Sep 15, 2015

ಕೆಂಪ್ ಶರ್ಟು ನೀಲಿ ಚೆಡ್ಡಿ ಮೂರು ವರ್ಷ....

Dr Ashok K R
ಬದುಕು ಮುಗಿಸಿದ ಮಗುವೊಂದು ಮನುಕುಲವನ್ನು ಕಲಕಿದ ದೃಶ್ಯವದು. ಸಾವಿರ ಸಾವಿರ ಪದಗಳ ಲೇಖನಗಳು, ಪ್ರತಿಭಟನೆಗಳು, ನಿರಾಶ್ರಿತರ ಕೂಗುಗಳ್ಯಾವುದೂ ಮಾಡದ ಕಾರ್ಯವನ್ನು ಒಂದು ಫೋಟೋ ಮಾಡಿಸುತ್ತಿದೆ. ಲಕ್ಷ ಲಕ್ಷ ಸಂಖೈಯಲ್ಲಿ ಬರುತ್ತಿದ್ದ ಸಿರಿಯಾ ನಿರಾಶ್ರಿತರಿಗೆ ಮುಚ್ಚಿಹೋಗಿದ್ದ ಯುರೋಪ್ ದೇಶದ ಗಡಿಗಳು ಇದೊಂದು ಫೋಟೋದಿಂದ ತೆರೆದುಕೊಂಡಿದೆ. ನಿರಾಶ್ರಿತರಿಗೆ ಆಶ್ರಯ ಕೊಡುವುದಕ್ಕೆ ಅನೇಕ ಹಳೆಯ ಒಪ್ಪಂದಗಳನ್ನು ಬದಿಗೆ ಸರಿಸಿರುವ ಜರ್ಮನಿ ದೇಶ ಇತರೆ ದೇಶಗಳಿಗೂ ಅದೇ ಮಾದರಿ ಅನುಸರಿಸುವಂತಹ ವಾತಾವರಣ ನಿರ್ಮಿಸಿದೆ. ಈ ಮಾನವೀಯ ನೆಲೆಗಳ ನಡುವೆಯೇ ನಿರಾಶ್ರಿತರಿಗೆ ಆಶ್ರಯ ಕೊಡುವುದಕ್ಕೆ ದೇಶವಾಸಿಗಳಿಂದ, ವಿವಿಧ ಪಕ್ಷಗಳಿಂದ ವಿರೋಧವೂ ವ್ಯಕ್ತವಾಗುತ್ತಿದೆ. ಆ ವಿರೋಧ ಕೂಡ ಸಂಪೂರ್ಣ ನಿರಾಧಾರವಾದುದೇನಲ್ಲ. ಏನಿದು ಸಿರಿಯಾ ಬಿಕ್ಕಟ್ಟು? ಯಾಕೆ ನಾಲ್ಕು ಲಕ್ಷಕ್ಕೂ ಅಧಿಕ ಜನರು ಸಿಕ್ಕ ಸಿಕ್ಕ ದಾರಿಗಳಲ್ಲಿ, ಸಿಕ್ಕ ಸಿಕ್ಕ ಬೋಟುಗಳಲ್ಲಿ ಜೀವದ ಹಂಗು ತೊರೆದು ದೇಶ ಬಿಡುತ್ತಿದ್ದಾರೆ. ಓಡುವಿಕೆಯ ಹಾದಿಯಲ್ಲಿ ಕುಟುಂಬಸ್ಥರು ಸತ್ತು ಹೋದರೂ ಓಡುವವರ ವೇಗ ಕುಂದಿಲ್ಲ. ಇನ್ನು ದೇಶದೊಳಗಡೆಯೇ ನಿರಾಶ್ರಿತರಾಗಿರುವವರ ಸಂಖೈ ಅಂದಾಜಿಗೇ ಸಿಗದಷ್ಟು ಏರಿಕೆಯಾಗುತ್ತಿದೆ. ಅಧಿಕೃತವಾಗಿ ಪ್ರಪಂಚ ನೋಡಿರುವುದು ಎರಡು ವಿಶ್ವ ಯುದ್ಧ. ನಿರಾಶ್ರಿತರ ಗೋಳುಗಳನ್ನು ಓದುತ್ತಿದ್ದರೆ, ನೋಡುತ್ತಿದ್ದರೆ ಯುದ್ಧಗಳು ಮುಗಿದಿದ್ದಾದರೂ ಎಲ್ಲಿ ಎಂಬ ಪ್ರಶ್ನೆ ಮೂಡುತ್ತಲೇ ವಿಶ್ವ ಯುದ್ಧ ನಿರಂತರ ಎಂಬ ಕಹಿ ಸತ್ಯದ ದರ್ಶನವನ್ನೂ ಮಾಡಿಸುತ್ತಿದೆ.

ಮಧ್ಯಪ್ರಾಚ್ಯದ ದೇಶಗಳಲ್ಲಿ ನಡೆಯುವ ಆಂತರಿಕ ಯುದ್ಧಗಳೆಲ್ಲ ಒಂದಷ್ಟು ಸಂಗತಿಗಳು ಸಾಮಾನ್ಯವಾಗಿಬಿಟ್ಟಿದೆ. ಅದು ಯೆಮೆನ್ ಇರಬಹುದು, ಇಜಿಪ್ಟ್ ಇರಬಹುದು, ಲಿಬಿಯಾ, ಇರಾಕ್ ಇರಬಹುದು ಈ ದೇಶದೊಳಗೆ ನಡೆದ – ನಡೆಯುತ್ತಿರುವ ಯುದ್ಧಗಳಲ್ಲೆಲ್ಲಾ ಕೆಲವು ಪದಗಳನ್ನು ಬಳಸಲೇಬೇಕು. ಸರ್ವಾಧಿಕಾರ, ಶಿಯಾ, ಸುನ್ನಿ, ತೈಲ ಸಂಪತ್ತು, ಇರಾನ್, ಸೌದಿ ಅರೇಬಿಯಾ, ಅಮೆರಿಕ, ಜಿಹಾದಿ ಉಗ್ರರು, ಮತ್ತೀಗ ಹೊಸದಾಗಿ ಐ.ಎಸ್.ಐ.ಎಸ್ ಇವಿಷ್ಟೂ ಎಲ್ಲ ಗಲಭೆಗಳಲ್ಲೂ ಪ್ರಮುಖ ಪಾತ್ರ ವಹಿಸಿವೆ. ಕೆಲವೆಡೆ ಪ್ರಭುತ್ವದ ಪರವಾಗಿ, ಕೆಲವೆಡೆ ಪ್ರಭುತ್ವದ ವಿರುದ್ಧ ಹೋರಾಡುತ್ತಿರುವವರ ಪರವಾಗಿ. ಯೆಮೆನ್ನಿನಲ್ಲಿ ಪ್ರಭುತ್ವದ ಪರವಾಗಿ ಸೌದಿ ಅರೇಬಿಯಾ ನಿಂತರೆ, ಪ್ರಭುತ್ವದ ವಿರುದ್ಧ ಹೋರಾಡಲು ಬಂದೂಕು ಹಿಡಿದಿದ್ದ ಅಲ್ ಹುತಿ ಉಗ್ರರಿಗೆ ನೆರವಾಗಿದ್ದು ಇರಾನ್. ಇಂತಹ ‘ನೆರವಿಗೆ’ ಸತ್ಯ - ಅಸತ್ಯ, ನ್ಯಾಯ - ಅನ್ಯಾಯ, ಧರ್ಮ – ಅಧರ್ಮಗಳು ಪ್ರಮುಖ ಪಾತ್ರವಹಿಸಿಲ್ಲ. ಪ್ರಮುಖ ಪಾತ್ರ ವಹಿಸಿರುವುದು ಶಿಯಾ ಮತ್ತು ಸುನ್ನಿ ಮುಸ್ಲಿಮರಿಗೆ ನೆರವು ನೀಡಿ, ಅದರಿಂದ ತಮ್ಮ ಪಂಗಡದ ಜನರ ಪ್ರಾಬಲ್ಯ ಮಧ್ಯಪ್ರಾಚ್ಯದಲ್ಲಿರುವಂತೆ ನೋಡಿಕೊಳ್ಳುವುದೇ ಆಗಿದೆ. ಸಿರಿಯಾದ ಆಂತರಿಕ ಯುದ್ಧದಲ್ಲೂ ಮೇಲೆ ತಿಳಿಸಿದ ಎಲ್ಲಾ ಅಂಶಗಳೂ ಇವೆ. ಕೆಲವಷ್ಟು ಮುಖಗಳು ಬದಲಾಗಿವೆ, ಯಾರು ಯಾರ ಪರವಾಗಿದ್ದಾರೆ ಎಂಬುದು ಕೊಂಚ ಬದಲಾಗಿದೆ. ಅಷ್ಟು ಬಿಟ್ಟರೆ ಎಲ್ಲೆಡೆ ಹಿಂಸೆಯನ್ನು ಪ್ರಚೋದಿಸುವವರ ಸಂಖೈಯೇ ಜಾಸ್ತಿಯಿದೆ.

2011ರ ಇಸವಿ ಅರಬ್ ದೇಶಗಳನ್ನು ಬೆಚ್ಚಿಬೀಳಿಸಿದ ವರುಷ. ಬಹುತೇಕ ಅರಬ್ ದೇಶಗಳಲ್ಲಿರುವುದು ಏಕವ್ಯಕ್ತಿಯ ಸರಕಾರ. ಕುಟುಂಬದಿಂದ ಕುಟುಂಬಕ್ಕೆ ಇಡೀ ದೇಶವನ್ನೇ ಬಳುವಳಿಯಾಗಿ ಪಡೆದವರೇ ಇಲ್ಲಿ ಅಧ್ಯಕ್ಷರು. ಹೆಸರಿಗೆ ಬೇರೆಯವರು ಇರುತ್ತಾರಾದರೂ ಕೊನೆಗೆ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವವರು ಅಧ್ಯಕ್ಷರೇ. ಯಾರೂ ಪ್ರಶ್ನಿಸಲಾರದ ಅಧ್ಯಕ್ಷತೆ ಸಿಕ್ಕಾಗ ಸಹಜವಾಗಿ ಅದು ಅಧ್ಯಕ್ಷ ಸ್ಥಾನದಲ್ಲಿರುವವರ ಅಹಂ ಅನ್ನು ಹೆಚ್ಚಿಸಿ ಸರ್ವಾಧಿಕಾರಕ್ಕೆ ದಾರಿ ಮಾಡಿಬಿಡುತ್ತದೆ. ಸರ್ವಾಧಿಕಾರವೆಂಬುದು ಒಳ್ಳೆಯದ್ದಾಗಿರುವ ಸಾಧ್ಯತೆಗಳು ತುಂಬಾನೇ ಕಡಿಮೆ. ಒಳ್ಳೆಯದಾದವರಿಗದು ಅದೇ ಒಳಿತೆಂಬ ಭಾವನೆ ಮೂಡಿಸುತ್ತದಾದರೂ ಸರ್ವಾಧಿಕಾರದಿಂದ ನೊಂದವರು ಖಂಡಿತವಾಗಿಯೂ ಅದರ ಪರವಾಗಿರುವುದಿಲ್ಲ. ನೊಂದವರ ಸಂಖೈ ಹೆಚ್ಚುತ್ತಿದ್ದಂತೆ ಅರಬ್ ದೇಶಗಳಲ್ಲಿ ಸರ್ವಾಧಿಕಾರದ ವಿರುದ್ಧ ಪ್ರಜಾಪ್ರಭುತ್ವದ ಪರವಾಗಿ ಹೋರಾಟಗಳು ರೂಪುಗೊಳ್ಳುತ್ತವೆ. ಹೀಗೆ ರೂಪುಗೊಂಡ ಹೋರಾಟಗಳನ್ನು ಹೈಜಾಕ್ ಮಾಡಿಕೊಳ್ಳುವವರ ಸಂಖೈ ಹೆಚ್ಚಿದಂತೆ ಹೋರಾಟದ ಮೂಲ ಆಶಯವೇ ಮರೆತು ಹೋಗಿ ಎಲ್ಲೆಡೆ ಹಿಂಸಾಚಾರವೇ ತಾಂಡವವಾಡತೊಡಗಿತು. Arab Spring ಹೆಸರಿನಲ್ಲಿ ಶುರುವಾದ ಜನರ ಹೋರಾಟ ಅರಬ್ಬಿನ ಅನೇಕ ದೇಶಗಳಿಗೆ ವ್ಯಾಪಿಸಿತು. ಈ ಹೋರಾಟದಲ್ಲಿ ಪಾಲ್ಗೊಂಡ ದೇಶಗಳಲ್ಲಿ ಸಿರಿಯಾ ಕೂಡ ಒಂದು. ಸಿರಿಯಾದ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ವಿರುದ್ಧ ಸಿರಿಯಾದ ನಾಗರೀಕರು ದೊಡ್ಡ ಸಂಖೈಯಲ್ಲಿ ಪ್ರತಿಭಟನೆಗೆ ಇಳಿದರು. ಅಂತರ್ಯುದ್ಧಕ್ಕೆ ಸಿರಿಯಾ ಹೋಗುವಷ್ಟರ ಮಟ್ಟಿಗೆ ಅಲ್ಲಿನ ಪರಿಸ್ಥಿತಿ ಹದಗೆಟ್ಟಿದ್ದಾದರೂ ಯಾಕೆ?

ಬಶರ್ ಅಲ್ ಅಸ್ಸದ್
ಬಶರ್ ಅಲ್ ಅಸ್ಸಾದ್ ತಮ್ಮ ತಂದೆಯ ಸಾವಿನ ನಂತರ 2000ದಿಂದ ಅಧ್ಯಕ್ಷರಾಗಿ ಸ್ವ – ಆಯ್ಕೆಗೊಂಡರು. ಬಶರ್ ಅಲ್ ಅಸ್ಸಾದ್ ಶಿಯಾ ಪಂಗಡಕ್ಕೆ ಸೇರಿದವರು. ಸಿರಿಯಾದ ಹೆಚ್ಚಿನ ಮುಸ್ಲಿಮರು ಸುನ್ನಿ ಪಂಗಡಕ್ಕೆ ಸೇರಿದವರು. ಸುನ್ನಿ ಶಿಯಾ ಹೊರತುಪಡಿಸಿದರೆ ಕುರ್ದಿ ಪಂಗಡಕ್ಕೆ ಸೇರಿದವರು ಸಿರಿಯಾದಲ್ಲಿ ಹೆಚ್ಚಿದ್ದರು. ಶಿಯಾ ಪಂಗಡಕ್ಕೆ ಸೇರಿದ ಬಶರ್ ಅಲ್ ಅಸ್ಸಾದರ ಸರಕಾರ ಹೆಸರಿಗೆ ಜಾತ್ಯತೀತವಾದರೂ ಶಿಯಾ ಪಂಗಡಕ್ಕೆ ಅನುಕೂಲಕರವಾಗಿ ಕಾರ್ಯನಿರ್ವಹಿಸಿ ಸುನ್ನಿ ಪಂಗಡದ ಜನರಲ್ಲೊಂದು ಅಸಹನೆಯನ್ನು ಸೃಷ್ಟಿಸುತ್ತಲೇ ಇತ್ತು. ಅಧಿಕಾರಕ್ಕೆ ಬಂದ ಹೊಸತರಲ್ಲಿ ಅಸ್ಸಾದ್ ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ದೇಶವನ್ನು ಕೊಂಡೊಯ್ಯುವುದರ ಬಗ್ಗೆ ಕೆಲವು ಚರ್ಚೆಗಳನ್ನು ಹುಟ್ಟಿಹಾಕಿದರಾದರೂ, ತಾವೇ ಹುಟ್ಟುಹಾಕಿದ ಚರ್ಚೆಯನ್ನು ತಾವೇ ಮೊಟಕುಮಾಡಿಬಿಟ್ಟರು. ಪ್ರಜಾಪ್ರಭುತ್ವ ಹೋರಾಟಗಾರರನ್ನು ಬಂಧಿಸುವುದೆಲ್ಲ ಯಥೇಚ್ಛವಾಗಿ ನಡೆಯಿತು. ಇನ್ನು ಕುರ್ದ್ ಜನಾಂಗದವರಿಗೆ ದಶಕಗಳ ಕಾಲ ಸಿರಿಯಾದ ಪೌರತ್ವವೇ ದಕ್ಕಿರಲಿಲ್ಲ. ತಮ್ಮದೇ ಊರಿನಲ್ಲಿ ತಮ್ಮದೇ ದೇಶದಲ್ಲಿ ಅವರು ಪರದೇಸಿಗಳಾಗಿದ್ದರು. ಸುತ್ತಮುತ್ತಲ ದೇಶಗಳಲ್ಲಿ ಪ್ರಜಾಪ್ರಭುತ್ವದ ಪರವಾಗಿ ಶುರುವಾದ ಹೋರಾಟಗಳು ಸಿರಿಯಾಗೂ ಹಬ್ಬಲು ಹೆಚ್ಚು ಕಾಲ ಹಿಡಿಯಲಿಲ್ಲ. 2011ರ ಇಸವಿಯ ಮಾರ್ಚಿ 15ರಂದು ಸಿರಿಯಾದ ರಾಜಧಾನಿ ಡಮಾಸ್ಕಸ್ ನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತದೆ, ಪ್ರಜಾಪ್ರಭುತ್ವದ ಸ್ಥಾಪನೆಗೆ ಮತ್ತು ರಾಜಕೀಯ ಖೈದಿಗಳ ಬಿಡುಗಡೆಗೆ ಒತ್ತಾಯಿಸಿ. ಪೋಲೀಸರು ಗುಂಡು ಹಾರಿಸಿ ಮೂವರನ್ನು ಹತ್ಯೆಗೈಯುತ್ತಾರೆ. ಪ್ರತಿಭಟನೆ ಕಾವು ಪಡೆದುಕೊಳ್ಳುತ್ತದೆ. ಪ್ರತಿಭಟನೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದ್ದು ಸರಕಾರದ ವಿರುದ್ಧ ಗೋಡೆಬರಹ ಬರೆದ ಶಾಲಾ ಹುಡುಗರನ್ನು ಪೋಲೀಸರು ಬಂಧಿಸಿದಾಗ. ರೊಚ್ಚಿಗೆದ್ದ ಪ್ರತಿಭಟನಕಾರರು ಏಳು ಜನ ಪೋಲೀಸರನ್ನು ಹತ್ಯೆಗೈಯುವುದರೊಂದಿಗೆ ಪ್ರಜಾಪ್ರಭುತ್ವಕ್ಕಾಗಿ ಆಗ್ರಹಿಸಿ ನಡೆಯುತ್ತಿದ್ದ ಹೋರಾಟ ಹಿಂಸೆಯ ಮಾರ್ಗವನ್ನು ಆಯ್ದುಕೊಂಡಿತು. ಹಿಂಸೆ – ಪ್ರತಿಹಿಂಸೆಯ ವಿಷವರ್ತುಲದಲ್ಲಿ ಸಿರಿಯಾ ಸಿಲುಕಿಕೊಂಡಿತು. ಸಿರಿಯಾದ ದಂಗೆಗೆ 2007ರಲ್ಲಿ ಸಿರಿಯಾ ಎದುರಿಸಿದ ಭೀಕರ ಬರಗಾಲ ಕೂಡ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ. ಬರದ ಕಾರಣದಿಂದ ಲಕ್ಷಾಂತರ ಜನರು ಗ್ರಾಮೀಣ ಭಾಗದಿಂದ ನಗರಗಳಿಗೆ ವಲಸೆ ಬಂದರು. ವಲಸೆ ಹೆಚ್ಚಿ, ನಿರುದ್ಯೋಗಿಗಳ ಸಂಖೈ ಹೆಚ್ಚಿ ಆರ್ಥಿಕತೆಯಲ್ಲಿ ಉಂಟಾದ ಏರುಪೇರುಗಳು ಸಿರಿಯಾದ ಬಿಕ್ಕಟ್ಟಿಗೆ ತನ್ನದೇ ರೀತಿಯಲ್ಲಿ ಕ್ರಾಂತಿ ಪ್ರಕ್ರಿಯೆಯೆ ಕಾರಣವಾಯಿತು. ಆದರೆ ಕ್ರಾಂತಿಯೆಂಬುದೀಗ ಕೇವಲ ಹಿಂಸೆಯಾಗಿ ಪರಿವರ್ತನೆಯಾಗಿಬಿಟ್ಟಿದೆ.

