Mar 20, 2015

ಸೂತಕದ ಮನೆಯಲ್ಲಿ ಸಾವಿಗೂ ಸಂಭ್ರಮ

D K Ravi
Dr Ashok K R
‘ನೀನ್ಯಾಕೆ ಅವರ ಸಾವಿನ ಬಗ್ಗೆ ಒಂದು ಲೇಖನ ಬರೆಯಲಿಲ್ಲ? ಕೊನೇಪಕ್ಷ ಒಂದು ಫೇಸ್ಬುಕ್ ಸ್ಟೇಟಸ್ಸನ್ನೂ ಹಾಕಲಿಲ್ಲವಲ್ಲ ಯಾಕೆ?’ ಎಂಬ ಪ್ರಶ್ನೆ ಕೆಲವು ಗೆಳೆಯರಿಂದ ಬಂತು. ಸತ್ತುಹೋದವರ ಬಗ್ಗೆ ಏನನ್ನು ಬರೆಯಬೇಕು? ‘ಇವರ ಸಾವು ಸಮಾಜಕ್ಕೆ ತುಂಬಲಾರದ ನಷ್ಟವೆಂದು ಬರೆಯಬೇಕೆ?’ ಅಥವಾ ಸಾವಿನ ಬಗ್ಗೆ ಯಾರಿಗೂ ಏನೊಂದೂ ಸರಿಯಾದ ಮಾಹಿತಿಯಿಲ್ಲದಿರುವಾಗ ಪುಂಖಾನುಪುಂಖವಾಗಿ ಹಬ್ಬುತ್ತಿರುವ ಗಾಳಿ ಸುದ್ದಿಗಳನ್ನೇ ನಿಜವೆಂದು ಹಬ್ಬಿಸಬೇಕೆ? ಇಪ್ಪತ್ತನಾಲ್ಕು ಘಂಟೆಗಳ ಸುದ್ದಿವಾಹಿನಿಗಳಿಗೆ ಸುದ್ದಿಯನ್ನು ತುಂಬಿಸಲು ಅದು ಅನಿವಾರ್ಯ. ಸಮಯ ತುಂಬಿಸಬೇಕಾದ ಅನಿವಾರ್ಯತೆಯಲ್ಲೂ ಅವರು ವಾಹಿನಿಗೆ ಬಂದು ಬೀಳುತ್ತಿರುವ ಎಲ್ಲಾ ಗಾಳಿಸುದ್ದಿಗಳನ್ನು ಪ್ರಸಾರ ಮಾಡುತ್ತಿಲ್ಲ ಎನ್ನುವುದು ಮೆಚ್ಚಬೇಕಾದ ವಿಷಯ. ಜೊತೆಜೊತೆಗೆ ‘ಇದೇ ಡಿ.ಕೆ.ರವಿಯವರ ಸಾವಿಗಿರುವ ಕಾರಣ’ ಎಂಬ ಸತ್ಯವೆನ್ನಲಾದ ಮಾಹಿತಿಯನ್ನೂ ಪ್ರಸಾರ ಮಾಡುತ್ತಿಲ್ಲ. ದಿನಪತ್ರಿಕೆಗಳಿಗೆ, ಸುದ್ದಿವಾಹಿನಿಗಳಿಗೆ ಪತ್ರಿಕೆ ತುಂಬಿಸುವ ಸಮಯ ತುಂಬಿಸುವ ಅನಿವಾರ್ಯ ಕರ್ಮವಿರುತ್ತದೆ, ವಿವೇಚನೆಯನ್ನು ಪಕ್ಕಕ್ಕಿಟ್ಟು ‘ಹೋರಾಟ’ ನಡೆಸಬೇಕಾದ ಅನಿವಾರ್ಯತೆ ರಾಜಕಾರಣಿಗಳಿಗೂ ಇರುತ್ತದೆ. ಆದರೆ ಫೇಸ್ ಬುಕ್, ಟ್ವಿಟರ್, ಅಂತರ್ಜಾಲದಲ್ಲಿ ಬರೆದುಕೊಳ್ಳುವವರಿಗೆ ಯಾವ ಅನಿವಾರ್ಯತೆ ಇರುತ್ತದೆ? ಸಮಕಾಲೀನ ಘಟನೆಯೊಂದಕ್ಕೆ ನಾನೂ ಪ್ರತಿಕ್ರಿಯಿಸುತ್ತಿದ್ದೀನಿ, ಕೊಂಚವೂ ತಡಮಾಡದೆ ಪ್ರತಿಕ್ರಿಯಿಸುತ್ತಿದ್ದೀನಿ ನೋಡು ಎಂಬ ತೋರ್ಪಡಿಸುವುದಕ್ಕಾಗಿ ಕಾರಣಕ್ಕೆ ಪ್ರತಿಕ್ರಿಯಿಸುವವರ ಸಂಖೈ ಜಾಸ್ತಿಯಾಗುತ್ತಿದೆಯಾ?

