Jul 21, 2012

ಮುದ್ರಣ ಮಾಧ್ಯಮದಲ್ಲಿ ರಾಜಕೀಯ ವ್ಯಂಗ್ಯಚಿತ್ರಕಾರರಿಗೆ ಭವಿಷ್ಯ ಇದೆಯೇ?

ನಿನ್ನೆಯ ಪ್ರಜಾವಾಣಿಯ ಪತ್ರಿಕೆಯಲ್ಲಿ ಪಿ.ಮೊಹಮ್ಮದ್ ರವರ ವ್ಯಂಗ್ಯಚಿತ್ರ ಪ್ರಕಟವಾಗುವ ಜಾಗದಲ್ಲಿ ಈ ಪ್ರಕಟಣೆ ಇತ್ತು. ಮೊಹಮ್ಮದ್ ರವರು ಪ್ರಜಾವಾಣಿ ಪತ್ರಿಕೆ ತೊರೆಯುತ್ತಿರುವುದಾಗಿ ಫೇಸ್ ಬುಕ್ಕಿನಲ್ಲಿ ಈಗಾಗಲೇ ತಿಳಿಸಿದ್ದರಾದರೂ ಯಾವಾಗ ಬಿಡುತ್ತಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟವಾಗಿ ಗೊತ್ತಿರಲಿಲ್ಲ. ಮೊಹಮ್ಮದ್ ಪ್ರಜಾವಾಣಿ ತೊರೆದಿದ್ದಾರೆ ನಿನ್ನೆಯಿಂದ. ಇನ್ನವರ ಮೊನಚಾದ ವ್ಯಂಗ್ಯಚಿತ್ರಗಳನ್ನು ಪ್ರಜಾವಾಣಿಯಲ್ಲಿ ನೋಡುವ ಹಾಗಿಲ್ಲ. ಪ್ರಜಾವಾಣಿ ಕೊಂಚ ಸಪ್ಪೆಯೆನಿಸುವುದು ಖಂಡಿತ. ಕೆಲಸದ ಬದಲಾವಣೆಗಳು ಹೊಸದಲ್ಲ. ಮೊಹಮ್ಮದ್ ಗಿಂತಲೂ ಉತ್ತಮವಾದ ವ್ಯಂಗ್ಯಚಿತ್ರಕಾರಕ ಪ್ರಜಾವಾಣಿಗೆ ಬರಬಹುದು; ಬರಲಿ. ಮೊಹಮ್ಮದ್ ರವರು ಮತ್ತೊಂದು ಪತ್ರಿಕೆಗೆ ಹೋಗುತ್ತಿದ್ದಾರೇನೋ ಎಂಬ ಭಾವನೆಯಲ್ಲಿದ್ದೆ. ಆದರಿಂದು ಫೇಸ್ ಬುಕ್ಕಿನಲ್ಲಿ ಅವರು ಬರೆದಿರುವುದನ್ನು ನೋಡಿದರೆ ಅವರು ತಮ್ಮ ಕುಂಚಕ್ಕೆ ಸಂಪೂರ್ಣ ವಿರಾಮ ಕೊಡುವಂತೆ ಕಾಣಿಸುತ್ತಿದ್ದಾರೆ. ವ್ಯಂಗ್ಯಚಿತ್ರಕಾರನ ನೋವು ನಲಿವುಗಳನ್ನು ಈ ಪುಟ್ಟ ಪತ್ರದಲ್ಲಿ ವಿವರಿಸಿದ್ದಾರೆ. ಬ್ಯುಸಿನೆಸ್ಸಿಗೆ ಇಳಿಯುವುದಾಗಿ ಹೇಳಿದ್ದಾರೆ. ಜೀವನಕ್ಕೆ ಬ್ಯುಸಿನೆಸ್ಸು ಅನಿವಾರ್ಯವೆಂದವರಿಗೆ ಅನ್ನಿಸಿದ್ದರೆ ಸಂತಸವೇ ಆದರೆ ಕೊನೇ ಪಕ್ಷ ತಮ್ಮ ಮನಸ್ಸಂತೋಷಕ್ಕಾದರೂ ವ್ಯಂಗ್ಯಚಿತ್ರಗಳನ್ನು ರಚಿಸುವ ಕಾರ್ಯ ಮುಂದುವರೆಸಲಿ .....