ಸ್ವತಂತ್ರ ಸಿರಿಯಾ ಸೇನೆ
ಪ್ರತಿಭಟನೆ ಹಿಂಸೆಯ ರೂಪ ತಾಳಿದಾಗ ಬಶರ್ ಅಲ್ ಅಸ್ಸಾದ್ ಶಾಂತಿ ಕಾಪಾಡುವ ಯೋಚನೆ ಮಾಡಲಿಲ್ಲ. ಅರಬ್ ದೇಶಗಳಲ್ಲಾದ ಬೆಳವಣಿಗೆಗಳು, ಸರ್ವಾಧಿಕಾರದ ಪತನವಾಗಿದ್ದೆಲ್ಲವೂ ಅವರ ಗಮನದಲ್ಲಿತ್ತಲ್ಲ. ಹಾಗಾಗಿ ಶಾಂತಿಗಾಗಿ ಅವರ ಕಾರ್ಯಕ್ರಮಗಳಿರದೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಪ್ರತಿಭಟನೆಯನ್ನು ಹತ್ತಿಕ್ಕುವ ಆತುರಕ್ಕೆ ಬಿದ್ದರು. ಪ್ರತಿಭಟನಾಕಾರರ ಹತ್ಯೆಗಳಾದವು. ಮತ್ತೆ ಇಲ್ಲಿ ಹೋರಾಟ ಶಿಯಾ ಮತ್ತು ಮುಸ್ಲಿಂ ಪಂಗಡದ ಮಧ್ಯೆ ಎಂದು ಬದಲಾಗಿಬಿಟ್ಟಿತು. ಶಿಯಾ ಮುಸ್ಲಿಮ್ ಪಂಗಡಕ್ಕೆ ಸೇರಿದ ಸರ್ವಾಧಿಕಾರಿ ಅಸ್ಸಾದ್ ಗೆ ಶಿಯಾ ಪ್ರಾಬಲ್ಯ ಹೆಚ್ಚಿಸುವುದಕ್ಕೆ ಸದಾ ಬೆಂಬಲ ನೀಡುವ ಇರಾನಿನ ಬೆಂಬಲ ದೊರೆಯಿತು. ಶಸ್ತ್ರಾಸ್ತ್ರ, ಯುದ್ಧ ತರಬೇತಿಯೆಲ್ಲವೂ ಇರಾನ್ ನೀಡಿತು. ದೀರ್ಘ ಕಾಲದ ಗೆಳೆಯನೆಂಬ ನೆಪದಿಂದ ರಷ್ಯಾ ಕೂಡ ಅಸ್ಸಾದ್ ನ ಬೆಂಬಲಕ್ಕೆ ನಿಂತಿತು. ಇನ್ನು ಸ್ವತಂತ್ರ ಸಿರಿಯಾ ಸೈನ್ಯ ಕಟ್ಟಿದ ಪ್ರತಿಭಟನಕಾರರ ಗುಂಪಗೆ ಸಿರಿಯಾ ಸೇನೆಯನ್ನು ತೊರೆದು ಪ್ರತಿಭಟನೆಗೆ ಇಳಿದವರ ಮಾರ್ಗದರ್ಶನ ಸಿಕ್ಕಿತು. ಪ್ರತಿಭಟನಕಾರರಲ್ಲಿ ಹೆಚ್ಚಿನವರು ಸುನ್ನಿ ಪಂಗಡಕ್ಕೆ ಸೇರಿದವರಾದ್ದರಿಂದ ಇರಾನಿನ ಶಿಯಾ ಪ್ರಾಬಲ್ಯವನ್ನು ಮುರಿಯಲಿಚ್ಛಿಸುವ ಸೌದಿ ಅರೇಬಿಯಾದ ಬೆಂಬಲ ದಕ್ಕಿತು. ಅಮೆರಿಕಾದಂತಹ ದೇಶಗಳು ಪ್ರತಿಭಟನಕಾರರ ಗುಂಪಿಗೆ ಸಹಾಯ ಮಾಡಲಾರಂಭಿಸಿತು. ಶಸ್ತ್ರಾಸ್ತ್ರಗಳನ್ನೊರತುಪಡಿಸಿ ಇನ್ನಿತರ ಸಾಮಗ್ರಿಗಳಿಗೆ ಲಕ್ಷಾಂತರ ಡಾಲರ್ ನೆರವು ನೀಡಿತು. ಅಲ್ಲಿಗೆ ಬಾಹುಬಲ ಪ್ರದರ್ಶಿಸಲು ಪ್ರಬಲ ದೇಶಗಳಿಗೆ ಮತ್ತೊಂದು ಯುದ್ಧಭೂಮಿ ದಕ್ಕಿದಂತಾಯಿತು.

