Oct 24, 2016

ರಾಮಾ ರಾಮಾ ರೇ: ಹುಟ್ಟು ಸಾವಿನ ನಡುವಿನ ಬದುಕಿನ ಪಯಣ.

ಡಾ. ಅಶೋಕ್. ಕೆ. ಆರ್.
ಸಂಪಿಗೆಯಂಥ ಸಂಪಿಗೆ ಥೀಯೇಟರ್ರಿನ ಬಾಲ್ಕಾನಿ ಹೆಚ್ಚು ಕಡಿಮೆ ಪೂರ್ತಿ ತುಂಬಿಹೋಗಿತ್ತು. ಈ ರೀತಿ ತುಂಬಿ ಹೋಗಿದ್ದಕ್ಕೆ ಕಾರಣ ಸಾಮಾಜಿಕ ಜಾಲತಾಣಗಳು ಎಂದರದು ಉತ್ಪ್ರೇಕ್ಷೆಯಲ್ಲ. ಪ್ರಚಾರವಿರಲಿ, ಶುಕ್ರವಾರದ ಪತ್ರಿಕೆಗಳಲ್ಲಿ ಜಾಹೀರಾತನ್ನೂ ನೀಡದ ರಾಮಾ ರಾಮಾ ರೇ ಚಿತ್ರ ಸಾಮಾಜಿಕ ಜಾಲತಾಣಗಳಿಲ್ಲದ ಸಮಯದಲ್ಲಿ ಬಿಡುಗಡೆಗೊಂಡಿದ್ದರೆ ಒಂದೇ ದಿನಕ್ಕೆ ಚಿತ್ರಮಂದಿರಗಳಿಂದ ಮರೆಯಾಗಿಬಿಡುತ್ತಿತ್ತು. ಸಾಮಾಜಿಕ ಜಾಲತಾಣಗಳು ಜನರನ್ನೇನೋ ಚಿತ್ರಮಂದಿರಕ್ಕೆ ಸೆಳೆದು ತಂದಿದೆ, ಅವರಿಗೆ ತಲುಪಿದೆಯಾ? ಹೇಳುವುದು ಕಷ್ಟ. ಇಂಟರ್ವೆಲ್ಲಿನಲ್ಲಿ ‘ಯಾವ್ದಾರಾ ನಾರ್ಮಲ್ ಪಿಚ್ಚರ್ರಿಗೆ ಕರ್ಕೊಂಡ್ ಹೋಗು ಅಂದ್ರೆ ಇದ್ಯಾವ ಫಿಲಮ್ಮಿಗೆ ಕರ್ಕಂಡ್ ಬಂದಪ್ಪ’ ‘ಮನೇಲಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಬರ್ತಿತ್ತು. ಅಲ್ಲೇ ಇದ್ದಿದ್ರೆ ಆಗಿರಾದು’ ಅನ್ನೋ ಮಾತುಗಳು ಕೇಳಿಬಂದರೆ ಚಿತ್ರ ಮುಗಿದ ನಂತರ ‘ಫಸ್ಟ್ ಆಫ್ ಸ್ವಲ್ಪ ಬೋರು ಸೆಕೆಂಡ್ ಆಫ್ ಅದ್ಭುತ’ ಅನ್ನುವಂತಹ ಮಾತುಗಳು! ಇಪ್ಪತ್ತೆಂಟಕ್ಕೆ ಇರೋ ಬರೋ ಥಿಯೇಟರುಗಳಿಗೆಲ್ಲ ‘ಮುಕುಂದ ಮುರಾರಿ’ ‘ಸಂತು’ ಚಿತ್ರಗಳು ಬರುತ್ತಿವೆ. ಆ ಚಿತ್ರಗಳಬ್ಬರವನ್ನೆದುರಿಸಿ ರಾಮಾ ರಾಮಾ ರೇ ನಿಲ್ಲಬಲ್ಲದಾ? ಕಷ್ಟವಿದೆ. ಕಾದು ನೋಡುವ!

