Nov 3, 2016

ಸರ್ಜಿಕಲ್ ಸ್ಟ್ರೈಕ್ ರಾಜಕೀಯ.

ಸಾಂದರ್ಭಿಕ ಚಿತ್ರ.
ಡಾ.ಅಶೋಕ್.ಕೆ.ಆರ್
ಯಾವುದು ನಡೆಯಬಾರದಿತ್ತೋ ಅದೇ ನಡೆಯುತ್ತಿದೆ. ಸೈನಿಕ ಕಾರ್ಯಾಚರಣೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ದುರ್ನಡೆಯನ್ನು ನಾನಂತೂ ಇಲ್ಲಿಯವರೆಗೆ ಕಂಡಿರಲಿಲ್ಲ. ಕೇಂದ್ರದ ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರ ಸೈನ್ಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುವಲ್ಲಿ ಅತೀವ ಆಸಕ್ತಿ ತೋರುತ್ತಿದೆ. ಈ ಆಸಕ್ತಿಗೆ ಕಾರಣ ಬಾಗಿಲಲ್ಲೇ ಇರುವ ಹಲವು ರಾಜ್ಯಗಳ ಚುನಾವಣೆ. ಅದರಲ್ಲೂ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ. ಸೈನಿಕರ ಬಗ್ಗೆ ಸೈನ್ಯದ ಬಗ್ಗೆ ಯಾವುದೇ ರೀತಿಯ ಪ್ರಶ್ನೆ ಕೇಳುವುದು, ಸೈನಿಕರ ಉಪಟಳಗಳ ಬಗ್ಗೆ ಮಾತಾಡುವುದು, ಅದನ್ನು ಖಂಡಿಸುವುದೇ ದೇಶದ್ರೋಹ ಎನ್ನುವಂತಹ ವಾತಾವರಣವನ್ನೂ ಸೃಷ್ಟಿಸಲಾಗುತ್ತಿದೆ. ಸೈನಿಕರೆಂದರೆ ಪ್ರಶ್ನಾತೀತರೇ? ಸೈನ್ಯವನ್ನು ಹೊಗಳುವುದಷ್ಟೇ ದೇಶಪ್ರೇಮವೇ? ಎಲ್ಲಕ್ಕಿಂತ ಮುಖ್ಯವಾಗಿ ಸೈನಿಕ ಕಾರ್ಯಾಚರಣೆಯನ್ನು ರಾಜಕೀಯ ಪಕ್ಷವೊಂದು ತನ್ನ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಳ್ಳುವುದು ಸರಿಯೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಕೂಡ ನವ ಭಾರತದ ‘ದೇಶಭಕ್ತ’ರ ದೃಷ್ಟಿಯಲ್ಲಿ ದೇಶದ್ರೋಹವೇ ಹೌದು.

ಭಾರತದ ಜೊತೆಗೆ ನೇರ ಯುದ್ಧ ಮಾಡಲಾಗದ ಪಾಕಿಸ್ತಾನ ದಶಕಗಳಿಂದಲೂ ಉಗ್ರರ ಸಹಾಯದಿಂದ ಪರೋಕ್ಷ ಯುದ್ಧದಲ್ಲಿ ತೊಡಗಿದೆ. ಕಾಶ್ಮೀರದ ವಿಮೋಚನೆಯೆಂಬ ಹೆಸರಿನಲ್ಲಿ ಉಗ್ರರನ್ನು ಸಂಪಾದಿಸುವುದು ಅವರಿಗೆ ಸುಲಭವೂ ಆಗಿದೆ. ಕೆಲ ವರ್ಷ ಈ ಉಗ್ರರ ಉಪಟಳ ಹೆಚ್ಚಿದ್ದರೆ ಕೆಲ ವರ್ಷ ಕಡಿಮೆಯಿರುತ್ತದೆ. ಕಾಶ್ಮೀರದಲ್ಲಿನ ಪರಿಸ್ಥಿತಿ ಕೂಡ ಇದರ ಮೇಲೆ ಪರಿಣಾಮ ಬೀರುತ್ತದೆ. ಕಾಶ್ಮೀರದಲ್ಲಿ ನಮ್ಮ ಸೈನಿಕರಿಂದ ಕೆಲವೊಂದು ಸಲ ನಡೆದುಬಿಡುವ ಅಮಾಯಕರ ಹತ್ಯೆಗಳು ಪಾಕಿಸ್ತಾನದ ಪರೋಕ್ಷ ಯುದ್ಧಕ್ಕೆ ನೆರವು ನೀಡುತ್ತದೆ. ಅವರ ಉಗ್ರ ಸಂಘಟನೆಗಳಿಗೆ ಸೇರುವ, ಪಾಕಿಸ್ತಾನದ ನೆರವು ಬಯಸುವ ಕಾಶ್ಮೀರಿಗಳ ಸಂಖೈಯನ್ನು ಹೆಚ್ಚಿಸಿಬಿಡುತ್ತದೆ. ಪಾಕಿಸ್ತಾನದ ಪರೋಕ್ಷ ಯುದ್ಧವನ್ನು ಇತ್ತೀಚೆಗೆ ಎರಡು ಪ್ರಮುಖ ದಾಳಿಗಳಲ್ಲಿ ಕಾಣಬಹುದು. ಒಂದು ಪಠಾಣಕೋಟಿನ ಸೈನ್ಯದ ವೈಮಾನಿಕ ನೆಲೆಯ ಮೇಲೆ ಜನವರಿ ಎರಡರಂದು ನಡೆದ ದಾಳಿ ಮತ್ತು ಇನ್ನೊಂದು ಸೆಪ್ಟೆಂಬರ್ ಹದಿನೆಂಟರಂದು ಉರಿ ಸೈನಿಕ ನೆಲೆಯ ಮೇಲೆ ನಡೆದ ದಾಳಿ. ಪಠಾಣಕೋಟಿನ ವೈಮಾನಿಕ ನೆಲೆಯ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಆರು ಜನ ಸೈನಿಕರು ಹುತಾತ್ಮರಾದರೆ, ಉರಿಯ ಸೈನಿಕ ನೆಲೆಯ ಮೇಲೆ ನಡೆದ ದಾಳಿಯಲ್ಲಿ ಹದಿನೆಂಟು ಮಂದಿ ಸೈನಿಕರು ಹುತಾತ್ಮರಾದರು.

ಪಾಕಿಸ್ತಾನದ ಪರೋಕ್ಷ ಯುದ್ಧದಲ್ಲಿ ಭಾಗವಹಿಸಿದ ಉಗ್ರರೆಲ್ಲರನ್ನೂ ಆ ಸ್ಥಳಗಳಲ್ಲೇ ಹತ್ಯೆ ಮಾಡುವಲ್ಲಿ ನಮ್ಮ ಸೈನ್ಯ ಯಶ ಕಂಡಿತು. ಉರಿಯಲ್ಲಿ ನಡೆದ ದೊಡ್ಡ ಮಟ್ಟದ ದಾಳಿಯು ಭಾರತವನ್ನು ವಿಚಲಿತಗೊಳಿಸಿದ್ದು ಹೌದು. ಕೇಂದ್ರ ಸರಕಾರದ ಸೂಚನೆಯಂತೆ, ನಮ್ಮ ಸೈನ್ಯವು ಸೆಪ್ಟೆಂಬರ್ 29ರಂದು ಗಡಿ ರೇಖೆಯನ್ನು ದಾಟಿ ಹೋಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಪ್ರವೇಶಿಸಿ ಉಗ್ರರ ಕೆಲ ಅಡಗುತಾಣಗಳ ಮೇಲೆ ದಾಳಿ ನಡೆಸಿ ನಮ್ಮಲ್ಲಿನ ಒಬ್ಬರಿಗೂ ಚಿಕ್ಕ ಗಾಯವೂ ಆಗದಂತೆ ವಾಪಸ್ಸಾಯಿತು. ಮಾರನೆಯ ದಿನ ಕೇಂದ್ರದ ವಕ್ತಾರರು ಈ ದಾಳಿಗೆ ‘ಸರ್ಜಿಕಲ್ ಸ್ಟ್ರೈಕ್’ ಎಂದು ಹೆಸರು ಕೊಟ್ಟು ಮಾಧ್ಯಮಗಳಿಗೆ ಸುದ್ದಿ ಬಿಡುಗಡೆಗೊಳಿಸಿದರು. ವಿರೋಧ ಪಕ್ಷಗಳು ಕೂಡ ಈ ‘ಸರ್ಜಿಕಲ್ ಸ್ಟ್ರೈಕ್’ಗೆ ಮೆಚ್ಚುಗೆ ವ್ಯಕ್ತಪಡಿಸಿ ಕೇಂದ್ರಕ್ಕೆ ಬೆಂಬಲ ನೀಡಿದರು. ಈ ಬೆಂಬಲ, ಒಗ್ಗಟ್ಟಿನ ಮಾತುಗಳೆಲ್ಲವೂ ಒಂದು ದಿನಕ್ಕಷ್ಟೇ ಸೀಮಿತವಾಯಿತು; ಮಾರನೆಯ ದಿನದಿಂದಲೇ ರಾಜಕೀಕರಣಗೊಂಡುಬಿಟ್ಟಿತು ಸರ್ಜಿಕಲ್ ಸ್ಟ್ರೈಕ್. ಬಹುಶಃ, ಸೈನಿಕ ಕಾರ್ಯಾಚರಣೆಯೊಂದು ಈ ಮಟ್ಟಿಗೆ ರಾಜಕೀಯಕ್ಕೆ ಬಳಕೆಯಾಗಿದ್ದು ಇದೇ ಮೊದಲಿರಬೇಕು.

ಉತ್ತರಪ್ರದೇಶದಲ್ಲಿ ರಾಜಕೀಯ ಪ್ರಚಾರಕ್ಕೆ ಬಳಕೆಯಾಗುತ್ತಿರುವ ಸರ್ಜಿಕಲ್ ಸ್ಟ್ರೈಕ್.
ರಾಜಕೀಯಕ್ಕೆ ಬಳಸುವಲ್ಲಿ ಮುಂಚೂಣಿಯಲ್ಲಿದ್ದಿದ್ದು ಬಿಜೆಪಿಯ ಸದಸ್ಯರು, ವಕ್ತಾರರು. 2016ರ ಸೆಪ್ಟೆಂಬರ್ 29ರ ಮುಂಚೆ ಭಾರತದಲ್ಲಿ ಸೈನ್ಯವೇ ಇರಲಿಲ್ಲ, ಇದ್ದರೂ ಅದು ತುಂಬಾ ದುರ್ಬಲವಾಗಿತ್ತು ಎನ್ನುವಂತೆ ವರ್ತಿಸಲಾರಂಭಿಸಿಬಿಟ್ಟರು. ಪ್ರಧಾನ ಮಂತ್ರಿ ಮೋದಿಯವರ ಗುಣಗಾನಕ್ಕೆ ಈ ಅವಕಾಶವನ್ನವರು ಬಳಸಿಕೊಳ್ಳಲಾರಂಭಿಸಿದರು. ಈ ಗುಣಗಾನ ಯಾವ ಅತಿರೇಕಕ್ಕೆ ಮುಟ್ಟಿತೆಂದರೆ ಇನ್ನೇನು ವಿಧಾನಸಭಾ ಚುನಾವಣೆ ಪ್ರಾರಂಭವಾಗಲಿರುವ ಉತ್ತರ ಪ್ರದೇಶದಲ್ಲಿ ಮೋದಿಯನ್ನು ಸೂಪರ್ ಹೀರೋ ರೀತಿಯಲ್ಲಿ ಬಿಂಬಿಸುವ ಬ್ಯಾನರುಗಳು ರಾರಾಜಿಸಿದವು. ಸೈನಿಕ ಕಾರ್ಯಾಚರಣೆಯನ್ನು ಈ ರೀತಿಯ ಅತಿರೇಕದ ಪ್ರಚಾರಕ್ಕೆ ಉಪಯೋಗಿಸುವುದನ್ನು ವಿರೋಧಿಸಬೇಕಿದ್ದ ವಿರೋಧ ಪಕ್ಷಗಳು ಜೊತೆಜೊತೆಗೆ ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದವು. ರಾಜಕೀಯ ಪಕ್ಷದ ವಿರೋಧಕ್ಕೂ ಸೈನಿಕ ಕಾರ್ಯಾಚರಣೆಯ ಬಗೆಗಿನ ಅನುಮಾನಕ್ಕೂ ಇರುವ ವ್ಯತ್ಯಾಸವನ್ನು ಅರಿಯದೆ ಹೋದವು. ಅರವಿಂದ್ ಕೇಜ್ರಿವಾಲ್ ಸರ್ಜಿಕಲ್ ಸ್ಟ್ರೈಕ್ ಕುರಿತ ಸಾಕ್ಷ್ಯ ಕೇಳಿ ನಗೆಪಾಟಲೀಗೀಡಾದರು. ಈ ಮುಂಚೆ ಯಾವತ್ತೂ ಈ ರೀತಿಯ ದಾಳಿಯೇ ನಡೆದಿರಲಿಲ್ಲ ಎಂಬ ಹಸಿ ಸುಳ್ಳನ್ನು ಹೇಳುವ ಮೂಲಕ ರಕ್ಷಣಾ ಮಂತ್ರಿ ಪರಿಕ್ಕರ್ ಕೂಡ ನಗೆಪಾಟಲಿಗೊಳಗಾದರು. ಇಷ್ಟಕ್ಕೂ ಈ ಸರ್ಜಿಕಲ್ ಸ್ಟ್ರೈಕ್ ಎಂದರೇನು?