ಮುದ್ರಣ ಮಾಧ್ಯಮದಲ್ಲಿ ರಾಜಕೀಯ ವ್ಯಂಗ್ಯಚಿತ್ರಕಾರರಿಗೆ ಭವಿಷ್ಯ ಇದೆಯೇ?
- ಪಿ.ಮೊಹಮ್ಮದ್.
"ಇಲ್ಲ" ಎಂದು ಪಿ ಲಂಕೇಶರು ಬಹಳ ಹಿಂದೆ ನನಗೆ ಹೇಳಿದ್ದಾಗ ನಾನು ಅವರ ಮಾತನ್ನು ಒಪ್ಪಿರಲಿಲ್ಲ. ಅವರ 'ಪತ್ರಿಕೆ'ಯಲ್ಲಿದ್ದ ಪಂಜು ಗಂಗೊಳ್ಳಿ, ಚಂದ್ರಶೇಖರ ಗುಬ್ಬಿ ಬಿಟ್ಟು ಹೋದ ಕಾರಣಕ್ಕೆ ಅಸಮಾಧಾನದಿಂದ ಹಾಗೆ ಹೇಳುತ್ತಿದ್ದಾರೆ ಎಂದುಕೊಂಡಿದ್ದೆ. ಆ ಘಟನೆ ನಡೆದು ಬಹಳ ವರ್ಷಗಳಾಗಿವೆ. ನನಗೆ ಈ ವೃತ್ತಿಯಲ್ಲಿ ಬೆಳ್ಳಿಹಬ್ಬದ(೨೫ ವರ್ಷ) ಅನುಭವವಾಗಿದೆ. ನನ್ನ ವಯಸ್ಸು ಚಿನ್ನದ ಹಬ್ಬವನ್ನು ಆಚರಿಸುವ ಸನ್ನಾಹದಲ್ಲಿದೆ. ಕನ್ನಡದ ಒಂದು ಪ್ರಮುಖ ದಿನಪತ್ರಿಕೆಯಲ್ಲಿ ಒಂದು ದಶಕದಷ್ಟು ಕಾಲ ದುಡಿದು ಹೊರಬಂದಿರುವ ಈ ಸಂದರ್ಭದಲ್ಲಿ ಲಂಕೇಶರ ಮಾತು ಮತ್ತೆ ನೆನಪಾಗುತ್ತಿದೆ.
ಒಂದು ಬಾರಿ ನಾನು ನಡೆದು ಬಂದ ಕಾರ್ಟೂನಿಸ್ಟ್ ವೃತ್ತಿಯ ಈ ದೀರ್ಘ ದಾರಿಯತ್ತ ತಿರುಗಿ ನೋಡಿದರೆ...ನಾನು ನಿಜಕ್ಕೂ ಸಾಧಿಸಿದ್ದೇನು ಎನ್ನುವ ಪ್ರಶ್ನೆ ನನ್ನನ್ನು ದೊಡ್ಡದಾಗಿ ಅಣಕಿಸುತ್ತದೆ. ಈ ವೃತ್ತಿಯ ಆದಾಯದಿಂದ ನನ್ನ ಹೆಂಡತಿ ಮಕ್ಕಳಿಗೆ ಒಂದು ಉತ್ತಮ ಎನ್ನಬಹುದಾದ ಬದುಕನ್ನು ಕೊಡಲಿಕ್ಕೆ ಆಗಲಿಲ್ಲ ; ನನ್ನ ಮಕ್ಕಳಿಗೆ ಒಂದು ಒಳ್ಳೆಯ ಶಿಕ್ಷಣ ನೀಡಲಿಕ್ಕೆ ಸಾಧ್ಯ ವಾಗಲಿಲ್ಲ; ನನ್ನದೇ ಆದ ಒಂದು ಮನೆಯನ್ನು ಮಾಡಿಕೊಳ್ಳಲಿಕ್ಕೆ ಸಾಧ್ಯವಾಗಲಿಲ್ಲ. ಅದೂ ಸಾಲದು ಎಂಬಂತೆ ನನ್ನ ಉದ್ಯೋಗದ ದೆಸೆಯಿಂದ ಅವರನ್ನೂ ನನ್ನ ಜೊತೆಯಲ್ಲಿ ಹೈದರಾಬಾದ್, ಬೆಂಗಳೂರು ಎಂದು ಎಳೆದುಕೊಂಡು ಹೋದೆ. ಆದರೂ ನನಗೆ, ನನ್ನ ವೃತ್ತಿಗೆ ಗಟ್ಟಿಯಾಗಿ ಬೆಂಬಲ ನೀಡುತ್ತ ಬಂದಿದ್ದಳು ನನ್ನ ಹೆಂಡತಿ ಖತೀಜ. ನನ್ನ ವೃತ್ತಿಯ ಅನಿಶ್ಚಿತತೆ ಕೊಡುತ್ತಿದ್ದ ಮಾನಸಿಕ ಒತ್ತಡ ಕಾರಣವೋ ಏನೋ ೨೦೦೨ರಲ್ಲಿ ಆಕೆಗೆ ಇದ್ದಕ್ಕಿದ್ದಂತೆ ಗಂಭೀರ ಅನಾರೋಗ್ಯ ಕಾಣಿಸಿಕೊಂಡು ಅದರಲ್ಲೇ ತೀರಿಕೊಂಡಳು. ನಂತರ ನನಗೆ ಎದುರಾದದ್ದು ನನ್ನ ಬದುಕಿನ ಅತ್ಯಂತ ದೊಡ್ಡ ಸವಾಲು. ಆಗ ಸುಮಾರು ೧೫ ವರ್ಷದಿಂದ ಈ ವೃತ್ತಿಯಲ್ಲಿ ಇದ್ದರೂ ಇನ್ನೂ ಒಂದು ದೊಡ್ಡ ಪತ್ರಿಕೆಯಲ್ಲಿ ಅವಕಾಶ ಸಿಕ್ಕದೆ ಬದುಕು ಅತಂತ್ರ ಆಗಿತ್ತು. ಬೇರೆ ಆದಾಯ ಮೂಲವೂ ಇರಲಿಲ್ಲ. ಮನೆಯಲ್ಲೇ ಕೂತು ಬೇರೆ ಬೇರೆ ಪತ್ರಿಕೆಗಳಿಗೆ ಚಿತ್ರಗಳನ್ನು ಬರೆದುಕೊಡುತ್ತಾ ಸ್ವಲ್ಪ ಆದಾಯ ಸಂಪಾದಿಸುತ್ತಿದ್ದೆ. ಅಂತ ಸನ್ನಿವೇಶದಲ್ಲಿ ನನ್ನ ದೊಡ್ಡ ಶಕ್ತಿಯಾಗಿದ್ದ ನನ್ನ ಹೆಂಡತಿ ಹೋಗಿಬಿಟ್ಟಿದ್ದಳು.
ಆದರೂ ಹೇಗೋ ಒಂದು ಕಡೆ ಮಕ್ಕಳನ್ನೂ ನೋಡಿಕೊಳ್ಳುತ್ತಾ ಇನ್ನೊಂದು ಕಡೆ ವ್ಯಂಗ್ಯಚಿತ್ರ-ಗಳನ್ನೂ ರಚಿಸುತ್ತ ಬದುಕಿನ ಬಂಡಿಯನ್ನು ಏದುಸಿರು ಬಿಡುತ್ತಾ ಹೇಗೋ ಎಳೆಯುತ್ತಾ ಸಾಗಿದೆ. (ಸ್ವಂತ ಬದುಕಿನಲ್ಲಿ ಒಳಗೊಳಗೇ ಆಳುತ್ತಾ, ಜನರನ್ನು ನಗಿಸಲು ಪ್ರಯತ್ನಿಸುವ ನನ್ನ ಕಾಯಕಕ್ಕಿಷ್ಟು...!)