ಜೈಲಿನ ಪೋಲಿಸಪ್ಪನ ಪ್ರಿಯವಾದ ಧಾರವಾಹಿಯಲ್ಲಿ ಸೀತೆ ಅಗ್ನಿ ಪ್ರವೇಶ ಮಾಡುವ ಸಮಯದಲ್ಲಿ ಗಲ್ಲಿಗೇರಬೇಕಿದ್ದ ಖೈದಿ ಜೈಲಿನ ಕಾಂಪೌಂಡನ್ನು ಹಾರಿ ಹೊರಬೀಳುತ್ತಾನೆ. ಜೀವ ಉಳಿಸಿಕೊಳ್ಳಲು ಕಾಂಪೌಂಡು ಜಿಗಿಯುವ ಖೈದಿ ಎಲ್ಲರ ಕಣ್ಣುತಪ್ಪಿಸಿ ಹೊಸ ಬದುಕು ಕಟ್ಟಿಕೊಳ್ಳುತ್ತಾನಾ? ಜೀವದಾಸೆಯ ಖೈದಿಯೊಬ್ಬನ ಪಯಣದ ಕತೆಯೇ ರಾಮಾ ರಾಮಾ ರೇ. ರಸ್ತೆಯಲ್ಲೇ ನಡೆಯುವ ಚಿತ್ರಗಳು ಹಲವು ಬಂದಿವೆ. ಇಂಗ್ಲೀಷಿನ ಡುಯೆಲ್, ಹಿಂದಿಯ ರೋಡ್ ನಂತಹ ಚಿತ್ರಗಳಿವೆ. ಕನ್ನಡದಲ್ಲಿ ಸವಾರಿ, ಏಕದಂತದಂತಹ ಚಿತ್ರಗಳಲ್ಲೂ ಪಯಣ ಚಿತ್ರದ ಪ್ರಮುಖ ಭಾಗವೇನೋ ಹೌದು. ಅಲ್ಲಿ ಕತೆಯ ಭಾಗವಾಗಿ ಪಯಣವಿದ್ದರೆ ರಾಮಾ ರಾಮಾ ರೇ ಚಿತ್ರದಲ್ಲಿ ಪಯಣವೇ ಕತೆ. ಒಂದತ್ತು ಪರ್ಸೆಂಟಿನಷ್ಟು ಭಾಗವನ್ನು ಬಿಟ್ಟರೆ ಇಡೀ ಸಿನಿಮಾ ನಡೆಯುವುದೇ ಪಯಣದಲ್ಲಿ, ರಸ್ತೆಯಲ್ಲಿ. ಸಾವು – ಪ್ರೀತಿ – ಹುಟ್ಟಿಗೆ ಸಾಕ್ಷಿಯಾಗುವ ಪಯಣ ಜೀವದಾಸೆಗೆ ಜೈಲು ತೊರೆದ ಅಪರಾಧಿಯನ್ನು ಬದಲಿಸುತ್ತದೆ, ಹಣದಾಸೆಯ ಮನುಷ್ಯರ ಮನಸ್ಸನ್ನೂ ಬದಲಿಸುತ್ತದೆ.

ಗಲ್ಲು ಶಿಕ್ಷೆಗೆ ಗುರಿಯಾಗಿ ಜೈಲಿನಿಂದ ತಪ್ಪಿಸಿಕೊಂಡ ಖೈದಿಗೆ ಅಷ್ಟು ದೂರ ಲಿಫ್ಟು ಕೊಡಲು ಹತ್ತಿಸಿಕೊಳ್ಳುವ ವ್ಯಕ್ತಿ ಸ್ವತಃ ಒಂದು ಕಾಲದಲ್ಲಿ ಜನರನ್ನು ಗಲ್ಲಿಗೆ ಹಾಕುತ್ತಿದ್ದವ. ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ತರಬೇತಿ ಕೊಡಲು ಹೊರಟಿರುತ್ತಾನೆ. ಜೀಪಿನ ತುಂಬ ವಿವಿಧ ಗಾತ್ರದ ಹಗ್ಗಗಳನ್ನು ತುಂಬಿಕೊಂಡು ಹೊರಟಿರುವ ವ್ಯಕ್ತಿಗೆ ತನ್ನ ಜೊತೆಗಿರುವ ವಿಕ್ಷಿಪ್ತ ವ್ಯಕ್ತಿ ಹತ್ತು ಲಕ್ಷಕ್ಕೆ ಬೆಲೆ ಬಾಳುವ ಖೈದಿ ಎಂದು ಗೊತ್ತಾದಾಗ ಏನು ಮಾಡುತ್ತಾನೆ? ಇವರಿಬ್ಬರಿಗೆ ಜೊತೆಯಾಗಿ ಪ್ರೇಮಿಗಳಿಬ್ಬರು ಸೇರುತ್ತಾರೆ. ಆ ಹುಡುಗನದೋ ವಿಪರೀತ ಮಾತು. ಹತ್ತು ಲಕ್ಷದ ಖೈದಿ ತನ್ನ ಜೀವನ ಬೆಳಗಿಸುವ ಫಿಕ್ಸೆಡ್ ಡಿಪಾಸಿಟ್ ಎಂದವನ ಅನಿಸಿಕೆ. ನಮಗಿದೆಲ್ಲ ಯಾಕೆ, ನಡೀರಿ ಹೊರಟೋಗೋಣ ಅನ್ನೋ ಹುಡುಗಿ. ಅವರಿಬ್ಬರನ್ನೂ ಹುಡುಕುತ್ತಿರುವ ಊರಿನ ಜನರು. ಹೆಂಡತಿಯ ಹೆರಿಗೆಗೆಂದು ರಾಜಸ್ಥಾನದ ಮರುಭೂಮಿಯಿಂದ ಬರುವ ಸೈನಿಕ. ಹೆರಿಗೆಗಾಗಿ ಸೊಸೆಯನ್ನು ಕರೆದುಕೊಂಡು ಆಟೋದಲ್ಲಿ ಹೋಗುತ್ತಿದ್ದಾಗ ಆಟೋ ಕೆಟ್ಟು ನಿಂತು ಖೈದಿಯ ಸಹಾಯದಿಂದ ಹೆರಿಗೆಯಾಗಿ…. ಮಗುವಿನ ಜನನದೊಂದಿಗೆ ಎಲ್ಲರೂ ಬದಲಾಗುತ್ತಾರೆ. ಚೂರು ಚೂರು…..