ಸರ್ಜಿಕಲ್ ಸ್ಟ್ರೈಕ್ ಯುದ್ಧವಲ್ಲ. ಶತ್ರುಗಳ ನೆಲೆಗಳ ಮೇಲೆ ಯಾವುದೇ ಮುನ್ಸೂಚನೆ ಅವರಿಗೆ ಸಿಗದಂತೆ ಮಾಡಿ ದಿಡೀರನೆ ವಾಯುಮಾರ್ಗವಾಗಿ ದಾಳಿ ನಡೆಸುವುದು ಸರ್ಜಿಕಲ್ ಸ್ಟ್ರೈಕ್. ಸೆಪ್ಟೆಂಬರ್ 29ರಂದು ಭಾರತ ನಡೆಸಿದ್ದು ಸರ್ಜಿಕಲ್ ಸ್ಟ್ರೈಕ್ ಅಲ್ಲ, ಗಡಿ ಭಾಗದಲ್ಲಿ ಆವಾಗವಾಗ ನಡೆಯುವ ‘ಕೊವರ್ಟ್ ಆಪರೇಷನ್’ ಎನ್ನುವ ಅಭಿಪ್ರಾಯವೂ ಇದೆ. ಎರಡರಲ್ಲೂ ಅಚ್ಚರಿಯ ದಾಳಿ ನಡೆಸಿ ಶತ್ರು ಎಚ್ಚೆತ್ತುಕೊಳ್ಳುವ ಮುನ್ನವೇ ವಾಪಸ್ಸಾಗಿಬಿಡುವುದು ಪ್ರಮುಖವಾದ ಸಂಗತಿ. ‘ಕೊವರ್ಟ್ ಆಪರೇಷನ್’ ಗಡಿರೇಖೆಯ ಕೆಲವು ಕಿಲೋಮೀಟರುಗಳ ಅಂತರದಲ್ಲಿ – ಹೆಚ್ಚಿನಂಶ ಭೂಮಾರ್ಗದಲ್ಲಿ - ಮಾತ್ರ ನಡೆದರೆ, ‘ಸರ್ಜಿಕಲ್ ಸ್ಟ್ರೈಕ್’ ಶತ್ರು ದೇಶದ ಯಾವುದೇ ಭಾಗದಲ್ಲಿ ಬೇಕಾದರೂ ನಡೆಯಬಹುದು. ಕೇಂದ್ರ ಸರಕಾರ ಸರ್ಜಿಕಲ್ ಸ್ಟ್ರೈಕ್ ಪದವನ್ನು ಉಪಯೋಗಿಸಿದ್ದು ರಾಜಕೀಯ ಲಾಭಕ್ಕೋಸ್ಕರ ಮಾತ್ರ, ಕಾರಣ ಆ ಪದವು ‘ಕೊವರ್ಟ್ ಆಪರೇಷನ್’ ಎಂಬ ಪದಕ್ಕಿಂತ ಹೆಚ್ಚು ಆಕರ್ಷಕ ಎನ್ನುವ ವಾದಗಳೂ ಇವೆ. ಈ ಹಿಂದೆಯೂ ಹಲವು ಸಲ ‘ಕೊವರ್ಟ್ ಆಪರೇಷನ್’ ನಡೆದಿತ್ತು, ಆದರೆ ಅದನ್ನು ಬಹಿರಂಗಗೊಳಿಸಿರಲಿಲ್ಲ ಎಂದು ಹಿಂದಿನ ಕೆಲ ರಕ್ಷಣಾ ಸಚಿವರು ಹೇಳಿಕೆ ನೀಡಿದರು. ಅವರು ಬಹಿರಂಗಗೊಳಿಸದೇ ಇದ್ದಿದ್ದು ಸರಿಯಾ? ಅಥವಾ ಈಗಿನ ಸರಕಾರ ಬಹಿರಂಗಗೊಳಿಸಿದ್ದು ಸರಿಯಾ?

