟು ವಿಳಂಬ ಮಾಡಿದ್ದಂತು ನಿಜ. ಇದಕ್ಕೆ ಅವರದೇ ಆದ ಕೆಲ ಕೌಟುಂಬಿಕ ಕಾರಣಗಳೂ ಇವೆ. ಅವರ ಇನ್ನೊಬ್ಬ ಪುತ್ರ ಅಳಗಿರಿಯವರದು ಯಾವಾಗಲು ಹಠಮಾರಿ ಧೋರಣೆ. ಹೀಗಾಗಿ ಅವರನ್ನು ಮೊದಲಿಗೆ ಕೇಂದ್ರ ಸಚಿವರನ್ನಾಗಿಸಲಾಯಿತು.ಮತ್ತು ತಮಿಳುನಾಡಿನ ದಕ್ಷಿಣ ಪ್ರಾಂತ್ಯದ ಪಕ್ಷದ ಉಸ್ತುವರಿಯನ್ನೂ ನೀಡಲಾಯಿತು. ಆದರೆ ಅವರು ಆ ಎರಡರಲ್ಲೂ ವಿಫಲರಾದರು. ಇಷ್ಟಾದರು ಅವರು ಸ್ಟಾಲಿನ್ ಕೈಗೆ ಪಕ್ಷ ನೀಡುವ ಬಗ್ಗೆ ನಿರಂತರ ವಿರೋಧ ವ್ಯಕ್ತಪಡಿಸುತ್ತಲೇ ಬಂದರು.. ಈ ಜಗಳಗಳಿಂದಾಗಿ ಕರುಣಾ ನಿದಿಯವರು ಅವರನ್ನು ಪಕ್ಷದಿಂದಲೇ ಉಚ್ಚಾಟಿಸಲೇಬೇಕಾದ ಸನ್ನಿವೇಶವೂ ನಿಮಾಣವಾಯಿತು. ಆದರೂ ತಮ್ಮ ಕುಟುಂಬದ ಶಾಂತಿಗೆ ಭಂಗ ಬರಬಹುದೆಂಬ ಕಾರಣದಿಂದ ಸ್ಟಾಲಿನ್ನರಿಗೆ ನಾಯಕತ್ವ ನೀಡಲೇ ಇಲ್ಲ. 1989ರಿಂದ ನಾಲ್ಕುಬಾರಿ ಶಾಸಕರಾಗಿ ಕಾರ್ಯ ನಿರ್ವಹಿಸಿದರೂ ಸ್ಟಾಲಿನ್ ಅವರಿಗೆ ಸಚಿವ ಪದವಿ ಒಲಿದುಬರಲೇ ಇಲ್ಲ. ಈ ನಡುವೆ 1996 ರಲ್ಲಿ ಚೆನ್ನೈನ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆದು ನೇರವಾಗಿ ಆಯ್ಕೆಯಾದರು. ನಂತರ 2001ರಲ್ಲಿ ಪುನರ್ ಆಯ್ಕೆಯಾದರು ಸಹ ಜಯಲಲಿತಾರವರು ಜಾರಿಗೆ ತಂದ ಒಬ್ಬರಿಗೆ ಒಂದೇ ಸ್ಥಾನ ಕಾಯಿದೆಯಿಂದ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು.