ಪ್ರತಿಯೊಂದು ಪಾತ್ರವನ್ನೂ ತಾಳ್ಮೆಯಿಂದ ತಿದ್ದಿ ತೀಡಿ, ಕತೆಯ ಆಶಯಕ್ಕೆ ಪೂರಕವಾಗಿ ಸೃಷ್ಟಿಸಿರುವುದೇ ಚಿತ್ರದ ಹೆಗ್ಗಳಿಕೆ. ಯಾವ ಪಾತ್ರವೂ ಹೀಗೆ ಬಂದು ಹಾಗೆ ಯಾಕೆ ಹೋಯಿತು ಎನ್ನುವಂತಿಲ್ಲ. ನೇಣಿಗಾಕುವ ಹಗ್ಗಕ್ಕೆ ಮಗುವಿನ ತೊಟ್ಟಿಲಾಗುವ ಸಂಭ್ರಮ. ನೇಣಿನ ಹಗ್ಗ ತೊಟ್ಟಿಲಾಗುವಾಗ ಮನುಷ್ಯನ ಮನದ ಪರಿವರ್ತನೆ. ರಾಮಾಯಣದಿಂದಾರಂಭವಾಗುವ ಚಿತ್ರ ಮಹಾಭಾರತದ ಕೃಷ್ಣ ಅರ್ಜುನನ ಸಂಭಾಷಣೆಯ ಹಾಡಿನೊಂದಿಗೆ ಅಂತ್ಯದತ್ತ ಪಯಣಿಸುತ್ತದೆ. ಕತೆ, ಕತೆಗಿಂತ ಹೆಚ್ಚಾಗಿ ಬಿಗಿಯಾದ ಚಿತ್ರಕತೆ ರಾಮಾ ರಾಮಾ ರೇಯ ಶಕ್ತಿ. ಈ ಶಕ್ತಿಗೆ ಮತ್ತಷ್ಟು ಬಲ ತುಂಬಿರುವುದು ಹಿನ್ನೆಲೆ ಸಂಗೀತ ಮತ್ತು ಹಾಡುಗಳು. ಹಸಿರಿನ ಪ್ರದೇಶಗಳಷ್ಟೇ ಅಲ್ಲ ಒಣ ಭೂಮಿಯ ನಡುವಿನ ರಸ್ತೆಯಲ್ಲೂ ಸೌಂದರ್ಯವಿದೆ ಎಂದು ಛಾಯಾಗ್ರಹಕರು ತೋರಿಸಿದ್ದಾರೆ. ಚಿತ್ರದಲ್ಲಿ ಕೊರತೆಯೇ ಇಲ್ಲವಾ? ಖಂಡಿತ ಇದೆ! ಕೆಎ – 35 ಗಾಡಿ ಉತ್ತರ ಕರ್ನಾಟಕದ ಹಳ್ಳಿ, ಕಡಲಿನಗಲದ ಬಯಲು ಪ್ರದೇಶವನ್ನು ತೋರಿಸಿದ ಚಿತ್ರದ ಪಾತ್ರಧಾರಿಗಳ ಭಾಷೆಯೂ ಅಲ್ಲಿಯದೇ ಆಗಿದ್ದರೆ ಚಿತ್ರ ಪರಿಪೂರ್ಣವಾಗಿಬಿಡುತ್ತಿತ್ತೇನೋ! ಒಂದಷ್ಟು ಕೊರತೆ ಇರಬೇಕಲ್ವೇ!?!

ಇದು ಎಂಟರ್ ಟೈನಿಂಗ್ ಸಿನಿಮಾ ಅಲ್ಲ, ಇದು ಕಲಾತ್ಮಕ ಸಿನಿಮಾ ಅಲ್ಲ, ಇದು ಅತ್ಯದ್ಭುತ ಸಿನಿಮಾ ಕೂಡ ಅಲ್ಲ, ಇದೊಂದು ಅರ್ಥಪೂರ್ಣ ಸಿನಿಮಾ.

No comments:

Post a Comment