ಸಿರಿಯಾದಲ್ಲಿ ಐ.ಎಸ್.ಐ.ಎಸ್
ಒಂದಷ್ಟು ದೇಶಗಳ ನೆರವನ್ನು ಅಸ್ಸಾದ್ ಕಳೆದುಕೊಂಡಿದ್ದು ತನ್ನದೇ ದೇಶದ ಪ್ರಜೆಗಳ ಮೇಲೆ ಕೆಮಿಕಲ್ ಯುದ್ಧವನ್ನು ಸಾರಿದಾಗ. ತಾವು ಸಾವನ್ನು ಉಸಿರಾಡುತ್ತಿದ್ದೇವೆ ಎನ್ನುವುದು ಅರಿವಾಗುವುದರೊಳಗಾಗಿ ವ್ಯಕ್ತಿ ಮೃತಪಟ್ಟಿರುತ್ತಾನೆ. ಸರೀನ್ (Sarine) ಎಂಬ ವಿಷಯುಕ್ತ ಅನಿಲವನ್ನು ಈ ಕಾರ್ಯಕ್ಕೆ ಬಳಸಲಾಯಿತು. ಸಾವಿರಕ್ಕೂ ಅಧಿಕ ಜನರು ಮೃತಪಟ್ಟರು. ಅಸ್ಸಾದ್ ಸರಕಾರದ ಈ ಕ್ರಮ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೊಳಗಾಗಿ ಅಸ್ಸಾದ್ ಸರಕಾರಕ್ಕೆ ಬೆಂಬಲ ಕೊಡುತ್ತಿದ್ದವರನ್ನು ಮತ್ತೆ ತಮ್ಮ ನಿರ್ಧಾರವನ್ನು ಯೋಚಿಸುವಂತೆ ಮಾಡಿತು. ಸ್ವತಂತ್ರ ಸಿರಿಯಾ ಸೇನೆಯ ಜೊತೆಜೊತೆಗೆ ಆಲ್ ಖೈದಾ ಬೆಂಬಲಿತ ಸಂಘಟನೆಗಳೂ ಸರಕಾರದೊಂದಿಗೆ ಯುದ್ಧಕ್ಕೆ ಇಳಿದವು. ಕುರ್ದ್ ಜನಾಂಗದ ಜನರಿಗೆ ಈ ಗಲಭೆಗಳ ಮಧ್ಯೆ ಅಸ್ಸಾದ್ ಸರಕಾರ ಪೌರತ್ವ ನೀಡಿಬಿಟ್ಟಿತು. ಸುನ್ನಿಗಳ ಜೊತೆಗೆ ಕುರ್ದ್ ಗಳು ಸೇರುವುದು ಅವರಿಗೆ ಬೇಕಿರಲಿಲ್ಲ. ಕುರ್ದ್ ಜನರು ಮೊದಮೊದಲು ಈ ಪ್ರತಿಭಟನೆಗಳಿಗೆ ಇಳಿಯಲಿಲ್ಲವಾದರೂ, ಸರಕಾರೀ ಸೈನಿಕರು ಕುರ್ದ್ ಪ್ರದೇಶದ ಮೇಲೂ ದಾಳಿ ನಡೆಸಲು ಪ್ರಾರಂಭಿಸಿದ ನಂತರ ತಮ್ಮದೇ ಸೈನ್ಯವನ್ನು ಕಟ್ಟಿಕೊಂಡಿತು. ಸಿರಿಯಾದ ಅಲ್ಪಸಂಖ್ಯಾತರಾದ ಕ್ರಿಶ್ಚಿಯನ್ನರು ಸರಕಾರೀ ಸೈನ್ಯವನ್ನು ಸೇರಿದರು. ರೆಬೆಲ್ಲುಗಳಿಗಿಂತ ಸರಕಾರೀ ಸೈನ್ಯವೇ ಹೆಚ್ಚು ಜಾತ್ಯತೀತ ಮನೋಭಾವ ಹೊಂದಿದೆ ಎಂದವರ ಅಭಿಪ್ರಾಯ. ಒಂದು ದಿನ ಪ್ರತಿಭಟನಕಾರರು ಮೇಲುಗೈ ಸಾಧಿಸಿದರೆ, ಶಸ್ತ್ರಾಸ್ತ್ರಗಳನ್ನು ಹೆಚ್ಚು ಹೊಂದಿರುವ ಸರಕಾರೀ ಸೈನ್ಯ ಮತ್ತೊಂದು ದಿನ ಮೇಲುಗೈ ಸಾಧಿಸುತ್ತಿತ್ತು. ಹಿಂಸೆಯೇ ಪ್ರಮುಖ ಸ್ಥಾನ ಪ್ರಜಾಪ್ರಭುತ್ವವಕ್ಕಾಗಿ ಪ್ರಾರಂಭವಾದ ಹೋರಾಟ ತನ್ನ ಉದ್ದೇಶವನ್ನಾಗಲೇ ಕಳೆದುಕೊಳ್ಳಲು ಪ್ರಾರಂಭಿಸಿತ್ತು. ವೈಯಕ್ತಿಕ ಹಿತಾಸಕ್ತಿಗಾಗಿ ಅನ್ಯದೇಶದವರು ನಡೆಸಿದ ಹಸ್ತಕ್ಷೇಪವೂ ಇದಕ್ಕೆ ಕಾರಣವಾಗಿತ್ತು. ಕೊನೆಗೆ ಸಿರಿಯಾದ ಇಡೀ ಚಿತ್ರಣ ಬದಲಾಗಿ ಹೋಗಿದ್ದು ಐ.ಎಸ್.ಐ.ಎಸ್ ಎಂಬ ಉಗ್ರ ಇಸ್ಲಾಂ ಸಂಘಟನೆಯ ಆಗಮನದೊಂದಿಗೆ.

ಇಸ್ಲಾಮಿನ ರಕ್ಷಕನೆಂಬ ಹಣೆಪಟ್ಟಿಯೊಂದಿಗೆ Islamic State ಅಸ್ತಿತ್ವಕ್ಕೆ ಬಂದಿದ್ದು ಇರಾಕಿನಲ್ಲಿ. ಇಷ್ಟರಲ್ಲಾಗಲೇ ಪ್ರಾಮುಖ್ಯತೆ ಕಳೆದುಕೊಂಡಿದ್ದ ಆಲ್ ಖೈದಾ ಸಂಘಟನೆಯ ಮುಂದುವರೆದ ರೂಪದಂತೆ ಇಸ್ಲಾಮಿಕ್ ಸ್ಟೇಟ್ ಹುಟ್ಟಿಕೊಂಡಿತು. ಐ.ಎಸ್ ಕ್ರೌರ್ಯ ಅಲ್ ಖೈದಾ ಸಂಘಟನೆಯವರನ್ನೇ ಬೆಚ್ಚಿ ಬೀಳಿಸಿತು. ಮತಾಂಧ ಮನಸ್ಸುಗಳು ಹೆಚ್ಚು ಕ್ರೌರ್ಯದ ಐ.ಎಸ್ ಕಡೆಗೆ ಆಕರ್ಷಿತರಾದರು. ಇರಾಕಿನಲ್ಲಿ ಸದ್ದಾಂ ಹುಸೇನ್ ಹತ್ಯೆಯೊಂದಿಗೆ ಇಸ್ಲಾಮಿಕ್ ಸ್ಟೇಟ್ ನ ಪ್ರಾರಂಭವಾಗುತ್ತದೆ. ಸದ್ದಾಂ ಹುಸೇನ್ ಹತ್ಯೆಗೆ, ಇರಾಕ್ ಯುದ್ಧಕ್ಕೆ ಅಮೆರಿಕಾ ನೇರ ಕಾರಣ. ಇರಾಕಿನಲ್ಲಿ ಕೆಮಿಕಲ್ ವೆಪನ್ನುಗಳಿವೆ ಎಂಬ ನೆಪ ಕೊಟ್ಟು ಯುದ್ಧವಾರಂಭಿಸಿತ್ತು ಅಮೆರಿಕ. ಕೊನೆಗೆ ಲಕ್ಷ ಲಕ್ಷ ಜನರ ಹತ್ಯೆಯಾದರೂ ಯಾವೊಂದು ಕೆಮಿಕಲ್ ವೆಪನ್ನುಗಳೂ ಸಿಗಲಿಲ್ಲ. ಸದ್ದಾಂ ಹುಸೇನ್ ಆಡಳಿತ ಕೊನೆಗೊಂಡಿತು, ತನಗೆ ಬೇಕಾದ ಸರಕಾರವನ್ನು ಅಮೆರಿಕಾ ಇರಾಕಿನಲ್ಲಿ ಪ್ರತಿಷ್ಟಾಪಿಸಿತು. ಜನಾಂಗೀಯ ಘರ್ಷಣೆಗಳು ಜರುಗುತ್ತಿದ್ದ ಇರಾಕಿನಿಂದ ತನ್ನ ಸೈನಿಕರನ್ನು ವಾಪಸ್ಸು ಕರೆಸಿಕೊಂಡಿತು. ಇಲ್ಲಿ ಇರಾಕಿನಲ್ಲಿ ಇಸ್ಲಾಮಿಕ್ ಸ್ಟೇಟ್ ಜನ್ಮ ತಾಳಿತು. ಅದು ಅಲ್ ಖೈದಾ ಇರಬಹುದು, ಐ.ಎಸ್ ಇರಬಹುದು ಅನೇಕನೇಕ ಉಗ್ರಗಾಮಿ ಸಂಘಟನೆಗಳ ಹುಟ್ಟಿನಲ್ಲಿ ಬೆಳವಣಿಗೆಯಲ್ಲಿ ಅಮೆರಿಕಾದ ನೇರ ಪಾತ್ರವಿದೆ. ಮತ್ತೀ ಪಾತ್ರಕ್ಕೆ ಪ್ರಮುಖ ಕಾರಣವಾಗಿ ಈ ದೇಶಗಳಲ್ಲಿ ಅಪಾರ ಪ್ರಮಾಣ ತೈಲ ಸಂಗ್ರಹವಿದೆ. ಇರಾಕಿನಿಂದ ಪ್ರಾರಂಭವಾದ ಐ.ಎಸ್ ನ ಪ್ರಾಬಲ್ಯ ಸಿರಿಯಾದತ್ತಲೂ ಸಾಗಿತು. ಐ.ಎಸ್ ಎಂಬ ಹೆಸರು ಐ.ಎಸ್.ಐ.ಎಸ್ (Islamic State of Iraq and Syria) ಎಂದು ಬದಲಾಯಿತು; ಆಂತರಿಕ ಯುದ್ಧದ ಪರಿಸ್ಥಿತಿ ಮೂಡಿದ ಸಿರಿಯಾದಲ್ಲಿ ಐ.ಎಸ್.ಐ.ಎಸ್ ನ ಪ್ರವೇಶ ಸಿರಿಯಾದ ಚಿತ್ರವನ್ನು ಹೇಗೆ ಬದಲಿಸಿತು?