ಆದರೆ 2015ರಲ್ಲಿ ನಡೆದ ವಿದಾನಸಭಾ ಚುನಾವಣೆಯ ವೇಳೆ ಕರುಣಾನಿದಿಯವರು ಅನಾರೋಗ್ಯದಿಂದ ಬಳಲುತ್ತಿದ್ದದರಿಂದ ಸ್ಟಾಲಿನ್ ಅವರೆ ಪಕ್ಷದ ಪ್ರಚಾರದ ಉಸ್ತುವಾರಿಯನ್ನು ನೋಡಿಕೊಳ್ಳಬೇಕಾಯಿತು. ಒಂದು ಮಟ್ಟಿಗೆ ಅವರು ಅದರಲ್ಲಿ ಯಶಸ್ವಿಯೂ ಆದರು. ಗೆದ್ದು ಅಧಿಕಾರ ಹಿಡಿಯಲು ವಿಫಲರಾದರುಸಹ ತಮಿಳುನಾಡಿನ ಇತಿಹಾಸದಲ್ಲಿ ಮೊದಲ ಬಾರಿಗೆ ಅತಿ ಹೆಚ್ಚು ಸ್ಥಾನಗಳನ್ನು ವಿರೋಧ ಪಕ್ಷವೊಂದು ಗೆದ್ದುಕೊಳ್ಳುವಂತೆ ಮಾಡಿದ್ದರಲ್ಲಿ ಸ್ಟಾಲಿನ್ನರ ಚತುರತೆ ಇತ್ತು. ಬಹುಶ: ಕರುಣಾ ನಿದಿಯವರು ಆ ಚುನಾವಣೆಯಲ್ಲಿ ಮಾಡಿದ ತಪ್ಪೆಂದರೆ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಸ್ಟಾಲಿನ್ ಅವರನ್ನು ಬಿಂಬಿಸದೆ ಹೋದದ್ದು. ಯಾಕೆಂದರೆ ಗೆದ್ದರೆ ಮತ್ತೆ ಕರುಣಾ ನಿದಿಯವರೆ ಮುಖ್ಯಮಂತ್ರಿಯಾಗುತ್ತಾರೆಂಬ ಬಾವನೆ ಯುವ ಪೀಳಿಗೆಯಲ್ಲಿ ಮೂಡಿ ಅವರು ಅವರಿಗಿಂತ ಕಿರಿಯರಾದ ಜಯಲಲಿತಾ ಅವರಿಗೆ ಬೆಂಬಲ ನೀಡಿದ್ದರು. ಅಕಸ್ಮಾತ್ ಸದರಿ ಚುನಾವಣೆಯಲ್ಲಿ ಸ್ಟಾಲಿನ್ ಮುಂದಿನ ಮುಖ್ಯಮಂತ್ರಿಯೆಂದು ಬಿಂಬಿಸಿ ಪ್ರಚಾರ ಮಾಡಿದ್ದರೆ ಡಿ.ಎಂ.ಕೆ .ಇನ್ನಷ್ಟು ಸ್ಥಾನಗಳನ್ನು ಗೆಲ್ಲುತ್ತಿತ್ತು, ಒಟ್ಟಿನಲ್ಲಿ ಎ.ಐ.ಎ.ಡಿ.ಎಂ.ಕೆ.ಇಷ್ಟು ಸುಲಭವಾಗಿ ಮತ್ತೆ ಅಧಿಕಾರ ಹಿಡಿಯಲು ಸಾದ್ಯವಾಗುತ್ತಿರಲಿಲ್ಲ.