ಸರಿ ತಪ್ಪುಗಳ ವಿಮರ್ಶೆ ಮಾಡುವುದಕ್ಕೆ ಮೊದಲು ಈ ಸರ್ಜಿಕಲ್ ಸ್ಟ್ರೈಕ್ ನಿಂದಾಗಿ ಗಡಿ ಭಾಗದಲ್ಲಿ ಯಾವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗಮನಿಸುವುದು ಮುಖ್ಯ. ಸೆಪ್ಟೆಂಬರ್ 29ರ ಸರ್ಜಿಕಲ್ ಸ್ಟ್ರೈಕ್ ನಡೆದ ನಂತರ ಇಲ್ಲಿಯವರೆಗೂ ಪಾಕಿಸ್ತಾನದ ಸೈನ್ಯ ಒಟ್ಟು 57 ಬಾರಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದೆ. ಸರ್ಜಿಕಲ್ ಸ್ಟ್ರೈಕ್ ನಡೆದ ನಾಲ್ಕು ದಿನಗಳ ನಂತರ ಉಗ್ರರು ರಾಷ್ಟ್ರೀಯ ರೈಫಲ್ಸಿನ ಮೇಲೆ ದಾಳಿ ಮಾಡಿ ಸೈನಿಕನ ಹತ್ಯೆ ಮಾಡಿಬಿಟ್ಟಿದೆ. ಪಾಕಿಗಳ ಈ ದಾಳಿಗಳು ಸೈನಿಕರು ಹಾಗೂ ಸೈನಿಕ ನೆಲೆಗಳನ್ನಷ್ಟೇ ಗುರಿಯಾಗಿಸಿಕೊಳ್ಳದೇ ಜನವಸತಿಯ ಮೇಲೂ ದಾಳಿ ನಡೆಸಲಾರಂಭಿಸಿಬಿಟ್ಟಿದೆ. ನಿನ್ನೆ ದಿನ ಎಂಟು ಮಂದಿ ನಾಗರೀಕರು ಪಾಕಿ ಸೈನ್ಯದ ದಾಳಿಗೆ ಬಲಿಯಾಗಿಬಿಟ್ಟಿದ್ದಾರೆ. ಗಡಿಯುದ್ದಕ್ಕೂ ಬಿಗುವಿನ ವಾತಾವರಣ ನಿರ್ಮಾಣವಾಗಿಬಿಟ್ಟಿದೆ. ಪಾಕಿಸ್ತಾನಕ್ಕೆ ಈಗಿರುವ ನೆಪ ಭಾರತ ನಡೆಸಿದ ಸರ್ಜಿಕಲ್ ದಾಳಿಯೆನ್ನುವುದು ಸುಳ್ಳಲ್ಲ. ಜನವರಿಯಿಂದ ಸೆಪ್ಟೆಂಬರ್ ವರೆಗೆ ಪಾಕಿಸ್ತಾನ ಭಾರತದ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು 58 ಸಲ ಎಂಬ ಅಂಕಿಅಂಶವು ಸರ್ಜಿಕಲ್ ಸ್ಟ್ರೈಕ್ ನಂತರ ಈ ಗುಂಡಿನ ದಾಳಿಗಳು ವಿಪರೀತವಾಗಿ ಹೆಚ್ಚಿಬಿಟ್ಟಿರುವುದನ್ನು ತಿಳಿಸುತ್ತದೆ. ಈ ಅಪ್ರಚೋದಿತ ಗುಂಡಿನ ದಾಳಿಗೆ ಮತ್ತೊಂದು ಉದ್ದೇಶವೂ ಇದೆ, ಗಡಿ ರೇಖೆಯನ್ನು ಪಾಕಿಸ್ತಾನ ಪ್ರಾಯೋಜಿತ ಉಗ್ರರು ದಾಟುವ ಸಮಯದಲ್ಲಿ ಭಾರತದ ಸೈನ್ಯದ ಗಮನವನ್ನು ಬೇರೆಡೆ ಸೆಳೆಯಲು ಈ ಗುಂಡಿನ ದಾಳಿ ನಡೆಯುತ್ತದೆ. ಭಾರತೀಯ ಸೈನ್ಯವು ಪಾಕಿಸ್ತಾನದ ಈ ಉಪಟಳಕ್ಕೆ ಪ್ರತಿಯಾಗಿ ದಾಳಿ ನಡೆಸುತ್ತಿದೆ, ಪಾಕಿಸ್ತಾನದ ಸೈನಿಕ ಪೋಸ್ಟುಗಳನ್ನು ಧ್ವಂಸ ಮಾಡುತ್ತಿದೆ, ಪಾಕಿಸ್ತಾನದ ಸೈನಿಕರನ್ನು ಹತ್ಯೆ ಮಾಡಿದೆ. ಒಟ್ಟಿನಲ್ಲಿ ಇಡೀ ಗಡಿ ಭಾಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಪಾಕಿಸ್ತಾನವೇ ಕಾರಣವೆನ್ನುವುದು ಹೌದಾದರೂ ಇಂತಹ ಪರಿಸ್ಥಿತಿ ನಿರ್ಮಾಣವಾಗಲು ‘ಸರ್ಜಿಕಲ್ ಸ್ಟ್ರೈಕ್’ ಕುರಿತು ಅನಗತ್ಯವಾಗಿ ಮಾತನಾಡಿದ ನಮ್ಮ ದೇಶದ ಆಡಳಿತ ಪಕ್ಷ – ವಿರೋಧ ಪಕ್ಷದ ನಾಯಕರುಗಳೂ ತಮ್ಮ ಕೈಲಾದ ಸಹಾಯ ಮಾಡಿದ್ದಾರೆನ್ನುವುದು ಅಕ್ಷರಶಃ ಸತ್ಯ. ಸೈನಿಕ ಕಾರ್ಯಾಚರಣೆಗಳಲ್ಲಿ ಹಲವಾರು ಕಾರ್ಯಾಚರಣೆಗಳು ಮುಖ್ಯವಾಹಿನಿಯಲ್ಲಿ ಚರ್ಚೆಯಾಗಲೇ ಬಾರದು ಎನ್ನುವ ಸಾಮಾನ್ಯ ಜ್ಞಾನವನ್ನು ನಮ್ಮ ಪಕ್ಷಗಳು ಮರೆತೇ ಬಿಟ್ಟವು. ಸ್ವತಃ ಪ್ರಧಾನ ಮಂತ್ರಿ ಮೋದಿಯವರೇ ಸರ್ಜಿಕಲ್ ಸ್ಟ್ರೈಕ್ ಅನ್ನು ರಾಜಕೀಯ ಚರ್ಚೆಯಾಗಿಸಬೇಡಿ ಎಂದು ತಮ್ಮ ಪಕ್ಷದವರಲ್ಲಿ ಮನವಿ ಮಾಡಿಕೊಂಡರು. ಅವರ ಪಕ್ಷದವರ ನಡಾವಳಿಯನ್ನು ನೋಡಿದರೆ ಅವರ ಮಾತಿಗೆ ಹೆಚ್ಚು ಬೆಲೆ ಸಿಕ್ಕಂತೆ ಕಾಣುವುದಿಲ್ಲ. ಸ್ವತಃ ಅವರೇ ದೀಪಾವಳಿಯ ಭಾಷಣದಲ್ಲಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪರೋಕ್ಷವಾಗಿ ಮಾತನಾಡಿದರು. ಅವರ ಮಾತಿಗೆ ಅವರೇ ಬೆಲೆ ಕೊಡುವಂತೆ ಕಾಣುವುದಿಲ್ಲ! ಇಷ್ಟಕ್ಕೂ ಬಿಜೆಪಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಇಷ್ಟೊಂದು ಮಾತನಾಡುತ್ತಿರುವುದಾದರೂ ಏಕೆ?

ಏಕೆಂದರೆ ಉತ್ತರಪ್ರದೇಶದ ಚುನಾವಣೆ ಹತ್ತಿರದಲ್ಲಿದೆ. ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ಇದು ಬಹುಮುಖ್ಯ ಚುನಾವಣೆ. ಹಿಂದೆ ನಡೆದ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಆ ಹಲವು ರಾಜ್ಯಗಳಲ್ಲಿ ಬಿಜೆಪಿಯ ಪ್ರಾಬಲ್ಯವಿದ್ದ ರಾಜ್ಯಗಳ ಸಂಖೈಯೂ ಕಡಿಮೆಯೇ ಇತ್ತು. ಆ ರಾಜ್ಯಗಳಲ್ಲಿ ಸಿಕ್ಕ ಗೆಲುವು ಬಿಜೆಪಿಗೆ ಬೋನಸ್ಸಿನಂತೆ ಅಷ್ಟೇ. ಆದರೆ ಉತ್ತರ ಪ್ರದೇಶದ ಚುನಾವಣೆಯನ್ನು ಬಿಜೆಪಿ ಅಷ್ಟು ಲಘುವಾಗಿ ಪರಿಗಣಿಸುವಂತಿಲ್ಲ. ಬಿಜೆಪಿಗೊಂದು ಮಾನ್ಯತೆ ದೊರಕಿಸಿಕೊಟ್ಟಿದ್ದೇ ಉತ್ತರಪ್ರದೇಶ. ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿ, ರಾಮಮಂದಿರ ನಿರ್ಮಾಣದ ಭಾವನಾತ್ಮಕ ಎಳೆಯನ್ನು ನೆಚ್ಚಿಕೊಂಡೇ ಬಿಜೆಪಿ ರಾಷ್ಟ್ರ ರಾಜಕಾರಣದಲ್ಲಿ ಉತ್ತುಂಗಕ್ಕೇರಿತು. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲೂ ರಾಮಮಂದಿರದ ವಿಷಯವೆತ್ತಿತ್ತು ಭಾರತೀಯ ಜನತಾ ಪಕ್ಷ. ಆದರೆ ಮೋದಿ ನೇತೃತ್ವದಲ್ಲಿ ಎದುರಿಸಿದ ಚುನಾವಣೆಯಲ್ಲಿ ಕಡೇ ಪಕ್ಷ ಬಹಿರಂಗವಾಗಿ ‘ಅಭಿವೃದ್ಧಿ ಮಂತ್ರದ’ ಪಠಣ ನಡೆದಿತ್ತೇ ಹೊರತು ಹಿಂದುತ್ವದ್ದಲ್ಲ. ಅಂತರ್ಗತವಾಗಿ ಹಿಂದುತ್ವದ ಅಜೆಂಡಾಗಳು ಕಾರ್ಯನಿರ್ವಹಿಸಿದವಷ್ಟೇ. ‘ಅಭಿವೃದ್ಧಿ ಮಂತ್ರದ’ ಪಠಣ ನಡೆಸಿದ ಪಕ್ಷವೊಂದು ಬಹಳ ವರುಷಗಳ ನಂತರ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯಲು ಸಫಲವಾಯಿತು. ಅವರು ಉಚ್ಛರಿಸಿದ ‘ಅಭಿವೃದ್ಧಿ ಮಂತ್ರ’ ಎಷ್ಟರ ಮಟ್ಟಿಗೆ ಜನರನ್ನು ತಲುಪಿದೆ? ಮೂರು ವರುಷಗಳತ್ತಿರದ ಆಡಳಿತದಲ್ಲಿ ಬಿಜೆಪಿ ಪಠಿಸಿದ ‘ಅಭಿವೃದ್ಧಿ ಮಂತ್ರ’ ಯಶಸ್ವಿಯಾಗಿದ್ದರೆ, ಜನರಿಗೆ ತಲುಪಿದ್ದರೆ ಆ ಅಭಿವೃದ್ಧಿಯ ಆಧಾರದಲ್ಲೇ ಎಲ್ಲಾ ವಿಧಾನಸಭಾ ಚುನಾವಣೆಯನ್ನು ಎದುರಿಸುವ ಛಾತಿಯನ್ನು ಬಿಜೆಪಿ ತೋರಬೇಕಿತ್ತಲ್ಲವೇ? ಕಳೆದೆರಡು ವರುಷಗಳಲ್ಲಿ ನಡೆದ ಎಷ್ಟು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಕೇಂದ್ರ ಸರಕಾರದ ಅಭಿವೃದ್ಧಿ ಕಾರ್ಯಗಳ ಆಧಾರದಲ್ಲಿ ಎದುರಿಸಿದೆ ಎಂದು ನೋಡಿದರೆ ನಿರಾಸೆಯಾಗುತ್ತದೆ. ಹೊಸ ಸರಕಾರವೊಂದು ಹೊಸತರಲ್ಲೇ ಎಲ್ಲವನ್ನೂ ಮಾಡಿಬಿಡಲು ಸಾಧ್ಯವಿಲ್ಲ ಎನ್ನುವುದು ಸತ್ಯ. ಕಡೇ ಪಕ್ಷ ಅಭಿವೃದ್ಧಿ ಮಂತ್ರ ಪಠಿಸಿದವರು ಮತ್ತದೇ ಹಿಂದುತ್ವ, ಮುಸ್ಲಿಂ ದ್ವೇಷ, ದಲಿತರೆಡೆಗಿನ ಅವಹೇಳನ, ದನದ ರಾಜಕಾರಣವನ್ನು ಮಾಡುವುದನ್ನಾದರೂ ತಪ್ಪಿಸಬಹುದಿತ್ತು. ಅದು ಆಗಲಿಲ್ಲ. ಈಗ ಬಿಜೆಪಿ ಪಕ್ಷ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ಹಿಂದುತ್ವ, ದನ, ಮುಸ್ಲಿಂ ಎಂದ್ಯಾವ ಮಾತುಗಳನ್ನೂ ಅದೀಗ ಆಡುತ್ತಿಲ್ಲ. ಆ ಮಾತುಗಳು ಒಂದೋ ಬಿಜೆಪಿಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿಲ್ಲ, ಅಥವಾ ಅವು ಹಳೆಯದಾಯಿತೆಂದು ಬಿಜೆಪಿಗೇ ಅನಿಸಿರಲಿಕ್ಕೆ ಸಾಕು. ಉತ್ತರ ಪ್ರದೇಶದಲ್ಲಿ ಸೈನಿಕ ಕಾರ್ಯಾಚರಣೆಯನ್ನೇ ತನ್ನ ಪ್ರಚಾರಕ್ಕೆ ಬಳಸಿಕೊಳ್ಳಲು ಪ್ರಾರಂಭಿಸಿದೆ. ಅಭಿವೃದ್ಧಿಯ ವಿಚಾರದಲ್ಲಿ ನಿಜಕ್ಕೂ ಬದಲಾವಣೆಗಳಾಗಿದ್ದರೆ ಇದು ನಡೆಯಬೇಕಿರಲಿಲ್ಲ ಅಲ್ಲವೇ?