ಐ.ಎಸ್.ಐ.ಎಸ್ ಸಂಘಟನೆಯಲ್ಲಿ ಸುನ್ನಿಗಳ ಪ್ರಾಬಲ್ಯವೇ ಅಧಿಕ. ಅದರಲ್ಲೂ ಸುನ್ನಿ ಪಂಗಡದೊಳಗಿರುವ ಕಟ್ಟರ್ ಇಸ್ಲಾಮಿನ ಪ್ರತಿಪಾದಕರಾದ ವಹಾಬಿ ಪಂಥದವರೇ ಅಧಿಕ. ಸಿರಿಯಾದ ಶಿಯಾ ಸರಕಾರದ ವಿರುದ್ಧ ಅಲ್ಲಿನ ಜನರು, ಅದರಲ್ಲೂ ಹೆಚ್ಚಿನ ಸುನ್ನಿ ಪಂಗಡದವರು ಬಂದೂಕು ಹಿಡಿದು ಹೋರಾಡುವಾಗ ತನ್ನ ಉದ್ದೇಶಗಳನ್ನು ಈಡರಿಸಿಕೊಳ್ಳದೇ ಬಿಟ್ಟೀತೆ? ಐ.ಎಸ್.ಐ.ಎಸ್ ನ ಪ್ರವೇಶ ಸರಕಾರೀ ಸೈನ್ಯದ ಪ್ರಾಬಲ್ಯವನ್ನು ಕಡಿಮೆ ಮಾಡಿತು. ಅನೇಕ ಕಡೆ ಸರಕಾರವನ್ನು ಐ.ಎಸ್.ಐ.ಎಸ್ ಮಣಿಸಲಾರಂಭಿಸಿತು. ಐ.ಎಸ್.ಐ.ಎಸ್ ನ ಉಗ್ರ ರೀತಿಗಳಿಂದ ಬೆಚ್ಚಿ ಬಿದ್ದ ಸ್ವತಂತ್ರ ಸಿರಿಯಾ ಸೇನೆ ಕೂಡ ಕೆಲವು ದಿನಗಳ ನಂತರ ಐ.ಎಸ್.ಐ.ಎಸ್ ವಿರುದ್ಧ ಹೋರಾಡಲಾರಂಭಿಸಿತು. ವಹಾಬಿ ಪಂಥ ಒಪ್ಪದ ಕುರ್ದ್ ಜನಾಂಗದವರ ಮೇಲೂ ಐ.ಎಸ್.ಐ.ಎಸ್ ಯುದ್ಧ ಸಾರಿತು. ಒಟ್ಟಿನಲ್ಲಿ ಇಡೀ ಸಿರಿಯಾ ಗೋಜಲುಗಳ ನಾಡಾಗಿಬಿಟ್ಟಿತು. ಸರಕಾರೀ ಸೈನ್ಯದ ವಿರುದ್ಧ ಸ್ವತಂತ್ರ ಸಿರಿಯಾ ಸೇನೆ, ಕುರ್ದ್ ಸೇನೆ, ಅಲ್ ಖೈದಾ ಮತ್ತು ಐ.ಎಸ್.ಐ.ಎಸ್ ಉಗ್ರರು; ಐ.ಎಸ್.ಐ.ಎಸ್ ಉಗ್ರರ ವಿರುದ್ಧ ಸ್ವತಂತ್ರ ಸಿರಿಯಾ ಸೇನೆ, ಕುರ್ದ್ ಸೇನೆ, ಸರಕಾರೀ ಸೇನೆ! ಯಾರು ಯಾರೊಡನೆ ಯಾಕೆ ಹೋರಾಡುತ್ತಿದ್ದಾರೆ ಎಂಬುದೇ ಮರೆಯುವ ಸ್ಥಿತಿ. ನೆನಪಿರಲಿ ಈ ಎಲ್ಲಾ ಹೋರಾಟ ಪ್ರಾರಂಭವಾಗಿದ್ದು ಪ್ರಜಾಪ್ರಭುತ್ವಕ್ಕಾಗಿ; ಆದರೀಗ ತನ್ನ ಮಾತಿಗೆ ಎದುರಾಡುವವರನ್ನು ಕೊಂದೇ ಬಿಡುವ ಇಸ್ಲಾಮಿನ ರಕ್ಷಕನೆಂದು ಹೇಳಿಕೊಳ್ಳುವ ಐ.ಎಸ.ಐ.ಎಸ್ ಸಿರಿಯಾದ ಬಹುಭಾಗವನ್ನು ನಿಯಂತ್ರಿಸುತ್ತಿದೆ. ಐ.ಎಸ್.ಐ.ಎಸ್ಸಿಗೆ ಶಸ್ತ್ರಾಸ್ತ್ರಗಳಿಗೆ ಬರವಿಲ್ಲ, ಅನೇಕ ದೇಶಗಳ ಮತಾಂಧ ಮುಸ್ಲಿಮರು ಐ.ಎಸ್ ಸೇರಲು ಹವಣಿಸುತ್ತಿರುವ ಕಾರಣ ಅವರಿಗೆ ಸೈನಿಕರ ಕೊರತೆಯೂ ಇಲ್ಲ.