ಡಿ.ಕೆ.ರವಿಯವರ ಬಗ್ಗೆ ಮೊದಲು ಕೇಳಿದ್ದು ಕೋಲಾರದ ಐಎಎಸ್ ಆಫೀಸರ್ರೊಬ್ಬರು ಶನಿವಾರ ಭಾನುವಾರ ಐಎಎಸ್ ಕೆಎಎಸ್ ಪರೀಕ್ಷೆ ಕಟ್ಟುವವರಿಗೆ ಉಚಿತ ತರಬೇತಿ ನೀಡುತ್ತಾರೆ ಎಂಬ ಸುದ್ದಿಯ ಮೂಲಕ. ಡಿಸಿ ಅಂದ್ರೆ ಬ್ಯುಸಿ ಪರ್ಸನ್, ಇಲ್ಯಾರೋ ಆಸಾಮಿ ಅಂಥ ಬ್ಯುಸಿ ಶೆಡ್ಯೂಲಿನಲ್ಲೂ ಬಿಡುವು ಮಾಡಿಕೊಂಡು ಇಂತವೆಲ್ಲ ಮಾಡೋದು ಗ್ರೇಟ್ ಎಂದುಕೊಂಡಿದ್ದೆವು. ದಲಿತರ ಮನೆಗೆ ಭೇಟಿ ಕೊಟ್ಟದ್ದು ಒಂದಷ್ಟು ಸುದ್ದಿಯಾಗಿತ್ತು. ಕೋಲಾರದಿಂದ ಅವರನ್ನು ವರ್ಗ ಮಾಡಿದ ನಂತರ ಅಲ್ಲಿನ ಜನರ ಹೋರಾಟ ಮತ್ತೆ ಅವರ ಹೆಸರನ್ನು ಮತ್ತು ಪ್ರಾಮಾಣಿಕತೆಯನ್ನು ಮುಖ್ಯಸುದ್ದಿಯನ್ನಾಗಿಸಿತ್ತು. ನಂತರ ಅವರ ಬಗ್ಗೆ ಹೆಚ್ಚು ಸುದ್ದಿಯಿರಲಿಲ್ಲ. ಅವರ ಬಗೆಗಿನ ಅಷ್ಟೂ ಡೀಟೇಲ್ಸ್ ಹೊರಬಂದಿದ್ದು ಅವರ ಸಾವಿನ ನಂತರ. ಹುಲಿಯೂರುದುರ್ಗದ ಪುಟ್ಟ ಹಳ್ಳಿಯ ಬಡಕುಟುಂಬದಿಂದ ಕಷ್ಟಪಟ್ಟು ಬೆಳೆದು ಐಎಎಸ್ ಮಾಡುವುದು ಸಾಧನೆ, ಆ ಸಾಧನೆ ವಿರಳವೇನಲ್ಲ. ಐಎಎಸ್ ಆಫೀಸರ್ ಆದ ನಂತರ ಬೆಳೆದು ಬಂದ ಬಡಪರಿಸ್ಥಿತಿಯನ್ನು ಮರೆಯದೆ ಬಡಜನರ ಪರವಾಗಿ ಕೆಲಸ ಮಾಡುತ್ತ ಪ್ರಾಮಾಣಿಕನಾಗಿ ಕಾರ್ಯನಿರ್ವಹಿಸುವುದು ಇವತ್ತಿನ ದಿನಮಾನದಲ್ಲಿ ವಿರಳಾತಿ ವಿರಳ. ಇಂಥ ಒಬ್ಬ ಪ್ರಾಮಾಣಿಕ ಅಧಿಕಾರಿಯ ಸಾವು ಜನಮಾನಸವನ್ನು ಕಲಕಿ ಹೋರಾಟಕ್ಕೆ ಪ್ರಚೋದಿಸಿರುವುದು ಸರಿಯಾಗಿಯೇ ಇದೆ. 

ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಬಿಲ್ಡರುಗಳ ಮೇಲೆ ಮುರಕೊಂಡು ಬಿದ್ದಿದ್ದರು ಡಿ.ಕೆ.ರವಿ. ನಾಲ್ಕು ತಿಂಗಳಲ್ಲಿ 129 ಕೋಟಿ ತೆರಿಗೆ ಬಾಕಿಯನ್ನು ವಸೂಲು ಮಾಡಿರುವುದು ಕಡಿಮೆ ಸಾಧನೆಯೇನಲ್ಲ. ಬೆಂಗಳೂರಿನ ಬಿಲ್ಡರುಗಳಿಗೆ, ರಿಯಲ್ ಎಸ್ಟೇಟಿನವರಿಗೆ ರಾಜಕಾರಣಿಗಳ ಜೊತೆ ಸಂಬಂಧವಿರುವುದು ಸುಳ್ಳೇನಲ್ಲ. ಅನೇಕ ರಾಜಕಾರಣಿಗಳೂ ರಿಯಲ್ ಎಸ್ಟೇಟಿನವರೇ. ಸಹಜವಾಗಿ ಅನೈತಿಕ ಮಾರ್ಗದಲ್ಲಿ ರವಿಯವರ ಮೇಲೆ ಒತ್ತಡಗಳಿದ್ದೇ ಇರುತ್ತದೆ. ಡಿ.ಕೆ.ರವಿ ದಾಳಿ ನಡೆಸಿದ ಒಂದು ಕಂಪನಿಯ ಹೆಸರು ಎಂಬೆಸ್ಸಿ - ಗಲ್ಫ್ ಲಿಂಕ್. ಗಲ್ಫ್ ಲಿಂಕ್ಸ್ ಕರ್ನಾಟಕದ ಗೃಹಸಚಿವರಾದ ಜಾರ್ಜ್ ರವರ ಕಂಪನಿ. ಮಾಧ್ಯಮದ ಮುಂದೆ ಅವರೇ ಹೇಳಿಕೆ ನೀಡಿರುವಂತೆ ‘ಎಂಬೆಸ್ಸಿ ಎಂಬುದು ಬಹುದೊಡ್ಡ ಕಂಪನಿ. ಅವರದು ಅನೇಕ ಉದ್ಯಮಗಳಿವೆ. ಒಂದು ಉದ್ಯಮಕ್ಕೆ ನಮ್ಮ ಜೊತೆ ಟೈಅಪ್ ಮಾಡಿಕೊಂಡಿದ್ದಾರೆ’. ಒಬ್ಬ ಪ್ರಾಮಾಣಿಕ ಅಧಿಕಾರಿಯ ಅಕಾಲಿಕ ಅನೈಸರ್ಗಿಕ ಮರಣ (ಅದು ಆತ್ಮಹತ್ಯೆಯೋ ಕೊಲೆಯೋ ಎಂಬುದನ್ನು ಮರೆಯೋಣ) ನಡೆದು ಜನರು ಆಕ್ರೋಶಗೊಂಡಿರುವಾಗ ‘ನನ್ನ ಪಾಲುದಾರಿಕೆಯ ಕಂಪನಿಯ ಮೇಲೆ ರವಿ ದಾಳಿ ನಡೆಸಿದ್ದಾರೆ. ಸಿಐಡಿ ತನಿಖೆ ನಡೆಯುವ ಈ ಸಂದರ್ಭದಲ್ಲಿ ಗೃಹಸಚಿವನಾಗಿ ನಾನು ಮುಂದುವರೆಯುವುದು ನೈತಿಕವಾಗಿ ಸರಿಯಲ್ಲ’ ಎಂದು ಜಾರ್ಜ್ ರಾಜೀನಾಮೆ ನೀಡಬೇಕಿತ್ತಲ್ಲವೇ? ತನಿಖೆಯಲ್ಲಿ ನಾನು ಮೂಗು ತೂರಿಸುವುದಿಲ್ಲ ಎಂದುಬಿಟ್ಟರೆ ನಂಬುವಷ್ಟು ಮೂರ್ಖರೇ ನಮ್ಮ ಜನ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ರಾಜಕಾರಣಿಗಳ ತಳಿಯೇ ನಶಿಸಿಹೋಗಿರಬೇಕು.