ಇನ್ನು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರ ಬಂದ ನಂತರ ನಡೆಯುತ್ತಿರುವ ಹೊಸ ಬೆಳವಣಿಗೆ ಪ್ರತಿನಿತ್ಯ ‘ದೇಶದ್ರೋಹ’ದ ವ್ಯಾಪ್ತಿಯೊಳಗೆ ಹೊಸ ಹೊಸ ಜನರನ್ನು ಸೇರಿಸುತ್ತಿರುವುದು! ಸೈನ್ಯದ ಅಕ್ರಮ – ಉಪಟಳಗಳ ಬಗ್ಗೆ ಮಾತನಾಡುವುದೇ ದೇಶದ್ರೋಹವಾಗಿಬಿಟ್ಟಿದ್ಯಾವಾಗ ಎನ್ನುವುದೇ ಅಚ್ಚರಿ! ಸೈನಿಕರು ನಮ್ಮ ದೇಶವನ್ನು ಕಾಯುತ್ತಿದ್ದಾರೆ, ನಾವು ಇಲ್ಲಿ ದೂರದೂರುಗಳಲ್ಲಿ ನೆಮ್ಮದಿಯಾಗಿರುವುದಕ್ಕೆ ಸೈನಿಕರೇ ಕಾರಣ ಎನ್ನುವುದೆಲ್ಲವೂ ಸತ್ಯವೇ. ಆದರೆ ಪ್ರಜಾಪ್ರಭುತ್ವದಲ್ಲಿ ಸೈನಿಕರನ್ನು ಪ್ರಶ್ನಿಸುವುದೇ ದೇಶದ್ರೋಹವೆಂದು ಕರೆಯುವುದು ಅತಿರೇಕ ಮಾತ್ರವಲ್ಲ ಪ್ರಜಾಪ್ರಭುತ್ವಕ್ಕೇ ಅಪಾಯಕಾರಿ ಎನ್ನುವುದನ್ನು ನವ ಭಾರತದ ‘ದೇಶಭಕ್ತರು’ ನೆನಪಿನಲ್ಲಿಡಬೇಕು. ಸೈನಿಕರ ಬಗ್ಗೆ ಪ್ರೀತಿಯಿರಬೇಕು, ಅವರ ಕೆಲಸದ ಬಗ್ಗೆ ಕೃತಜ್ಞತೆಯಿರಬೇಕು ನಿಜ. ಜನರಿಗೆ ಈ ಮುಂಚಿನಿಂದಲೂ ಅವೆಲ್ಲವೂ ಇದೆ. ಅದೇ ಸಮಯದಲ್ಲಿ ಅದು ಕಾಶ್ಮೀರದಲ್ಲಿರಬಹುದು, ನಮ್ಮ ಈಶಾನ್ಯ ರಾಜ್ಯಗಳಲ್ಲಿರಬಹುದು ಎ.ಎಫ್.ಎಸ್.ಪಿ.ಎದ ರಕ್ಷಣೆಯ ಅಡಿಯಲ್ಲಿ ಸೈನಿಕರು ನಡೆಸಿದ ಅನಾಚಾರಗಳನ್ನು ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳುವ ಅವಶ್ಯಕತೆ ಇಲ್ಲ ಎನ್ನುವ ಅರಿವೂ ನಮಗಿರಬೇಕು. ಮಣಿಪುರದಲ್ಲಿ ಬೆತ್ತಲೆಯಾಗಿ ನಿಂತು ‘ಸೈನಿಕರೇ ನಮ್ಮನ್ನು ರೇಪ್ ಮಾಡಿ’ ಎಂದು ಪ್ರತಿಭಟನೆ ಮಾಡಿದವರನ್ನು ಸಹಾನುಭೂತಿಯಿಂದ ಕಂಡ ಜನರಿರುವ ನಾಡಿದು. ಆ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ದೇಶದ್ರೋಹಿಗಳೆಂದು ಚಿತ್ರಿತವಾಗಲಿಲ್ಲ. ಬಹುಶಃ ಈಗ ಯಾರಾದರೂ ಆ ರೀತಿ ಪ್ರತಿಭಟನೆ ಮಾಡಿದರೆ ಅದು ದೇಶದ್ರೋಹವೆಂದೇ ಕರೆಸಿಕೊಳ್ಳುತ್ತದೆಯಾ? ಸೈನಿಕರನ್ನು ಪ್ರಶ್ನಾತೀತರೆಂದು ಮಾಡುವುದು, ಸೈನಿಕರನ್ನು ಅಗತ್ಯಕ್ಕಿಂತ ಹೆಚ್ಚೇ ಹೊಗಳುವುದು, ಸೈನಿಕರ ಅನಾಚಾರಗಳನ್ನು ಪ್ರಶ್ನಿಸುವುದನ್ನೇ ದೇಶದ್ರೋಹವೆಂದು ಕರೆಯುವುದು, ಸೈನಿಕ ಕಾರ್ಯಾಚರಣೆಯನ್ನು ರಾಜಕೀಯ ಪ್ರಚಾರಕ್ಕೆ ಬಳಸುವುದು ಖಂಡಿತವಾಗಿ ಆರೋಗ್ಯವಂತ ಪ್ರಜಾಪ್ರಭುತ್ವದ ಲಕ್ಷಣವಲ್ಲ. ಸರಕಾರವೊಂದು ಈ ರೀತಿ ಮಾಡುವವರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲ ಕೊಡುವುದು ಆ ಸರಕಾರದ ಆಡಳಿತ ನೀತಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಸೂಚಿಸುತ್ತದೆ.

No comments:

Post a Comment