ಈ ಎಲ್ಲಾ ಹೊಡೆದಾಟ ಬಡಿದಾಟಗಳಿಂದ ಹಾನಿಯಾಗಿರುವುದು ಯುದ್ಧದಲ್ಲಿ ನೇರವಾಗಿ ಭಾಗಿಯಾಗದ ಜನರಿಗೆ. ಈ ಜನರಲ್ಲಿ ಪ್ರಜಾಪ್ರಭುತ್ವ ಹೋರಾಟಕ್ಕೆ ಬೆಂಬಲ ಕೊಟ್ಟ ಜನರೂ ಇದ್ದಿರಲೇಬೇಕು. ಪ್ರಜಾಪ್ರಭುತ್ವಕ್ಕಾಗಿ ನಡೆದ ಹೋರಾಟ ಈ ರೀತಿಯಾಗಿ ಹಾಳುಗೆಟ್ಟುಹೋಗುತ್ತದೆ ಎಂದು ಅವರೂ ನಿರೀಕ್ಷಿಸರಲಿಕ್ಕಿಲ್ಲ. ಇರುವ ಭೂಮಿಯಲ್ಲಿ ಬದುಕುವುದು ದುಸ್ತರವಾದಾಗ ಹೆಚ್ಚು ಕಡಿಮೆ ನಾಲ್ಕು ಲಕ್ಷ ಜನರು ದೇಶದ ಗಡಿ ದಾಟಿ ಲೆಬನಾನ್, ಟರ್ಕಿ, ಗ್ರೀಸ್, ಜರ್ಮನಿಯಂತಹ ದೇಶಗಳಿಗೆ ಪಲಾಯನ ಮಾಡಲಾರಂಭಿಸಿದರು. ಬೆನ್ನ ಹಿಂದೆಯೂ ಸಾವು ಪಲಾಯನದ ಹಾದಿಯಲ್ಲಿಯೂ ಸಾವು. ಚಿಕ್ಕ ಚಿಕ್ಕ ಬೋಟುಗಳಲ್ಲಿ ಅದರ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ಮೆಡಿಟರೇನಿಯನ್ ಸಮುದ್ರವನ್ನು ದಾಟಲು ಪ್ರಯತ್ನಿಸುತ್ತ ಪರದೇಶಗಳಿಗೆ ಆಶ್ರಯಕ್ಕಾಗಿ ಮೊರೆಯಿಟ್ಟರು. ಸಾವಿರ ಸಾವಿರ ಜನರು ಸಮುದ್ರದಲ್ಲೇ ನೀರುಪಾಲಾದರು. ನಿರಾಶ್ರಿತರಿಗೆ ಆಶ್ರಯ ಕೊಟ್ಟ ದೇಶದವರಿಗೂ ಈ ನಿರಾಶ್ರಿತರು ತಲೆ ನೋವಾದರು. ಅವರಿಗೆ ಸಹಾಯ ಮಾಡುವಷ್ಟು ಆರ್ಥಿಕ ಚೈತನ್ಯ ಕೂಡ ಅನೇಕ ದೇಶಗಳಿಗೆ ಇಲ್ಲವಾಯಿತು. ತಮ್ಮ ದೇಶದ ಆರ್ಥಿಕತೆಯೇ ಅಲುಗಾಡುವ ಪರಿಸ್ಥಿತಿ ನಿರ್ಮಾಣವಾದಾಗ ದೇಶವಾಸಿಗಳು ಕೂಡ ಈ ನಿರಾಶ್ರಿತರ ಬಗ್ಗೆ ಕೆಂಡಕಾರಲಾರಂಭಿಸಿದರು. ತಮ್ಮ ಆರ್ಥಿಕತೆ ಈ ನಿರಾಶ್ರಿತರಿಂದ ನಾಶವಾಗುತ್ತದೆ ಎಂಬ ಭಯದ ಜೊತೆಗೆ ಅನ್ಯಧರ್ಮದ ಅನ್ಯಸಂಸ್ಕೃತಿಯ ಜನರ ಆಗಮನದಿಂದಾಗಿ ತಮ್ಮ ಸಂಸ್ಕೃತಿ ನಾಶವಾಗಿಬಿಡಬಹುದೆಂಬ ಆತಂಕ ಕಾಡಿದರೆ ಅದು ಸಹಜ. ಭಯ ಮತ್ತಷ್ಟು ಹೆಚ್ಚಾಗಲು ಇಸ್ಲಾಮೋಫೋಬಿಯಾ ಕೂಡ ಕಾರಣ. ಪಂಗಡ ಯಾವುದೇ ಇದ್ದರೂ ಕೊನೆಗೆ ನಿರಾಶ್ರಿತರಾಗಿ ಬರುತ್ತಿರುವವರಲ್ಲಿ ಮುಸ್ಲಿಮರೇ ಹೆಚ್ಚು. ಐ.ಎಸ್.ಐ.ಎಸ್ ತನ್ನವರನ್ನು ಈ ನಿರಾಶ್ರಿತರ ಜೊತೆಗೆ ಕಳುಹಿಸಿದ್ದರೇನು ಗತಿ ಎಂಬ ಯೋಚನೆ ಕೂಡ ಸರಕಾರಕ್ಕಿದೆ. ಈ ಎಲ್ಲಾ ಭಯಗಳ ಜೊತೆಗೆ ವಲಸೆಗಾರರಿಗೂ ನಿರಾಶ್ರಿತರಿಗೂ ವ್ಯತ್ಯಾಸವಿದೆ; ವಲಸೆ ತಡೆಯೋಣ ನಿರಾಶ್ರಿತರಿಗೆ ಆಶ್ರಯ ಕೊಡೋಣ ಎನ್ನುವ ಜರ್ಮನಿಯಂತಹ ದೇಶಗಳೂ ಇವೆ. ಕಡಿಮೆಯಿದ್ದ ಇಂತಹ ದೇಶಗಳ ಸಂಖೈಯನ್ನು ಹೆಚ್ಚಿಸಿದ್ದು ಮೂರು ವರುಷದ ಹುಡುಗನ ಶವ.