ಸಿಬಿಐ ತನಿಖೆ ಅವಶ್ಯಕವೇ?

ಈ ಹೋರಾಟದಲ್ಲಿ ಪಾಲ್ಗೊಂಡಿರುವ ಬಹುತೇಕರು ರಾಜ್ಯ ಸರಕಾರದ ಅಧೀನದಲ್ಲಿರುವ ಸಿಐಡಿ ತನಿಖೆಗಿಂತ ಸಿಬಿಐ ತನಿಖೆ ಉತ್ತಮ ಎನ್ನುತ್ತಾರೆ. ಡಿ.ಕೆ.ರವಿಯವರ ತಂದೆ ತಾಯಿ ಕೂಡ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಸಿಬಿಐ ಅಷ್ಟೊಂದು ಶ್ರೇಷ್ಟವಾದ ಸಂಸ್ಥೆಯೇ ಎಂದು ನೋಡಿದರೆ ನಿರಾಶೆಯಾಗುತ್ತದೆ. ಹೆಸರಿಗೆ ಸ್ವಾಯತ್ತ ಸಂಸ್ಥೆಯಾದ ಸಿಬಿಐ ಕಾಲದಿಂದಲೂ ಕೇಂದ್ರ ಸರಕಾರದ ಕೈಗೊಂಬೆಯಾಗಿಯಷ್ಟೇ ಕೆಲಸ ಮಾಡಿದೆ. ತನ್ನ ಆಡಳಿತವಿಲ್ಲದ ರಾಜ್ಯಗಳಲ್ಲಿ ಹಸ್ತಕ್ಷೇಪ ನಡೆಸುವುದಕ್ಕೆ ಸಿಬಿಐ ಉಪಯೋಗಿಸಲಾಗುತ್ತಿದೆ. ಈ ಕಾರಣದಿಂದಾಗಿಯೇ ಮಹಂತೇಶ್ ಸಾವಿಗೀಡಾದಾಗ ಬಿಜೆಪಿ ಸರಕಾರ ಸಿಬಿಐಗೆ ಪ್ರಕರಣವನ್ನು ಒಪ್ಪಿಸಲು ಒಪ್ಪಲಿಲ್ಲ. ಆಗ ಕೇಂದ್ರದಲ್ಲಿದ್ದಿದ್ದು ಕಾಂಗ್ರೆಸ್! ಸಿದ್ಧರಾಮಯ್ಯ ಡಿ.ಕೆ.ರವಿಯ ಸಾವನ್ನು ಸಿಬಿಐಗೆ ವಹಿಸಲು ಒಪ್ಪದಿರುವುದಕ್ಕೂ ಇದೇ ಪ್ರಮುಖ ಕಾರಣ. ಕೇಂದ್ರದಲ್ಲೇನಾದರೂ ಈಗ ಕಾಂಗ್ರೆಸ್ ಸರಕಾರವೇ ಇದ್ದಿದ್ದರೆ ಕಣ್ಣುಮುಚ್ಚಿ ಸಿಬಿಐಗೆ ಕೇಸನ್ನು ವರ್ಗ ಮಾಡಿಬಿಡುತ್ತಿದ್ದರು. ಈಗ ಕೇಂದ್ರದಲ್ಲಿರುವುದು ಬಿಜೆಪಿ ಸರಕಾರ. ಡಿ.ಕೆ.ರವಿಯವರ ಸಾವಿನ ತನಿಖೆಯ ನೆಪದಲ್ಲಿ ಯಾವಯಾವ ರಿಯಲ್ ಎಸ್ಟೇಟ್ ಹುತ್ತಕ್ಕೆ ಕೈ ಹಾಕಿ ತಮ್ಮ ಶಾಸಕರ, ಸಚಿವರ ಕುತ್ತಿಗೆಗೆ ತರುತ್ತಾರೋ ಎಂಬ ಭಯವೂ ಇದೆ. ಸಿಐಡಿ ತನಿಖೆಯನ್ನು ರವಿಯ ಸಾವಿಗಷ್ಟೇ ಸೀಮಿತವನ್ನಾಗಿ ಮಾಡಬಹುದು. ಸಿಬಿಐ ಶ್ರೇಷ್ಟ ಸಂಸ್ಥೆಯಲ್ಲ ಎನ್ನುವುದುನ್ನು ಒಪ್ಪುತ್ತಲೇ ಗೃಹಸಚಿವರ ಮೇಲೆ ಆರೋಪ ಬಂದ ಕಾರಣಕ್ಕಾದರೂ ಸಿಬಿಐಗೆ ಈ ಪ್ರಕರಣವನ್ನು ಒಪ್ಪಿಸಬೇಕಿತ್ತು. ಆಡಳಿತಾತ್ಮಕವಾಗಿ ಮತ್ತು ರಾಜಕೀಯವಾಗಿ ರಾಜ್ಯ ಸರಕಾರದ ಬಹುದೊಡ್ಡ ಎಡವಟ್ಟಿದು. ಪ್ರತಿಪಕ್ಷ – ಆಡಳಿತ ಪಕ್ಷಗಳ ಗದ್ದಲದ ರಾಜಕೀಯ, ಭಾವನೆಗಳನ್ನು ಪಕ್ಕಕ್ಕಿಟ್ಟು ಯೋಚಿಸದ ಜನತೆ, ಜನರ ಭಾವನೆಗಳನ್ನು ಟಿ.ಆರ್.ಪಿಗಾಗಿ, ಪ್ರಸಾರದಲ್ಲಿ ಏರಿಕೆಗಾಗಿ ಉಪಯೋಗಿಸುವ ಮಾಧ್ಯಮಗಳ ಮಧ್ಯೆ ಡಿ.ಕೆ.ರವಿಯವರ ಸಾವಿನ ನಿಜವಾದ ಸತ್ಯ ಹೊರಬರುತ್ತದಾ? 

ಪ್ರಾಮಾಣಿಕ ಅಧಿಕಾರಿಯೊಬ್ಬನ ಸಾವು ಜನಮಾನಸವನ್ನು ಕಲಕಿರುವುದೇನೋ ಸರಿ. ಆದರೆ ಭಾವನೆಗಳನ್ನೇ ಮುಂದಾಗಿಸಿ ವಿವೇಕವನ್ನು ಕಳೆದುಕೊಂಡುಬಿಡಬೇಕೆ ಎಂಬ ಪ್ರಶ್ನೆ ಕಾಡುತ್ತದೆ. ಬೆಂಗಳೂರಿನ ಕಮಿಷನರ್ ರೆಡ್ಡಿಯವರು ಡಿ.ಕೆ.ರವಿಯವರ ಮನೆಯ ಪರಿಶೀಲನೆಯ ನಂತರ ‘ಪ್ರೈಮಾ ಫೇಸಿ ಇದು ಆತ್ಮಹತ್ಯೆಯೆಂದು ತೋರುತ್ತದೆ’ ಎಂಬ ಹೇಳಿಕೆ ಕೂಡ ತಪ್ಪೆಂದು ಅನ್ನಿಸುವುದು ಇದೇ ಕಾರಣಕ್ಕೆ. ಪೋಸ್ಟ್ ಮಾರ್ಟಮ್ ವರದಿ ಬರುವ ಮುಂಚೆ ಆತ್ಮಹತ್ಯೆಯೆಂದು ಹೇಳಿದ್ದೇಗೆ? ಎಂಬ ಪ್ರಶ್ನೆ ಹುಟ್ಟುವುದು ತನಿಖೆಯೊಂದು ಹೇಗೆ ನಡೆಯುತ್ತದೆ ಮತ್ತು ಪೋಸ್ಟ್ ಮಾರ್ಟಮ್ ವರದಿಯ ಪ್ರಾಮುಖ್ಯತೆ ಏನು ಎನ್ನುವುದು ತಿಳಿಯದಿದ್ದಾಗ. ಪೋಸ್ಟ್ ಮಾರ್ಟಮ್ ವರದಿ ತನಿಖೆಗೆ ಪೂರಕವಾಗಿರುತ್ತದೆಯೇ ಹೊರತು ಅದೇ ತನಿಖೆಯ ಜಾಡನ್ನು ನಿರ್ಧರಿಸಿಬಿಡುವುದಿಲ್ಲ. ಜನರಿಗೆ ಗೊತ್ತಿರುವುದಿಲ್ಲ ಸರಿ, ಮಾಧ್ಯಮಗಳಿಗೂ ಗೊತ್ತಿರುವುದಿಲ್ಲವೇ? ಸತ್ತ ವ್ಯಕ್ತಿಯ ಮನೆಯ ಪರಿಸರ, ವಸ್ತುಗಳು ಇರುವ ರೀತಿ, ಬಾಗಿಲು ಕಿಟಕಿಗಳು ತೆರೆದಿದ್ದವೋ ಹಾಕಿದ್ದವೋ ಎಂಬ ಅನೇಕಾನೇಕ ಸಂಗತಿಗಳನ್ನು ಪರಿಶೀಲಿಸಿ ‘ಮೇಲ್ನೊಟಕ್ಕೆ ಇದು ಕೊಲೆ / ಆತ್ಮಹತ್ಯೆ’ ಎಂದು ಅಂದಾಜಿಸುವುದು ಪೋಲೀಸರ ಕೆಲಸವೇ ಅಲ್ಲವೇ? ಇದು ಸೂಕ್ಷ್ಮ ಪ್ರಕರಣವಾದ ಕಾರಣ ತಮ್ಮ ಅಂದಾಜನ್ನು ಮಾಧ್ಯಮದ ಮುಂದೆ ಹೇಳಿದ್ದು ರೆಡ್ಡಿಯವರ ತಪ್ಪು. ಪೋಸ್ಟ್ ಮಾರ್ಟಮ್ ವರದಿ ಬರುವವರೆಗಾದರೂ ಕಾಯುವ ತಾಳ್ಮೆ ಅವರಲ್ಲಿರಬೇಕಿತ್ತು. ಅದೇ ವಾಕ್ಯವನ್ನು ಮುಖ್ಯಮಂತ್ರಿ ಮತ್ತು ಗೃಹಸಚಿವರೂ ಹೇಳಿ ಪ್ರೈಮಾ ಫೇಸಿಗೆ ಇರುವ ಬೆಲೆಯನ್ನೇ ಕಳೆದುಬಿಟ್ಟಿದ್ದಾರೆ. ಜನರಲ್ಲಿಲ್ಲದ ತಾಳ್ಮೆಯನ್ನು ಅಧಿಕಾರಿಗಳಲ್ಲಿ, ರಾಜಕಾರಣಿಗಳಲ್ಲಿ ಹುಡುಕುವುದೇ ತಪ್ಪೇನೋ.

ಈ ಎಲ್ಲಾ ಚರ್ಚೆಗಳ ನಡುವೆ ಡಿ.ಕೆ.ರವಿ ಎಂಬ ಪ್ರಾಮಾಣಿಕ ಐಎಎಸ್ ಅಧಿಕಾರಿ ಮನುಷ್ಯನೂ ಹೌದು ಎಂಬುದನ್ನೇ ನಾವು ಮರೆತುಬಿಟ್ಟಿದ್ದೀವಿ. ಪ್ರೊಫೆಶನಲಿ ಕರೆಕ್ಟಾದ ವ್ಯಕ್ತಿಗೆ ಒಂದು ಪರ್ಸನಲ್ ಲೈಫು ಕೂಡ ಇತ್ತು, ಕಷ್ಟ ಸುಖಗಳಿತ್ತು, ಸಂತಸ ಬೇಸರಗಳಿದ್ದವು ಎಂಬುದನ್ನು ಮರೆತುಬಿಡುತ್ತೇವೆ. ದೊಡ್ಡದೊಡ್ಡ ರಾಜಕಾರಣಿಗಳನ್ನೆಲ್ಲಾ ಎದುರುಹಾಕಿಕೊಂಡ ಅಧಿಕಾರಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಮ್ಮ ಮನಸ್ಸು ಒಪ್ಪದಿರುವುದಕ್ಕೇ ಈ ಮರೆವೇ ಕಾರಣ. ಅವರ ಅಧಿಕಾರದ ವೈಖರಿಯನ್ನು ನೋಡಿದ ಜನರು ಇದು ಖಂಡಿತವಾಗಿಯೂ ಕೊಲೆಯೇ, ಸರಕಾರದ ಒಳಗಿರುವವರೇ ಮಾಡಿಸಿದ್ದಾರೆ ಎಂದು ಅಚಲವಾಗಿ ನಂಬುತ್ತಾರೆ. ಮೂರು ಜನ ಐಟಿ ಆಫೀಸರ್ರಿನ ನೆಪದಲ್ಲಿ ಅವರನ್ನು ಮನೆಗೆ ಕರೆಸಿ ಕಾರ್ಬನ್ ಮೊನಾಕ್ಸೈಡ್ ಬಳಸಿ ಕೊಲೆ ಮಾಡಿ ನಂತರ ನೇಣು ಹಾಕಿದ್ದಾರೆ, ಅವರ ಕತ್ತಿಗೆ ಸುತ್ತಿರುವ ತೆಳು ಬಟ್ಟೆಯಿಂದ ಸಾಯಲು ಸಾಧ್ಯವೇ ಎಂಬ ಮೆಸೇಜು ವಾಟ್ಸಪ್ಪಿನಲ್ಲಿ ಹರಿಯುವುದಕ್ಕೆ ಈ ನಂಬಿಕೆ ಕಾರಣ. ಇನ್ನು ಡಿ.