ಇರಲಿ. ತಡವಾಗಿಯಾದರು ಸ್ಟಾಲಿನ್ ಅವರಿಗೆ ಪಕ್ಷದ ನಾಯಕತ್ವ ದೊರಕಿದೆ. ಕರುಣಾ ನಿದಿಯವರಂತೆ ಅವರಿಗೆ ಸಿನಿಮಾ ಹಿನ್ನೆಲೆಯಾಗಲಿ, ಅಪ್ರತಿಮ ಮಾತುಗಾರಿಕೆಯಾಗಲಿ ಇಲ್ಲವೆಂಬುದು,ನಿಜ. ಆದರೆ ಯುವಜನತೆ ಅವರ ಹಿಂದಿದ್ದಾರೆ. ತೀರಾ ಅವರ ಸಹೋದರ ಅಳಗಿರಿಯಂತೆ ಹೆಸರು ಕೆಡಿಸಿಕೊಂಡವರಲ್ಲ ಹಾಗು ತಂದೆ ಕರುಣಾನಿದಿಯವರಂತೆ ದ್ವೇಷದ ರಾಜಕೀಯವನ್ನು ಅವರು ಮಾಡಿಲ್ಲ. ಇದಕ್ಕೆ ಉತ್ತಮ ನಿದರ್ಶನವೆಂದರೆ ಇತ್ತೀಚೆಗೆ ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾದ ಮೇಲೆ ಸ್ವತ: ಸ್ಟಾಲಿನ್ ಅವರ ಕಚೇರಿಗೆ ಹೋಗಿ ಅಬಿನಂದನೆ ಸಲ್ಲಿಸಿಬಂದಿದ್ದಾರೆ. ಜೊತೆಗೆ ಎ.ಐ.ಎ.ಡಿ.ಎಂ.ಕೆ.ಪಕ್ಷದ ಕಾರ್ಯದರ್ಶಿಯಾಗಿ ಆಯ್ಕೆಯಾದ ಶಶಿಕಲಾ ಅವರಿಗು ಅಬಿನಂದನೆಗಳನ್ನು ಸಲ್ಲಿಸಿದ್ದಾರೆ. ಬಹುಶ: ಕಳೆದ ಮೂರೂವರೆ ದಶಕಗಳಿಂದ ಇಂತಹ ಯಾವ ಸೌಜನ್ಯಪೂರಿತ ನಡವಳಿಕೆಗಳನ್ನೂ ನಾವು ತಮಿಳುನಾಡು ರಾಜಕೀಯದಲ್ಲಿ ಕಂಡಿರಲಿಲ್ಲ. ಅಷ್ಟರ ಮಟ್ಟಿಗೆ ಅಲ್ಲಿ ನಾಯಕರುಗಳ ನಡುವೆ ದ್ವೇಷದ ರಾಜಕೀಯ ನಡೆಯುತ್ತಿತ್ತು. ಇಂತಹ ಪ್ರಕ್ಷುಬ್ದ ವಾತಾವರಣವನ್ನು ತಿಳಿಗೊಳಿಸುವಲ್ಲಿ ಸ್ಟಾಲಿನ್ ಮೊದಲ ಹೆಜ್ಜೆಯನ್ನಂತು ಇಟ್ಟಿದ್ದಾರೆ. ಇದರಿಂದ ಅವರ ಕಟ್ಟಾಅಬಿಮಾನಿಗಳನ್ನು ಹೊರತು ಪಡಿಸಿದಂತೆ, ತಮಿಳುನಾಡು ಜನತೆ ಸಂತೋಷ ಪಟ್ಟಿದ್ದಾರೆ. ತಮಿಳು ಪತ್ರಕರ್ತರೊಬ್ಬರು ಹೇಳಿದಂತೆ, ಇನ್ನಾದರು ತಮಿಳು ರಾಜಕೀಯ ವೈಯುಕ್ತಿಕ ನೆಲೆಗಟ್ಟಿನ ಹಠಮಾರಿತನ, ಅಹಂಕಾರವನ್ನು ಬಿಟ್ಟು ಹೊರಬರಲಿದೆ. ತಮಿಳರಲ್ಲಿ ಈ ಆಶಯವನ್ನು ಮೂಡಿಸಿರುವ ಸ್ಟಾಲಿನ್ ಅವರ ಮುಂದಿನ ಕಾರ್ಯವೈಖರಿಯ ಬಗ್ಗೆ ದೇಶದ ಜನತೆ ಕುತೂಹಲದಿಂದ ನೋಡುತ್ತಿದ್ದಾರೆ.

ಒಟ್ಟಿನಲ್ಲಿ ತಮಿಳುನಾಡಲ್ಲಿ ಅಮ್ಮನ ರಾಜ್ಯಬಾರ ಮುಗಿದು ಚಿನ್ನಮ್ಮನ ದರ್ಬಾರು ಶುರುವಾಗುತ್ತಿದ್ದಂತೆ, ಡಿ.ಎಂ.ಕೆ.ಯಲ್ಲಿಯೂ, ಪೆರಿಯವರ್(ಹಿರಿಯವರು) ದರ್ಬಾರು ಮುಗಿದು ತಂಬಿ (ಪಕ್ಷದ ಹಿರಿಯ ನಾಯಕರು ಸ್ಟಾಲಿನ್ ಅವರನ್ನು ಕರೆಯುವುದು ಹೀಗೆ) ಯುಗ ಶುರುವಾಗುತ್ತಿದೆ. 

No comments:

Post a Comment