ಶವವನ್ನೆತ್ತಿದ ಮೆಹಮತ್ ಸಿಪ್ಲಾಕ್
ಸಿರಿಯಾದಿಂದ ತಪ್ಪಿಸಿಕೊಂಡ ಅಯ್ಲಾನ್ ಕುರ್ದಿಯ ಕುಟುಂಬ ಗ್ರೀಕಿನ ಕೋಸ್ ದ್ವೀಪದತ್ತ ಹೊರಟಿದ್ದ ದೋಣಿ ಅಲೆಗಳೊಡೆತಕ್ಕೆ ಸಿಕ್ಕಿಬೀಳುತ್ತದೆ. ದೋಣಿಯ ಕ್ಯಾಪ್ಟನ್ ಮುಳುಗುವ ದೋಣಿಯನ್ನು ಬಿಟ್ಟು ತನ್ನ ಜೀವ ಉಳಿಸಿಕೊಂಡುಬಿಡುತ್ತಾನೆ. ಅಯ್ಲಾನ್ ಕುರ್ದಿಯ ತಂದೆಯೇ ದೋಣಿಯನ್ನು ಮುನ್ನಡೆಸಲು ಪ್ರಯತ್ನ ಪಡುತ್ತಾನಾದರೂ ದೋಣಿ ಮಗುಚಿ ಬಿದ್ದು ಅವನ ಹೆಂಡತಿ ಮಕ್ಕಳೇ ಸತ್ತು ಹೋಗುತ್ತಾರೆ. ಸಮುದ್ರ ದಂಡೆಯಲ್ಲಿ ಮಗುವೊಂದ ಮಲಗಿರುವ ರೀತಿಯಲ್ಲಿ ಸತ್ತು ಬಿದ್ದಿರುವುದು ಸತ್ತು ಬಿದ್ದಿರುವ ನಮ್ಮ ಮಾನವೀಯತೆಯನ್ನು ಬಡಿದೆಬ್ಬಿಸುತ್ತದೆ. ಅದರ ಫೋಟೋ ತೆಗೆದ ಪತ್ರಕರ್ತೆ ನಿಲುಫರ್ ಡೆಮಿರಳ ಮಾನವೀಯತೆಯ ಬಗ್ಗೆಯೂ ಪ್ರಶ್ನೆಗಳೆದ್ದಿದ್ದವು. ಮಗು ಬದುಕಿದೆಯಾ ಸತ್ತಿದೆಯಾ ನೋಡುವುದು ಬಿಟ್ಟು ಈ ರೀತಿ ಫೋಟೋ ತೆಗೆಯುವುದು ಎಷ್ಟು ಸರಿ? ಎಂಬ ಪ್ರಶ್ನೆ ಹುಟ್ಟಿತ್ತು. ‘ಮಗು ಬದುಕಿರಲಿಲ್ಲ. ನಿರಾಶ್ರಿತರ ಗೋಳನ್ನು ಕೇಳಿಸುವಂತೆ ಮಾಡಲು ಫೋಟೋ ತೆಗೆದೆ’ ಎಂದು ಹೇಳುವ ನಿಲುಫರ್ ಕಳೆದ ಹದಿನೈದು ವರುಷಗಳಿಂದ ನಿರಾಶ್ರಿತರಾಗಿ ಬರುವವರ ಬಗ್ಗೆ ವರದಿ ಮಾಡುತ್ತಿದ್ದಾರೆ. ಪೋಲೀಸ್ ಅಧಿಕಾರಿಯ ಕಣ್ಣಿಗೆ ಮಗುವಿನ ಶವ ಕಾಣಿಸುತ್ತದೆ. ಆತ ಅದನ್ನು ಎತ್ತಿಕೊಳ್ಳುವುದಕ್ಕೆ ಕ್ಷಣ ಮುಂಚೆ ಫೋಟೋ ಕ್ಲಿಕ್ಕಿಸಲಾಗಿದೆ. ಆ ಪೋಲೀಸ್ ಅಧಿಕಾರಿ ಮೆಹಮತ್ ಸಿಪ್ಲಾಕ್ ಗೂ ಇದೇ ವಯಸ್ಸಿನ ಮಗನಿದ್ದಾನಂತೆ. ನಂತರದ ಫೋಟೋಗಳಲ್ಲಿ ದುಃಖ ಭರಿತನಾದ ಅಧಿಕಾರಿಯ ಚಿತ್ರಣವಿದೆ.
ಮುಂಬೈ ಬಾಂಬ್ ಬ್ಲಾಸ್ಟ್

ಪ್ಯಾಲೇಸ್ತೇನ್

ಭೋಪಾಲ್ ಗ್ಯಾಸ್ ದುರಂತ

ಗುಜರಾತ್ ಗಲಭೆ

ಚಿತ್ರಗಳು ಮಾನವೀಯತೆಯನ್ನು ಬಡಿದೆಬ್ಬಿಸುವುದು ಹೊಸತೇನಲ್ಲ. ನಾಜಿ ಕ್ಯಾಂಪಿನ ಚಿತ್ರಗಳು, ಭೋಪಾಲದಲ್ಲಿ ಹೂತು ಹಾಕುವ ಮಗುವಿನ ವಿಕಾರ ಮುಖದ ಚಿತ್ರ, ಹಸಿದ ಮಗುವಿನ ಹಿಂದೆ ರಣಹದ್ದೊಂದು ಕುಳಿತಿರುವ ಚಿತ್ರ, ಎದುರಿಗಿನ ಕ್ಯಾಮೆರಾವನ್ನು ಬಂದೂಕೆಂದು ತಿಳಿದು ಕೈ ಮೇಲೆತ್ತಿದ ಮಗುವಿನ ಚಿತ್ರ, ಪ್ಯಾಲೇಸ್ತೀನಿನ ಚಿತ್ರಗಳು, ಬಾಂಬ್ ಸ್ಪೋಟದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಜನರ ಅಂಗಾಂಗಗಳು – ವಸ್ತುಗಳ ಚಿತ್ರ, ಸಾಯಿಸಿದ ನಕ್ಸಲನನ್ನು ಪ್ರಾಣಿಯಂತೆ ಕೋಲಿಗೆ ಕಟ್ಟಿ ತೆಗೆದುಕೊಂಡ ಹೋಗುವ ಚಿತ್ರ, ನೆಲಬಾಂಬ್ ಸ್ಪೋಟದಿಂದ ಸತ್ತ ಸಿ.ಆರ್.ಪಿ.ಎಫ್ ಯೋಧರ ಚಿತ್ರ, ಗೋದ್ರೋತ್ತರ ಗಲಭೆಯಲ್ಲಿ ಕೈ ಮುಗಿದು ಬೇಡಿಕೊ‍ಳ್ಳುವ ವ್ಯಕ್ತಿಯ ಕಣ್ಣಲ್ಲಿನ ನೀರು – ಇವೆಲ್ಲವೂ ಮನುಷ್ಯನ ಮಾನವೀಯತೆಯನ್ನು ಬಡಿದೆಬ್ಬಿಸಿವೆ. ಒಂದರೆಕ್ಷಣವಾದರೂ ತತ್ವ ಸಿದ್ಧಾಂತಗಳನ್ನು ಮರೆತು ಮನುಷ್ಯ ಮಾನವೀಯತೆಯನ್ನು ತೋರ್ಪಡಿಸುವಲ್ಲಿ ‘ಛೇ ಛೇ’ ಎಂದು ಉದ್ಗರಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆದರಾ ಮಾನವೀಯತೆ ಶಾಶ್ವತವಾಗಿ ಉಳಿಯುವುದಿಲ್ಲವೆಂಬುದಕ್ಕೆ ಬಹಳಷ್ಟು ಉದಾಹರಣೆಗಳು ಸಿಗುತ್ತವೆ. ಯುದ್ಧ ಪಿಪಾಸು ರಾಷ್ಟ್ರಗಳು, ಶಸ್ತ್ರಾಸ್ತ್ರ ಕಂಪನಿಗಳ ದುರಾಸೆಗಳು, ಶ್ರೇಷ್ಟ ಧರ್ಮದ ವ್ಯಸನ.......... ಸತ್ತವರೊಂದಿಗೆ ಮಾನವೀಯತೆಯೂ ಸಾಯುತ್ತಿದೆ.

ಮೂಲ : ವಿಕಿಪೀಡಿಯ, vox, mercycorps, mirror, theglobeandtimess

No comments:

Post a Comment