ಕೆ.ರವಿಯವರ ಮಾವನ ಮನೆಯಿರುವ ನಾಗರಬಾವಿಯ ಜನರು ಇದು ಆತ್ಮಹತ್ಯೆ; ಕಾಂಗ್ರೆಸ್ಸಿನವರಾದ ಅವರ ಮಾವನವರೇ ಈ ಸಾವಿಗೆ ಕಾರಣ ಎಂದು ನಂಬಿದ್ದಾರೆ. ಮಾವನವರ ಒತ್ತಡ ತಡೆಯಲಾರದೇ ಈ ಕೃತ್ಯ ಮಾಡಿಕೊಂಡಿದ್ದಾರೆ ಎಂದವರ ನಂಬಿಕೆ. ಮಂಡ್ಯದ ಕಡೆ ಈ ಸಾವಿಗೆ ಪ್ರೊಫೆಶನಲಿ ಕರೆಕ್ಟಾದ ವ್ಯಕ್ತಿಯ ಪರ್ಸನಲ್ ಇಮ್ಮೆಚ್ಯುರಿಟಿಯ ಬಗ್ಗೆ ಮಾತನಾಡುತ್ತಾರೆ. ಪ್ರೇಮ ಪ್ರಸಂಗ ಕಾರಣ, ಆ ಪ್ರೇಮ ಪ್ರಸಂಗದಿಂದ ರವಿಯನ್ನು ಹೊರತರಲು ದೊಡ್ಡ ದೊಡ್ಡ ಐಎಎಸ್ ಅಧಿಕಾರಿಗಳು ರವಿಗೆ ಬುದ್ಧಿ ಹೇಳಿದ್ದರು; ಅವರು ಕೊನೆಯದಾಗಿ ಕಳುಹಿಸಿದ ಮೆಸೇಜು ಆ ಹೆಣ್ಣಿಗೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಪ್ರತಿಯೊಬ್ಬರು ತಮಗೆ ತೋಚಿದ, ಅನುಕೂಲ ಕಂಡ ಕತೆಯನ್ನು ಕಟ್ಟಿಕೊಂಡಿದ್ದಾರೆ. ಅವರ ಪ್ರಕಾರ ಅವರ ಕತೆಯೇ ಸರಿ. ಅವರ ಸಾವು ಕೊಲೆಯಾಗಿದ್ದರೆ ಜನರು ನಡೆಸುತ್ತಿರುವ ಅಷ್ಟೂ ಹೋರಾಟಗಳಿಗೊಂದು ಅರ್ಥ ಬರುತ್ತದೆ. ಆತ್ಮಹತ್ಯೆಯಾಗಿದ್ದರೆ? ಪ್ರೊಫೆಶನಲ್ ಒತ್ತಡಕ್ಕೆ ಬಗ್ಗುವ ವ್ಯಕ್ತಿಯಂತೂ ಅಲ್ಲ ಡಿ.ಕೆ.ರವಿ. ಪರ್ಸನಲ್ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡುಬಿಟ್ಟಿದ್ದರೆ ಅದರ ನಿಜವಾದ ಕಾರಣ ತಿಳಿಯುವುದು ಕಷ್ಟಸಾಧ್ಯ – ಅದು ರವಿ ಸಮಾಜಕ್ಕೆ ಮತ್ತದಕ್ಕಿಂತ ಹೆಚ್ಚಾಗಿ ಕುಟುಂಬಸ್ಥರಿಗೆ ಮಾಡಿದ ಅನ್ಯಾಯ. 

