Dr Ashok K R
ಇನ್ನು
ನಮ್ಮ ಅಭಯ್, ಅಭಯ್ಗೌಡ ಬಸನಗೌಡ ಪೋಲೀಸ್ ಪಾಟೀಲ್ – ಆಗಿನ ರಾಯಚೂರಿನ ಈಗಿನ ಕೊಪ್ಪಳ ಜಿಲ್ಲೆಯಲ್ಲಿರುವ
ಕುಷ್ಟಗಿ ತಾಲ್ಲೂಕಿನ ತಾವರಗೆರೆಯವನು. ತಂದೆತಾಯಿಗೆ ಮೂವರು ಮಕ್ಕಳು. ಇವನು ಮೂರನೆಯವನು. ಒಬ್ಬ ಅಣ್ಣ
ಬಿಎಸ್ಸಿವರೆಗೆ ಓದಿಕೊಂಡು ತಾವರಗೆರೆಯಲ್ಲೇ ಜಮೀನು ನೋಡಿಕೊಳ್ಳುತ್ತಾನೆ, ನೋಡುತ್ತಾನಷ್ಟೇ ಕೆಲಸಗಳನ್ನೆಲ್ಲಾ
ಅವನ ತಂದೆಯೇ ಮಾಡಿಸುತ್ತಾರೆ. ಮಧ್ಯದವಳು ಅಂದ್ರೆ ಅಭಯನ ಅಕ್ಕ ಬಿ.ಕಾಮ್ ಮಾಡಿದ್ದಾಳೆ. ಅಭಯ್ ಮೈಸೂರನ್ನು
ಉದ್ಧರಿಸಲು ಬರುವುದಕ್ಕೆ ಸ್ವಲ್ಪ ದಿನಗಳ ಮುಂಚೆ ಆಕೆಯ ಮದುವೆಯಾಯಿತು. ಆಕೆಯೀಗ ಕಲ್ಬುರ್ಗಿಯಲ್ಲಿದ್ದಾಳೆ.
‘ನಾನೇ ಮೂರನೆಯವನು. ಅಪ್ಪ ಅಮ್ಮನಿಗಾಗಲೇ ಮಕ್ಕಳ ಮೇಲಿನ ಆಸ್ಥೆ ಕಡಿಮೆಯಾಗಿತ್ತು. ಈಗಲೇ ಆಪರೇಷನ್
ಮಾಡಿಸಿಕೊಳ್ಳೋದೋ ಬೇಡವೋ ಎಂಬ ಸಂದಿಗ್ಧದಲ್ಲಿದ್ದಾಗ ಹುಟ್ಟಿದವನು ನಾನು. ಭೂಮಿಗೆ ಅಷ್ಟಾಗಿ ನನ್ನ
ಅವಶ್ಯಕತೆ ಇರಲಿಲ್ಲವೇನೋ?’ ಇದವನ ಎಂದಿನ ಪ್ರವರ. ಆತ ಹೀಗೆ ದೂರುತ್ತಾನಲ್ಲ, ತಂದೆ ತಾಯಿ ಇವನನ್ನು
ಕಡೆಗಣಿಸುತ್ತಾರ ಅಂದರೆ ಅದೂ ಇಲ್ಲ. ಉಳಿದವರ ಮೇಲಿರುವಷ್ಟೇ ಅಕ್ಕರೆ ಇವನ ಮೇಲೂ ಇದೆ.ಇವನಲ್ಲೇ ಬಹುಷಃ
ಕೊರಗಿರಬೇಕು. ಏಳನೇ ತರಗತಿಯವರೆಗೆ ತಾವರಗೆರೆಯಲ್ಲೇ ಓದಿ ನಂತರ ಧಾರವಾಡಕ್ಕೆ ವಲಸೆ ಹೋಸ. ಎಸ್.ಡಿ.ಎಂನಲ್ಲಿ
ಮುಂದಿನ ಅಧ್ಯಯನ. ರಂಗೀಲಾದ ಹಾಡು ಗುನುಗುತ್ತಾ ಪತ್ರಿಕೆಯಲ್ಲಿ ಬಂದಿದ್ದ ನಗ್ನಬಾಲಿಕೆಯ ಮೊಲೆಯ ಮೇಲೆ
ತನ್ನ ಹೆಸರು ಬರೆಯುತ್ತಿದ್ದವನಿಗೆ ಹಿಂದಿನಿಂದ ತಂದೆ ಬಂದು ಬಿಂತಿದ್ದು ಅರಿವಿಗೇ ಬಂದಿರಲಿಲ್ಲ. ‘ಏನಪ್ಪಾ
ಬರಿ ಅಭಯ್ ಅಂತ ಬರೆದುಬಿಟ್ಟೆ. ಪೂರ್ತಿ ಹೆಸರು ಬರಿ. ನಮ್ಮ ವಂಶದ ಕೀರ್ತಿನಾದರೂ ಬೆಳೆಯುತ್ತೆ’ ಎಂದು
ಅವನ ತಂದೆ ನುಡಿದಾಗ ಇವನ ಸ್ಥಿತಿ......ಸಮಾನತೆ ಸ್ವಾತಂತ್ರ್ಯಕ್ಕಿಂತ ಮುಖ್ಯ ಎಂಬ ಭಾವನೆಯವನು. ಪ್ರತಿಭಾವಂತನಲ್ಲ,
ಕೆಲಸ ಸಿಗುತ್ತಿಲ್ಲವೆಂಬ ಒಂದೇ ಕಾರಣಕ್ಕೆ ಒಬ್ಬ ವ್ಯಕ್ತಿ ಹಸಿದು ಮಲಗುತ್ತಾನೆಂದರೆ ಅದು ನಮ್ಮ ದೇಶದ
ಅಧಃಪತನದ ಸಂಕೇತ ಎನ್ನುತ್ತಾನೆ. ಬಹಳಷ್ಟು ಬಾರಿ ಆತನ ಮಾತುಗಳು ನಮಗೆ ಅರ್ಥವಾಗುವುದಿಲ್ಲ.