೨೦೦೩ರಲ್ಲಿ ಪ್ರಜಾವಾಣಿಯಲ್ಲಿ ಫ್ರೀ ಲ್ಯಾನ್ಸರ್ ವ್ಯವಸ್ಥೆಯಲ್ಲಿ, ಹೊರಗಿನಿಂದ ವ್ಯಂಗ್ಯಚಿತ್ರಗಳನ್ನು ಮಾಡಿಕೊಡಲು ಅಂದಿನ ಸಹ-ಸಂಪಾದಕರಾಗಿದ್ದ ಶೈಲೇಶ್ಚಂದ್ರ ಗುಪ್ತ ಅವರು ಅವಕಾಶ ಮಾಡಿ ಕೊಟ್ಟರು. ೨೦೦೫ರಲ್ಲಿ ಪ್ರಜಾವಾಣಿಯ ಸಂಪಾದಕೀಯ ವಿಭಾಗದಲ್ಲಿ ಸ್ಟಾಫ್ ಆಗಿ ಸೇರಲು ಸಾಧ್ಯ ಆಯ್ತು. ಆಗ ನನಗೆ ೪೨ ವರ್ಷ! ಒಬ್ಬ ವ್ಯಂಗ್ಯ-ಚಿತ್ರ-ಕಾರನಾಗಿ ಸ್ಥಿರಗೊಳ್ಳಲು ನನ್ನ ಅಷ್ಟು ಆಯಸ್ಸನ್ನು ಸವೆಸಬೇಕಾಯ್ತು!
ಕಾರ್ಟೂನ್ ಕಲೆಗಾಗಿ ಇಷ್ಟೆಲ್ಲಾ ಪಾಡನ್ನು ಪಟ್ಟ ಒಬ್ಬ ಕಲಾವಿದನಿಗೆ ಆತ್ಮಾಭಿಮಾನ ಸ್ವಲ್ಪ ಹೆಚ್ಚೇ ಇರುವುದು ತಪ್ಪಲ್ಲ ಅಲ್ಲವೇ? ನನ್ನ ಚಿತ್ರಗಳ ಬಗ್ಗೆ 'derogatory' 'insulting' ಮೊದಲಾದ ಅಭಿಪ್ರಾಯಗಳನ್ನು ಕೇಳಿದಾಗ ನನಗೆ ಜೀರ್ಣಿಸಿಕೊಳ್ಳುವುದು ಕಷ್ಟ ಎನ್ನಿಸುತ್ತಿತ್ತು. ಒಂದು ಕಾರ್ಟೂನನ್ನು 'ಕಾರ್ಟೂನ್' ಮಾತ್ರ ಆಗಿ ನೋಡಬೇಕು. ಅದೊಂದು ನೈಜ ಚಿತ್ರ ಎಂಬಂತೆ ನೋಡಿದರೆ ಅಲ್ಲೇ ಸಮಸ್ಯೆ ಹುಟ್ಟಿಕೊಳ್ಳುತ್ತದೆ.
ಕೆಲವು ಕಾಲದಿಂದ ಇದೇ ವಿಷಯ ನನ್ನನ್ನು ಕಾಡುತ್ತಿತ್ತು. ಈ ನನ್ನ ಪ್ರೀತಿಯ ಕಲೆಗಾಗಿ ಇಷ್ಟೆಲ್ಲಾ ಪಡಬಾರದ ಕಷ್ಟಗಳನ್ನು ಸಹಿಸಿಕೊಂಡು ಬಂದು, ಈಗ ಇಂಥ ಮಾತುಗಳನ್ನು ಕೇಳಿಕೊಂಡು ಇರುವುದು ಸರಿಯೇ? ಯಾವ ಪುರುಷಾರ್ಥಕ್ಕಾಗಿ ಇದು? ಈ ಕ್ಷೇತ್ರ ಸಾಕು; ಹೊಟ್ಟೆಪಾಡಿಗೆ ಬೇರೆ ಏನಾದರೂ ಸ್ವಂತ ವ್ಯಾಪಾರ-ಗೀಪಾರ ಮಾಡಿದರೆ ಆಗದೆ ಎಂದುಕೊಳ್ಳುತ್ತಿದ್ದೆ. ಹೇಳಿ ಕೇಳಿ 'ಬಿಸಿನೆಸ್ಸ್'ಗೆ ಖ್ಯಾತವೋ 'ಕುಖ್ಯಾತ'ವೋ ಆಗಿರುವ ಬ್ಯಾರಿ ಸಮುದಾಯದಿಂದ ಬಂದವನು ನಾನು........

No comments:

Post a Comment