ಪ್ರತಿಯೊಬ್ಬರೂ ತಮ್ಮ ತಮ್ಮ ಅನುಕೂಲಕ್ಕೆ ಕತೆಯನ್ನು ಹೆಣೆದು ಕುಳಿತುಕೊಂಡಿರುವಾಗ ಸತ್ಯವೇನೆಂದು ತಿಳಿಯುವುದು ಸಾಧ್ಯವೇ? ತನಿಖಾ ಸಂಸ್ಥೆ ಯಾವುದೇ ಆಗಿರಲಿ ಅದು ನೀಡುವ ವರದಿಯನ್ನು ಒಪ್ಪುವುದು ಅವರ ವರದಿ ನಮ್ಮ ಕತೆಗೆ ಒಪ್ಪುವಂತೆ ಇದೆಯಾ ಎಂಬುದರ ಮೇಲೆ. ನಿಜವಾದ ಸತ್ಯವನ್ನೇ ತನಿಖಾ ಸಂಸ್ಥೆ ಹೇಳಿದರೂ ಆ ಸತ್ಯವನ್ನು ಒಪ್ಪಲಾಗದ ಮನಸ್ಥಿತಿಯನ್ನು ಬೆಳೆಸಿಕೊಂಡುಬಿಟ್ಟಿದ್ದೇವೆ. ನಮಗೆ ಸಿಐಡಿ ಮೇಲೆ ನಂಬಿಕೆಯಿಲ್ಲ, ನಮ್ಮ ಪೋಲೀಸರ ಮೇಲೆ ನಂಬಿಕೆಯಿಲ್ಲ, ನಮ್ಮ ಸಿಬಿಐ ಮೇಲೆ ನಂಬಿಕೆಯಿಲ್ಲ, ನಮ್ಮ ರಾಜಕಾರಣಿಗಳ ಮೇಲೆ ನಂಬಿಕೆಯಿಲ್ಲ – ನಮಗ್ಯಾಕೆ ಯಾರ ಮೇಲೂ ನಿಜವಾದ ಪ್ರಾಮಾಣಿಕರ ಮೇಲೂ ನಂಬಿಕೆ ಬರುವುದಿಲ್ಲವೆಂದರೆ ನಮಗೆ ನಮ್ಮ ಮೇಲೆಯೇ ನಂಬುಗೆಯಿಲ್ಲ. ನಮ್ಮ ಪ್ರಾಮಾಣಿಕತೆಯ ಮೇಲೆ ನಮಗೇ ಅಪನಂಬುಗೆ. ಅನಿಷ್ಟಕ್ಕೆಲ್ಲ ರಾಜಕಾರಣಿಗಳೇ ಕಾರಣ ಎಂದು ಬೈಯುವ ಸಂತಸದಲ್ಲಿ ಸೈಟು ಕೊಳ್ಳುವಾಗ ಮನೆ ಖರೀದಿಸುವಾಗ ಕೊಟ್ಟ ಹಣಕ್ಕೂ ರಿಜಿಷ್ಟ್ರೇಶನ್ ವ್ಯಾಲ್ಯೂವಿಗೂ ಇರುವ ವ್ಯತ್ಯಾಸವನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳುವ ನಮ್ಮ ಮನಸ್ಥಿತಿ ನಮಗೆ ನೆನಪೇ ಆಗುವುದಿಲ್ಲ. ಅಷ್ಟರಮಟ್ಟಿಗೆ ನಾವು ಆತ್ಮವಂಚಕರು.

2 comments:

  1. I appreciate your articles.. am sad to say that we have lost the patience to listen and immature enough to decide/agree the truth/fact.. and more prone to artifacts.. totally idiots..

    ReplyDelete
  2. Very true Rajesh. No one has the patience to wait for two three days. with all the nasty discussions i don't have any hope that we will know the truth

    ReplyDelete